ವಿಷಯ ತಿಳಿದ ಸೂಲಗಿತ್ತಿಯು ಲಗುಬಗೆಯಿಂದ ಓಡಿ ಬಂದು ಕಲ್ಯಾಣಿ ಇರುವ ಕೋಣೆಯೆಡೆಗೆ ಓಡಿದರು. ಎಲ್ಲಾ ತಯಾರಿಯೂ ಅತೀ ಶೀಘ್ರದಲ್ಲಿ ನಡೆದಿತ್ತು. ಕಲ್ಯಾಣಿಯು ನೋವು ಹಾಗೂ ಆಯಾಸದಿಂದ ಬಳಲಿದ್ದರು.  ದೊಡ್ಡ ಅತ್ತಿಗೆ ಗಾಳಿ ಬೀಸುತ್ತಾ  ತಲೆ ನೇವರಿಸಿ ಸಾಂತ್ವನ ಮಾಡುತ್ತಾ ಪಕ್ಕದಲ್ಲಿ ಕುಳಿತಿದ್ದರು. ಸೂಲಗಿತ್ತಿ ಬಂದವರೇ ಎಲ್ಲರನ್ನೂ ಹೊರಗೆ ಹೋಗುವಂತೆ ತಿಳಿಸಿ ಕಲ್ಯಾಣಿಯ ನಾಡಿ ಹಿಡಿದು ಪರೀಕ್ಷೆ ಮಾಡಿ ಚಿಂತಾಕ್ರಾಂತರಾದರು. ಆದರೂ ಹೊರಗೆ ತೋರಗೊಡದೇ ಕಲ್ಯಾಣಿಗೆ ಕೆಲವು ಸೂಚನೆಗಳನ್ನು ಕೊಟ್ಟರು. ಇನ್ನೂ ಒಂಭತ್ತು ತಿಂಗಳು ತುಂಬಿಲ್ಲ. ಆಗಲೇ ಪ್ರಸವ ವೇದನೆ ಹಾಗೂ ನೀರೆಲ್ಲಾ ಬತ್ತಿ ಹೋಗಿರುವುದರಿಂದ ಒಳಗೆ ಮಗು ನಿತ್ರಾಣವಾಗಿತ್ತು. 

ಕಲ್ಯಾಣಿ ಕೂಡಾ ತೀರಾ ಸೋತು ನಿತ್ರಾಣವಾದಂತೆ ಕಂಡರು. ಸೂಲಗಿತ್ತಿ ಜೊತೆಗೆ ತಂದಿದ್ದ ಗಿಡಮೂಲಿಕೆಯ ಕಷಾಯ ಮಾಡಿ ಕೊಡುವಂತೆ ಅತ್ತಿಗೆಯರಿಗೆ ಹೇಳಿ, ಮೊದಲು ಜೀರಿಗೆಯ ಕಷಾಯವನ್ನು ಕೊಡುವಂತೆ ಚಿಕ್ಕ ಅತ್ತಿಗೆಗೆ ಸೂಚಿಸಿದರು. ಅವರಿಗೆ ಬೇಕಾದ ಎಲ್ಲ ಸೌಕರ್ಯವನ್ನು ಮನೆಯಲ್ಲಿ ಒದಗಿಸಿ ಕೊಡಲಾಯಿತು. ಕಲ್ಯಾಣಿಗೆ ಬಿಟ್ಟು ಬಿಟ್ಟು ನೋವು  ಬರುತ್ತಾ ಇದ್ದಿದ್ದು ಸೂಲಗಿತ್ತಿಯ ಚಿಂತೆಗೆ ಕಾರಣವಾಯಿತು. ಏನು ಮಾಡುವುದು ಎಂದು ತೋಚದೇ ಎಲ್ಲಾ ದೇವರುಗಳನ್ನು ಮನದಲ್ಲಿ ನೆನೆದು ಪ್ರಾರ್ಥಿಸಿದರು. ಚಿಕ್ಕ ಅತ್ತಿಗೆ ತಯಾರಿಸಿದ ಕಷಾಯವನ್ನು ನಿಧಾನವಾಗಿ ಕುಡಿಸಿದರು. ಸ್ವಲ್ಪ ಹೊತ್ತಿಗೆಲ್ಲ ಕಲ್ಯಾಣಿಗೆ ಸೊಂಟದಲ್ಲಿ ಚಳುಕು ಹೊಡೆದಂತಾಗಿ ನೋವು ಹೆಚ್ಚಾಯಿತು. ನೋವು ಹೆಚ್ಚಾದಂತೆ ಅವರಿಂದ ಸಹಿಸಲು ಅಸಾಧ್ಯವಾಯಿತು. ವಿಪರೀತ ನೋವಿನಿಂದ ನರಳಿದರು. ಅವರ ನರಳಾಟ ನೋಡುತ್ತಾ ಸೂಲಗಿತ್ತಿಯ ಕಣ್ಣಲ್ಲೂ ನೀರು ಹನಿಗೂಡಿತು.

ಮನೆಯ ಸದಸ್ಯರೆಲ್ಲಾ ಕಲ್ಯಾಣಿಗಾಗಿ ಕುಲದೈವಕ್ಕೆ ಹರಕೆ ಹೊತ್ತರು. ಸ್ವಲ್ಪ ಹೊತ್ತಿಗೆಲ್ಲ ಮಗುವಿನ ಅಳುವಿನ ಧ್ವನಿ ಕೇಳಿತು. ಎಲ್ಲರೂ ಸಮಾಧಾನದ ನಿಟ್ಟುಸಿರು ಹೊರಚೆಲ್ಲಿದರು. ಕಲ್ಯಾಣಿಯ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದರು.

ಎಲ್ಲರಿಗೂ ಮಗು ಹಾಗೂ ತಾಯಿ ಆರೋಗ್ಯದಿಂದ ಇರುವರೇ ಎಂದು ತಿಳಿಯುವ ತವಕ. ಮಗುವಿನ ಅಳುವಿನ ದ್ವನಿ ಕೇಳಿ ಎಲ್ಲರೂ ಓಡೋಡಿ ಬಾಗಿಲ ಬಳಿ ಬಂದರು. ಮಗು ಯಾವುದೆಂದು ತಿಳಿಯುವ ಕುತೂಹಲ ಎಲ್ಲರಿಗೂ ಇದ್ದರೂ ಕೇಳಲಿಲ್ಲ.   ಸೂಲಗಿತ್ತಿಯು ಎಲ್ಲರನ್ನೂ ಒಮ್ಮೆ ನೋಡಿ ಮಗು ಹೆಣ್ಣೆಂದು ನಗುತ್ತಾ ಸಂತೋಷದಿಂದ ತಿಳಿಸಿದರು. ದೊಡ್ಡ ಅತ್ತಿಗೆಗೆ ಕಲ್ಯಾಣಿಯನ್ನು ನೋಡಿಕೊಳ್ಳಲು ತಿಳಿಸಿ ಮಗುವನ್ನು ಸ್ನಾನ ಮಾಡಿಸಲು ಎತ್ತಿಕೊಂಡು ಹೋದರು. ದೊಡ್ಡ ಅತ್ತಿಗೆ ಅಲ್ಲಿ ಬಂದು ಅರೆ ಪ್ರಜ್ಞಾವಸ್ತೆಯಲ್ಲಿ ಇದ್ದ ಕಲ್ಯಾಣಿಯನ್ನು ಕಂಡು ಗಾಭರಿಯಾದರು. ಕಣ್ಣು ಕೂಡಾ ಪೂರ್ತಿ ತೆರೆಯಲು ಅವರಿಂದ ಸಾಧ್ಯವಾಗುತ್ತಾ ಇರಲಿಲ್ಲ. ಅತ್ತಿಗೆಯು ಬೀಸಣಿಗೆ ಯಿಂದ ಗಾಳಿ ಬೀಸಿ ಬೆವರುತ್ತಾ ಇದ್ದ ಕಲ್ಯಾಣಿಯ ಮುಖ ಕುತ್ತಿಗೆಯನ್ನು ಟವೆಲ್ ನಿಂದಾ ಒರೆಸಿ, ತಂಗಿಯನ್ನು ಕರೆದು ಸ್ವಲ್ಪ ಬೆಚ್ಚಗಿನ ಕುಡಿಯುವ ನೀರನ್ನು ತರಲು ಅಡುಗೆ ಮನೆಗೆ ಕಳುಹಿಸಿದರು. ಸ್ವಲ್ಪ ಹೊತ್ತಿಗೆಲ್ಲ ಸೂಲಗಿತ್ತಿಯು ಮಗುವನ್ನು ಸ್ನಾನ ಮಾಡಿಸಿ ತಂದು ಕಲ್ಯಾಣಿಯ ಪಕ್ಕದಲಿ ಮಲಗಿಸಿದರು. ಮುದ್ದಾದ ಮಗುವನ್ನು ಕಂಡು ಆ ಬಳಲಿಕೆಯಲ್ಲೂ ಕಲ್ಯಾಣಿಗೆ ಅತೀವ ಸಂತೋಷವಾಯಿತು.

ಮಗುವು ನೋಡಲು ಬಹಳ ಮುದ್ದಾಗಿ ಸುಂದರವಾಗಿತ್ತು. ಮಗುವು ತನ್ನ ಹಾಗೂ ಪತಿಯ ರೂಪವನ್ನು ಸಮನಾಗಿ ಹಂಚಿಕೊಂಡು ಹುಟ್ಟಿತ್ತು. ಉಳಿದ ನಾಲ್ಕು ಮಕ್ಕಳಿಗಿಂತ ಈ ಮಗುವು ಅತ್ಯಂತ ಸುಂದರವಾಗಿತ್ತು. ತಮ್ಮಿಬ್ಬರಿಗೆ ಜನಿಸಿದ ಈ ಮುದ್ದು ಮಗಳನ್ನು ಪತಿಗೆ ತೋರಿಸುವ ಇಚ್ಛೆಯು ಮನದಲ್ಲಿ ಬಹಳವಾಗಿ ಮೂಡಿತು. ಆದಷ್ಟು ಬೇಗ ಪತಿ ಹಾಗೂ ಮಕ್ಕಳ  ಬಳಿಗೆ ಹೋಗಬೇಕು ಎಂದು ನಿರ್ಧರಿಸಿದರು. ಅಣ್ಣಂದಿರು ಅವರು ಇರುವ ಊರನ್ನು ಹುಡುಕಿ ನನ್ನನ್ನು ಕಳುಹಿಸಬೇಕು ಎಂದುಕೊಂಡಾಗಲೇ ಅಲ್ಲವೇ ಈ ಸಿಹಿಸುದ್ದಿ ತಿಳಿದದ್ದು. ಈ ಸಿಹಿಸುದ್ದಿ ಪತಿ ಹಾಗೂ ಮಕ್ಕಳಿಗೆ ತಿಳಿದರೆ ಅದೆಷ್ಟು ಖುಷಿ ಪಡಬಹುದು ಎಂದು ನೆನೆದಾಗ ಅವರ ಬಳಲಿದ ಮುಖದಲ್ಲೂ ಸಂತಸದ ನಗೆ ಮೂಡಿ ಮಾಯವಾಯಿತು.

ಬಾಣಂತನ ಅತೀ ಮುತುವರ್ಜಿ ಹಾಗೂ ಕಾಳಜಿಯಿಂದ ಮುಂದುವರೆಯಿತು. ಮಗುವು ಬೆಳೆದಂತೆ ಅದರ ಒಂದೊಂದು ಚಲನವಲನ ನೋಡಿ ಎಲ್ಲರೂ ಹಿರಿಹಿರಿ ಹಿಗ್ಗಿದರು. ತೊಟ್ಟಿಲಿನ ಶಾಸ್ತ್ರವು ಹತ್ತಿರದ ಸಂಬಂಧಿಕರನ್ನು ಕರೆದು ಸರಳವಾಗಿ ಆಚರಿಸಿದರು. ನಾಣು ಹಾಗೂ ಮಕ್ಕಳ ಕೊರತೆ ಎದ್ದು ಕಾಣುತ್ತಾ ಇತ್ತು. ಬಂದವರು ಎಲ್ಲರೂ ಅವರು ಎಲ್ಲಿ ಎಂದು ಕೇಳುವವರೇ. ಅವರ ಪ್ರಶ್ನೆಗಳಿಗೆ ಉತ್ತರಿಸುವುದೇ ಕಲ್ಯಾಣಿಯ ಅಣ್ಣಂದಿರಿಗೆ  ಒಂದು ಸವಾಲಾಗಿತ್ತು.  ಏನು ಉತ್ತರಿಸುವುದು? ಹೇಗೆ ಉತ್ತರಿಸುವುದು? ಎಂಬ ಪ್ರಶ್ನೆ ಕಾಡುತ್ತಿತ್ತು. ದಿನ ಕಳೆದಂತೆ ಮಗುವಿನ ಬಾಲಲೀಲೆಗಳನ್ನು ನೋಡಿ ಎಲ್ಲರೂ ಆನಂದಿತರಾಗುತ್ತಾ ಇದ್ದರು. ಕಲ್ಯಾಣಿ  ಮಗುವಿನ ಆಟ ನೋಡಿ ಮನಸೋಲುತ್ತಾ ಇದ್ದರು. ಆದರೆ ಪತಿ ಹಾಗೂ ಮಕ್ಕಳ ನೆನಪಾಗಿ ಮ್ಲಾನವದನರಾಗುತ್ತಾ ಇದ್ದರು. ದಿನಗಳು ಕಳೆದಂತೆ ಕಲ್ಯಾಣಿಯು ಕೃಶರಾಗುತ್ತಾ ಬಂದರು. ಕಣ್ಣುಗಳು ಆಳಕ್ಕೆ ಹೋಗಿ ಕಣ್ಣಿನ ಸುತ್ತಾ ಕಪ್ಪು ವರ್ತುಲ ಗಾಢವಾಗಿ ಕಾಣಿಸಿಕೊಂಡಿತು.  ಪತಿ ಹಾಗೂ ಮಕ್ಕಳ ಚಿಂತೆಯಲ್ಲಿ ಅವರಿಗೆ ದಿನಗಳು ಬಹಳ ನಿಧಾನವಾಗಿ ಉರುಳುತ್ತಿರುವಂತೆ ಭಾಸವಾಗುತ್ತಿತ್ತು. ತನ್ನ ಆರೋಗ್ಯ ಹಾಗೂ ಊಟ ಉಪಚಾರಗಳ ಕಡೆ ಗಮನ ಹರಿಸದಿದ್ದರೂ

ಮಗುವನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾ ಇದ್ದರು.

ಒಂದೊಂದು ತಿಂಗಳು ಕಳೆಯುವುದು ಕೂಡಾ ದುಸ್ತರ ಎನಿಸಿತು. ಕಾಲಕ್ರಮೇಣ ಅವರಲ್ಲಿ ಅನಾರೋಗ್ಯ ಆಗಾಗ ಕಾಡ ತೊಡಗಿತು. ವೈದ್ಯರಲ್ಲಿ ತೋರಿಸಿದರೂ ಏನೂ ಪ್ರಯೋಜನವಾಗುತ್ತಾ ಇರಲಿಲ್ಲ. ಆದರೂ ಮಗುವನ್ನು ಮಾತ್ರ ಕಾಳಜಿಯಿಂದ ನೋಡಿಕೊಳ್ಳುವುದು ಬಿಡಲಿಲ್ಲ. ಈಗ ಮಗುವೇ ಅವರಿಗೆ ಎಲ್ಲಾ. ಪತಿ ಹಾಗೂ ಉಳಿದ ಮಕ್ಕಳನ್ನು ಅವಳಲ್ಲಿ ಕಾಣುವ ಪ್ರಯತ್ನ ಮಾಡುತ್ತಾ ಇದ್ದರು. ಮಗುವನ್ನು ತವರಿನ ಎಲ್ಲಾ ಸದಸ್ಯರೂ ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುತ್ತಾ ಇದ್ದರು. 

ಕಡೆಗೂ ನಾರಾಯಣನ್ ಇರುವ ಊರು ಕಲ್ಯಾಣಿಯ ಅಣ್ಣಂದಿರು ಪತ್ತೆ ಮಾಡುವಲ್ಲಿ ಸಫಲರಾದರು. ತಂಗಿಗಾಗಿ ಅವರ ಅವಿರತ ಪ್ರಯತ್ನ ಫಲ ಕೊಟ್ಟಿತು. ಆದರೆ ನಾಣು ಹಾಗೂ ಮಕ್ಕಳ ಸ್ಥಿತಿಗತಿಯ ಬಗ್ಗೆ ಯಾವುದೇ ವಿವರವೂ ಅವರಿಗೆ ಸಿಗಲಿಲ್ಲ. ಏಕೆಂದರೆ ನಾಣು ಕೇರಳದಿಂದ ಮನೆ ಆಸ್ತಿ ಮಾರಿದ ನಂತರ ಎಲ್ಲರಿಂದಲೂ ಸಂಬಂಧ ಕಡಿದು ಕೊಂಡಂತೆ ಬಾಳುವೆ ನಡೆಸುತ್ತಾ ಇದ್ದರು. ಅವರಿಗೆ ಅಪರಾಧ ಪ್ರಜ್ಞೆ ಕಾಡುತ್ತಾ ಇತ್ತು. ಅವರ ಈಗಿನ ಪರಿಸ್ಥಿತಿ ಎಲ್ಲರೂ ತಿಳಿದರೆ ಎಲ್ಲಿ ತನ್ನನ್ನು ಹೀಯಾಳಿಸುವರೋ ದೂರುವರೋ ಎಂಬ ಅವ್ಯಕ್ತ ಭಯದ ಭಾವ ಅವರನ್ನು ಎಲ್ಲರಿಂದಲೂ ದೂರ ಇರುವಂತೆ ಮಾಡಿತು. ಹಾಗಾಗಿ ಇಬ್ಬರೂ ಹೆಣ್ಣು ಮಕ್ಕಳ ಮದುವೆಗೆ ಕೂಡಾ ಯಾರನ್ನೂ ಆಮಂತ್ರಿಸಲಿಲ್ಲ. ತನ್ನ ತೀರಾ ಹತ್ತಿರದ ಸಂಬಂಧದವರಿಗೂ ಕೂಡಾ ಸಕಲೇಶಪುರದಲ್ಲಿ ಈಗ ತಾವು ಇರುವ ಸ್ಥಿತಿಯನ್ನು ತಿಳಿಸಲೇ ಇಲ್ಲ. ತೋಟ ಖರೀದಿಯ ಬಗ್ಗೆ ಸುಂದರ ಕನಸನ್ನು ಕಂಡಿದ್ದ ನಾಣುವಿಗೆ ಅದು ನನಸಾಗದೇ ತಾನು ಮೋಸ ಹೋಗಿರುವುದು ಅತ್ಯಂತ ನೋವಿನ ಸಂಗತಿಯಾಗಿತ್ತು. ಕೇರಳದ ಅಸ್ತಿ ಮನೆ ಎಲ್ಲವನ್ನೂ ಮಾರಿ ತೋಟ ಕೊಳ್ಳಲು ಸಕಲೇಶಪುರಕ್ಕೆ ಬಂದಾಗ ಇಂಥಹ ಒಂದು ಅನ್ಯಾಯ ತನಗೆ ಆಗುತ್ತದೆ ಎಂದು ಕನಸು ಮನಸಿನಲ್ಲಿ ಕೂಡಾ ಅವರು ಎಣಿಸಿರಲಿಲ್ಲ. ಯಾರಿಗೂ ಮುಖ ತೋರಿಸಲು ತಾನು ತಕ್ಕವನಲ್ಲ. ತನ್ನ ಅತ್ಯಂತ ಪ್ರೀತಿ ಪಾತ್ರಳಾದ ಮಡದಿ ಈ ಸ್ಥಿತಿಯಲ್ಲಿ ನನ್ನನ್ನು ಹಾಗೂ ಮಕ್ಕಳನ್ನು ಕಂಡರೆ ಎಷ್ಟು ನೊಂದುಕೊಳ್ಳುವಳೋ? ಎಂದು ತಿಳಿದು ಅವರಿಗೆ ಮುಖ ತೋರಿಸಲು ಕೂಡಾ ಹಿಂಜರಿದರು. ತನ್ನ ಪತ್ನಿಯನ್ನು ಇಲ್ಲಿನ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ನಂತರ ತನ್ನ ತಪ್ಪಿನಿಂದ ಆದ ಅಚಾತುರ್ಯಕ್ಕಾಗಿ ಕ್ಷಮೆ ಕೇಳಿ ತನ್ನ ಜೊತೆ ಮತ್ತೆ ಸಂಸಾರ ಮಾಡುವ ಇಂಗಿತ ತೋರಿದರೆ ಕರೆದು ಕೊಂಡು ಬರುವ ತೀರ್ಮಾನವನ್ನು ಮನದಲ್ಲಿ ಎಂದೋ ಮಾಡಿದ್ದರು. ಒಂಟಿ ಬಾಳು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಕಾಗದ ಪತ್ರಕ್ಕೆಂದು ಸ್ವಲ್ಪ ದೊಡ್ಡ ಮೊತ್ತದ ಹಣವನ್ನು ಪಡೆದ ಬ್ರೋಕರ್ ಕೂಡಾ ತಲೆ ಮರೆಸಿಕೊಂಡು ಮತ್ತೆ ಅವರ ಎದುರು ಕಾಣಿಸಿಕೊಳ್ಳಲೇ ಇಲ್ಲ. 


Leave a Reply

Back To Top