ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರತಿಯೊಬ್ಬರ ಮನಸ್ಸು ಯಾವಾಗಲೂ ದ್ವಂದ್ವ ರೀತಿಯಲ್ಲಿಯೇ ಆಲೋಚನೆ ಮಾಡುತ್ತದೆ. ಒಂದು ರೀತಿಯಲ್ಲಿ ಧನಾತ್ಮಕವಾಗಿ ಯೋಚಿಸಿದರೆ, ಇನ್ನೊಂದು ಕಡೆ ಋಣಾತ್ಮಕವಾಗಿ ಆಲೋಚನೆ ಮಾಡುತ್ತಲಿರುತ್ತದೆ. ಇದಕ್ಕೆಲ್ಲ ಪ್ರಮುಖ ಕಾರಣವೇನೆಂದರೆ ನಮ್ಮ ಮನಸ್ಥಿತಿಯೇ ಹೊರತು ಪರಿಸ್ಥಿತಿಯಂತೂ ಕಾರಣವಾಗಲಾರದು. ಹೀಗಾಗಿ ನಮ್ಮ ಮನಸ್ಸೇ ನಮಗೆ ಆಪ್ತಮಿತ್ರನಾಗಬಹುದು ಅಥವಾ ಪರಮವೈರಿಯಾಗಲೂ ಬಹುದು. ಆದ್ದರಿಂದ ನಮ್ಮ ಮನಸ್ಸಿನ ಆಲೋಚನೆಗಳೇ ನಮ್ಮ ನೈಜ ವ್ಯಕ್ತಿತ್ವಕ್ಕೆ, ನೆಮ್ಮದಿಯ ಬದುಕಿಗೆ ಸಾಕ್ಷಿಯಾಗುತ್ತವೆ.
     ನನ್ನಿಂದ ಈ ಕೆಲಸ ಸಾಧ್ಯವಾಗುತ್ತದೆ. ನಾನು ಮಾಡುತ್ತೇನೆಂದು ಮನಸ್ಸು ಮಾಡುವುದರಲ್ಲಿ ಖಂಡಿತವಾಗಿಯೂ ಅದು ಎಷ್ಟೇ ಕಷ್ಟದ ಕೆಲಸ ಇದ್ದರೂ ಕೂಡಾ ಸುಲಭವಾಗಿ ಮಾಡುತ್ತೇವೆ. ಅದೇ ರೀತಿಯಾಗಿ ನಮ್ಮಿಂದ ಈ ಕೆಲಸ ಆಗುವುದಿಲ್ಲ ಎಂದು ನಾವೇ ಪೂರ್ವಾಗ್ರಹ ಪೀಡಿತರಾಗಿ ನಿರ್ಧಾರ ಮಾಡಿ ಬಿಟ್ಟರೆ, ಆಗ ಸುಲಭದ ಕೆಲಸವೂ ಕೂಡಾ ಕಬ್ಬಿಣದ ಕಡಲೆಯ ಹಾಗೆ ಕಠಿಣವಾಗುತ್ತಾ ಹೋಗುತ್ತದೆ. ಆದ್ದರಿಂದ ನಮ್ಮ ಮನಸ್ಸಿನ ಧೃಡ ಸಂಕಲ್ಪವೇ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳಿಗೆ ಪ್ರಮುಖ ಕಾರಣವಾಗುತ್ತಿದೆ..!!
 ಕೈಲಾಗದು ಎಂದು ಕೈಕಟ್ಟಿ ಕುಳಿತರೆ

ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾರ್ಗವು ಉಂಟು

ಕೆಚ್ಚೆದೆ ಇರಬೇಕೆಂದೆಂದು..!!

ಎಂದು ನಮ್ಮ ವರನಟ ಡಾ|| ರಾಜಕುಮಾರ ಹಾಡಿರುವ ಹಾಡಿನ ಸಾರಾಂಶವನ್ನು ಅರಿತುಕೊಂಡರೆ ಖಂಡಿತವಾಗಿಯೂ ನೆಗೆಟಿವ್ ಆಲೊಚನೆಗಳಿಂದ ಮುಕ್ತರಾಗಿ ಫೀನಿಕ್ಸ್ ನಂತೆ  ಎದ್ದುಬಂದು ಏನನ್ನಾದರೂ ಸಾಧಿಸಬಹುದು ಅನ್ನೋದ್ರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.ನಾವು ಯಾವಾಗಲೂ ನೆಗೆಟಿವ್ ಆಲೋಚನೆಗಳಿಂದ ಹೊರಬರುವುದು ಹೇಗೆ ಎನ್ನುವುದನ್ನು ನೋಡುವುದಕ್ಕಿಂತ ಮುಂಚೆ ಈ ನೆಗೆಟಿವ್ ಆಲೋಚನೆಗಳಿಗೆ ಕಾರಣವೇನೆಂಬುದನ್ನು ಪತ್ತೆಹಚ್ಚಬೇಕಾಗುತ್ತದೆ.
  ನಿಂತ ನೀರಿನಲ್ಲಿಯೇ ಸೊಳ್ಳೆಗಳು ಹೇಗೆ ಬೆಳೆಯುತ್ತವೆಯೋ, ಅದೇ ರೀತಿ ಕೆಲಸವಿಲ್ಲದೆ ಖಾಲಿ ಕುಳಿತ ಮನುಷ್ಯನಲ್ಲಿ ನೆಗೆಟಿವ್ ಆಲೋಚನೆಗಳು ಸಹಜವಾಗಿ ಬಂದೇ ಬರುತ್ತವೆ ಹಾಗೂ ಬೆಳೆಯುತ್ತಲೇ ಇರುತ್ತವೆ. ಕ್ರಿಯೆಟಿವ್ ಕೆಲಸಗಳಲ್ಲಿ ತೊಡಗಿಸಿಕೊಳ್ಳದೆ ಟೈಂಪಾಸ್ ಮಾಡುವ ಆಲಸಿ ವ್ಯಕ್ತಿಯಲ್ಲಿಯೂ ಕೂಡಾ ನೆಗೆಟಿವ್ ಆಲೋಚನೆಗಳು ಹೆಚ್ಚಾಗಿ ಕಂಡುಬರುತ್ತವೆ. ಸದ್ಯಕ್ಕೆ ಕೈಯಲ್ಲಿರುವ ಕೆಲಸ ಮಾಡದೆ ಅನಾವಶ್ಯಕವಾಗಿ ಚಿಂತಿಸುತ್ತಾ ಕಾಲಹರಣ ಮಾಡುವುದರಿಂದ ವ್ಯಕ್ತಿಯಲ್ಲಿ ನೆಗೆಟಿವ್ ಆಲೋಚನೆಗಳು ದಿನೇ ದಿನೇ ಹೆಚ್ಚಾಗತೊಡಗುತ್ತವೆ. ಈ ನೆಗೆಟಿವ್ ಆಲೋಚನೆಗಳು ನಿಮ್ಮ ಅಪಯಶಸ್ಸಿಗೆ ನೇರವಾಗಿ ಕಾರಣವಾಗುತ್ತವೆ. ನಿಮ್ಮ ನೆಮ್ಮದಿಯನ್ನು ಬೇರು ಸಮೇತ ಕಿತ್ತುಕೊಳ್ಳುತ್ತವೆ.

  ಆದ್ದರಿಂದ ಇಂಥ ನೆಗೆಟಿವ್ ಆಲೋಚನೆಗಳನ್ನು ನೀವು ಹೊಡೆದುರುಳಿಸಲೇಬೇಕು.
ಇಲ್ಲದಿದ್ದರೆ ನೀವು ವಿನಾಶದತ್ತ ದಾಪುಗಾಲನ್ನಿಡುತ್ತಿದ್ದೀರಿ ಎಂದೇ ಪ್ರತಿಬಿಂಬಿತವಾಗುತ್ತದೆ.
ಈ ನೆಗೆಟಿವ್ ಆಲೋಚನೆಗಳಿಂದ ಹೊರಬಂದು ಹೇಗೆ ಬದುಕಬೇಕು ಎನ್ನುವುದಕ್ಕೆ
ಇಲ್ಲಿ ಒಂದಷ್ಟು ಅತ್ಯತ್ತಮವಾದ ಒಳ್ಳೆಯ ಸಲಹೆಗಳಿವೆ. ಅವುಗಳನ್ನು ಪಾಲಿಸಿಕೊಂಡು ಬಂದದ್ದಾದರೆ ಖಂಡಿತವಾಗಿಯೂ ನಾವು ನೆಗೆಟಿವ್ ಪರಿಣಾಮದಿಂದ ಹೊರಬರಬಹುದಾಗಿದೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಇದುವೇ ನಮ್ಮ ನೆಮ್ಮದಿಗೆ ಕಾರಣವಾಗಿ ಸುಖ ಜೀವನಕ್ಕೆ ಖಂಡಿತವಾಗಿಯೂ ಪ್ರೇರಣೆಯಾಗಿ ಸಂಜೀವಿನಿಯಂತಾಗುತ್ತದೆ.

೧) ಇನ್ನೊಬ್ಬರಿಗೆ ನಮ್ಮನ್ನು ನಾವು ಹೋಲಿಕೆ ಮಾಡಿಕೊಂಡಾಗಲೇ ಮನಸ್ಸು ಜುಗುಪ್ಸೆಯಿಂದ ಪ್ರಾರಂಭವಾಗಿ ಅದು ಋಣಾತ್ಮಕತೆಗೆ ಮೊದಲ ಹೆಜ್ಜೆಯಾಗಲಿದೆ‌.
೨) ಇನ್ನೊಬ್ಬರ ಏಳ್ಗೆಯನ್ನು ಕಂಡು ಹೊಟ್ಟೆಕಿಚ್ಚು ಮಾಡಿಕೊಳ್ಳದೆ ಅವರ ಸಾಧನೆಗೆ ಪ್ರೋತ್ಸಾಹಿಸಲಾಗದಿದ್ದರೂ ಪರವಾಗಿಲ್ಲ ಕಾಲೆಳುವ ಕೆಲಸ ಮಾಡುವ ಯೋಚನೆಗಳೇ ನೆಗೆಟಿವ್ ಪರಿಣಾಮ ಬೀರಲು ಸನ್ನದ್ಧವಾಗುತ್ತದೆ.  

೩) ಎಂತದ್ದೆ ಒತ್ತಡ ಇದ್ದರೂ ಕೂಡಾ ತಾಳ್ಮೆ, ಸಹನೆಯಿಂದ  ನಿಭಾಯಿಸುವ ಕಲೆಯನ್ನು ಬೆಳೆಸಿಕೊಳ್ಳಬೇಕೆ ಹೊರತು ಅದನ್ನೇ ದೊಡ್ಡದಾಗಿ ಮಾಡಿಕೊಂಡು ಪರಿತಪಿಸುವಂತಾಗಬಾರದು.
 ೪) ದಿನವೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ವಾಯುವಿಹಾರಕ್ಕೆ ತೆರಳುವ ಒಂದೊಳ್ಳೆಯ ಅಭ್ಯಾಸವನ್ನು ರೂಡಿಮಾಡಿಕೊಳ್ಳಿ. ಸಾಧ್ಯವಾದ್ರೆ ವ್ಯಾಯಾಮ, ಯೋಗವನ್ನು ಮಾಡಿ.
೫)ನಿಮಗಿಷ್ಟಗಿರುವ ಯಾವುದಾದರೂ ಒಂದೊಳ್ಳೆಯ ಹವ್ಯಾಸವನ್ನು ಕ್ರಮಬದ್ಧವಾಗಿ ಮಾಡುತ್ತಾ ಬನ್ನಿ. ಇದು  ಯಾವಾಗಲೂ ಖುಷಿ ಖುಷಿಯಾಗಿರಲು ಪ್ರೇರಣೆ ನೀಡುತ್ತದೆ.
೬)ನಗುವು ಒಂದು ದಿವ್ಯೌಷಧವಾಗಿ ನಮ್ಮ ದೇಹಕ್ಕೆ ಕಾರ್ಯವೆಸಗುತ್ತದೆ. ಹಾಗಾಗಿ ಯಾವಾಗಲೂ ನಗುನಗುತ್ತಾ ಇರಿ.
೭) ನಿಮ್ಮ ಸುತ್ತಮುತ್ತಲಿರುವ ಶಕುನಿಗಳಿಂದ ಸ್ವಲ್ಪವಾಗಿ ದೂರವೇ ಇದ್ದುಬಿಡಿ. ಯಾವಾಗಲೂ ಕೆಟ್ಟ ಸುದ್ದಿಗಳನ್ನೇ ನಿಮ್ಮ ಕಿವಿಗೆ ತುಂಬುವವರಿಂದ ತುಂಬಾ  ದೂರವಿರಿ. ನಿಮ್ಮ ಸುತ್ತಲೂ ಪೊಸಿಟಿವ್ ಜನರನ್ನು ಇಟ್ಟುಕೊಳ್ಳಿ. ಒಳ್ಳೆಯ ವ್ಯಕ್ತಿಗಳ ಗೆಳೆತನ ಮಾಡಿ. ಏಕೆಂದರೆ ನೀವು ನಿಮ್ಮ ಸುತ್ತಲಿರುವ 5 ವ್ಯಕ್ತಿಗಳ ಸರಾಸರಿಯಾಗಿರುತ್ತೀರಿ.
೮) ಒಳ್ಳೆಯ ನೀರು, ಗಾಳಿ, ಆಹಾರವನ್ನು ಸೇವಿಸಿ. ಒಳ್ಳೆಯದನ್ನು ಯೋಚಿಸಿ, ಒಳ್ಳೆಯದನ್ನು ಮಾತಾಡಿ ಮತ್ತು ಸದಾಕಸಲವೂ ಒಳ್ಳೆಯದನ್ನೇ ಮಾಡುತ್ತಿರಿ.
೯) ಈ ಜಗತ್ತಿನಲ್ಲಿ ಯಾರು ಕೂಡ 100% ಪರಿಪೂರ್ಣರಲ್ಲ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಿ. ನಿಮ್ಮ ದುರ್ಬಲತೆಗಳ ಬಗ್ಗೆ ಸುಮ್ಮನೆ ಚಿಂತಿಸಿ ಕಾಲ ಹರಣ ಮಾಡುವ ಬದಲು, ನಿಮ್ಮ ಶಕ್ತಿ ಸಾಮರ್ಥ್ಯಗಳ ಮೇಲೆ ಸರಿಯಾಗಿ ನಂಬಿಕೆ ಇಟ್ಟುಕೊಂಡು ಅವುಗಳನ್ನು ಚೆನ್ನಾಗಿ ಫೋಕಸ್ ಮಾಡಿ.
೧೦) ಮೊದಲು ನಿಮ್ಮ ಒಂಟಿತನವನ್ನು ಸಾಯಿಸಿ. ಯಾವುದೇ ಕಾರಣಕ್ಕೂ ಒಂಟಿಯಾಗಿರಲು ಪ್ರಯತ್ನಿಸಬೇಡಿ. ಭಾರತ ವಿಶಾಲವಾಗಿದೆ, ಸ್ವಲ್ಪ ಹೊರಗಡೆ ಸುತ್ತಾಡಿ. ನಿಮ್ಮ ಒಂಟಿತನದೊಂದಿಗೆ ನಿಮ್ಮ ಆಲಸಿತನವನ್ನು ಸಾಯಿಸಿ.
೧೧) ನಿಮ್ಮ ಮೇಲೆ ಬರುವ ಆಪಾದನೆಗಳನ್ನು, ನಿಂದನೆಗಳನ್ನು ತಿರಸ್ಕರಿಸಿ ಬಿಡಿ. ಅವುಗಳಿಂದ ನೀವು ವಿಚಲಿತರಾಬೇಡಿ. ನೀವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನೀವು ಸ್ವತಂತ್ರ ಭಾರತದಲ್ಲಿರುವಿರಿ. ನಿಮ್ಮ ಸಂರಕ್ಷಣೆಗೆ ನಮ್ಮ ಬಲಿಷ್ಠ ಸಂವಿಧಾನವಿದೆ. ನಿಮ್ಮ ಕೆಲಸಗಳಿಂದ, ಸಾಧನೆಗಳಿಂದ, ಒಳ್ಳೆಯ ವಿಚಾರಗಳಿಂದ ನಿಂದಕರ ಬಾಯಿಗೆ ಬೀಗ ಜಡಿಯಿರಿ.
೧೨) ಅರ್ಥಹೀನ ಸುದ್ದಿಗಳನ್ನು, ಪ್ರಯೋಜನಕ್ಕೆ ಬಾರದ ರಾಜಕೀಯ ದ್ವೇಷಗಳನ್ನು ಬಿತ್ತರಿಸಿ ನಿಮ್ಮ ತಲೆ ಕೆಡಿಸುವ ಸ್ಟೂಪಿಡ ನ್ಯೂಸ್ ಚಾನೆಲಗಳನ್ನು, TRP ಶೋಗಳನ್ನು ನೋಡಲೇಬೇಡಿ. ಅದರ ಬದಲಾಗಿ ಒಳ್ಳೆಯ ಪುಸ್ತಕಗಳನ್ನು ಓದಿ.
೧೩) ಮೂರ್ಖರ ಮೂರ್ಖ ಪ್ರಶ್ನೆಗಳಿಂದ, ಪ್ರಯೋಜನಕ್ಕೆ ಬಾರದ ರಾಜಕೀಯ ಚರ್ಚೆಗಳಿಂದ ನಿಮ್ಮ ಮಾನಸಿಕ ನೆಮ್ಮದಿಯನ್ನು ಕೆಡಿಸಿಕೊಳ್ಳಬೇಡಿ. ಅಂಥವುಗಳಿಂದ ದೂರವಿರಿ.
ಈ ಎಲ್ಲ ಉಪಾಯಗಳು ನೆಗೆಟಿವ್ ಆಲೋಚನೆಗಳನ್ನು ಕೊಲ್ಲುವಲ್ಲಿ 100% ಯಶಸ್ವಿಯಾಗುತ್ತವೆ.
೧೪) ಆಗಾಗ ದೇವಸ್ಥಾನಗಳಿಗೆ ಬೇಟಿ ನೀಡಿ. ದೇವರ ಧ್ಯಾನದ ಮೂಲಕವೂ ಕೂಡಾ ನಾವು ನೆಗೆಟಿವ್ ಅಲೋಚನೆಗಳಿಂದ ಹೊರಬರಬಹುದಾಗಿದೆ ಎಂಬುದನ್ನು ಮನಃಶಾಸ್ತ್ರವು ಒಪ್ಪಿಕೊಂಡಿದೆ.
೧೫) ನಿಮ್ಮಲ್ಲಿರುವುದನ್ನು ಸಾಧ್ಯವಾದ ಮಟ್ಟಿಗೆ ದಾನವಾಗಿ ನೀಡುವುದನ್ನು ರೂಡಿಸಿಕೊಳ್ಳಿ. ಇದು ಮನಃಶಾಂತಿಗೆ ಕಾರಣವಾಗಿ ಧನಾತ್ಮಕ ಅಂಶಗಳನ್ನು ಪ್ರೇರೆಪಿಸುತ್ತದೆ.
೧೬)ಸಾಧ್ಯವಾದಷ್ಟು ಮಟ್ಟಿಗೆ ಸಮಾಜಮುಖಿ ಒಳ್ಳೆಯ ಕೆಲಸ-ಕಾರ್ಯಗಳನ್ನು ಮಾಡುತ್ತಾ ಸಾಗಿದಾಗ ನೆಗೆಟಿವ್ ಆಲೋಚನೆಗಳು ತನ್ನಿಂತಾನೇ ಕೊಲ್ಲಲ್ಪಡುತ್ತವೆ.

ಹೀಗಾಗಿ ಈ ಎಲ್ಲ ಅಂಶಗಳನ್ನು ಅನುಸರಿಸುತ್ತಾ ಬಂದದ್ದಾದರೆ ಖಂಡಿತವಾಗಿಯೂ ಎಲ್ಲರೂ ನೆಗೆಟಿವ್ ಆಲೋಚನೆಗಳಿಂದ ಹೊರಬಂದು ನೆಮ್ಮದಿಯಾಗಿರುತ್ತೀರಿ. ಬದುಕಿನ ಸತ್ಯಾಸತ್ಯತೆಯನ್ನು ಅರಿಯಲು ಈ ಅಂಶಗಳು ಸಹಾಯಕವಾಗುತ್ತವೆ. ಆಗ ಮನಸ್ಸು ಒಳ್ಳೆಯ ಕೆಲಸಗಳನ್ನು ಮಾಡುತ್ತಲೇ ಇದ್ದು ಪ್ರಫುಲ್ಲತೆಯಿಂದ ಅರಳಿದಂತಾಗಿ ಸಂತಸದ ಬದುಕಿಗೆ ಕಾರಣವಾಗಿ ಧನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಮನುಕುಲದ ಒಳಿತಿಗಾಗಿ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತೀರಿ. ಮನಸ್ಸು ಹಗುರವಾದಂತಾಗಿ ಆಹ್ಲಾದಕರ ಭಾವಗಳು ಮೈದಳೆದು ಋಣಾತ್ಮಕ ಅಂಶಗಳನ್ನು ಕಿತ್ತೊಗೆಯಲು ಸಾಧ್ಯವಾಗಿ, ಧನಾತ್ಮಕ ಅಂಶಗಳು ಮೈ-ಮನಗಳಲ್ಲಿ ಮೇಳೈಸಿಕೊಳ್ಳಲು ಕಾರಣವಾಗುತ್ತದೆ. ಆಗ  ನಮ್ಮ ಬದುಕು ಸುಂದರವಾಗಿ ಕಾಣಿಸುತ್ತದೆ. ಜಗತ್ತು ಕೂಡಾ ಒಂದು ಸೃಷ್ಟಿಯ ಅದ್ಭುತವಾಗಿದ್ದು ಇದರಲ್ಲಿ ನಾನು ಸುಖಿಯಾಗಿದ್ದೇನೆ, ನೆಮ್ಮದಿಯಾಗಿದ್ದೇನೆ ಎಂಬ ಪ್ರಮುಖ ಅಂಶವೇ ನೆಗೆಟಿವ್ ಆಲೋಚನೆಗಳಿಂದ ಮುಖ್ಯ ಕಾರಣವಾಗಿ ಹೊರಬರಲು ಕಾರಣವಾಗುತ್ತದೆ. ಆದ್ದರಿಂದ ನಾವು ಋಣಾತ್ಮಕತೆಯಲ್ಲೂ ಧನಾತ್ಮಕವಾಗಿ ಚಿಂತನೆ ಮಾಡುವಂತಹ ಶ್ರೇಷ್ಠ ಗುಣಗಳನ್ನು ಬೆಳೆಸಿಕೊಂಡು ಬಂದದ್ದಾದರೆ ಮತ್ತೊಬ್ಬರಿಗೆ ಆರೋಗ್ಯಕರವಾಗಿ, ಮಾದರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನೆಮ್ಮದಿಯೇ ಇಲ್ಲ ಎನ್ನುವುದಕ್ಕೆ ಪರಿಹಾರವೂ ಕೂಡಾ ಇದರಲ್ಲಿಯೇ ಸಿಗುತ್ತದೆ ಎಂಬುದು ಅನುಭವಸ್ಥ ಮನಃಶಾಸ್ತ್ರಜ್ಞರ ಧೋರಣೆಯಾಗಿದೆ.


About The Author

Leave a Reply

You cannot copy content of this page

Scroll to Top