ವಾಣಿ ಯಡಹಳ್ಳಿಮಠ ಅವರ ಗಜಲ್

ನಾವಿಲ್ಲದ ಜಗವನು, ತಪ್ಪಿಯೂ 
ನಾವು  ಊಹಿಸಿಕೊಳ್ಳುವುದೇ ಇಲ್ಲ
ನಾವಿಲ್ಲದೇ ನಮ್ಮವರ  ಸಂತಸದ ಬದುಕನು
ನಾವೆಂದೂ ಕಲ್ಪಿಸಿಕೊಳ್ಳುವುದೇ ಇಲ್ಲ

ನಮ್ಮಂತೆ ಅಗಣಿತ ಜನರು ಬಂದಿದ್ದು
 ಅಳಿದು ಮರಳಿ ಹೋಗಿಹರು
ಆದರೂ ಸಾಯುವ ಸತ್ಯವನು  ನಾವೆಂದೂ
ಸಹಿಸಿಕೊಳ್ಳುವುದೇ ಇಲ್ಲ

 ಕೋಪ , ತಾಪ , ಅಸೂಯೆ, ಅತಿಯಾಸೆ
ಎಲ್ಲವೂ ಮನದ ಮಡಿಲಲಿ ಮಲಗಿಹವು
 ಸ್ನೇಹ ,ಸಂಪ್ರೀತಿ , ನೆಮ್ಮದಿಗಳಷ್ಟೇ
ಬದುಕೆಂದು  ಅಂದುಕೊಳ್ಳುವುದೇ ಇಲ್ಲ

ಇದ್ದುದ ಬಿಟ್ಟು ಇಲ್ಲದರೆಡೆಗೆನೇ
ಸಾಗುವುದು ಮನದ ಗಮನ
ಕಟ್ಟಿದ ಬದುಕಿನ ಬುತ್ತಿ ಸಿಹಿಯಾಗಿಯೇ
ಇರುವುದೆಂದು ಅರಿತುಕೊಳ್ಳುವುದೇ ಇಲ್ಲ

ಎಂದು ಎದ್ದು ಹೋಗುವೆವೋ ಏನೋ
ಯಾರೂ ತಿಳಿಯರು ‘ವಾಣಿ ‘
ಹೋದರೂ ಈ ಜಗವು ಜಗಮಗಿಸುತ್ತಲೇ
ಇರುವುದೆಂದು ಒಪ್ಪಿಕೊಳ್ಳುವುದೇ ಇಲ್ಲ

===============================

Leave a Reply

Back To Top