“ಸಂವೇದನ ಶೀಲತೆಯ ಕೊರತೆ”-ಮಾಧುರಿ ದೇಶಪಾಂಡೆಯವರ ಲೇಖನಿಯಲ್ಲಿ

ಇತ್ತೀಚಿಗೆ ಸಂವೇದಶೀಲತೆಯ ಕೊರತೆ ಎದ್ದು ಕಾಣುತ್ತಿದೆ. ಮೊದಲಿಗೆ ಸಂವೇದನ ಶೀಲತೆ ಎಂದರೆ ಏನು ಎಂದು ತಿಳಿದು ಕೊಳ್ಳಬೇಕು ಸಂವೇದನೆ ಎಂದರೆ 1. ಜ್ಞಾನ ; ಅನುಭವ, 2. ಅರಿವು ; ತಿಳುವಳಿಕೆ.  ಜನರ  ಅಂದರೆ ಎದುರಿನವರ ಬಗೆಗೆ ಅವರ ಪರಿಸ್ಥಿತಿಯ ಬಗೆಗೆ ತಿಳುವಳಿಕೆ ಇಟ್ಟುಕೊಂಡು ನಡೆಯುವವರು ಸಂವೇದನ ಶೀಲರು ಎಂದು ಕರೆಯಲ್ಪಡುತ್ತಾರೆ.

ಮನುಷ್ಯನಲ್ಲಿ ಇರಲೇ ಬೇಕಾದ ಗುಣ ಎಂದರೆ ಸಂವೇದನಶೀಲತೆ.  ಏಕೆಂದರೆ ಎಲ್ಲ ಭಾವಗಳು ನಮ್ಮ ಅನುಭವಕ್ಕೆ ಬಂದಿರದೇ ಹೋದರು ಒಬ್ಬರ ನೋವು ದುಃಖ ಅಥವಾ ಕಷ್ಟದ ಬಗೆಗೆ ಕೇಳಿ ಅದರ ಬಗೆಗೆ ಕನಿಕರ ಪಟ್ಟು ದುಃಖ ಅಥವಾ ಕಷ್ಟದಲ್ಲಿರುವವರ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುವದು ಉತ್ತಮ ಸಂವೇದನಾಶೀಲ ವ್ಯಕ್ತಿಯ ದೊಡ್ಡ ಗುಣವಾಗುತ್ತದೆ.

ಪ್ರಪಂಚ ಎಲ್ಲ ಮನುಜರು ಸುಖ ಸಂತೋಷ ಸಮೃದ್ಧಿಯೊಡನೆಯೇ ಹುಟ್ಟಿರುವುದಿಲ್ಲ.  ಕೆಲವು ಸನ್ನಿವೇಶಗಳು ಪರಿಸ್ಥಿತಿಗಳು ದೈಹಿಕ, ಸಾಮಾಜಿಕ, ಮಾನಸಿಕ ಸ್ಥಿತಿಗಳು ಅವರವರ ಯೋಗ್ಯತೆಗೆ ಅಥವಾ ಹಣೆಯಲ್ಲಿ ಬರೆದಂತೆ ಇರುತ್ತವೆ. ಅದನ್ನು ನೋಡಿ ಅಪಹಾಸ್ಯ ಮಾಡುವುದು, ನಾಲ್ಕು ಜನರ ಮಧ್ಯೆ ಎತ್ತಿ ಆಡುವುದು ಅಥವಾ ಹೀಯಾಳಿಸುವುದು ಮಾಡಿದಾಗ ಎದರಿನವರ ಮನಸ್ಸಿಗೆ ನೋವು ಉಂಟುಮಾಡುವುದು ಪಾಪವೆನಿಸುತ್ತದೆ ಎಂದು ಅರಿತು ನಡೆಯುವ ನಡವಳಿಕೆ ಸಂವೇದನಶೀಲ ನಡವಳಿಕೆ ಎಂದು ಗುರಿತಿಸಲಾಗುತ್ತದೆ.

ಪ್ರಪಂಚದಲ್ಲಿ ಜನರಿಗೆ ಹಣದ, ರೂಪದ, ಸದೃಢವಾಗಿರುವುದರದ, ಸಿರಿವಂತಿಕೆಯ, ಸುಖದಿಂದ ಇರುವುದರ ಬಗೆಗೆ ಅಹಂಕಾರ ಬಹಳವೇ ಇರುತ್ತದೆ.  ಅದನ್ನು ಕೆಲವರು ತೋರಿಸಿಕೊಳ್ಳುತ್ತಾರೆ ಇನ್ನು ಕೆಲವರು ತೋರಿಸಿಕೊಳ್ಳುವುದಿಲ್ಲ.  ಸಮಾಜದಲ್ಲಿ ಮಕ್ಕಳಿರುವವರು ಮಕ್ಕಳಿಲ್ಲದವರ ಮುಂದೆ ಮಕ್ಕಳು ಮುದ್ದಿಸುವುದು, ಅವರ ಸಂಭ್ರಮವನ್ನು ತೋರಿಸಿದರೆ ಅವರ ಮನಸ್ಸಿಗೆ ನೋವಾಗುತ್ತದೆ. ಹರಕು ಬಟ್ಟೆ ಉಟ್ಟವರ ಮುಂದೆ ಸಂಭ್ರಮದಿಂದ ಹೊಸದಾದ ರೇಷ್ಮೆ ಬಟ್ಟೆ ಆಭರಣಗಳ ಅಲಂಕಾರದ ಪ್ರದರ್ಶನ ಮಾಡಿದರೆ, ವಿಧವೆ/ವಿಧುರ ಅಥವಾ ವಿಚ್ಛೇದಿತರಾದ ಸ್ತ್ರೀಒ/ಪುರುಷರ ಮುಂದೆ ತಮ್ಮ ಪತಿ/ಪತ್ನಿಯೊಡನೆ ಸರಸ ಅಕ್ಕರೆಯನ್ನು ತೋರಿದರೆ ಅದೂ ಕೂಡ ಉದ್ದೇಶಪೂರ್ವಕವಾಗಿ ಮಾಡುವವರು ವಿಕೃತ ಮನಸ್ಸುಳ್ಳವರಾಗಿರುತ್ತಾರೆ.

ಇಂತಹ ಸ್ವಭಾವ ಮನುಷ್ಯರಲ್ಲಿ ಸಾಮಾನ್ಯವೇ ಆಗಿದ್ದರು.  ಸಣ್ಣ ವಯಸ್ಸಿನಿಂದ ಕೊರತೆ ಇರುವವರ ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಯಲು ನಮ್ಮ ಮಕ್ಕಳಲ್ಲಿ ಸಂವೇದನ ಶೀಲತೆಯ ಗುಣವನ್ನು ಸಣ್ಣ ವಯಸ್ಸಿನಿಂದಲೇ ಬೆಳೆಸಬೇಕು. ಹಸಿದು ಕುಳಿತವನಿಗೆ ತಮ್ಮ ಬಳಿಯಲ್ಲಿದ್ದ ಅನ್ನದಲ್ಲಿ ಸ್ವಲ್ಪ ನೀಡುವುದು, ಹರಿದ ಬಟ್ಟೆಯುಟ್ಟವರಿಗೆ ತಮ್ಮ ಬಳಿ ಇರುವ ಗಟ್ಟಿಯಾಗಿರುವ ಬಟ್ಟೆ ನೀಡುವುದು ಅವರೊಂದಿಗೆ ಪ್ರೀತಿಯ ಮಾನಾಡುವುದು ಉತ್ತಮ ಮಾನವೀಯತೆಯ ಲಕ್ಷಣಗಳು.

ಮನುಷ್ಯರಲ್ಲಿ ಮಾನವೀಯತೆ ಮತ್ತು ಸಂವೇದನ ಶೀಲತೆಯ ಕೊರತೆಯು ಸಮಾಜದಲ್ಲಿ ಅನೇಕ ಅಪರಾಧಗಳು ಕುಕೃತ್ಯಗಳ ಮೂಲವಾಗತ್ತವೆ. ಉದಾಹರಣೆಗೆ ಶ್ರೀಮಂತಿಕೆಯ ಅತೀ ಪ್ರದರ್ಶನ ಮಾಡುವವರ ಮನೆಯಲ್ಲಿ ಕಳ್ಳತನ, ಮಕ್ಕಳನ್ನು ಅತೀಯಾಗಿ ಪ್ರಾಮುಖ್ಯತೆ ಕೊಟ್ಟು ಇರದವರ ಮುಂದೆ ಪ್ರದರ್ಶನ ಮಾಡಲಿ ಅಥವಾ ಅವರ ಮುಂದೆ ಅತೀ ಮೋಹದ ಪ್ರದರ್ಶನ ಮಾಡಿದಾಗ ಅಪಹರಣ ಮೊದಲಾದ ಕುಕೃತ್ಯಗಳಿಗೆ ಕಾರಣವಾಗುತ್ತದೆ.  ಇಂತಹ ಕೆಟ್ಟ ಕೆಲಸಗಳನ್ನು ಮಾಡುವ ಜನರಲ್ಲಿ ನೈತಿಕತೆ ಅಥವಾ ಉತ್ತಮಗುಣದ ಕೊರತೆ ಇದ್ದೇ ಇರುತ್ತದೆ. ಯಾರನ್ನೋ ಮೆಚ್ಚಿಸುವ ಸಲುವಾಗಿ ಅಥವಾ ತಮ್ಮ ಹಠ ಸಾಧನೆಯಾಗಿ ಎರಡು ಸಂಬಂಧಗಳ ಮಧ್ಯ ಮನಸ್ತಾಪ ಮಾಡುವುದು.  ಕೆಟ್ಟ ಕೆಲಸಗಳಿಗೆ ಪ್ರೇರಣೆ ನೀಡುವ ನಡವಳಿಕೆ ಸಮಾಜದ ಚೌಕಟ್ಟಿನಲ್ಲಿ ನಡೆಯುತ್ತಿರುವವರಿಗೆ ಯಾವುದೋ ಒಂದು ರೀತಿಯ ಆಮಿಷವೊಡ್ಡಿ ನೆಮ್ಮದಿಯನ್ನು ಕೆಡಿಸುವುದು ಇಂತಹ ಜನರು ಒಂದು ರೀತಿಯಲ್ಲಿ ಅತೃಪ್ತ ಆತ್ಮಗಳು ತಮ್ಮ ಬಳಿ ಇಲ್ಲ ಬೇರೆಯವರಿಗೂ ಬೇಡ ಅಥವಾ ನಾವು ನೀತಿಗೆಟ್ಟವರಾಗಿದ್ದೇವೆ ಬೇರೆಯವರನ್ನು ನೀತಿಗೆಟ್ಟವರನ್ನಾಗಿ ಮಾಡೋಣ ಎಂಬ ವಿಕೃತ ಮನಸಿನ ವಿಘ್ನ ಸಂತೋಷಿಗಳಾಗಿ ಸಮಾಜದ ಆರೋಗ್ಯವನ್ನು ಕೆಡಿಸುವ ಜನರು ಸಮಾಜದಲ್ಲಿ ಮುಖವಾಡ ಧರಿಸಿ ನಗು ನಗುತ್ತಾ ಜನರ ಸಂತೋಷಕ್ಕೆ ಕಲ್ಲು ಹಾಕುವವರಿರುತ್ತಾರೆ.

ಇಂತಹ ಜನರಿಂದ ದೂರ ಇರಲು ಮೊದಲು ನಾವು ಸಂವೇದನಾಶೀಲರಾಗಿರಬೇಕು, ಎರಡನೇಯದು ನಮ್ಮಲ್ಲಿ ಸರಿ-ತಪ್ಪು, ಧರ್ಮ-ಅಧರ್ಮ, ನೈತಿಕತೆ- ಅನೈತಿಕತೆಯನ್ನು ಅರ್ಥೈಸುವ ಅದರಂತೆ ನ್ಯಾಯವಾಗಿ ನಡೆಯುವ ಗುಣವಿದ್ದರೆ ಎಂತಹದ್ದೇ ಕಠಿಣ ಪರಿಸ್ಥಿತಿ ಬಂದರು ಕೂಡ ಜಯಿಸಿ ಬರಬಹುದು.  

ಸಂವೇದನ ರಹಿತ ಜನರು ಇಂದಿನ ಕಾಲದಲ್ಲಿ ಇರುವ ಸಭ್ಯ ರಾಕ್ಷಸೀ ಪ್ರವೃತ್ತಿಯವರು ಹಾಗೂ ಸಂಪವೇದನಶೀಲತೆಯನ್ನು ಅಳವಡಿಸಿಕೊಂಡು ಮತ್ತೊಬ್ಬರ ಪರಿಸ್ಥಿತಿಗೆ ಅರಿತು ನಡೆಯುವವರು ಉತ್ತಮರು.


2 thoughts on ““ಸಂವೇದನ ಶೀಲತೆಯ ಕೊರತೆ”-ಮಾಧುರಿ ದೇಶಪಾಂಡೆಯವರ ಲೇಖನಿಯಲ್ಲಿ

Leave a Reply

Back To Top