ಅಪ್ಪನೆಂಬ ನಿಗೂಢ ವ್ಯಕ್ತಿತ್ವ ಅಂದು..ಇಂದು- ಗಂಗಾ ಚಕ್ರಸಾಲಿ

ಅಪ್ಪನೆಂಬ ನಿಗೂಢ ವ್ಯಕ್ತಿತ್ವ ಅಂದು..ಇಂದು

   ಅಪ್ಪನೆಂಬ ವ್ಯಕ್ತಿತ್ವ ಪ್ರತಿಯೊಬ್ಬರ ಜೀವನದಲ್ಲಿಯೂ ಅಮ್ಮನಷ್ಟೇ ಶ್ರೇಷ್ಠವಾದದ್ದಾಗಿದೆ.ಅಮ್ಮನ ಕಷ್ಟ ಕಾರ್ಪಣ್ಯ ಹೊರಗಿನ ಕಣ್ಣುಗಳಿಗೆ ಸುಲಭವಾಗಿ ಗೋಚರವಾಗುತ್ತವೆ.ಆದರೆ ಅಪ್ಪನ ಬವಣೆ ಬಿಗುಮಾನಗಳು ಸುಲಭವಾಗಿ ಕಾಣಲಾರವು.ಆದರೆ ಅಪ್ಪ ಅದರಲ್ಲೂ ಹೆಣ್ಣು ಮಕ್ಕಳಿಗಂತಲೂ ಆಸೆಗಳ ಪೂರೈಸುವ ಸಾಹುಕಾರ,ಕಷ್ಟಗಳಿಗೆ ಹೆಗಲು ನೀಡುವ ಸ್ನೇಹಿತ.ಇಂಥ ಅಪ್ಪನ ವ್ಯಕ್ತಿತ್ವ ಶತಮಾನಗಳನ್ನು ಸವೆಸಿದಂತೆ ಬದಲಾವಣೆಯನ್ನು ಕಂಡರೂ ಆತನ ಮಾನಸಿಕ ತಳಮಳಗಳು ಮಾತ್ರ ಬದಲಾವಣೆಯ ಗಾಳಿಯನ್ನು ಕಂಡಿಲ್ಲವೆನ್ನಬಹುದು.

ನಾವು ಕಂಡಂತ ಅಂದಿನ ಅಪ್ಪ:
    ತೊಂಭತ್ತರ ದಶಕದಲ್ಲಿ ನಾವು ಕಂಡಂತ ಅಪ್ಪ ಆಕಾಶದಷ್ಟೇ ಎತ್ತರದ ಸ್ಥಾನದಲ್ಲಿದ್ದನು.ಅವನನ್ನು ತಲುಪಬೇಕೆಂದರೆ ಭೂಮಿಯೆಂಬ ಅವ್ವನೇ ಮಧ್ಯವರ್ತಿಯಾಗಿದ್ದಳು.ಇದರರ್ಥ ಅಪ್ಪನೆಂಬ ಘನ ಗಾಂಭಿರ್ಯದ ವ್ಯಕ್ತಿತ್ವವನ್ನು ನೇರವಾಗಿ ಮಾತನಾಡಿಸುವ ಧೈರ್ಯವಂತೂ ನಮಗಿರಲಿಲ್ಲ.ಅವರಾಗಿ ಕರೆದು ಏನಾದರೂ ಕೆಲಸ ಹೇಳಿದರೆ ತಲೆತಗ್ಗಿಸಿ ಹೂಂ ಗುಡುತ್ತ ಕೆಲಸಕ್ಕೆ ಅಣಿಯಾಗುತ್ತಿದ್ದೆವು. ನಾವಾಗಿಯೇ ಎದುರು ನಿಂತು ನಮ್ಮ ಬಯಕೆಗಳನ್ನು ವ್ಯಕ್ತಪಡಿಸುವ ಪ್ರಮೇಯವೂ ಇರಲಿಲ್ಲ.ಇಂಥ ಶಿಸ್ತಿನ ಸಿಪಾಯಿಯಾಗಿದ್ದವರು ನಮ್ಮ ಅಪ್ಪ.ಅವರ ಅಣತಿಯಂತೆ ಅಮ್ಮನಿಂದ ಹಿಡಿದು ನಾವೆಲ್ಲಾ ಮಕ್ಕಳೂ ಕೇಳಬೇಕಿತ್ತು.ಅವರು ಹೇಳಿದಂತ ಸಮಯಕ್ಕೆ ತಕ್ಕಂತೆ ಹೊಲದ ಕೆಲಸ,ಶಾಲೆಗೆ ಹೋಗುವದು,ಸಂಜೆ ಪುನ: ಅಭ್ಯಾಸದಲ್ಲಿ ತೊಡಗುವದು..ಹೀಗೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದ್ದವು.ಹಾಗಂತ ಅವರು ನಮಗೆ ದಿನವೂ ಬಯ್ಯುತ್ತಿರಲಿಲ್ಲ ಮತ್ತು ಹೊಡೆಯುತ್ತಿರಲಿಲ್ಲ.ಯಾವಾಗಲೋ ಒಮ್ಮೆ ಮೂಳೆಮುರಿಯುವ ಹಾಗೆ ಹೊಡೆದ ಅನುಭವವೇ ನಮ್ಮನ್ನು ಅವರ ಮಾತುಗಳನ್ನು ಮೀರದಂತೆ ಮಾಡಿತ್ತು.ಅಮ್ಮನಿಗೂ ಅಪ್ಪನನ್ನು ಕಂಡರೇ ಭಯವೇ.ಹೀಗಾಗಿ ಅಮ್ಮನೆ ಅವರ ಅಣತಿಯಂತೆ ನಡೆಯುತ್ತಿದ್ದಾಗ ನಮಗೂ ಅವರ ಬಗ್ಗೆ ಇದ್ದ ಭಯ ಸಹಜವೇ ಆಗಿತ್ತು.ಇಂಥ ವ್ಯಕ್ತಿತ್ವದ ಅಪ್ಪನ ಬಗ್ಗೆ ನಮಗೆಂದೂ ಕೆಟ್ಟ ಭಾವನೆಗಳು ಬರುತ್ತಲೇ ಇರಲಿಲ್ಲ.ಅವರ ಬಗ್ಗೆ ಪ್ರೀತಿ ಗೌರವಗಳು ಮನೆ ಮಾಡಿದ್ದವು.ಆದರೆ ಅವುಗಳನ್ನು ಈಗಿನವರ ಹಾಗೆ ಲವ ಯೂ ಪಪ್ಪ ಎಂದು ಬಹಿರಂಗವಾಗಿ ವ್ಯಕ್ತಪಡಿಸುತ್ತಿರಲಿಲ್ಲವಷ್ಟೇ.
     ಇಂಥ ಘನಗಾಂಭಿರ್ಯದ ವ್ಯಕ್ತಿತ್ವಕ್ಕೆ ಮೊದಲು ಗೌರವ ಕೊಡುತ್ತಿದ್ದವಳು ಮತ್ತು ಗೌರವವನ್ನು ಬೆಳೆಸುತ್ತಿದ್ದವಳು ಅವ್ವ.ನಮ್ಮ ಕಣ್ಣ ಮುಂದೆ ಅವ್ವ ಅಪ್ಪನೊಂದಿಗೆ ಜೋರಾಗಿ ಕೂಗಾಡಿದ,ಜಗಳವಾಡಿದ ಸಂದರ್ಭಗಳೆ ಕಾಣಲಿಲ್ಲ ನಮಗೆ.ಅವರನ್ನು ಕಂಡರೆ ಅವಳಿಗೂ ಭಯವಿದ್ದರೂ ಕೂಡಾ ಅಪ್ಪನ ಬಗ್ಗೆ ಎಂದಿಗೂ ನಮ್ಮ ಮುಂದೆ ಕೆಟ್ಟದ್ದನ್ನು ಹೇಳುತ್ತಿರಲಿಲ್ಲ.ಅವರನ್ನು ಒಂದು ದೈವವಾಗಿಯೇ ನಮ್ಮ ಕಣ್ಣ ಮುಂದೆ ಚಿತ್ರಿಸುತ್ತಿದ್ದರು.ಅವರು ಸಂಸಾರಕ್ಕಾಗಿ ದುಡಿಯುವ ರೀತಿಯನ್ನು ಅರ್ಥ ಮಾಡಿಸುತ್ತಿದ್ದಳು.ಈ ರೀತಿ ಅಪ್ಪನ ಬಗ್ಗೆ ಗೌರವವನ್ನು ಇಮ್ಮಡಿಯಾಗಿ ಮಾಡುತ್ತಿದ್ದವಳು ಅವ್ವ.ಇಂಥ ಅಪ್ಪನ ಶಿಸ್ತಿನಿಂದಾಗಿಯೇ ನಾವು ಕೂಡ ಯಾವುದೇ ಕೆಟ್ಟ ದಾರಿ ತುಳಿಯಲು ಸಾಧ್ಯವಾಗದಂತಾಯಿತು ಎಂದೇ ಹೇಳಬಹುದೇನೋ.ಅಪ್ಪ ಶಾಲೆಯ ಹೆಡ್ ಮಾಸ್ತರ ರೀತಿಯಲ್ಲಿ ವರ್ತಿಸುತ್ತಿದ್ದರೂ ಕೂಡಾ ಅವರೆಂದಿಗೂ ಕೂಡಾ ಮಕ್ಕಳಿಗೆ ಕೊರತೆ ಮಾಡುತ್ತಿರಲಿಲ್ಲವೆಂಬುದು ಕೂಡಾ ಅಷ್ಟೇ ಸತ್ಯವಾಗಿದೆ.ಇಂಥ ಶಿಸ್ತಿನ ಅಪ್ಪನಿಗೆ ಭಾವನೆಗಳು ಮತ್ತು ಪ್ರೀತಿ ಇರಲಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಿಲ್ಲ.
     ಅಂದಿನ ಅಪ್ಪಂದಿರ ರೀತಿಯೆಂದರೆ ಗಂಡಸಾದವರು ಹೀಗೆಯೇ ಕಠಿಣವಾಗಿರಬೇಕು.ಹೊರಗಡೆ ದುಡಿದು ಬರುವ ವ್ಯಕ್ತಿ ಹೆಂಗಸರಂತೆ ಅಳುಮುಂಜಿಯಾಗುವದು ಅವರ ವ್ಯಕ್ತಿತ್ವಕ್ಕೆ ಕಳಂಕವೆಂದೇ ಭಾವಿಸಿದ್ದರು.ಈ ರೀತಿ ಪೂರ್ವಯೋಜಿತ ಗುಣಗಳನ್ನು ಹೊಂದಿದ್ದ ಅಪ್ಪ ಬಹಿರಂಗವಾಗಿ ಭಾವನೆಗಳನ್ನು ವ್ಯಕ್ತಪಡಿಸುವದು ಕಡಿಮೆಯೇ ಆಗಿತ್ತು.ಅವರು ಅವ್ವನ ಜೊತೆ ಕೂಡಾ ಹೆಚ್ಚು ಮಾತನಾಡದೇ ಒಬ್ಬರೇ ಕಾಲ ಕಳೆಯುವದನ್ನು ಊಹಿಸಿಯೇ ಅವರಿಗೇನೋ ಬೇಜಾರಾಗಿದೆ ಎಂದು ನಾವು ಭಾವಿಸುತ್ತಿದ್ದೆವು.ಅವರ ಬೇಜಾರಿನ ವಿಷಯ ಅಮ್ಮನಿಗಷ್ಟೇ ತಿಳಿಯುತ್ತಿತ್ತೇನೋ.ಅಮ್ಮನಾದರೆ ಮನಸ್ಸಿಗೆ ನೋವಾದಾಗ ಕಣ್ಣೀರು ಸುರಿಸಿಯೋ ಅಥವಾ ಮಕ್ಕಳ ಮೇಲೆ ಕೂಗಾಡಿಯೋ ತನ್ನ ಮನದ ದು:ಖವನ್ನು ಹೊರಗೆ ಹಾಕುತ್ತಾಳೆ.ಆದರೆ ಅಪ್ಪ ಹಾಗೆ ಮಾಡಲಾರ.ದು:ಖಗಳನ್ನು ಅದುಮಿಕೊಂಡು ಮನಸ್ಸನ್ನು ಭಾರಮಾಡಿಕೊಳ್ಳುವದರಿಂದಲೇ ಏನೋ ಅವನಿಗೆ ಖಾಯಿಲೆಗಳು ಬೇಗ ಬಂದು ಅಪ್ಪುತ್ತಿದ್ದವು ಎನಿಸುತ್ತದೆ.

ಬದಲಾದ ಸಮಾಜದಲ್ಲಿ ಅಪ್ಪ:
      ಹಿಂದೆಯಾದರೆ ಅಪ್ಪನೊಬ್ಬನೆ ಹೊರಗೆ ದುಡಿಯುತ್ತಿದ್ದ.ಅಮ್ಮ ಮನೆಯಲ್ಲಿದ್ದು ಮನೆಯ ಮತ್ತು ಮಕ್ಕಳ ಕಾಳಜಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಳು.ಹಾಗಾಗಿ ಅಂದಿನ ಅಪ್ಪ ಕೆಲಸದಿಂದ ಬಂದಮೇಲೆ ಮನೆಯಲ್ಲಾದರೂ ಸ್ವಲ್ಪ ನೆಮ್ಮದಿಯಿಂದ ಇರುತ್ತಿದ್ದನೇನೋ.ಆದರೆ ಇಂದಿನ ಬದಲಾದ ಸಮಾಜದಲ್ಲಿ ಅಪ್ಪ ಬಹಳಷ್ಟು ಬದಲಾವಣೆಗೆ ಒಳಪಟ್ಟಿದ್ದಾನೆ.
       ಗಂಡುಮಕ್ಕಳೆಂದರೆ ಬೆಳೆಯುತ್ತಲೇ ಜವಾಬ್ದಾರಿಯನ್ನು ಹೇರಿಬಿಡುತ್ತದೆ ಈ ಸಮಾಜ.ಶಾಲೆಯಲ್ಲಿ,ಮನೆಯಲ್ಲಿ ಅವನ ಬಗ್ಗೆ ಜವಾಬ್ದಾರಿಯುತ ನಡವಳಿಕೆಯನ್ನು ಅಪೇಕ್ಷೆ ಮಾಡಲಾಗುತ್ತದೆ.ಗಂಡು ಮಕ್ಕಳೇನಾದರೂ ಕಣ್ಣೀರು ಸುರಿಸಿ ಅಳಲು ಶುರುಮಾಡಿದರೆ ಅವನನ್ನು ಅಳುಮುಂಜಿಯಂತೆ ಬಿಂಬಿಸಿ ,ಇಂಥ ನಡವಳಿಕೆ ಗಂಡಸರಾದವರಿಗೆ ಶೋಭೆ ತರದು ಎಂದು ಹೇಳಿದಾಗ, ಅಲ್ಲಿಂದಲೇ ಭಾವನೆಗಳನ್ನು ಅದುಮಿಕೊಳ್ಳುವದನ್ನು ಆ ಮಗು ಕಲಿತುಬಿಡುತ್ತದೆ.ಹೀಗೆ ಗಂಡುಮಕ್ಕಳನ್ನು ಬೆಳೆಸುವ ರೀತಿಯಲ್ಲಿಯೂ ಮತ್ತು ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ  ವ್ಯತ್ಯಾಸಗಳಿರುವದರಿಂದಲೇ ಏನೋ ಗಂಡಸರೆಂದರೆ ಕಠಿಣವಾಗಿರಬೇಕು ಎಂಬ ಮನೋಭಾವ ಮೊದಲಿನಿಂದಲೂ ಬೆಳೆದುಕೊಂಡು ಬಂದಿದೆ.ಈ ರೀತಿ ಜವಾಬ್ದಾರಿ ಪದದ ಅರ್ಥವನ್ನೇ ಕೇಳಿ ಬೆಳೆದ ಹುಡುಗರು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವದಕ್ಕಾಗಿಯೇ ಕೆಲಸ ಹುಡುಕುತ್ತಾರೆ.ಸರಿಯಾದ ಕೆಲಸ ಸಿಕ್ಕಿತೋ ಹೆಂಡತಿ,ಮಕ್ಕಳು,ತಂದೆ ತಾಯಿಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.ಇವರಿಗೆ ಒತ್ತಡಗಳು ಸ್ವಲ್ಪಮಟ್ಟಿಗೆ ಕಡಿಮೆ ಇರಬಹುದೇನೋ.ಆದರೆ ಕೆಲಸದ ಸ್ಥಿರತೆ ಇಲ್ಲದೇ ಕುಟುಂಬದ ಜವಾಬ್ದಾರಿಗಳನ್ನು ಹೊತ್ತ ಅಪ್ಪಂದಿರರ ಒತ್ತಡದ ಜೀವನ ಆ ದೇವರಿಗೆ ಪ್ರೀತಿಯಾಗುವಂತಿರುತ್ತದೆ.ಮನೆಯ ಸಂಪೂರ್ಣ ಜವಾಬ್ದಾರಿ ತಂದೆಯ ಮೇಲಿದ್ದಾಗ ಅಂದರೆ ಅವರ ಪತ್ನಿಯರು ದುಡಿಯದೇ ಇದ್ದಾಗಲೂ ಹಲವು ಮಾನಸಿಕ,ದೈಹಿಕ ಸಮಸ್ಯೆಗಳಿಗೆ ಒಳಗಾಗುತ್ತಾನೆ.ಶಾಶ್ವತ ನೌಕರಿ ಇಲ್ಲದಿದ್ದಾಗಲಂತೂ ಕುಟುಂಬದ ನಿರ್ವಹಣೆಗಾಗಿ ಆತ ಹಲವು ಮಾನಸಿಕ ಕ್ಷೋಭೆಗಳನ್ನು ಎದುರಿಸುತ್ತಾನೆ.ಅದರಲ್ಲೂ ಇಂದಿನ ಆಧುನಿಕ ಸಮಾಜದಲ್ಲಿ ಮಾನವೀಯ ಸಂಬಂಧಗಳು ನಾಶವಾಗಿ ದುಡ್ಡೇ ಪ್ರಧಾನವಾಗಿರುವಾಗ ಒತ್ತಡಕ್ಕೆ ಒಳಗಾಗಿ ಹೆಂಗಸರಿಗಿಂತಲೂ ಹೆಚ್ಚು ಖಾಯಿಲೆಗಳಿಗೆ ಅಪ್ಪನಾದವನು ತುತ್ತಾಗುತ್ತಾ ಇದ್ದಾನೆ.ಒತ್ತಡ ಮರೆಯಲು ದುಶ್ಚಟಗಳನ್ನು ಅಳವಡಿಸಿಕೊಳ್ಳುತ್ತಾನೆ.ಹೀಗೆ ಭಾವನೆಗಳನ್ನು ಅದುಮಿ ಹಿಡಿದು ತನ್ನನ್ನು ತಾನೇ ಸಹಿಸಿಕೊಳ್ಳುತ್ತಿದ್ದಾನೆ ಏಕವ್ಯಕ್ತಿ ದುಡಿಮೆಯ ಅಪ್ಪ.
       ಇನ್ನು ಆಧುನಿಕ ಕಾಲದಲ್ಲಿ ವೆಚ್ಚವನ್ನು ಸರಿದೂಗಿಸಲು ಪತಿ ಪತ್ನಿ ಇಬ್ಬರೂ ದುಡಿಯುವ ಕುಟುಂಬದಲ್ಲಿಯೂ ಅಪ್ಪನಾದವನಿಗೆ ಸಮಸ್ಯೆಗಳು ಇಲ್ಲವೆಂದು ಅರ್ಥವಲ್ಲ.ಇಲ್ಲಿಯೂ ಮಾನಸಿಕವಾಗಿ ಸಮಸ್ಯೆಗಳಿಗೆ ಅಪ್ಪನಾದವನು ಒಳಗಾಗುತ್ತಿದ್ದಾನೆ.ಹಣಕಾಸಿನ ಸಮಸ್ಯೆ ಚೂರು ಕಡಿಮೆಯಾಗಿರಬಹುದು ಆದರೆ ಇಬ್ಬರೂ ದುಡಿಯುವ ಕುಟುಂಬದಲ್ಲಿ ಮಾನಸಿಕ ನೆಮ್ಮದಿ ಮರಚೀಕೆಯೇ ಸರಿ.ಇಬ್ಬರೂ ಹೊರಗಿನಿಂದ ದುಡಿದು ಬರುವವರೇ ಆಗಿದ್ದರೆ ಆದರಿಸುವರಾರು,ಪ್ರೀತಿಸುವರಾರು ಎಂಬ ಪ್ರಶ್ನೆ ಸಾಮಾನ್ಯವಾಗಿದೆ.ಇಂತಹ ಸಂದರ್ಭದಲ್ಲಿ ಮನೆಯ ,ಮಕ್ಕಳ ಜವಾಬ್ದಾರಿ ಅಪ್ಪನ ಹೆಗಲ ಮೇಲೆಯೂ ಬೀಳುತ್ತದೆ.

     ಹೀಗೆ ಅಪ್ಪ ಹಿಂದಿನ ವ್ಯವಸ್ಥೆಯಲ್ಲಿರಲಿ,ಆಧುನಿಕ ಸಮಾಜದಲ್ಲಿರಲಿ ಅವನ ಜವಾಬ್ದಾರಿ ಮಾತ್ರ ಎಂದಿಗೂ ಬದಲಾವಣೆಯಾಗಿಲ್ಲ.ಆದರೆ ಅವನ ಬದುಕುವ ರೀತಿ ಬದಲಾಗಿದೆ.ಮೊದಲಿದ್ದ ಬಿಗುತನ ಕಡಿಮೆಯಾಗಿದೆ.ತಂದೆ ಸ್ನೇಹಜೀವಿಯಾಗಿದ್ದಾನೆ.ಹೊಂದಾಣಿಕೆಯ ವ್ಯಕ್ತಿತ್ವ ರೂಢಿಸಿಕೊಂಡಿದ್ದಾನೆ.ತ್ಯಾಗಮಯ ಜೀವನ ನಡೆಸುತ್ತಿದ್ದಾನೆ.ಇಷ್ಟೆಲ್ಲ ಕುಟುಂಬಕ್ಕಾಗಿ ಜೀವನಪೂರ್ತಿ ದುಡಿಯುವ ತಂದೆಗೆ ತಾಯಿಯಷ್ಟು ಗೌರವ,ಮರ್ಯಾದೆ ಸಿಗುತ್ತಿಲ್ಲವೇಕೆ ಎಂಬ ಪ್ರಶ್ನೆಉದ್ಭವಿಸುತ್ತದೆ.ಆ ಪ್ರಶ್ನಗೆ ಉತ್ತರವಾಗಿ ಕೆಳಗಿನ ಕಾರಣಗಳನ್ನು ಪಟ್ಟಿಮಾಡಬಹುದೇನೋ…
*ಅಪ್ಪ ಹೀಗೆಯೇ ಇರಬೇಕು ಎಂಬ ಪೂರ್ವಾಗ್ರಹ ನಡುವಳಿಕೆಯಿಂದ ಆತ ತಾನು ಏನೆ ಮಾಡಿದರೂ ತಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುವದಿಲ್ಲ.ಆದರೆ ಅಮ್ಮನಾದವರು ತಮ್ಮ ಆಂತರ್ಯದ ಒದ್ದಾಟಗಳನ್ನು ಮನದಲ್ಲಿರಿಸಿಕೊಳ್ಳದೇ ಬಾಯಿ ಮೂಲಕ ಹರಿಬಿಡುತ್ತಾರೆ.
*ಏನಾದರೂ ಸಮಸ್ಯೆ ಬಂದಾಗ ಅಂತರ್ಮುಖಿಯಾಗುತ್ತಾರೆ ಅಪ್ಪಂದಿರು.ಆ ಸಮಸ್ಯೆ ಪರಿಹಾರ ಕೇವಲ ತನ್ನದಷ್ಟೇ ಜವಾಬ್ದಾರಿ ಎಂದೇ ನಂಬಿಕೊಂಡುಬಿಡುತ್ತಾರೆ.ಹಾಗಾಗಿ ಸಮಸ್ಯೆಗಳನ್ನು ಕುಟುಂಬದವರ ಹತ್ತಿರ ಹೇಳಿಕೊಳ್ಳುವದು ಕಡಿಮೆಯೇ.
*ಸಮಸ್ಯೆಗಳನ್ನು ಹೇಳಿಕೊಂಡು ಕಣ್ಣೀರು ತಂದುಕೊಳ್ಳುವದು ಗಂಡಸರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂಬ ಅರಿವು ಅವರನ್ನು ಆವರಿಸುತ್ತದೆ.ಅಮ್ಮನಾದವಳು ಅತ್ತು ನೋವುಗಳಿಂದ ಶಮನ ಮಾಡಿಕೊಳ್ಳುತ್ತಾಳೆ.ಆದರೆ ಅಪ್ಪ ಕಣ್ಣೀರಿಗೆ ತಡೆಗೋಡೆ ಹಾಕಿ ಒಳಗೊಳಗೆ ಕೊರಗುತ್ತಾನೆ.ಕೆಲವೊಮ್ಮೆ ಮರೆಯಲ್ಲಿ ತನ್ನಷ್ಟಕ್ಕೆ ತಾನು ಅತ್ತು ಉಪಶಮನ ಮಾಡಿಕೊಳ್ಳುವನಾದರೂ ಅಮ್ಮನಂತೆ ನಿಶ್ಚಿಂತನಾಗುವದಿಲ್ಲ.
*ಮನೆಯಲ್ಲಿ ಅಮ್ಮ ರೇಗಾಡಿದಷ್ಟು ಅಪ್ಪ ಕೂಗಾಡುವದಿಲ್ಲ.ಮನೆಯಲ್ಲಾ ತನ್ನಿಂದಲೇ ನಡೆಯುತ್ತಿರುವದು ಎಂಬ ಅರ್ಥದಲ್ಲಿ ಅಮ್ಮ ತನ್ನನ್ನು ತಾನು ಮಕ್ಕಳ ಮುಂದೆ ಸಮಾಜದ ಮುಂದೆ ತೋರಿಸಿಕೊಳ್ಳುತ್ತಾಳೆ.ಆದರೆ ಅಪ್ಪನ ಆಂತರಿಕ ಮನಸ್ಥಿತಿ ಅವನನ್ನು ಅಮ್ಮನಂತೆ ಬಿಂಬಿಸಿಕೊಳ್ಳುವದನ್ನು ತಡೆಯುತ್ತದೆ.
*ಮನೆಯ ಮರ್ಯಾದೆಗಾಗಿಯೂ ಕೂಡಾ ಅಪ್ಪನಾದವರು ಹೆಂಡತಿಯನ್ನು ಬೆಂಬಲಿಸುವದು ಅಥವಾ ತನ್ನ ತಂದೆ ತಾಯಿಯನ್ನು ಬೆಂಬಲಿಸುವದನ್ನು ಮಾಡುತ್ತಾರೆ.ಪ್ರತಿಯೊಬ್ಬರ ಇಷ್ಟಕ್ಕನುಗುಣವಾಗಿ ನಡೆದುಕೊಳ್ಳುವಲ್ಲಿಯೇ ಅವನು ಸೋತುಹೋಗುತ್ತಾನೆ.ಮನೆಯವರೆಲ್ಲರ ಆಸೆಗಳನ್ನು ಪೂರೈಸುವದೇ ತನ್ನ ಧ್ಯೇಯ ಎಂಬಂತೆ ಬದುಕುತ್ತಿರುವ ಅಪ್ಪಂದಿರು ತಮ್ಮ ಆಸೆಗಳನ್ನು ಯಾರ ಮುಂದೆ ತಾನೇ ವ್ಯಕ್ತಪಡಲು ಸಾಧ್ಯ.ಹಾಗಾಗಿಯೇ ಅವರಿಗೆ ಅಮ್ಮನಷ್ಟು ಗುರುತಿಲ್ಲ.
*ಬೆಳಿಗ್ಗೆಯಿಂದ ಸಂಜೆಯವರೆಗೂ ದುಡಿಯುವ ಅಪ್ಪಂದಿರರಿಗೆ ಭಾವನೆಗಳನ್ನು ವ್ಯಕ್ತಪಡಿಸಲಾದರೂ ಸಮಯವೆಲ್ಲಿರುತ್ತೆ.ಮೊದಲೇ ಕೆಲಸದ ಸ್ಥಳದಲ್ಲಿ ದಣಿವಾಗಿರುವ ವ್ಯಕ್ತಿ ಮನೆಯವರೊಂದಿಗೆ ಮಾತನಾಡುವದು ಅಷ್ಟಕಷ್ಟೇ ಎನ್ನಬಹುದೇನೊ.ತನ್ನ ಪಾಡಿಗೆ ತಾನು ದುಡಿದು ಬಂದು ಸಂಜೆ ಸುಸ್ತಾಗಿದೆ ಎಂದು ಮಲಗಿದರೆ ಅವರನ್ನು ಹೆಂಡತಿ ಕೂಡಾ ಅರಿಯುವದಿಲ್ಲ ಮತ್ತು ಮಕ್ಕಳು ಕೂಡಾ ತಿಳಿಯುವದಿಲ್ಲ.ಅಂದರೆ ಮಕ್ಕಳ ದೃಷ್ಟಿಯಲ್ಲಿ ಅಪ್ಪನಾದವನಿಗೆ ಮನೆಯವರೊಂದಿಗೆ ಸಮಯ ಕಳೆಯುವದು ಮತ್ತು ಪ್ರೀತಿಸುವದೇ ಗೊತ್ತೇ ಇಲ್ಲ ಎಂಬಂತಾಗಿಬಿಡುತ್ತದೆ.
*ಹಿಂದಾದರೆ ಅಪ್ಪ ತನ್ನ ಕಠಿಣತೆಯಿಂದಾದರೂ ಮನೆಯವರೆಲ್ಲ ಗೌರವ ಕೊಡುವ ಹಾಗೆ ಜೀವನ ಸಾಗಿಸುತ್ತಿದ್ದನು.ಆದರೆ ಇಂದಿನ ಪತ್ನಿಯರು ಕೂಡಾ ಮೊದಲಿನಂತೆ ತನ್ನ ಗಂಡನ ಗುಣಗಳನ್ನು ಧ್ಯಾನಮಾಡದೇ ಅವರ ಅವಗುಣಗಳನ್ನೇ ಹೆಚ್ಚಾಗಿ ಹೇಳುವದರಿಂದ ಮತ್ತು ಮಕ್ಕಳ ಮುಂದೆಯೇ ಗಂಡನನ್ನು ಬಯ್ಯುದರಿಂದ ಅಪ್ಪನಾದವರಿಗೆ ಮಕ್ಕಳು ಎಂತಹ ಬೆಲೆ ಕೊಡಲು ಸಾಧ್ಯ.ಇಂತಹ ವ್ಯವಸ್ಥೆಯಲ್ಲಿ ಇಂದಿನ ಅಪ್ಪಂದಿರರು ಬದುಕುತ್ತಿದ್ದಾರೆ.ಸದಾ ಮಕ್ಕಳ ಜೊತೆಗಿರುವ ಅಮ್ಮನೇ ಆ ಮಕ್ಕಳ ಜೀವನದಲ್ಲಿ ದೇವರಂತೆ ಕಾಣುವದರಲ್ಲಿ ತಪ್ಪಿಲ್ಲವಲ್ಲವೇ.
 *ಇಂದಿನ ಆಧುನಿಕ ಜೀವನ ವಿಧಾನದಲ್ಲಿ ಮಕ್ಕಳು ತುಂಬಾ ಸೂಕ್ಷ್ಮಮತಿಗಳಾಗಿದ್ದಾರೆ.ಹಾಗಾಗಿಯೇ ಅಪ್ಪ ತನ್ನ ಕಠಿಣ ನಿಲುವಿನಿಂದ ಸರಳ ನಿಲುವಿಗೆ ಬಂದಿದ್ದಾನೆ.ಚೂರು ಬೈದರೂ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳವ ಮಕ್ಕಳಿಗಾಗಿ ಅಪ್ಪನಾದವರು ಎಷ್ಟೊಂದು ಬದಲಾಗಿದ್ದಾರೆ.ಇರುವ ಒಂದೋ ಅಥವಾ ಎರಡು ಮಕ್ಕಳ ಆಸೆ ಈಡೇರಿಕೆಗಾಗಿ ಆತ ಎಷ್ಟೆಲ್ಲಾ ದುಡಿಯುತ್ತಿದ್ದಾನೆ.ಹಿಂದೆ ಕುಟುಂಬದಲ್ಲಿ ಡಜನ್ ಗಟ್ಟಲೇ ಮಕ್ಕಳಿದ್ದರೂ ಅಂದಿನ ಅಪ್ಪಂದಿರರು ಇಷ್ಟೊಂದು ಕಷ್ಟಪಟ್ಟಿರಲಿಲ್ಲ ಎನಿಸುತ್ತದೆ.ಈಗಿನ ಮಗುವಿಗೆ ನೋಡಿದ್ದೆಲ್ಲ ಕೊಡಿಸಲು ಅಷ್ಟು ದುಡಿಯುತ್ತಿದ್ದಾರೆ ಅಪ್ಪಂದಿರು.ಆದರೆ ಈ ದುಡಿತ ಯಾರಿಗೂ ಕಾಣುವುದಿಲ್ಲ ಅಲ್ಲವೇ..ಎಲ್ಲರಂತೆ ತಮ್ಮಪ್ಪ ದುಡಿಯುತ್ತಿದ್ದಾನೆ ಎಂಬ ಭಾವನೆ ಇಂದಿನ ಮಕ್ಕಳಿಗಿದೆ.ಅಲ್ಲಿ ಅಪ್ಪನ ಬಗೆಗಿನ ಗೌರವ ಕಡಿಮೆಯೇ.
*ಏನಾದರೂ ಅಪ್ಪನಾದವರು ಮಕ್ಕಳ ಬೇಡಿಕೆಗೆ ವಿರೋಧ ಮಾಡಿದರೆ ಅಲ್ಲಿಂದಲೇ ಅಪ್ಪನ ಬಗ್ಗೆ ಪ್ರೀತಿ ಕಡಿಮೆಯಾಗುತ್ತಾ ಸಾಗುತ್ತದೆ.ಹೀಗೆ ಇಂದಿನ ಅಪ್ಪಂದಿರು ಡೋಲಾಯಮಾನವಾದ ಮಾನಸಿಕ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
             ಅಪ್ಪನೂ ಅಮ್ಮನಂತೆಯೇ ತ್ಯಾಗಜೀವಿಯೇ…
 *    ಅಮ್ಮ ಕುಟುಂಬವನ್ನು ಮಕ್ಕಳನ್ನು ಸುಂದರವಾಗಿ ನಿಭಾಯಿಸುತ್ತಿರಬಹುದು.ಆದರೆ ಅಪ್ಪನ ದುಡಿಮೆಯಿಲ್ಲದಿದ್ದರೆ ಈ ರೀತಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ.ಆದ್ದರಿಂದ ಅಪ್ಪ ಅಮ್ಮ ಇಬ್ಬರೂ ಆ ಕುಟುಂಬದ ಕಣ್ಣುಗಳು ಎಂಬುದನ್ನುತಿಳಿದುಕೊಳ್ಳೋಣ.
* ಅಪ್ಪ ತನಗಾಗಿ ಒಂದು ಚೂರು ಸಮಯ ನೀಡದೇ ದುಡಿಯುತ್ತಿರುತ್ತಾನೆ.ಇಡೀ ಕುಟುಂಬ ನಿರ್ವಹಣೆಗಾಗಿ ದುಡಿಯುತ್ತಿರುತ್ತಾನೆ.ಕುಟುಂಬಕ್ಕಾಗಿಯೇ ಸಾಲ ಮಾಡುತ್ತಾನೆ. ಅಪ್ಪಂದಿರು ಕೆಲಸದ ಸ್ಥಳದಲ್ಲಿಯೇ ಹಲವು ನೋವು ಅನುಭವಿಸಿ ಮನೆಗೆ ಬಂದಿರುತ್ತಾರೆ.ಇಂಥ ಅಪ್ಪಂದಿರರಿಗೆ ಮನೆಯಲ್ಲಿಯೂ ನೋವಾಗದಂತೆ ನಡೆದುಕೊಳ್ಳೋಣ ಮತ್ತು ಅವರು ಕೇಳದಿದ್ದರೂ ಪ್ರೀತಿ ತೋರಿಸೋಣ.
*ಅಪ್ಪನಿಗೆ ಮರ್ಯಾದೆ ಸಿಗುವಲ್ಲಿ ಅಮ್ಮಂದಿರ ಪಾತ್ರವೂ ದೊಡ್ಡದಿದೆ.ಮಕ್ಕಳ ಮುಂದೆ ಪತಿಯನ್ನು ಕೀಳಾಗಿ ಕಾಣದೇ ಆರಾಧಿಸಿದರೆ ಮಕ್ಕಳು ಅದೇ ರೀತಿಯಾಗಿ ತಂದೆಯನ್ನು ಗೌರವಿಸುತ್ತಾರೆ.
*ಅಪ್ಪ ಕಷ್ಟಗಳನ್ನು ಹೇಳಿಕೊಳ್ಳುವದಿಲ್ಲ ಎಂಬ ಮಾತ್ರಕ್ಕೆ ಅವನಿಗೆ ಕಷ್ಟಗಳೇ ಇಲ್ಲವೆಂದು ಅರ್ಥವಲ್ಲ.ಅವನು ಹೇಳಿಕೊಳ್ಳದ ಕಷ್ಟಗಳನ್ನು ನಾವೇ ತಿಳಿದುಕೊಳ್ಳಲು ಪ್ರಯತ್ನಿಸೋಣ.ತನ್ನ ಕಷ್ಟಗಳನ್ನು ಆಲಿಸುವವರಿದ್ದಾರೆ ಎಂಬ ಭರವಸೆಯನ್ನು ಮೂಡಿಸೋಣ.
*ಅಪ್ಪ ಬೈದರೂ ಹೊಡೆದರೂ ನಮ್ಮ ಒಳಿತಿಗಾಗಿಯೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳೋಣ.ಪ್ರತಿಯೊಂದು ವಸ್ತುವೂ ಬೇಕೆ ಬೇಕು ಎಂಬ ಹಟವನ್ನು ಸಡಿಲಿಸೋಣ.
*ಅಪ್ಪ ಏನೆ ದುಡಿದರೂ ನಮಗಾಗಿಯೇ ಎಂಬುದನ್ನು ತಿಳಿದುಕೊಂಡ ನಾವುಗಳು ಕೂಡಾ ಅಪ್ಪನಿಗೆ ದುಡಿಯುವ ಶಕ್ತಿ ಕುಂದಿದಾಗ ಅವರು ನಮಗಾಗಿ ಮೀಸಲಿಟ್ಟ ಸಮಯವನ್ನು ನೆನೆಯೋಣ.ಎಲ್ಲ ನಮಗಾಗಿಯೇ ತಮ್ಮ ಬದಕನ್ನು ಮೀಸಲಿಟ್ಟ ಅಪ್ಪನಿಗೆ ವಯಸ್ಸಾದ ಮೇಲೆ ನಾವು ಸ್ವಲ್ಪ ಸಮಯ ಮೀಸಲಿಡೋಣ.
          ಅಪ್ಪ ಯಾವಾಗಲೂ ಮಿನುಗುವ ನಕ್ಷತ್ರವೇ.ಇಂಥ ನಕ್ಷತ್ರ ಕುಟುಂಬದ ಒಳಿತಿಗಾಗಿ ತಮ್ಮೆಲ್ಲಾ ವಿರಾಮವನ್ನೇ ತ್ಯಾಗಮಾಡಿದ್ದಾರೆ.ಅಮ್ಮನಂತೆ ಅವರೂ ನಮ್ಮ ಬಾಳನ್ನು ಬೆಳಗಿದ್ದಾರೆ.ಇಂಥ ಅಪ್ಪನಿಗಾಗಿ ಅಮ್ಮನಿಗಿರುವಷ್ಟೇ ಸ್ಥಾನವನ್ನು ನಮ್ಮ ಹೃದಯದಲ್ಲಿ ಕೊಡೋಣವಲ್ಲವೇ….


Leave a Reply

Back To Top