ಸಿನಿಮಾ

ಥಪ್ಪಡ್

ಮಡದೀಯ ಬಡಿದಾನ…

  ಮಡದೀಯ ಬಡಿದಾನ...

 ಈಚೆಗೆ ‘ಥಪ್ಪಡ್’ ಎಂಬ ಹಿಂದಿ ಸಿನೆಮಾ ನೋಡಿದೆ. ಕೇವಲ ‘ಒಂದು ಏಟು’ ಎಂದು ನಿರ್ಲಕ್ಷ್ಯ ತೋರಿ ಮರೆತುಬಿಡುವ ಪ್ರಸಂಗವನ್ನು ‘ಹೆಣ್ಣಿನ ಆತ್ಮಗೌರವ’ದ ಹೆಸರಿನಲ್ಲಿ ತೆರೆಯ ಮೇಲೆ ತೋರಿಸಿರುವ ರೀತಿ ಸ್ತ್ರೀಕುಲದ ಆತ್ಮಸಾಕ್ಷಿಯಂತಿದೆ. ಸಂಕುಚಿತ ಸಮಾಜಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ. ನಿಜಕ್ಕೂ ಈ ಸಿನೆಮಾ ಸೂಕ್ಷ್ಮವಾಗಿ ಸಮುದಾಯಕ್ಕೆ ದಾಟಿಸುವ ಸಂದೇಶ ಇದೆಯಲ್ಲಾ ಅದು ಅದ್ಭುತ..!
   ಜನಪದ ಗೀತೆಯೊಂದಿದೆ,    “ಮಡದೀಯ ಬಡಿದಾನ ಮನದೊಳಗೆ 
  ಮರುಗ್ಯಾನ, ಒಳಹೋಗಿ ಸೆರಗ ಹಿಡಿದು   ತಾ ಕೇಳಾನ ನಾ ಹೆಚ್ಚೋ ನಿನ್ನ ತವರು ಹೆಚ್ಚೋ…” 
      ಜನಪದ ಗೀತೆಯ ಮಾತಿಗೇ ಬರೋಣ. ಹೆಂಡತಿಗೆ ಯಾವುದೋ ಮಾತಿಗೋ, ಕಾರಣಕ್ಕೋ ಹೊಡೆದು ಬಿಡುವ ಗಂಡನು ಅನಂತರ ಸಮಜಾಯಿಷಿ ಕೊಡಲಿಕ್ಕೋ ಅಥವಾ ಅವಳನ್ನು ರಮಿಸಲಿಕ್ಕೋ ಆಕೆ ಬಳಿಹೋದಾಗಿನ ಪ್ರಸಂಗದ ವಿವರಣೆ ಇಲ್ಲಿದೆ. 
   ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎನ್ನುವ ಜಾಯಮಾನ ಉಳ್ಳ ಸಮಾಜದವರಾದ ನಾವು, ಹೆಣ್ಣಿನ ಮನದಾಳದ ಭಾವನೆಗಳಿಗೂ ನಮ್ಮದೇ ಬಣ್ಣ ಕಟ್ಟುವವರು. ಈ ಹಾಡೂ ಅಂತೆಯೇ.. ಹೆಂಡತಿಗೆ ಬಡಿದ ಗಂಡನಿಗೆ ತನ್ನ ಬಡಿತದಿಂದ ಆಕೆ ಮುನಿದುಕೊಂಡಿದ್ದರೆ, ಸಿಟ್ಟಿಗೆದ್ದಿದ್ದರೆ ಆಕೆ ತವರನ್ನು ನೆನೆದಿರಬಹುದು ಎಂದು ಯೋಚಿಸುವಂತೆ ಮಾಡಿಸುತ್ತದೆ. ಇದಕ್ಕೇನು ಹೇಳುವುದು? ಇದು ಸಮಾಜವು ಹೆಣ್ಣನ್ನು ಅರ್ಥೈಸಿಕೊಂಡಿರುವ ಬಗೆ ಎಂದು ಹೇಳಬಹುದಷ್ಟೇ. ಆದರೆ  ತವರಿನಲ್ಲಿ ಇದಕ್ಕೂ ನಿಕೃಷ್ಟವಾದ ಬದುಕು ಆಕೆಯದಿದ್ದರೆ  ಖಂಡಿತ ತವರನ್ನು ಆಕೆ ನೆನೆದಿರುತ್ತಾಳೆಯೇ..?
 ಹಾಗೆಯೇ ಮೊದಲ ಸಾಲಿನಲ್ಲಿರುವ ‘ಮಡದೀಯ ಬಡಿದಾನ’ ಎಂಬಲ್ಲಿ ಬಳಕೆಯಾಗಿರುವ ‘ಬಡಿದಾನ’ ಪದವು ಕೇಳಲು ಎಷ್ಟು ಕಠೋರವಾಗಿದೆ. ದನಕ್ಕೆ ಬಡಿದ ಹಾಗೆ.., ಸುತ್ತಿಗೆ ಬಡಿದ ಹಾಗೆ.., ಬಡಿದು ಬಿಸ್ಹಾಕು..,ಇಲ್ಲೆಲ್ಲಾ ಬಡಿದು ಎನ್ನುವುದು ಬಹಳ ಘೋರವಾದ ಅತೀ ಕಠಿಣತಮ ಶಬ್ಧಾರ್ಥವಾಗಿ ಪ್ರಯೋಗವಾಗಿದೆ. ಬಡಿಯುವುದು ಗಂಡಿನ ಜನ್ಮಸಿದ್ಧ ಹಕ್ಕು ಹಾಗೂ ಬಡಿಸಿಕೊಳ್ಳುವುದು ಹೆಣ್ಣಿನ ಹಣೆಬರಹ ಎಂಬುದು ಸಮಾಜದ ಸೃಜನೆಯಾಗಿರುವಾಗ ಗಂಡನಾದವನು ಬಡಿಯದೇ ಮತ್ತೇನು ಮಾಡಿಯಾನು?! ಮಡದಿಯೂ ಸಹ ಒಂದು ಪ್ರಾಣಿಯೋ ವಸ್ತುವೋ ಎಂದು ಭಾವಿಸಿ ಬಡಿದಿರುವ ಆತ ತನ್ನ ಮನದಲ್ಲಿ ತನ್ನ ಕೃತ್ಯಕ್ಕಾಗಿ ಖಂಡಿತ ಮರುಗಿರುತ್ತಾನೆಯೇ..? 
     ಜನಪದದ ಕಾಲ ನಿರ್ಣಾಯಕವಾಗಿಲ್ಲ. ನೂರಾರು ವರ್ಷಗಳಿಂದಲೂ ಹುಟ್ಟಿ ಹರಿದು ಬಂದಿರುವ ಜನಪದ ತೊರೆಯ ಮೂಲ ಯಾವುದೆಂದು ಕಾಣುವುದು ಅಷ್ಟು ಸುಲಭವಲ್ಲ. ಹಾಗಾದ ಮೇಲೆ ಇಂತಹ ಜನಪದ ಹಾಡುಗಳಿಗೂ ಇಪ್ಪತ್ತೊಂದನೆಯ ಶತಮಾನದ ‘ಥಪ್ಪಡ್’ ನಂತಹ ಸಿನೆಮಾದಲ್ಲಿ ತೋರಿರುವ ಹೆಣ್ಣಿನ ಕುರಿತ ಅಸಡ್ಡೆಯ ಭಾವನೆಗೂ ಅವಿನಾಭಾವ ಸಂಬಂಧವಿದೆ. ಹಾಗಾದರೆ, ಅನಾದಿಯಿಂದ ಇಂದಿನವರೆಗೂ ಹೆಣ್ಣಿನ ಸ್ಥಿತಿಗತಿಯಲ್ಲಿ, ಆಕೆಯ ಕುರಿತ ಸಮಾಜದ ಮನೋಭಾವದಲ್ಲಿ ಬಹಳ ಸುಧಾರಣೆಯೇನೂ ಕಂಡಿಲ್ಲ ಎಂದಾಯಿತಲ್ಲವೇ..?

    ಹೀಗೆ ಕೇಳುವ ಪ್ರಶ್ನೆಗಳನ್ನೂ ಅಪಹಾಸ್ಯಕ್ಕೆ ಗುರಿಮಾಡುವ  ಸಮುದಾಯದ ನಡುವೆ ಮಹಿಳೆಯರಿದ್ದಾರೆ. ಅಭಿಮಾನ, ಆತ್ಮಗೌರವ, ಸ್ವಾಭಿಮಾನ, ಸ್ವಾಭಿಪ್ರಾಯ ಮೊದಲಾದ ಪದಗಳಿಗೆ ಮಹಿಳೆಯರ ಪದಕೋಶದಲ್ಲಿ ಸ್ಥಾನ ನೀಡದವರ ನಡುವಲ್ಲಿ ಮಹಿಳೆಯರು ಛಲದಿಂದ ಬದುಕಬೇಕಿದೆ. ಅಂಥ ನಿರ್ಭಾವುಕ ಜನರ ನಿರ್ಲಕ್ಷ್ಯಕ್ಕಿಂತಲೂ ಭಾವುಕ ಮನಸ್ಸಿನ ಮಹಿಳೆಯರ ನಿರೀಕ್ಷೆಗಳು ಮಹತ್ವವಾದವು ಎಂಬುದನ್ನು ಅರಿಯಲು ‘ಥಪ್ಪಡ್’ ನಂತಹ ಸೂಕ್ಷ್ಮ ನಿರ್ದೇಶನದ ಚಿತ್ರವನ್ನು ಎಲ್ಲರೂ ನೋಡಬೇಕು.  


    ಇನ್ನು ‘ತಾಪ್ಸಿ ಪನ್ನು’ ಎನ್ನುವ ನಟನಾಲೋಕದ ಧ್ರುವತಾರೆ ತನ್ನಕಾಲದ ಇತರೆ ಹೀರೋಯಿನ್ ಗಿಂತ ಹೇಗೆ ಭಿನ್ನ, ಆಕೆ ನಟನೆಗೆ ಆರಿಸಿಕೊಳ್ಳುವ ಸಿನೆಮಾಗಳ ವಸ್ತು ವಿಷಯ ಎಷ್ಟು ಅರ್ಥಪೂರ್ಣ, ವೈವಿಧ್ಯವಾಗಿರುತ್ತವೆ ಮತ್ತು ಆಕೆಯ ನಟನೆ ಎಷ್ಟು ಸಹಜವಾಗಿರುತ್ತದೆ ಎಂಬುದನ್ನು ಆಕೆ ಅಭಿನಯಿಸಿರುವ ಸಿನೆಮಾ, ಕಿರುಚಿತ್ರ ( short films) ಗಳನ್ನು ನೋಡಿಯೇ ತಿಳಿಯಬೇಕು. 
   ‘ಥಪ್ಪಡ್’ ಕೇವಲ ಒಂದು ಸಿನೆಮಾ ಅಲ್ಲ ಅಥವಾ ‘ಮಡದೀಯ ಬಡಿದಾನ..’ ಎನ್ನುವುದು ಕೇವಲ ಒಂದು ದೈನಂದಿನ ಸಂಗತಿಯಲ್ಲ. ಈ ಲೇಖನದ ಮೂಲಕ ಆ ಕುರಿತ ವಿಚಾರವೊಂದನ್ನು ಆತ್ಮಶೋಧನೆಗೆ ಹಚ್ಚುವ ಪ್ರಯತ್ನ ಮಾಡಲಾಗಿದೆ. ಏಕೆಂದರೆ, ‘ಹೆಣ್ಣಿನ ಘನತೆ ಬಿಟ್ಟಿಬಿದ್ದಿಲ್ಲ…’ 

3 thoughts on “ಸಿನಿಮಾ

Leave a Reply

Back To Top