ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ-“ಒಂದೇ ನಾಣ್ಯದ ಎರಡು ಮುಖಗಳು”

ಪ್ರತಿಯೊಬ್ಬರ ಬದುಕಿನಲ್ಲಿ ಬರುವ ಎರಡು ಮಹತ್ವದ ಜೀವಗಳೆಂದರೆ  ಅಪ್ಪ ಹಾಗೂ ಅಮ್ಮ. ಅವರಿಲ್ಲದೆ ಮಕ್ಕಳಿಲ್ಲ ಎಂಬುದು ದಿಟ. ಅಪ್ಪ  ಅಮ್ಮ ಎಂಬ ಪದಗಳಲ್ಲಿ ಭರವಸೆ, ವಿಶ್ವಾಸ, ಮಮತೆ, ಹೃದಯ ವೈಶಾಲ್ಯತೆ, ಇಡೀಪ್ರಪಂಚ, ಸಹನೆ, ತಾಳ್ಮೆ  ನಿಷ್ಠುರತೆ, ಮೃದುತ್ವ , ಜವಾಬ್ದಾರಿ ಎಲ್ಲ ಗುಣಗಳ ಹೂರಣ. ಕಣ್ಣಿಗೆ ಕಾಣುವ ದೇವರು ಅವರೆ, ಮಕ್ಕಳ ಪಾಲಿನ ಆದರ್ಶರು ಅವರೇ. ಇಬ್ಬರಲ್ಲಿ ಯಾರೂ ಹೆಚ್ಚಲ್ಲ ಕಡಿಮೆಯೂ ಅಲ್ಲ.  ಮಕ್ಕಳ ಪಾಲಿಗೆ ಎರಡು ಕಣ್ಣುಗಳಂತೆ ಅವರು.
ಮಕ್ಕಳನ್ನು ಪ್ರಪಂಚಕ್ಕೆ ತರುವವಳು ಅಮ್ಮನಾದರೆ ಪ್ರಪಂಚವನ್ನು ತೋರಿಸುವವನು ಅಪ್ಪ ಎಂಬ ಮಾತಿನಂತೆ ಮಕ್ಕಳಿಗೆ ಸಮಾಜದಲ್ಲಿಯ ಜವಾಬ್ದಾರಿ, ಹೊಣೆಗಾರಿಕೆಯನ್ನು ಅಪ್ಪ ಪರಿಚಯಿಸುತ್ತಾನೆ.
ಅಪ್ಪನ ಮನದಲ್ಲಿ ನೋವಿದೆ, ದುಗುಡವಿದೆ, ಸಾಗರದಷ್ಟು ಪ್ರೀತಿ ಮಮತೆಯಿದೆ ಆದರೆ ಅವುಗಳನ್ನು ಅಮ್ಮನಂತೆ ಹೊರಗೆಡುಹಲಾರದ ಪರಿಸ್ಥಿತಿಯಲ್ಲಿ ಅಪ್ಪಂದಿರಿದ್ದಾರೆ. ಅಂದರೆ ಪುರುಷ ಪ್ರಧಾನ ಸಮಾಜವು ಅಪ್ಪನನ್ನು ಸದಾ ಗಾಂಭೀರ್ಯದ, ಘನತೆಯ, ತನ್ನ ಮನದ ಭಾವನೆಗಳನ್ನು ಸ್ತ್ರೀಯಂತೆ ಹೊರಗೆಡುಹಿದರೆ ಘನತೆಗೆ ಕುಂದು ಬಂದಂತೆ ಎಂದು ಬಿಂಬಿಸಿರುವುದೇ ಇದಕ್ಕೆ ಕಾರಣವಾಗಿರಬಹುದು. ಅಪ್ಪ ಅಮ್ಮ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳಂತಾದರೂ ಒಮ್ಮೊಮ್ಮೆ ನಾಣ್ಯದ ಆಒಂದು ಮುಖವನ್ನು ಮರೆತೇ ಬಿಟ್ಟಂತೆ ಮಕ್ಕಳ ವರ್ತನೆ ಯಿರುತ್ತದೆ.
“ವಿದ್ಯೆ ಕೊಡದಾ ತಂದೆ, ಬುದ್ಧಿ ಹೇಳದಾ ಗುರುವು, ಬಿದ್ದಿರಲು ಬಂದು ನೋಡದಾ ತಾಯಿಯು ಶುದ್ಧ ವೈರಿಗಳು ಸರ್ವಜ್ಞ” ಎಂದು ಸರ್ವಜ್ಞ ಕವಿ ಹೇಳಿದ್ದುದರಲ್ಲಿ ಅಪ್ಪನಾದವನು ವಿದ್ಯೆಯನ್ನು ತನ್ನ ಮಕ್ಕಳಿಗೆ ನೀಡಬೇಕು, ವಿದ್ಯೆಎಂದರೆ ಕೇವಲ ಶಾಲಾಶಿಕ್ಷಣವೇ ಅಲ್ಲ ಪ್ರಪಂಚದಲ್ಲಿ ತಂದೆ ಜವಾಬ್ಧಾರಿಯಿಂದ ನಿಭಾಯಿಸುವ ಎಲ್ಲ ವ್ಯಾವಹಾರಿಕ, ಸಾಮಾಜಿಕ, ನೈತಿಕ ವಿದ್ಯೆಗಳು ಎನ್ನಬಹುದು. ಹಿಂದಿನ ಕಾಲದಲ್ಲಿ ಮನೆಯ ಜವಾಬ್ದಾರಿಗಳನ್ನು ಹೊತ್ತು ಕುಟುಂಬಕ್ಕೆ ಯಾವುದೇ ಆರ್ಥಿಕ ತೊಂದರೆಯಾಗದಂತೆ ಸದಾ ಹೊಲದಲ್ಲೋ, ಕಾರ್ಖಾನೆಗಳಲ್ಲೋ ಕಛೇರಿಗಳಲ್ಲೋ, ಸ್ವಂತ ಉದ್ಯೋಗದಲ್ಲೋ ದುಡಿಯುವ ಅಪ್ಪ ಮಕ್ಕಳಿಗೆ ಮನೆಯಲ್ಲಿ ಹೆಚ್ಚಿನ ಸಮಯ ಸಿಗದೇ ಇರುವುದರಿಂದ ಮಕ್ಕಳಿಗೆ ಅಂದು ತಂದೆಯ ಮೇಲೆಗೌರವವಿದ್ದರೂ ಅವನು ಸುಲಭದಲ್ಲಿ ದೊರೆಯದಿದ್ದಾಗ  ಆ ಅಂತರದಿಂದ  ಭಯವಿದ್ದಿರಬಹುದೆನಿಸುತ್ತದೆ.ಕಾರಣ ಹಿಂದೆಲ್ಲ ಅಪ್ಪನ ಹತ್ತಿರ ಮಾತನಾಡಲು ಹೆದರುವ ಅದೆಷ್ಟೋ ಮಕ್ಕಳ ಬೇಕು ಬೇಡಗಳು ಅಮ್ಮನ ಮೂಲಕ ಅಪ್ಪನಿಗೆ ತಲುಪುತ್ತಿದ್ದ ಉದಾಹರಣೆಗಳಿವೆ. ಹಾಗಂತ ಅಪ್ಪನಿಗೆ ತನ್ನ ಮಕ್ಕಳ ಮೇಲೆ ಕಾಳಜಿ, ಭಾವನಾತ್ಮಕ ಸಂಬಂಧವಿಲ್ಲವೆಂದು ಖಂಡಿತಾ ಹೇಳಲಾಗದು. ಅವನ ಒತ್ತಡದ ಬದುಕು,  ಮಕ್ಕಳ ಬೇಕು ಬೇಡಗಳನ್ನು ಪರೋಕ್ಷವಾಗಿ ನಿಭಾಯಿಸುವ ಜವಾಬ್ದಾರಿ ಇದಕ್ಕೆ ಕಾರಣವಾಗಿರಬಹುದು.
ಅಮ್ಮನಂತೆಯೇ ಅವನ ಒಡಲಲ್ಲಿ ಸಾಗರದ ಮಮತೆಯಿದೆ, ಕರುಣೆಯಿದೆ, ಹೂವಂತ ಮಧುರವಾದ ಹೃದಯವಿದೆ, ಆದರೆ ಅದಾವುದನ್ನೂ ಹೊರಗೆ ತೋರ್ಪಡಿಸಲಾಗದ ಅಸಹಾಯಕ ಅಪ್ಪ.


ಅಪ್ಪನನ್ನು ಅರ್ಥಮಾಡಿಕೊಳ್ಳುವಲ್ಲಿ ಮಕ್ಕಳೂ ಸೋಲುತ್ತಾರೆ ಎಂಬುದು ವಿಪರ್ಯಾಸ.ಅಪ್ಪ ತೋರುವ ಗಾಂಭೀರ್ಯ, ನಿಷ್ಠುರತೆಯನ್ನು ಮಾತ್ರ ಕಾಣುವ ಮಕ್ಕಳು ಅವನ ಒಳಗಿನ ಹೂವಂತ ಹೃದಯವನ್ನು ಅರಿಯಲು ಹೋಗುವುದಿಲ್ಲ ಎಂಬುದೂ ಅಷ್ಟೇಸತ್ಯ. ಅವನು ಮಕ್ಕಳೊಂದಿಗೆ ಬೆರೆಯುವ ಕಡಿಮೆ ಸಮಯವೂ   ತಂದೆಯನ್ನು ತಿಳಿಯುವಲ್ಲಿ ಸೋಲಲು ಕಾರಣ. ಅಪ್ಪನ ವ್ಯಕ್ತಿತ್ವ ಕಣ್ಣೀರನ್ನು ಸುರಿಸುವುದಲ್ಲ ಎಂದ ಮಾತ್ರಕ್ಕೆ ಅವನಿಗೆ ಕಣ್ಣೀರೇ ಬರೊದಿಲ್ಲ ಎಂದರ್ಥವಲ್ಲ. ಬರುವ ಕಂಬನಿಯನ್ನು ಒಳಗಡೆಯೇ ಅದುಮಿಡುತ್ತಾನೆ. ಇದರಿಂದ ಅವನ ಆರೋಗ್ಯಕ್ಕಾಗುವ ಹಾನಿಯನ್ನು ಮಕ್ಕಳು ಊಹಿಸಬಲ್ಲರಾ?  ಇಲ್ಲ. ಕಾರಣ ಅಪ್ಪನಿಗೆ ಕಣ್ಣೀರೇ ಇಲ್ಲ, ಜೊತೆಗೆ ಈ ಜಂಜಾಟ ಅವನಿಗೆ  ಬೇಕಿಲ್ಲ ಎಂಬ ಅಭಿಮತ. ಕಂಬನಿಯನ್ನೂ ಹೊರಗೆ ಹಾಕದ ದಯನೀಯ ಸ್ಥಿತಿ ಅಪ್ಪನದು.
ಅಪ್ಪ ಮಕ್ಕಳಲ್ಲಿನ ಅಂತರ ಅಪ್ಪನನ್ನು ಅರಿಯಲು ಆಗದಿರಲು ಕಾರಣ. ಜೊತೆಗೆ ಅಪ್ಪ ಎಂದರೆ ತ ಮ್ಮ ಬೇಕುಗಳನ್ನು ತೀರಿಸುವ  ಒಂದು ಸಾಧನದಂತೆ  ಮಕ್ಕಳಿಗೆ ತಂದೆ ಕಾಣಿಸುತ್ತಾನೆ. ಇಲ್ಲಿ ತಂದೆಯದು ತಪ್ಪಲ್ಲ ಅವನನ್ನು ನೋಡುವ ಮಕ್ಕಳದೇ ತಪ್ಪು ಎಂಬುವುದು ನನ್ನ ವಯ್ಯಕ್ತಿಕ ಅಭಿಪ್ರಾಯ.
ಅಮ್ಮನಿಲ್ಲದ ಅದೆಷ್ಟೋ ಮನೆಗಳಲ್ಲಿ ಅಪ್ಪ ನೇ ಅಮ್ಮನಾಗಿ  ಮಕ್ಕಳ ಪಾಲನೆ ಮಾಡಿದ ಅದೆಷ್ಟೋ ಉದಾರಹರಣೆಗಳು ನಮ್ಮ ಕಣ್ಣಮುಂದಿವೆ. ಹಾಗೆಯೇ ಅಪ್ಪನಿಲ್ಲದ ಅದೆಷ್ಟೋ ಮನೆಗಳಲ್ಲಿ ಅಮ್ಮ ಅಪ್ಪನ ಜವಾಬ್ದಾರಿಯನ್ನು ನಿಭಾಯಿಸಿ ಮಕ್ಕಳನ್ನು ಲಾಲನೆ ಪಾಲನೆ ಮಾಡಿ ಜವಾಬ್ದಾರಿ ಕಲಿಸಿದ ಉದಾಹರಣೆಗಳೂ ನಮ್ಮ ಕಣ್ಣಮುಂದಿವೆ.
ಅಮ್ಮನಂತೆ ಅಪ್ಪನಲ್ಲಿಯೂ ಪ್ರೀತಿ, ಮಮತೆ,  ಕಾಳಜಿ , ನೋವು,  ದುಗುಡ, ಕರುಣೆ ಎಲ್ಲವೂ ಇದೆಯಾದರೂ ಅದನ್ನು ಅರಿಯುವಲ್ಲಿ ಸಮಾಜ ಸೋಲುತ್ತಿದೆ. ಆರೀತಿಯ ಸೋಲು ಆಗಬಾರದು ಜೊತೆಗೆ ಅಪ್ಪ ಅಮ್ಮ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದು ತಿಳಿಯಬೇಕು. ಅಪ್ಪನಲ್ಲಿಯೂ ಭಾವನೆಗಳು ಸಮೃದ್ಧವಾಗಿವೆ ಎಂದು ಒಪ್ಪಿಕೊಂಡಾಗ ಆಕಾಶದಂತ, ವಿಶಾಲಹೃದಯದ  ಅಪ್ಪನಿಗೆ  ನಿಜವಾಗಲೂ ಗೌರವ ಸಲ್ಲಿಸಿದಂತಾಗುತ್ತದೆ. ಅಪ್ಪನ ತ್ಯಾಗಕ್ಕೆ ನಿಜವಾಗಿ ಬೆಲೆಬರುತ್ತದೆ. ಅಪ್ಪ ಅಮ್ಮರ ಮಧ್ಯೆ ನಮಗರಿವಿಲ್ಲದಂತೆ ನಾವು ಮಾಡುವ ಅಂತರ ಕೊನೆಯಾಗುತ್ತದೆ. ಸಮಾನತೆಯ ಭಾವ ಮೂಡುತ್ತದೆ.


3 thoughts on “ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ-“ಒಂದೇ ನಾಣ್ಯದ ಎರಡು ಮುಖಗಳು”

Leave a Reply

Back To Top