‘ಮಾತೆಂಬುದು ಜ್ಯೋತಿರ್ಲಿಂಗ’ ಲೋಹಿತೇಶ್ವರಿ ಎಸ್ ಪಿ ವಿಶೇಷ ಲೇಖನ

Silho

ಮಾತು ಮೌನಕ್ಕಿಂತ ಹರಿತವಾದುದು. ನಮ್ಮ ಪೂರ್ವಿಕರು ಹಿಂದಿನಿಂದಲೂ ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾ ಮಾತಿನಿಂದ ಹೇಳಲಾಗದೇ ಇರುವುದನ್ನು ಮೌನದಿಂದ ತಿಳಿಸಬಹುದೆಂದು ಹೇಳುತ್ತಲೇ ಬಂದಿದ್ದಾರೆ. ಅದು ಎಷ್ಟರಮಟ್ಟಿಗೆ ನಿಜವೆಂದು ಕೂಲಂಕಷವಾಗಿ ಪರಿಶೀಲಿಸಿದಾಗ ಸತ್ಯಾಂಶ ಅರಿವಿಗೆ ಬರುತ್ತದೆ.

ಹಿರಿಯರಿಂದ ಮಕ್ಕಳಿಗೆ ಮೌನವೇ ಶ್ರೇಷ್ಠ ಎಂಬ ತಿಳಿವಳಿಕೆ ದೊರೆಯುತ್ತಾ ಬಂದಿದೆ.. ಆದರೆ, ಅದು ನಿಜವಾ..? ಸುಳ್ಳಾ…? ಎಂದು ಅರಿಯುವುದು ಮಕ್ಕಳ ಜವಾಬ್ದಾರಿ. ನಮ್ಮ ಪೂರ್ವಿಕರಲ್ಲಿ ಮೌನದ ಮೂಲಕವೇ ಭಾವನೆಗಳನ್ನು ಅರ್ಥ ಮಾಡಿಸುವ ನೈಪುಣ್ಯತೆಯೊಂದಿಗೆ ಮೌನವನ್ನು ಅರ್ಥಮಾಡಿಕೊಳ್ಳುವ ಮನೋಭಾವವೂ ಇತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಮೌನವನ್ನು ಅಪಾರ್ಥ ಮಾಡಿಕೊಳ್ಳುವ, ಇಚ್ಛಾನುಸಾರ ಅರ್ಥೈಸಿಕೊಳ್ಳುವ, ಅಸಹಾಯಕತೆಯ ಪ್ರತಿರೂಪವಾಗಿ ಪರಿಗಣಿಸುವುದೆ ಹೆಚ್ಚು. ಅಭಿಪ್ರಾಯಗಳನ್ನು ಧೈರ್ಯದಿಂದ ಹೊರಹಾಕಿದಾಗ ಮಾತ್ರ ಅವುಗಳಿಗೆ ಮೌಲ್ಯ. ಇಲ್ಲವಾದಲ್ಲಿ ನಗೆಪಾಟಲಿಗೆ ಈಡಾಗುವ ಇಲ್ಲವೆ ಸಂಕಷ್ಟಕ್ಕೆ ಒಳಗಾಗುವ ಸಂದರ್ಭ ಒದಗಿಬರುತ್ತದೆ.

ಮಾತು ಮನೆಕೆಡಿಸಿತು ತೂತು ಒಲೆ ಕೆಡಿಸಿತು
ಮಾತು ಬೆಳ್ಳಿ ಮೌನ ಬಂಗಾರ
ಮಾತಾಡಿದರೆ ಮುತ್ತಿನಂತಿರಬೇಕು
ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು
ಮಾತಿಗಿಂತ ಮೌನವೇ ಮಿಗಿಲು



ಇಂತಹ ಉಕ್ತಿಗಳ ಮೂಲಕ ನೆಗೆಟಿವ್ ಶೇಡ್ ಕೊಟ್ಟು ಮಾತನ್ನು ಅಪರಾಧಿ ನೆಲೆಯಲ್ಲಿಟ್ಟು ನೋಡುವ ಪರಿಪಾಠ ಇಂದಿಗೂ ಜೀವಂತವಾಗಿದೆ. ಆದರೆ, ಅಲ್ಲಮಪ್ರಭುಗಳು ಹೇಳಿರುವ ಮಾತೆಂಬುದು ಜ್ಯೋತಿರ್ಲಿಂಗ ಎಂಬ ಮಾತನ್ನು ಯಾರು ಬಳಸುವುದಿಲ್ಲ. ಈ ಮಾತನ್ನು ಕನ್ನಡ ವಿಶ್ವವಿದ್ಯಾಲಯದ ಘೋಷವಾಕ್ಯವಾಗಿ ನೋಡಬಹುದು. ಇಲ್ಲಿ ಮಾತನ್ನು ಬದುಕನ್ನು ರೂಪಿಸಿಕೊಳ್ಳಲು ದಾರಿಯಾಗಿ, ಶಕ್ತಿಯಾಗಿ, ಬಂಡವಾಳವಾಗಿ ಹಾಗೂ ಯಶಸ್ಸಿನ ಮಾರ್ಗವಾಗಿ ಪ್ರತಿನಿಧಿಸಲಾಗಿದೆ. ಮಾತಿನ ಮೂಲಕವೇ ನಮಗೆ ಬೇಕಾದುದನ್ನು ಪಡೆಯುವ, ಬೇಡವಾದುದನ್ನು ತಿರಸ್ಕರಿಸುವ ಹಾಗೂ ಧಿಕ್ಕರಿಸುವ ಚಾತುರ್ಯವನ್ನು ಬೆಳೆಸುವಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಕ್ರೀಯವಾಗಿದೆ.

ಮಾತು ಮೌನಕ್ಕಿಂತಲೂ ಪ್ರಖರವಾದದ್ದು. ಶಕ್ತಿಯುತವಾದದ್ದು. ನಾವು ಮೌನಕ್ಕೆ ಶರಣಾದರೆ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಅದೇ ಮಾತನಾಡಿದರೆ ನಮ್ಮ ಇರುವಿಕೆಯನ್ನು ಸಾಧಿಸಲು, ಅನಿಸಿದ್ದನ್ನು ನೇರವಾಗಿ, ಧೈರ್ಯದಿಂದ ಹೇಳಲು ಸಾಧ್ಯವಿದೆ. ಇಲ್ಲವಾದಲ್ಲಿ ಬೇರೆಯವರ ಇಚ್ಛೆಗೆ ಅನುಗುಣವಾಗಿ ನಾವು ಜೀವಿಸುವ ಸಂದರ್ಭ ಎದುರಾಗಬಹುದು.

ಜಗದಲ್ಲಿನ ಇಡೀ ಜೀವಸಂಕುಲದಲ್ಲಿಯೇ ಮಾನವರಿಗೆ ದೊರೆತ ಅತ್ಯಂತ ಮೌಲ್ಯಯುತ ಸಾಧನ ಮಾತು/ನುಡಿ. ಮಾತಿನ ಮೂಲಕವೇ ನಮ್ಮ ವ್ಯಕ್ತಿತ್ವ ಎಂತಹದು ಎಂಬುದನ್ನು ಗುರುತಿಸಿಕೊಳ್ಳಬೇಕೇ ವಿನಃ ಮೌನಕ್ಕೆ ಶರಣಾಗಿ ವ್ಯಕ್ತಿತ್ವಕ್ಕೆ ಮಸಿಬಳೆದುಕೊಳ್ಳಬಾರದು…..


Leave a Reply

Back To Top