ಮಕ್ಕಳ ಸಂಗಾತಿ
ಜಯಲಕ್ಷ್ಮಿ ಕೆ. ಮಡಿಕೇರಿ
“ಹೆಚ್ಚುತ್ತಿರುವ ಮಕ್ಕಳ ಆತ್ಮಹತ್ಯೆ-ಹಿರಿಯರ ಪಾತ್ರ.”
ಹೊಸ ವರ್ಷದ ಸಂಭ್ರಮಾಚರಣೆಗೆ ತಾಯಿ ಅಡ್ಡಿ ಪಡಿಸಿದಳೆಂದು ನೇಣಿಗೆ ಶರಣಾದ ಯುವತಿ, ಪರೀಕ್ಷಾ ಕೊಠಡಿಯಲ್ಲಿ ಚೀಟಿ ಹಿಡಿದು ನಕಲು ಮಾಡುತ್ತಿದ್ದ ಸಂದರ್ಭದಲ್ಲಿ ಶಿಕ್ಷಕಿ ಗದರಿದಳೆಂದು ಬಹು ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕ, ಟಿ ವಿ ರಿಮೋಟ್ ಕೊಡಲಿಲ್ಲವೆಂದು ಕೆರೆಗೆ ಹಾರಿ ಪ್ರಾಣ ಬಿಟ್ಟ ಹುಡುಗಿ, ಅಪ್ಪ ಬೈಕ್ ಕೊಡಿಸಲಿಲ್ಲ ಎಂದು ವಿಷ ಕುಡಿದು ಅಸು ನೀಗಿದ ವಿದ್ಯಾರ್ಥಿ, ಜೆ. ಇ ಪರೀಕ್ಷೆ ಕಷ್ಟ ಇತ್ತು ಎಂದು ಫಲಿತಾಂಶಕ್ಕೂ ಮುನ್ನ ಇಹಲೋಕ ತ್ಯಜಿಸಿದ ವಿದ್ಯಾರ್ಥಿನಿ ಹೀಗೆ ಆತ್ಮಹತ್ಯೆಗೆ ಶರಣಾಗುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಚಿಕ್ಕ -ಪುಟ್ಟ ಸಮಸ್ಯೆಗಳನ್ನು ಕೂಡಾ ಎದುರಿಸಿ ಬದುಕಲಾಗದ ಸ್ಥಿತಿಗೆ ಮಕ್ಕಳು ತಲುಪಲು ಕಾರಣವೇನು? ತಾವು ಬಯಸಿದ್ದೆಲ್ಲವೂ ತಕ್ಷಣ ಸಿಗಬೇಕು.. ತಾವು ಅಂದುಕೊಂಡಂತೆ ಬಾಳಿನ ಪ್ರತಿ ಹೆಜ್ಜೆಯೂ ಸಾಗಬೇಕು.. ತಾವು ತಪ್ಪು ಮಾಡುವುದೇ ಇಲ್ಲ.. ಯಾರೂ ತಮ್ಮನ್ನು ತಿದ್ದುವಷ್ಟು ಜಾಣರಿಲ್ಲ… ಇದು ಇಂದಿನ ಬಹುತೇಕ ತರುಣ – ತರುಣಿಯರ ಮನೋಭಾವ. ಬದುಕು ಎಂದರೆ ಕೇವಲ ಸಂತೋಷಗಳ ಒಂದು ಮೊತ್ತ; ಕಷ್ಟ ಬರಲೇಬಾರದು ಎನ್ನುವ ಚಿಂತನೆ ಅವರಲ್ಲಿ ಮೂಡುವುದಾದರೂ ಹೇಗೆ? ಇಂದಿನ ಮಕ್ಕಳು ಈ ಮಟ್ಟಕ್ಕೆ ಸುಖ – ಸಂತೋಷ ವೈಭವೀ ಬದುಕಿನ ಬೆನ್ನೇರಿ ಸಾಗುವ ಕನಸು ಕಾಣುವಲ್ಲಿ ನಿರೀಕ್ಷೆ ವಿಫಲವಾದಾಗ ಜೀವನಕ್ಕೇ ವಿದಾಯ ಹೇಳುವಲ್ಲಿ ಹಿರಿಯರ, ಪೋಷಕರ ಪಾತ್ರ ಇದೆಯೇ..? ನಿಜಕ್ಕೂ ಇದು ಚಿಂತನಾರ್ಹ ವಿಚಾರ.
ನಾನು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ದಿನಗಳು. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಎಂಟು ಬಹುಮಾನಗಳು ನನ್ನ ಪಾಲಿಗೆ ಬಂದಿದ್ದವು. ವಾರ್ಷಿಕೋತ್ಸವದ ದಿನ ವೇದಿಕೆಯಲ್ಲಿ ಅತಿಥಿ ಗಣ್ಯರಿಂದ ಬಹುಮಾನ ಪಡೆದುಕೊಳ್ಳಲು ಹೊಸ ಬಟ್ಟೆಗಳನ್ನೇ ಧರಿಸಿ ಹೋಗುವುದು ಎಂದು ನಾವು ಗೆಳತಿಯರು ಸೇರಿ ಒಂದು ನಿರ್ಧಾರ ಮಾಡಿಕೊಂಡೆವು. ಗೆಳತಿಯರು ಮೊದಲೇ ಬಟ್ಟೆ ಖರೀದಿ ಮಾಡಿಯೂ ಆಗಿತ್ತು. ಮನೆಗೆ ಬಂದವಳೇ ನನ್ನ ಬೇಡಿಕೆಯನ್ನು ಅಪ್ಪ -ಅಮ್ಮನ ಮುಂದಿಟ್ಟೆ. ಹೊಸ ಬಟ್ಟೆ ಕೊಡಿಸಲು ಸಾಧ್ಯವಿಲ್ಲ ಎಂದರು. ಅತ್ತು ಕರೆದು ಸ್ವಲ್ಪ ರಂಪ ಮಾಡಿದೆ. ಉಹೂಂ ಅವರ ಮನ ಕರಗಲಿಲ್ಲ. ( ಆರ್ಥಿಕ ಸ್ಥಿತಿಯೂ ಚೆನ್ನಾಗಿರಲಿಲ್ಲ ). “ಕಾರ್ಯಕ್ರಮಕ್ಕೆ ಹೋಗುವುದೇ ಇಲ್ಲ” ಎಂದೆ. “ಸರಿ, ಹೋಗಬೇಡ” ಎಂದರು ತಣ್ಣಗೆ. ನಾನೂ ತೆಪ್ಪಗಾದೆ. ವಾರ್ಷಿಕೋತ್ಸವದ ದಿನ ಪೆಟ್ಟಿಗೆಯಲ್ಲಿ ಒಪ್ಪವಾಗಿ ಮಡಚಿ ಇಟ್ಟಿದ್ದ ಲಂಗ ರವಿಕೆ ತೊಟ್ಟುಕೊಂಡು ಹೋದೆ. ಹೊಸ ಬಟ್ಟೆ ತೊಟ್ಟುಕೊಂಡಿದ್ದ ಗೆಳತಿಯರೆಲ್ಲ ಝಗಮಗಿಸುತ್ತಿದ್ದುದನ್ನು ಕಂಡಾಗ ಕಣ್ಣಂಚಿನಲ್ಲಿ ಎರಡು ಹನಿಗಳು ಮೂಡಿಬಂದದ್ದು ಸತ್ಯ. ಆದರೆ ಎಂಟು ಬಹುಮಾನಗಳ ಜೊತೆಗೆ ಒಂದು ಚಾಂಪಿಯನ್ ಟ್ರೋಫಿ ನನ್ನ ಕೈಸೇರಿದಾಗ ವೇದಿಕೆಯಲ್ಲಿ ಇದ್ದ ಗಣ್ಯರೊಬ್ಬರು ಅವರ ಜೇಬಿನಲ್ಲಿದ್ದ ಹೀರೋ ಪೆನ್ ಒಂದನ್ನು ನನಗೆ ಕೊಟ್ಟರು. ಆಗಿನ ಆ ನನ್ನ ಸಂತೋಷಕ್ಕೆ ಸಮನಾಗಬಲ್ಲ ಸಂತಸ ಬೇರೊಂದಿರಲಿಲ್ಲ ಎನ್ನುವುದು ನನ್ನ ಹೃದಯದಾಳದಲ್ಲಿ ಉಳಿದ ಒಂದು ಸವಿನೆನಪಾದರೆ, ಬಯಸಿದ್ದೆಲ್ಲ ಬಯಸಿದಾಗಲೇ ಸಿಗುವುದಿಲ್ಲ ಎನ್ನುವುದು ನಾನು ಕಲಿತ ಪಾಠ.
ಮೇಲೆ ಹೇಳಿದಂತೆ ಹೊಸ ವರ್ಷದ ಆಚರಣೆಗೆ ಹೊರಗೆ ಹೋಗಬೇಕು ಎನ್ನುವ ಹಠ ಆ ತರುಣಿಗೆ ದಿಢೀರ್ ಬಂದ ಆಲೋಚನೆಯೇ? ಖಂಡಿತ ಅಲ್ಲ. ಈ ಮೊದಲು ಆಕೆಗೆ ಇಂತಹ ಪಾರ್ಟಿಗಳಿಗೆ ಹೋಗಲು ಅಮ್ಮ ಅವಕಾಶ ನೀಡಿದ್ದರಲ್ಲವೇ? ಮಕ್ಕಳ ಬುದ್ಧಿ ಬಲಿಯುವ ಮೊದಲೇ ಇಂತಹ ಸಂಸ್ಕೃತಿಗೆ ಒಗ್ಗಿಕೊಳ್ಳುವ ಹಾಗೆ ಅವರನ್ನು ಸ್ವತಂತ್ರವಾಗಿ ಬಿಟ್ಟು ಒಮ್ಮೆಗೆ ಅವರ ಅಭ್ಯಾಸ -ಹವ್ಯಾಸಗಳಿಗೆ ಕಡಿವಾಣ ಹಾಕಲು ಸಾಧ್ಯವೇ? ಮಕ್ಕಳನ್ನು ಚೆನ್ನಾಗಿ ಸಾಕುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ಅವರು ಕೇಳಿದ್ದನ್ನೆಲ್ಲ ಕೇಳಿದೊಡನೆ ತಂದು ಅವರ ಮುಂದಿರಿಸುವ ಬದಲಾಗಿ ಮೂಲಭೂತ ಆವಶ್ಯಕತೆಗಳನ್ನಷ್ಟೇ ಪೂರೈಸಿದ್ದರೆ ಇಂದು ನಿರಾಸೆಯಿಂದ ಕುಗ್ಗಿ ಬದುಕಿನಿಂದಲೇ ದೂರಾಗುವ ಪರಿಸ್ಥಿತಿಗೆ ಮಕ್ಕಳು ತಲುಪುತ್ತಿದ್ದರೇ? ಮಕ್ಕಳು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಓದುವ ವಾತಾವರಣವನ್ನು ಪೋಷಕರು ಕಲ್ಪಿಸಿ ಕೊಡಬೇಕು. ಮಕ್ಕಳ ಬಾಳಿನ ಗುರಿಯ ಬಗೆಗಿನ ನಿಲುವು ಎಷ್ಟು ಮುಖ್ಯವೋ, ಗುರಿಯೆಡೆಗೆ ಸಾಗುವ ಹೆಜ್ಜೆಗಳು ಪ್ರಾಮಾಣಿಕವಾಗಿರಬೇಕು ಎನ್ನುವುದು ಅಷ್ಟೇ ಮುಖ್ಯ. ಈ ಆಂತರಿಕ ಶಿಸ್ತು ಮನದಲ್ಲಿ ನೆಲೆಗೊಂಡಾಗ ನಕಲು ಮಾಡಿಯಾದರೂ ಅಂಕ ಗಳಿಸಬೇಕು ಎನ್ನುವ ಕೆಟ್ಟ ಹಂಬಲ ಮಕ್ಕಳಲ್ಲಿ ಮೂಡುವುದಿಲ್ಲ. ಅಂತೆಯೇ ಮಕ್ಕಳ ಬೌದ್ಧಿಕ ಸಾಮರ್ಥ್ಯಕ್ಕೂ ಮೀರಿ ಅವರಿಂದ ಸಾಧನೆಯನ್ನು ನಿರೀಕ್ಷಿಸುವುದು ಸಾಧುವಲ್ಲ.
ಇಂದು ‘ ಡಿಪ್ರೆಶನ್ ‘ಎನ್ನುವ ಭೂತ ಕೆಲವು ಮಕ್ಕಳನ್ನು ಕಾಡುತ್ತಿದೆ. ಮಾನಸಿಕ ಒತ್ತಡ ನಿಭಾಯಿಸಿಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಎಂದು ನಾವು ಅಂಕಗಳ ಬೆನ್ನು ಬಿದ್ದೆವೋ, ಎಂದು ಕೆಲ ಉದ್ಯೋಗಗಳಷ್ಟೇ ಶ್ರೇಷ್ಠ ಎನ್ನುವ ಭ್ರಮೆಯಲ್ಲಿ ಮುಳುಗಿ ಹೋದೆವೋ.. ಅಂದಿನಿಂದ ಮಕ್ಕಳಲ್ಲಿ ಅಸಹಾಯಕತೆ ಮೂಡಲಾರಂಭಿಸಿದೆ. ಪ್ರಾರ್ಥನೆ, ಧ್ಯಾನ, ಭಜನೆ, ಆಟ ಇವು ಅಂಕ ಗಳಿಕೆಗೆ ಮಾರಕ ಎನ್ನುವ ಮನೋಭಾವ ನಮ್ಮಿಂದ ದೂರಾಗಬೇಕು. 2023 ರಲ್ಲಿ ಸಂಭವಿಸಿದ ಆತ್ಮಹತ್ಯಾ ಪ್ರಕರಣಗಳಲ್ಲಿ ಶೇಖಡಾ 23.1 ರಷ್ಟು ಮಕ್ಕಳು 9 ರಿಂದ 19 ವರ್ಷದ ಒಳಗಿನವರು. ಬದುಕಿ ಬಾಳಲು ನೂರು ದಾರಿಗಳಿದ್ದರೂ ಇವರ ಪಾಲಿಗೆ ಅವೆಲ್ಲವೂ ಮುಚ್ಚಿದ್ದವು. ಗೆದ್ದಾಗ ಆನಂದಿಸುವಂತೆ ಸೋತಾಗ ಮೈ ಕೊಡವಿ ನಿಲ್ಲುವ ಆತ್ಮ ಸ್ಥೈರ್ಯವನ್ನು ನಾವು ಮಕ್ಕಳಲ್ಲಿ ಬೆಳೆಸಬೇಕಿದೆ. ನಮ್ಮ ಸುತ್ತಮುತ್ತ ನಗು ನಗುತ್ತಿರುವ ಜನರೆಲ್ಲ ಒಮ್ಮಿಂದೊಮ್ಮೆಲೇ ಸಂತೋಷದ ಗೋಪುರ ಕಟ್ಟಿ ನಿಂತವರೇನಲ್ಲ. ಹಗಲು -ರಾತ್ರಿಗಳಂತೆ ಸಂತೋಷ -ದುಃಖ ಸಹಜ ಎನ್ನುವ ಅಂಶ ಬಾಲ್ಯದಿಂದಲೇ ಮಕ್ಕಳಿಗೆ ಮನವರಿಕೆಯಾಗುತ್ತಾ ಸಾಗಬೇಕು. ‘ಅರ್ಥರೇಖೆ ಇದ್ದೇನು.. ಆಯುಸ್ಸು ರೇಖೆ ಇಲ್ಲದ ಮೇಲೆ?’ ಎಂಬ ವಚನದ ಸಾಲಿನಂತೆ ಯಾವ ಸಂಪತ್ತು, ಯಾವ ಕಲೆ ಗಳಿಸಿದರೇನು ಬದುಕುವ ಕಲೆಯೇ ಕರಗತವಾಗದಿದ್ದ ಮೇಲೆ?ಮನೆಯಲ್ಲಿ ಕಷ್ಟವಿದ್ದರೂ ಅದರ ಅರಿವು ಮಕ್ಕಳ ಗಮನಕ್ಕೆ ಬಾರದಂತೆ, ಮಕ್ಕಳಿಗೆ ಕಷ್ಟ ಎಂದರೆ ಏನೆಂದೇ ತಿಳಿಯದಂತೆ ನಾವು ಪೋಷಕರು ಮಕ್ಕಳನ್ನು ಬೆಳೆಸುತ್ತೇವೆ. ಅದಕ್ಕೇ ಇಂದಿನ ಮಕ್ಕಳಿಗೆ ಎದುರಾಗುವ ಪುಟ್ಟ ಸಮಸ್ಯೆಗಳು ಕೂಡಾ ಬೆಟ್ಟವಾಗಿ ಕಾಣುವುದು. ಕಷ್ಟ -ನೋವುಗಳನ್ನು ಎದುರಿಸದೆ ಮನಸ್ಸು ಮಾಗುವುದಿಲ್ಲ ಎನ್ನುವ ವಿಚಾರವನ್ನು ನಾವು ಮಕ್ಕಳಿಗೆ ಅರ್ಥೈಸಿಕೊಡುವಲ್ಲಿ ವಿಫಲರಾಗಿದ್ದೇವೆ. ಮಕ್ಕಳಿಗೆ ಬೆಂಬಲ ನೀಡಬೇಕು ನಿಜ, ಆದರೆ ಅವರ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅವರಲ್ಲಿ ಸ್ವಂತಿಕೆಯನ್ನೇ ಬೆಳೆಯಗೊಡದಿರುವ ಪ್ರವೃತ್ತಿ ಖಂಡಿತ ಸಲ್ಲದು.
ಕೆಲವೊಂದು ಮಕ್ಕಳಿಗೆ ತಮ್ಮ ತಪ್ಪುಗಳನ್ನು, ಶಾಲೆಯಲ್ಲಿ ನಡೆಯುವ ಘಟನೆಗಳನ್ನು ತಮಗೆ ಬೇಕಾದಂತೆ ತಿರುಚಿ ಹೇಳುವ ಚಾಕಚಕ್ಯತೆ ಇರುತ್ತದೆ. ಅಂತಹ ಮಕ್ಕಳ ಪೋಷಕರು, “ನನ್ನ ಮಗು ಡಿಪ್ರೆಶನ್ ಗೆ ಹೋಗುತ್ತೆ.. ಶಿಕ್ಷಕರು ಬೈಯುತ್ತಾರೆ ” ಎಂದು ಆರೋಪಿಸಿ ಶಿಕ್ಷಕರನ್ನು ವೃತ್ತಿಯಿಂದ ವಜಾಗೊಳಿಸಿದ ಉದಾಹರಣೆಗಳೂ ಉಂಟು. ಮಕ್ಕಳ ಜೀವನದುದ್ದಕ್ಕೂ ಅವರ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಸಾಮರ್ಥ್ಯ ನಮಗಿದೆಯೇ? ಸಂತನೋ, ಸಾಧಕನೋ, ಅಪರಾಧಿಯೋ… ಅವರ ಕೌಟುಂಬಿಕ ಹಿನ್ನೆಲೆ, ಬೆಳೆದ ವಾತಾವರಣದ ಒಡಗೂಡಿ ಬಂದ ಸಂಸ್ಕಾರ ಖಂಡಿತವಾಗಿ ಮಕ್ಕಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪ್ರಭಾವ ಬೀರುತ್ತವೆ. ಆದ ಕಾರಣ ಮೌಲ್ಯಗಳೊಂದಿಗೆ ಶಿಕ್ಷಣ ಪಡೆಯುವಲ್ಲಿ, ಬದುಕುವ ಕಲೆಗಾರಿಕೆಯನ್ನು ರೂಪಿಸಿಕೊಳ್ಳುವಲ್ಲಿ ಮಕ್ಕಳ ಮೇಲೆ ಪೋಷಕರ ಪಾತ್ರ ಇದ್ದೇ ಇರುತ್ತದೆ. ಮಕ್ಕಳು ದೇಶದ ಅಮೂಲ್ಯ ಆಸ್ತಿ. ಅವರಲ್ಲಿ ಆತ್ಮವಿಶ್ವಾಸದ ಕೊರತೆಯಾಗದಂತೆ, ನಿರಾಸೆ, ಹತಾಶೆಗಳು ಅವರನ್ನು ಕಾಡಂತೆ, ಕೀಳರಿಮೆಗೆ ಅವರ ಮನಸು ಕುಗ್ಗಿ ಹೋಗದಂತೆ, ಸರಿ – ತಪ್ಪುಗಳನ್ನು ತೂಗಿ ನೋಡಲಾಗದ ಅತಂತ್ರ ಸ್ಥಿತಿಗೆ ಅವರು ತಲುಪದಂತೆ, ಭವಿಷ್ಯದ ಬಗೆಗಿನ ಅಸುರಕ್ಷತಾ ಭಾವಕ್ಕೆ ಅವರು ಬಲಿಯಾಗದಂತೆ ಕಾಯುವ ಗುರುತರ ಜವಾಬ್ದಾರಿಯನ್ನು ಪೋಷಕರು, ಶಿಕ್ಷಕರು ಹಾಗೂ ಸಮಾಜ ಹೊರಬೇಕಿದೆ. “ಮನಸೊಂದಿದ್ದರೆ ಮುಗಿಲಿಗೇ ಕೈ ಹಚ್ಚಬಹುದು ” ಎನ್ನುವ ಧೈರ್ಯ-ಭರವಸೆಗಳನ್ನು ಮಕ್ಕಳಲ್ಲಿ ಬೆಳೆಸೋಣ. ತನ್ಮೂಲಕ ಮಕ್ಕಳ ಮನಸ್ಸು ಪಕ್ವತೆಯತ್ತ ಸಾಗಿ ಅವರು ದೇಶದ ಅಪೂರ್ವ ಸಂಪತ್ತಾಗಲಿ ಎಂದು ಆಶೀಸೋಣ.
ಜಯಲಕ್ಷ್ಮಿ ಕೆ. ಮಡಿಕೇರಿ