‘ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ ‘ಬದುಕಿನೊಳಗಿನ ಬ್ಯಾಲೆನ್ಸ್ ಲೋಕ…’

ನಾವು ಚಲಿಸುವ ವಾಹನವನ್ನು ಅತ್ಯಂತ ಬ್ಯಾಲೆನ್ಸ್ ನಿಂದಲೇ ಚಲಾಯಿಸಬೇಕು ಇಲ್ಲದೆ ಹೋದರೆ ವಾಹನ ಮುಗಿಚಿಬೀಳುತ್ತದೆ.
ನಮ್ಮ ಬಾಳ ಪಯಣ ಕೂಡ ಹಾಗೇ..!!

 ಬ್ಯಾಂಕಿನ ನಮ್ಮ ಖಾತೆಯಲ್ಲಿ ನಿಗದಿತದಷ್ಟು ಬ್ಯಾಲೆನ್ಸ್ ಇಲ್ಲದೆ ಹೋದರೆ ಬ್ಯಾಂಕಿನವರು ನಮಗೆ  ದಂಡ ಹಾಕುತ್ತಾರೆ.
ಬಾಳಿನ ಖಾತೆಯಲ್ಲಿ ಒಳಿತು ಕೆಡುಕಗಳ ಬ್ಯಾಲೆನ್ಸ್ ಅಷ್ಟೇ ಮುಖ್ಯ..!!

ಮಗನಿಗೆ ಅತಿ ಹೆಚ್ಚು ಮುದ್ದು ಮಾಡಿದ ತಾಯಿಯನ್ನು ಕಂಡು ಮಗಳು ಕೋಪದಿಂದ ಮುನಿಸಿಕೊಳ್ಳುತ್ತಾಳೆ…
ಸಂಬಂಧಗಳಲ್ಲಿಯೂ ಬ್ಯಾಲೆನ್ಸ್ ಕೂಡ ಮುಖ್ಯ..!!

 ಈ ಮೇಲಿನ ಎಲ್ಲಾ ಸನ್ನಿವೇಶಗಳು ಬದುಕು ಮತ್ತು ಬ್ಯಾಲೆನ್ಸಿನ ನೈಜ ಮುಖಗಳನ್ನು ಅನಾವರಣಗೊಳಿಸುತ್ತವೆ.

ಪ್ರತಿಯೊಬ್ಬರ ಬದುಕಿನಲ್ಲಿಯೂ ಬ್ಯಾಲೆನ್ಸ್ ಇರಬೇಕು..!!   ಅದು ಯಾವುದೇ ರೀತಿಯ ಬ್ಯಾಲೆನ್ಸ್ ಆಗಿರಲಿ,  ಬ್ಯಾಲೆನ್ಸ್ ಅನ್ನುವುದು  ಬ್ಯಾಲೆನ್ಸ್ ಆಗಿದ್ದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ. ಸಂಸಾರದಲ್ಲಿ ಏನಾದರೂ ಹೆಚ್ಚು ಕಡಿಮೆಯಾಗಿ, ಬ್ಯಾಲೆನ್ಸ್ ಇಲ್ಲದೆ ಹೋದರೆ ಸಂಸಾರವೇ ನರಕವಾಗಿ ಬಿಡುತ್ತದೆ..!!  ಸಂಸಾರದಲ್ಲಿ ‘ಸರಿಗಮಪ’ ಎನ್ನುವ ಸ್ವರಗಳಂತೆ ರಾಗ ಬದ್ಧವಾಗಿ ಎಲ್ಲಾ ಅಂಶಗಳನ್ನು ಪರಿಗಣಿಸಬೇಕು.  

 ಗಂಡನಾದವನು  ಹೆಂಡತಿಯ ಮಾತು ಕೇಳಬೇಕು.  ಹೆಂಡತಿಯಾದವಳು ಗಂಡನ ಮಾತು ಕೇಳಬೇಕು. ಇವರಿಬ್ಬರ ಮಾತನ್ನು ಮಕ್ಕಳು ಕೇಳಬೇಕು.  ಈ ಮೂವರ ಮಾತುಗಳನ್ನು ಹಿರಿಯರು ಕೇಳಬೇಕು. ಆಗ ಸಂಸಾರ ನಂದನವನವಾಗುತ್ತದೆ…!  ಇಲ್ಲದೆ ಹೋದರೆ ಸಂಸಾರದ ತಾಪತ್ರೆಯ ಹೇಳತೀರದು.

 ಹೆಂಡತಿಯ ಮಾತನ್ನು ಉದಾಸೀನ ಮಾಡುವ ಗಂಡನ ನಡವಳಿಕೆಗಳನ್ನು ಕಂಡು ಹೆಂಡತಿ ಕೆಂಡದಂತಹ ಕೋಪ ಬೀರುತ್ತಾಳೆ. ಅವಳ ಮಾತನ್ನು ಗಂಡನಾದವನು ಕಿವಿಗೊಟ್ಟು ಕೇಳಲೇಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು.  ತನ್ನ ಹೆಂಡತಿಯ ತವರುಮನೆಯವರನ್ನು ಪ್ರೀತಿಯಿಂದ, ಅಕ್ಕರೆಯಿಂದ, ಗೌರವದಿಂದ ಕಾಣಬೇಕು. ಆಗ ಹೆಂಡತಿಯ ಸಂತೋಷಕ್ಕೆ ಪಾರವೇ ಇರುವುದಿಲ್ಲ..!!  ಒಂದು ವೇಳೆ ಗಂಡನ ಮನೆಯವರ ಬಗ್ಗೆ ಹೆಚ್ಚು ಕಡಿಮೆ ಪ್ರೀತಿ ವಾತ್ಸಲ್ಯವನ್ನು ತನ್ನ ಗಂಡ ತೋರಿಸಿದರೂ ನಡೆದೀತು.. ಆದರೆ ತನ್ನ ಹೆಂಡತಿಯ ತವರ ಮನೆಯವರನ್ನು  ಚೆನ್ನಾಗಿ ನೋಡಿಕೊಳ್ಳಲೇಬೇಕು. ಇದು ಸುಖ ಸಂಸಾರದ ಗುಟ್ಟು ಎಂದರು ತಪ್ಪಲ್ಲ..!!

 ಹೆಂಡತಿಯ ಮಾತಿಗೆ ಕಿವಿಗೊಟ್ಟಂತೆ  ಮಕ್ಕಳ ಮಾತಿಗೂ ತಂದೆಯಾದವನು ಕಿವಿಯಾಗಬೇಕು. ಬ್ಯಾಲೆನ್ಸ್ ನಿಂದ ವರ್ತಿಸಬೇಕು. ಮಕ್ಕಳ ಪ್ರತಿಯೊಂದು ಮಾತುಗಳನ್ನು ಅಸ್ತೆಯಿಂದ ಕೇಳಿದ ತಂದೆ ಅವರ ಅಗತ್ಯಗಳನ್ನು ಪೂರೈಸಬೇಕು. ಅವು ಧನಾತ್ಮಕವಾಗಿದ್ದು ಅವರ ವ್ಯಕ್ತಿತ್ವವನ್ನು ರೂಪಿಸುವಂತಿರಬೇಕು. ಒಂದು ವೇಳೆ ವ್ಯಕ್ತಿತ್ವವನ್ನು ಹಾಳು ಮಾಡುವಂತಿದ್ದರೆ, ಅವರನ್ನು   ಋಣಾತ್ಮಕ ಅಂಶಗಳಿಂದ ಹೊರಬರುವಂತೆ ಸಲಹೆ ನೀಡಬೇಕು. ನಂತರ ಅವರ  ಮನಸ್ಸು ಬದಲಾಯಿಸಿ ಋಣಾತ್ಮಕ ಅಂಶಗಳನ್ನು ಕಡಿತಗೊಳಿಸಬೇಕು. ಇದು ಸಂಸಾರದ ಜವಾಬ್ದಾರಿ ಹೊತ್ತ ಗಂಡಿನ ಮುಖ್ಯ ಕರ್ತವ್ಯ.   ಇಲ್ಲದೆ ಹೋದರೆ ಬ್ಯಾಲೆನ್ಸ್ ತಪ್ಪಿ ಸಂಸಾರ ಸಂಶಯದ ಗುಂಡಿಗೆ ಬಿದ್ದು ಬೀದಿಗೆ ಬಂದು ಬಿಡುತ್ತದೆ.

ನಮ್ಮ ಬದುಕಿನ ದಿನನಿತ್ಯದ ಅಗತ್ಯಗಳನ್ನು ಪೂರೈಸಬೇಕಾದರೆ,  ನಮಗೆ ಹಣದ ಆಗತ್ಯ ತುಂಬಾ ಇರುತ್ತದೆ.  ಇಂದು ನಮ್ಮ ಎಲ್ಲಾ ವ್ಯವಹಾರಗಳನ್ನು ಹಣದಿಂದಲೇ  ಜೀವನ ನಡೆಸುತ್ತೇವೆ. ಇಂತಹ ಅಗತ್ಯವಿರುವ ಹಣವನ್ನು ಬ್ಯಾಂಕಿನ ವ್ಯವಹಾರದ ಮೂಲಕವೂ ವ್ಯವಹರಿಸುವುದು  ಸರ್ವೇಸಾಮಾನ್ಯವಾಗಿದೆ.  ನಮ್ಮ ಬದುಕಿನಲ್ಲಿ ಒಂದು ಸ್ವಲ್ಪ ವ್ಯತ್ಯಾಸವಾದರೂ ಸಾಕು ಬದುಕಿನ ಬ್ಯಾಲೇನ್ಸ್ ಶೂನ್ಯವಾಗಿ  ತಪ್ಪಿಬಿಡುತ್ತದೆ.

ಮಳೆ ಕೈ ಕೊಟ್ಟು ಕೃಷಿಯ ಉತ್ಪನ್ನ ಬಾರದೇ ಹೋದಾಗ ರೈತನ  ಬದುಕು ಬ್ಯಾಲೆನ್ಸ್ ಇಲ್ಲದಂತಾಗುತ್ತದೆ.  ತಿಂಗಳ ಸಂಬಳ ಸರಿಯಾದ ಸಮಯಕ್ಕೆ ಆಗದೆಹೋದರೆ ನೌಕರನ ಬ್ಯಾಂಕಿನ ಬ್ಯಾಲೆನ್ಸ್ ಶೂನ್ಯವಾಗುತ್ತದೆ.   ನಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇದ್ದರೆ ನಮಗೆ ಬೆಲೆ ಜಾಸ್ತಿ. ಬ್ಯಾಲೆನ್ಸ್ ಇಲ್ಲದೆ ಹೋದರೆ ದಂಡ ಹಾಕುತ್ತಾರೆ ಬ್ಯಾಂಕಿನವರು.

ಹಾಗೇಯೇ…

 ಬದುಕಿನಲ್ಲಿ ಸಾಧ್ಯವಾದಷ್ಟು ನಾವು ಬ್ಯಾಲೆನ್ಸ್ ನಿಂದಲೇ ಬದುಕಬೇಕಾಗುತ್ತದೆ. ಆಗ ನಮ್ಮ ಬದುಕಿಗೆ ಚಡಪಡಿಕೆ, ಆತಂಕ, ಒತ್ತಡಗಳು, ಸಂಕಟಗಳು ಇಲ್ಲವಾಗುತ್ತವೆ.  ನಮ್ಮ ಅಗತ್ಯಗಳು ನಮ್ಮ ಆದಾಯಕ್ಕಿಂತ ಮೀರಿರಬಾರದು ಎನ್ನುವುದನ್ನು ನಾವು ಮರೆಯಬಾರದು.

ನಮ್ಮ ಸಂಬಂಧಗಳಲ್ಲಿಯೂ ಎಲ್ಲರನ್ನು ಪ್ರೀತಿಯಿಂದ, ಗೌರವದಿಂದ ಕಾಣಬೇಕು. ಅದು ಬಂಧುತ್ವದಲ್ಲಾಗಲಿ, ಸ್ನೇಹದಲ್ಲಾಗಲಿ, ವ್ಯವಹಾರದಲ್ಲಾಗಲಿ ಅಥವಾ ನಾವು ಕರ್ತವ್ಯ ನಿರ್ವಹಿಸುವ ಶಾಲಾ ಕಾಲೇಜುಗಳಲ್ಲಿಯಾಗಲಿ, ಕಚೇರಿಗಳಲ್ಲಿಯಾಗಲಿ ಮಾತನಾಡುವಾಗ, ವ್ಯವಹರಿಸುವಾಗ ಅತ್ಯಂತ ಜಾಗರೂಕತೆಯಿಂದ ಬ್ಯಾಲೆನ್ಸ್ ತಪ್ಪದಂತೆ ಎಲ್ಲರೊಡನೆ ಬೆರೆಯಬೇಕು.

ನಾವೇಷ್ಟೇ ಜವಾಬ್ದಾರಿಯುತವಾಗಿ ವ್ಯವಹರಿಸಿದರೂ, ನಡೆದುಕೊಂಡರೂ, ಬದುಕಿದರೂ… ಕೆಲವು ಸಲ ಏರುಪೇರುಗಳಾಗುತ್ತವೆ. ಆ ಏರುಪೇರುಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಒಳ್ಳೆಯ ಆಲೋಚನೆಗಳಿಂದ ಉತ್ತಮ ಯೋಜನೆಯನ್ನು ರೂಪಿಸಿಕೊಂಡರೇ, ಬದುಕಿನಲ್ಲಿ  ಸಾಧ್ಯವಾದಷ್ಟು ಬ್ಯಾಲೆನ್ಸ್ ಸಿಗುತ್ತದೆ. ನಾವೇಲ್ಲರೂ ಬ್ಯಾಲೆನ್ಸ್ ನಿಂದ ಬದುಕನ್ನು ಕಟ್ಟಿಕೊಳ್ಳುವ ಜವಾಬ್ದಾರಿಯನ್ನು ನಿಭಾಯಿಸೋಣ.


Leave a Reply

Back To Top