ಕಥಾಯಾನ

ಮಧುವಂತಿ

ಅಂಜನಾ ಹೆಗಡೆ

“ನೀನ್ಯಾಕೆ ಮದ್ವೆ ಆದೆ?” ರಜನಿ ಅವಿನಾಶನನ್ನು ಭೇಟಿಯಾದಾಗ ಕೇಳಿದ ಮೊದಲನೇ ಪ್ರಶ್ನೆ ಇದು. ಬೆಂಗಳೂರಿನ ಲಾ ಕಾಲೇಜೊಂದರ ಉಪನ್ಯಾಸಕ ಅವಿನಾಶ ಅವನ ಅಸಂಬದ್ಧ ಮಾತುಕತೆಗಳಿಂದ, ನಡೆವಳಿಕೆಯಿಂದ ರಜನಿಗೆ ಉಪನ್ಯಾಸಕ ಅಂತ ಅನ್ನಿಸುತ್ತಲೇ ಇರಲಿಲ್ಲ. ವಾರದ ಐದೂ ದಿನ ಬೆಳಗಿನ ಕ್ಲಾಸು ಮುಗಿಸಿ, ಊಟ ಮಾಡಿ ಮಲಗಿ ಎದ್ದವ ರಜನಿಗೊಂದು ಫೋನ್ ಮಾಡುವುದು ಅವಿನಾಶನ ದಿನಚರಿಗಳಲ್ಲೊಂದು. ಇವತ್ತು ಕ್ಲಾಸಲ್ಲಿ ಹಾಗಾಯ್ತು ಹೀಗಾಯ್ತು , ಹುಡುಗಿಯೊಬ್ಬಳು ಪಾಠ ಮಾಡುವಾಗ ನನ್ನನ್ನೇ ನೋಡ್ತಾ ಇದ್ಲು ಅಂತೆಲ್ಲ ಅವಿನಾಶ ಹೇಳುತ್ತಿದ್ದರೆ, “ಕ್ಲಾಸಿನಲ್ಲಿ ಪಾಠ ಮಾಡುವವನನ್ನ ನೋಡುವುದು ಕ್ಲಾಸ್ ರೂಮಿನ ನಿಯಮ ಮಾರಾಯ; ಅದಕ್ಕೆ ಲ್ಯಾಂಡ್ ಮಾರ್ಕ್ ಕೇಸುಗಳು ಬೇಕಿಲ್ಲ” ಎಂದು ಅವನ ಗರಿಗೆದರಿದ ಕನಸಿಗೆ ಪೂರ್ಣವಿರಾಮ ನೀಡುವುದು ರಜನಿಯ ದಿನಚರಿಯ ಭಾಗವಾಗಿತ್ತು ಕೂಡಾ.


ಫ್ಯಾಮಿಲಿ ಲಾ ಅರೆದು ಕುಡಿದವನ ಹಾಗೆ ಮಾತನಾಡುತ್ತಿದ್ದ ಅವಿನಾಶನಿಗೆ ಕುಟುಂಬ ವ್ಯವಸ್ಥೆಯ ಕುರಿತಾಗಲೀ ಅಥವಾ ತಾನು ಪೂಜಿಸುವ ದೇವರ ಮೇಲೇ ಆಗಲಿ ಜಾಸ್ತಿ ಅಭಿಮಾನ-ಗೌರವಗಳು ಇರುವಂತೆ ರಜನಿಗೆ ಯಾವತ್ತೂ ಅನ್ನಿಸದೇ ಇರಲಿಕ್ಕೆ ಕಾರಣ ಅವನ ಮಾತನಾಡುವ ದಾಟಿಯೂ ಇರಬಹುದು. ಅವಳ ಮಾತಿನಲ್ಲಿ ಸ್ವಲ್ಪ ಕುತೂಹಲ ಕಾಣಿಸಿದರೂ “ನೀನೇನಕ್ಕೆ ಎಲ್ಲವನ್ನೂ ಕೆದಕ್ತೀಯಾ, ಹೇಳಿದಷ್ಟು ಅರ್ಥ ಮಾಡಿಕೊಂಡರೆ ಬೇಕಾದಷ್ಟಾಯ್ತು” ಎಂದು ಪ್ರತಿಕ್ರಿಯಿಸುತ್ತಿದ್ದ ಅವಿನಾಶನ ಆಕ್ರಮಣಕಾರಿ ಮನಸ್ಥಿತಿ ರಜನಿಗೆ ಅರ್ಥವೇ ಆಗದೇ ಒಂದು ವರ್ಷ ಕಳೆದಿತ್ತು ಅವರ ಸ್ನೇಹಕ್ಕೆ. ಅವಿನಾಶ ಫೇಸ್ ಬುಕ್ ನಲ್ಲಿ ಮದುವೆಯ ಕುರಿತು ಬರೆದ ಲೇಖನವೊಂದು ಯಾವುದೋ ಗ್ರೂಪ್ ನಲ್ಲಿ ಹರಿದಾಡಿದಾಗ “ನಾವ್ಯಾಕೆ ಕಡುಸಂಪ್ರದಾಯದ ಮನಸ್ಥಿತಿಯಿಂದ ಹೊರಗೆ ಬಂದು ಸಮಕಾಲೀನ ದೃಷ್ಟಿಕೋನದಲ್ಲಿ ಮದುವೆ-ಕುಟುಂಬಗಳ ಬಗ್ಗೆ ಚರ್ಚಿಸಬಾರದು?” ಎಂದು ರಜನಿ ಪ್ರತಿಕ್ರಿಯಿಸಿದ್ದು ಅವಿನಾಶನಿಗೆ ಆಕ್ಷೇಪಾರ್ಹ ಎನ್ನಿಸಿದ್ದು ಇನ್ಯಾರದೋ ಮುಖಾಂತರ ಗೊತ್ತಾಗಿತ್ತು ರಜನಿಗೆ.


ಆಗಲೇ ರಜನಿ ಅವಿನಾಶನ ಫೇಸ್ ಬುಕ್ ಪ್ರೊಫೈಲ್ ತೆಗೆದು ನೋಡಿದ್ದು. ಅವನ ಓದಿಗೂ, ಮಾಡುವ ಕೆಲಸಕ್ಕೂ, ಆಸಕ್ತಿ-ಅಭಿರುಚಿಗಳಿಗೂ, ಜೀವನದ ಸ್ಥಿತಿಗತಿಗಳಿಗೂ ಹೊಂದಾಣಿಕೆಯೇ ಆಗದಂತೆ ಚಲ್ಲಾಪಿಲ್ಲಿಯಾಗಿ ಪ್ರೊಫೈಲ್ ತುಂಬಾ ಬಿದ್ದಿದ್ದ ಫೋಟೋಗಳು, ಅಪ್ ಡೇಟ್ ಗಳು ಅವನನ್ನೊಬ್ಬ ವಿಲಕ್ಷಣ ಜೀವಿಯಂತೆ ಚಿತ್ರಿಸುವಲ್ಲಿ ಸಫಲವಾಗಿದ್ದವು. ಅನಾಸಕ್ತಿಯಿಂದ ಕಣ್ಣಾಡಿಸುತ್ತಿದ್ದವಳಿಗೆ ಗಮನ ಸೆಳೆದದ್ದು ಇವೆಲ್ಲವುಗಳ ಮಧ್ಯೆ ಶೇರ್ ಆಗಿದ್ದ ಒಂದು ಭೈರವಿ ಭಜನೆ. ಹತ್ತು ನಿಮಿಷದ ವಿಡಿಯೋ ನೋಡಿದವಳು, ಮೆಸೆಂಜರ್ ನಲ್ಲಿ ಅವಿನಾಶ್ ರಾವ್ ಎಂದು ಹುಡುಕಿ “ನಿಮ್ಮ ಭೈರವಿಯ ವಿಡಿಯೋ ತುಂಬಾ ಇಷ್ಟವಾಯ್ತು; ನಾನು ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದು ನಿಮಗೆ ಇಷ್ಟವಾದಂತಿಲ್ಲ ಕ್ಷಮಿಸಿ” ಎಂದು ಮೆಸೇಜ್ ಕಳಿಸಿ, ಜೊತೆಗೆ ರಿಕ್ವೆಸ್ಟ್ ಕಳಿಸಿ ಹಾಸಿಗೆಯ ಮೇಲೆ ಅಡ್ಡಾದವಳಿಗೆ ಎಚ್ಚರವಾಗಿದ್ದು ಅಮ್ಮನ ಫೋನ್ ಬಂದಾಗ. “ಇವತ್ತು ಮಾರುತಿ ದೇವಸ್ಥಾನದಲ್ಲಿ ನಿನ್ನ ಹೆಸರಿನ ಪೂಜೆ ಇತ್ತು; ಮೂವತ್ತು ವರ್ಷವಾಯಿತು ಕಣಮ್ಮ ನೀನು ಹುಟ್ಟಿ, ಇನ್ನಾದರೂ ಮದುವೆ ಬಗ್ಗೆ ಯೋಚನೆ ಮಾಡಬಾರದಾ?” ಎಂದಳು ಅಮ್ಮ.


ಅಮ್ಮ ಕಳೆದ ವರ್ಷ ವೈಶಾಖ ಪಾಡ್ಯಕ್ಕೂ ‘ನಿನಗೆ ಇಪ್ಪತ್ತೊಂಬತ್ತು ತುಂಬಿತು ಇನ್ನಾದರೂ ಮದುವೆ ಆಗು’ ಅಂದಿದ್ದು ನೆನಪಿದೆ ರಜನಿಗೆ. ಓದು ಮುಗಿದ ದಿನದಿಂದ “ಇನ್ನು ರಜನಿಗೆ ಒಂದು ಒಳ್ಳೇ ಗಂಡು ಹುಡುಕಿ ಮದುವೆ ಮಾಡಿದರೆ ಜವಾಬ್ದಾರಿ ಕಳೀತು” ಅಂತ ಹೇಳುತ್ತಲೇ ಬಂದಿರುವ ಅಮ್ಮನಿಗೆ, “ನಾನೆಂದರೆ ಯಾಕೆ ಜವಾಬ್ದಾರಿ ನಿನಗೆ, ಪ್ರೀತಿ ಎಲ್ಲಿಗೆ ಹೋಯಿತು?” ಎಂದು ಕೇಳಿಬಿಡುವ ಮನಸ್ಸು ರಜನಿಗೆ. ಚಿಕ್ಕವಳಿದ್ದಾಗಲೇ ಅಪ್ಪನ ಕಣ್ಣು ತಪ್ಪಿಸಿ ರೊಮ್ಯಾಂಟಿಕ್ ಕಾದಂಬರಿಗಳನ್ನು ಓದುತ್ತಿದ್ದ ಅವಳಿಗೆ ಮದುವೆ, ಮಕ್ಕಳು, ಸಂಸಾರ ಎಲ್ಲ ಸಲೀಸು ಎಂಬ ಭ್ರಮೆ ತೀರಿದ್ದು ಕೆಲಸಕ್ಕೆ ಸೇರಿದಾಗಲೇ. ಹೊಸ ದಿನಕ್ಕೊಂದು ಹೊಸ ಸುಂದರ ಅನುಭೂತಿ ದೊರಕಿಸುತ್ತಿದ್ದ ಬದುಕು ಅಕ್ಕಪಕ್ಕದ ಬದುಕುಗಳ ಅನುಭವಗಳಿಗೆ ದಕ್ಕುತ್ತ ಜಡವಾಗುತ್ತ ಹೋಗಿದ್ದಕ್ಕೆ ಅವಳಿಗೆ ಬೇಸರವಿದೆ. ಎಂಟು ವರ್ಷಗಳಿಂದ ಅಮ್ಮನ ಅದೇ ಜವಾಬ್ದಾರಿಯ ಮಾತು ಕೇಳುತ್ತಾ ಬಂದಿರುವ ರಜನಿಗೆ ಈಗೀಗ ಸಂಬಂಧಗಳೆಲ್ಲವೂ ಬಣ್ಣ ಬದಲಾಯಿಸಿ, ಜವಾಬ್ದಾರಿಯಾಗಿ ರೂಪವನ್ನೂ ಬದಲಾಯಿಸಿ ಬರಿದಾಗುತ್ತವೆ ಎನ್ನುವ ಯೋಚನೆ ಭಯ ಹುಟ್ಟಿಸುತ್ತದೆ.


ನನಗೆ ಮದುವೆ ಆಗುವ ಯಾವುದೇ ಉದ್ದೇಶವಿಲ್ಲ ಎಂದು ಅಮ್ಮನಿಗೆ ಹೇಳಿಬಿಡಬೇಕು ಅಂತ ಯೋಚಿಸುತ್ತಾ ಕುಳಿತಿದ್ದ ಒಂದು ಸಂಜೆ ಅವಿನಾಶನ ಮೆಸೇಜು, “ಬಿಡುವಿದ್ದಾಗ ಫೋನ್ ಮಾಡಿ, ಮಾತನಾಡೋಣ” ಎಂದು ನಂಬರ್ ಕೊಟ್ಟಿದ್ದ. ಹಾಗೆ ಶುರುವಾದ ಅವರಿಬ್ಬರ ಸ್ನೇಹ ವಿಚಿತ್ರವಾಗಿಯೇ ಓಡುತ್ತಿತ್ತು. ಪ್ರೀತಿಯ ಮಾತುಗಳಿಗೆಲ್ಲ ವ್ಯಂಗ್ಯವಾಗಿಯೋ, ಕುಹಕದಿಂದಲೋ ಪ್ರತಿಕ್ರಿಯಿಸುತ್ತಿದ್ದ ಅವಿನಾಶ ಯಾವುದೋ ನಿರಾಶೆ-ತಲ್ಲಣಗಳ ಸ್ಥಿತ್ಯಂತರಕ್ಕಾಗಿ ಹೋರಾಡುತ್ತಿರುವಂತೆ ಭಾಸವಾಗುತ್ತಿದ್ದ. “ಸಾಕು ಎನ್ನಿಸುವಷ್ಟು ಸಿಗದೇ ಇರುವುದರ ಮೇಲೆ ಮನುಷ್ಯನಿಗೆ ಸಾಯುವವರೆಗೂ ಆಸೆ ಇರುತ್ತೆ ಕಣೇ” ಎನ್ನುತ್ತಾ ಎಳೆಪ್ರಾಯದ ಹುಡುಗಿಯರ ಎದೆಯ ಬಗ್ಗೆ ಮಾತಾಡುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ಯಾವುದೋ ಕೇಸ್ ಬಗ್ಗೆ ಮಾಹಿತಿ ಬೇಕೆಂದು ತನ್ನ ಡೆಸ್ಕಿಗೆ ಬಂದಾಗ ತಾನವಳ ಎದೆ ನೋಡಿದ್ದು, ಅವಳಿಗೆ ಅದು ಗೊತ್ತಾಗಿ “ಏನ್ಸಾರ್, ಯಾವ ಬಣ್ಣದ ಬ್ರಾ ಹಾಕಿದೀನಿ ಅಂತ ನೋಡ್ತಾ ಇದೀರಾ ಅಂತ ಕಣ್ಣು ಮಿಟಕಿಸಿದಳು; ಈಗಿನ ಕಾಲದ ಹುಡುಗೀರು ತುಂಬಾ ಫಾಸ್ಟ್” ಅಂತೆಲ್ಲ ಕಿರಿಕಿರಿಯಾಗುವಂತೆ ಮಾತನಾಡುವಾಗ ಇವನಿಗೆ ಕೌನ್ಸೆಲಿಂಗ್ ಅಗತ್ಯವಿದೆ ಎನ್ನಿಸುತ್ತಿತ್ತು ರಜನಿಗೆ. ಮದುವೆಯಾಗಿ ಇಬ್ಬರು ಮಕ್ಕಳಿರುವ ಐವತ್ತು ವರುಷದ ಗಂಡಸೊಬ್ಬ ಹುಡುಗಿಯರ ಎದೆ, ಬ್ರಾ ಬಗ್ಗೆ ಮಾತನಾಡುವಾಗ ಮದುವೆಯ ಬಗ್ಗೆ ಇರುವ ಆಸಕ್ತಿ ಗೌರವಗಳೆಲ್ಲ ಇನ್ನಷ್ಟು ಕಡಿಮೆಯಾಗುತ್ತಿದ್ದವು.


ಒಂದಿನ ಕ್ಲಾಸ್ ಮುಗಿಸಿದವನೇ ಫೋನ್ ಮಾಡಿ, “ಈ ವೀಕೆಂಡ್ ಚೌಡಯ್ಯದಲ್ಲೊಂದು ಒಳ್ಳೆ ಸಂಗೀತ ಕಾರ್ಯಕ್ರಮ ಇದೆ, ಎರಡು ಪಾಸ್ ಇದೆ; ಎಂಟಿಆರ್ ನಲ್ಲಿ ನಿಂಜೊತೆ ಊಟ ಮಾಡಬೇಕು ನಾನು; ಹೇಳೋದು ಮರೆತಿದ್ದೆ, ಆವತ್ತೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ಯಲ್ಲ ಹಳದಿಸೀರೇದು, ಆ ಸೀರೆ ಉಟ್ಕೊಂಡು ಬಾ ಚೆನ್ನಾಗಿ ಒಪ್ಪುತ್ತೆ ನಿಂಗೆ; ಆ ಬಳೆ ಕೂಡಾ ಚೆನ್ನಾಗಿದೆ ಕಣೇ, ನೀ ಬಳೆ ಹಾಕಿದ್ದನ್ನು ನೋಡಿಯೇ ಇರಲಿಲ್ಲ ನಾನು” ಎಂದ. ಪರಿಚಯವಾಗಿ ಒಂದು ವರ್ಷವಾಗಿದ್ದರೂ ಒಮ್ಮೆಯೂ ಭೇಟಿಯಾಗಲು ಆಸಕ್ತಿ ತೋರಿಸದಿದ್ದ ಅವಿನಾಶ ಇದ್ದಕ್ಕಿದ್ದಂತೆ ಸಂಗೀತ ಕಾರ್ಯಕ್ರಮಕ್ಕೆ ಹೋಗೋಣ ಎಂದಿದ್ದು, ನಿಂಜೊತೆ ಊಟ ಮಾಡಬೇಕು ಎಂದಿದ್ದು, ತನ್ನ ಬಗ್ಗೆ ಯಾವತ್ತೂ ಒಳ್ಳೆಯ ಮಾತುಗಳನ್ನೇ ಆಡದ ಮನುಷ್ಯ ಸೀರೆ, ಬಳೆಗಳ ಬಗ್ಗೆ ಮಾತಾಡಿದ್ದು! ತಾನು ಗಮನಿಸಿಯೇ ಇರದ ಅವಿನಾಶನ ಇನ್ನೊಂದು ಮುಖವೆನ್ನಿಸಿತು ರಜನಿಗೆ. ಅಷ್ಟಕ್ಕೂ ನಾವು ಬದುಕಿನಲ್ಲಿ ಕಳೆದುಕೊಳ್ಳುವುದು ಗಮನಕ್ಕೆ ಬಾರದವುಗಳನ್ನೇ ಅಲ್ಲವೇ!


ಫೋಟೋಗಳಲ್ಲಿ, ಮಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಸುಂದರವಾಗಿದ್ದಾನೆ ಅನ್ನಿಸಿತು ಭೇಟಿಯಾದಾಗ. ಅಲ್ಲಲ್ಲಿ ಬೆಳ್ಳಗಾದ ಗಡ್ಡದ ಮೇಲೆ ಕೈಯಾಡಿಸುತ್ತ ವಿಶ್ ಮಾಡಿದವನ ಕಣ್ಣುಗಳು ಹೊಳೆದವು. “ಹೋಗ್ಲಿ, ಹೆಂಡತಿ ಮಕ್ಕಳ ಫೋಟೋವನ್ನಾದರೂ ತೋರಿಸು ಮಾರಾಯ” ಎಂದಿದ್ದಕ್ಕೆ, ಮುದ್ದಾಗಿ ನಗುತ್ತ “ಯಾಕೆ ನನ್ನ ಮದ್ವೆ ಹಿಂದೆ ಬಿದ್ದಿದೀಯಾ, ನೀ ಯಾಕೆ ಮದ್ವೆ ಆಗಲಿಲ್ಲ ಅದನ್ನ ಹೇಳು” ಎಂದ. ನಿನ್ನಂಥ ಗಂಡಸು ಸಿಗಲಿಲ್ಲ ಎಂದು ರೇಗಿಸಬೇಕೆಂದುಕೊಂಡ ರಜನಿ, “ಯಾಕೋ ಬಂಧನಗಳ ಬಗ್ಗೆ ಆಸಕ್ತಿ ಉಳಿದಿಲ್ಲ” ಎಂದು ಸುಮ್ಮನಾದಳು. ಫ್ರೆಂಚ್ ಸಿನೇಮಾಗಳಿಂದ ಹಿಡಿದು ಪುರಂದರದಾಸರ ಕೀರ್ತನೆಗಳವರೆಗೆ ನಿರರ್ಗಳವಾಗಿ ಮಾತನಾಡುತ್ತ ಊಟ ಮುಗಿಸಿದ ಅವಿನಾಶ ಸಿಗರೇಟು ಅಂಟಿಸುತ್ತ, “ನಾನು ಮದುವೆಯಾದಾಗ ನನಗೆ ನಲವತ್ತು. ದೇಹಕ್ಕೆ ಒಂದು ಹೆಣ್ಣು ಬೇಕಿತ್ತು ಅದಕ್ಕೇ ಮದುವೆ ಆದೆ” ಎಂದ. ಬಣ್ಣದ ಮಾತುಗಳಿಲ್ಲದ ಅವನ ಕಣ್ಣುಗಳೊಳಗಿನ ಪ್ರಾಮಾಣಿಕತೆ ರಜನಿಯನ್ನು ಕಲಕಿತು; ಯಾರದೋ ಹೃದಯದ ಸತ್ಯದ ತುಣುಕೊಂದು ಇನ್ಯಾರದೋ ಫೇಸ್ ಬುಕ್ ಗೋಡೆಗೆ ಅಂಟಿಕೊಂಡಂತೆ!


ಅವಿನಾಶ ಹುಟ್ಟಿದ್ದು ಶಿವಮೊಗ್ಗದ ಹತ್ತಿರದ ಹಳ್ಳಿಯೊಂದರಲ್ಲಿ. ಬಡತನಕ್ಕೆ ದಣಿದು ಅಮ್ಮ ತೀರಿಕೊಂಡಾಗ ಇವನಿನ್ನೂ ಹತ್ತನೇ ಕ್ಲಾಸು ಮುಗಿಸಿದ್ದ. ನಾಲ್ವರು ಹೆಣ್ಣುಮಕ್ಕಳ ಮದುವೆ ಮಾಡಿ ಸೋತಿದ್ದ ಅಪ್ಪ ಅವಿನಾಶನಿಗೂ, ಅವನ ಅಣ್ಣನಿಗೂ ಮುಂದೆ ಓದಿಸಲಾರದಷ್ಟು ಸಾಲದಲ್ಲಿದ್ದ. ಆಗ ಅವಿನಾಶನಿಗೆ ದಾರಿ ತೋರಿಸಿದ್ದು ಹೈಸ್ಕೂಲ್ ಹೆಡ್ ಮಾಸ್ಟರ್ ಅವಧಾನಿಯವರು. ಅವಧಾನಿಯವರ ವಯಸ್ಸಾದ ಅಕ್ಕನನ್ನು ನೋಡಿಕೊಳ್ಳಲೆಂದು ಬೆಂಗಳೂರಿಗೆ ಬಂದವ ಇಲ್ಲೇ ಕಾನೂನು ಪದವಿ ಮುಗಿಸಿ, ಸ್ಕಾಲರ್ ಶಿಪ್ ನಲ್ಲೇ ಮಾಸ್ಟರ್ಸ್ ಮುಗಿಸಿ ಕೆಲಸ ಹಿಡಿಯುವವರೆಗೂ ನೋಡಿದ್ದು ಸಾವು ನೋವುಗಳನ್ನ. ಅವಧಾನಿಯವರ ಅಕ್ಕ ತೀರಿಕೊಂಡಮೇಲೆ ಅಮೆರಿಕಾಲ್ಲಿದ್ದ ಮಗ ಬಂದು ಇಲ್ಲಿಯ ಆಸ್ತಿಗಳನ್ನೆಲ್ಲ ಮಾರಿ ರಾಜಾಜಿನಗರದ ಹಳೆಯ ಮನೆಯೊಂದನ್ನು ಅವಿನಾಶನಿಗೆ ಬಿಟ್ಟು ಹೋಗಿದ್ದ. ವಠಾರದಂತೆ ಅಂಟಿಕೊಂಡ ಮನೆಗಳ ಮಧ್ಯದ ಮನೆಯೊಂದರಲ್ಲಿ ಅವಳ ಅಮ್ಮನೊಂದಿಗೆ ವಾಸಿಸುತ್ತಿದ್ದವಳು ಸುಷ್ಮಾ. ಮೂವರು ಹೆಣ್ಣುಮಕ್ಕಳಲ್ಲಿ ಕೊನೆಯವಳಾಗಿದ್ದ ಸುಷ್ಮಾ ಚಿಕ್ಕಬಳ್ಳಾಪುರದ ಪ್ರಾಥಮಿಕ ಶಾಲೆಯೊಂದರ ಟೀಚರಾಗಿದ್ದವಳು ಮನೆಗೆ ಬರುತ್ತಿದ್ದದ್ದು ಶನಿವಾರದ ಸಂಜೆ. ಎರಡು ಬಿಯರ್ ಕುಡಿದು ಒಬ್ಬನೇ ಕುಳಿತು ಪುಸ್ತಕ ಓದುತ್ತಲೋ, ಸಿನೆಮಾ ನೋಡುತ್ತಲೋ ಕಾಲ ಕಳೆಯುತ್ತಿದ್ದ ಅವಿನಾಶನಿಗೆ ಅವಳಮ್ಮ ಕಳುಹಿಸುತ್ತಿದ್ದ ಒಬ್ಬಟ್ಟನ್ನೋ, ಕಜ್ಜಾಯವನ್ನೋ ಕೊಡಲಿಕ್ಕೆಂದು ಬಂದವಳು ಇವನಲ್ಲಿ ಆಸೆ ಹುಟ್ಟಿಸಲಾರಂಭಿಸಿದಳು. ಸುಷ್ಮಾ ಮೂವತ್ತೈದಾದರೂ ಮದುವೆಯಾಗದೇ ಉಳಿದಿದ್ದು ಅವಳ ಸಾಧಾರಣ ರೂಪದಿಂದಾಗಿ. ಅಕ್ಕಂದಿರ ಮದುವೆಗೆಂದು ಮಾಡಿದ್ದ ಸಾಲ ತೀರಿಸುವಷ್ಟರಲ್ಲಿ ಅವಳ ಅಪ್ಪ ತೀರಿಕೊಂಡಿದ್ದ.


“ಅವಳ ಅಮ್ಮನಿಗೆ ನಾನು ಮಗಳಿಗೆ ತಕ್ಕ ವರ ಎನ್ನಿಸಿರಬಹುದು. ಇವಳು ನಮ್ಮನೆಗೆ ಬರುವಾಗ ಬ್ರಾ ಹಾಕ್ತಾನೇ ಇರಲಿಲ್ಲ ಗೊತ್ತಾ. ಒಬ್ಬಟ್ಟಿನ ನೆಪದಲ್ಲಿ ನನ್ನ ಮೈ ಕೈ ಮುಟ್ಟುತ್ತಾ ಅವಳು ನನ್ನ ಕೆರಳಿಸಲಿಕ್ಕೆ ಪ್ರಯತ್ನಿಸಿದ್ದು ನನಗೆ ತಿಳಿದಿಲ್ಲವೆಂದೇ ಈಗಲೂ ಅಂದುಕೊಂಡಿದ್ದಾಳೆ. ನಾನೂ ಹೇಳುವುದಿಲ್ಲ ಬಿಡು. ಸುಳ್ಳುಗಳೇ ಸಂಬಂಧವನ್ನು ಸಲಹುತ್ತವೆ ಒಮ್ಮೊಮ್ಮೆ. ಅವುಗಳಿಂದ ಬಿಡಿಸಿಕೊಂಡ ಕ್ಷಣಕ್ಕೆ ಸಂಬಂಧಗಳೂ ಬಿಡಿಸಿಕೊಂಡು ದೂರಾಗಿಬಿಡಬಹುದು. ಒಮ್ಮೆ ಬಂಧನಕ್ಕೆ ಬಿದ್ದ ಮನುಷ್ಯ ಎದ್ದು ಓಡುವುದಾದರೂ ಎಲ್ಲಿಗೆ ಹೇಳು. ನೀನೂ ಅಷ್ಟೇ ನನ್ನಿಂದ ತಪ್ಪಿಸಿಕೊಳ್ಳಲಾರೆ. ನಿನಗೆ ಮಧುವಂತಿ ಅಂತ ಹೆಸರಿಡಬೇಕಿತ್ತು ಕಣೇ. ಇನ್ನೊಂದಿನ ಹೇಳ್ತೀನಿ ನಿಂಗೆ ಮಧುವಂತಿ ರಾಗದ ಬಗ್ಗೆ. ಬಾ ಹೊರಡೋಣ” ಎನ್ನುತ್ತಾ ಹೆಗಲು ಬಳಸಿದ. ಮುಸ್ಸಂಜೆಯ ರಾಗಗಳೆಲ್ಲ ಒಂದೊಂದಾಗಿ ಹೆಜ್ಜೆಹಿಡಿದವು.

********

One thought on “ಕಥಾಯಾನ

  1. ಏನೋ ಹೇಳ ಹೊರಟು, ಏನೆಲ್ಲ ಹೇಳುವಲ್ಲಿ ಸಫಲವಾಗಿ ನವುರಾದ ಭಾವ ವಿನ್ಯಾಸಗೈವ ಸುಂದರ ಕಥಾನಕ. ಗೋಪಾಲ ತ್ರಾಸಿ

Leave a Reply

Back To Top