ವಿಶೇಷ ಲೇಖನ
ಡಾ.ಕವಿತಾ
“ಬೇಸಿಗೆಯ ಸುತ್ತ ಮುತ್ತ”
“ಏನ್ ಸೆಕೆ ಏನ್ ಝಳ… ಏನ್ ರೀ ಸಮಾಚಾರ?” ಅಂತ ಕೇಳಿದರೆ ಸಾಕು ಪ್ರತಿಯೊಬ್ಬರ ಬಾಯಿಂದ ಮುತ್ತಿನಂತೆ ಉದುರುವ ಮಾತುಗಳಿವು. ಸೂರ್ಯನಿಗೂ ಒಬ್ಬ ಹೆಂಡತಿ ಇದ್ದಿದ್ದರೆ ಅವನನ್ನು ಹದ್ದು ಬಸ್ತಿನಲ್ಲಿ ಇಡುತ್ತಿದ್ದಳು, ಅವಾಗ ಅವನ ಈ ಶಾಖದಿಂದ ತಪ್ಪಿಸಿಕೊಳ್ಳಬಹುದಿತ್ತು ಎಂಬ ಹಾಸ್ಯವು ಕೇಳಲ್ಪಡುತ್ತದೆ.
ಹೌದು ಯಾಕೆ ಹೀಗೆ ವರ್ಷದಿಂದ ವರ್ಷ ತಾಪಮಾನ ಏರುತ್ತಿರುವುದು? ಹವಾಮಾನದಲ್ಲಿ ಯಾಕೆ ಇಷ್ಟು ವೈಪರೀತ್ಯ?? ಎಲ್ಲರಿಗೂ ತಿಳಿದ ವಿಷಯ ಜಾಗತಿಕ ತಾಪಮಾನ (global warming).
ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳು…
* ವಿದ್ಯುತ್ ಶಕ್ತಿ ಉತ್ಪಾದನೆ, ಉತ್ಪಾದನೆಗೆ ಪಳುವಳಿಕೆ ಇಂಧನ ಸುಡುವಾಗ ಹೊರಹೊಮ್ಮುವ ಶಾಖದಿಂದ ಜಾಗತಿಕ ತಾಪಮಾನ ಹೆಚ್ಚಾಗುವುದು.
* ಸರಕುಗಳ ಉತ್ಪಾದನೆ.
* ಮರಗಳನ್ನು ಕಡಿದು ಕಾಡುಗಳು ನಶಿಸುವುದರಿಂದ.
* ಸಾರಿಗೆ ವ್ಯವಸ್ಥೆ ಉಪಯೋಗಿಸುವುದರಿಂದ.
* ಆಹಾರ ಉತ್ಪಾದನೆಯಿಂದ.
* ಕಟ್ಟಡಗಳ ನಿರ್ಮಾಣದಿಂದ.
* ಹೆಚ್ವುತ್ತಿರುವ ಕಾರ್ಖಾನೆಗಳು
ಇದು ಜಾಗತಿಕ ತಾಪಮಾನ ಕಾರಣಗಳ ಪಕ್ಷಿ ನೋಟ. ಇನ್ನೂ ಇವುಗಳಿಗೆ ಪರಿಹಾರಗಳ ಬಗ್ಗೆ ಯೋಚಿಸಿದರೆ ಮೈ ಝುಂ ಎಂದು ಮೈಯಲ್ಲಿ ನಡುಕ ಹುಟ್ಟಿಸುವಷ್ಟು ಭಯ ಆತಂಕ ಆಗುತ್ತದೆ. ಪರಿಹಾರ ಸಾಧ್ಯ, ಆದರೆ ಕಷ್ಟ ಸಾಧ್ಯ. ಮನುಷ್ಯ ಮನಸ್ಸು ಮಾಡಿದರೆ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಆಲೋಚನೆಯೊಂದಿಗೆ ಈಗ ಸಧ್ಯದಲ್ಲಿ ಎದುರಿಸುತ್ತಿರುವ ಸುಡು ಬೇಸಿಗೆಯ ಪರಿಹಾರದ ಬಗ್ಗೆ ಯೋಚಿಸುವುದು ಸೂಕ್ತವೆನಿಸುತ್ತದೆ.
ಈಗಿರುವ 40°C-42°C ತಾಪಮಾನಕ್ಕೆ ಪರಿಸರ ಹಾಗೂ ಮನುಷ್ಯನಲ್ಲಿ ಆಗುವಂತ ಮೊಟ್ಟ ಮೊದಲ ಪರಿಣಾಮವೆಂದರೆ ನಿರ್ಜಲೀಕರಣ. ಹೌದು ಭೂಮಿಯ ಮೇಲೆ ಇರುವಂತಹ ನೀರಿನ ಮೂಲಗಳಲ್ಲಿ ಇರುವ ನೀರೆಲ್ಲಾ ಆವಿಯಾಗಿ ಹೋಗುವುದು. ಮಳೆ ಬಂದು ಹಳ್ಳಕೊಳ್ಳಗಳು ತುಂಬುವವರೆಗೆ ಮನುಷ್ಯ ಏನು ಮಾಡಲು ಸಾಧ್ಯವಿಲ್ಲ. ಮನುಷ್ಯನ ದೇಹದಲ್ಲಿ ಶೇಕಡಾ 60% ನೀರಿರುವುದು. ಅದು ಈ ತಾಪಕ್ಕೆ ಬೆವರಾಗಿ ಹರಿದು ದೇಹದಲ್ಲಿಯ ನೀರಿನಾಂಶ, ಲವಣಾಂಶ ಕಡಿಮೆಯಾಗುತ್ತದೆ.
ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಕಂಡು ಬರುವಂತಹ ಲಕ್ಷಣಗಳೆಂದರೆ, ಅತಿಯಾದ ಬಾಯಾರಿಕೆ, ಬಾಯೆಲ್ಲಾ ಒಣ ಒಣ, ಅಂಟು ಅಂಟಾಗುವುದು. ವೇಗವಾದ ಉಸಿರಾಟ, ಹೃದಯ ಬಡಿತ ವೇಗವಾಗುವುದು, ಹಾಗೂ ರಕ್ತದ ಒತ್ತಡದಲ್ಲಿ ಇಳಿಕೆಯಾಗುವುದು, ಜ್ವರ, ಸ್ವಲ್ಪ ಸ್ವಲ್ಪ ಮೂತ್ರ ವಿಸರ್ಜನೆ ಅಥವಾ ಮೂತ್ರ ವಿಸರ್ಜನೆ ಆಗದೇ ಇರುವುದು, ಉರಿ ಮೂತ್ರ, ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಉರಿ ಮೂತ್ರ, ಮೂತ್ರದಲ್ಲಿ ಬ್ಯಾಕ್ಟೀರಿಯಾಗಳು ಬೇಗ ಕಂಡು ಬರುತ್ತದೆ. ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು, ನಿದ್ರಾಜನಕ ಹೀಗೆ.
ಈ ಲಕ್ಷಣಗಳನ್ನು ಕಡೆಗಾಣಿಸಿದರೆ ಮೆದುಳಿನಲ್ಲಿ ಬಾವು ಬರುತ್ತದೆ. ಮೂತ್ರ ಪಿಂಡಗಳು ನಿಶ್ಕ್ರಿಯಗೊಳ್ಳುತ್ತವೆ, ಕೋಮಾಗೆ ಹೋಗುತ್ತಾರೆ, ಸಾವು ಕೂಡಾ ಸಂಭವಿಸಬಹುದು.
ಮೊದಲನೆಯದಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು. ಆಯುರ್ವೇದದಲ್ಲಿ ಹೇಳಿರುವಂತೆ ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆದು ಒಂದು ಗ್ಲಾಸ್ ನೀರನ್ನು ಸೇವಿಸಬೇಕು. ಈ ಅಭ್ಯಾಸ ಎಲ್ಲರಲ್ಲಿ ಇದ್ದೇ ಇರುತ್ತದೆ. ಇಲ್ಲದ್ದಿದ್ದರೆ ರೂಢಿಸಿಕೊಳ್ಳಿ.
ಒಂದು ಗ್ಲಾಸ್ ಎಂದ ತಕ್ಷಣ ಕಡ್ಡಾಯವಾಗಿ ಬಲವಂತದಿಂದ ಬೇಡ. ಅವರವರ ವಯಸ್ಸು, ದೇಹ ತೂಕ, ದೇಹದಾಕೃತಿ ಮೇಲೆ ನಿರ್ಧಾರವಾಗುತ್ತದೆ. ಸರಳವಾದ ರೀತಿಯ ಅಂದರೆ ನೀರು ಕುಡಿದಾದನಂತರ ಉಬ್ಬಳಿಕೆ(ವಾಂತಿ ಬರುವ ತರಹ) ಆಗಬಾರದು. ಆದಷ್ಟೂ ಚಹಾ, ಕಾಫಿ ಬಿಟ್ಟರೆ ಒಳಿತು. ಮುಂದೆ ಒಂದು ಗಂಟೆಯ ನಂತರ ಮತ್ತೆ ಅರ್ಧದಿಂದ ಮೂಕ್ಕಾಲು ಗ್ಲಾಸ್ ನೀರು ಕುಡಿಯಬೇಕು.
ಉಪಾಹಾರದ ಅರ್ಧ ಗಂಟೆ ಮೊದಲು, ಉಪಾಹಾರದ ಒಂದು ಗಂಟೆ ನಂತರ ನೀರನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
ಅಜೀರ್ಣ, ಆಮ್ಲಪಿತ್ತ ಆಗುವುದಿಲ್ಲ. ಅರ್ಧ ಗಂಟೆಗೊಮ್ಮೆ ೧೦೦ml ನಷ್ಟು / ಹಣ್ಣಿನ ರಸ/ನಿಂಬೆಹಣ್ಣಿನ ಪಾನಕ/ ನೀರ ಮಜ್ಜಿಗೆ ಸೇವಿಸುತ್ತಿರಬೇಕು.
*ಒಂದು ಗ್ಲಾಸ್ ನೀರ ಮಜ್ಜಿಗೆಯಲ್ಲಿ ಒಂದು ಚುಟುಗೆ ಮೆಣಸಿನ ಕಾಳ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಸೇವಿಸಬಹುದು.
*ಚಿಂಚಾ (ಹುಣಸೆ ಹಣ್ಣಿನ) ಪಾನಕವನ್ನು
ಪ್ರತಿದಿನ 50 ರಿಂದ 100 ಮಿ.ಲೀ. ಸೇವಿಸಬಹುದು. ಮಕ್ಕಳಿಗೆ ರಾಸಾಯನಿಕದಿಂದ ತಯಾರಿಸಿದಂತಹ ದುಬಾರಿ ಪೇಯಗಳ ಬದಲಿಗೆ ಇದನ್ನು ನೀಡಿದರೆ ಹಸಿವಾಗುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಜೊತೆಗೆ ಅತಿಯಾದ ಬಾಯಾರಿಕೆಯಾಗದಂತೆ ಹಾಗೂ ರಕ್ತಹೀನತೆಯಾಗದಂತೆ ತಡೆಗಟ್ಟುತ್ತದೆ.
ಚಿಂಚಾ ಪಾನಕ ಮಾಡುವ ವಿಧಾನ:
ಹುಣಸೆ ಹಣ್ಣು(100 ಗ್ರಾಂ), ಬೆಲ್ಲದ ಪುಡಿ(400 ಗ್ರಾಂ), ಜೀರಿಗೆ ಪುಡಿ(10 ಗ್ರಾಂ), ಕಾಳು ಮೆಣಸಿನಪುಡಿ(5 ಗ್ರಾಂ) ಹಾಗೂ ಸೈಂದವ ಲವಣ(5 ಗ್ರಾಂ) ಬಳಸಿಕೊಂಡು ಪಾನಕ ತಯಾರಿಸಬಹುದು.
ಹುಣಸೆ ಹಣ್ಣು ರಾತ್ರಿಯಿಡೀ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಕೈಯಿಂದ ಹಿಸುಕಿ ಬಾಟಲಿಗಳಲ್ಲಿ ಸೋಸಿಟ್ಟುಕೊಂಡು ಪಾನಕ ತಯಾರಿಕೆಗೆ ಬೇಕಾದಷ್ಟು ಬಳಸಬಹುದು.
ಅಗತ್ಯ ಪ್ರಮಾಣದ ನೀರನ್ನು ಪಾತ್ರೆಗೆ ಹಾಕಿ ಹುಣಸೆ ಹಣ್ಣಿನ ಮಿಶ್ರಣವನ್ನು ಬೆರೆಸಿ ಇದರೊಂದಿಗೆ ಬೆಲ್ಲದ ಪುಡಿಯನ್ನು ಹಾಕಿ ಕರಗಿಸಬೇಕು. ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಮತ್ತು ಸೈಂದವ ಲವಣವನ್ನು ಸೇರಿಸಿದರೆ ಪಾನಕ ಸಿದ್ಧವಾಗುತ್ತದೆ.
ಇದರ ಜೊತೆ ಸರಳವಾಗಿ ಜೀರ್ಣವಾಗುವಂತಹ ಆಹಾರ ಕ್ರಮವಿರಬೇಕು. ಹೀಗೆ ಮಾಡುವುದರಿಂದ ದೇಹವು ನಿರ್ಜಲವಾಗದಂತೆ ತಡೆಗಟ್ಟಬಹುದು.
ಇಲ್ಲಿವರೆಗೆ ನಿರ್ಜಲೀಕರಣವನ್ನು ತಡೆಗಟ್ಟುವ ಬಗ್ಗೆ ತಿಳಿದಿದ್ದಾಯಿತು. ಈ ಬಿಸಿಲಿಗೆ ಹೆಚ್ಚು ಬೆವರುವುದರಿಂದ ಚರ್ಮದ ಖಾಯಿಲೆಗಳು ಕೂಡಾ ಬರುತ್ತವೆ. ಸನ್ ಬರ್ನ್, ಚರ್ಮದ ಮೇಲೆ ಸಣ್ಣ ಗುಳ್ಳೆಗಳು ಬರುವುದು, ತುರಿಕೆ, ದುರ್ಗಂಧ. ಇವುಗಳನ್ನು ತಡೆಗಟ್ಟಲು ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಹಾಕಿಕೊಳ್ಳಬೇಕು ಅಥವಾ ಬೇವಿನೆಲೆಗಳನ್ನು ಅರೆದು ಮುಲಾಮಿನ ತರಹ ಲೇಪಿಸಿಕೊಂಡು 10-15 ನಿಮಿಷಗಳ ನಂತರ ಸ್ನಾನ ಮಾಡಬೇಕು. ದಿನಕ್ಕೆ ಎರೆಡು ಬಾರಿ ಅತಿ ತಣ್ಣನೆಯಲ್ಲದ ನೀರಿನಿಂದ ಸ್ನಾನ ಮಾಡುವುದು ಉತ್ತಮ. ಹಾಗೆ ಚರ್ಮದ ಮೇಲೆ ಬೆವರಿನ ತೇವಾಂಶವನ್ನು ಆಗಾಗ ಒರೆಸಿಕೊಳ್ಳುತ್ತಿರಬೇಕು.
ಅದರಲ್ಲೂ ತೊಡೆಗಳ ಸಂದು, ಬಗಲಿನಲ್ಲಿ ಬೇವರಿನ ತೇವಾಂಶದಿಂದ ಅಲ್ಲಿ ಬೇಗನೆ ಕ್ರಿಮಿಗಳ ಉತ್ಪತ್ತಿ ಉಂಟಾಗಿ, ತುರಿಕೆ, ಚರ್ಮರೋಗ ಬರುತ್ತದೆ. ಆದಷ್ಟೂ ಬಿಳಿ ಅಥವಾ ತಿಳಿ ಬಣ್ಣಗಳ ಹಾಗೂ ಕಾಟನ್ ಬಟ್ಟೆ ಧರಿಸಿದರೆ ಉತ್ತಮ.
ಅಲ್ಲದೆ ಈ ಬಿಸಿಲಿನ ತಾಪಕ್ಕೆ, ವಾತಾವರಣದ ಬಿಸಿಗೆ ಮೂಗಿನಿಂದ ರಕ್ತಸ್ರಾವವಾಗಬಹುದು. ಮದ್ರಾಸ್ ಐ(ಕಣ್ಣುಗಳು ಕೆಂಪಾಗುವುದು, ಉರಿ, ನೋವು,) ಬರುತ್ತದೆ. ಮಕ್ಕಳು ಬಿಸಿಲಿನ ತಾಪಕ್ಕೆ ಅತಿಯಾದ ನೀರು ಸೇವಿಸುತ್ತವೆ. ಇದರಿಂದ ಅಜೀರ್ಣ ಉಂಟು ಮಾಡಿ, ವಾಂತಿ ಬೇಧಿ, ಜ್ವರ ಖಾಯಿಲೆಗೆ ಗುರಿಯಾಗುತ್ತವೆ.
Prevention is better than cure ಅನ್ನುವಂತೆ ರೋಗವನ್ನು ಬರದಂತೆ ತಡೆಯುವುದು ಉತ್ತಮ. ಅದಕ್ಕೆ ಮನೆಯಿಂದ ಹೊರಗಡೆ ಆದಷ್ಟೂ ಮಧ್ಯಾಹ್ನ ಹೋಗದಿದ್ದರೆ ಉತ್ತಮ, ಅನಿವಾರ್ಯ ಕಾರಣಗಳಿಂದ ಹೊರಟರೆ ತಲೆಗೆ ಟೋಪಿಯನ್ನು ಹಾಕಿಕೊಳ್ಳಬೇಕು ಇಲ್ಲದಿದ್ದರೆ ಛತ್ರಿಯನ್ನು ಉಪಯೋಗಿಸಬೇಕು. ಎಲ್ಲೆಂದರಲ್ಲಿ ನೀರನ್ನು ಸೇವಿಸದೇ ಶುದ್ದವಾದ ನೀರನ್ನು ಸೇವಿಸಬೇಕು. ಆಯುರ್ವೇದದಲ್ಲಿ ಹೇಳಿರುವಂತೆ ಗ್ರೀಷ್ಮ ಋತುಚರ್ಯ(ಋತುವಿನ ಅನುಸಾರ ಆಹಾರ ವಿಹಾರ) ಪಾಲಿಸಬೇಕು.
ಇಂತಹ ತಾಪಮಾನದಿಂದ ಬಳಲಬಾರದೆಂದರೆ, ಈಗ ಬರುವ ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಬೆಳೆಸೋಣ. ಭೂತಾಯಿಯ ಒಡಲನ್ನು ಹಸಿರಾಗಿಸಿ ಬದುಕೋಣ, ಬದುಕಲು ಬಿಡೋಣ.
ಡಾ.ಕವಿತಾ
Nice explanation
Nice
ತುಂಬಾ ಉಪಯುಕ್ತವಾದ ಮಾಹಿತಿ.. ಧನ್ಯವಾದಗಳು
Well said mam
ಉತ್ತಮ ಬರಹ…
Nice informative article mam
article mdm.
ಉಪಯುಕ್ತ ಮಾಹಿತಿ ನೀಡಿದ್ದೀರಿ ಮೇಡಂ, ಧನ್ಯವಾದಗಳು ಮೇಡಂ ಇಂತಹದೊಂದು ಉಪಯುಕ್ತ ಬರಹ ನೀಡಿದ್ದಕ್ಕೆ
ಉತ್ತಮವಾದ ಮಾಹಿತಿ ಅಕ್ಕ