“ಪಕ್ಕಾ ಲೋಕಲ್ಸ್” ನೋವು ನುಂಗುವ ಪ್ರಸಂಗಗಳು ಗಂಗಾಧರ ಬಿ ಎಲ್ ನಿಟ್ಟೂರ್

2010 ರ ಘಟನೆ. ಗಣಿತದಲ್ಲಿ ಅಪಾರ ಬುದ್ಧಿಮತ್ತೆ ಹೊಂದಿದ್ದ ನನ್ನ ಆತ್ಮೀಯ ಮಿತ್ರರೊಬ್ಬರು, ಆ ಸಮಯದಲ್ಲಿ ದಾವಣಗೆರೆಯ ಪ್ರತಿಷ್ಠಿತ ಎನಿಸಿಕೊಂಡಿದ್ದ ಖಾಸಗಿ ಕಾಲೇಜೊಂದರ ಸಂದರ್ಶನಕ್ಕೆ ಹಾಜರಾಗಿ ಸಂದರ್ಶಕರಿಂದ ಭೇಷ್ ಎನಿಸಿಕೊಂಡರೂ ಲೋಕಲ್ ಎಂಬ ಕಾರಣಕ್ಕಾಗಿ ಕೆಲಸದಿಂದ ವಂಚಿತರಾಗಿ ಮನ ನೊಂದು ಹೊರ ಬಂದರು. ಕಡು ಬಡತನದ ಕುಲುಮೆಯಲ್ಲಿ ಬೆಂದಿದ್ದ ಅವರಿಗೆ ಜೀವನ ನಿರ್ವಹಣೆಗಾಗಿ ಉದ್ಯೋಗದ ಅನಿವಾರ್ಯತೆ ತುಂಬಾ ಇತ್ತು.

ಜಾಹಿರಾತಿನಲ್ಲೂ ಮತ್ತು ಸಂದರ್ಶನದ ವೇಳೆಯೂ ಯಾವ ಸೂಚನೆಯನ್ನೂ ನೀಡದೆ ಸಂದರ್ಶನಕ್ಕೆ ಹಾಜರಾದ ಎಲ್ಲಾ ಸ್ಥಳೀಯ ಅಭ್ಯರ್ಥಿಗಳಿಗೆ ಫಲಿತಾಂಶದ ವಿಷಯದಲ್ಲಿ ವಿನಃ ಕಾರಣ ಕಾಯಿಸಿ, ಹತ್ತಾರು ಬಾರಿ ಅಲೆದಾಡಿಸಿ, ವಾಸ್ತವ ತಿಳಿದುಕೊಳ್ಳಲು ಮುಖ್ಯಸ್ಥರ ಬಳಿ ಕೂಡ ಹೋಗಲು ಬಿಡದೆ ಪ್ರವೇಶ ದ್ವಾರದಲ್ಲೇ ಏನೇನೊ ಸಬೂಬು ಹೇಳಿ ವಾಪಸ್ ಕಳಿಸುತ್ತಿದ್ದ ಅಲ್ಲಿಯವರ ದುರ್ವರ್ತನೆಯಿಂದ ಕೊನೆಗೆ ಮಿತ್ರನ ಕೋಪ ನೆತ್ತಿಗೇರಿತ್ತು. ಪೋಷಕರು & ಸಾರ್ವಜನಿಕರ ಭೇಟಿಗೂ ಲಭ್ಯವಾಗದೆ ಸಲ್ಲದ ಹವಾ ಮೇಂಟೇನ್ ಮಾಡುತ್ತಿದ್ದ ಅಲ್ಲಿಯ ಪ್ರಾಂಶುಪಾಲರು, ಕಾರ್ಯದರ್ಶಿ & ಅಧ್ಯಕ್ಷರ ಕೊಠಡಿಗೂ ಬಲವಂತವಾಗಿ ಧಾವಿಸಿ ಎಲ್ಲರನ್ನೂ ಸರಿಯಾಗಿಯೇ ಝಾಡಿಸಿ ಬಂದಿದ್ದರು.

ಆಮೇಲೆ ಯಾವ ಖಾಸಗಿ ವಿದ್ಯಾಸಂಸ್ಥೆಗೂ ಅರ್ಜಿ ಹಾಕುವ ಸಹವಾಸಕ್ಕೆ ಹೋಗದೆ ಸ್ವ ಉದ್ಯೋಗ ಮಾಡುತ್ತಲೇ ಕೂತು ಚೆನ್ನಾಗಿ ಅಭ್ಯಾಸ ಮಾಡಿ ಕೆಲವೇ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೊಡ್ಡ ಹುದ್ದೆ ಏರಿದ್ದು ಇತಿಹಾಸ.

ಒಂದು ದಿನ ರಾತ್ರಿ ಬಿಡುವಿನ ಸಮಯದಲ್ಲಿ ವಿದ್ಯಾನಗರ ಪಾರ್ಕ್ ನಲ್ಲಿ ಜೊತೆಗೂಡಿ ವಾಕಿಂಗ್ ಮುಗಿಸಿ ಕೂತಿದ್ದ ವೇಳೆ ಈ ಘಟನೆ ನೆನಪಿಸಿಕೊಂಡು ತಮಾಷೆಯಾಗಿ ಮಾತಾಡುವ ಜೊತೆ ಒಂದಷ್ಟು ಗಂಭೀರ ಚಿಂತನೆಯೂ ನಡೆಯಿತು. ಅಷ್ಟಿಷ್ಟು ಕವನ ಬರೆಯುವ ಹವ್ಯಾಸ ಇದ್ದ ಅವರು ಅಂದು ನನ್ನ ಕೈಗಿತ್ತು ಹೋಗಿದ್ದ ಈ ಕವನ ಆಕಸ್ಮಿಕ ಕಣ್ಣಿಗೆ ಬಿತ್ತು…..

 // ಪಕ್ಕಾ 420 ಲೋಕಲ್ಸ್ // 

ಸಂಸ್ಥೆ ಕಟ್ಟಲು ಲೋಕಲ್ ಜಾಗ ಬೇಕು
ಕಲಿಯೋಕೆ ಲೋಕಲ್ ಸ್ಟುಡೆಂಟ್ಸ್ ಬೇಕು
ದುಡ್ಡು ತಂದು ಸುರಿಯಲು
ಲೋಕಲ್ ಅಪ್ಪ ಅಮ್ಮಂದಿರೇ ಬೇಕು
ಕಲಿಸೋಕೆ ಲೋಕಲ್ ಟೀಚರ್ಸ್ ಬೇಡ
ಕೇಳ್ರಪ್ಪೋ ಈ ಅನ್ಯಾಯ

ಅರ್ಹತೆ ಇದ್ದರೂ ಹಿತ್ತಲ ಗಿಡ ಮದ್ದಲ್ಲ
ಕೆಲ ಖಾಸಗಿಗಳಿಗೆ ನೈಜ ಪ್ರತಿಭೆ ಲೆಕ್ಕಕ್ಕಿಲ್ಲ
ಗಂಡ ಹೆಂಡತಿ ಅಳಿಯ ಮಾವ
ಜಾತಸ್ತ್ಯ ಮತಸ್ಥ ಬಂಧು ಬಳಗ
ಬಂದು ಒಳ ಸೇರಿದ ಮೇಲೆ
ದಿನಕ್ಕೊಂದು ರೂಲ್ಸ್ ಅನ್ಯರಿಗೆ

ಧಮ್ಮಿದ್ರೆ ನಿಮ್ಮವರ ಹೊರ ಹಾಕಿ
ಆಮೇಲೆ ಹೇಳಿರೋ ನಿಮ್ಮ ನೈತಿಕ ಪಾಠ
ಶಿಕ್ಷಣದ ಹೆಸರಲಿ ಪಕ್ಕಾ ಮಾರಾಟ
ಆಶ್ರಯ ನೀಡಿದ ನೆಲ ಜಲ ಭಾಷೆಗೆ ದ್ರೋಹ

ಕನ್ನ ಹಾಕಿದ್ರೂ ಪರವಾಗಿಲ್ಲ ಕರೆದು
ಅನ್ನ ಹಾಕುವೆವು ಪರ ಸ್ಥಳದ ಮಂದಿಗೆ
ಕೇಳಲು ನೀವ್ಯಾರು ಎಮಗೆ ಎನುವ
ಕೆಲ ಖಾಸಗಿ ಆಡಳಿತ ಮಂಡಳಿಗೆ
ಗುಟ್ಟು ರಟ್ಟಾಗದಿರಲಿ ಎಂಬ ಸ್ವಾರ್ಥ
ತೋರಿಕೆಗೆ ಅದೇ ಒಣ ಪ್ರತಿಷ್ಠೆಯ ಅಸ್ತ್ರ

ಇದು ಇಂದು ನಿನ್ನೆಯದಲ್ಲ
ಬಲು ಹಳೆಯ ಗಿಳಿಪಾಠ
ಅವ್ಯಾಹತ ನಡೆದಿದೆ
ತೆರೆಮರೆಯ ದೌರ್ಜನ್ಯ
ಯಾಮಾರಿ ಗುಂಡಿಗೆ ಬಿದ್ದವರು
ಕಲಿವರು ಹೊಡೆತ ತಿಂದು ಪಾಠ

ಹಿಂಗು ತಿಂದ ಮಂಗ ಆದ್ರೂ
ಯಾರೂ ದನಿ ಎತ್ತಲೊಲ್ಲರು
ಪಾಲಕರ ಕಣ್ಣಿಗೂ ಮಣ್ಣು ಎರಚಿದೆ
ಒಣ ಪ್ರತಿಷ್ಠೆಯ ವ್ಯಾಮೋಹ
……………….

ಎಂಥಾ ಖೇದಕರ. ಇನ್ನೂ ಬದಲಾಗದ ಪರಿಸ್ಥಿತಿ – ಮನಸ್ಥಿತಿ. ಇದು ಕೇವಲ ಒಂದು ಸ್ಥಳಕ್ಕೆ ಸೀಮಿತವಾದ ಕಥೆಯಲ್ಲ. ಅಂದು ಬರೆದ ಅವರ ಕವನ ಇಂದಿಗೂ ಪ್ರಸ್ತುತ !?


Leave a Reply

Back To Top