ಕಾವ್ಯ ಸಂಗಾತಿ
ಭಾರತಿ ಅಶೋಕ್
“ಕಾಮಾತುರಾಣಂ ನಭಯಂ ನಲಜ್ಜಂ”
ಕಾಮ” ಎಂದರೆ ಬಯಕೆ, ವಿಷಯಾಭಿಲಾಷೆ, “ಕಾಮ” ಪುರುಷಾರ್ಥಗಳಲ್ಲಿ ಒಂದು, ಮತ್ತು ಮೂರನೆಯದು.
“ಕಾಮಾತುರಾಣಂ ನಭಯಂ ನಲಜ್ಜಂ” ಎಂದರೆ ಕಾಮದಿಂದ ಆತುರನಾದವನಿಗೆ ಭಯ ಮತ್ತು ನಾಚಿಕೆ ಎನ್ನುವುದು ಇರುವುದಿಲ್ಲ ಎಂದರ್ಥ.ಕಾಮ ಎನ್ನುವುದು ಮನುಷ್ಯನಿಗೆ ಅತೀ ಮುಖ್ಯವಾದ ಒಂದು ಪ್ರವೃತ್ತಿ. ಅನಾದಿ ಕಾಲದಿಂದಲೂ ಕಾಮ ಎನ್ನುವ ಪದವು ತನ್ನದೇ ಅರ್ಥಗ್ರಹಿಕೆಯಲ್ಲಿ ಬಳಕೆಯಾಗುತ್ತಾ ಬಂದಿದೆ. ಆದರೆ, “ಲೈಂಗಿಕತೆ” ತುಂಬಾ ಸಂಕುಚಿತ ಅರ್ಥದಲ್ಲಿ ಬಳಸುವುದು ಸಹ ಅನಾದಿ ಕಾಲದಿಂದ ನಡೆದೇ ಇದೆ.
ಕಾಮ ಎನ್ನುವುದು ಮನುಷ್ಯನಿಗೆ ಮೊದಲು ಅಗತ್ಯವಾಗಿ ಇದ್ದದ್ದು ದೇಹದ ಹಸಿವನ್ನು ಹಿಂಗಿಸಲು, ಆದರೆ ಅವನ ವಿಕಾರ ಪ್ರವೃತ್ತಿ ಮತ್ತು ಬಯಕೆಗಳಿಂದ ಎಷ್ಟೋ ಮುಗ್ದ ಜೀವಗಳು ತಮ್ಮ ಅಮುಲ್ಯವಾದ ಪ್ರಾಣವನ್ನು ಕಳೆದುಕೊಂಡಿವೆ, ಎಷ್ಟೋ ಕುಟುಂಬಗಳು ಒಡೆದು ಛಿದ್ರಗೊಂಡಿವೆ. ಇದು ಮನುಕುಲ ತಲೆ ತಗ್ಗಿಸುವಂತಹ ವಿಷಯ.ಆದರೆ ನಾನು ಅದನ್ನು ಚರ್ಚಿಸುತ್ತಿಲ್ಲ.
ನನ್ನ ಮಾತು ಕಾಮಾತುರಕ್ಕೆ ಸಂಬಂಧಿಸಿದ್ದು. ಈ ಕಾಮ ಎನ್ನುವುದನ್ನು ಕೇವಲ ಲೈಂಗಿಕ ವಾಂಛೆ ಎಂದುಕೊಳ್ಳದೇ ಅದು ಬೌದ್ಧಿಕ ಬಯಕೆ ಎಂದು,ಬೌದ್ಧಿಕ ಹಸಿವೆಂದು ಅರ್ಥೈಸಿಕೊಂಡು ಮಾತನಾಡುವುದಾದರೆ,ಅದು ಎಲ್ಲರಲ್ಲೂ ಇರಲೇಬೇಕಾದ ಪ್ರವೃತ್ತಿ. ದೈಹಿಕ ಮತ್ತು ಬೌದ್ಧಿಕವಾಗಿ ನೋಡುವುದಾದರೆ ದೈಹಿಕ ಬಯಕೆ ತೀವ್ರವಾಗಿ ಕಾಮೋದ್ರಿಕ್ತನಾದವನಿಗೆ ಅದರ ಈಡೆರಿಕೆ ಮಾತ್ರ ಮುಖ್ಯವಾಗಿ ಬೇರೇನು ಯೋಚಿಸಲಾರ ಆ ಕ್ಷಣಕ್ಕೆ. ಕಾರಣ ಪರಿಣಾಮದ ಚಿಂತೆ ಅವನನ್ನು ಬಾಧಿಸುವುದಿಲ್ಲ. ಇತರರು ಏನಂದಾರು ಮತ್ತು ನಾಳೆ ಇದರ ಪರಿಣಾಮವೇನು ಎನ್ನುವುದು ಅಲ್ಲಿ ಗೌಣವಾಗುತ್ತದೆ.ಇದು ಅಪಾಯಕಾರಿ.
ಬೌದ್ಧಿಕ ಹಸಿವು ಸಹ ಕಾಮಾತುರದಂತೆ,ತನ್ನ ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಸದಾ ಆತುರ ಕಾತರದಲ್ಲಿರುತ್ತದೆ.ಜ್ಞಾನದಾಹಿಗೆ ಕಾಲ ಸ್ಥಳದ ಹಂಗಿಲ್ಲದೇ ಎಲ್ಲವನ್ನು ತನ್ನ ಜ್ಞಾನದ ಪರಿದಿಗೆ ತಂದುಕೊಳ್ಳುವ ಆತುರದಲ್ಲಿ ಇನ್ನೊಬ್ಬರ ಮನಸ್ಸಿಗೆ ಲಗ್ಗೆ ಇಡುತ್ತಾನೆ.ಬೇಕಾದ್ದನ್ನೆಲ್ಲಾ ಬಾಚಿಕೊಳ್ಳುತ್ತಾನೆ. ವಯಸ್ಸಿನ ಹಂಗಿಲ್ಲದೇ ಅಬಾಲ ವೃದ್ಧರಲ್ಲೂ ಈ ಪ್ರವೃತ್ತಿ ಇರುತ್ತದೆ,ಯಾವುದೇ ಹಿಂಜರಿಕೆ ನಾಚಿಕೆ ಅಥವಾ ಭಯ ಅವರನ್ನು ಬಾಧಿಸದು.
ಕಾಮ ಎನ್ನುವುದನ್ನು ಕೆಲಸ ಎಂದು ಅರ್ಥೈಸಿ ನೋಡಿದಾಗ ತುಂಬಾ ವಿಶಾಲವಾದ ದೃಷ್ಟಿಕೋನವನ್ನು ಹೊಂದಿದೆ. ಪುರುಷಾರ್ಥದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಹೀಗೆ ಇವು ಮಾನವನ ಒಟ್ಟಾರೆ ಬದುಕನ್ನು ಪ್ರತಿಬಿಂಬಿಸುತ್ತವೆ. ನಾನು ಪುರುಷಾರ್ಥಗಳಲ್ಲಿ ಮೂರನೇಯದಾದ “ಕಾಮ” ದ ಬಗ್ಗೆ ಮಾತನಾಡುತ್ತಿರುವೆ.ಕಾಮ ಕರ್ಮ,ಆಸೆ, ಸಂಸಾರ ಸ್ಥಾಪನೆ ಎನ್ನುವ ಅರ್ಥದಲ್ಲಿ ಇದನ್ನು ಗ್ರಹಿಸಲಾಗಿ ಮಾನವ ಬದುಕಿನ ತನ್ನ ಆಸೆಗಳನ್ನು ತೀರಿಸಿಕೊಳ್ಳಲು ಹಣಕಾಸಿನ ಅಗತ್ಯವಿದ್ದು, ಅದನ್ನು ಪಡೆಯಲು ಒಂದಿಷ್ಟು ದುಡಿಮೆಯ ಅಗತ್ಯವಿದೆ,ಅದು “ಕಾಯಕ”. ತುಂಬಾ ಮುಖ್ಯ. ಬದುಕಿಗೆ ಅಗತ್ಯವಾಗಿದೆ.ಅದು ಬದುಕಿನ ಜೀವಂತಿಕೆಯ ಪ್ರತೀಕ.ಮನುಷ್ಯನ ಪ್ರತಿಯೊಂದು ಕ್ರಿಯೆಯೂ ಕರ್ಮ,ಕಾರ್ಯ,ಕಾಯಕ ಸಿದ್ಧಾಂತದ ಮೇಲೆ ನಿಂತಿದೆ.
ಹೀಗೆ ಪ್ರಾರಂಭದಲ್ಲಿ ಮನುಷ್ಯ ತನ್ನ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಅಷ್ಟೇನು ಕಷ್ಟ ಪಡಬೇಕಾದ ಅಗತ್ಯವಿರಲಿಲ್ಲ ಕಾರಣ ಹಿತ ಮಿತವಾದ ಬಯಕೆಗಳನ್ನು ಅಮಿತವಾದ ಸಂಪನ್ಮೂಗಳಿಂದ ಸುಲಭವಾಗಿ ಈಡೆರಿಸಿಕೊಳ್ಳತ್ತಿದ್ದ. ಕಾಲಾಂತರದಲ್ಲಿ ಮಾನವನ ಬಯಕೆಗಳು ಮಿತಿಯನ್ನು ಮೀರಿ ಅವು ಬೇಡಿಕೆಗಳಾಗಿ,ಎಷ್ಟೇ ಪೂರೈಸಿದರೂ ತೃಪ್ತಿ ಇಲ್ಲದಂತಹ ಅತ್ಯಂತಿಕ ಸ್ಥಿತಿಗೆ ಬಂದು ತಲುಪಿದ. ಆದರೆ ಅವನ ಬೇಡಿಕೆ ಏರಿಕೆಯನುಸಾರ ಸಂಪನ್ಮೂಲಗಳು ಏರುತ್ತಿಲ್ಲವೆ. ನೈಸರ್ಗಿಕ ಸಂಪನ್ಮೂಲವು ಮಿತಿಮೀರಿದ ಮಾನವನ ಬೇಡಿಕೆಯ ಹಿನ್ನಲೆಯಲ್ಲಿ ಅವು ಕಡಿಮೆಯಾಗುತ್ತಾ ಬರುತ್ತವೆ. ಆಗ ಇರುವ ಮಿತವಾದ ಸಂಪನ್ಮೂಲಗಳಿಂದ, ಅಮಿತವಾದ ಬೇಡಿಕೆಗಳನ್ನು ಈಡೇರಿಸುವಲ್ಲಿ ವ್ಯವಸ್ಥೆ ಸೋಲುತ್ತದೆ.
ಇತ್ತ ಮನಷ್ಯ ತನ್ನ ಬೆಡಿಕೆ ಈಡೆರಿಕೆಗಾಗಿ ಹಣಕಾಸನ್ನು ಹೊಂದಿಸಲೇಬೇಕು ಅದಕ್ಕಾಗಿ ಹಗಲಿರುಳು ದುಡಿಯುತ್ತಾನೆ ಯಂತ್ರದಂತೆ.ಈ ಸಂದರ್ಭದಲ್ಲೇ ಆತನು ಸಂಪಾದನೆಯ ಆತುರದಲ್ಲಿರುತ್ತಾನೆ.ಅದು ಅವನ ಬೇಡಿಕೆಯ ಪರಾಕಾಷ್ಠೆಯನ್ನು ಸಂತೃಪ್ತಿ ಪಡಿಸವುದಕ್ಕಾಗಿ ಎಂತಹ ಕೆಲಸವನ್ನು ಬೆಕಾದರೂ ಮಾಡುತ್ತಾನೆ.ಈ ತರಾತುರಿಯಲ್ಲಿ ತಾನು ಮಾಡುತ್ತಿರುವ ಕೆಲಸದ ಮೇಲೆ ಮಾತ್ರ ಅವನ ಮನಸ್ಸು ಕೇಂದ್ರಿಕರಿಸುತ್ತಾನೆ.ಅದು ಕಳ್ಳತನ,ದರೋಡೆ,ಸುಳ್ಳು ಕೊಲೆ ಸುಲಿಗೆ ಹೀಗೆ ಏನಾದರೂ ಆಗಿರಬಹುದು ಅವನು ಮಾಡಲು ಅಂಜುವುದಿಲ್ಲ.
ಇನ್ನು ಭಿಕ್ಷುಕ,ತನ್ನ ಹೊಟ್ಟೆ ಹೊರೆಯಲು ಭಿಕ್ಷೆ ಬೇಡುತ್ತಾನೆ, ಅದು ಅವನ ಹಸಿವನ್ನು ನೀಗಿಸುತ್ತದೆ ಆದರೆ ಅದು ಬರೀ ಹಸಿವಾಗಿರದೇ ಅದರಿಂದನೇ ಮುಂದೆ ಬರಬೇಕೆನ್ನುವ ಇಂದಿನ High-tech ಭಿಕ್ಷುಕರಿಗೇನು ಕೊರತೆ ಇಲ್ಲ.ಅವರು ಹಾಕುವ ವೇಷ, ಸೋಗು, ಇವು ಅವರನ್ನು ತನ್ನ ಆಸೆಗಳು ಅಂಥ ಕಾತುರಕ್ಕೆ ಕಾರಣವಾಗಿಸಿವೆ.
ಭಾರತಿ ಅಶೋಕ್
ಮೇಡಂ ಚೆನ್ನಾಗಿದೆ ನಿಮ್ಮ ಬರಹ ಧನ್ಯವಾದಗಳು ತಮಗೆ