ಡಾ.ರಾಜಪ್ಪ ದಳವಾಯಿ ವಿರಚಿತ ನಾಟಕ ‘ಒಂದು ಬೊಗಸೆ ನೀರು’ ಒಂದು ಅವಲೋಕನ ರಮೇಶ್ ಎಮ್ ಗೋನಾಲ್

ಡಾ.ರಾಜಪ್ಪ ದಳವಾಯಿಯವರ ಒಂದು ಬೊಗಸೆ ನೀರು ನಾಟಕವು ಮೂಲತಃ ಕಥನ ಕವನವಾಗಿದ್ದು, ಇದನ್ನು ಗ್ರೀಕ್ ನ ಟ್ರಾಜಿಡಿ ಶೈಲಿಯ ನಾಟಕವಾಗಿ ಪರಿವರ್ತಿಸಿದ್ದಾರೆ. ಈ ನಾಟಕವು ನೀರಿನ ಮಹತ್ವ ತಿಳಿಸಿ ಕೊಡುವುದರ ಜೊತೆಗೆ ಇಡೀ ಜಗತ್ತನ್ನು ಗೆಲ್ಲಬೇಕೆಂದು ಅಲೆಗ್ಸಾಂಡರ್ ನಿಗಿದ್ದ ಪ್ರಬಲ ಮಹಾತ್ವಾಕಾಂಕ್ಷೆ ಮತ್ತು ಆತನ ಸರ್ವಾಧಿಕಾರಿ ಮನೋಧೋರಣೆಯನ್ನುಇದು ಚಿತ್ರಿಸುತ್ತದೆ. ಈ ನಾಟಕದಲ್ಲಿ ಅಲೆಗ್ಸಾಂಡರ್ ತನಗೆ ಬಿದ್ದ ಕನಸು ಮತ್ತು ಸ್ಯೂಸ್ ದೇವತೆಯ ಮಾತಿನ ಒಗಟನ್ನು ನಿಜಮಾಡಿ ತೋರಿಸುವೆನೆಂದು ಹೊರಡಲನುವಾಗುತ್ತಾನೆ. ಈ ನಾಟಕದ ಮುಖ್ಯ ಸ್ವಲ್ಪ ಹೆಚ್ಚು ಸಂಭಾಷಣೆಗಳು ಎನಿಸಿದರೂ ಅವೇ ಈ ನಾಟಕದ ಜೀವಾಳವೆಂದರೆ ತಪ್ಪಾಗಲಾರದು. ಈ ನಾಟಕದಲ್ಲಿ ಅಲೆಗ್ಸಾಂಡರ್ ನ ಜೀವವಿರೋಧಿ ಮತ್ತು ಸರ್ವಾಧಿಕಾರಿ ಮನೋಧೋರಣೆಯನ್ನು ಗುರು ಅರಿಸ್ಟಾಟಲ್ ಜೊತೆಗಿನ ಸಂಭಾಷಣೆಯಲ್ಲಿ ವ್ಯಕ್ತಗೊಂಡಿರುವುದನ್ನು ಕಾಣಬಹುದಾಗಿದೆ.
   ಅರಿಸ್ಟಾಟಲರು ಅಲೆಗ್ಸಾಂಡರ್ ಕೈಗೊಂಡ ನಿರ್ಣಯಗದ ಕುರಿತು ಅಸಮ್ಮತಿ ಸೂಚಿಸುತ್ತ ಕೆಲವು ಪ್ರಶ್ನೆಗಳನ್ನು ಕೇಳತೊಡಗುತ್ತಾರೆ.
“ಅಲೆಗ್ಸಾಂಡರ್: ಈ ಜಗತ್ತಿನ ಭೂಗೋಳ ಗೊತ್ತಿದೆಯೇ?, ಜನರ ಬದುಕಿನ ಕ್ರಮಗಳು ನಿನಗೆ ಪರಿಚಯವಿದೆಯೇ?
ಜನರು ಯಾವ ಯಾವ ರೀತಿ ಯುದ್ಧ ಮಾಡುತ್ತಾರೆ ಮತ್ತು ಅವರು ಬಳಸುವ ಆಯುಧಗಳ ಪರಿಚಯವಿದೆಯೇ?
ಇದಕ್ಕೆ ಕ್ರಮವಾಗಿ ಅಲೆಗ್ಸಾಂಡರ್:

ನಾನು ಹೊರಟಿದ್ದೇ ಭೂಗೋಳ, ಖಡ್ಗದ ಮುಂದೆ ಎಲ್ಲವೂ ಪರಿಚಯವಾಗುತ್ತದೆ, ಎಲ್ಲದಕ್ಕೂ ಈ ಖಡ್ಗ ಉತ್ತರ ನೀಡುತ್ತದೆ.ಎಂದು ಉತ್ತರಿಸುತ್ತಾನೆ. ಎಷ್ಟೇ ತಿಳಿ ಹೇಳಿದರು ಕೊನೆಗೆ,
 “ನಿಮ್ಮ ಮಾತು ನನ್ನ ಮಹಾತ್ವಾಕಾಂಕ್ಷೆ ಇವುಗಳ ನ್ಯಾಯ ತಕ್ಕಡಿಯಲ್ಲಿ ನನ್ನ ಮಹಾತ್ವಾಕಾಂಕ್ಷೆಯೇ ಮಣಗಟ್ಟಲೆ ತೂಗುತ್ತಿದೆ. ನಿಮ್ಮ ಮಾತಿನ ತೂಕ ಸಮಾನಾಗುತ್ತಿಲ್ಲ ಗುರುಗಳೇ.”
ಎಂದು ತನ್ನ ಉದ್ಧಟತನ ಪ್ರದರ್ಶಿಸುತ್ತಾನೆ. ಆದರೆ ಗುರುಗಳನ್ನು ಬೀಳ್ಕೊಡೂವಾಗ ಮಾತ್ರ ಅಲೆಗ್ಸಾಂಡರ್ ಸೌಜನ್ಯತೆ ವ್ಯಕ್ತಪಡಿಸುತ್ತಾನೆ.
   ಇನ್ನೂ ಅಲೆಗ್ಸಾಂಡರ್ ಮತ್ತು ಆತನ ತಾಯಿ ಜೊತೆಗಿನ ಸಂಭಾಷಣೆಯಲ್ಲಿ ಆತನ ತಾಯಿಯ ಪ್ರತಿರೋಧದ ನುಡಿಗಳು ಸಾಂಕೇತಿಕವಾಗಿ ಇಡೀ ಗ್ರೀಕ್ ನ ಗಂಡಾಳ್ವಿಕೆ ಮತ್ತು ಪುರುಷಾಧಿಪತ್ಯವನ್ನು ಪ್ರಶ್ನೆಗೊಡ್ಡಿದ ರೀತಿಯಲ್ಲಿ ಚಿತ್ರಿಸಲಾಗಿದೆ.
ನಿದರ್ಶನಕ್ಕೆ:
ಅಲೆಗ್ಸಾಂಡರ್ “ಹೇ ಹೆಂಗಸ! ಸಾಕು ಮಾಡು ನಿನ್ನ ಒಣ ಉಪದೇಶವನ್ನು” ಅಂದಾಗ
ಅಲೆಗ್ಸಾಂಡರ್ ನ
ತಾಯಿಯೂ “ಹೆಂಗಸಿನ ಮಾತಿಗೆ ಉತ್ತರಿಸದ ಎಲ್ಲಾ ಗಂಡಸರಂತೆ ನೀನು ಬಾಯಿ ಮುಚ್ಚಿಸುವ ಘನಕಾರ್ಯಕ್ಕೆ ತೊಡಗಿದೆಯಾ ಮಗನೆ!….. ನಿರ್ಧಾರಗಳು ಬರೀ ಗಂಡಸಿನವೇ! ಅವುಗಳಲ್ಲಿ ಶರೀರವಿರುತ್ತದೆ,ಜೀವವಿರುದಿಲ್ಲ. ಇನ್ನೂ ಹೆಂಡತಿ ಪೆಂಬನಿಯ ಪ್ರೀತಿಯ ಮಾತಿಗೂ ಕಿವಿಗೊಡದೇ “ನಿನ್ನ ಅಳು ಜೋರಾದಂತೆ ನನ್ನ ಕಠೋರತೆ ಅಧಿಕವಾಗುತ್ತ ಹೋಗುತ್ತದೆ ಪ್ರಿಯ ಪೆಂಬನಿ”
ಎಂಬಲ್ಲಿ ಅಲೆಗ್ಸಾಂಡರ್ ನ ನಿರ್ದಯತೆ ಪ್ರಕಟವಾಗುತ್ತದೆ.
ಇನ್ನು ಅಲೆಗ್ಸಾಂಡರ್ ನ  ಗುಲಾಮ  ಅಚುಮನು ಪಾತ್ರವು ವಿಶೇಷವಾಗಿ ಚಿತ್ರಿತವಾಗಿದೆ. ಅಚುಮನು ತಾನು ಗುಲಾಮನಾಗಿರುವುದಕ್ಕೆ ಅಸಹನೆಯನ್ನು ಹೊಂದಿದ್ದರೂ ತನ್ನ ನಿಷ್ಠೆ ಮತ್ತು ಜಾಣ್ಮೆಯ ನುಡಿಗಳಿಂದ ಹಾಗೂ  ಗುಲಾಮತನದ ಘೋರತೆಯನ್ನು ಸ್ವಗತದ ನುಡಿಗಳಲ್ಲಿ ವ್ಯಕ್ತಪಡಿಸುವ ಮೂಲಕ ಅಚುಮನ ಪಾತ್ರವು ಓದುಗರ ಅಥವಾ ಪ್ರೇಕ್ಷಕರ ನೆನಪಿನಲ್ಲುಳಿಯುತ್ತದೆ.
 ಗುಲಾಮ ಅಚುಮನಿಗೆ ಪೆರ್ಮೊನಿಯೊ ಕೇಳುವ ಪ್ರಶ್ನೆಗಳು “ ಜಗತ್ತನ್ನೇ ಗೆಲ್ಲ ಹೊರಟಿರುವ ನಮ್ಮ ಒಡೆಯನ ನಿರ್ಧಾರ ನಿನಗೇನೆನ್ನಿಸುತ್ತದೆ?, ಅಲೆಗ್ಸಾಂಡರ್ ಇಡೀ ಜಗತ್ತನ್ನು ಗೆಲ್ಲುವೆನೆಂಬ ಮಹಾತ್ವಾಕಾಂಕ್ಷೆ ಹುಚ್ಚುತನದ್ದೆನಿಸುವುದಿಲ್ಲವೇ? ಎಂದಾಗ,
ಗುಲಾಮ ಅಚುಮನು “ ಗುಲಾಮನನ್ನು ಅಭಿಪ್ರಾಯ ಕೇಳುವುದೇ ಒಡೆಯ?, ಹಾಗೇ ಅನ್ನಿಸಿಬಿಟ್ಟರೆ, ಅದರಲ್ಲಿ ನಾವು ಭಾಗವಹಿಸುದಾದರೂ ಹೇಗೆ ಒಡೆಯ. ಎಂದಾಗ ಆಗ ಪೆರ್ಮೊನಿಯೊ ಮುಂದುವರೆದು “ಅಚುಮ ನೀನು ಹಿಡಿತಕ್ಕೂ ಸಿಗುತ್ತಿಲ್ಲ; ಹೊಡೆತಕ್ಕೂ ಸಿಗುತ್ತಿಲ್ಲ. ಆಗ ಮತ್ತೆ ಅಚುಮನು “ ನಾನು ಹತ್ತಾರು ಜನ ಒಡೆಯರಲ್ಲಿ ಗುಲಾಮಗಿರಿ ಮಾಡಿದವನು ಒಡೆಯ ಪೆರ್ಮೊನಿಯೊ ಕೇಳುವ ನನಗೆ ಮೊದಲಿಗೆ ಇಂಥ ಪ್ರಶ್ನೆಗಳೇ ಅಪ್ರಸ್ತುತ” ಎಂದು ಹೇಳುತ್ತಾನೆ.
ಇನ್ನೂ ಸ್ವತಃ ಅಲೆಗ್ಸಾಂಡರ್ ನೇ ತನ್ನ ಸಾಹಸದ  ಕುರಿತು ಸ್ವಲ್ಪ ಜೋರಾಗೆ ಅಭಿಪ್ರಾಯ ಕೇಳಿದಾಗಲೂ “ ಪ್ರಿಯ ಒಡೆಯ ಗುಲಾಮನಾದವನಿಗೆ ಅವನದೇಯಾದ ಅಭಿಪ್ರಾಯ ಎಲ್ಲಿದೆ ಎನ್ನುತ್ತಲೇ, ನೀವು ಜಗತ್ತನ್ನು ಗೆಲ್ಲ ಹೊರಟಿರುವುದು ಕೆಡುಕಿನೊಳಗೆ ಒಳಿತು ಒಡೆಯ, ಅಂದರೆ ಎಲ್ಲರೂ ಕೆಡುಕಾಗಬಹುದು ಎಂದು ಅಂಜುತ್ತಿದ್ದಾರೆ.ಆದರೇ ನೀವು ಒಳಿತೇ ಆಗುತ್ತದೆನ್ನುತ್ತೀರಿ. ಆದ್ದರಿಂದ ಈ ನಿಮ್ಮ ಸಾಹಸ ಕೆಡುಕಿನೊಳಗೆ ಒಳಿತು ಎಂದೆನಿಸುತ್ತದೆ. ಎಂದು ಜಾಣ್ಮೆಯ ನುಡಿಗಳಾಡುತ್ತಾನೆ.
             ಹೀಗೆ ಈ ನಾಟಕದಲ್ಲಿ ಹಲವು ಸಂಭಾಷಣೆಗಳು ಲೇಖಕರ ಸೃಜನಶಕ್ತಿಗೆ ಪೂರಕವಾಗಿ ರಚನೆಗೊಂಡಿವೆ ಮತ್ತು ನಾಟಕ ಸ್ವಲ್ಪ ಕಿರಿದಾದೆನಿಸಿದರೂ ಸಂಭಾಷಣೆಗಳಿಂದಲೇ ವಿಶಿಷ್ಟವೆನಿಸುತ್ತದೆ. ಒಟ್ಟಿನಲ್ಲಿ ನಾಟಕಾರರ ಆಶಯದಂತೆ ನೀರಿನ ಮಹತ್ವ ಮತ್ತು ಸರ್ವಾಧಿಕಾರದ ಅಸಾಧ್ಯತೆಗಳನ್ನು ಮಂಡಿಸುತ್ತಾ ಪ್ರೀತಿಯನ್ನು ಧಿಕ್ಕರಿಸಿ ತನ್ನ ದುರಂತವನ್ನು ತಾನೇ ತಂದುಕೊಳ್ಳುತ್ತಾನೆಂಬುದನ್ನು ಯಶಸ್ವಿಯಾಗಿ ನಿರೂಪಿಸಲು ಪ್ರಯತ್ನಿಸಿದೆ. ಪ್ರಕೃತಿಯ ಕೊಡುಗೆಯಾದ ನೀರು ಜೀವಜಲವೆನಿಸಿದೆ, ಮಾನವನ ನಾಗರಿಕತೆಯ  ಆರಂಭವೇ ನೀರಿನೊಂದಿಗಿದೆ ಆದರೆ ಇಂದು ನೀರು ಸಹ ವ್ಯಾಪಾರದ ಸರಕಾಗಿದೆ. ಇನ್ನು ಯುದ್ಧಗಳಿಂದ ಮನುಷ್ಯ ಪಾಠ ಕಲಿಯಲಾರನು ಎನ್ನುವುದದಕ್ಕೆ ಚರಿತ್ರೆಯೇ ಸಾಕ್ಷಿಯಾಗಿದೆ. ಆದರೂ ಮಾನವನಿಗೆ ಯುದ್ಧದಾಹ ಯುದ್ಧಕ್ಕೆ ಕೊನೆಯೆಂಬುದೇ ಇಲ್ಲವೆಂಬಂತಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಇತ್ತಿಚಿಗೆ ನಡೆದ ಉಕ್ರೇನ್ -ರಷ್ಯಾ ಕದನ, ಇಸ್ರೇಲ್ ಪ್ಯಾಲೆಸ್ತೀನ್ ಕದನಗಳು ಕಂಡುಬರುತ್ತವೆ. ಯುದ್ದಗಳೇ ಅಸ್ತ್ರಗಳಾಗಿ ಹೋಗಿರುವ ವಿಷಮಗಳಿಗೆಯಲ್ಲಿ ಈ ನಾಟಕ ಮತ್ತೆ ಹೆಚ್ಚು ಪ್ರಸ್ತುತವಾಗುತ್ತ ಹೋಗುತ್ತದೆ.


One thought on “ಡಾ.ರಾಜಪ್ಪ ದಳವಾಯಿ ವಿರಚಿತ ನಾಟಕ ‘ಒಂದು ಬೊಗಸೆ ನೀರು’ ಒಂದು ಅವಲೋಕನ ರಮೇಶ್ ಎಮ್ ಗೋನಾಲ್

Leave a Reply

Back To Top