‘ಹೀಗೊಂದು ಸಭೆಯ… ಮಹತ್ವ…’-ರಮೇಶ ಸಿ ಬನ್ನಿಕೊಪ್ಪ

  • ಅಲ್ಲೊಂದು ಸಭೆ ನೆಡೆದಿತ್ತುಎಲ್ಲರೂ ತಮ್ಮ ತಮ್ನ ಬಗ್ಗೆಗರ್ವ, ಹೆಮ್ಮೆಯಿಂದ ಬೀಗುತ್ತಿದ್ದವು.ಚರ್ಮ, “ಕಷ್ಟದಲ್ಲಿದ್ದವರಿಗೊಂದು ಮೃದುವಾದ ಸ್ಪರ್ಷ,  ಎಲಬು, ಹಂದರ, ರಕ್ತ ಮಾಂಸಗಳ ಹೊದಿಕೆ…!! ನಾನೇ ಶ್ರೇಷ್ಠ” ಎಂದಿತು.ತಟ್ಟನೆ ನಾಲಿಗೆ, “ಅಯ್ಯೋ ನಾನೇನು ಕಡಿಮೆ, ಮೃದುವಾದ ಮಾತುಗಳು, ರುಚಿಯ ಸ್ವಾದ, ನನ್ನಿಂದಲೇ ಲೋಕದ ವ್ಯವಹಾರವೆಂದಿತು” ಅಹಂಕಾರದಿಂದ.ಸುಮ್ಮನಿರದ ಕಣ್ಣು, “ಲೋಕವನ್ನು ತೋರಿಸುವ, ದೃಶ್ಯವನ್ನು ಹಿಡಿದಿಡುವ,ನಾನಿಲ್ಲದಿದ್ದರೇ, ನೀವೇ ಉಯಿಸಿಕೊಳ್ಳಿ…ನನ್ನ ಅವಶ್ಯಕತೆಯ…” ಹಿರಿ ಹಿರಿ ಹಿಗ್ಗುತಾ ನುಡಿಯಿತು.ಸುಮ್ಮನಿದ್ದ ಕಿವಿ ಮೆಲ್ಲಗೆ ಉಸಿರಿತು, “ಲೋಕದ ಮಾತುಗಳಿಗೆ ಬೆಲೆ ಕೊಡುವೆ, ಕಷ್ಟಗಳಿಗೆ ಸ್ಪಂದಿಸುವ ದೊಡ್ಡತನ ನನ್ನದೆಂದು” ಉಸುರಿತು.ಸಭೆಯಲ್ಲಿ ಕಾಲು, ಕೈ, ಕಿಡ್ನಿ,ಶ್ವಾಸಕೋಶ….. ಹೀಗೆ ಎಲ್ಲವೂ ತಮ್ಮ ತಮ್ಮ ಬಗ್ಗೆ ಜಂಭ ಕೊಚ್ಚಿಕೊಂಡು ಗಹಗಹಿಸಿ ನಗುತ್ತಿದ್ದವು.ಸಭೆಯಲ್ಲಿ ಸುಮ್ಮನಿದ್ದ ಮತ್ತೊಬ್ಬರು ಮೆಲ್ಲಗೆ, “ನಿಮ್ಮ ನಿಮ್ಮ ಕಾರ್ಯ ಮಾಡಲು ನಾನು ಬೇಕೇ ಬೇಕು… ನಾನು ಮಿಡಿದರೆ ತಾನೇ…!! ಮಾತು ತುಂಡರಿಸಿ ಮೌನದಿ ಮರುಗಿತು.ಆಗ ಸಭೆಯಲ್ಲಿ ಮೆದಳು, “ಇಲ್ಲಿ ಯಾರು ಮುಖ್ಯರಲ್ಲ ; ಇಲ್ಲಿ ಯಾರು ಅಮುಖ್ಯರಲ್ಲ…ನಾವೆಲ್ಲರೂ ಒಂದೇ.. ” ಎಂದು ಸಭೆ ಮುಗಿಸಿತು.ಈ ಮೇಲಿನ ದೃಷ್ಟಾಂತವನ್ನು ನಾವು ಓದಿದಾಗ ನಮಗೆ ನಮ್ಮ ಸಮಾಜ, ಸಮಾಜದಲ್ಲಿರುವ ವ್ಯಕ್ತಿಗಳು ನೆನಪಾಗುತ್ತಾರೆ. ಹೌದು..!!ಮನುಷ್ಯ ಸಮಾಜ ಜೀವಿ, ನಾವು ಸಮಾಜದಲ್ಲಿ ಬದುಕುವ ರೀತಿಯನ್ನು ಕಲಿಯಬೇಕಾದದ್ದು ಬಹಳ ಮುಖ್ಯ.  ಕೇವಲ ವೈಯಕ್ತಿಕ ಸಿದ್ಧಾಂತಗಳನ್ನು, ವೈಯಕ್ತಿಕ ಹಿತಾಸಕ್ತಿಗಳನ್ನು ವಿಜೃಂಭಿಸಿಕೊಳ್ಳುತ್ತಾ ನಾವೇ ಶ್ರೇಷ್ಠ, ಇತರರೆಲ್ಲರೂ ಕನಿಷ್ಠ ಎನ್ನುವ ಅಹಂಕಾರದ ಮಾತುಗಳನ್ನಾಡುತ್ತಾ ಕೆಲವರು ವರ್ತಿಸುತ್ತಿರುತ್ತಾರೆ..!!  ಹಾಗಾಗಿ ಸಮಾಜವೆನ್ನುವ ಈ ಸಂಕೀರ್ಣ ವೃತ್ತದ ಬದುಕಿನಲ್ಲಿ ಪ್ರತಿಯೊಬ್ಬರ ಪಾತ್ರವು ಬಹಳ ಮುಖ್ಯ. ಇಲ್ಲಿ ಯಾರು ಶ್ರೇಷ್ಠರಲ್ಲ. ಯಾರೂ ಕನಿಷ್ಠರಲ್ಲ. ಎಲ್ಲರೂ ಅವರವರ ಕಾರ್ಯ ಕಲಾಪಗಳು, ಕೆಲಸಗಳು, ಕರ್ತವ್ಯಗಳ ಮೂಲಕ ಸಮಾಜವನ್ನು ಕಟ್ಟುತ್ತಿದ್ದಾರೆ.  ಈ ದೇಶದ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಹಿಡಿದು,ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ  ಸಮಾಜಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತಿದ್ದಾರೆ. ಹೀಗೆ ಮೇಲಿನ ದೃಷ್ಟಾಂತವನ್ನೆ   ನೋಡಿದಾಗ ನಮ್ಮ ದೇಹ ಸುಂದರವಾಗಿ,  ಒಂದು  ಘನ ವ್ಯಕ್ತಿತ್ವದ ವ್ಯಕ್ತಿತ್ವವನ್ನು ಬೆಳೆಸಿ, ರೂಪಿಸಿಕೊಳ್ಳಬೇಕಾದರೆ ಬಾಹ್ಯ ಸೌಂದರ್ಯದ ಆವಯವಗಳು ಎಷ್ಟು ಮುಖ್ಯವೋ ಮನುಷ್ಯನ ದೇಹದ ಒಳಗಿನ ಎಲ್ಲಾ ಭಾಗಗಳು ಅಂದರೆ ಅಂಗವ್ಯೂಹಗಳು  ಬಹಳ ಮುಖ್ಯ. ಒಂದು ಅಂಗಕ್ಕೆ ಊನವಾದರೆ ಇಡೀ ದೇಹವೇ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಯಾವ ಅಂಗವೂ ಕನಿಷ್ಠವಲ್ಲ. ಯಾವ ಅಂಗವೂ ಶ್ರೇಷ್ಠವಲ್ಲ. ನಮ್ಮ ಚಯಾಪಚಯ ಕ್ರಿಯೆಯ ದೃಷ್ಟಿಯಿಂದ ಅಷ್ಟೇ ಅಲ್ಲದೆ ನಾವು ಜೀವಂತವಿದ್ದೇವೆ ಎಂದರೆ ಅದು ನಮ್ಮ ಪ್ರತಿ ದೇಹದ ಅಂಗಾಂಗಗಳ ಆರೋಗ್ಯ..!!   ಬಲಗೈ ಶ್ರೇಷ್ಠ ; ಎಡಗೈ ಕನಿಷ್ಠ ಅಥವಾ ಎಡಗೈ ಶ್ರೇಷ್ಠ  ; ಬಲಗೈ ಕನಿಷ್ಠ ಎನ್ನುವ ಹೊಡೆದಾಡುವ ಕೆಟ್ಟ ಮನೋಭಾವವು ಒಳ್ಳೆಯದಲ್ಲ.  ಆ ಎರಡು ಕೈಗಳಿದ್ದಾಗಲೇ ಮನುಷ್ಯ ಸುಂದರವಾಗಿ ತನ್ನ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯ. ಹಾಗಾಗಿ ಸಮಾಜದ ಪ್ರತಿ ಒಳಿತಿನಲ್ಲಿಯೂ ಎಲ್ಲರ ಪಾತ್ರ ಸಹಜ. ಊರು ಎಂದ ಮೇಲೆ ಇಲ್ಲಿ ಎಲ್ಲವೂ ಉಂಟು, ಕಸ ಕಡ್ಡಿ ದೇವಸ್ಥಾನ, ಮನೆ, ಮಂದಿರ, ತೋಟ, ಮಸೀದಿ, ಚರ್ಚ್,  ರಸ್ತೆ, ಬಚ್ಚಲು,ಪಾಯಖಾನೆ, ಶಾಲೆ, ಮೂರ್ತಿಗಳು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ನದಿ,  ತೆರೆ ತೊರೆಗಳು ಎಲ್ಲವೂ ಉಂಟು…!!  ಅವೆಲ್ಲವೂ ಸೊಗಸಾಗಿರಬೇಕೆಂದರೆ ನಮ್ಮ ಕಾರ್ಯಕ್ರಮಗಳು ಅಷ್ಟೇ ಮುಖ್ಯ.ಸಮಾಜದಲ್ಲಿರುವ ಪ್ರತಿಯೊಂದು ವಸ್ತು, ವ್ಯಕ್ತಿ ಎಲ್ಲವೂ ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಇಲ್ಲಿ ಯಾವುದನ್ನು ಕೀಳಾಗಿ ಕಾಣದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲರೂ ಸಮಾನರು ಎಲ್ಲವೂ ಸಮಾನ ತತ್ವದ ಅಡಿಯಲ್ಲಿರಬೇಕಾಗಿದ್ದು ಈ ಲೋಕದ ಸತ್ಯ. ಪ್ರಕೃತಿ ಸದಾ ಬದಲಾವಣೆಗೆ ಒಳಪಡುತ್ತದೆ.  ಒಬ್ಬ ವ್ಯಕ್ತಿ ಇಂದು ಬಡವನಾಗಿರಬಹುದು ನಾಳೆ ಅವನು ಶ್ರೀಮಂತನಾಗುತ್ತಾನೆ. ಹಾಗೆಯೇ ಪ್ರಕೃತಿಯಲ್ಲಿ ಬದಲಾವಣೆಗೆ ಅವಕಾಶವಿದೆ. ಮಾನವನು ಮಾಡಿರುವ ಅನೇಕ ತತ್ವ, ಸಿದ್ಧಾಂತಗಳಲ್ಲಿ ಬದಲಾವಣೆಗೆ ಅವಕಾಶವಿಲ್ಲ. ಉದಾಹರಣೆಗೆ ಜಾತಿ ವ್ಯವಸ್ಥೆಯು ಒಂದು ಜನ್ಮಾಧರಿತವಾಗಿರುವುದು ದುರಂತವೆನ್ನಬಹುದು. ಎಲ್ಲಾ ವ್ಯಕ್ತಿಗಳು ತಾಯಿಯ ಹೊಟ್ಟೆಯಿಂದ ಹುಟ್ಟುತ್ತೇವೆ. ಒಬ್ಬರ ರಕ್ತ ಬಣ್ಣ ಇನ್ನೊಬ್ಬರ ರಕ್ತದ ಬಣ್ಣ ಒಂದೇ..!!  ಅದು ಕೆಂಪು. ಎಲ್ಲಾ ಅಂಗಾಂಗಗಳು ಅಷ್ಟೇ ಇವೆ. ಆದರೂ ನಾವು ತಾರತಮ್ಯ ಮಾಡುತ್ತಾ ಮಾಡುತ್ತಾ ನಾನೇ ಶ್ರೇಷ್ಠ ; ನಾವೇ ಶ್ರೇಷ್ಠ ಎನ್ನುವ ಜನಾಂಗೀಯ ದ್ವೇಷದ,  ಭಾಷೆಯ ಉದ್ವೇಗವನ್ನು  ಅನೇಕ ವಿಘಟನೆಯ ಬರೆಯ ಎಳೆಗಳನ್ನು  ಎಳೆಯುತ್ತಲೇ ಇರುವುದು ದುರಂತವೆನ್ನಬಹುದು. ದೃಷ್ಟಾಂತದಲ್ಲಿ ಬರುವ ಸಭೆಯ ಕೊನೆಯ ಮಾತು ಈ ಲೇಖನದ ಮುಖ್ಯ ಉದ್ದೇಶ. ಇಲ್ಲಿ ಯಾರು ಮುಖ್ಯರಲ್ಲ ಯಾರು ಮುಖ್ಯರಲ್ಲ ಎಲ್ಲರೂ ಒಂದೇ ಎನ್ನುವ ಸಿದ್ಧಾಂತದೊಂದಿಗೆ ಮಾನವೀಯ ಮೌಲ್ಯಗಳನ್ನು ಒಳಗೊಂಡ  ಬದುಕನ್ನು ನಾವು ಕಟ್ಟಬೇಕಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗೌರವವನ್ನು ಸಲ್ಲಿಸಬೇಕೆಂದು ನಮ್ಮ ಸಂವಿಧಾನದ ಆಶಯ. ಗೌರವಹಿತ ಬದುಕನ್ನು ಕಟ್ಟಲು ಅವಕಾಶ ನೀಡಬೇಕಾಗಿರುವುದು ಮನುಷ್ಯನ ನಿಜವಾದ ಜವಾಬ್ದಾರಿ. ಆಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗಲೂ ಸಾಧ್ಯ. ನಾನೇ ಶ್ರೇಷ್ಠ ಎನ್ನುವವನಲ್ಲಿಯೂ ಕೆಲವು ಸಲ ಕನಿಷ್ಠ ಮಟ್ಟದ ಕೆಟ್ಟ ಗುಣಗಳು ಇರುತ್ತವೆ. ಇನ್ನೊಬ್ಬರಿಂದ ಕೆಲವರನ್ನು ಕನಿಷ್ಠರು ಎನಿಸಿಕೊಂಡವರಲ್ಲಿಯೂ ಶ್ರೇಷ್ಠ ಮಟ್ಟದ ವಿಚಾರಗಳು, ಸಿದ್ಧಾಂತಗಳು ಇರುವುದನ್ನು ಕಾಣುತ್ತೇವೆ. ನಮಗೆ ಒಳ್ಳೆಯದಷ್ಟೇ ಮುಖ್ಯ. ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಯಾವ ವ್ಯಕ್ತಿಯಲ್ಲಿ ಇರುತ್ತದೆಯೋ ಆ ವ್ಯಕ್ತಿ ನಿಜವಾಗಿಯೂ ಶ್ರೇಷ್ಠ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ಮನೋಭಾವವನ್ನು ನಾವು ನೀವೆಲ್ಲ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಅಂತಹ ಮನೋಭಾವ ಬೆಳೆಸಿಕೊಳ್ಳೋಣವೆಂದು ಆಶಿಸುವೆ.
  • ——–
  • ರಮೇಶ ಸಿ ಬನ್ನಿಕೊಪ್ಪ ಹಲಗೇರಿ

2 thoughts on “‘ಹೀಗೊಂದು ಸಭೆಯ… ಮಹತ್ವ…’-ರಮೇಶ ಸಿ ಬನ್ನಿಕೊಪ್ಪ

  1. ellarU vndaagiddare dehavu chenda haage ellarU vaggattagiddare desha Chanda endured saaruva lekhana channagide sir abhinandanegalu

Leave a Reply

Back To Top