ಗಡಿಗಾಲ (ಲಲಿತ ಪ್ರಬಂಧ)-ಶ್ರೀ ಜಿ.ಎಸ್ ಹೆಗಡೆ

 ನಮ್ಮ ಹಿಂದಿನವರಿಗೆ ‘ಗಡಿಗಾಲ’ ಎನ್ನುವುದಿತ್ತು. ಅದೋ ಬೇಸಿಗೆ ಕಳೆದು‌ ಮಳೆಗಾಲ ಪ್ರಾರಂಭಕ್ಕಿಂತ ತುಸು ದಿನಗಳ ಮೊದಲು  ಹಳ್ಳಿಗರಿಗೆ ಎಡೆಬಿಡದ ಸಮಯ. ಮಳೆಗಾಲದ ಸಿದ್ಧತೆಗಾಗಿ ಆಹಾರ ಧಾನ್ಯಗಳನ್ನು ಒಣಗಿಸಿ ಜೋಪಾನವಾಗಿಟ್ಟು ಸಂಗ್ರಹಿಸುವುದೊಂದಾದರೆ ಹಳೆಯ ಕಾಲದ ತೆಂಗಿನ ಗರಿ, ಅಡಕೆ ಗರಿ‌ ಮನೆಗಳಿಗೆ ಹೊಸ ಗರಿಗಳನ್ನು ಹೊದೆಸಿ ಬೆಚ್ಚಗೆ ಮಳೆಗಾಲವನ್ನು ಅನುಭವಿಸಲು ಸಿದ್ಧತೆಯ ಕಾಲವದು.
        ಇತ್ತೀಚಿಗೆ ಈ ‘ಗಡಿಗಾಲ’ ಎನ್ನುವುದು ಮಾರ್ಚ್ ಗೆ ಬಂದು‌ ನಿಂತಿದೆ ಎನಿಸುತ್ತದೆ. ಶೈಕ್ಷಣಿಕ ವಿಭಾಗಕ್ಕೆ ಬಂದರೆ ಶಿಕ್ಷಕರಿಗೆ ಪಾಠ ಪ್ರವಚನ ಮುಗಿಸಿ ನಿಟ್ಟುಸಿರು ಬಿಡುವ ಕಾಲ. ವಿದ್ಯಾರ್ಥಿಗಳಿಗೆ ಓದಿದ್ದನ್ನು ಪರೀಕ್ಷೆಗೊಳಪಡಿಸಿ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವ ಸಮಯ. ಕೆಲವು ವಿದ್ಯಾರ್ಥಿಗಳು ನಕ್ಕರೆ ಇನ್ನು ಬಹುತೇಕರು ಪೆಚ್ಚುಮೋರೆ ಹಾಕಿಕೊಳ್ಳುವುದು ಅನಿವಾರ್ಯ. ಸೋತ ವಿದ್ಯಾರ್ಥಿಗಳು ಮತ್ತೆ ಹೊಸ ರಣತಂತ್ರಕ್ಕೆ ಸಜ್ಜುಗೊಳ್ಳಬೇಕಲ್ಲ! ಎನ್ನುವ ಚಿಂತೆ.


     ಈ ಮಾರ್ಚ ಬಂದ ಕೂಡಲೆ ನೆನಪಾಗುವುದು ಬ್ಯಾಂಕನವರು‌ ನೋಡಿ. ಹಿಂದೊಮ್ಮೆ ಡಿಸೆಂಬರ್ ಕೊನೆಯಲ್ಲಿ ಒಂದು ಕ್ಯಾಲೆಂಡರ್ ದೊರಕಬಹುದೆಂದು ಯಾವತ್ತೂ ಬ್ಯಾಂಕನ ಕಡೆಗೆ ಹೋಗದ ಅಸಾಮಿ ಡಿಸೆಂಬರ್ ಲ್ಲಿ ಹೋಗುತ್ತಿದ್ದ. ಆದರೆ ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ನ ಹೆಸರ ಕೇಳಿದರೆ ಮೈ ಬೆವರುತ್ತದೆ. ನಾಲಿಗೆ ತೊದಲುತ್ತದೆ. ಮಾರ್ಚಲ್ಲಿ‌ ಬ್ಯಾಂಕ್ ಸಿಬ್ಬಂದಿ‌ ಮತ್ತು ಸಾಲಗಾರರ ನಡುವೆ ಆಡಳಿತ ಮತ್ತು ವಿರೋಧ ಪಕ್ಷಗಳ ಸಂಬಂಧ. ಸಭಾತ್ಯಾಗವೇ ಹೆಚ್ಚು. ಅಧಿವೇಷನದ ಖುರ್ಚಿ ಖಾಲಿ ಇದ್ದ ಹಾಗೆ. ಬ್ಯಾಂಕಗೆ ಈ ಸಾಲಗಾರರ ಭೇಟಿಯೇ ಇರದು.
  ಇತ್ತ ಬ್ಯಾಂಕ್ ಸಿಬ್ಬಂದಿಗಳಿಗೆ‌ ಮೇಲಿನ ಅಧಿಕಾರಿಗಳಿಂದ ತಿವಿತ. ಎಷ್ಟು ವಸೂಲಿ‌ ಮಾಡಿದ್ರಿ? ಟಾರ್ಗೆಟ್ ನೀಡಿ ವಸೂಲಿ‌ ಮಾಡುವ ಸಮರ. ಅದಕ್ಕಾಗಿ ಸಿಬ್ಬಂದಿಗಳು‌ ಮನೆ‌ ಮನೆಗೆ ತಡಕಾಡುವುದು ಮಾಮೂಲು. ನಾಲ್ಕಾರು ದಿನ ಶಾಲೆ ಕಡೆ ಮುಖ‌ ಮಾಡದ ವಿದ್ಯಾರ್ಥಿಗಳ‌ ಮನಗೆ ಶಿಕ್ಷಕರು ಭೇಟಿ ನೀಡಿದಂತೆ. ಪ್ರತೀ ಸಲವೂ ಮನೆಯ ಯಜಮಾನ್ತಿಯೇ ಸಬೂಬು ಹೇಳಿ ಕಳುಹಿಸುವಳು. ಶಿಕ್ಷಕರು‌ ಮಕ್ಕಳನ್ನು ಕರೆಯಲು ಹೋದರೆ ಮಗುವಿಗೆ ‘ಆರಾಮಿಲ್ಲ‌ ನಾಳೆ ಕಳುಹಿಸುವೆ’ ಎನ್ನುವ ಮಾಮೂಲಿ ಉತ್ತರ ನೀಡುವ ಯಜಮಾನ್ತಿ ಬ್ಯಾಂಕಿನವರು‌ ಮನೆಗೆ ಬಂದರೆ ‘ಅವರು ಮನೆಯಲ್ಲಿಲ್ಲ , ನಾಳೆ ಬರುತ್ತಾರೆ ಆಗ ಬ್ಯಾಂಕಿಗೆ ಕಳುಹಿಸುವೆ’ ಎನ್ನುವ ಸಿದ್ಧ ಉತ್ತರ ನೀಡುವಳು.
   ಆದರೆ ಶಾಲೆಗೆ ಬಾರದ ಮಗು‌ ಪಕ್ಕದ ಬೀದಿಯಲ್ಲಿ ಆಡುತ್ತಿದ್ದರೆ. ಸಾಲಗಾರ ಮನೆಯೊಳಗೇ ಕುಳಿತು ಕಿಟಕಿಯಿಂದ ಇವರನ್ನು ನೋಡಿ ನಗುತ್ತಿರುತ್ತಾನೆ. ಈ ಸಾಲಗಾರನೋ ಬಹು ಚಾಲಾಕಿ. ಆಚೀಚೆ ಮನೆಯವರದು ಊರೆಲ್ಲಾ ಸುದ್ಧಿ ‘ಬ್ಯಾಂಕಿನವರು ಮನೆ ಜಪ್ತಿಗೆ ಬಂದಿದ್ದಾರಂತೆ’ ಇತ್ಯಾದಿ ಇತ್ಯಾದಿ. ಕೆಲವರು ಸಾಲಗಾರನನ್ನು ಉದ್ದೇಶಿಸಿ  ‘ ಏನೋ ,ಹೊಸ ನೆಂಟರು ಬಂದಿದ್ದರಂತೆ’ ಎಂದು ಕಾಲೆಳೆಯುವವರೂ ಉಂಟು.ಇದಕ್ಕೆಲ್ಲಾ ಈ ಸಾಲಗಾರ ಲಕ್ಷ್ಯ ಕೊಡುವವನಲ್ಲ ಬಿಡಿ.ಮಾರ್ಚ್ ಬಂತೆಂದರೆ ಈತ‌ ಯಾವ ಬ್ಯಾಂಕಿನವರು ಬರಬಹುದೆನ್ನುವುದನ್ನು ಸಾಲದ ಪಾಸ್ ಪುಸ್ತಕ ತೆಗೆದುಕೊಂಡು ಲಿಸ್ಟ್ ಮಾಡಿಕೊಂಡಿರುತ್ತಾನೆ. ಕೆಲವೊಮ್ಮೆ ಊರನ್ನೇ ಬಿಟ್ಟು ದೂರದೂರನ್ನೂ ಸೇರಿಕೊಳ್ಳುತ್ತಾನೆ. ಈತನ ಯಾತ್ರೆಯೂ ಆಗಲೇ ನಡೆಯುತ್ತದೆ. ಅದಕ್ಕೆ‌ ಮತ್ತೆ ಆಚೀಚೆ‌ ಮನೆಯವರಲ್ಲಿ  ಕೈಗಡ ಸಾಲ ಮಾಡಿರುತ್ತಾನೆ. ಈತನ ಮೊಬೈಲ್ ಸಹ ಇದೇ ಸಂದರ್ಭದಲ್ಲಿ ಹಾಳಾಗುತ್ತದೆ.
   ಈ ಬ್ಯಾಂಕಿನವರಿಗೆ ಸಾಲ ನೀಡದೇ ವಿಧಿಯಿಲ್ಲ. ಅದರಲ್ಲೂ ಕೋ- ಆಪರೇಟಿವ್ ಬ್ಯಾಂಕಗಳ ಕಥೆ ಇನ್ನೂ ಬರ್ಬರ. ನಿರ್ದೇಶಕರ ಅಣತಿಯಂತೆ ಸಾಲ ನೀಡಬೇಕು. ಈ ಸಾಲಗಾರ ನಿರ್ದೇಶಕರ ಮನೆಗೆ ಪ್ರತೀದಿನ ಬೆಳಿಗ್ಗೆ ಪಾದ ಸವೆಸಿ ಅಂತೂ ಸಾಲ ಮಂಜೂರಿ‌ ಮಾಡಿಸಿಕೊಂಡು ಬಂದ ನಂತರ ಬ್ಯಾಂಕನವರದು ‘ ಕೊಟ್ಟವ ಕೋಡಂಗಿ, ತಿಂದವ ವೀರಭದ್ರ’ ಎನ್ನುವ ಪರಿಸ್ಥಿತಿ. ಕಟ್ಟುಬಾಕಿಯವರೇ ಜಾಸ್ತಿಯಾದಾಗ ಮ್ಯಾನೇಜರ್ ರವರ ಬಿ.ಪಿ ಏರುತ್ತದೆ. ಕೋಪ ಸಿಬ್ಬಂದಿಗಳಿಗೆ ವರ್ಗಾವಣೆಗೊಳ್ಳುತ್ತದೆ.ಮುಗಿಯದ ಕೆಲಸ.  ಈ ಬ್ಯಾಂಕಗಳಲ್ಲಿ ಮಾರ್ಚ್ ತಿಂಗಳಲ್ಲಿ ದಿನದ 24 ಗಂಟೆ ಲೈಟ್ ಉರಿಯುತ್ತದೆ ಮತ್ತು ಫ್ಯಾನ್ ತಿರುಗುತ್ತಿರುತ್ತದೆ‌.
  ಈ ಬ್ಯಾಂಕನವರದ್ದು ಒಂದು ಕತೆಯಾದರೆ ಗುತ್ತಿಗೆದಾರರದ್ದು ಇನ್ನೊಂದು ಕತೆ. ಊರ ಕೇರಿಯ ತುಂಬ ಅಲ್ಲಲ್ಲಿ ತುಂಡು ಕೆಲಸ ಮಾಡಿದವರು ಬಿಲ್ ಮಾಡಿಸಿಕೊಳ್ಳಬೇಕು. ಬಿಲ್‌ ಮಾಡಿಸಿಕೊಳ್ಳುವ ಭ(ಬ)ರದಲ್ಲಿ ಮಾಡಿದ ಕೆಲಸ ಅರ್ಧಂಬರ್ಧವೇ ಹೆಚ್ಚು. ಕಾಮಗಾರಿಯ ಕುರಿತು ಪತ್ರಿಕೆಗಳಲ್ಲಿ, ಸುದ್ಧಿವಾಹಿನಿಗಳಲ್ಲಿ ಟೀಕೆಟಿಪ್ಪಣಿಗಳು ಬರುತ್ತಿರುತ್ತವೆ. ಅದಕ್ಕೆಲ್ಲಾ ಕ್ಯಾರೇ ಎನ್ನದೇ ಬಿಲ್ ಮಾಡಿಸಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ. ಅಂತೂ ಬಹಳಷ್ಟು ಜನರ ಕಿಸೆ ತುಂಬುವುದು ಸ್ವಾಭಾವಿಕವೂ ಹೌದು. ಜೊತೆಗೆ ತೆರೆದ ರಹಸ್ಯಗಳಲ್ಲಿ ಇದೂ ಒಂದು.
   ಈ ಮಾರ್ಚ್ ಎನ್ನುವುದು ಕೆಲವು ನೌಕರರಿಗೂ ತಪ್ಪಿದ್ದಲ್ಲ. ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿಸುವ ನೌಕರರು ಫೆಬ್ರವರಿ,ಮಾರ್ಚ  ತಿಂಗಳಲ್ಲಿ ಸಂಬಳ ಕಮ್ಮಿ ಪಡೆದು ಒದ್ದಾಡುತ್ತಾರೆ. ಈಗೀಗ ನೌಕರರಿಗೆ ಮಾರ್ಚ್ ಎಂದರೆ ಒಂದು ರೀತಿಯಲ್ಲಿ ತ್ರಾಸದಾಯಕವಾಗಿದೆ. ಮಾರ್ಚ್ ಕಳೆದು ಎಪ್ರಿಲ್ ಬಂತೆಂದರೆ ಬೇಸಿಗೆಯ ಬಿಡುವಿನಲ್ಲಿ ಒಂದಿಷ್ಟು ಯೋಜನೆ ಹಾಕಿಕೊಳ್ಳುವ ನೌಕರರಿಗೆ ಕಿಸೆ ಹಗುರವಾಗಿ ಪರಿತಪಿಸುತ್ತಾರೆ. ಕೊನೆಯಲ್ಲಿ ಅವರಿಗೆ ಅವರೇ ಸಮಾಧಾನ ಮಾಡಿಕೊಳ್ಳುವುದೇನೆಂದರೆ ‘ವರ್ಷದ ಹನ್ನೆರಡು ತಿಂಗಳ ಕೆಲಸ, ಹನ್ನೊಂದು ತಿಂಗಳ ಸಂಬಳವೆಂದು’. ಇನ್ನು ಕೆಲವು ನೌಕರರು ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಆದಾಯ ತೆರಿಗೆಯನ್ನು ಕಟಾವಣೆ ಮಾಡಿಸಿಕೊಂಡು ದೊರಕುವ ಸಂಬಳ ಇಷ್ಟೇ! ಎಂದು ಸಮಾಧಾನ ಮಾಡಿಕೊಳ್ಳುವವರೂ ಇದ್ದಾರೆ.


     ಈ‌ ಮಾರ್ಚ  ಬಂದ ಕೂಡಲೇ‌ ಮದುವೆ ವಯಸ್ಸಿಗೆ ಬಂದಂತಹ ಹೆಣ್ಣು ಗಂಡುಗಳಿಗೆ ಕೆಲವರಿಗೆ ಖುಷಿ. ಇನ್ನು ಕೆಲವರಿಗೆ ಆತಂಕ. ಇದೇ ಸೀಸನ್ ಲ್ಲಿ  ಮದುವೆಯಾಗಬೇಕೆನ್ನುವ ಗಂಡು ಹೆಣ್ಣುಗಳಿಗೆ ಮಾರ್ಚ ತಿಂಗಳಲ್ಲಿ ಮದುವೆಯೆನ್ನುವದರ ಪೂರ್ವ ಸಿದ್ಧತೆ ಒಂದು ಹಂತಕ್ಕೆ ಬಂದರೆ, ಸದ್ಯ ಮದುವೆ ಬೇಡ ಇನ್ನೊಂದೆರಡು ವರ್ಷ ಆರಾಮಾಗಿ ಕಳೆಯುವ ಎನ್ನುವ ಹೆಣ್ಣು ಮಕ್ಕಳಿಗೆ ಆತಂಕ. ಕಾರಣ ಹೆತ್ತವರು ಹೆಣ್ಣು‌ ಮಕ್ಕಳಿಗೆ ಒತ್ತಾಯ‌ ಮಾಡಿಯೊ ಅಥವಾ ಬೆದರಿಸಿಯೋ ಅಥವಾ ಸೆಂಟಿಮೆಂಟಿಗೊಳಪಡಿಸಿ ಮದುವೆ‌ ಮಾಡಲು ಅಡಿಯಿಡುವ ಕಾಲ.
     ಹೊಸದಾಗಿ‌ ಮನೆ ಕಟ್ಟುತ್ತಿರುವವರಿಗೆ ಈ‌ ಮಾರ್ಚ ಎನ್ನುವುದು ಗಡಿಗಾಲ. ಮನೆಯೇನೋ‌ ಒಂದು ಹಂತಕ್ಕೆ ಬಂದಿರುತ್ತದೆ. ಸ್ವಲ್ಪ ಗಡಿಬಿಡಿ‌ ಮಾಡಿದರೆ ಮಳೆಗಾಲ ಪ್ರಾರಂಭಕ್ಕಿಂತ ಮೊದಲು ಮನೆಯ ಪ್ರವೇಶ ಮಾಡಿ‌ ಉಳಿದುಕೊಂಡರೆ ಮುಂದೆ‌ ಕಟ್ಟಬೇಕಾದ ಏಳೆಂಟು ತಿಂಗಳ ಮನೆ ಬಾಡಿಗೆ ಉಳಿಯುತ್ತದೆ. ಈ‌ ಮಳೆಗಾಲ ಕಳೆದು ಮುಂದಿನ ಅಕ್ಟೋಬರ್ ಹೊತ್ತಿಗೆ ಮತ್ತೆ ಎಲ್ಲಾ ಸಾಮಗ್ರಿ , ಕೂಲಿಗಳ ಬೆಲೆಯೇರಿರುತ್ತದೆ. ಅದಕ್ಕಾಗಿ ಹೊಸ ಮನೆಗಳನ್ನು ಕಟ್ಟುವವರಿಗೆ ಮಾರ್ಚ ಗಡಿಗಾಲವಿದ್ದ ಹಾಗೆ. ಮನೆ ಕಟ್ಟುವ ಕೆಲಸಗಾರರು ಬಹು ಚಾಲಾಕಿಗಳು. ಮನೆ ಕಟ್ಟುವವನ ಆತುರತೆ ನೋಡಿ ಒಂದಿಷ್ಟು ಹೆಚ್ಚು ಹಣ ಪೀಕಿ, ಕೆಲಸವನ್ನೂ ಸರಿ‌ಯಾಗಿ ಮಾಡದೇ ಜೀವನ ಪೂರ್ತಿ ಟೆನ್ಶನ್ ನೀಡಿ ಹೋಗುವವರು.
    ವ್ಯಾಪಾರಸ್ಥರಿಗೆ ಈ ಮಾರ್ಚ್ ಎಂದರೆ ಸೀಸನ್. ಪ್ರಾಮಾಣಿಕ ರೈತಾಪಿ ವರ್ಗದವರು ವರ್ಷಪೂರ್ತಿ ಉದ್ರೆ ನೀಡಿದವರಿಗೆ ಹಣ ನೀಡಲು ಬೆಳೆದ ಬೆಳೆ ಮಾರಾಟ ಮಾಡುವರು. ಬಟ್ಟೆ ವ್ಯಾಪಾರಿಗಳ ವ್ಯಾಪಾರ ಜೋರು. ಬಸ್ ಗಳಂತೂ ತುಂಬಿ ತುಳುಕುತ್ತವೆ. ಹಣದ ಓಡಾಟ ಒಬ್ಬರಿಂದ ಒಬ್ಬರಿಗೆ , ಹಲವರಿಗೆ ಓಡಾಡುವ ಕಾಲವಿದು.
    ಈ ಮಾರ್ಚ್ ಎನ್ನುವುದು ವಿಮಾ ಪಾಲಿಸಿದಾರರಿಗೂ ಪರೀಕ್ಷೆಯ ಕಾಲ. ಮಾರ್ಚ್ ಲ್ಲಿ ಟಾರ್ಗೆಟ್ ರೀಚ್ ಆಗಬೇಕು. ಮನೆ ಮನೆಗೆ ಭೇಟಿ ನೀಡಿ ಒಂದು ಪಾಲಿಸಿ ದಯಪಾಲಿಸಿ ಇಲ್ಲವಾದಲ್ಲಿ ಏಜನ್ಸಿಯೇ ರದ್ದಾಗುತ್ತದೆ ಎಂದು ಸುಳ್ಳನ್ನು ಸೃಷ್ಟಿಸಿ ಪಾಲಿಸಿ ಮಾಡಿಸಿಕೊಂಡು ಬರುವ ಕಾಲ.
    ಮಾರ್ಚ್ ಅಂದರೆ ಸರ್ಕಾರವೇ ನಿರ್ಧರಿಸಿದ ‘ಗಡಿಗಾಲ’. ಯಾವುದೇ ಕಾರ್ಯಕ್ಕೆ ಕಾಲಮಿತಿಯನ್ನು ವಿಧಿಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಅದನ್ನು ಈಗ ಎಲ್ಲರೂ ಅನುಸರಿಸುವ ಅನಿವಾರ್ಯತೆ. ಸರ್ಕಾರಿ ವ್ಯವಸ್ಥೆ ತಾನೇ ವಿಧಿಸಿಕೊಂಡ ಈ ಗಡಿಗಾಲವನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ….?
    ಅಂತೂ ಈ ಮಾರ್ಚ್ ಎನ್ನುವುದು ಯಾರನ್ನೂ ಬಿಡುತ್ತಿಲ್ಲ. ಆದಾಯ ತೆರಿಗೆ, ಮನೆ ತೆರಿಗೆ ಮುಂತಾದವುಗಳಿಗೆಲ್ಲ ದಂಡಕ್ಕೊಳಗಾಗದೇ ಹಾನಿಯಿಂದ ತಪ್ಪಿಸಿಕೊಳ್ಳಬೇಕೆಂದರೆ ಈ ಮಾರ್ಚ್ ಕೊನೆಯೆಂದು ಎಚ್ಚರಿಸುತ್ತದೆ.


Leave a Reply

Back To Top