ಅಂಕಣಬರಹ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು
ಪರಿಶುದ್ಧ ಮನಸ್ಸಿನ ಶರಣೆ ಸಂಕವ್ವೆ
ಸೂಳೆ ಸಂಕವ್ವೆ ತಳ ಸಮಾಜದ ಬಹಿಷ್ಕೃತ ಸಮೂಹದ ಶ್ರೇಷ್ಠ ಶರಣೆ. ಈಕೆಯ ಹೆಸರಿನಿಂದಿರುವ ವಿಶೇಷಣದಿಂದ ಇವಳು ವೇಶ್ಯಾವೃತ್ತಿ ಮಾಡುತ್ತಿದ್ದು ಬಸವಣ್ಣನವರ ವಚನ ಚಳುವಳಿಯ ಪ್ರಭಾವದಿಂದ ತನ್ನ ವೇಶ್ಯಾವೃತ್ತಿಯನ್ನು ಸಂಪೂರ್ಣ ತೊರೆದು ಶರಣರ ಸಂಪರ್ಕಕ್ಕೆ ಬಂದು, ವಚನ ರಚನೆಗೆ ತೊಡಗಿಸಿಕೊಂಡವಳು. ಅನುಭವ ಮಂಟಪದ ಸಕ್ರಿಯ ಕಾರ್ಯಕರ್ತ ಆದಳು. ಕೊಟ್ಟಣದ ಸೊಮವ್ವೆ ಇವರ ವಚನ ಅಂಕಿತ ಒಂದೇ ಆಗಿದ್ದು ಕೂಡ ವಿಶೇಷ. ಹರಿಹರ ತನ್ನ ರಗಳೆಯಲ್ಲಿ ಹದಿನಾರು ಸಾವಿರು ವೇಶ್ಯೆಯರು ಕಲ್ಯಾಣದಲ್ಲಿದ್ದು ಬಸವಣ್ಣ ಅವರನ್ನು ಪುಣ್ಯ ಅಂಗನೆಯಾರನ್ನಾಗಿ ಮಾಡಿದನು ಎಂದು ಭಾವ ಪರವಶ ಬರಹ ಹೇಳಿಕೆ ಮುಂದೆ ಅನೇಕ ತಪ್ಪು ಗ್ರಹಿಕೆ ಕಲ್ಪನೆಗೆ ಕಾರಣ ಆದದ್ದು ನಿಜ. ಶರಣೆ ಸಂಕವ್ವೆ ಸತ್ಯ ಶುದ್ಧ ಕಾಯಕ ಮಾಡಿ ಎಲ್ಲಾ ರೀತಿಯಲ್ಲೂ ಕಲ್ಯಾಣದ ಮಹಾಮನೆಗೆ ಕ್ರಾಂತಿ ಜ್ಯೊತಿಯಾದಳು. ತನ್ನ ಹಾಗೆ ಶೋಷಣೆಗೆ ಒಳಗಾದವರನ್ನು ಸಂಘಟಿಸಿ ವಚನ ಚಳುವಳಿಯ ನಾಯಕತ್ವ ವಹಿಸಿಕೊಂಡಳು. ಅವಳನ್ನು ಸೂಳೆ ಎಂದು ಕರೆಯುವುದು ಯಾವ ನ್ಯಾಯ ? ಯಾವ ವಚನಕಾರರ ವಚನಗಳಲ್ಲಿ ಸಂಕವ್ವೆಯನ್ನು ಸೂಳೆ ಎಂದು ಸಂಭೊದಿಸಿಲ್ಲ
ಹಾಗಿದ್ದಾಗ ಅವಳನ್ನು ಶರಣೆ ಸಂಕವ್ವೆ ಎಂದು ಕರೆಯ ಬೇಕಲ್ಲವೇ ?
ಅವಳ ಒಂದೇ ಒಂದು ವಚನದಲ್ಲಿ ತಾನು ಮೊದಲು ವೇಶ್ಯೆ ವೃತ್ತಿ ಮಾಡುತ್ತಿದ್ದು ಅದರ ಹಿಂದಿನ ನೋವು ಯಾತನೆ ವಿವರಿಸಿ ತಾನು ಲಿಂಗ ಜಂಗಮ ಸಮಾಜದ ಋಣ ಸಂದಾಯ ಮಾಡುವ ನಿಟ್ಟಿನಲ್ಲಿ ಹೇಯ ಕಾರ್ಯ ಬಿಟ್ಟು ಸದ್ಗತಿ ಹೊಂದಲು ಶರಣ ಸಮೂಹ ಸೇರಿ ಕೊಂಡವಳು.
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
ಈ ವಚನದಲ್ಲಿ ಅತ್ಯಂತ ಸ್ಪಷ್ಟವಾಗಿ ತಾನು ಹಿಂದಿನ ಕಹಿ ನೆನಪುಗಳನ್ನ ಮರೆತು ಸತ್ಯ ಶುದ್ಧ ಕಾಯಕ ಮಾಡುವ ಬಸವಣ್ಣನವರ ನಾಯಕತ್ವದ ಅನುಭವ ಮಂಟಪದ ಸಕ್ರಿಯ ಕಾರ್ಯಕರ್ತ ಆದಳು.
ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ತನ್ನ ಹಿಂದಿನ ಸೂಳೆಗಾರಿಕೆಗೆ ಸಂಬಂಧಿಸಿದ ಅಂದಿನ ರೀತಿ ನೀತಿ ಕಟ್ಟಳೆ ಬಗ್ಗೆ ವಿವರಿಸಿದ್ದಾಳೆ.
ಒಬ್ಬರಿಗೆ ಒತ್ತೆಯಾಗಿ ಇದ್ದು ಇನ್ನೊಬ್ಬರನ್ನು ಒಲೈಸುವ ಅಥವಾ ಸೇರುವ ಹಾಗಿರಲಿಲ್ಲ.
ಒಬ್ಬರ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದು ಮತ್ತೆ ಬೇರೆ ಯಾರಾದರ ಜೊತೆಗೆ ಸೇರಲಾಗದು. ಒಂದು ಒತ್ತೆಯ ಬಿಟ್ಟು ಇನ್ನೊಂದು ಒತ್ತೆಯ ಹಿಡಿಯಲಾಗದು.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ಒಂದು ವೇಳೆ ಒಬ್ಬರ ಜೊತೆಗೆ ಸಂಬಂಧ ಮಾಡಿ ಅವರ ಒತ್ತೆ ಆಳು ಆಗಿ ಮತ್ತೊತ್ತೆಯ ಹಿಡಿಯಲಾಗದು. ಹಾಗೆನಾದರು ಆದಲ್ಲಿ ಅಂದಿನ ಕಠಿಣ ಶಿಕ್ಷೆ ಬೆತ್ತಲೆ ಮಾಡಿ ಕೊಲ್ಲುವ. ಆದೇಶ ನೀಡುವಂತೆ ಮಾಡುತ್ತಿದ್ದರು.
ಹೀಗಾಗಿ ಏಕ ವ್ಯಕ್ತಿ ನಿಷ್ಠೆ ಸಂಬಂಧ ಹೊಂದಿರುವುದು ಅನಿವಾರ್ಯ ಮತ್ತು ಅಸಹಾಯಕತೆ. ಅದೊಂದು ಕ್ರೂರ ಶಿಕ್ಷೆ.
ವ್ರತಹೀನನನರಿದು ಬೆರೆದಡೆ ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ.
ವೇಶ್ಯೆಗಾರಿಕೆ ಅಂದಿನ ಕಾಲದ ಒಂದು ಗೌರವಯುತ ವೃತ್ತಿ ಆಗಿತ್ತು. ಒಬ್ಬ ವೇಶ್ಯೆ ಪ್ರಾಮಾಣಿಕ ಸತ್ಯ ಶುದ್ಧ ಕಾಯಕ ಮಾಡುವ ವ್ಯಕ್ತಿಯ ಜೊತೆಗೆ ದೈಹಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅವನ ಇಷ್ಟಾರ್ಥ ಪೂರೈಸುತ್ತಿದ್ದ ಮಹಿಳೆಗೆ ಸಾಮಾಜಿಕ ಸ್ಥಾನಮಾನವಿತ್ತು. ಒಂದು ವೇಳೆ ಸೂಳೆ ವ್ರತಹೀನನನರಿದು ಕೂಡಿದೊಡೆ ಅಂದಿನ ಕಾಲದ
ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವವ ಉಗ್ರ ಶಿಕ್ಷೆ ಕಟ್ಟಳೆ ಇತ್ತು. ಇದನ್ನು ತಾನು ಬೇರೆ ಸೂಳೆ ವೇಶ್ಯೆಯರಿಂದ ನೋಡಿದ ಅನುಭವ ಹಂಚಿ ಕೊಂಡಿದ್ದಾಳೆ.
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
ಈ ಕೊನೆಯ ಎರಡು ಸಾಲು ವಚನ ಅನುಸಂಧಾನದ ಮಹತ್ತರ ತಿರುವು.
ಅಂದಿನ ಕಾಲದ ಸಾಮಾಜಿಕ ಪಿಡುಗು ಸುಲಿಗೆ ಶೋಷಣೆ ಹಿಂಸೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಇರುವ ವ್ಯತ್ಯಾಸ ಇವುಗಳನ್ನು ಕಂಡು ಅರಿತು ಅಂತಹ ವ್ಯವಸ್ಥೆಯಿಂದ ವಿಮುಖ ಆಗಿ ಶರಣ ಸಮೂಹ ಕೂಡುವದಾಗಿ ಹೇಳಿಕೊಂಡು
ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
ಅಂದಿನ ಸಾಮಾಜಿಕ ನ್ಯಾಯ ಕಾನೂನು ಅಬಲೆಯರಿಗೆ ಅತ್ಯಂತ ಕ್ರೂರವಾಗಿತ್ತು. ಇದನ್ನು ಬಲ್ಲೆನಾಗಿ ಮತ್ತೆ ಅಂತಹ ಸಮಾಜದ ಕಟ್ಟಳೆ ರೀತಿಗೆ ಒಲ್ಲೆನಯ್ಯ ಎಂದು ಹೇಳುತ್ತಾ ಇಲ್ಲಿ ಇಷ್ಟ ಲಿಂಗ ಗುರು ಜಂಗಮ ಕಾಯಕ ದಾಸೊಹ ವ್ಯವಸ್ಥೆಯಲ್ಲಿ ಬದುಕುವೆನೆ ಹೊರತು ಅಂತಹ ಹೇಯ ವ್ಯವಸ್ಥೆಗೆ ಹೊಗುವದಿಲ್ಲ ಎಂದು ಹೇಳಿರುವ. ದಿಟ್ಟ ಶರಣೆ
ಇಲ್ಲಿಯೂ ಕೂಡ ಇಷ್ಟ ಲಿಂಗ ಜಂಗಮ ವ್ಯವಸ್ಥೆಗೆ ಒತ್ತೆ ಇರುವದಾಗಿ ಮತ್ತು ಅದನ್ನು ಹೊರತು ಪಡಿಸಿ ಬೇರೆ ವ್ಯವಸ್ಥೆಗೆ ಒತ್ತೆ ಇಟ್ಟರೆ ಹಿಂದಿನ ಕಾಲದ ಅನುಭವಿಸಿದ ಕ್ರೂರ ಶಿಕ್ಷೆ ಇಲ್ಲಿಯೂ ಅನುಭವಿಸಿದ ಹಾಗೆ ಎಂದು ಹೇಳಿ ತನ್ನ ಲಿಂಗ ಜಂಗಮ ಸಮಾಜದ ನಿಷ್ಠೆ ಮೆರೆದಿರುವಳು. ಶರಣೆ ಸಂಕವ್ವೆ ಎನ್ನುವುದು ಸೂಕ್ತ. ಅದೇ ರೀತಿ ಹಾದರ ಕಾಯಕದ ಗಂಗಮ್ಮ.
ಅದು ಹಾದರ ಅಲ್ಲ ಹರದ ಅಂದರೆ ಸಣ್ಣ ಪುಟ್ಟ ವ್ಯಾಪರ ಮಾಡುವ ಮಹಿಳೆ ಎಂದರ್ಥ.
ಕೆಲವು ಕೆಳ ಸಮುದಯದ ಮಹಿಳೆಯರನ್ನು ಪುಣ್ಯ ಸ್ತ್ರೀ ಎಂದು ಕರೆಯುವುದು ಕೂಡ ದೊಡ್ಡ ತಪ್ಪು.
ಶರಣೆ ಸಂಕವ್ವೆ ಪ್ರಾಮಾಣಿಕ ಸತ್ಯ ಶುದ್ಧ ಶರಣೆ.
————————————————
ಡಾ ಶಶಿಕಾಂತ ಪಟ್ಟಣ ರಾಮದುರ್ಗ
*ಡಾ ಶಶಿಕಾಂತ ಪಟ್ಟಣ – ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಸೈನಿಕ ಶಾಲೆ ವಿಜಯಪುರದಲ್ಲಿ ಪೂರೈಸಿದರು. ವೃತ್ತಿಯಲ್ಲಿ ಔಷಧ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತಿ ವಿಮರ್ಶಕ ಸಂಶೋಧಕ ಮತ್ತು ಹೊರತಾಗಾರರು. ಇವರು ಇಲ್ಲಿಯವರೆಗೆ 42 ಪುಸ್ತಕಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಗಾಂಧಿಗೊಂದು ಪತ್ರ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನದ 2022 ಶಾಲಿನ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿ ಪಡೆದಿದ್ದಾರೆ. ಜನೆವರಿ 2023 ರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ*
ಅರ್ಥ ಪೂರ್ಣ ಚಿಂತನೆ ಸರ್
ಉತ್ತಮ ಗುಣಮಟ್ಟದ ವಿಶ್ಲೇಷಣೆ ಸರ್
ಪ್ರಾಮಾಣಿಕ ಸತ್ಯ ಶುದ್ಧ ಶರಣೆ ಸಂಕವ್ವೆಯ
ವಚನದ ಸಾರದೊಂದಿಗೆ … ಇಂದಿನ ಲೇಖನ ಎಲ್ಲರ ಕಣ್ತೆರೆಸುವಂತೆ…. ಅತ್ಯುತ್ತಮವಾದ ವಿಶ್ಲೇಷಣೆಯೊಂದಿಗೆ ಮೂಡಿಬಂದಿದೆ… ಸರ್
ಸುಶಿ