ಪ್ರಬಂಧ ಸಂಗಾತಿ
ಸರೋಜ ಪ್ರಭಾಕರ್
ಬೈ ಬೈ ಟೆನ್ಶನ್
ಹಾಯ್ ಹಾಯ್ ಪೆನ್ಶನ್–
ಬೈ ಬೈ ಟೆನ್ಶನ್ ಹಾಯ್ ಹಾಯ್ ಪೆನ್ಶನ್
ನಿವೃತ್ತಿ ಅನ್ನೊದಿದ್ಯಲ್ಲ ಅದೊಂಥರಾ ಮಳೆಗಾಲದಲ್ಲಿ ಹೊಳೆ ದಾಟಿ ಮಾವನ ಮನೆಗೆ ಹೋದ ಹಾಗೆ. ಮಾವನ ಮನೆಗೆ ಹೋಗಲೆಬೇಕು. ಆದರೆ ಮಳೆಗಾಲದ ತುಂಬಿ ಹರಿಯೊ ಹೊಳೆ ದಾಟೋದು ಕಷ್ಟ; ಆದರೆ ದಾಟಲೆಬೇಕು. ಧುಮುಕಲೆಬೇಕು. ನಿವೃತ್ತಿಯೂ ಅಷ್ಟೆ; ನಿವೃತ್ತಿ ಆಗಬೇಕು ಎಂದೇನು ನಮಗೆ ಆಸೆ ಇರದಿದ್ದರೂ ಆಗಲೆಬೇಕಾದ್ದು ಅನಿವಾರ್ಯ.
ವಿಷಯ ಇನ್ನೂ ಸ್ವಾರಸ್ಯಕರವಿದೆ; ನಮ್ಮ ತಲೆಯಲ್ಲಿ ಬೆಳ್ಳಿಕೂದಲು ಕಾಣಿಸುವುದು ಜಾಸ್ತಿ ಆಯ್ತೊ, ಮುಖ ಸ್ವಲ್ಪ ಸಪ್ಪೆ ಆಗಕ್ಕೆ ಶುರುವಾಯ್ತೋ, ನೆಂಟರ ಮನೆಯಲ್ಲಿ ನಡೆದಾಡುವಾಗ ಚೂರುಪಾರು ಉಸ್ಸಪ್ಪ ಎಂದಿರೋ, ಆಗ ತೂರಿ ಬರೋ ಪ್ರಶ್ನೆ “ಯಾವಾಗ ರಿಟೈರಮೆಂಟು? ಸದ್ಯನೆ ಬಂತಾ?”. ” ಇಲ್ಲಪ್ಪಾ, ಇನ್ನೂ ನಾಲ್ಕು ವರ್ಷ ಇದೆ.”.
” ನಾಲ್ಕೆ ವರ್ಷಾನಾ, ಅಯ್ಯೋ, ಪ್ಲ್ಯಾನ್ ಮಾಡಪ್ಪ ನಿವೃತ್ತಿಗೆ” ನಮಗಿಂತ ಉಳಿದವರಿಗೆ ನಮ್ಮ ನಿವೃತ್ತಿಯ ಚಿಂತೆ.
ಇನ್ನು ತಮ್ಮಂದಿರಿದ್ದಾರೆ ಅಂತಿಟ್ಕೊಳ್ಳಿ. “ಅಣ್ಣ ನಾನು ನೀನು ಸೇರಿ ಒಂದು ದೊಡ್ಡ ಸೈಟ್ ತಗೊಂಡು ಮನೆ ಕಟ್ಕೊಂಡು ಇದ್ದುಬಿಡೋಣ. ಈಗೆಲ್ಲ ಮಕ್ಕಳು ನಮ್ಮಜೊತೆ ಇರೋದಕ್ಕೆ ಇಷ್ಟ ಪಡಲ್ಲಪ್ಪ. ಏನಂತಿ” ಮಕ್ಕಳು ಇರುತ್ತಾರೋ ಬಿಡುತ್ತಾರೋ, ಜೀವನದಲ್ಲಿ ಯಾರು ಯಾರಿಗೆ ಇರುತ್ತಾರೋ, ಇವನೇ ಇರುತ್ತಾನೆ ಎನ್ನುವುದೇನು ಗ್ಯಾರಂಟಿ, ಹೆಂಡತಿ ಜೀವನಪೂರ್ತಿ ಇರುತ್ತಾಳೆ ಎನ್ನುವುದು ನಮ್ಮಲ್ಲಿ ಮದುವೆ ಆಗುವಾಗ ನಮಗೆ ತುಂಬುವ ಕನಸು. ಮಧ್ಯೆ ಏನೇನೋ ಆಗಬಹುದು; ಇದ್ದರೆ ಸಂತೋಷ, ಇಲ್ಲದೆ ಹೋದರೆ!ನಮಗೆ ಒಂಟಿಯಾಗಿ ಅನ್ನ ಬೇಯಿಸಿಕೊಳ್ಳಬೇಕೆಂದು ಹಣೆಯಲ್ಲಿ ಬರೆದುಕೊಂಡಿದ್ದರೆ. ಬೇಯಿಸಿಕೊಳ್ಳಲೇಬೇಕಲ್ಲ ಎನ್ನುವ ನಿರ್ಲಿಪ್ತ ಭಾವದವನು ನಾನು. ಈತ ನೋಡಿದರೆ ಮಕ್ಕಳು ಬರಲ್ಲ, ನಾನು ಬರುತ್ತೇನೆ ಎನ್ನುತ್ತಿದ್ದಾನಲ್ಲ; ಬಿಡಿ, ಮುಂದಾದ ಕಥೆಯೇ ಬೇರೆ. ನನ್ನ ಮಕ್ಕಳು ನನ್ನನ್ನೂ ನೋಡಿಕೊಂಡಿದ್ದಲ್ಲದೆ ನನ್ನ ತಂದೆ ತಾಯಿಯನ್ನು ಅರ್ಥಾತ್ ಅಜ್ಜ ಅಜ್ಜಿಯನ್ನೂ ತಾವೇ ನೋಡಿಕೊಂಡಿದ್ದು ವಾಸ್ತವ.
ಒಮ್ಮೆ ಯಾವುದೋ ನೆಂಟರ ಮನೆ ಮದುವೆಗೆ ಹೋದೆ. ಅದೂ ಸರ್ವಿಸ್ ಮಾಡುತ್ತಿದ್ದಾಗಲೆ. ಮದುವೆಗೆ ಹೋಗುವುದೆಲ್ಲ ಕಡಿಮೆಯೆ. ಅವು ಹೆಂಡತಿಯ ಪಾಲಿನ ಕೆಲಸ. ಯಾಕೋ ಇವರು ತುಸು ಆತ್ಮೀಯರು, ರಜವೂ ಇತ್ತು ಎಂದು ಹೋದೆ. ನಿವೃತ್ತಿಗೆ ಇನ್ನೂ ಒಂದು ವರ್ಷ ಇತ್ತೆನ್ನಿ.
ಯಾರೋ ನೆಂಟರು ಸಿಕ್ಕವರು ಮಾತಿಗೆ ನಿಂತೇಬಿಟ್ಟರು. ಮದುವೆ ಮನೆ ಎಂದ ಮೇಲೆ ನೆಂಟರು ಸಿಕ್ಕದಿದ್ದರಾಗುತ್ಯೆ! ತಮ್ಮದನ್ನೆಲ್ಲ ಕೊರೆದರು. ತಮ್ಮ ನಿವೃತ್ತಿ ಆದ ಬಳಿಕ ಆದ ಕತೆಯನ್ನೆಲ್ಲ ಹೇಳಿದ್ದಲ್ಲದೆ , ಮಗ ಮಗಳು ಅಮೆರಿಕದಲ್ಲಿದ್ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡು ಮಗಳ ಮಗು ತಿನ್ನುವುದರಿಂದ ಹಿಡಿದು ಮಲಗುವವರೆಗಿನ ದಿನಚರಿಯ ಜೊತೆಗೆ ತಾನು ದಿನಾಲೂ ವಿಡಿಯೋ ಕಾಲ್ ನಲ್ಲಿ ಮೊಮ್ಮಗುವಿನ ಜೊತೆಗೆ ಆಡುವ ಬಗೆಯನ್ನೂ ಹೇಳಿಕೊಂಡರು. ಅವರ ಪತ್ನಿ ಹೋಗುವ ಕಿಟ್ಟಿಪಾರ್ಟಿ ಕಥೆಯನ್ನೂ ಹೇಳಿಕೊಂಡರು. ಮದುವೆಮನೆಯಲ್ಲಿ ಇಂತಹ ಒಂದು ಪೀಸ್ ಸಿಕ್ಕಿತೆಂದರೆ ಸಮಯ ಆರಾಮಾಗಿ ಕಳೆದುಬಿಡುತ್ತದೆ.
ಹೇಳುವ ಕಥೆಯೆಲ್ಲ ಮುಗಿಯಿತೆಂದು ಕಾಣುತ್ತದೆ; ವಿಷಯ ನನ್ನ ಕಡೆ ಹೊರಳಿತು. “ಮತ್ತೆ” ಎನ್ನುತ್ತಾ ನನ್ನ ತೊಡೆಯನ್ನು ತಟ್ಟಿ ” ನಿವೃತ್ತಿ ಯಾವಾಗಾಯ್ತು? ಮದುವೆಗೆ ಬಂದದ್ದು ನೋಡಿಯೇ ಅಂದಾಜು ಮಾಡಿದೆ ರಿಟೈರ್ಡ್ ಅಯ್ತು ಅಂತ. ಏನೂ ಯೋಚನೆ ಮಾಡಬೇಡ. ಕೆಲಸಕ್ಕೆ ಹೋಗೋ ಗಡಿಬಿಡಿ ಇರಲ್ಲ. ಟೆನ್ಶನ್ ಇರಲ್ಲ. ಬರೆಯೋದು ಓದೋದು ಹಾಬಿ ಇದ್ದರೆ ಮುಂದುವರಿಸಬಹುದು. ಮಗನ ಮದುವೆ ಆಯ್ತಲ್ಲ. ಮೊಮ್ಮಕ್ಕಳಾದ ಬಳಿಕ ನಿವೃತ್ತಿ ಬದುಕು ಆರಾಂ ಎಂಜಾಯ್ ಮಾಡಬಹುದು. ಅಷ್ಟರೊಳಗೆ ಒಂದಷ್ಟು ಟೂರ್ ಮಾಡಿಬಂದುಬಿಡಿ…..ಸೊ & ಸೋ. ಪುಂಖಾನುಪುಂಖವಾಗಿ ಸಲಹೆ ಬಂದೇ ಬಂತು. ನಾನು ಒಳ್ಳೆ ಲಿಸನರ್. ಕೇಳಿಯೇ ಕೇಳಿದೆ. ಸಲಹೆ ಬಿಟ್ಟಿ ಸಿಕ್ಕರೆ ಬಿಡಬಾರದಂತೆ. ಸಲಹೆಯನ್ನು ಪರಾಂಬರಿಸಿ ನೋಡಿ ಸ್ವೀಕರಿಸಬೇಕು ಎನ್ನುವುದು ನನ್ನ ಪಾಲಿಸಿ.
ಎಲ್ಲಾ ಹೇಳಿಯಾದ ಮೇಲೆ ” ಹೌದು. ಯಾವಾಗ ಹೋಗಬೇಕು ಹುಬ್ಬಳ್ಳಿಗೆ, ನಮ್ಮನೆಗೆ ಬನ್ನಿ. ಹೇಗೂ ಬಿಡುವಿದೆಯಲ್ಲ” ಎಂದು ಮಾತು ಮುಗಿಸುವ ಸೂಚನೆ ನೀಡಿದಾಗ ” ಇಲ್ಲ ಇಲ್ಲ ನಾಳೆ ಆಫೀಸಿದೆಯಲ್ಲ. ಈವತ್ತೆ ಹೋಗಬೇಕು” ಎಂದಾಗ ಅವರು ” “ಅಯ್ಯೊ ಮಾರಾಯಾ, ಇನ್ನೂ ನಿವೃತ್ತಿ ಆಗಿಲ್ಲವಾ ನಿನಗೆ. ಹೇಳಲೆ ಇಲ್ಲ” ಎಂದಾಗ ” ನೀವು ಕೇಳಲಿಲ್ಲ. ಇನ್ನೂ ಎರಡು ವರ್ಷ ಸರ್ವಿಸಿದೆ. ನಿಮ್ಮ ಉತ್ಸಾಹಕ್ಕೆ ಭಂಗ ತರಲು ಇಚ್ಛೆಯಾಗದೆ ಕೇಳುತ್ತಾ ಕುಳಿತೆ” ಎಂದು ನಸುನಕ್ಕೆ. ಅವರು ನಿಮಿಷ ಬಿಟ್ಟು ನಕ್ಕುಬಿಟ್ಟರು.
ವರ್ಷ ತಿಂಗಳಿಗಿಳಿದಿತ್ತು. ಈಗ ಆಫೀಸ್ ಕಡೆಯಿಂದ “ಸರ್, ರಿಟೈರ್ಡ್ ಆದ ಮೇಲೇ ಏನು. ದಿನ ಕಳೆಯೊದು ಕಷ್ಟ ಅಲ್ವೆ. ಪ್ರವಾಸ ಮಾಡಿಬಿಡಿ” ಎಂಬುದೊಂದು ದನಿ ಬಂದರೆ, “ಸರ್, ಬೇರೆ ಏನಾದರೂ ಕೆಲಸ ಮಾಡಿಬಿಡಿ. ಸಮಯನೂ ಕಳಯುತ್ತೆ ಕಾಸು ಆಗತ್ತೆ” ಸಲಹೆಯೇನೋ ಚೆನ್ನಾಗಿತ್ತು. ಇನ್ನೂ ದಿನವಿದೆಯಲ್ಲ ಎಂಬುದು ನನ್ನ ನಿರ್ವಿಕಾರ ಭಾವ.
ನಿವೃತ್ತಿಯ ದಿನ ಬಂತು. ಮಕ್ಕಳು ಬಂದರು. ಸಹೊದ್ಯೋಗಿಗಳು ಹೊಗಳಿದರು. ಖುಷಿಯಾಯ್ತು. ನಾನೂ ಕೆಲಸ ಮಾಡಿದ ಜಾಗಕ್ಕೆ ನ್ಯಾಯ ಸಲ್ಲುವಂತೆ ಹೊಗಳಿದೆ. ಹಳೆಯ ನೆನಪು ಮೆಲುಕುಹಾಕಿದೆ. ಹಾರ ಫಲಕ ಉಡುಗೊರೆ ಜೊತೆಗೆ ಮನೆಗೆ ಬಂದೆ.
ಈಗ ನಾನು ನಿವೃತ್ತ ಬ್ಯಾಂಕ್ ಅಧಿಕಾರಿ. ಯಾವ ಗಡಿಬಿಡಿಯೂ ಇಲ್ಲ ಅಂದುಕೊಂಡು ಮಕ್ಕಳು ಉಡುಗೊರೆಯಾಗಿ ಕೊಟ್ಟ ಲ್ಯಾಪಟಾಪ್ ಜೊತೆ ಆರಾಮಾಗಿದ್ದೆ. ಅಪ್ಪ ಅಮ್ಮನ ಆರೋಗ್ಯ ಬಿಗಡಾಯಿಸಿತು. ಈಗ ಮತ್ತೆ ಗಡಿಬಿಡಿ.
ನಿವೃತ್ತಿ ವೃತ್ತಿಯಿಂದ. ಬದುಕಿನಿಂದಲ್ಲ ಎನಿಸುತ್ತಿದೆ.
————————————————
ಸರೋಜ ಪ್ರಭಾಕರ್
ನಿಜ, ನಿವೃತ್ತಿ ದಿನಗಳ ನೆನಪಿನ ಆಗಮನ ಹೀಗೇ