ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬೀಗುವ ಭಿಕಾರಿಗಳು..!

ಸೂರ್ಯೋದಯ, ಅಸ್ತಮ ನಮ್ಮಿಂದಲ್ಲ
ಹಗಲು ಇರುಳಿನ ನಿಯಂತ್ರಣ ನಮಗಿಲ್ಲ
ಋತು ಬದಲಾವಣೆ ನಮ್ಮ ಅಂಕೆಯಲಿಲ್ಲ
ಭೂತ ವರ್ತಮಾನ ಭವಿಷ್ಯ ಯಾವುದರ
ಕಾಲಚಕ್ರ ಧರ್ಮ ಮರ್ಮವೂ ತಿಳಿದಿಲ್ಲ.!

ಜನನದಾದಿಯ ಪರಿಚಯದ ಅರಿವಿಲ್ಲ
ಮರಣದ ನಂತರವೇನೆಂಬ ಅಂದಾಜಿಲ್ಲ
ಬದುಕಿನ ಅವಧಿ ಪರಿಧಿಯ ಸ್ಪಷ್ಟತೆಯಿಲ್ಲ
ಯಕಃಶ್ಚಿತ್ ಮುಂದಿನಾ ಕ್ಷಣಗಳ ಕಲ್ಪನೆ
ಸೂಚನೆ ಏನೊಂದೂ ಎಂದು ನಮಗಿಲ್ಲ.!

ಆಡುವ ಭಾಷೆಯು ನಮ್ಮಿಂದುದಿಸಿದ್ದಲ್ಲ
ಬರೆಯುವ ಲಿಪಿಯು ನಮ್ಮಿಂದಾದದ್ದಲ್ಲ
ಯಾವೊಂದು ಶಬ್ಧಕೂ ಪ್ರೇರಣ ನಾವಲ್ಲ
ಎದೆಯ ಭಾವ-ಭಾಷ್ಯಗಳ ಅಭಿವ್ಯಕ್ತಿಸುವ
ಪದ ಅಕ್ಷರದುಗಮಕೆ ಕಾರಣವು ನಾವಲ್ಲ.!

ಬಯಲಿನ ಬುತ್ತಿಯ ಕಾಳು ನಮದಲ್ಲ
ಹೊನಲಿನ ನೀರಿನ ಹನಿಯು ನಮದಲ್ಲ
ಬೀಸುವ ಗಾಳಿಯ ಕಣವೂ ನಮದಲ್ಲ
ಪಂಚೇಂದ್ರಿಯ ಪೆÇರೆವ ಪಂಚಭೂತಗಳು
ಕೇಳು ಗೆಳೆಯ ಇಲ್ಲಿ ನಮ್ಮದಲ್ಲವೇ ಅಲ್ಲ.!

ಅವ ಮಾಡಿದ ದೇಹ ಅವ ನೀಡಿದ ಜೀವ
ಅವನೇ ಒಳ ಹೊರಗಿಟ್ಟ ಉಸಿರು ಹಸಿರು
ಜಗದೆಲ್ಲ ಕಣ-ಕಣದಲು ಅವನದೇ ಹಕ್ಕು
ಕಾರುಣ್ಯದಿ ಅವನಿತ್ತ ಬದುಕಿನ ಭಿಕ್ಷೆಯಲಿ
ಆತ್ಮರತಿಯಲಿ ಮೆರೆವ ನಮದೆಂತ ಸೊಕ್ಕು.!

ಸಮಸ್ತವು ನಮದೆಂಬ ದರ್ಪದಲಿ ಎಲ್ಲಕು
ನಾವೇ ಮಿಗಿಲೆಂಬ ಅಹಮ್ಮು ಆರ್ಭಟದಲಿ
ಠೇಂಕರಿಸಿ ಹೂಂಕರಿಸಿ ಬೀಗುವೆವು ನಾವು.!
ವಾಸ್ತವದ ಪರಿವಿರದೆ ಸತ್ಯಗಳ ಅರಿವಿರದೆ
ಕಡೆಗೊಮ್ಮೆ ಬಿದ್ದು ನೆಲಕಚ್ಚಿ ಅನಾಥ ಸಾವು.!


Leave a Reply

Back To Top