“ಮೀಸಲಾತಿಯ ನಿಜ ಸ್ವರೂಪ” ಮೇಘ ರಾಮದಾಸ್‌ ಜಿ

“ಮೀಸಲಾತಿ ರದ್ದಾಗಬೇಕು, ಮೀಸಲಾತಿಯಿಂದಲೇ ಅಸಮಾನತೆ ಸೃಷ್ಠಿಯಾಗುತ್ತಿದೆ, ಮೀಸಲಾತಿ ಇಲ್ಲದಿದ್ದರೆ ಎಲ್ಲರೂ ಸಮಾನವಾಗಿಯೇ ಬದುಕುತ್ತಾರೆ.” ಇಂತಹ ಪ್ರಬುದ್ಧವೆನಿಸುವ ಮಾತುಗಳು ಕಳೆದ 10 ವರ್ಷಗಳಿಂದೀಚೆಗೆ ಸಾಕಷ್ಟು ಕೇಳಿಬರುತ್ತಿವೆ. ಇದಕ್ಕೆ ಕಾರಣಗಳು ಸಾವಿರಾರು ಇರಬಹುದು, ಆದರೆ ಈ ನಿಲುವು ಸರಿಯೇ ಎಂದು ಚಿಂತಿಸುವ ಅಗತ್ಯ ತುಂಬಾ ಇದೆ. ಹಾಗಾದರೆ ಮೀಸಲಾತಿ ರದ್ದು ಮಾಡಿದರೆ ನಿಜವಾಗಿಯೂ ಭಾರತ ಹಸಿವು, ಬಡತನ, ನಿರುದ್ಯೋಗ, ಜಾತಿ ತಾರತಮ್ಯ, ಧರ್ಮ ಭೇದ, ದ್ವೇಷ, ಭ್ರಷ್ಟಾಚಾರ, ಹಿಂಸೆ, ದೌರ್ಜನ್ಯ ಮುಕ್ತ ದೇಶವಾಗುತ್ತದೆಯೇ ಎಂದು ಒಮ್ಮೆ ಯೋಚಿಸಿ ನೋಡಿದರೆ, “ಇಲ್ಲ” ಎನ್ನುವ ಉತ್ತರ ನಮಗೆ ಸ್ಪಷ್ಟವಾಗಿ ಕಣ್ಣಿಗೆ ರಾಚುವಂತೆ ಕಾಣುತ್ತದೆ.
ಅಂದಮೇಲೆ ಈ ಮೀಸಲಾತಿ ಎಂಬ ಸದುದ್ದೇಶದ ಹಿಂದೆ ಕೆಲ ಕೆಟ್ಟ ಮನಸ್ಸುಗಳು ಬಿದ್ದಿರುವ ಮೂಲ ಉದ್ದೇಶವೇ ಮತ್ತೆ ಭಾರತವನ್ನು ಅಸ್ಪಶ್ಯತೆಯ ಆಚರಣೆಯ ರಾಷ್ಟ್ರ ಮಾಡುವ ದುರುದ್ದೇಶದಿಂದಲೇ ಹೊರತು ಸಮಾನತೆಯ ಸ್ವಸ್ಥ ದೇಶ ಕಟ್ಟಲು ಅಲ್ಲ. ಹಾಗಾಗಿಯೇ ಮೀಸಲಾತಿಯನ್ನು ಪ್ರತಿ ಬಾರಿ ಕೆಟ್ಟದ್ದು, ಕೇವಲ ಒಂದು ಜಾತಿಗೆ ಮಾತ್ರ ಸೀಮಿತವಾದದ್ದು ಎಂದು ಬಿಂಬಿಸಲಾಗುತ್ತದೆಯೇ ಹೊರತು ಮೀಸಲಾತಿಯನ್ನು ಸಂವಿಧಾನದಲ್ಲಿ ಸೇರಿಸಿರುವ ಉದ್ದೇಶ ಏನು ಎಂಬ ನೈಜ ಕಾರಣವನ್ನು ಯಾರೂ ಸಹಾ ವಿವರಿಸುವುದಿಲ್ಲ.
ನಿಜವಾದ ಅರ್ಥದಲ್ಲಿ ಮೀಸಲಾತಿ ಎಂದರೇನು ಎಂದು ಅರ್ಥೈಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮೀಸಲಾತಿ ಎಂಬುದು ಬಡತನ ನಿರ್ಮೂಲನ ಕಾರ್ಯಕ್ರಮವೂ ಅಲ್ಲ ಅಥವಾ ಜಾತಿ ವಿನಾಶದ ಕಾರ್ಯಕ್ರಮವೂ ಅಲ್ಲ. ಪ್ರಾತಿನಿಧ್ಯ ವಂಚಿತರಿಗೆ ಪ್ರಾತಿನಿಧ್ಯವನ್ನು ನೀಡುವುದೇ ಮೀಸಲಾತಿ. ಇದೊಂದು ಭಿಕ್ಷೆಯಲ್ಲ ಬದಲಿಗೆ ಮಾನವ ಹಕ್ಕು ಮತ್ತು ಸಂವಿಧಾನ ಬದ್ಧ ಹಕ್ಕು.
ಹೌದು ಭಾರತ ದೇಶ ಹಲವು ಜಾತಿ, ಧರ್ಮ, ಮತಗಳಿಂದ ಕೂಡಿದ ರಾಷ್ಟ್ರ. ಇಲ್ಲಿ ಬೆರಳೆಣಿಕೆಯ ಕೆಲ ಮೇಲ್ಸ್ಥರ ಎಂದು ಕರೆಸಿಕೊಳ್ಳುವ ಸಮುದಾಯಗಳು ತಮ್ಮ ಲಾಭಕ್ಕಾಗಿ ನೆಲಮೂಲ ಸಮುದಾಯಗಳಿಗೆ ಕೆಳಸ್ಥರದ ಸಮುದಾಯಗಳು ಎಂಬ ಹಣೆಪಟ್ಟಿ ಕಟ್ಟಿ ಶತಮಾನಗಳಿಂದ ಶೋಷಿಸುತ್ತ ಬರುತ್ತಿವೆ. ಇಂತಹ ಶೋಷಿತ ಸಮುದಾಯಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಾತಿನಿಧ್ಯ ನೀಡಿ ಸಮಾನತೆಯ ಬುನಾದಿ ಕಟ್ಟಬೇಕು ಎಂಬುದೂ ಕೂಡ ಸ್ವತಂತ್ರ ಹೋರಾಟದ ಉದ್ದೇಶಗಳಲ್ಲಿ ಒಂದಾಗಿತ್ತು. ಆದ್ದರಿಂದಲೇ ನಮ್ಮೆಲ್ಲರ ಜೀವನಕ್ರಮ ಎಂದೇ ಕರೆಸಿಕೊಳ್ಳುವ ಸಂವಿಧಾನದಲ್ಲಿ ಮೀಸಲಾತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವುದು. 21ನೇ ಶತಮಾನದಲ್ಲಿಯೂ ಸಹ ಕೆಲವು ಸಮುದಾಯಗಳಲ್ಲಿ ಕುಡಿಯುವ ನೀರು, ವಸತಿ, ಶೌಚಾಲಯ, ರಸ್ತೆ, ಬೀದಿ ದೀಪ ಮತ್ತು ಕಾಲೇಜು ಮೆಟ್ಟಿಲು ಏರಿರದ ಮಕ್ಕಳೂ ಸಹಾ ಇದ್ದಾರೆ. ಇಂತಹವರಿಗಾಗಿಯೇ ಮೀಸಲಾತಿಯ ಅಗತ್ಯತೆ ಇರುವುದು.
ಹಾಗೆಯೇ ಯಾವುದೇ ವಿಷಯವಾಗಲಿ ಅದರಲ್ಲಿ ಒಳ್ಳೆಯ ಹಾಗೂ ಕೆಟ್ಟ ಅಂಶಗಳು ಎರಡೂ ಇರತ್ತವೆ. ಅದೇ ರೀತಿ ಮೀಸಲಾತಿಯನ್ನೂ ಸಹಾ ದುರುಪಯೋಗ ಪಡಿಸಿಕೊಂಡವರೂ ಇದ್ದಾರೆ. ಆದರೆ ಇವು ಬೆರಳೆಣಿಕೆಯಷ್ಟು ಮಾತ್ರ ಮತ್ತು ಶಿಕ್ಷೆಯೂ ಸಹಾ ಆಗಿವೆ. ಆದರೆ ಈ ಮೀಸಲಾತಿಯ ಉಪಯೋಗದಿಂದ ಬಡತನದಲ್ಲಿ ಹುಟ್ಟಿದ್ದರೂ ಸಹಾ ಓದಿ ಉದ್ಯೋಗಸ್ಥರಾಗಿ ತಮ್ಮ ಬದುಕು ಬದಲಿಸಿಕೊಂಡವರು ನಮ್ಮ ಮಧ್ಯಯೇ ಸಾಕಷ್ಟು ಮಂದಿ ಸಿಗುತ್ತಾರೆ. ಮೀಸಲಾತಿಯ ಕಾರಣದಿಂದ ಸಿಗುವ ವಿದ್ಯಾರ್ಥಿವೇತನ, ಉಚಿತ ವಸತಿ ನಿಲಯಗಳು, ಪುಸ್ತಕಗಳು, ಲ್ಯಾಪಟಾಪ್‌ ಈ ಎಲ್ಲವೂಗಳು ಎಷ್ಟೋ ವಿದ್ಯಾಥಿಗಳನ್ನು ಮಾದರಿ ವ್ಯಕ್ತಿಗಳನ್ನಾಗಿ ಮಾಡಿ ನಮ್ಮ ಮುಂದೆ ನಿಲ್ಲಿಸಿವೆ. ಇವೆಲ್ಲಾ ಮೀಸಲಾತಿಯ ಸಕಾರಾತ್ಮಕತೆಯಲ್ಲವೇ?
ಮೀಸಲಾತಿ ಎಂಬ ಪದ ಬಂದರೆ ಸಾಕು ಅಲ್ಲಿ ಅಂಬೇಡ್ಕರ್‌ ರವರ ಕುರಿತು ಚರ್ಚೆ ಆರಂಭವಾಗುತ್ತದೆ. ಅವರಿಂದಲೇ ದಲಿತ ಸಮುದಾಯಗಳಿಗೆ ಮಾತ್ರ ಮೀಸಲಾತಿ ತಂದಿದ್ದಾರೆ ಎನ್ನುವ ದೊಡ್ಡ ಆರೋಪ ಮಾಡುತ್ತಾರೆ. ಆದರೆ ನಿಜವಾಗಿಯೂ ಸಂವಿಧಾನದಲ್ಲಿ ಎಲ್ಲಾ ಸಮುದಾಯಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಮೀಸಲಾತಿ ಇದ್ದೇ ಇದೆ. ಅಂದು ಸಂವಿಧಾನ ರಚನಾ ಸಮಿತಿಯ ಎಲ್ಲಾ ಸದಸ್ಯರು ಈ ಮೀಸಲಾತಿಯನ್ನು ಅಂಗೀಕರಿಸಿದ್ದಾರೆ ಮತ್ತು ಆ ಸಮಿತಿಯಲ್ಲಿ ಎಲ್ಲಾ ಜಾತಿಯ, ಧರ್ಮದ, ವರ್ಗದ ಜನರೂ ಸಹಾ ಸದಸ್ಯರಾಗಿದ್ದರು ಎಂದು ನಮ್ಮೆಲ್ಲರಿಗೂ ಸ್ಪಷ್ಟವಾಗಿ ತಿಳಿದಿದ್ದರೂ ಸಹಾ ನಾವು ಅದನ್ನು ಮರೆತುಬಿಡುತ್ತೇವೆ. ಆ ಎಲ್ಲಾ ಮೇಧಾವಿಗಳು ಸೇರಿ ಈ ಮೀಸಲಾತಿಯನ್ನು ಒಪ್ಪಿದ್ದಾರೆ ಎಂದಮೇಲೆ ನಿಜಕ್ಕೂ ಇದು ದೇಶದ ಹಾಗೂ ಜನರ ಒಳಿತಿಗಾಗಿಯೇ ಆಗಿದೆ ಎಂಬುದು ನಮ್ಮ ಅರಿವಿಗೆ ಬರಬೇಕಿದೆ. ಹಾಗೆಯೇ ಈ ಮೀಸಲಾತಿಯಲ್ಲಿ ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳಾಗಿವೆ. ಇಲ್ಲಿಯವರೆಗೆ ಒಟ್ಟು 106 ತಿದ್ದುಪಡಿಗಳಾಗಿವೆ. ಅವುಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಆಗಿರುವ ಕೆಲವು ತಿದ್ದುಪಡಿಗಳೆಂದರೆ,
1. 51ನೇ ತಿದ್ದುಪಡಿ – ಅನುಚ್ಛೇದ 330 ಮತ್ತು 332ರ ತಿದ್ದುಪಡಿ ಅನುಸಾರ ನಾಗಾಲ್ಯಾಂಡ್‌, ಮೇಘಾಲಯ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡಗಳಿಗೆ ಲೋಕಸಭೆಯಲ್ಲಿ ಮೀಸಲಾತಿ ಒದಗಿಸುವುದು. ಹಾಗೆಯೆ ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ವಿಧಾನಸಭೆಗಳಲ್ಲಿ ಮೀಸಲಾತಿ ಒದಗಿಸುವುದು. ಇದು 16 ಜೂನ್‌ 1986ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಜಾರಿಗೆ ಬಂತು.
2. 86ನೇ ತಿದ್ದುಪಡಿ – ಅನುಚ್ಛೇದ 45 ಮತ್ತು 51A ತಿದ್ದುಪಡಿ ಮತ್ತು ಅನುಚ್ಛೇದ 21A ಸೇರಿಸಿರುವುದರ ಅನುಸಾರ 14 ವರ್ಷದವರೆಗು ಶಿಕ್ಷಣದ ಹಕ್ಕನ್ನು ಒದಗಿಸಲಾಗುತ್ತದೆ. ಇದು 12 ಡಿಸೆಂಬರ್‌ 2002ರಲ್ಲಿ ಅಟಲ್‌ ಬಿಹಾರಿ ವಾಜಪೆಯಿ ರವರು ಪ್ರಧಾನಿಯಾಗಿದ್ದಾಗ ಜಾರಿಗೆ ಬಂತು.
3. 93ನೇ ತಿದ್ದುಪಡಿ – ಅನುಚ್ಛೇದ 15ರ ತಿದ್ದುಪಡಿಯ ಅನುಸಾರ ಸರ್ಕಾರಿ ಹಾಗು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ ಒದಗಿಸುವುದನ್ನು ಸಕ್ರಿಯಗೊಳಿಸುತ್ತದೆ. ಇದು 20 ಜನವರಿ 2006ರಂದು ಮನಮೋಹನ್‌ ಸಿಂಗ್‌ರವರು ಪ್ರಧಾನಿಯಾಗಿದ್ದಾಗ ಜಾರಿಗೆ ಬಂತು.
4. 103ನೇ ತಿದ್ದುಪಡಿ – ಅನುಚ್ಛೇದ 15ರ ತಿದ್ದುಪಡಿಗೆ ಷರತ್ತು (6) ಸೇರಿಸಿ ಹಾಗೂ ಅನುಚ್ಛೇದ 16ರ ತಿದ್ದುಪಡಿಗೆ ಷರತ್ತು (6) ಸೇರಿಸಲಾಗಿದೆ. ಇದರ ಅನುಸಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರೀಕರಿಗೆ (ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಹೊರತುಪಡಿಸಿ) 10% ಮೀಸಲಾತಿಯನ್ನು ಒದಗಿಸುವುದು. ಇದು 12 ಜನವರಿ 2019ರಂದು ನರೇದ್ರ ಮೋದಿರವರು ಪ್ರಧಾನಯಾಗಿದ್ದಾಗ ಜಾರಿಗೆ ಬಂತು.
5. 106ನೇ ತಿದ್ದುಪಡಿ – ಅನುಚ್ಛೇದ 239AA ತಿದ್ದುಪಡಿ, ಅನುಚ್ಛೇದ 330A, 332A, 334A ಅಳವಡಿಕೆಯ ಅನುಸಾರ ಲೋಕಸಭೆ (330A), ರಾಜ್ಯಶಾಸನ ಸಭೆ (332A) ಮತ್ತು ದೆಹಲಿ ವಿಧಾನಸಭೆ (239AA) ನಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಜಾರಿಗೆ ಬಂದ 15 ವರ್ಷಗಳವರೆಗೆ ಕಾಯ್ದಿರಿಸುವುದು. ಇದು 28 ಸೆಪ್ಟೆಂಬರ್‌ 2023ರಂದು ನರೇದ್ರ ಮೋದಿರವರು ಪ್ರಧಾನಿಯಾಗಿದ್ದಾಗ ಜಾರಿಗೆ ಬಂತು.

ಈ ರೀತಿಯಾಗಿ ಸಂವಿಧಾನದಲ್ಲಿ ಮೀಸಲಾತಿಯ ವಿಷಯದಲ್ಲಿ ಹಲವು ತಿದ್ದುಪಡಿಗಳು ಆಗಿ ಎಲ್ಲಾ ವರ್ಗ, ಜಾತಿ, ಲಿಂಗದವರಿಗೂ ಮೀಸಲಾತಿ ಸಿಗುವಂತೆ ಮಾಡಲಾಗಿದೆ. ಮೀಸಲಾತಿ ಎಂದರೆ ಕೇವಲ ಉದ್ಯೋಗ, ಶಿಕ್ಷಣಕ್ಕೆ ಮಾತ್ರ ಸೀಮಿತವಲ್ಲ, ರಾಜಕೀಯ, ಸಮಾಜಿಕ, ಪ್ರಾದೇಶಿಕ, ಕ್ಷೇತ್ರಗಳಲ್ಲಿಯೂ ಮೀಸಲಾತಿ ಇರುವುದು ಸ್ಪಷ್ಟವಾಗಿದೆ. ಇದರಿಂದ ಹಲವು ಸಾಧಕರನ್ನು ಈ ದೇಶ ಕಂಡಿದೆ. ಅದಕ್ಕೆ ಉದಾಹರಣೆಗಳನ್ನು ನೋಡುವುದಾದರೆ,
1. ಸಂವಿಧಾನದಲ್ಲಿನ ಮೀಸಲಾತಿಯ ಕಾರಣಕ್ಕೆ ನಕ್ಸಲ್‌ ನಂಟು ಹೊಂದಿದ್ದಾರೆ ಎಂಬ ಆರೋಪ ಹೊತ್ತಿದ್ದ ಒಬ್ಬ ಆದಿವಾಸಿ ಯುವಕ ಇಂದು ನಿರಪರಾಧಿ ಎಂದು ಸಾಬೀತಾಗಿ ತನ್ನ ಕುಟುಂಬದಲ್ಲಿಯೇ ಮೊದಲ ಪದವಿಧರನಾಗಿ ಒಂದು ಪ್ರತಿಷ್ಠಿತ ಪತ್ರಕೆಯಲ್ಲಿ ಕೆಲಸ ಮಾಡುತ್ತಾ ಘನತೆಯ ಜೀವನ ನಡೆಸುತ್ತಿದ್ದಾರೆ.
2. ಸಂವಿಧಾನದಲ್ಲಿನ ಮೀಸಲಾತಿಯ ಕಾರಣಕ್ಕೆ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ಮಕ್ಕಳು ಜಾತಿ, ಧರ್ಮ, ವರ್ಗ, ಲಿಂಗ, ವರ್ಣಗಳ ಭೇದವಿಲ್ಲದೆ ಒಂದೇ ಸೂರಿನ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
3. ಸಂವಿಧಾನದಲ್ಲಿನ ಮೀಸಲಾತಿಯ ಕಾರಣಕ್ಕೆ ಒಬ್ಬ ಆದಿವಾಸಿ ಮಹಿಳೆ ರಾಷ್ಟ್ರದ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
4. ಸಂವಿಧಾನದಲ್ಲಿನ ಮೀಸಲಾತಿಯ ಕಾರಣಕ್ಕೆ ಯಾವುದೇ ವರ್ಗ, ಜಾತಿ, ಲಿಂಗ, ವರ್ಣ, ಧರ್ಮ, ಪ್ರದೇಶದವರಾಗಿರಲಿ ನ್ಯಾಯಾಲಯದ ಮುಂದೆ ಸಮಾನ ನ್ಯಾಯ ಪಡೆಯುವ ಅವಕಾಶ ಹೊಂದಿದ್ದಾರೆ.
5. ಸಂವಿಧಾನದಲ್ಲಿನ ಮೀಸಲಾತಿಯ ಕಾರಣಕ್ಕೆ ಲಿಂಗತ್ವ ಅಲ್ಪಸಂಖ್ಯತರೂ ಸಹಾ ಎಲ್ಲರಂತೆಯೇ ಉದ್ಯೋಗವಕಾಶಗಳನ್ನು ಪಡೆದು ಘನತೆಯ ಬದುಕು ಕಟ್ಟಿಕೊಳ್ಳುವ ಹಕ್ಕು ಲಭಿಸಿದೆ.

ಇದೆಲ್ಲವೂ ಮೀಸಲಾತಿಯಿಂದ ಆಗಿರುವ ಸದುಪಯೋಗಗಳೇ ಆಗಿವೆ. ಮೀಸಲಾತಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಪ್ರಾತಿನಿಧ್ಯವನ್ನು ನೀಡುವ ದೊಡ್ಡ ಶಕ್ತಿಯಾಗಿದೆ. ಮೀಸಲಾತಿಯನ್ನು ಒಂದು ಜಾತಿಗೆ ಸೀಮಿತವಾಗಿಸುವ ಮೊದಲು ಅದರ ಆಳ ಅಗಲವನ್ನು ಅರಿತು, ಅರ್ಥೈಸಿಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಮೀಸಲಾತಿ ಸ್ಥಾನವೇ ಹೊರತು ಅನುಕಂಪವಲ್ಲ ಎಂಬುದುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.

———————————————————-

Leave a Reply

Back To Top