“ಕಲ್ಯಾಣ ಕರ್ನಾಟಕದ ವಿಶಿಷ್ಟ ಲೇಖಕ ಸಿದ್ಧರಾಮ ಹೊನ್ಕಲ್”ರಾಜ್ ಬೆಳಗೆರೆ

ಸಿದ್ದರಾಮ ಹೊನ್ಕಲ್..!
ಈ ಹೆಸರು  ಮೊದಲಬಾರಿಗೆ ಕೇಳಿದ್ದು ನಾನು ಎಂ.ಎ ಓದುವಾಗ. ರವಿ ಬೆಳಗೆರೆ ಅವರ “ವಂಧ್ಯಾ” ಕಥೆಯನ್ನೊಳಗೊಂಡಂತೆ ಹೈದರಾಬಾದ್ ಕರ್ನಾಟಕದ ಪ್ರಮುಖ ಕಥೆಗಾರರ ಕಥೆಗಳ ಸಂಕಲನವೊಂದು ನಮ್ಮ ಎಂಎ ತರಗತಿಗೆ ಪಠ್ಯವಾಗಿತ್ತು. ಮೊಗಳ್ಳಿ ಗಣೇಶ್ ಅದರ ಸಂಪಾದಕರಾಗಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಕಟಿಸಿತ್ತು.  ಅದರಲ್ಲಿ ವಸುಧೇಂದ್ರ, ಚಿತ್ರಶೇಖರ ಕಂಠಿ, ಚಂದ್ರಕಾಂತ ವಡ್ಡು, ಹುರುಕಡ್ಲಿ ಶಿವಕುಮಾರ, ಶ್ರೀಧರ ರಾಯಸಂ, ಮಲ್ಲಿಕಾರ್ಜುನ ವಣೇನೂರ…. ಇತ್ಯಾದಿ ಕಥೆಗಾರರ ಒಂದೊಂದು ಕಥೆಗಳಿದ್ದವು. ಅವುಗಳು ಈ ಬಯಲುಸೀಮೆಯ (ಹೈದರಾಬಾದ್ ಕರ್ನಾಟಕ) ಪ್ರಾದೇಶಿಕತೆಯ ಸೊಗಡನ್ನು ಪ್ರತಿಬಿಂಬಿಸುವಂತಹ ಕಥೆಗಳೇ ಆಗಿದ್ದವು. ಇದರಲ್ಲಿ ಸಿದ್ಧರಾಮ ಹೊನ್ಕಲ್ ಅವರ “ಕಾಡು” ಕಥೆಯೂ ಇತ್ತು. ಓದಿ ನಿಬ್ಬೆರಗಾಗಿ ಹೋದೆ. ಅದರ ವಸ್ತು, ಭಾಷೆ, ಕಥನಕ್ರಮ ಬೆರಗುಗೊಳಿಸಿತ್ತು. ಕನ್ನಡದ ಶ್ರೇಷ್ಠ ಕಥೆಗಳಲ್ಲಿ ಅದು ಒಂದು ಎಂದೇ ಭಾವಿಸುವೆ.

ಬಿಡಿ, ಆಮೇಲೆ ಪಿಎಚ್ಡಿ ಗಾಗಿ ಗುಲಬರ್ಗಾ ಕ್ಕೆ ಬಂದ ಮೇಲೆ ಹೊನ್ಕಲ್ ಜೀ ಫೇಸ್‌ಬುಕ್‌ ನಲ್ಲಿ ಸಿಕ್ಕರು. ಅವರ ಬರಹಗಳನ್ನು ಓದಲಾರಂಭಿಸಿದೆ. ಆಗಲೇ ಅವರು ಹೆಚ್ಚೆಚ್ಚು ಅರ್ಥವಾಗತೊಡಗಿದರು. ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನೆಲೆಸಿರುವ ಶ್ರೀಯುತರು ತಮ್ಮ ಮನೆಗೆ “ಕಾವ್ಯಾಲಯ” ಎಂದು ಹೆಸರಿಟ್ಟಿರುವುದು ಅವರ ಸಾಹಿತ್ಯ ಪ್ರೀತಿಗೆ ಸಾಕ್ಷಿಯಾಗಿದೆ. ಮನೆಯೊಳಗಿನ ಸುವಿಶಾಲ ಹಾಲ್ ನಲ್ಲಿ ಆಗಾಗ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುವುದುಂಟು. ಮನೆಗೆ ಭೇಟಿಕೊಡುವ ಅಭಿಮಾನಿ ಅತಿಥಿಗಳಿಗೆಂದೇ ಮೀಸಲಾದ ಇನ್ನೊಂದು ಕೋಣೆಯ (ಬಹುಶಃ ಅದು ಅವರ ಬರವಣಿಗೆಗೆಂದೇ ಮೀಸಲಾದ ಖಾಸಗಿ ಕೋಣೆ ಆಥವಾ ಚೇಂಬರ್ ನಂತದ್ದು) ಗೋಡೆ, ಕಪಾಟುಗಳ ತುಂಬೆಲ್ಲಾ ಪ್ರಶಸ್ತಿ ಪುರಸ್ಕಾರಗಳ ರಾಶಿಯೇ ತುಂಬಿರುವುದು ಕಾಣಬಹುದು. ಇದುವರೆಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅನಾಮತ್ತು 63 ಕೃತಿಗಳನ್ನು ಬರೆದಿದ್ದಾರೆ. ಆ 63 ಕೃತಿಗಳಿಗೆ  57 ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಇದೊಂದು ದಾಖಲೆಯೇ ಸರಿ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟೊಂದು ಪ್ರಶಸ್ತಿಗಳನ್ನು ಪಡೆದ ಲೇಖಕರು ತುಂಬಾ ವಿರಳ. ಬಹುಶಃ  ಕಲ್ಯಾಣ ಕರ್ನಾಟಕ(ಹೈ.ಕ) ಭಾಗದಲ್ಲಿ ಇವರೊಬ್ಬರೇ ಇರಬೇಕು. ಆದರೆ, ಹೊನ್ಕಲ್ ಅವರು ಪ್ರಚಾರಪ್ರಿಯರಲ್ಲ, ಪ್ರಶಸ್ತಿಗಳ ಹಿಂದೆ ಹೋದವರಲ್ಲ. ಅವರು ತಲೆತಗ್ಗಿಸಿ ಬರೆಯುತ್ತಾಹೋದವರು. ದಂಡಿದಂಡಿಯಾಗಿ ಪ್ರಶಸ್ತಿಗಳೇ ಅವರನ್ನು ಅರಸಿಕೊಂಡು ಬಂದಿವೆ. ಅತೀ ಕಿರಿಯ ವಯಸ್ಸಿನಲ್ಲಿಯೇ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡ ಹೆಗ್ಗಳಿಕೆ ಅವರದು. ಒಂದು ವೇಳೆ ಹೊನ್ಕಲ್ ಜೀ  ಬೆಂಗಳೂರು- ಮೈಸೂರು ಭಾಗದ ಲೇಖಕರಾಗಿದ್ದರೆ ಇಷ್ಟೊತ್ತಿಗಾಗಲೇ ಕರ್ನಾಟಕದಾದ್ಯಂತ ಜನಪ್ರಿಯ ಲೇಖಕರಾಗಿ ಪ್ರಖ್ಯಾತರಾಗುತ್ತಿದ್ದರು.


ಅದೆನೋ ಗೊತ್ತಿಲ್ಲ, ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಹುಲುಸಾಗಿ ಬೆಳೆದಿದ್ದರೂ ಅದನ್ನು ಗುರುತಿಸುವ ಪುರಸ್ಕರಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯಮಟ್ಟದ ಸಂಘಸಂಸ್ಥೆಗಳು ಉದಾಸೀನವನ್ನೇ ತೋರಿಸುತ್ತಾ ಬಂದಿವೆ. ಚೆನ್ನಣ್ಣ ವಾಲೀಕಾರ ಅವರು ಬರೆದ ಮಹಾನ್ ಕೃತಿ “ವ್ಯೋಮ ವ್ಯೋಮ” ಸಾಹಿತ್ಯಲೋಕದಲ್ಲಿ ಪಡೆಯಬೇಕಾದ ಸ್ಥಾನ ಪಡೆಯಲಿಲ್ಲ ಎಂಬುದು ನಿಜಕ್ಕೂ ದುರಂತ. ತುಂಬಾ ನೋವಿನ ಸಂಗತಿ. ಇದೇ ಕೃತಿಯನ್ನು ದಕ್ಷಿಣ ಕರ್ನಾಟಕದಲ್ಲಿ ಯಾರಾದರೂ ಬರೆದಿದ್ದರೆ ಅದರ ಸಂಭ್ರಮ, ಖ್ಯಾತಿ, ಪ್ರಶಸ್ತಿ , ಸನ್ಮಾನದ ಸಂಚಲನವೇ ಬೇರೆ ಥರಾ ಇರುತ್ತಿತ್ತು.

ಯುವಕರನ್ನು ನಾಚಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಹೊನ್ಕಲ್ ಅವರು ಸದಾ ಫೇಸ್‌ಬುಕ್‌ ನಲ್ಲಿ ಏನಾದರೂ ಬರೆಯುತ್ತಲೇ ಇರುತ್ತಾರೆ. ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದ  ಕಳೆದ ವರುಷಗಳ ಆ ದಿನದ ನೆನಪನ್ನು ಈ ವರ್ಷದ ಅದೇ ದಿನ ನೆನಪಿಸಿಕೊಂಡು “ನೆನಪುಗಳು ಮಧುರ” ಎಂಬ ಲೈನ್ ಹಾಕಿ ಸಂಭ್ರಮಿಸುತ್ತಾರೆ. ವಾಟ್ಸಾಪ್ ಸ್ಟೇಟಸ್ ನಲ್ಲಿ ಅದರ ಸ್ಕ್ರೀನ್ ಶಾಟ್ ಹಾಕಿ ಸಂತಸಪಡುತ್ತಾರೆ. ಅವರ ಕಚೇರಿ ಗುಲಬರ್ಗಾ ದಲ್ಲಿರುವುದರಿಂದ ಪ್ರತಿದಿನ  ಶಹಾಪುರದಿಂದ ಗುಲಬರ್ಗಾ ಕ್ಕೆ ಸುಮಾರು ಎಂಬತ್ತು ಕಿ.ಮೀ ದೂರದ ಬಸ್ ಪ್ರಯಾಣ. ಈ ವಯಸ್ಸಿನಲ್ಲಿಯೂ ಆಗಾಗ ಬಸ್ ಬಿಟ್ಟು ತಮ್ಮ ನೆಚ್ಚಿನ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ನ್ನು ಚಲಾಯಿಸಿಕೊಂಡು ಅಥವಾ ಬೊಲೆರೋ ಜೀಪ್ ಡ್ರೈವ್ ಮಾಡಿಕೊಂಡು ಹೊರಟುಬಿಡುತ್ತಾರೆ. ಅದನ್ನೇ ವಾಟ್ಸಾಪ್ ಸ್ಟೇಟಸ್ ಮತ್ತು ಫೇಸ್‌ಬುಕ್‌ ಗೆ ಪೋಸ್ಟ್ ಮಾಡಿ ಖುಷಿ ಪಡುತ್ತಾರೆ. ಜೀವನೋತ್ಸಾಹ, ಜೀವನ ಪ್ರೀತಿ ಅಂದರೆ ಇದೇ ಅಲ್ಲವೇ..? ಪ್ರತಿ ಕ್ಷಣವನ್ನು ಅನುಭವಿಸಿ ಬದುಕುವುದು. ಎಂದಿಗೂ ಕುಂದದ ಈ ಉತ್ಸಾಹವೇ ಅವರನ್ನು ಮಾಗಿದ ಲೇಖಕರನ್ನಾಗಿ ಮಾಡಿದೆ.  ಹೊನ್ಕಲ್ ಅವರಿಂದ ನಾವು ಕಲಿಯುವುದು ತುಂಬಾ ಇದೆ.

ಬಹುಶಃ ಕಾದಂಬರಿಯೊಂದನ್ನು ಹೊರತು ಪಡಿಸಿದರೆ ಸಾಹಿತ್ಯದ ಉಳಿದೆಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಇದುವರೆಗೆ ಅವರು ಬರೆದಿರುವುದು ಸರಿಸುಮಾರು ಹತ್ತುಸಾವಿರ ಪುಟಗಳ ಸಮೃದ್ಧ ಸಾಹಿತ್ಯ..!  ಕಾವ್ಯ, ಕಥೆ, ಗಝಲ್, ಶಾಯಿರಿ, ಹೈಕು, ವಿಮರ್ಶೆ, ಅನುವಾದ, ಜೀವನ ಕಥನ, ಪ್ರವಾಸ ಕಥನ, ಲಲಿತ ಪ್ರಬಂಧ, ಸಂಪಾದನೆ….. ಹೀಗೆ ಪಟ್ಟಿ ಸಾಗುತ್ತದೆ. ಇನ್ನೇನು ಕೆಲವು ದಿನಗಳಲ್ಲಿ ಅವರು ಕಾದಂಬರಿಯೊಂದನ್ನು ಬರೆಯಬಹುದು. ಬರೆಯಲಿ, ಅದು ನನ್ನ ಪ್ರೀತಿಯ ಒತ್ತಾಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಂತರಸರ ನಂತರ ಗಝಲ್ ಪ್ರಕಾರವನ್ನು ತುಂಬಾ ಸಮೃದ್ಧವಾಗಿ ಬೆಳೆಸಿದವರಲ್ಲಿ  ಹೊನ್ಕಲ್ ರು ಅಗ್ರಗಣ್ಯರು. ಕರ್ನಾಟಕದ ಹಲವಾರು ಪತ್ರಿಕೆಗಳಲ್ಲಿ ಇವರ ನೂರಾರು ಕವಿತೆ, ಶಾಯಿರಿ, ಲೇಖನಗಳು ಪ್ರಕಟಗೊಂಡಿವೆ.

ಓದು, ಬರವಣಿಗೆ, ಪ್ರವಾಸ ಇವು ಹೊನ್ಕಲ್ ಜೀ ಹವ್ಯಾಸಗಳು. ಕನ್ನಡದಲ್ಲಿ ಅತ್ಯಂತ ಹೆಚ್ಚು ಪ್ರವಾಸ ಕಥನಗಳನ್ನು ಬರೆದ ದಾಖಲೆ ಇವರ ಹೆಸರಿನಲ್ಲಿದೆ..! ಇತ್ತೀಚೆಗೆ ಪ್ರಕಟಗೊಂಡ ಅವರ “ಲೋಕ ಸಂಚಾರಿ” ಕೃತಿಯು ಆರು ಪ್ರವಾಸ ಕಥನಗಳನ್ನೊಳಗೊಂಡ 700 ಪುಟಗಳ ಬೃಹತ್ ಗ್ರಂಥ! ಇನ್ನು, ಅವರ “ಹೊನ್ನುಡಿ” ಸಂಕಲನ ಪುಟ್ಟಪುಟ್ಟ ಸುಭಾಷಿತ ಬರಹಗಳ ಸಂಗ್ರಹ. ಬದುಕಿನ ಅನೇಕ ವಿಷಯಗಳ ಬಗ್ಗೆ  ಕೆಲವೇ ವಾಕ್ಯಗಳಲ್ಲಿ ಹೂ ಪೋಣಿಸಿದಂತೆ ಚೆಂದಗೆ ಕಟ್ಟಿಕೊಟ್ಟಿದ್ದಾರೆ. Your Quote app ನಲ್ಲಿ Post ಮಾಡಿರುವ ಇವರ ಈ ಸಂದೇಶಗಳು ಹಲವರು ತಮ್ಮ WhatsApp status ನಲ್ಲಿ ಇಟ್ಟುಕೊಳ್ಳುತ್ತಾರೆ. ಹೊನ್ಕಲ್ ಜೀ ವೃತ್ತಿಯಿಂದ ಆರೋಗ್ಯ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿದ್ದರೂ ಸಾಹಿತ್ಯವನ್ನೇ ಜೀವಾಳವನ್ನಾಗಿಸಿಕೊಂಡವರು.2017 ರಲ್ಲಿ ಶಹಾಪುರ  ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಮತ್ತು 2018ರಲ್ಲಿ ಯಾದಗಿರಿ ಜಿಲ್ಲೆಯ 4ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ವರ್ತಮಾನದ ತಲ್ಲಣಗಳಿಗೆ ಧ್ವನಿಯಾಗಿದ್ದರು. ಪ್ರಸ್ತುತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಹೊನ್ಕಲ್ ಅವರನ್ನು ಒಂದೇ ಒಂದು ಸಲ ಮುಖತಃ ಭೇಟಿಯಾಗಿದ್ದೇನೆ. ನಾಲ್ಕೈದು ಸಲ ಫೋನ್ ನಲ್ಲಿ ಮಾತಾಡಿದ್ದೇನೆ ಅಷ್ಟೇ. ಅವರು ಹಿರಿಕಿರಿಯರೆಂಬ ಬೇಧವಿಲ್ಲದೇ ಪ್ರೀತಿಯಿಂದ ಮಾತಾಡುತ್ತಾರೆ. ನೂರಾರು ಕಿರಿಯ ಉದಯೋನ್ಮುಖ ಕವಿ ಲೇಖಕರಿಗೆ ಸಲಹೆ ನೀಡುತ್ತಾ ಅವರ ಕೃತಿಗಳಿಗೆ ಮುನ್ನುಡಿ-ಬೆನ್ನುಡಿ ಬರೆದು ಬೆನ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ.

ಪಿಯುಸಿ ಫೇಲಾದ ನೋವಿನಲ್ಲೇ ಕವಿಯಾದೆ ಎನ್ನುವ ಹೊನ್ಕಲ್ ಜೀ ನಂತರ ಓದಿದ್ದು ಎಂಎ, ಎಲ್.ಎಲ್.ಬಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಆರೋಗ್ಯ ಶಿಕ್ಷಣದಲ್ಲಿ ಡಿಪ್ಲೋಮಾ,….ಅವರ ಓದಿನ ವ್ಯಾಪ್ತಿ ವಿಸ್ತಾರವಾದುದು.

ಇವರ ಸಾಹಿತ್ಯಸೇವೆಯನ್ನು ಪರಿಗಣಿಸಿ ಇವರಿಗೆ ಯಾವತ್ತೋ ಗೌರವ ಡಾಕ್ಟರೇಟ್‌ ಸಿಗಬೇಕಿತ್ತು. ಗೌ.ಡಾ.‌ಕೊಟ್ಟ ವಿ.ವಿ.ಯ ಘನತೆ ಹೆಚ್ಚಾಗುತ್ತಿತ್ತು. ಹಲವರು ಇವರ ಕೆಲವು ಕೃತಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ಎಂ.ಫಿಲ್‌ ಪದವಿಗಳನ್ನು ಪಡೆದಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಇವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿ ಕು.ರೇವತಿಯವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದದ್ದು ಇಲ್ಲಿ ಗಮನಾರ್ಹವಾಗಿದೆ. ಹೊನ್ಕಲ್ ಅವರ ಹತ್ತು  ಕೃತಿಗಳು ಸೊಲ್ಲಾಪುರ ವಿ.ವಿ. ಸೇರಿದಂತೆ ಆರು ವಿ.ವಿ. ಗಳಲ್ಲಿ ಪಠ್ಯಗಳಾಗಿ ಬೋಧಿಸಲ್ಪಟ್ಟಿವೆ. ಸ್ವತಃ “ಅಲ್ಲಮಪ್ರಭು ಪ್ರಕಾಶನ” ಎಂಬ ಪ್ರಕಾಶನ ಸಂಸ್ಥೆ ಸ್ಥಾಪಿಸಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. “ಶ್ರೀ ಹೊನ್ಕಲ್  ಸಾಹಿತ್ಯ ಮತ್ತು ಸಾಂಸ್ಕೃತಿಕ  ಪ್ರತಿಷ್ಠಾನ” ಸ್ಥಾಪಿಸಿ ಅದರ ಮೂಲಕ ಪ್ರತಿವರ್ಷ ಕನ್ನಡದ ಅತ್ಯುತ್ತಮ ಕಾವ್ಯ, ಕಥಾ ಸಂಕಲನ, ಕಾದಂಬರಿ, ವಿಮರ್ಶೆ ಮುಂತಾದ ಪ್ರಕಾರಗಳಿಗೆ “ಹೊನ್ಕಲ್ ಪ್ರಶಸ್ತಿ ಪುರಸ್ಕಾರ” ನೀಡುತ್ತಿದ್ದಾರೆ. ಹೀಗೆ ಸಾಹಿತ್ಯಲೋಕಕ್ಕೆ ಅವರ ಸೇವೆ ಅನುಪಮವಾದುದು

ಸದಾ ಸಾಹಿತ್ಯವನ್ನೇ ಉಸಿರಾಗಿಸಿಕೊಂಡ ಶ್ರೀಯುತರ ಇದುವರೆಗಿನ ಒಟ್ಟು ಕೃತಿಗಳ ಸಂಖ್ಯೆ ಎಪ್ಪತ್ತರ ಗಡಿಗೆ ಹತ್ತಿರವಾಗುತ್ತಿವೆ. ಈಗ ಮೂರ್ನಾಲ್ಕು ಕೃತಿಗಳು ಅಚ್ಚಿನಲ್ಲಿವೆ.  ಇನ್ನೊಂದು ದಶಕದಲ್ಲಿ ಅವರ ಕೃತಿಗಳು ನೂರಕ್ಕೆ ತಲುಪುವುದು ನಿಶ್ಚಿತ! ಆಗ ಸಾಹಿತ್ಯ ವಲಯದಲ್ಲಿ ಮತ್ತೊಂದು ದಾಖಲೆಯಾಗಿ ಉಳಿಯಲಿದೆ.

ಹೊನ್ಕಲ್ ಅವರಿಗೆ ಬರವಣಿಗೆಗೆ ಬೆನ್ನೆಲುಬಾಗಿ ಅವರ ಶ್ರೀಮತಿಯವರು ಸಹಕಾರ ನೀಡುತ್ತಿದ್ದಾರೆ. ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಒಳಗೊಂಡ ಸುಖೀ ಸಂಸಾರ ಅವರದು.  

ಬೆಚ್ಚನೆಯಾ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.

ಸರ್ವಜ್ಞ ನ ಈ ವಚನ ಹೊನ್ಕಲ್ ಅವರನ್ನು ನೋಡಿ ಬರೆದಂತಿದೆ. ಇರಲಿ, ಹೊನ್ಕಲ್ ಜೀ… ಇನ್ನು ಹಲವಾರು ಕೃತಿಗಳನ್ನು ಹೀಗೆ ಬರೆಯುತ್ತಿರಲಿ. ಅವು ನಮ್ಮನ್ನು ಮುದಗೊಳಿಸಲಿ. ಇನ್ನು ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಮುತ್ತಿಕೊಳ್ಳಲಿ ಎಂದು ಆಶಿಸುವೆ.


Leave a Reply

Back To Top