ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಅಪ್ಪ ಬಸವಣ್ಣ
ಅಪ್ಪ ಬಸವಣ್ಣ ನಮ್ಮ ತಂದೆ ಬಸವಣ್ಣ
ಗುರು ಬಸವಣ್ಣ ಜಗಜ್ಯೋತಿ ಬಸವಣ್ಣ//ಪ//
ಜಾತಿ ಜಂಜಡಗಳ ಕಳೆಯ ಕಿತ್ತೆಸೆದರು
ಆಚಾರ-ವಿಚಾರಗಳ ಬೀಜವ ಬಿತ್ತಿದರು
ಮನುಜಮತ ವಿಶ್ವಪಥ ಸಾರಿ ಶರಣರಾದರು
ನುಡಿದಂತೆ ನಡೆಯುವ ಪಾಠ ಕಲಿಸಿದರು
ದಯವೇ ಧರ್ಮದ ಮೂಲವೆಂದು ಸಾರಿದರು//
ಮೇಲು ಕೀಳು ಬಡವ ಬಲ್ಲಿದ ಬೇದ ಆಳಿದರು
ಕರುಣೆ ಮಮತೆ ನಿಜಪ್ರೀತಿಯ ಬೀಜವ ಬಿತ್ತಿದರು
ಎಲ್ಲ ಧರ್ಮಗಳ ಸಾರ ಒಂದೆನ್ನುತ ಶರಣರಾದರು
ಕಾಯಕ ಕೈಲಾಸವೆಂದು ಕಾಯಕದ ಮರ್ಮತಿಳಿಸಿದರು
ಶ್ರಮದ ಫಲವದು ಶಿವನ ಪ್ರಸಾದವೆಂದು ಸಾರಿದರು//
ಅಂಧ ಮೂಢ ರೂಢಿಗಳ ಕಳೆಯ ಕಿತ್ತೆಸೆದರು
ಭಕ್ತಿ ಮುಕ್ತಿ ಯುಕ್ತಿಗಳ ಬೀಜವಾ ಬಿತ್ತಿದರು
ಅನುಭಾವದಡಿಗೆ ಉಣಬಡಿಸುತ ಶರಣರಾದರು
ಅರಿವು ಜ್ಞಾನಗಳ ಬೆಳಕ ಎಲ್ಲೆಡೆ ಬೆಳಗಿದರು
ನಾನು ನನದೆಂಬ ಹಂಗ ಹರಿದು ಬಾಳಿ ತೋರಿದರು//
ಉಚ್ಚ-ನೀಚ ಹೆಣ್ಣುಗಂಡೆಂಬ ಬೇದ ಕಿತ್ತೆಸೆದರು
ಶಾಂತಿ ಸಹನೆ ಸಹಬಾಳ್ವೆಗಳ ಬೀಜವಾ ಬಿತ್ತಿದರು
ಅಂತರಂಗ-ಬಹಿರಂಗ ಒಂದಾಗಿರಿಸಿ ಶರಣರಾದರು
ಲಿಂಗಪೂಜೆ ಮಂತ್ರ ಪಠಿಸುತ ಪೂಜೆ ಗೈದರು
ಅಂಗಸಂಗ ಅಳಿದು ಲಿಂಗ ಸಾಮರಸ್ಯವ ಕಲಿಸಿದರು//
ಡಾ ಅನ್ನಪೂರ್ಣ ಹಿರೇಮಠ
ಭೇದ ಸರಿಯಾದ ಶಬ್ದ