ಯಾವುದೇ ಕೆಲಸಗಳನ್ನು ಮಾಡುವಾಗ ಹಿರಿಯರು ಹೇಳುತ್ತಾರೆ ಕಾಲ ಬದಲಾಗಿದೆ ಎಂದು. ಕಾಲವಲ್ಲ ಹೌದು ಖಂಡಿತವಾಗಿಯೂ ಜನರು ಬದಲಾಗಿದ್ದಾರೆ. ಜನರ ನಡೆ-ನುಡಿಗಳು,  ಬಟ್ಟೆ – ಬರೆಗಳು,  ಮಾಡುವ ಕೆಲಸಗಳು,  ಆಸೆ – ಆಕಾಂಕ್ಷೆಗಳು , ಬದುಕಿನ ಶೈಲಿ, ಆಹಾರ ಪದ್ಧತಿ, ಆಲೋಚನೆಗಳು ಎಲ್ಲವೂ ಬದಲಾಗಿದೆ.  ಅದೊಂದು ಕಾಲವಿತ್ತು ಇಲ್ಲಿ ಭಾರತೀಯ ಸಂಸ್ಕೃತಿ ಎದ್ದು ಕಾಣುತ್ತಿತ್ತು. ಆಯಾ ರಾಜಕ್ಕೆ ತಕ್ಕಂತೆ ಬರೆಗಳನ್ನು ಜನ ತೊಡುತ್ತಿದ್ದರು. ಜನರ ಬಟ್ಟೆಗಳನ್ನು ನೋಡಿ ಇಂಥವರು ಈ ರಾಜ್ಯದ ಜನ ಅಥವಾ ಇಂಥವರು ಈ ಬುಡಕಟ್ಟು ಸಮಾಜದ ಜನ ಎಂದು ಇತರರು ಗುರುತಿಸುತ್ತಿದ್ದರು. ಅದೆಲ್ಲ ಮಾಯವಾಗಿ ಇಂದು ಆಂಗ್ಲರ ಪ್ಯಾಂಟು ಶರ್ಟು ಬಂದುಬಿಟ್ಟಿದೆ. ಅಂದವಾದ ಪ್ಯಾಂಟು ಶರ್ಟ್ ಧರಿಸಿದಿದ್ದರೆ ಏನೋ ಬಟ್ಟೆ ಬರೆಯಲ್ಲಿ  ಸ್ವಲ್ಪ ಏಕತೆ ಅನ್ನಬಹುದಿತ್ತೇನೋ! ಆದರೆ ಹಿಂದಿನ ಯುವ ಜನಾಂಗ ಧರಿಸುವ ಬಟ್ಟೆ ತೋಳುಗಳಿಲ್ಲದ ಶರ್ಟು,  ಹರಿದು ತುಂಡು ತುಂಡಾದ ಪ್ಯಾಂಟು, ಬೆಳೆದ ಹೆಣ್ಣು ಮಕ್ಕಳು ಕಾಲಿನ ಗಂಟಿನಿಂದ ಮೇಲೆವರೆಗಿನ ಚಡ್ಡಿ ಹಾಕಿ ಇಡೀ ಲೋಕ  ಸುತ್ತುತ್ತಿರುತ್ತಾರೆ. ತನ್ನ ಅಂಗಾಂಗ ಪ್ರದರ್ಶನಗೊಳ್ಳುತ್ತಿದೆ, ಇದನ್ನು ಇತರರು ನೋಡುವಾಗ ಅವರು ಉದ್ರೇಕಗೊಳ್ಳುತ್ತಾರೆ ಎನ್ನುವಂತಹ ಸಾಮಾನ್ಯ ಪರಿಜ್ಞಾನವೂ ಅವರಲ್ಲಿ ಇಲ್ಲವಾಗಿದೆ. ಈ ರೀತಿಯ ಬಟ್ಟೆಗಳನ್ನು ಪ್ರೋತ್ಸಾಹಿಸುವಂತಹ ಪೋಷಕರು ಕೂಡ ಅದರ ಬಗ್ಗೆ ಯೋಚನೆಯನ್ನು ಮಾಡುವುದಿಲ್ಲ. ಹರಣ ಈಗ ಗಂಡು ಹೆಣ್ಣು ಸಮಾನತೆ ಬಂದಿದೆ. ಗಂಡು ಯಾವ ರೀತಿ ಸುತ್ತಾಡುತ್ತಾನೋ ಅದೇ ತರ ಹೆಣ್ಣು ಮಗಳು ಕೂಡ. ಇದನ್ನು ಒಳ್ಳೆಯ ಲಕ್ಷಣವೆಂದು ಹೇಳಬೇಕೋ  ಅಥವಾ ಆಧುನಿಕತೆಯ ಹುಚ್ಚು ಎನ್ನಬೇಕು ತಿಳಿಯದು.


   ಸಮಾನತೆಯನ್ನು ಸರಿಯಾದ ರೀತಿ ಆದರೆ ಸಮಾಜದ ಸ್ವಾಸ್ಥ್ಯ ಕೆಡಬಾರದು ಅಲ್ಲವೇ? ಅಮೆರಿಕಾದಂತಹ ದೇಶಗಳಲ್ಲಿ ಹದಿಹರೆಯದ ವಿದ್ಯಾರ್ಥಿಗಳಿಗೆ ಅಳುವ ಗೊಂಬೆಗಳನ್ನು ಕೊಡಲಾಗುತ್ತದೆಯಂತೆ. ಅದು ಚಿಕ್ಕ ಮಕ್ಕಳಂತೆ ವರ್ತಿಸುತ್ತಾ, ಸಣ್ಣ ವಯಸ್ಸಿನಲ್ಲಿ ಮಕ್ಕಳಾದರೆ ಅವರನ್ನು ನೋಡಿಕೊಳ್ಳುವುದು ಅದೆಷ್ಟು ಕಷ್ಟ ಎಂಬುದನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಲು ಹೀಗೆ ಮಾಡುತ್ತಾರೆ. ಭಾರತ ಕೂಡ ಇಂತಹ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಒಂದೊಂದು ಶಾಲೆಗಳಲ್ಲಿ ಮದುವೆ ಆಗುವ ಮೊದಲು ಹುಟ್ಟಿದ ಮಕ್ಕಳು, ತಂದೆ ತಾಯಿ ಯಾರೆಂದೇ ಅರಿಯದ ಅನಾಥಾಲಯಗಳಲ್ಲಿ ಬೆಳೆಯುತ್ತಿರುವ ಮಕ್ಕಳು, ದತ್ತು ತೆಗೆದುಕೊಂಡು ಪೋಷಿಸಿದ ಮಕ್ಕಳು, ಅಜ್ಜಿ ಸಾಕುತ್ತಿರುವ ಮಕ್ಕಳು, ವಿವಿಧ ಆಶ್ರಮಗಳಲ್ಲಿ ಸೇರಿಕೊಂಡಂತಹ ಮಕ್ಕಳು, ಕುಟುಂಬದ ಯಾರೋ ಇತರರು ಸಾಕುತ್ತಿರುವoತಹ ಮಕ್ಕಳು, ತಾನು ಯಾರು ಎಲ್ಲಿ ಏನು ಎಂದು ಗೊತ್ತಿರದೆ ಇನ್ಯಾರದೋ ಬಳಿಯಲ್ಲಿ ಬೆಳೆಯುತ್ತಿರುವ ಮಕ್ಕಳು, ಸಮಾಜದ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳಲಾದ ಯಾರದೋ ಮಕ್ಕಳು, ಯಾವುದೋ ದೇಶದಿಂದ ಯಾವುದೋ ರಾಜ್ಯದಿಂದ ಅದ್ಭುತ ಅಪ್ಪಿ ಬಂದು ಇಲ್ಲೇ ನಿಲ್ಲಿಸಿ ಬದುಕು ನಡೆಸುತ್ತಿರುವಾಗ ತಂದೆ ತಾಯಿಗಳಿಬ್ಬರು ಮರಣ ಹೊಂದಿ ಬದುಕುತ್ತಿರುವ ಮಕ್ಕಳು ಹೀಗೆ ಬದುಕು ಬಹಳ ಶೋಚನೀಯವಾಗಿ ಇದ್ದು ಇಂತಹ ಮಕ್ಕಳನ್ನು ಹೆಚ್ಚಾಗಿ ಸಾಮಾಜಿಕ ಸೇವಾ ಕಾರ್ಯಕರ್ತರು, ಎನ್‌ಜಿಓಗಳು ನಡೆಸುತ್ತಿರುವ ಆಶ್ರಮಗಳು, ಅನಾಥಾಲಯಗಳು ಸಾಕುತ್ತವೆ. ಅವರೆಲ್ಲರೂ ಕೂಡ ಹೆಚ್ಚಾಗಿ ಬೇರೆ ಬೇರೆ ದೇಶಗಳಿಂದ ಪಠ್ಯ ಬರೆಗಳನ್ನು ತಂದು, ಕೆಲವು ಸಲ ನಮ್ಮ ದೇಶದಲ್ಲಿ ಸಿಗುವ ಬಟ್ಟೆ ಬರೆಗಳನ್ನು ತಂದು ಆ ವಿದ್ಯಾರ್ಥಿಗಳನ್ನು ಪೋಷಿಸುತ್ತಾರೆ. ಅಂತಹ ಮಕ್ಕಳಿಗೆ ಯಾವ ರೀತಿಯಲ್ಲಿ ಬಟ್ಟೆಗಳನ್ನು ತೊಡಬೇಕು ನಾವು ಹಾಕುವ ಬಟ್ಟೆಗಳು ಯಾವ ರೀತಿ ಇರಬೇಕು ಇವುಗಳನ್ನು ಹೇಳಿಕೊಡುವವರು ಆಶ್ರಮದವರೇ ಆಗಿರುತ್ತಾರೆ. ಅವರು ಅವರ ಬಳಿ ಇರುವಂತಹ ಬಟ್ಟೆಗಳನ್ನೇ ಹಾಕಿಸಿ ಅಭ್ಯಾಸ ಮಾಡಿಸಿರುತ್ತಾರೆ. ಇದರಲ್ಲಿ ಹೆಚ್ಚು ಇಂತಹ ಮಾಡರ್ನ್ ಡ್ರೆಸ್ ಗಳೇ ಆಗಿರುತ್ತವೆ. ಹೀಗೆ ಬೆಳೆದ ಮಕ್ಕಳ ಮುಂದೆ ಅದೇ ರೀತಿಯ ಬಟ್ಟೆಗೆ ಅಂಟಿಬಿಡುತ್ತಾರೆ. ಅವರೇನೋ ಬಟ್ಟೆ ಇಲ್ಲದೆ ಇನ್ಯಾರೋ  ಕೊಟ್ಟ ಬಟ್ಟೆಗಳನ್ನು ಹಾಕಿ ಬೆಳೆದು ದೊಡ್ಡವರಾಗಿ , ಇಲ್ಲಿ ಬೆಳೆದವರು. ಅವರಿಗೆ ಸಿಕ್ಕಿದ ಬಟ್ಟೆಗಳದ್ದೇ ಸಂಸ್ಕೃತಿ. ಇನ್ನು ಇಲ್ಲಿನ ಸಂಸ್ಕೃತಿಯನ್ನು  ಅವರು ಮರೆತರು ಎನ್ನಲಾಗದು. ಅವರು ಬೆಳೆದು ಬಂದ ವಾತಾವರಣವೇ ಹಾಗಿರುತ್ತದೆ. ಅಲ್ಲಿಯೂ ಕೂಡ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಸಮಾನವಾಗಿಯೇ ಬೆಳೆದಿರುತ್ತಾರೆ.
   ಇನ್ನೊಂದು ವರ್ಗವಿದೆ ಭಾರತದಲ್ಲಿ ಇದು ಒಳ್ಳೆಯದೋ ಕೆಟ್ಟದೋ ತಿಳಿಯದು. ಸಿರಿವಂತರು ಎಂಬ ವರ್ತ. ಅವರು ಏನು ಮಾಡಿದರೂ ಸರಿಯೇ. ಕಾರಣ ಅವರು ಮಾಡೆಲ್ ಗಳು, ಆಕ್ಟರ್ಗಳು, ಮಂತ್ರಿಗಳ ಮಕ್ಕಳು, ದೊಡ್ಡ ದೊಡ್ಡ ಬಿಸಿನೆಸ್  ಮ್ಯಾಗ್ನೆಟ್ ಗಳು, ಎಲ್ಲರೂ ಅವರ ಫಾಲೋವರ್ಸ್ ಗಳೇ ಆಗಿರುವಾಗ ಇನ್ನು ಯಾರಿಗೆ ತಾನೇ ಹೇಳಲು ಸಾಧ್ಯ? ಬೆಕ್ಕಿಗೆ ಘಂಟೆ ಕಟ್ಟುವವರು ಯಾರೋ..
      ಈಗಿನ ಆಹಾರವು ಅಷ್ಟೇ ಹೇಳುವಂತಿಲ್ಲ ಹಿರಿಯರಿಗೂ ರುಚಿ ಬೇಕು ಕಿರಿಯರಿಗೂ ರುಚಿ ಬೇಕು. ರುಚಿಯನ್ನು ಉಂಟುಮಾಡಲು ಒಂದು ರಾಸಾಯನಿಕ ವಸ್ತು. ಅದನ್ನು ಬಳಸಿದರೆ ಮಾತ್ರ ಊಟ ಸೇರುತ್ತದೆ. ಹೆಚ್ಚಿನ ಮನೆಗಳಲ್ಲಿ ಆಗುತ್ತಿರುವ ಕೂಟದ ಕಥೆ ಇದು. ಮನೆಯಲ್ಲಿ ಮಾಡಿದ ಊಟ ಮಕ್ಕಳಿಗೆ ಸೇರದು ಎಂದು ಅರಿತ ಮನೆಯೊಡತಿ ಮನೆಯಿಂದ ಹೊರಗಿನ ಊಟ ತಿನ್ನಲು ಅವರನ್ನು ಪ್ರೇರೇಪಿಸುತ್ತಾರೆ. ಹೌದು ಮನೆಯಿಂದ ಹೊರಗೆ ಮಾಡಿದ ಊಟದ ರುಚಿ ತುಂಬಾ ಚೆನ್ನಾಗಿರುತ್ತೆ. ಕಾರಣ? ಅಷ್ಟೇ ರುಚಿಯನ್ನು ಕೊಡುವ ಕುಡಿಯನ್ನು ಬಳಸಿದರೆ ಆಯಿತು. ಇದನ್ನು ತಿಂದರೆ ದೇಹದಲ್ಲಿ ಮುಂದೆ ಆಗುವಂತಹ ದುಷ್ಪರಿಣಾಮಗಳಿಗೆ ಯಾರು ಹೊಣೆ? ಹೌದು ದೊಡ್ಡ ದೊಡ್ಡ ಆಸ್ಪತ್ರೆಗಳು ತಲೆ ಎತ್ತುತ್ತಲೇ ಇವೆ. ಡಾಕ್ಟರ್ ಗಳ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಆಸ್ಪತ್ರೆಗಳ ಬಿಲ್ಲುಗಳ ಉದ್ದವೂ ಮತ್ತು ತೂಕವು ಕೂಡ ದೊಡ್ಡದಾಗುತ್ತಲೇ ಇದೆ. ದುಡಿದು ಗಳಿಸಿದ ಎಲ್ಲಾ ಹಣವನ್ನು ಅದಕ್ಕೆ ಸುರಿದ ಬಳಿಕವೂ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಶಿಕ್ಷೆ ಬೇಡುವಂತಹ ಕಾಲಕ್ಕೆ ನಾವು ಇಳಿದಿದ್ದೇವೆ. ಸರಕಾರ ಕೊಡ ಮಾಡುವಂತಹ ಯಾವುದಾದರೂ ಮೆಡಿಕಲ್ ಸಹಾಯಗಳು ಎಲ್ಲಾ ಬಿಲ್ಲುಗಳನ್ನು ಭರಿಸಲು ಸಾಧ್ಯವಾಗದು. ಪ್ರತಿದಿನ ಹೆಚ್ಚಾಗುತ್ತಿರುವ, ಜನಸಂಖ್ಯೆಯಿಂದ ತುಂಬಿ ಹರಿಯುತ್ತಿರುವ ಈ ಭಾರತ ದೇಶದಲ್ಲಿ ಈ ರೀತಿಯಾಗಿ ಆರೋಗ್ಯವನ್ನು ಕೆಡಿಸಿಕೊಂಡು ಆಸ್ಪತ್ರೆ ಸೇರಿದ ಕೋಟ್ಯಾಂತರ ರೋಗಿಗಳಿಗೆ ಸರಕಾರ ತಾನೇ ಅದೆಷ್ಟು ಖರ್ಚು ಮಾಡಬಲ್ಲದು? ಅಷ್ಟೇ ಅಲ್ಲ ವೈದ್ಯಕೀಯ ಪರಿಕರಗಳು ಮತ್ತು ಔಷಧಿಗಳು ಕೂಡ ತುಂಬಾ ದುಬಾರಿ. ಚೆನ್ನಾಗಿರುವಾಗ ಮನುಷ್ಯರು ಇದನ್ನೆಲ್ಲಾ ಲೆಕ್ಕಿಸುವುದೇ ಇಲ್ಲ. ಈಗ ಏನಿದ್ದರೂ ಪಾರ್ಟಿಗಳ ಸಂಭ್ರಮ. ಹೊರಗೆ ತಿಂದು ಕುಡಿದು ಕುಣಿಯುವಂತಹ ಸಂಸ್ಕೃತಿ ಸಂತಸ ತರುವುದೆಂದು ನಂಬಿರುವ ಕಾಲ. ಬದುಕಿನಲ್ಲಿ ಯಾವ ಘಟನೆಯಾದರೂ ನಡೆಯಲಿ ಸಂತಸಕ್ಕಾಗಿ ಪಾರ್ಟಿ. ಜನರಿಂದ ಜನರಿಗಾಗಿ ಜನರೇ ತಯಾರಿಸುತ್ತಿರುವ ಆಹಾರವಾದರೂ ವ್ಯಾಪಾರಿಕರಣ ಮತ್ತು ದುರಾಸೆ ಯಾವ ಸಮಾಜದಲ್ಲೂ ಕಡಿಮೆಯಾಗಲಿಲ್ಲ. ತಿನ್ನುವ ಆಹಾರ ರುಚಿ ಆಗಿರಬೇಕು ಅಷ್ಟೇ. ಅದು ನೋಡಲು ಬಣ್ಣ ಬಣ್ಣವಾಗಿ ಅಟ್ಟ್ರಾಕ್ಟಿವ್ ಆಗಿ ಕಾಣುತ್ತಿರಬೇಕು ಅಷ್ಟೇ. ಅದರ ಜೊತೆಗೆ ಬೆಲೆಗೆ ಅದು ಸಿಗುವ ಹಾಗೆ ಇರಬೇಕು. ಅದಕ್ಕೆ ಜಾತ್ರೆಯಲ್ಲಿ ಅಷ್ಟೊಂದು ವಸ್ತುಗಳು ಮಾರಾಟವಾಗುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕೂಡ ಬಣ್ಣಕ್ಕೆ ಮತ್ತು ರುಚಿಗೆ ಸೋಲದವರು ಯಾರು ಇಲ್ಲ. ಅಲ್ಲದೇ ತುಂಬಾ ಆಲೋಚನೆ ಮಾಡಿ ಸ್ಟ್ಯಾಂಡರ್ಡ್ ಲೈಫ್  ಲೀಡ್ ಮಾಡಬೇಕು ಎಂದು ಯೋಚಿಸುವವರು ಭಾರತದಲ್ಲಿ ಕೇವಲ ಐದು ಶೇಕಡಕ್ಕಿಂತಲೂ ಕಡಿಮೆ ಜನರಿರುವರು. ಉಳಿದವರೆಲ್ಲ ಬದುಕನ್ನು ಖುಷಿಖುಷಿಯಲ್ಲಿ ರುಚಿ ರುಚಿಯಲ್ಲಿ ಕಳೆಯಬೇಕು ಎಂದು ಜಾಲಿ ಲೈಫ್ ಅನ್ನು ಇಷ್ಟಪಡುವವರೇ ಆಗಿದ್ದಾರೆ. ಇವರಿಗೆ ಹಲವಾರು ಪಾರ್ಟಿಗಳು ಬೇಕು, ಹೊರಗಿನ ಕಾರ್ಯಕ್ರಮಗಳು ಬೇಕು ಆ ಕಾರ್ಯಕ್ರಮದಲ್ಲಿ ತಿಳಿಸುಗಳಿರಬೇಕು. ಅವು ಬಹಳ ರುಚಿಕರವಾಗಿರಬೇಕು, ವಿವಿಧ ಬಣ್ಣಗಳಲ್ಲಿ ಕಾಣುತ್ತಿರಬೇಕು ಅಷ್ಟೇ. ಆಹಾರ ತಯಾರಿಕೆಯ ಮೂಲಗಳನ್ನು ಹುಡುಕಿಕೊಂಡು ಹೋಗುವವರು ಅದೆಷ್ಟು ಜನರಿದ್ದಾರೆ?


   ಕೈ ಕೆಸರಾದರೆ ಬಾಯಿ ಮೊಸರು. ಇಂದು ಬಾಯನ್ನು ರಚಿಸಿ ರುಚಿಯಾದ ಕಡಿಮೆ ಬೆಲೆಯ ವಿಷದ ಆಹಾರಕ್ಕೆ ಮಾರು ಹೋದವನು ನಾಳೆ ಅನುಭವಿಸಲೇಬೇಕು. ಜೊತೆ ಜೊತೆಗೆನೇ ಕುಡಿದು ವಾಹನಗಳನ್ನು ಚಲಾಯಿಸುವ ಇಂದಿನ ಯುವಜನಾಂಗ ಅದೆಷ್ಟೋ ಕುಟುಂಬಗಳನ್ನು ಬಲಿ ತೆಗೆದುಕೊಂಡಿದೆ. ಇಂತಹ ಅಚಾತುರ್ಯಕ್ಕೆ ಬೇರೆ ಯಾರೋ ತಪ್ಪು ಮಾಡದವರು ದಿನನಿತ್ಯ ಬಲಿಯಾಗುತ್ತಿದ್ದಾರೆ. ಪಾಪ ಪುಣ್ಯ ದೇವರು ಸ್ವರ್ಗ ಇವುಗಳ ಕಲ್ಪನೆ ಒಂದು ಕಾಲದಲ್ಲಿ ಇತ್ತು. ಈಗ ಇವುಗಳನ್ನೆಲ್ಲ ನಂಬುವವರು ಯಾರೂ ಇಲ್ಲ. ಬದುಕು ಚಿಕ್ಕದು ಸಾಯುವವರೆಗೂ ಅದನ್ನು ಸಂತಸದಿಂದ ಕಳೆಯಬೇಕು, ಗಮ್ಮತ್ ಮಾಡಬೇಕು ತಿನ್ಬೇಕು ಕುಡಿಬೇಕು ಕುಣಿಬೇಕು ಅಷ್ಟೇ. ದುಡ್ಡಿರುವ ಸಿರಿವಂತ ವರ್ಗದವರು ಬಾರು,  ಪಬ್ಬು ಎಂದು ಹೋದರೆ ಸಾಮಾನ್ಯ ಜನರು ನಿಶ್ಚಿತಾರ್ಥ ಮದುವೆ ಬರವಣಿಗೆ ಗಣಪತಿ ಉತ್ಸವ ವಿಸರ್ಜನೆ ಜಾತ್ರೆ ಇವುಗಳಲ್ಲಿ ಅದನ್ನು ಮಾಡುತ್ತಾರೆ. ಒಟ್ಟಿನಲ್ಲಿ ಮಾನವನಿಗೆ ಬದುಕಿನಲ್ಲಿ ಎಂಟರ್ಟೈನ್ಮೆಂಟ್ ಮುಖ್ಯ. ವಿವಿಧ ಬಣ್ಣಗಳನ್ನು ಹಾಕಿ ಚಂದ ಕಾಣಿಸಿ ಇಟ್ಟ ಆಹಾರ ರುಚಿಯಾಗಿದ್ದರೆ ಸಾಕು. ಅದನ್ನು ಎಲ್ಲಿ ಯಾರು ಹೇಗೆ ತಯಾರಿಸಿದರು ಎಂದು ಯಾರೂ ವಿಚಾರಿಸಲು ಆಗುವುದಿಲ್ಲ. ಇದನ್ನು ಎಲ್ಲ ಸರಿಪಡಿಸಲು ಸಾಧ್ಯವಿಲ್ಲ ಕಾರಣ ಜನರ ಮನಸ್ಸು ಕೆಟ್ಟದರ ಕಡೆಗೆ ಬೇಗ ವಾಲುತ್ತದೆ. ಮಕ್ಕಳು ಹಠ ಹಿಡಿದಾಗ ತಾಯಿ ಅನಿವಾರ್ಯವಾಗಿ ನೂಡಲ್ಸ್ ತಂದುಕೊಡುತ್ತಾಳೆ. ಇಲ್ಲಿ ದೂರುವುದು ಯಾರನ್ನು? ತಂದೆ ತಾಯಿಗಳನ್ನೆ? ಮಕ್ಕಳನ್ನೇ? ಸಮಾಜವನ್ನೇ? ದುರಾಸೆಯ ಜನರನ್ನೇ? ವ್ಯಾಪಾರಿ ಮನೋಭಾವವನ್ನೇ? ಹಣಕ್ಕಾಗಿ ಇರುವವರನ್ನೇ? ಬೇಕು ಬೇಕಾದ ಹಾಗೆ ಹಿಂದೆ ಮುಂದೆ ಯೋಚಿಸದೆ ತಮ್ಮ ಮಕ್ಕಳಿಗೆ ಹಣಕೊಟ್ಟು ಹಣದ ಮಹತ್ವವನ್ನು ಕಲಿಸದೆ ಇರುವಂತಹ ಪೋಷಕರನ್ನೇ? ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದವರನ್ನೇ? ಸರಿಯಾದ ಮಾಹಿತಿಯನ್ನು ನೀಡುವ ಶಾಲೆಗಳನ್ನು ಮತ್ತು ಜನರನ್ನು ಕೇಳದೆ ರುಚಿಯ ಕಡೆಗೆ ಮತ್ತು ಬಣ್ಣದ ಕಡೆಗೆ ವಾಲುವರನ್ನೇ? ನಮಗೆ ನಾವೇ ಉತ್ತರಿಸಿಕೊಳ್ಳಬೇಕು. ನೀವೇನಂತೀರಿ?

———————————————-

Leave a Reply

Back To Top