ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೊ. ಸಂ. ಶಿ. ಭೂಸನೂರಮಠ (ನವೆಂಬರ್ ೭, ೧೯೧೦ – ನವೆಂಬರ್ ೬, ೧೯೯೧) ಕನ್ನಡ ಸಾಹಿತ್ಯಲೋಕದ ಮಹಾನ್ ಸಾಹಿತಿಗಳಲ್ಲೊಬ್ಬರು. ಅವರ ‘ಶೂನ್ಯ ಸಂಪಾದನೆಯ ಪರಾಮರ್ಶೆ’ ಮತ್ತು ‘ಭವ್ಯ ಮಾನವ’ ಮುಂತಾದ ಕೃತಿಗಳು ಕನ್ನಡದ ಶ್ರೇಷ್ಠ ಸಾಹಿತ್ಯಕ ಕೊಡುಗೆಗಳೆನಿಸಿವೆ.

ಜೀವನ

ಪ್ರೊ. ಸಂ. ಶಿ. ಭೂಸನೂರಮಠರು ಹುಟ್ಟಿದ್ದು ನವಂಬರ್ ೭, ೧೯೧೦ರಂದು ಧಾರವಾಡ ಜಿಲ್ಲಾ ರೋಣ ತಾಲ್ಲೂಕಿನ ನಿಡಗುಂದಿಯಲ್ಲಿ ಜನಿಸಿದರು. ಪೂರ್ಣ ಹೆಸರು ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ.

ತಂದೆಯವರ ಅಲ್ಪ ಸ್ವಲ್ಪ ಕೃಷಿ ಮತ್ತು ವ್ಯಾಪಾರಗಳಿಂದ ಹೊಟ್ಟೆಪಾಡು ನಡೆಯುತ್ತಿತ್ತು. ಆದರೆ ಶಿಕ್ಷಣಕ್ಕೆ ಹಣದ ಅಭಾವ. ಬಾಲಕ ಸಂಗಯ್ಯ ಗದಗಿನಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ಪಂಪ್ ಒತ್ತುವ ಕೆಲಸ ಗಿಟ್ಟಿಸಿಕೊಂಡ. ಅದರಿಂದ ತುತ್ತಿನ ಚೀಲಕ್ಕೆ ತಾತ್ಕಾಲಿಕ ತ್ತೃಪ್ತಿಯೇನೋ ಸಿಕ್ಕಿತು. ಆದರೆ ಮನಸ್ಸಿಗೆ, ಬುದ್ಧಿಗೆ ನೆಮ್ಮದಿ ದೊರೆಯಲಿಲ್ಲ. ಕಲಿಯಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದ ಆ ಬಾಲಕನಿಗೆ ದೈವ, ಮಾನವ ರೂಪದಲ್ಲಿ ಬಂದು ನೆರವಾಯಿತು. ಗದಗಿನಲ್ಲಿ ಇಂಗ್ಲೀಷ್ ಶಾಲೆಯಲ್ಲಿ ಅಧ್ಯಯನ ಮತ್ತು ಮನೆಯಲ್ಲಿ ಸಂಗೀತ ಶಿಕ್ಷಣ ಎರಡೂ ಕ್ರಮವಾಗಿ ನಡೆದವು. ಓದುತ್ತಿರುವಾಗಲೇ ಮದುವೆಯೂ ಆಯಿತು. ೧೯೩೧ರಲ್ಲಿ ಮೆಟ್ರಿಕ್ ಮುಗಿಯುವ ವೇಳೆಗೆ ತಂದೆ ತೀರಿಕೊಂಡರು. ಕುಂಟುತ್ತಾ ನಡೆದಿದ್ದ ಶಿಕ್ಷಣಕ್ಕೆ ಸೊಂಟ ಮುರಿದಂತಾಯಿತು. ಆದರೂ ಪ್ರತಿಭಾವಂತ ವೇತನ ದೊರೆಯಿತು. ಎ. ಟಿ. ಸಾಸನೂರ, ಪತ್ರಾವಳಿ, ಸ.ಸ. ಮಾಳವಾಡ, ಕೆ.ಜಿ. ಕುಂದಣಕರ ಮೊದಲಾದ ಗುರುಗಳ ಕೃಪೆ ಮತ್ತು ಆಶೀರ್ವಾದಗಳ ಬೆಂಬಲದಿಂದ ಬಿ.ಎ ಮುಗಿಸಿ ಕೊಲ್ಲಾಪುರದ ಕಾಲೇಜಿಗೆ ಸೇರಿ, ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಗಳಿಸಿದರು.

ಬೆಳಗಾವಿಯ ಲಿಂಗರಾಜಾ ಕಾಲೇಜು, ಮತ್ತು ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದ ಭೂಸನೂರಮಠರು.ಇಪ್ಪತ್ತು ಮೂರು ವರ್ಷಗಳವರೆಗೆ ಲಿಂಗರಾಜಾ ಕಾಲೇಜಿನಲ್ಲಿ ಸೇವೆಸಲ್ಲಿಸಿ ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾದರು. ೧೯೭೬ರಲ್ಲಿ ನಿವೃತ್ತಿ ಹೊಂದಿದರು.

ಸಾಹಿತ್ಯ ಕೃಷಿ
ಪ್ರೊ. ಸಂ.ಶಿ. ಭೂಸನೂರಮಠರ ಕೃತಿಗಳು ಸಂಖ್ಯೆಯಲ್ಲಿ ಕಿರಿಯವು. ಸತ್ವದಲ್ಲಿ ಹಿರಿಯವು. ಇವರು ಕೃತಿಗಳು ಒಟ್ಟು ಹದಿಮೂರು. ಅವುಗಳಲ್ಲಿ ‘ಶೂನ್ಯ ಸಂಪಾದನೆಯ ಪರಾಮರ್ಶೆ’ ಮತ್ತು ‘ಭವ್ಯಮಾನವ’ ಸೃಜನಾತ್ಮಕ ಕೃತಿಗಳು; ಉಳಿದವು – ‘ಭಕ್ತಿ ಸುಧಾರಸ’, ‘ಗುರುರಾಜ ಚಾರಿತ್ರ’, ‘ಮೋಳಿಗೆ ಮಾರಯ್ಯ’, ಮತ್ತು ‘ರಾಣಿ ಮಹಾದೆವಿಯರ ವಚನಗಳು’ (ರೆ. ಉತ್ತಂಗಿ ಚೆನ್ನಪ್ಪನವರೊಡನೆ). ‘ಮೋಳಿಗಯ್ಯನ ಪುರಾಣ’, ‘ಲಿಂಗ ಲೀಲಾ ವಿಳಾಸ ಚಾರಿತ್ರ’, ‘ಪ್ರೌಡರಾಯನ ಕಾವ್ಯ’, ‘ಶೂನ್ಯಸಂಪಾದನೆ’, ‘ವಚನ ಸಾಹಿತ್ಯ ಸಂಗ್ರಹ’, ‘ಏಕೋತ್ತರ ಶತಸ್ಥಲ’, ‘ಶೂನ್ಯಸಂಪಾದನೆಯ ಪರಾಮರ್ಶೆಯ ಸಂಗ್ರಹ’, ‘ಶೂನ್ಯಸಂಪಾದನೆ’ (ಇಂಗ್ಲೀಷ್ ಅನುವಾದದ ನಾಲ್ಕು ಸಂಪುಟಗಳು) – ಇವು ಸಂಪಾದಿತ ಕೃತಿಗಳು.

‘ಪರಾಮರ್ಶೆ’ ಗೂಳೂರ ಸಿದ್ಧವೀರಣ್ಣ ಒಡೆಯನ ‘ಶೂನ್ಯಸಂಪಾದನೆ’ ಗೆ ಬರೆದ ಒಂದು ವಿಶಿಷ್ಟ ವ್ಯಾಖ್ಯಾನ. ಭೂಸನೂರಮಠರಿಗೆ ‘ಶೂನ್ಯಸಂಪಾದನೆ’ ಒಂದು ಕಮನೀಯ ಕಾವ್ಯವಾಗಲೀ ಅಥವಾ ಒಂದು ಧರ್ಮ-ಧರ್ಶನಗಳನ್ನು ಎತ್ತಿ ಹಿಡಿಯುವ ಪಠ್ಯಪುಸ್ತಕವಾಗಿಯಾಗಲಿ ಗೋಚರಿಸಿಲ್ಲ. ಮಾನವನಲ್ಲಿ ವಿಶ್ವಮಾನವ ಪ್ರಜ್ನೆಯನ್ನು ಯುಗಯುಗಕ್ಕೂ ಜಾಗೃತಗಳಿಸಬಲ್ಲ ಸತ್ವಶಾಲೀ ರಚನೆಯಾಗಿ ಕಂಡಿದೆ. ಜೀವ-ದೇವರ ಐಕ್ಯಾನು ಸಂಧಾನದ ಅನಿರ್ವಚನೀಯ ಪರಿಣಾಮದ ಪ್ರಾಪ್ತಿ ಅಲ್ಲಿ ಕಂಡಿದೆ. ಭುವಿಯಲ್ಲಿ ಆವಿರ್ಭವಿಸಿದ ಆತ್ಮವು ಸ್ವಯಂ ಸಾಹಸದಿಂದ ವಿಕಾಸಗೊಂಡು, ಕ್ರಮೇಣ ಅರಿವು ಮರೆವುಗಳೆರಡನ್ನೂ ನೀಗಿಕೊಂಡು ನಿರ್ಮಲ ನಿರಂಜನ ಜ್ಯೋತಿಯಾಗಿ, ಕಡೆಯಲ್ಲಿ ನಾದಬಿಂದು ಕಳಾತೀತವಾದ ಮಹೋನ್ನತಿಯ ಮಜಲಿನಲ್ಲಿ ‘ಶಿವ’ ಅಥವ ‘ಶೂನ್ಯ’ ಆಗುವ ಬೃಹದ್ದರ್ಶನ ಅಲ್ಲಿ ಬಿತ್ತರಗೊಂಡಿದೆ. ಅದು ಅನುಭಾವದ ಕೆನೆ, ಅಧ್ಯಾತ್ಮದ ತೆನೆ. ಶೂನ್ಯ ಸಂಪಾದನೆಯದು ಅಧ್ಯಾತ್ಮ ಸಾಹಿತ್ಯ. ಪರಾಮರ್ಶೆಯದು ದರ್ಶನ ವಿಮರ್ಶೆ; ಅದು ಶಬ್ಧದೊಳಗಣ ನಿಶ್ಯಬ್ದ, ಇದು ನಿಷ್ಯಬ್ದಗರ್ಭಿತ ಶಬ್ದರೂಪ. ಪ್ರಭುದೇವರ ಶೂನ್ಯಸಂಪಾದನೆಯನ್ನು ಸೃಜನಾತ್ಮಕ ಕಾವ್ಯ ಎಂದು ಕರೆಯುವುದಾದರೆ, ಭೂಸನೂರಮಠರ ‘ಪರಾಮರ್ಶೆ’ಯನ್ನು ಒಂದು ಸೃಜನಾತ್ಮಕ ವಿಮರ್ಶೆ ಎಂದು ಘೋಷಿಸಬಹುದು.

ಭೂಸನೂರಮಠರು ‘ಭವ್ಯಮಾನವ’ ಕಥೆಯನ್ನು ಇತಿಹಾಸದಿಂದಲೇ ಆಯ್ದಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಬದುಕು ಮಾಡಿದ ಮಹಾಮಾನವರಲ್ಲಿ ಒಬ್ಬರಾದ ಅಕ್ಕನ ಆಧ್ಯಾತ್ಮ ಜೀವನವನ್ನು ಕೈಗೆತ್ತಿಕೊಂಡಿದ್ದಾರೆ. ಅಕ್ಕನವರ ಅತ್ಯಂತ ಜನಪ್ರಿಯ ಕಥೆಗೆ ಗುರುಚೆನ್ನಮಲ್ಲ ಮತ್ತು ಶಿಷ್ಯ ಗಿರಿಮಲ್ಲರ ಕಥೆಗಳನ್ನು ಜೋಡಿಸಿದ್ದಾರೆ. ಗುರುಮಲ್ಲರು ಲೋಕಲೋಕಗಳನ್ನು, ಕಲೆ ವಿಜ್ಞಾನಗಳನ್ನು ಬಲ್ಲ ಮೇಧಾವಿ ಪುರುಷರಾಗಿ ಇಲ್ಲಿ ಚಿತ್ರಿತರಾಗಿದ್ದಾರೆ. ಅವರ ಭೋಧೆಯಲ್ಲಿ ನಯವಿದೆ. ನೀತಿಯಿದೆ, ವಿಜ್ಞಾನವಿದೆ, ವೈಚಾರಿಕತೆ ಇದೆ. ಅವರು ವಿಚಾರವಾದಿಗಳು; ಅಷ್ಟೇ ಮಟ್ಟದ ತ್ರಿಕಾಲ ಜ್ಞಾನಿಗಳು; ಭವ್ಯ ಮಾನವ ಪ್ರಜ್ಞೆ ಉಳ್ಳವರು. ಸಮಷ್ಟಿಯ ವೃಷ್ಟಿ ರೂಪ ಅಥವಾ ವ್ಯಕ್ತರೂಪ, ಗುರುಮಲ್ಲರ ಅನುಭವ, ಅಕ್ಕನವರ ಅನುಭಾವ, ಗಿರಿಮಲ್ಲರ ಅನುಷ್ಠಾನ ಇವುಗಳಿಂದ ಮುಪ್ಪರಿಗೊಂಡಿದೆ ಈ ಮಹಾಕಾವ್ಯ.

ತನ್ನರಿವು ತನಗಿಲ್ಲ, ತನ್ನಿರವು ತನಗಿಲ್ಲ ತನ್ನೊಳಗೆ ತಿರುಗಾಡಿ ಬಾಳುವೆಯ ನಡೆಸಿರುವ ವಿಶ್ವಬ್ರಹ್ಮಾಂಡಗಳ ತನ್ನ ಸಂಪದದರಿವು ತನಗಿಲ್ಲ ತನಗಿಲ್ಲ ಕೋಟಿ ನೇತ್ರದ ಕುರುಡು ಆಕಾಶ ಬ್ರಹ್ಮ ರಾತ್ರಿಯ ಮಹಾಕತ್ತಲೆಗೆ

ಅಂತಹ ಕತ್ತಲೆಯ ಕಾಂಡದಿಂದ ಕಲ್ಯಾಣದೆಡೆಗೆ ಬರಬೇಕು.

ಜಗದ್ದೇಶ್ಯ ನಿಜಃ ಕಾಯಃ ಸ್ವಯಂ ಬ್ರಹ್ಮೇತಿ ವೇದನಾತ್ (ಯಾವಾಗ ತಾನೇ ಬ್ರಹ್ಮ ಎಂಬ ಅರಿವು ಮೂಡಿತೋ ಆಗಲೇ ಜಗತ್ತು ತನ್ನ ಕಾಯ ಆಯಿತು).

ಅಂದ ಬಳಿಕ ಜಗತ್ತಿನ ಯಾವುದೋ ಮೂಲೆಯಲ್ಲಿ ಏನೋ ನೋವು ನಲಿವಾಗಲಿ, ಅದು ತನ್ನಲ್ಲಾದ, ತನಗಾದ ನೋವು, ನಲಿವು ಎಂಬ ಭಾವನೆ ಬಲಿಯಬೇಕು. ಪ್ರಾಣಿಪ್ರಪಂಚಕ್ಕಷ್ಟೇ ಅಲ್ಲ, ವೃಕ್ಷ ಪ್ರಪಂಚಕ್ಕೆ ನೋವಾದರೂ ತನಗೆ ನೋವಾದಂತೆ ಎಂದು ಭಾವಿಸಿ ಸಕಲಕ್ಕೂ ಸ್ಪಂದಿಸುವ ಮನೋಧರ್ಮ ಮೂಲಭೂತವಾದದ್ದಾಗಿರಬೇಕು. ವಿಶ್ವ ವಿಸ್ತಾರವೂ ತಾನು, ಬ್ರಹ್ಮಮಯನೂ ತಾನು ಎಂಬ ಭವ್ಯಭಾವನೆ ಇಲ್ಲಿನ ಭವ್ಯಮಾನವನದು.

ದೇಶ, ಭಾಷೆ, ಮತ, ಮತವನ್ನು ಬೆಂಬಲಿಸುವ ವಿಚಿತ್ರ ದೈವ ನಿರ್ಮಾಣ ಇವೆಲ್ಲವುಗಳಿಗೂ ಮಾನವ ಅತೀತನಾಗಬೇಕು. ಸಂಕುಚಿತತೆಯ, ಸಂಕೋಲೆಯಲ್ಲಿ ಸ್ಥಗಿತವಾಗಬಾರದು, ಅವನು ವಿಶ್ವಾತ್ಮನಾಗಬೇಕು, ವಿಶ್ವಮಾನವನೆನಿಸಬೇಕು. ಆದರೆ ವಾಸ್ತವಾತೆಯನ್ನು ಮರೆತು ಮೆರೆಯಬೇಕೆಂದು ಅರ್ಥವಲ್ಲ. ನೆಲ ಬಿಟ್ಟು ಸಾಧನೆ ಇಲ್ಲ, ಪಂಚಭೂತಗಳಾದ ಗಾಳಿ, ನೀರು, ನೆಲ, ಬೆಳಕು, ಆವರಣ ಇವುಗಳನ್ನು ಬಿಡಲು ಬರುವುದಿಲ್ಲ, ಅವುಗಳನ್ನೇ ಬಳಸಿಕೊಂಡು ಮಾನವ ಬೆಳೆಯಬೇಕು, ಬೆಳಗಬೇಕು.

“ಬಯಲು ಬೆಂಕಿಯನೋಡೆದು ನೀರು ಗಾಳಿಯ ಸೀಳಿ, ಮಣ್ಣ ಮುಚ್ಚಳ ತೆರೆದು ಮೂಡಿಹುದು ಮೂಡಿಹುದು, ಪ್ರಾಣವಿಲ್ಲದ ಪಂಚಭೂತ ಗರ್ಭವ ದಾಟಿ ಉದ್ಭವಿಸಿ ತೋರಿಹುದು ನವ್ಯ ನಿರ್ಮಾಣ ಎಂಬ ಪರಿಭಾವನೆಯೇ ಇಲ್ಲಿಯ ಭವ್ಯತೆಯಾಗಿದೆ. ಸಾಗರದ ತೆರೆ ಮಸಗಿ ಮುಖವನಪ್ಪಳಿಸಿದರು, ಮೀನು, ಮೊಸಳೆಗಳು ನುಂಗ ಬರಲಿ, ಬಿರುಗಾಳಿ ಬೀಸಲಿ ಆಕಾಶ ಗುಡುಗಲಿ, ಪ್ರಳಯ ಕಾಲದ ಮೋಡ ಒಡೆದು ಬೀಳಲಿ ಮೇಲೆ, ಕತ್ತಲೆಯ ಸಾಗರವನೀಸುತ್ತ ಮೇಲುಗಡೆ ನಿಜ ಬೆಳಗು ಮೆಲ್ಲಮೆಲ್ಲಗೆ ಕಂದೆರವ ಕಡೆ ಉರಿ ಬರಲಿ, ಸಿರಿ ಬರಲಿ, ದಿವ್ಯಭವ್ಯದ ಕಡೆ ಸರ್ವಾಂಗದೊಳು ತನ್ನ ಎಚ್ಚರದೊಳಿರ್ದು ಮೇಲೇರಿ ಈಸಿಹನು ನಿಜನಿರಾಲದ ಕಡೆ.

ಆದರಿಂದ ಶಿವ ಸರ್ವೋತ್ತಮನಲ್ಲ, ವಿಷ್ಣು ಸರ್ವೋತ್ತಮನಲ್ಲ, ಯಾವ ಕಲ್ಪನೆಯ ಕುಸುಮವೂ ಸರ್ವೋತ್ತಮವಲ್ಲ. ಮಾನವ ಸರ್ವೋತ್ತಮ. ಸರ್ವ ಶ್ರೇಷ್ಠ! ಅವನು ಬಯಲುಬ್ರಹ್ಮ, ವಿಯನ್ ಪುರುಷ, ವಿರಾಟ್ ಪುರುಷ.

ಶಿವನು ಆಡಿದ ಲೀಲೆ ಕೃಷ್ಣ ಮಾಡಿದ ಕ್ರೀಡೆ ಜೈನ ತೀರ್ಥಂಕರರು ಗೌತಮ ಮಹಾಬುದ್ಧ ಮನು ಮುನೀಶ್ವರ ತಪಸ್ವಿಗಳು ದೃಷ್ಟಾರರು ಕಣ್ಣ ಮುಂದಿರುವರೆ? ನಡೆ ನಡೆಯುತಿಹರೆಂತು? ವರ್ತಮಾನವು ಅಂತೆ ವರ್ಥಿಷ್ಯಮಾನವು ಹೀಗೆ ಮೂಡುತಹಲಿಹುದು ಬೆಳೆತಾಡುತಿಹುದೆಂತು?

ಇಂತಹ ನಿತ್ಯ ಸಾಕ್ಷಿಯಾಗಿ ನಿಂತಿಹನು ಮಾನವ. ಈ ಬಗೆಯ ಮಾನವ ಪಾರಮ್ಮ ಪ್ರತಿಪಾದನೆಯೇ ಭವ್ಯ ಮಾನವ ದರ್ಶನ ಅಥವಾ ಕವಿ ಕಂಡು ಕಂಡರಿಸಿದ ಆಧುನಿಕತೆ. ಇದು ಇಂದು ಇದ್ದು, ನಾಳಿನ ಕಡೆಗೆ ಕೈಚಾಚುವಂತಹುದು. ಇದು ಹೊಸಗನ್ನಡದ ಹೊಸ ಕಾವ್ಯ.

ಹೀಗೆ ವೈಜ್ಞಾನಿಕ ಸಂಪಾದನೆ, ತಲಸ್ಪರ್ಶಿ ಅಧ್ಯಯನ, ಪ್ರಾಮಾಣಿಕ ಅಭಿವ್ಯಕ್ತತೆ, ವಸ್ತು ನಿಷ್ಟತೆಗಳಿಂದಾಗಿ ಪ್ರೊ. ಭೂಸನೂರಮಠ ಅವರು ದಾರ್ಶನಿಕ ಕವಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ವಿಶಿಷ್ಟ ಸೇವೆಗಳು

ಭೂಸನೂರಮಠ ಅವರು ಕರ್ನಾಟಕ, ಮುಂಬಯಿ, ಪುಣೆ, ಶಿವಾಜಿ, ಮೈಸೂರು, ಬೆಂಗಳೂರು, ಉಸ್ಮಾನಿಯ, ಮತ್ತು ಕೇರಳ ವಿಶ್ವವಿದ್ಯಾಲಯಗಳ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷರಾಗಿ, ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ – ಕನ್ನಡ ಪರಿಷ್ಕೃತ ನಿಘಂಟಿನ ಸಂಪಾದಕ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಪ್ರಶಸ್ತಿ ಗೌರವಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಂತಹ ಅನೇಕ ಗೌರವಗಳು ಪ್ರೊ.ಭೂಸನೂರಮಠ ಅವರಿಗೆ ಸಂದಿವೆ.

ವಿದಾಯ
ತಮ್ಮ ಸರಳತೆ, ಸಜ್ಜನಿಕೆ, ಸ್ನೇಹಪರತೆ ಮತ್ತು ಸಾತ್ವಿಕ ನಡೆನುಡಿಗಳಿಂದಾಗಿ ಶಿಷ್ಯರು, ಗೆಳೆಯರಿಗೆಲ್ಲ ಆತ್ಮೀಯರಾಗಿದ್ದು ಶ್ರೀಯುತರು ತುಂಬು ಸಾರ್ಥಕ ಜೀವನ ನಡೆಸಿ 6-11-1991ರಂದು, ಧಾರವಾಡದ ಪ್ರಶಾಂತ ಪರಿಸರದಲ್ಲಿರುವ ತಮ್ಮ ಮನೆ ಪರಂಜ್ಯೋತಿಯಲ್ಲಿ ಶಿವೈಕ್ಯರಾದರು.

ಆಕರ

ಖ್ಯಾತ ಸಂಶೋಧಕ ಪ್ರೊ ಶಿ ಶಿ ಭೂಸನೂರಮಠ-  ಡಾ ಶಶಿಕಾಂತ ಪಟ್ಟಣ


About The Author

2 thoughts on “ಸಾವಿಲ್ಲದ ಶರಣರು- ಭವ್ಯ ಮಾನವʼಖ್ಯಾತ ಸಂಶೋಧಕ ಪ್ರೊ ಶಿ ಶಿ ಭೂಸನೂರಮಠʼ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ”

  1. ಒಂದೊಳ್ಳೆಯ ಅದ್ಭುತವಾದ ವಿಷಯ ಸಂಪತ್ತು
    ತಮ್ಮಿಂದ ಮೂಡಿ ಬಂದಿದೆ ಸರ್… ನಿಮ್ಮ ಸಾವಿಲ್ಲದ
    ಶರಣರು ಮಾಲಿಕೆಯ ವಿಸ್ತಾರತೆ ಎಲ್ಲರನ್ನೂ
    ಬೆರಗುಗೊಳಿಸುತ್ತದೆ

    ಸುತೇಜ

Leave a Reply

You cannot copy content of this page

Scroll to Top