“ಮತ್ತೊಂದು ಜಾತ್ರೆಯ ಎದುರುಗುಳ್ಳುವಹೊತ್ತಲ್ಲಿ” ವಿಶೇಷ ಬರಹ ಶೋಭಾ ಹಿರೇಕೈ ಕಂಡ್ರಾಜಿ

ಅದು ೨೦೨೦ ರ ಮಾರ್ಚ್ ತಿಂಗಳು .ಧಗಧಗ ಬಿಸಿಲ ನಡುವೆ ನಮ್ಮ  ಶಿರಸಿಯ ಕರ್ನಾಟಕದ ಅತೀ  ದೊಡ್ಡ ಮಾರಿಕಾಂಬಾ ಜಾತ್ರೆ  ಮಾರ್ಚ್ ಮೂರರಿಂದ ಹನ್ನೊಂದರವರೆಗೆ ನಿಗಧಿಯಾಗಿತ್ತು. ಆದರೆ ಆಗಷ್ಟೇ  ಪಕ್ಕದ  ಚೀನಾದಿಂದ ಹೊರಟ  ಮಹಾಮಾರಿ  ‘ಕೊರೊನಾ’  ದ ಸುದ್ದಿ ನಮ್ಮ ಶಿರಸಿ ಜಾತ್ರೆಯನ್ನು ತಲುಪಿಯೇ ಬಿಟ್ಟಿತ್ತು. ಜಾತ್ರೆಗೆ ಯಾರೂ ಹೋಗಬಾರದು, ಮಾಸ್ಕ್ ಧರಿಸದೆ ಅಂತೂ ಜನರಿದ್ದಲ್ಲಿ  ಹೋಗಲೇ ಬಾರದು, ಕೈ ಕೈ ಕುಲುಕಬಾರದು, ಮೈಕೈ ತಗುಲಬಾರದು, ಕೆಳಗೆ ಬಿದ್ದಿದ್ದನ್ನು ಎತ್ತಬಾರದು, ಬೀದಿಯಂಚಿನದನ್ನು ತಿನ್ನಬಾರದು, ಕೊಟ್ಟ ನೋಟನ್ನು ಪಡೀಬಾರದು, ಹೀಗೆ ಈ ಬಾರದು…ಬಾರದು ಎಂಬ  ಮೊದಲ  ಹಂತದ  ಯಾದಿ ಟಿವಿ ಪರದೆಯಲ್ಲಿ ಮೂಡಲು ತೊಡಗಿತ್ತು.ಇದೇನು ಎತ್ತ ಅಂತ ಗೊತ್ತಾಗದ ಜನತೆ  ಇದೇನು ಕಲಿಗಾಲ ಅಂದುಕೊಂಡೇ  ಜಾತ್ರೆ ಮುಗಿಸಿ ಬಂದಿದ್ದರು.ಇದ್ದ ಕರ್ಚಿಪನ್ನೇ ತುರ್ತಿಗೆ ಮಾಸ್ಕಂತೆ  ಬಳಸಿದ್ದರು.

ಒಂಬತ್ತು ದಿನದ ಜಾತ್ರೆ ಮುಗಿದು ಎರಡೇ ದಿನ ಕಳೆದಿತ್ತು ಅಷ್ಟೇ….ಜಾತ್ರೆ ಪೇಟೆಯಲ್ಲಿ  ಜನರಿನ್ನೂ ಕರಗಿರಲಿಲ್ಲ.  ಕರೊನಾ   ಗೊತ್ತಾಗದಂತೆ ಬಂದು ನಿಂತೆ ಬಿಟ್ಟಿದೆಯೇನೋ  ಎಂಬಂತೆ, ಶಾಲೆ  ಕಾಲೇಜುಗಳೆಲ್ಲಾ ರಜೆಯಂತೆ !, ರಜೆಯಂತೆ ! ಅನ್ನುವುದರೊಳಗೆ ರಾಜ್ಯ ಸರ್ಕಾರದ ಘೋಷಣೆ …..
ಒಂದುವಾರ ಕಾಲ ಕರ್ನಾಟಕ ಸ್ತಬ್ಧ.
ನೂರು ಜನ ಸೇರುವಂತಿಲ್ಲ.
ನಿಶ್ಚಿತಾರ್ಥ, ಮದುವೆ ಸಮಾರಂಭ, ಬಹಿರಂಗ ಸಭೆಗಳು
ಎಲ್ಲವಕ್ಕೂ ನಿರ್ಬಂಧ.


ಅರೇ! ನಿನ್ನೆವರೆಗೂ… ಇಲ್ಲಿ ಜಾತ್ರೆ ನಡೀತು. ಲಕ್ಷಾಂತರ ಜನರು ಸೇರಿದ್ದಾರೆ, ಬಂದು ಹೋಗಿದ್ದಾರೆ, ಮತ್ತೆ ಈಗಲೂ ಬರುತ್ತಲೇ ಇದ್ದಾರೆ…ಇನ್ನೂ ವಾರ ಪೂರ್ತಿ ಖರೀದಿಯ ಭರಾಟೆ ಹೋರಾಗಿಯೇ ನಡೆಯುತ್ತದೆ…ಎಲ್ಲೂ ಯಾರಿಗೂ ಏನೂ ಸಮಸ್ಯೆ ಯಾದ ಸುಳಿವಿಲ್ಲ.ಇದೆಂತ ಮುಳ್ಳು ಸುದ್ದಿಯೋ?
ನಾನು  ಜಾತ್ರೆಯಿಂದ ಇನ್ನೂ ತರಬೇಕಿದ್ದ ವಸ್ತುಗಳ ಪಟ್ಟಿ ಹಿಡಿದುಕೊಂಡು   ವಿಚಾರ ಮಾಡುತ್ತಿದ್ದರೆ, ಕಲ್ಬುರ್ಗಿ ಯಲ್ಲೊಂದು ಕರೊನಾ ಸಾವು ದೇಶದ ಮೊದಲ  ಕರೊನಾ ಸಾವಿನ ಪ್ರಕರಣವಾಗಿ ದಾಖಲೆ ಬರೆದೆ ಬಿಟ್ಟಿತ್ರು.

ಇತ್ತ ಮಾಧ್ಯಮಗಳು ,ಟಿವಿ ವಾಹಿನಿಗಳು ಸಂಭಾವ್ಯ ಪಟ್ಟಿಯಲ್ಲಿರುವ  ಕರೊನ ಪಾಜಿಟಿವ್   ಸಂಖ್ಯೆ ಗಳನ್ನು   ಹೆಚ್ಚು ತೋರಿಸುತ್ತಲೇ ಇದ್ದವು.  ಸಣ್ಣ ಜ್ವರ ಬಂದವರ, ಶೀತ ಕೆಮ್ಮು ಆದವರ ಗಂಟಲು ದ್ರವದ ಪರೀಕ್ಷೆ ಗೆಂದು  ದೂರದ ಶಿವಮೊಗ್ಗಕ್ಕೋ..ಬೆಂಗಳೂರಿಗೋ …ರವಾನೆಯಾಗಿ ಆರೋಗ್ಯ ವರದಿಗಾಗಿ  ಜಿಲ್ಲಾಡಳಿತ ಕಾಯುವ  ಪರಿಸ್ಥಿತಿ ಬಂದಿತ್ತು. ಪ್ರತಿ ತಾಲೂಕಾ ಕೇಂದ್ರ ದಲ್ಲಿ ಕೊರೊನ  ವೈರಾಣು  ಸೋಂಕಿತ  ವ್ಯಕ್ತಿಗಳ  ಪರೀಕ್ಷಾ  ಕೇಂದ್ರ ವಿಲ್ಲದೆ , ಆರೋಗ್ಯ ಕೇಂದ್ರಗಳೂ ಸಹ  ದೂರದ ನಗರಗಳಿಂದ ಬರುವ  ಪೊಜಿಟಿವ್ ,ನೆಗೆಟಿವ್  ವರದಿಗಾಗಿ  ಕಾಯುತ್ತಾ ಕುಳಿತುಕೊಳ್ಳುವ  ಪರಿಸ್ಥಿತಿ ನಿರ್ಮಾಣವಾಗಿತ್ತು.

ಮೊಬೈಲ್‌ ರಿಂಗ್‌ ಟ್ಯೂನ್ ಗಳೆಲ್ಲಾ  ಕರೊನಾ ಕೆಮ್ಮನ್ನೇ  ಕೇಳಿಸುವ , ಕೆರಳಿಸುವ ಜಾಹಿರಾತುಗಳಾಗಿ ಬದಲಾದವು.ಇತ್ತ ನಮ್ಮ ಶಾಲೆ ಗಳಲ್ಲಿ  ಮಕ್ಕಳಿಲ್ಲದ ಮನೆಗಳಂತಾಗಿ ಬಿಕೋ ಎನ್ನುತಿತ್ತು. ನಾವು ಶಿಕ್ಷಕರೊಂದೇ..ಶಾಲೆಗೆ ಹೋಗಿ ಸಹಿ ಒತ್ತಿ ಬರುವ  ಅನಿವಾರ್ಯತೆಯುಂಟಾಗಿತ್ತು.ಎಲ್ಲೆಲ್ಲಿ ಇದ್ದಾರೋ ಅಲ್ಲಲ್ಲೇ ಇದ್ದು ಊರಿಂದ ಊರಿಗೆ ಯಾರೂ ಓಡಾಡಂತಾದಾಗ   ವಾರ ಕಾಲ ( ಮೊದಲ ಹಂತ )  ಮನೆಯಲ್ಲೇ ಇದ್ದು , ಮುಂದಿನ ಬೆಳವಣಿಗೆಗಾಗಿ ಕಣ್ಣಗಲಿಸಿಕೊಂಡು ಕಿವಿತೆರೆದಿಟ್ಟೆ ಕಾಯುತ್ತ ಕುಳಿತ ಮಂದಿಗೆ  ವಿದೇಶದಿಂದ ಬಂದವರು,ಕರೋನ ಸಂಶಿತ ರೋಗಿಗಳ  ‘ ನಿರ್ಬಂಧ ‘ ಕೇಂದ್ರದಿಂದ  ತಪ್ಪಿಸಿಕೊಂಡು ಓಡುವ  ಘಟನೆಗಳು ಅಲ್ಲಲ್ಲಿ ನಡೆದು ,ಅದನ್ನೇ ಟಿವಿ ವಾಹಿನಿಗಳು ದಿನ ಪೂರ್ತಿ ತೋರಿಸಲು ಹಿಡಿದಾಗ  ,ಇನ್ನು ಮುಗಿಯಿತು ಕಥೆ  ಎಂದುಕೊಂಡೆವು.


ಅಷ್ಟರಲ್ಲೇ… ಕಲ್ಬುರ್ಗಿ ಯಲ್ಲಿ ೭೬  ವಯಸ್ಸಿನ ವೃದ್ದನ  ಸಾವು, ಮತ್ತವನ ಸಂಪರ್ಕಕ್ಕೆ ಬಂದ ೪೬ ಮಂದಿಯ  ಮೇಲೆ ತೀವ್ರ ನಿಗಾ ಇಟ್ಟ ಸುದ್ದಿ ತಿಳಿದ ನಾವು  ಮನೆಯೊಳಗೂ ಉಸಿರ ಬಿಗಿ ಹಿಡಿಯುವಂತಾಯಿತು.  ಮೊದಲ ಹಂತ, ಎರಡನೇ ಹಂತ,  ಮೂರನೇ ಹಂತ… ಹೀಗೆ ಹಂತ ಹಂತವಾಗಿ ಕೊರೊನದ ವಿರುದ್ಧದ ಸಮರ ಶುರುವಾಗಿತ್ತು.

ಇತ್ತ ನಮ್ಮೂರ ಶಿರಸಿ ಮಾರಮ್ಮನ ಜಾತ್ರೆಯಲ್ಲಿ  ಹೊಟ್ಟೆ ಪಾಡಿಗೆಂದು ಬಂದವರು , ಇನ್ನೊಂದು ವಾರವಾದರೂ ಇದ್ದು  ಹೇಗಾದರೂ ವರ್ಷದ ದುಡಿಮೆ ಹೊಂದಿಸಿಕೊಂಡು ಹೋಗೋಣವೆಂದುಕೊಂಡವರು  ಅದೆಷ್ಟೋ  ಮಂದಿಯ ಹೊಟ್ಟೆಯ ಮೇಲೆ ತಣ್ಣೀರು  ಬಟ್ಟೆಯೆಳೆಯಲು  ಕರೋನ ಬಂದೇ ಬಿಟ್ಟಿತ್ತು.ಅಂಗಡಿ, ತೊಟ್ಟಿಲು, ಸರ್ಕಸ್, ನಾಟಕದ ಕಂಪನಿಗಳಿಗೆ ಎಳೆದು ಕಟ್ಟಿದ ದಾರವನ್ನು  ಎಳೆದು   ಬಿಚ್ಚುವ ಕೆಲಸ ….ಶುರುವಾಗಿತ್ತು. ಆಗ ಅವರ ಮೈತುಂಬಾ ಬೆವರಿತ್ತು.ಕಣ್ತುಂಬಾ ನೀರೋ ನೀರು!

ಕೊರೊನಾ ಮಹಾಮಾರಿ ಒಂದೊಂದೇ ಬಲಿ ಪಡೆಯಲು  ಅಲ್ಲೆಲೋ ಶುರು ಮಾಡಿಯಾಗಿತ್ತು.
ಹೌದು, ಆ ಜಾತ್ರೆ ಹಿಂದಿನಂತಿರಲಿಲ್ಲ. ಆ ಮಾರ್ಚ್  ಸಹ ಈಗಿಂತಿರಲಿಲ್ಲ.

ಈಗ ಮತ್ತೊಂದು ಜಾತ್ರೆಗೆ ನನ್ನೂರು ಶಿರಸಿ  ಸಜ್ಜಾಗುತ್ತಿದೆ.   ಗಡಿ, ಭಾಷೆ , ಧರ್ಮ , ಜಾತಿಗಳ  ಹಂಗಿಲ್ಲದೆ ಎಲ್ಲರನ್ನೂ   ಬಿಡಕಿ ಬಯಲು   ಸ್ವಾಗತಿಸುತ್ತದೆ. ವರ್ಷದ ಅನ್ನಕ್ಕಾಗಿ ಅದೆಷ್ಟೋ ಜೀವಗಳು   ನನ್ನೂರಿಗೆ ಹೊರಟು  ನಿಂತಿವೆ. ಅವರೆಲ್ಲರೂ ಜಾತ್ರೆ  ಮುಗಿಸಿ ಇಲ್ಲಿಂದ   ಹೊರಡುವಾಗ  ಒಂದಿಷ್ಟು  ನಗು  ಹೊತ್ತು  ಮರಳಲಿ  ಎಂದೇ ಮನ ಹಾರೈಸುತ್ತದೆ.


6 thoughts on ““ಮತ್ತೊಂದು ಜಾತ್ರೆಯ ಎದುರುಗುಳ್ಳುವಹೊತ್ತಲ್ಲಿ” ವಿಶೇಷ ಬರಹ ಶೋಭಾ ಹಿರೇಕೈ ಕಂಡ್ರಾಜಿ

  1. ಇಡೀ ಎರಡ್ಮೂರು ವರ್ಷದ ನೆನಪನ್ನು ಮೆಲುಕು ಹಾಕುವಂತೆ ಮಾಡಿದ್ದೀರಾ ನಿಮ್ಮ ಲೇಖನದಲ್ಲಿ.ಧನ್ಯವಾದಗಳು…

    1. ಚೆಂದದ ಬರಹ ಶೋಭಾ. ಹೆಚ್ಚು ಹೆಚ್ಚು ಬರೀತಾ ಇರಿ.

Leave a Reply

Back To Top