ಹರುಷದ ಚಿತ್ತ – ಮತ್ತೆ ಶಾಲೆಗಳತ್ತ…ಜಯಲಕ್ಷ್ಮಿ ಕೆ

ಓದು, ಪರೀಕ್ಷೆ,ಹೋಮ್ ವರ್ಕ್ ಇತ್ಯಾದಿ ಜಂಜಾಟಗಳಿಂದ ಬಿಡುಗಡೆ ಪಡೆದು ಬೇಸಿಗೆ ರಜೆಯ ಸುಧೀರ್ಘ ಅವಧಿಯನ್ನು ಮೋಜು -ಮಸ್ತಿಗಳಲ್ಲಿ ಕಳೆದು ಮುದಗೊಂಡ ಎಳೆ ಮನಸುಗಳು ಮತ್ತೆ ಶಾಲೆಗಳತ್ತ ಹೆಜ್ಜೆ ಹಾಕತೊಡಗಿವೆ… ಹೊಸ ಕನಸುಗಳೊಂದಿಗೆ… ಹೊಸ ಸಮವಸ್ತ್ರ, ಪುಸ್ತಕಗಳನ್ನು ಹೊತ್ತ ಹೊಸ ಹೊಸ ಚೀಲಗಳನ್ನು ಹೆಗಲಿಗೇರಿಸಿಕೊಂಡು ಹೊಸತನದೊಂದಿಗೆ ಹೊಸ ಹೊಸ ಕಲಿಕೆಗೆ ಮುಗ್ದ ಹೃದಯಗಳು ಸಜ್ಜಾಗಿವೆ. ಅಪ್ಪ ಅಮ್ಮನ ಜೊತೆಯಲ್ಲಿ ಸುತ್ತಾಡಿ ಗಳಿಸಿದ ಸವಿ ನೆನಪುಗಳ ಬುತ್ತಿಯನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವ ತವಕ. ಬೇಸಿಗೆ ರಜೆಯಲ್ಲಿ ಕಲಿತ, ಬಂಧು ಬಾಂಧವರೊಂದಿಗೆ ಬೆರೆತ ಹೊಸ ಹೊಸ ವಿಚಾರಗಳನ್ನು ಹೇಳಿಕೊಂಡು ಬೀಗುವ ಅವಸರದಲ್ಲಿ ಮಕ್ಕಳಿದ್ದಾರೆ. ಹೊಸ ತುಂಟಾಟಗಳ ಮೂಲಕ ತಮ್ಮ ಬಳಗದವರೊಂದಿಗೆ ಕಲರವದಲ್ಲಿ ತೊಡಗಲು ತುಂಟರು ಕಾದಿದ್ದಾರೆ.

ಒಟ್ಟಿನಲ್ಲಿ ಇವೆಲ್ಲಕ್ಕೂ ಹೊಸ ಶೈಕ್ಷಣಿಕ ವರ್ಷ ಸ್ವಾಗತ ಕೋರುತ್ತಿದೆ. ಮಕ್ಕಳ ಆಟೋಟಗಳನ್ನು ಕಾಣದೆ ಸುಮಾರು ಎರಡು ತಿಂಗಳ ಕಾಲ ಬಿಕೋ ಎನ್ನುತ್ತಿದ್ದ ಶಾಲಾ ವಾತಾವರಣ ಮಕ್ಕಳ ಆಗಮನದಿಂದ ಮತ್ತೆ ಕಳೆಗಟ್ಟಿದೆ. ಒಂದೆಡೆ ಆಹ್ಲಾದಕರ ಸ್ವರದೊಂದಿಗೆ ನಗು ಮೊಗದಿಂದ ಮಕ್ಕಳನ್ನು ತರಗತಿಗಳಿಗೆ ಸ್ವಾಗತಿಸಲು ಶಿಕ್ಷಕ ವೃಂದ ಸಜ್ಜಾಗಿದ್ದರೆ ಇನ್ನೊಂದೆಡೆ ,ಹಿಂದಿನ ವರ್ಷದ ಲೋಪದೋಷಗಳು ಮರುಕಳಿಸದಂತೆ ಎಚ್ಚರ ವಹಿಸುತ್ತಾ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿ ಕೊಡಲು ಆಡಳಿತ ವ್ಯವಸ್ಥೆ ಸಿದ್ಧತೆ ನಡೆಸಿದೆ. ಇಳೆಯನ್ನು ತಣಿಸಿದ ಮಳೆ ರಾಯ ಕೂಡಾ ಪ್ರಪುಲ್ಲ ವಾತಾವರಣ ಕಲ್ಪಿಸಿಕೊಟ್ಟಿದ್ದಾನೆ.
ಹೊಸದಾಗಿ ಶಾಲೆಗೆ ಸೇರಿದ ಮಕ್ಕಳಿಗೆ   ಅಮ್ಮನ ಮಡಿಲ ಮಮತೆಯಿಂದ   ಹೊರ ಬಂದು ಹೊಸ ಕಟ್ಟಡ, ಹೊಸ ಟೀಚರ್…. ಈ ಎಲ್ಲದರ  ಬಗ್ಗೆ ಒಂದು ರೀತಿಯ ಭೀತಿಯಾದರೆ ಅವರ ಪೋಷಕರಿಗೆ ,  ತನ್ನ ಮಗುವನ್ನು ಶಿಕ್ಷಕರು ಹೇಗೆ ನೋಡಿಕೊಳ್ಳಬಹುದು……ಎಂಬ ಕುತೂಹಲ ಒಂದೆಡೆ.    ವಿದ್ಯಾರ್ಥಿ-ಶಿಕ್ಷಕ -ಪೋಷಕ ಈ ತ್ರಿಕೋನ ವ್ಯವಸ್ಥೆಯಲ್ಲಿ ಶಿಕ್ಷಣ ಎನ್ನುವ ಪ್ರಕ್ರಿಯೆ ಸಾಗಬೇಕಾಗಿರುವುದರಿಂದ ಯಾವುದೇ ಮಗುವಿನ ಶಿಕ್ಷಣ ಪರಿಪೂರ್ಣತೆಯನ್ನು ಗಳಿಸಬೇಕಾದರೆ ಮಕ್ಕಳ ಜೊತೆ ಜೊತೆಗೆ ಶಿಕ್ಷಕರು ಹಾಗೂ ಪೋಷಕರು ಹೊಣೆಗಾರಿಕೆ ಅರಿತು ನಡೆಯಬೇಕಿದೆ. ಮಕ್ಕಳ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯುವ ಮೂಲಕ ಅವರಲ್ಲಿ ಸುರಕ್ಷತಾ ಭಾವವನ್ನು, ಆತ್ಮ ವಿಶ್ವಾಸವನ್ನು ಮೂಡಿಸುವ ತಾಳ್ಮೆ ಪೋಷಕರಿಗಿರಬೇಕು. ಅಂತೆಯೇ ಮಕ್ಕಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಬೋಧಿಸುವ, ಕಲಿಕೆಗೆ ಪ್ರೋತ್ಸಾಹಿಸುವ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸುವ ಕಲೆಗಾರಿಕೆ ಶಿಕ್ಷಕರಿಗಿರಬೇಕು..

ಮಕ್ಕಳಲ್ಲಿ ಸಂಸ್ಕಾರ – ಸನ್ನಡತೆಗಳಿಗೆ  ಅಡಿಪಾಯ ಹಾಕುವ ಕಾಲವೆಂದರೆ ಅದು ಬಾಲ್ಯ. ಮಕ್ಕಳ ಬಾಲ್ಯದ ನೆನಪುಗಳು ಬರಡಾಗದಂತೆ ಕಾಯಬೇಕಾದ ಹೊಣೆಗಾರಿಕೆ ಪೋಷಕರು ಮತ್ತು ಶಿಕ್ಷಕರದ್ದು. ಮಕ್ಕಳ ಭವಿತವ್ಯಕ್ಕೆ ಶಿಕ್ಷಣ ಹೇಗೆ ಬುನಾದಿಯೋ ಹಾಗೆ ಅವರ ವ್ಯಕ್ತಿತ್ವ ರೂಪುಗೊಳ್ಳಲು ಮೌಲ್ಯಗಳು ಸಹಕಾರಿ. ಹಿಂದೆ ಅಜ್ಜ -ಅಜ್ಜಿಯರು ಮಕ್ಕಳಿಗೆ ನೀತಿ ಕತೆಗಳ ಮೂಲಕ ಮೌಲ್ಯಗಳನ್ನು ತುಂಬುತ್ತಿದ್ದರು.ಇಂದಿನ ಬಹುತೇಕ ಮಕ್ಕಳಿಗೆ ಈ ಭಾಗ್ಯವಿಲ್ಲ. ದುಡಿದು ದಣಿದು ಬರುವ ಪೋಷಕರಿಗೆ ಮಕ್ಕಳೊಂದಿಗೆ ಬೆರೆಯಲು ಸಮಯವಿಲ್ಲ. ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡಿರುವ ಶಿಕ್ನಣ ಪದ್ಧತಿ, ಭೋಗಲಾಲಸೆಯನ್ನೇ ಹೆಚ್ಚಿಸುವ ಮಾಧ್ಯಮಗಳ, ತಂತ್ರಜ್ಞಾನಗಳ ಪ್ರಭಾವ ಇತ್ಯಾದಿಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿಲ್ಲ.
ಮಕ್ಕಳ ತಪ್ಪುಗಳನ್ನು ತಿದ್ದಿ ಹೇಳುವ ಸ್ವಾತಂತ್ರ್ಯ ಇಂದು ಶಿಕ್ಷಕರಿಗಿಲ್ಲ.ಹಾಗೆಂದು ‘ಆನೆ ನಡೆದದ್ದೇ ದಾರಿ ‘ ಎಂಬಂತೆ ಮಕ್ಕಳು ಸಾಗಲಾದೀತೇ? ಮಕ್ಕಳೇ ದೇಶದ ಅಮೂಲ್ಯ ಆಸ್ತಿ. ಅವರಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆ, ಕರುಣೆ, ಸಹಕಾರವೇ ಮೊದಲಾದ ಮೌಲ್ಯಗಳನ್ನು ಬಿತ್ತಿ ಬೆಳೆಸಬೇಕಾದ ಜವಾಬ್ದಾರಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ್ದು.’ ದೇವರ ಭಯವೇ ಜ್ಞಾನದ ಆರಂಭ.’ ಮಕ್ಕಳ ಮನಸು ವಿಕಸನಗೊಳ್ಳುವಂತಹ ಪ್ರಾರ್ಥನೆ, ಭಜನೆ, ಧ್ಯಾನ ಇತ್ಯಾದಿಗಳಲ್ಲಿ ಎಳವೆಯಲ್ಲಿಯೇ ಮಕ್ಕಳು ತೊಡಗುವಂತೆ ನೋಡಿಕೊಳ್ಳುವ ಜವಾಬ್ದಾರ ಪೋಷಕರದ್ದು. ಪ್ರಾರ್ಥನೆ ಗೆ  ಬಳಸುವ ಸಮಯ ವ್ಯರ್ಥವೇನಲ್ಲ.
ಇಂದ್ರಿಯ ನಿಗ್ರಹಕ್ಕೆ ಮಾರಕವಾದ ಆಧುನಿಕ ತಂತ್ರಜ್ಞಾನ ಪ್ರವಾಹದಲ್ಲಿ ಮಕ್ಕಳು ಕೊಚ್ಚಿ ಹೋಗದಂತೆ, ವಿಕೃತ ವಿಚಾರಗಳತ್ತ ಆಕರ್ಶಷಿತರಾಗ ದಂತೆ ತಡೆಯುವ ಶಕ್ತಿ ಧ್ಯಾನ -ಪ್ರಾರ್ಥನೆಗಳಿಗಿವೆ. ಶಾಲೆಗಳಲ್ಲಿ ಮಕ್ಕಳ ಮೇಲೆ ಮಿಲಿಟರಿ ಶಿಸ್ತನ್ನು ಹೇರುವ ಬದಲಾಗಿ ಮಕ್ಕಳನ್ನು ಭಾವನಾತ್ಮಕವಾಗಿ ಶಿಸ್ತಿನ ಬದುಕಿಗೆ ಅಣಿಗೊಳಿಸಬೇಕಿದೆ.ಕೇವಲ ಉರುಹೊಡೆದು ಗಳಿಸುವ ಅಂಕ ದೊಡ್ಡ ಮೊತ್ತದ ಸಂಪಾದನೆಗೆ ದಾರಿ ಮಾಡಿಕೊಟ್ಟೀತೇ ಹೊರತು ಬದುಕುವ ಕಲೆಗಾರಿಕೆ ಕಲಿಸದು. ಆದ್ದರಿಂದ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗುವಂತಹ ವಾತಾವರಣ ಶಾಲೆಗಳಲ್ಲಿ ನಿರ್ಮಾಣವಾಗಬೇಕು.ಅಧೈರ್ಯ, ಆಲಸ್ಯ, ಕೀಳರಿಮೆ ಇತ್ಯಾದಿಗಳಿಂದ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಹಿರಿಯರಾದ ನಮ್ಮಲ್ಲರದು. ಆತ್ಮವಿಶ್ವಾಸದೊಂದಿಗೆ ಬೆಳೆಯುವ ಮಕ್ಕಳೇ ದೇಶದ ಅಮೂಲ್ಯ ಆಸ್ತಿ. ಅಂತಹ ಮೌಲ್ಯಾಧರಿತ ಶಿಕ್ನಣಕ್ಕೆಈ ಶೈಕ್ಷಣಿಕ ವರ್ಷ ಚಾಲನೆ ನೀಡಲಿ.

ಈ ಸುಸಂದರ್ಭದಲ್ಲಿ ಶಾಲೆಗೆ ನಲಿ ನಲಿದು ಬಂದ ಮಕ್ಕಳಲ್ಲಿ ವರ್ಷ ಪೂರ್ತಿ ಈ ಉಲ್ಲಾಸ ಪುಟಿಯುತ್ತಿರಲಿ ಎಂದು ಮನದುಂಬಿ ಹಾರೈಸೋಣ. ಮಕ್ಕಳನ್ನು ಧನಾತ್ಮಕ ಮಾತುಗಳ ಮೂಲಕ ಕಲಿಕೆಗೆ ಪ್ರೇರೇಪಿಸುವ ಮನೋಭಾವ ಪೋಷಕರು ಹಾಗೂ ಗುರು ಹಿರಿಯರಿಗೆ ಸಿದ್ಧಿಸಲಿ, ಚೇತನ ಚಿಲುಮೆಗಳಿಗೆ ಶುಭವಾಗಲಿ.


Leave a Reply

Back To Top