ಲೇಖನ ಸಂಗಾತಿ
ಸಿದ್ಧಾರ್ಥ ಟಿ ಮಿತ್ರಾ
ಕಲ್ಯಾಣದಲ್ಲಿ ಕಾಯಕಯೋಗಿಗಳು ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ.?
ನಾವು ಬದಲಾವಣೆ ಬಯಸುತ್ತೇವೆ ಆದರೆ ಸ್ವತಃ ಬದಲಾಗುವದಿಲ್ಲ,ಉಪದೇಶ ಮಾಡುತ್ತೇವೆ ನಮ್ಮ ಮನ ಅವಲೋಕನ ಮಾಡುವುದಿಲ್ಲ,ಆಚಾರ ವಿಚಾರದಲ್ಲೂ ಲಾಭ ನಷ್ಟಗಳ ಲೆಕ್ಕ ಹಾಕುವ ಕಾಲಮಾನವಿದು .ಆದರೆ, ಇತಿಹಾಸದುದ್ದಕ್ಕೂ ಇಂತಹ ಮನಸ್ಸುಗಳಿಗೆ ಎಂದು ಕೂಡ ಜಾಗವಿಲ್ಲ. ಇದು ಕೇವಲ ಈಗಿನ ಕಥೆ ಅಲ್ಲ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ ಮಾನವ ಜೀವನದ ಮೇಲೆ ಪ್ರಭಾವ ಬೀರುವ ಭಾವನೆಗಳ ಸಂತೆ. ಈ ಸಂತೆಯಲ್ಲಿ ಮಾನವ ಕುಲಕ್ಕೆ ಒಳಿತು ಮಾಡಲು ಸಾಕಷ್ಟು ಮಹನೀಯರು ತಮ್ಮನು ತಾವು ಅರ್ಪಿಸಿಕೊಂಡಿದ್ದಾರೆ ಅಂತಹ ಮಹಾನುಭಾವರಲ್ಲಿ 12ನೇಯ ಶತಮಾನದ ಕ್ರಾಂತಿಕಾರಿ ವೀರ ಪುರಷ ನಮ್ಮ ಕರುನಾಡಿನ ಪುಣ್ಯ ಭೂಮಿಯಲ್ಲಿ ಜನಿಸಿದ ಬಸವಣ್ಣನವರು ಕೂಡ ಒಬ್ಬರು. ಕಂದಾಚಾರ, ಕೆಟ್ಟ ಜಾತಿವ್ಯವಸ್ಥೆ ಮೂಢನಂಬಿಕೆ, ಅನಿಷ್ಟ ಪದ್ಧತಿಗಳಿಂದ ತುಂಬಿದ
ಅಂದಿನ ಸಮಾಜದಲ್ಲಿ ತಮ್ಮ ವಿಚಾರಧಾರೆಗಳ ಮುಖಾಂತರ ಸಾಮಾಜಿಕ-ಧಾರ್ಮಿಕ ಚಳುವಳಿ ಆರಂಭಿಸಿದ ವಚನಕಾರರಲ್ಲಿ ಬಸವಾದಿ ಶರಣರು ಪ್ರಮುಖರಾಗಿದ್ದಾರೆ. ಅರ್ಥರಹಿತ ಆಚಾರ,ವಿಚಾರ ಮೇಲುಕೀಳು ಎಂಬ ವಿಚಾರ,ಬಡವ ಶ್ರೀಮಂತರೆಂಬ ಭೇದ,ಲಿಂಗ ತಾರತಮ್ಯ ಹೀಗೆ ಹತ್ತು ಹಲವು ದುರಂತಗಳು ಸಮಾಜದ ನಿರ್ಮಾಣದ ಮೌಲ್ಯರಹಿತ ಭಾವನೆಗಳ ವಿರುದ್ಧ ವೈಚಾರಿಕ ನೆಲೆಗಟ್ಟಿನಲ್ಲಿ ಹೋರಾಟ ಆರಂಭಿಸಿದವರು ಕ್ರಾಂತಿಕಾರಿ ಬಸವಣ್ಣನವರು.
ಕಳಬೇಡ ಕೊಲಬೇಡ,ಹುಸಿಯ ನುಡಿಯಲು ಬೇಡ,ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ,ಇದಿರು ಹಳಿಯಲು ಬೇಡ,ಇದೆ ಅಂತರಂಗ ಶುದ್ಧಿ ಇದೆ ಬಹಿರಂಗ ಶುದ್ಧಿ,ಇದೆ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ!!
ಈ ಮೇಲಿನ ವಚನವನ್ನು ಬಾಲ್ಯದಿಂದ ಪಠಿಸುತ್ತ ಬೆಳೆದವರು ನಾವೆಲ್ಲರು. ಮಾನವ ಕುಲಕ್ಕೆ ಮಾನವಿಯತೆಯ ನೆಲೆಯಲಿ ನೀತಿ ಸಂಹಿತೆ ರಚಿಸಿದ ಅದ್ಭುತ ವಚನವಿದು. ಅಹಿಂಸೆಯ ದಾರಿಯಲ್ಲಿ,ಅಕ್ಷರ ಅರಿವಿನ ಮೂಲಕ ಮಾನವಕುಲಕ್ಕೆ 12ನೇ ಶತಮಾನದಲ್ಲಿ ಭಕ್ತಿ ಭಂಡಾರಿಯ ಎದೆಯಲ್ಲಿ ಮೂಡಿದ ಈ ವಚನ ನಮ್ಮ ಮನಸ್ಸಿಗೆ ಕಾನೂನಿನ ಚೌಕಟ್ಟು ವಿಧಿಸಿ ಬದುಕು ಹಸನುಗೊಳಿಸುವ ಅರಿವಿನ ಸಂವಿಧಾನವಾಗಿದೆ ಎಂದರೆ ತಪ್ಪಾಗದು. ಈ ಮೇಲಿನ ವಚನದ ಸಾಲುಗಳು ನಮ್ಮ ಜೀವನದ ಅನುಕರಣೆ ಆದರೆ ಸ್ವಸ್ಥ ಸಮಾಜದ ನಿರ್ಮಾಣದ ಕನಸು ನನಸಾಗದೆ ಇರದು.
ಕಲ್ಯಾಣದಲ್ಲಿ ಅಂದು ಬಸವಣ್ಣನವರು 12 ನೇ ಶತಮಾನದಲ್ಲಿಯೇ ಸಾಮಾಜಿಕ, ಸಮಾನತೆಯ ಕ್ರಾಂತಿಗೆ ಮುಂದಾಗಿ ಉದಾತ್ತ ತತ್ವಗಳನ್ನು ಭೋಧಿಸಿದ ಮಹಾನ್ ವ್ಯೆಕ್ತಿ, ಅನಾಚಾರ, ಕಂದಾಚಾರಗಳೆ ತುಂಬಿದ ಅನಿಷ್ಟ ಪದ್ದತಿಗಳ ಅಂಧಕಾರದ ಕಾಲಕ್ಕೆ ಅಂದು ಒಂದು ದೇಶದ ಪ್ರಧಾನಿಯಾಗಿದ್ದುಕೊಂಡು ಪ್ರಜಾಪ್ರಭುತ್ವ, ವ್ಯವಸ್ಥೆಯಲ್ಲಿನ ಕಾಯಕಕ್ಕೆ ಪ್ರಧಾನ ಆಧ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ಗುರು. ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರ ಸೀಮಿತಗೊಳಿಸದೇ ಭಕ್ತಿ ಮತ್ತು ರಾಜತಂತ್ರವನ್ನು ಜೊತೆ ಜೊತೆಗೇ ನಡೆಸಲು ಪ್ರೇರಕ ಶಕ್ತಿಯಾದ ಮಾರ್ಗದರ್ಶಕ, ಹೌದು.
ಉದಾತ್ತ ಚಿಂತನೆಯನ್ನು ಬಸವಣ್ಣನವರು ಶರೀರವೇ ದೇವಸ್ಥಾನ, ಶಿರವೇ ಎನ್ನ ಹೊನ್ನ ಕಲಶ ಎಂದು ಜನಸಾಮಾನ್ಯರಿಗೂ ತನ್ನ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದರು. ಹಾಗಾಗಿಯೇ ಅಂದಿನ ಭಕ್ತಿ ಭಂಡಾರಿ ಬಸವಣ್ಣವರ ಆಚಾರ-ವಿಚಾರ ಎಂದೆಂದಿಗೂ ಪ್ರಸ್ತುತವಾದ ತತ್ವಗಳಾಗಿವೆ.
ಅಂದಿನ 12 ನೇಯ ಶತಮಾನದ ಹೊತ್ತಿಗೆ ಭಾರತೀಯ ಸ್ತ್ರೀ ಲೋಕದಲ್ಲಿ ಪ್ರಮುಖವಾಗಿ ಕರ್ನಾಟಕದ ಸ್ತ್ರೀ ಲೋಕದ ಇತಿಹಾಸದಲ್ಲಿ ಕ್ರಾಂತಿಕಾರಿಯಾಗಿ, ವೈಜ್ಞಾನಿಕ ವೈಚಾರಿಕತೆಯ ನೆಲೆಗಟ್ಟಿನ ಮೇಲೆ ಮಹತ್ತರ ಬದಲಾವಣೆಯಾದ ಕಾಲಘಟ್ಟ ಎಂದರೆ ಅದು ಬಸವಯುಗ ಎಂದು ಹೇಳಬಹುದು ತದನಂತರ ನಾಡಿನೆಲ್ಲೆಡೆ ಸ್ತ್ರೀ ಗೆ ಸಮಾನ ಅವಕಾಶ ಸಿಗುವುದಕ್ಕೆ ಕಲ್ಯಾಣ ಕ್ರಾಂತಿಯ ಪ್ರಭಾವವೆ ಹೆಚ್ಚಾಗಿತ್ತು. ಸ್ತ್ರೀಯರಿಗೆ ಸಮಾನ ಸ್ಥಾನ ಮಾನ ನೀಡಿ ಪುರುಷನೆತ್ತರಕ್ಕೆ ಏರುವಂತಹ ವಾತಾವರಣ ಕಲ್ಪಿಸಿದ ಬಸವಣ್ಣನವರನ್ನು “ಸ್ತ್ರೀ ಉದ್ಧಾರಕ” ಎಂಬುವುದರಲ್ಲಿ ಎರಡು ಮಾತಿಲ್ಲ ಇಂದಿನ ಎಲ್ಲ ಸಮುದಾಯದ ಹೆಣ್ಣು ಮಕ್ಕಳು ಬಸವಣ್ಣನವರನ್ನು ದಿನಂಪ್ರತಿ ಸ್ಮರಿಸಬೇಕು .
ಬಸವಣ್ಣನವರು ಬಾಲ್ಯದಿಂದಲೇ ತನ್ನ ವಿಚಾರಗಳಿಂದಲೇ ತಾನು ಕ್ರಾಂತಿಕಾರಿ ಎಂದು ಸಾಬೀತು ಪಡಿಸಿದ್ದು ಅವರ ಉಪನಯನ ಸಂಸ್ಕಾರದ ಒಂದು ಘಟನೆಯಿಂದಲೇ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಬಸವಣ್ಣ. ಅಕ್ಕ ನಾಗಮ್ಮನಿಗೆ ಉಪನಯನದ ಸಂಸ್ಕಾರ ಇಲ್ಲವೆಂದಾಗ, ಬಸವ “ಅಕ್ಕನಿಗಿಲ್ಲದ ಜನಿವಾರ ಎನಗೂ ಬೇಡ” ಎಂದು ಅದನ್ನು ತಿರಸ್ಕರಿಸಿದ ತನ್ನ ಸಹೋದರಿಗಿಲ್ಲದ್ದು ನನಗೂ ಬೇಡ, ಎಂತಹ ಆದರ್ಶ ಸಹೋದರ. ಅದರಂತೆ ಬಸವಣ್ಣ ಮನೆಯನ್ನು ತೊರೆದು ಹೊರಟಾಗ ಅಕ್ಕ ನಾಗಮ್ಮ “ಬಸವನಿಲ್ಲದ ಮನೆಯಲ್ಲಿ ನಾನೂ ಇರಲಾರೆ” ಅನ್ನುವಲ್ಲಿ ಸಹೋದರಿಯ ಪ್ರೀತಿ ಅನಿರ್ವಚನೀಯ. ಮೊದಲು ಸ್ತ್ರೀಯರಿಗೆ ಕೇವಲ ವಿವಾಹ ಒಂದೇ ಮುಖ್ಯ ಸಂಸ್ಕಾರವಾಗಿತ್ತು. ಪತಿಯ ಸಹಾಯವಿಲ್ಲದೇ ಯಾವುದೇ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಸ್ತ್ರೀಯರಿಗೆ ಮಾಡುವ ಅಧಿಕಾರವಿರಲಿಲ್ಲ. ಆದರೆ ಬಸವಣ್ಣನವರು ಲಿಂಗದೀಕ್ಷೆ, ವಿಭೂತಿ ಧಾರಣ, ಮಂತ್ರ ಪಠಣ ಮೊದಲಾದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸ್ತ್ರೀಯರೂ ಪುರುಷನಷ್ಟೇ ಸಮಾನ ಅಧಿಕಾರವನ್ನು ಸ್ವೀಕರಿಸುವಂತಹ ವಾತಾವರಣ ನಿರ್ಮಾಣವಾಗಲು ಬುನಾದಿ ಹಾಕಿಕೊಟ್ಟರು.
ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿಯಾಗಿದ್ದ ಬಸವಣ್ಣನವರಲ್ಲಿ ರಾಜಕಳೆ ಹಾಗೂ ಗುರು ಬಸವೇಶ್ವರರಲ್ಲಿ ಸಾತ್ವಿಕ ಕಳೆ ಎರಡನ್ನೂ ಕಾಣಬಹುದು ಇಂದಿನ ಸಮಾಜದಲ್ಲಿ ಆರೋಗ್ಯಕರ ಬಳವಣಿಗಗೆ ದುಡಿದ ಕಾಯಕ ಯೋಗಿ, ಕ್ರಾಂತಿ ಯೋಗಿ ಬಸವಣ್ಣನವರ ಜಯಂತಿ ಹಾಗೂ ಅವರ ತತ್ವಗಳು ಸಾರ್ವಕಾಲಿಕ ಸತ್ಯ ಹಾಗೂ ವೈಚಾರಿಕ ವೈಜ್ಞಾನಿಕವಾಗಿವೆ ತಳಹಾದಿಯ ಮೇಲೆ ನಿಂತಿವೆ .
ನಮ್ಮ ಜೀವನ ಯಾರು ರೂಪಿಸುವುದಿಲ್ಲ ಹಾಗೆಯೇ ನಮ್ಮ ಜೀವನ ಯಾರು ಹಾಳು ಮಾಡುವುದಿಲ್ಲ.ಅದಕ್ಕೆಲ್ಲ ನಮ್ಮೊಳಗಿನ ಅಜ್ಞಾನವೇ ಕಾರಣವಾಗಿರುತ್ತದೆ. ನಮ್ಮ ಅಂತರಂಗದಲ್ಲಿ ಜ್ಞಾನ ಮೂಡದೆ ನಾವು ಕತ್ತಲೆ ಕಳೆಯಲಾರೆವು. ಸತ್ಯ ನುಡಿಯುವ ಧೈರ್ಯ ನಾಲಿಗೆಗೆ ಬಂದರೆ ಸುಳ್ಳು ಗೆಲ್ಲಲಾರದು. ಹಾಗೆಯೇ ನಮ್ಮ ಒಳಿತಿಗೆ ನಮ್ಮ ಸಹವಾಸ ಅಷ್ಟೇ ಮುಖ್ಯವಾಗಿರುತ್ತದೆ.
ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ
ದುರ್ಜನರ ಸಂಗ ಬಚ್ಚಲ
ಕೊಚ್ಚೆಯಂತಿಹದು ಎಂಬಂತೆ ಸಫಲತೆಯ ಜೀವನ ನಮ್ಮ ಸುತ್ತಲಿನವರ ಪ್ರಭಾವದಿ ಅವತಿರುತ್ತದೆ ಎಂದು ಹೇಳುವಂತೆ ಮೇಲಿನ ವಚನ ನವಿರಾಗಿ ನಮಗೆ ಸನ್ಮಾರ್ಗ ತೋರುತ್ತದೆ..ಹೀಗೆ ತಮ್ಮೊಳಗಿನ ಜ್ಞಾನದ ಮೂಲಕ ಜಗಕೆ ಬೇಳಕಾದವರು ಜಗಜ್ಯೋತಿ ಬಸವಣ್ಣ.
ಅನುಭವ ಮಂಟಪದಲ್ಲಿ ಲಿಂಗ ಭೇದ ವಿಲ್ಲದೆ ಸ್ತ್ರೀಯರಿಗೆ ತಮ್ಮ ಅನುಭವ,ವಿಚಾರಗಳು ಹಂಚಿಕೊಳ್ಳಲು ಅವಕಾಶ ಕೊಡುತ್ತಿದ್ದರು.. ಆದ್ದರಿಂದ ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ ಎಂದು ಕರೆಯಲಾಗುತ್ತದೆ. ತಮ್ಮ ವೈಚಾರಿಕ ನೆಲೆಗಟ್ಟಿನಲ್ಲಿ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದದ್ದು ಕಾಣಲು. ತಾಯಿಯಾಗಿ,ಮಡದಿಯಾಗಿ,ತಂಗಿಯಾಗಿ,ಗೆಳತಿಯಾಗಿ,ಹೀಗೆ ಹಲವು ರೂಪದಲ್ಲಿ ಪುರುಷನ ಜೀವನ ಸಾರ್ಥಕಗೊಳಿಸುವ ಹೆಣ್ಣು ಅವಳಿಗೆ ಗೌರವ,ಸಮಾನತೆ ಸಿಗಬೇಕು ಎಂಬುದನ್ನು ಸಾರಿದವರು ಕ್ರಾಂತಿಯೋಗಿ ಬಸವಣ್ಣ.
ಸಮಾಜದ ಮೇಲೆ ಯಾರೊಬ್ಬನ ಅಧಿಕಾರ ಇಲ್ಲ. ಸಮಾಜ ನಿಂತಿರುವದು ಒಬ್ಬರ ಮೇಲಲ್ಲ ಇನ್ನೊಬ್ಬರ ಅವಲಂಬನೆಯ ಆಧಾರದ, ಮತ್ತೊಬ್ಬ ಸಹಕಾರ ತತ್ವದ ಮೇಲೆ, ಆದುದರಿಂದ ಅದನ್ನು ಅಧಿಕಾರ ಎಂದು ಅಳೆಯಬಾರದು ಎಂದ ವಿಶ್ವ ಗುರು ಬಸವಣ್ಣನವರು.
ಶ್ರೀ ಸಿದ್ಧಾರ್ಥ ಟಿ ಮಿತ್ರಾ
ನಿಮಗೆ ಶರಣು ಶರಣಾರ್ಥಿ, ವೈಚಾರಿಕ ನೆಲೆಗಟ್ಟಿನ ಲೇಖನ