ನುಡಿ ಸಂಗಾತಿ
ಲೋಹಿತೇಶ್ವರಿ ಎಸ್ ಪಿ
‘ಪರಿನುಡಿ…’ ವಿಶೇಷ ಬರಹ-
ಪರಿನುಡಿ…
ಪ್ರಸ್ತಾವನೆ
ನುಡಿ ಕುರಿತ ಅಧ್ಯಯನಕ್ಕೆ ಪ್ರೇರಣೆ ಹಾಗೂ ಆಸಕ್ತಿಗಾಗಿ ಈ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ದೈನಂದಿನ ಜೀವನದಲ್ಲಿ ಎಷ್ಟೋ ಪದಗಳು ನಮ್ಮ ಕಿವಿಯ ಮೂಲಕ ಹಾದುಹೋಗುತ್ತಿರುತ್ತವೆ. ಆ ಪದಗಳ ಮೂಲ, ರಚನೆ, ಬಳಕೆ ಇವುಗಳ ಕುರಿತ ಯಾವ ಮಾಹಿತಿಯೂ ನಮಗೆ ಇರುವುದಿಲ್ಲ. ಆದರೂ, ಸಮಾಜದೊಂದಿಗಿನ ಸಂವಹನದ ಅಗತ್ಯಕ್ಕಾಗಿ ಬಳಸುತ್ತಿರುತ್ತೇವೆ. ಅಷ್ಟೇ ಅಲ್ಲದೆ ಅವುಗಳ ಕುರಿತು ಕಾಮೆಂಟ್ ಕೂಡ ಕೊಡುತ್ತಿರುತ್ತೇವೆ. ಉದಾಹರಣೆಗೆ ಇಂಗ್ಲಿಶಿನಿಂದ ಎರವಲು ಪಡೆದ ಪದಗಳ ಬಳಕೆಯ ಬಗೆಗೆ ಬಟ್ಲರ್ ಇಂಗ್ಲಿಶ್ ಎಂದು ಹೇಳುವ ಹಾಗೆ. ಇದನ್ನು ನಾನು ತಪ್ಪು ಎಂದು ಹೇಳುವುದಿಲ್ಲ. ಆದರೆ ಬಳಕೆ ಹಾಗೂ ಗ್ರಹಿಕೆ ಹೇಗಿರುತ್ತವೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದು ನುಡಿಯ ಬಗೆಗೆಯಾದರೆ ನುಡಿರೂಪಗಳ ಬಗೆಗೆ ಅರ್ಥ, ಬಳಕೆ, ರಚನೆ ಎಲ್ಲಾ ವಿಷಯಗಳಲ್ಲಿಯೂ ಈ ರೀತಿಯ ಪ್ರಕ್ರಿಯೆ ನಡೆಯುತ್ತಿರುತ್ತದೆ. ಅಂತಹ ಕೆಲವು ವಿಚಾರಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಈ ಬರೆವಣಿಗೆಗೆ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡುವ ಮೂಲಕ ವಿಷಯ ಹಂಚಿಕೆ ಆರಂಭಿಸಿದ್ದೇನೆ……
Bro
Bro ಎಂಬುದು ಇಂಗ್ಲಿಶಿನ Brother ಎಂಬ ರೂಪದ ಸಂಕ್ಷಿಪ್ತ ರೂಪವಾಗಿದೆ. ಅಣ್ಣ, ತಮ್ಮ ಹಾಗೂ ಸ್ನೇಹಿತರ ಕುರಿತು ಬಳಕೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಣ್ಣ ತಮ್ಮಂದಿರಿಗಿಂತ ಸ್ನೇಹಿತರ ವಲಯದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಬಳಕೆ ಕುರಿತು ಗಮನಿಸಿದಾಗ ನಮಗೆ ಭಿನ್ನ ಭಿನ್ನ ಅಭಿಪ್ರಾಯಗಳು ದೊರೆಯುತ್ತವೆ. ಉದಾಹರಣೆಗೆ ಪಿಯುಸಿ ಓದುತ್ತಿರುವ ಭಾಷಿಕರ ಬಳಕೆಗೂ ಯುಜಿ ಹಾಗೂ ಪಿಜಿ ಓದುತ್ತಿರುವ ಭಾಷಿಕರ ಬಳಕೆಗೂ ಬಹಳ ವ್ಯತ್ಯಾಸವಿದೆ.
ಪಿಯು ಓದುತ್ತಿದ್ದ ಮಕ್ಕಳಲ್ಲಿ Bro ಎಂಬ ಪದದ ಬಳಕೆಯೂ ಕೊಂಚ ಭಿನ್ನವಾಗಿದ್ದನ್ನು ಗಮನಿಸಿ ಯಾವ ಅರ್ಥದಲ್ಲಿ ಬಳಸಬಹುದು ಎಂಬ ಕುತೂಹಲದಿಂದ ಕೇಳಿದೆ. ಆಗ ದ್ವೀತಿಯ ಪಿಯುಸಿ ಓದುತ್ತಿರುವ ಹುಡುಗನೊಬ್ಬ
” Bro ಅಂದ್ರೆ ಬಾರೆ ಹುಡುಗಿ ಓಡಿ ಹೋಗೋಣ ಅಂತ ಅರ್ಥ” ಎಂದರೆ ಅದೇ ವಯಸ್ಸಿನ ಹುಡುಗಿ ” Bro ಅಂದ್ರೆ ಬಾರೋ ಹುಡುಗ ಓಡಿ ಹೋಗೋಣ ಅಂತ ಅರ್ಥ” ಎಂದು ಹೇಳಿದರು. ಸಂಕ್ಷಿಪ್ತ ರೂಪಗಳು ಬಳಕೆಯ ಸಂದರ್ಭದಲ್ಲಿ ಯಾವೆಲ್ಲಾ ಅರ್ಥಗಳನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಈ ಭಾಷಾ ಪ್ರಕ್ರಿಯೆಯೇ ಸಾಕ್ಷಿ.
—————————————————–
ಲೋಹಿತೇಶ್ವರಿ ಎಸ್ ಪಿ