ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
“ಸ್ವಪ್ನ”
ಗಾಳಿಲ್ಲ ಧೂಳಿಲ್ಲ
ಗೋರಿಯೊಳಗೆ !
ನಿನ್ನ ನೆನಪಬಿಟ್ಟು
ಮತ್ತೇನಿಲ್ಲ ಗಾಳಿಯಾಡದ
ಈ ಎದೆಯೊಳಗೆ !!
ಬೆಳಕಿಲ್ಲ ಹೊಳಪಿಲ್ಲ
ಗೋರಿಯೊಳಗೆ !
ನಿನ್ನ ಮಾತುಮಾತ್ರ
ಗುಂಞ್ಯೀ..ಗುಡುತ್ತಿವೆ
ಕಿವಿಯೊಳಗೆ !!
ಹಾಸಿಲ್ಲ ಹೊದ್ದಿಲ್ಲ
ಗೋರಿಯೊಳಗೆ !
ನಿನ್ನ ಪಟವೇ ಹೊದಿಕೆ
ನಿನ್ನೊಲವೇ ಚಾಪೆ ನನಗೆ !!
ರವಿಯಿಲ್ಲ ಶಶಿಯಿಲ್ಲ
ನಕ್ಷತ್ರಗಳ ಸುಳಿವೂ ಇಲ್ಲ
ನಿನ್ನಕಚಗುಳಿ ಮಾತ್ರ ಜೊತೆ
ಎನಗೆ ಗೋರಿಯೊಳಗೆ !!
ಎಡ ಹೊರಳಿಲ್ಲ
ಬಲ ಹೊರಳಿಲ್ಲ
ಎದ್ದು ಕುಳ್ಳಲು ಜಾಗವಿಲ್ಲ
ನಿನ್ನನೆದ್ದೆಂತು ತಬ್ಬಲಿ
ಗೋರಿಯೊಳಗೆ !!
ಆರಡಿಗೂ ಹೆಚ್ಚು
ಮೂರಡಿಗೂ ಕಡಿಮೆ !
ಗೋರಿಗೇನು ಗೊತ್ತು
ನಿನ್ನೊಲವಿನಲ್ಲಿಲ್ಲ
ಹೆಚ್ಚು ಕಡಿಮೆ !!
ಬೆಳ್ಳಂಬೆಳಕು ಪರಮಾಶ್ಚರ್ಯ !
ನಿದ್ದೆಯಿಂದೆದ್ದು ಕಣ್ಣ
ತಿಕ್ಕಿ ದಿಟ್ಟಿಸಿದರೆ ಎದುರಿಗೆ
ಸಾಕ್ಷಾತ್ ನೀನೇ !!
ಅರಿವು ತಟ್ಟಿತೇನೋ ನಿಜ !
ಮರೆವು ಮಾಯವಾಗಲಿಲ್ಲ
ಮತ್ತೆ ಹೊಕ್ಕಿತು ಕನಸು
ಗೋರಿಯೊಳಗೆ
ಇಮಾಮ್ ಮದ್ಗಾರ