ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಮರವಾಗಲಾರೆ ನಾನು..
ಮಣ್ಣಲಿ ಬಿದ್ದ
ಕೆಸರು ಗೊಬ್ಬರವಾಗಿಸಿ
ಹಣ್ಣು ಹಂಪಲು ಕೊಟ್ಟರೂ
ಹರಿತ ಕೊಡಲಿಯ ಕಾವಿಗೆ
ಸಿಕ್ಕು ಕಡಿಯಲ್ಪಡುವದಕ್ಕೆ
ರೋಷ ಹೋಗಿದೆ ನನಗೆ
ಮರವಾಗಲಾರೆ ನಾನು
ಹರಿದರೂ ಮುರಿದರೂ
ಮೇಜು ಮಂಚವಾಗಿ
ಆಸರೆಯ ನೀಡಿದರೂ
ಮನೆಯಮಾಳಿಗೆಗೆ
ನಾಗೊಂದಿ ಮೇಲುಗಂಬವಾದರೂ
ಇಡೀ ಭಾರವ ಹೊತ್ತು
ಯುಗಮಾನಕಳೆದರೂ.
ಕಡೆಗೊಂದು ದಿನ
ಹಳತಾದೆನೆಂದು ಉರುವಲಾಗುವದು
ಸಾಕಾಗಿದೆ
ಮರವಾಗಲಾರೆ ನಾನು
ಕೂಸಿರುವಾಗಲೆ ತೊಟ್ಟಿಲಾಗಿ
ಅವ್ವನ ಜೋಗುಳಪದದ
ಲಾಲಿಯಾದರೂ
ಕಡೆಯವರೆಗೂ ಕಾದು
ಕೊನೆಗಾಲದಲೂ ನಾನೇ ಹೊತ್ತು ನಡೆದರೂ
ತಾ ಕೂತ ಕುರ್ಚಿಯನೆ ಮುರಿದು
ಮಾರುವ ಮರ್ಕಟ ಬುದ್ದಿಗೆ ಆಹುತಿಯಾಗಲಾರೆ
ಮರವಾಗಲಾರೆ ನಾನು
ಇದ್ದರೂ ಅವನ ಮನೆಯ
ಮನವ ಅಂದಗೊಳಿಸಿದರೂ
ಸತ್ತರೂ ಸುಟ್ಟು ಬೂದಿ ಗೊಬ್ಬರವಾದರೂ
ಉಸಿರು ಉಸಿರಲು
ಹೆಸರು ಬಯಸುವ ಅವನಮನೆಗೆ
ವಿಳಾಸದ ಗೋಡೆಯಾಗಲಾರೆ
ಸಾಕಾಗಿದೆ ನನಗೆ
ಅಂತೂ…
ಮರವವಾಗಲಾರೆ…ನಾನು
ವೈ.ಎಂ.ಯಾಕೊಳ್ಳಿ