“ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ವಸ್ತು ಸಂಗ್ರಹಾಲಯಗಳು ಸಹಕಾರಿ”ಕೆ. ಎನ್. ಚಿದಾನಂದ. ಹಾಸನ .

ಇತಿಹಾಸಕ್ಕೆ ಆಧಾರಗಳೇ ಮುಖ್ಯ. ಸಾಹಿತ್ಯಿಕ ಹಾಗೂ ಪುರಾತತ್ವ ಆಧಾರಗಳು ಯಾವುದೇ ಒಂದು ದೇಶದ ಇತಿಹಾಸವನ್ನು ನಿಖರಗೊಳಿಸು ತ್ತವೆ ಮತ್ತು ಬಲಪಡಿಸುತ್ತವೆ. ಆಧಾರಗಳ ಮೂಲಕ ಇತಿಹಾಸದ ಅಧ್ಯಯನ ಸತ್ಯತೆಗೆ ಹತ್ತಿರವಾಗಿದ್ದು, ನಂಬಲರ್ಹವಾಗಿರುತ್ತದೆ. ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಬಲಪಡಿಸುವಲ್ಲಿ ಲಿಖಿತ ಮತ್ತು ಅಲಿಖಿತ ಸಾಹಿತ್ಯಗಳು ಇಂಬು ನೀಡುತ್ತವೆ. ಅಂತೆಯೇ ಒಂದು ಪ್ರದೇಶದಲ್ಲಿ ಲಭ್ಯವಾಗುವ ಶಿಲಾ ಶಾಸನಗಳು, ಲೋಹ ಶಾಸನಗಳು, ನಾಣ್ಯಗಳು, ಕಲೆ ಮತ್ತು ವಾಸ್ತುಶಿಲ್ಪಗಳು, ಸಂಗೀತ ಮತ್ತು ಅದರ ಪರಿಕರಗಳು, ದೇವಾಲಯಗಳು, ಸಮಾಧಿಗಳು, ಬೃಹದಾಕಾರದ ಕಟ್ಟಡಗಳು, ಅಂತಹ ಕಟ್ಟಡಗಳಲ್ಲಿ ದೊರೆಯುವ ಚಿಕ್ಕ ಚಿಕ್ಕ ವಸ್ತುಗಳೂ ಸಹ ಇತಿಹಾಸಕ್ಕೆ ಮೂಲಾಧಾರಗಳಾಗಿ ಪ್ರಾಮುಖ್ಯತೆಯನ್ನು ನೀಡುತ್ತವೆ. ಈ ರೀತಿಯ ಆಧಾರಗಳಲ್ಲಿ ಪ್ರಮುಖವಾಗಿ ವಸ್ತುಸಂಗ್ರಹಾಲಯ ಗಳು ಪ್ರಾಮುಖ್ಯತೆ ಪಡೆದಿವೆ.

ವಸ್ತು ಸಂಗ್ರಹಾಲಯ ( ಮ್ಯೂಸಿಯಂ ) ಗಳನ್ನು ನೋಡಲು ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಯಾವುದಾದರು ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಮ್ಯೂಸಿಯಂ ಇದ್ದರೆ ಖಂಡಿತ ಭೇಟಿ ನೀಡುತ್ತೇವೆ. ಇದು ನಮ್ಮ ಗತಕಾಲದ, ವಿಭಿನ್ನ ವಸ್ತುಗಳು ಅಥವಾ ಕೆಲವು ಉಲ್ಲೇಖಗಳನ್ನು ನಮಗೆ ನೋಡಲು ಹಾಗೂ ತಿಳಿಯಲು ಅನುವು ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ (INTERNATIONAL MUSIUM DAY ) ವನ್ನು ಪ್ರತಿ ವರ್ಷ ಮೇ 18ರಂದು ಆಚರಿಸಲಾಗುತ್ತದೆ. ಪ್ರಮುಖ ಸಾಂಸ್ಕೃತಿಕ ವಿನಿಮಯ, ಸಂಸ್ಕೃತಿಗಳ ಪುಷ್ಟೀಕರಣ ಮತ್ತು ಜನರಲ್ಲಿ ಪರಸ್ಪರ ತಿಳುವಳಿಕೆ, ಸಹಕಾರ ಮತ್ತು ಶಾಂತಿಯುತ ಅಭಿವೃದ್ಧಿಯ ಸಾಧನವಾಗಿ, ವಸ್ತುಸಂಗ್ರಹಾಲಯಗಳ ಮೌಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ದಿನವನ್ನು ಸ್ಮರಿಸುತ್ತ ಆಚರಿಸಲಾಗುತ್ತದೆ.

ವಸ್ತುಸಂಗ್ರಹಾಲಯವು ಸಾಂಸ್ಕೃತಿಕ, ವೈಜ್ಞಾನಿಕ, ಚಾರಿತ್ರಿಕ ಅಥವಾ ಅಲಂಕಾರಿಕ ಮೌಲ್ಯವುಳ್ಳ ವಸ್ತುಗಳನ್ನು ಸಂಗ್ರಹಿಸುವ, ರಕ್ಷಿಸುವ, ಅಧ್ಯಯನ ಮಾಡುವ, ಪ್ರದರ್ಶಿಸುವ ಮತ್ತು ಶೈಕ್ಷಣಿಕ ಉಪಯೋಗಕ್ಕೆ ಒದಗಿಸುವ ಒಂದು ಸಂಸ್ಥೆ (ಮ್ಯೂಸಿಯಮ್). ಮ್ಯೂಸಿಯಂ ಎಂದರೆ ಪ್ರತಿಯೊಬ್ಬರೂ ಓದಲು ಬಯಸುವ ದಾಖಲೆಗಳು ಮತ್ತು ಐತಿಹಾಸಿಕ ಪುಸ್ತಕಗಳನ್ನು ಸಂಗ್ರಹಿಸುವ ಸ್ಥಳವಾಗಿದೆ. ವಸ್ತುಸಂಗ್ರಹಾಲಯಗಳು ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಐತಿಹಾಸಿಕ ವಿಷಯಗಳನ್ನು ಸಂಗ್ರಹಿಸುತ್ತವೆ.
ಇಂಟರ್ ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ (ICOM) 1977 ರಿಂದ ಪ್ರತಿ ವರ್ಷ ಈ ದಿನವನ್ನು ಅಂತರ ರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನಾಗಿ ಆಚರಿಸಲು ಪ್ರೇರೇಪಿಸಿ ಘೋಷಿಸಿತು. ಸಮಾಜದ ಅಭಿವೃದ್ಧಿಗಾಗಿ ವಸ್ತುಸಂಗ್ರಹಾಲಯಗಳ ಪ್ರಾಮುಖ್ಯತೆಯನ್ನು ಸೃಷ್ಟಿಸಲು ಈ ದಿನವನ್ನು ಆಚರಿಸಲಾಯಿತು. ವಸ್ತುಸಂಗ್ರಹಾಲಯಗಳ ಸೃಜನಶೀಲ ಆಕಾಂಕ್ಷೆಗಳು ಮತ್ತು ಪ್ರಯತ್ನಗಳನ್ನು ಮತ್ತಷ್ಟು ಏಕೀಕರಿಸಲು ಮತ್ತು ಅವುಗಳ ಚಟುವಟಿಕೆಯತ್ತ ವಿಶ್ವ ಸಾರ್ವಜನಿಕರ ಗಮನವನ್ನು ಸೆಳೆಯಲು ಈ ದಿನವನ್ನು ಗೊತ್ತುಪಡಿಸಲಾಗಿದೆ. ನಲವತ್ತಾರು ವರ್ಷಗಳ ಹಿಂದೆ, ಮೊದಲ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲಾಯಿತು. ರಷ್ಯಾದ ಮಾಸ್ಕೋದಲ್ಲಿ ನಡೆದ ICOM ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಆಚರಣೆಗೆ ಹೆಚ್ಚು ಹೆಚ್ಚು ವಸ್ತುಸಂಗ್ರಹಾಲಯಗಳು ಭಾಗವಹಿಸುತ್ತವೆ.

ಮೇ 18 ರಂದು ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದ ಜನರಿಗೆ ವಸ್ತು ಸಂಗ್ರಹಾಲಯಗಳ ಬಗ್ಗೆ ಆಸಕ್ತಿ ಮೂಡಿಸುವುದಾಗಿರುತ್ತದೆ. ಸಮುದಾಯ ನಿರ್ಮಾಣ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ವಸ್ತುಸಂಗ್ರಹಾಲಯಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದಾಗಿರುತ್ತದೆ. ಗೊತ್ತಿರದ ವಸ್ತು ವಿಚಾರಗಳನ್ನು ಜನ ಸಮೂಹಕ್ಕೆ ವಿನಿಮಯ ಮಾಡುವುದು ಮತ್ತು ಮಾಡಿಸುವುದಾಗಿರುತ್ತದೆ. ಐತಿಹಾಸಿಕ ಮತ್ತು ವೈಜ್ಞಾನಿಕ ಸಾಕ್ಷಿಗಳು ವಸ್ತು ಸಂಗ್ರಹಾಲಯದಲ್ಲಿ ಸಿಗುತ್ತವೆ. ಅವುಗಳ ಕುರಿತು ಜ್ಞಾನವನ್ನು ತಿಳಿಸುವುದು. ವಸ್ತುಸಂಗ್ರಹಾಲಯಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಉದ್ಯೋಗಕ್ಕೆ ಅವಕಾಶವಾಗುತ್ತದೆ. ಗತ ಕಾಲದಲ್ಲಿ ಜನರು ಬಳಸಿದ ವಸ್ತುಗಳನ್ನು ಇಂದಿನ ಜನತೆಗೆ ತಿಳಿಸುವ ಮೂಲಕ ವಸ್ತು ಸಂಗ್ರಹಾಲಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ವಸ್ತು ಸಂಗ್ರಹಾಲಯಗಳು ನಮ್ಮ ಸಮಾಜ ಮತ್ತು ಪರಂಪರೆಯ ಅತ್ಯಗತ್ಯ ಭಾಗವಾಗಿವೆ. ನಾವು ಅವುಗಳನ್ನು ರಕ್ಷಿಸಬೇಕು. ಆದ್ದರಿಂದ ಪ್ರತಿವರ್ಷ ವಿಶ್ವದಾದ್ಯಂತದ ವಿವಿಧ ವಸ್ತುಸಂಗ್ರಹಾಲಯಗಳು ಅಂತರ್ರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನಾಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

ಪ್ರತಿ ವರ್ಷವೂ, ವಸ್ತುಸಂಗ್ರಹಾಲಯಗಳ ಅಂತರರಾಷ್ಟ್ರೀಯ ಮಂಡಳಿಯು ಹೊಸ ಥೀಮ್‌ನೊಂದಿಗೆ ಈ ದಿನವನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತದೆ. ಈ ವರ್ಷದ ಅಂದರೆ 2024ರ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಥೀಮ್ ಏನೆಂದರೆ ” ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತು ಸಂಗ್ರಹಾಲಯ” ಎಂಬುವುದಾಗಿದೆ. ಕಳೆದ ವರ್ಷ ಅಂದರೆ 2023 ರ “ವಸ್ತುಸಂಗ್ರಹಾಲಯ ಗಳು, ಸುಸ್ಥಿರತೆ ಮತ್ತು ಯೋಗಕ್ಷೇಮ ” ಎಂಬುವುದಾಗಿತ್ತು. ವಸ್ತುಸಂಗ್ರಹಾಲಯಗಳು ಸಮಾಜ ಮತ್ತು ಜಗತ್ತಿನಲ್ಲಿ ಮಾನವನ ಚಿಂತನಾ ಲಹರಿಯನ್ನು ಧನಾತ್ಮಕ ಬದಲಾವಣೆಗಳನ್ನಾಗಿ ಪರಿವರ್ತಿಸುವ ಮತ್ತು ಪೋಷಿಸುವ ಶಕ್ತಿಯನ್ನು ಹೊಂದಿವೆ. ವಸ್ತುಸಂಗ್ರಹಾಲಯಗಳು ಜನರನ್ನು ಭಾಗವಹಿಸಲು ಮತ್ತು ಪರಂಪರೆ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿಯಲು, ಕಲಿಯಲು ಪ್ರೋತ್ಸಾಹಿಸುತ್ತವೆ. ಈ ದಿನಾಚರಣೆಯನ್ನು ಸಾಮಾನ್ಯವಾಗಿ ಒಂದು ದಿನ ಅಥವಾ ಒಂದು ವಾರದವರೆಗೆ ಆಚರಿಸಲಾಗುತ್ತದೆ. ಸುಂದರವಾದ ಬಣ್ಣಗಳು ಮತ್ತು ಲೈಟ್ ಗಳನ್ನು ಬಳಸಿ ಆಕರ್ಷಕವಾದ ಅಲಂಕಾರಗಳಿಂದ ವಸ್ತುಸಂಗ್ರಹಾಲಯಗಳಿಗೆ ಜೀವ ತುಂಬಲಾಗುತ್ತದೆ. ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಆಚರಣೆಗಳಲ್ಲಿ ಜನರು ಗ್ಯಾಲರಿಗಳಿಗೆ ಮತ್ತು ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವುದು, ಈವೆಂಟ್‌ಗಳಲ್ಲಿ ಭಾಗವಹಿಸುವುದಾಗಿರುತ್ತದೆ. ವಸ್ತುಸಂಗ್ರಹಾಲಯಗಳಲ್ಲಿನ ಪ್ರದರ್ಶನಗಳು ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗುವುದಾ ಗಿದೆ. ಕಲೆಯನ್ನು ಪರಿಚಯಿಸುವ ಉತ್ತಮ ಸ್ಥಳವೆಂದರೆ ಅದು ವಸ್ತುಸಂಗ್ರಹಾಲಯ. ಅಲ್ಲಿ ಅಡ್ಡಾಡುವ ಮೂಲಕ ನಾವು ಹೆಚ್ಚು ಕಲೆಯನ್ನು ನೋಡುತ್ತೇವೆ, ನಮ್ಮ ಸ್ವಂತ ಅಭಿರುಚಿಯನ್ನು ವ್ಯಾಖ್ಯಾನಿಸಲು ನಾವು ಹೆಚ್ಚು ತಿಳಿಯುತ್ತೇವೆ.

ವಸ್ತುಸಂಗ್ರಹಾಲಯಗಳು ಸ್ಥಳೀಯವಾಗಿಯೂ ಇರುತ್ತವೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ವಸ್ತುಸಂಗ್ರಹಾಲಯಗಳು, ರಾಜ್ಯ ಮಟ್ಟದ ವಸ್ತುಸಂಗ್ರಹಾಲಯಗಳು, ಕೇಂದ್ರೀಯ ವಸ್ತುಸಂಗ್ರಹಾಲಯಗಳು, (ರಾಷ್ಟ್ರೀಯ ವಸ್ತುಸಂಗ್ರಹಾಲಯಗಳು ) ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯಗಳು ಇರುತ್ತವೆ. ವಸ್ತುಸಂಗ್ರಹಾಲಯಗಳು ಯಾವುದೇ ವಸ್ತುವನ್ನೂ ಕಳೆದುಕೊಳ್ಳವುದಿಲ್ಲ. ಬದಲಿಗೆ ಪ್ರತೀ ವಸ್ತುವನ್ನು ಸಂಗ್ರಹಿಸಿ, ಕ್ರೋಢೀಕರಿಸಿ ಮಾಹಿತಿಯನ್ನು ಕಲೆಹಾಕಿ ಭವಿಷ್ಯದ ಪೀಳಿಗೆಗೆ ” ಹಿಂದೆ ಹೀಗಿತ್ತು, ಮುಂದೆ ಹೇಗಿರಬೇಕು” ಎಂಬ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿವೆ. ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವ ಮೂಲಕ ನಾವು ಹೆಚ್ಚಿನ ವಿಚಾರಗಳನ್ನು ತಿಳಿಯೋಣ. ಆ ಮೂಲಕ ನಮ್ಮ ಸಂಸ್ಕೃತಿ , ಪರಂಪರೆಯನ್ನು ಉಳಿಸೋಣ.

——————————-

Leave a Reply

Back To Top