ಲೇಖನ ಸಂಗಾತಿ
ನಂರುಶಿ ಕಡೂರು
ಸೂಳೆ ಸಂಕವ್ವೆ
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಕಿವಿ ಮೂಗು ಹಿಡಿದು ಬತ್ತಲೆ ನಿಲಿಸಿ
ಕೊಲುವರಯ್ಯ ನಿರ್ಲಜ್ಜೇಶ್ವರ.
ಜನರ ಶ್ರೇಯೋಭಿವೃದ್ಧಿಗೆ ಕಾಯಕದಿಂದ ಬಂದಂತಹ ಅಲ್ಪ ಸ್ವಲ್ಪ ಹಣವನ್ನೇ ಉಪಯೋಗಿಸಿ ತಮ್ಮ ಹೆಸರುಗಳನ್ನು ಇತಿಹಾಸದ ಪುಟಗಳಲ್ಲಿ ರತ್ನ ಖಚಿತ ಅಕ್ಷರಗಳಲ್ಲಿ ಮುದ್ರಿಸುವಂತೆ ಬದುಕಿದ್ದವರು. ಕೆಲವೇ ಕೆಲವರು ಮಾತ್ರ. ಇವರು ಮಾಡಿದ ಕೆಲಸಗಳನ್ನು ನೋಡಿ ನಾಲ್ಕು ಜನ ಪ್ರೇರೇಪಿತರಾಗಿ ಕೆಲವರಾದರೂ ಇಂತಹ ಘನಕಾರ್ಯಗಳನ್ನ ಮಾಡಿದಾಗ ಸಮಾಜಕ್ಕೆ ಅನುಕೂಲವಾಗುವುದು ಎಂಬ ಮಹದಾಸೆ ಇವರದು.
ಮಾಡುವ ವೃತ್ತಿ ಯಾವುದಾದರೇನು? ನ್ಯಾಯಯುತವಾಗಿ ದುಡಿದು ಗಳಿಸಿದ ಸಿರಿಯನ್ನು ಅವಶ್ಯಕತೆ ಇರುವವರಿಗೆ ಉಪಯೋಗಿಸಿದರೆ ಅಷ್ಟೇ ಸಾಕು. ತಮ್ಮ ವೇಶ್ಯ ವೃತ್ತಿಯಿಂದಲೇ ಜನರಿಗೆ ಬೆಳಕಾದವರು ಹಲವಾರು ಇದ್ದಾರೆ. ಅದರಲ್ಲಿ ಏಷ್ಯಾದಲ್ಲೆ ಎರಡನೇ ಅತಿದೊಡ್ಡ ಕೆರೆಯಾದ (ಶಾಂತಿಸಾಗರ) ಸೂಳೆಕೆರೆ ಕಟ್ಟಿಸಿ, ಸಾವಿರಾರು ಊರುಗಳಿಗೆ ಜೀವಜಲ ಕೊಟ್ಟು ಗಂಗಾ ಮಾತೆಯಾದರು. ಚಿತ್ರದುರ್ಗದ ಕಡು ಬಡವರಿಗೆ ಸಹಾಯ ಮಾಡಿ ತಿಪ್ಪಜ್ಜಿಯಾಗಿ ಬೆಳೆದು ಈಗ ದುರ್ಗದ ಒಂದು ಮುಖ್ಯ ಸ್ಥಳಕ್ಕೆ ತಿಪ್ಪಾಜಿ ಸರ್ಕಲ್ ಎಂಬ ನಾಮಕರಣ ಮಾಡುವಂತ ಕೆಲಸ ಈಗಿನ ಜನ ಕೂಡ ಮಾಡುತ್ತಿದ್ದಾರೆಂದರೇ ಆಗಿನ ಅವರ ತ್ಯಾಗ ಎಂತಹದ್ದು ಎಂಬುದನ್ನು ನಾವು ಅರಿತುಕೊಳ್ಳಲೇ ಬೇಕು. “ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ” ಎಂಬಂತೆ ಬಾಳಿದವರಲ್ಲಿ ಶರಣೆ ತಾಯಿ ಸೂಳೆ ಸಂಕವ್ವೆ ಕೂಡ ಒಬ್ಬರು.
ಮಾಡಿರುವುದು ಒಂದಾಣೆಯ ಕೆಲಸ, ಬೇಡುವುದು ನಾಲ್ಕಾಣೆಯಾದರೇ, ಶಿವ ಮೆಚ್ಚುವನೇ? ನಾವು ಮಾಡಿರುವ ಕರ್ಮಗಳಿಗೆ ತಕ್ಕಂತೆ ಮುಕ್ತಿಯ ಬೇಡಬೇಕು. ಯೋಗ್ಯತೆಗೆ ಮೀರಿದ ಆಸೆ ಕೂಡ ಒಳ್ಳೆಯದಲ್ಲ ಎಂಬುದರ ತಿಳುವಳಿಕೆ ನಮಗಿರಬೇಕು. ಆಗ ಮಾತ್ರ ನಮ್ಮ ಕಾರ್ಯಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಕೆಲವು ಸಮಯ ಹೆಚ್ಚು ಫಲ ಬಂದಾಗ ಅದನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಿದಾಗ ಬಂದ ಫಲ ದುಪ್ಪಟ್ಟಾಗುತ್ತದೆ. ಸ್ವ-ಕಾರ್ಯಗಳಿಗೆ ಬಳಸಿಕೊಂಡರೆ, ದಂಡ ತೆರಬೇಕಾದೀತು. ಎನ್ನುವ ತಾತ್ಪರ್ಯವನ್ನಿಟ್ಟುಕೊಂಡು ಶರಣೆ ತಾಯಿ ಸೂಳೆ ಸಂಕವ್ವೆ ಈ ವಚನದಲ್ಲಿ ದೃಡೀಕರಿಸಿದ್ದಾರೆ.
ಇಲ್ಲಿ ವಚನ ನೇರವಾಗಿ ಅರ್ಥೈಸಿದರೂ, ನಮ್ಮ ನಿಜ ಜೀವನದಲ್ಲಿ ಎಲ್ಲಾ ವಿಷಯಗಳಿಗೂ ಬಳಕೆಯಾಗುವಂತಿದೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯವರು “ಮಾಡಿದವರಿಗೆ ನೀಡು ಭಿಕ್ಷೆ” ಎಂಬ ಧ್ಯೇಯವಾಕ್ಯವನ್ನು ತಮ್ಮ ಕಾರ್ಯಕ್ಕೆ ಮತ್ತು ಶ್ರಮಕ್ಕೆ ತಕ್ಕ ಪ್ರತಿಫಲ ಮಾತ್ರ ಪಡೆಯಬೇಕು ಎಂದು ನುಡಿದಿದ್ದಾರೆ.
“ಹಸುವಿನ ಮೊಲೆಯಲ್ಲಿ ಹಾಲು ಇರುವುದೆಂದು, ಕೆಚ್ಚಲನ್ನೇ ಕೊಯ್ದಂತೆ” ಆಗಬಾರದು. ಕೈಯಲ್ಲಿ ಅವನು ಕೊಟ್ಟ ಹಣವನ್ನು ಹಿಡಿದು, ಇನ್ನು ಕೇಳಬಾರದು. ಕೇಳಿದರೆ ದುರ್ಗಮ ಪರಿಸ್ಥಿತಿಯ ಎದುರಿಸಬೇಕಾಗುತ್ತದೆ. ಆಗಿನ ಕಾಲದಲ್ಲಿ ನೇಮಿಸಿದಷ್ಟು ಮಾತ್ರ ಬಂದವರಲ್ಲಿ ಹಣ ಕೇಳಬೇಕಿತ್ತು. ಅದಕ್ಕಿಂತ ಹೆಚ್ಚು ಕೇಳಿದ್ದಾರೆಂದು ತಿಳಿದರೆ ಅವರನ್ನು ಬತ್ತಕೆಯಾಗಿ ನಿಲಿಸಿ ಕೊಲ್ಲುವ ಶಿಕ್ಷೆ ಇರಬಹುದು. ಅತಿಆಸೆಯಿಂದ ನಮಗೆ ಅಪಾಯವೇ ಹೆಚ್ಚು. ಅಪಾಯವ ನಮ್ಮ ಮೇಲೆ ನಾವೇ ಎಳೆದುಕೊಳ್ಳಬಾರದು. ಮಾಡಿದ ಕೆಲವು ಚಿಕ್ಕ ತಪ್ಪುಗಳೇ ಒಮ್ಮೊಮ್ಮೆ ದೊಡ್ಡ ಭಯಾನಕ ಬೆಟ್ಟಗಳನ್ನು ಸೃಷ್ಟಿಸುವವು. ಕಾಯಕದಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿದರೆ ನಾವು ನಂಬಿದ ದೇವರು ಕೈ ಬಿಡನು. ಬೇರೆಯವರ ಸುಲಿಗೆ ಮಾಡುವುದು ತಪ್ಪು. ಇದನ್ನೇ ನಿರ್ಲಜ್ಜೇಶ್ವರನಲ್ಲಿ ಭಿನ್ನವಿಸುತ್ತ ಎಲ್ಲರಿಗೂ ಸಾರಲು ಹೊರಟಿದ್ದಾರೆ ಶರಣೆ ತಾಯಿ ಸೂಳೆ ಸಂಕವ್ವೆ.
ನಂರುಶಿ ಕಡೂರು.