ನಾಗರಾಜ ಜಿ. ಎನ್. ಬಾಡ ಅವರ ಕವಿತೆ-‘ಆತ್ಮವಿಮರ್ಶೆ’

ಹೆಣ್ಣು…ಹೊನ್ನು..ಮಣ್ಣು..
ಎಂಬ ತ್ರಿವಿಧ
ಮಾಯೆಯಿಂದ ದೂರ ಇರಿಸು
ಸದಾಲೋಚನೆ ಸತ್ಕಾರ್ಯದಲ್ಲಿ
ಈ ಜೀವನವನ್ನು ಮುನ್ನಡೆಸು

ವ್ಯಾಮೋಹದ ಜ್ವಾಲೆಗೆ
ಸಿಲುಕದಂತೆ ಬೆಳೆಸು
ವಿಚಿತ್ರ, ವಿಕೃತ ಮತ್ತು ಅಸಹ್ಯ
ಪಾಪ ಕೃತ್ಯದಿಂದ ದೂರ ಇರಿಸು

ಕೋಪ ತಾಪವನ್ನು
ಶಮನಗೊಳಿಸು
ಮನದ ತುಂಬ ಶಾಂತಿ
ಸಂತೃಪ್ತಿಯನ್ನು ಉಳಿಸು

ನೆಮ್ಮದಿಯಲಿ ಜೀವನ
ಮುಂದೆ ಸಾಗಲಿ
ವ್ಯಕ್ತಿತ್ವಕ್ಕೆ ಎಂದಿಗೂ
ಕುಂದುಬಾರದಿರಲಿ

ನಾಳೆಗಳು ನನ್ನಾದಾಗಿರಲಿ
ಆಸೆಯ ಪಾಶಕ್ಕೆ ಸಿಕ್ಕಿ
ಬಲಿಯಾಗದಿರಲಿ
ಚಂಚಲತೆಯಿಂದ ಮನ
ನರಳದಿರಲಿ

ಅಜ್ಞಾನವನ್ನು ದೂರ ಸರಿಸು
ಸನ್ಮಾರ್ಗದಿ ನಡೆಸು
ಮಾನವೀಯತೆಯ ಮೌಲ್ಯ
ಉಳಿಸಿ ಬೆಳೆಸು

ತಪ್ಪುಗಳ ತಿದ್ದಿ ಆತ್ಮವಿಮರ್ಶೆಯ
ದಾರಿಯಲಿ ಮುನ್ನಡೆಸು
ಮನಸ್ಸು ಮನಸ್ಸುಗಳ ನಡುವೆ
ವೈಮನಸ್ಸು ಮೂಡದಂತಿರಿಸು

ವ್ಯಕ್ತಿ ಅಳಿದರೂ ವ್ಯಕ್ತಿತ್ವ
ಅಳಿಯದಂತೆ ಬೆಳೆಸು
ಯೋಗ ಯೋಗ್ಯತೆಯ
ಕೊನೆಯವರೆಗೂ ಉಳಿಸು


Leave a Reply

Back To Top