ಸಂತೆಬೆನ್ನೂರು ಫೈಜ್ನಟ್ರಾಜ್-ನೂರಾರು ಎಲೆಗಳು

ಮಣ್ಣ ಒಳಗಿನ ವ್ಯಾಪಾರ
ಬೇರಿಗಷ್ಟೇ ಖಬರು, ಮುಗಿಲಿಗಡರಿದ ಸಣ್ಣ ಸಣ್ಣ ಎಲೆಗಳಿಗೇನು ಗೊತ್ತು;
ಎದೆಯ ಮಾತುಗಳ ಕಟ್ಟಿಟ್ಟು ಒಲೆ ಉರಿಗೆ ಕಣ್ಣಿತ್ತು
ಸುರಿದ ಹನಿಗಳಿಗೆ ಹೊಗೆಯ ದೂಷಿಸಿ ನಗುವ ಅವ್ವನ ಬಗ್ಗೆ ಅಪ್ಪನಿಗಷ್ಟೇ ಗೊತ್ತು
ಮಕ್ಕಳು ಎಲೆಗಳೆ!

ಮಣ್ಣ ಕತ್ತಲೆಯೊಡನೆ ಬಡಿದಾಡಿ
ಎದೆಯುಬ್ಬಿಸಿ ಹೊರಬಂದ ಟಿಸಿಲು-ಬಿಸಿಲು ನೋಡಿದ ಕ್ಷಣ ಮೂಡಿದ
ಹೂ ನಗು ಬೇರುಗಳು ಬಲ್ಲವು, ಬಯಲಿಗೆಲ್ಲಾ ಮೈ
ಚಾಚಿದ ಕೊಂಬೆಗಳೆತ್ತ ಕಂಡಾವು;
ಎದೆ ಬಸಿದು ದುಡಿದ ಅಪ್ಪನ ಬೆವರ
ಹನಿಗಳು ಚಕ್ಕಳದೆದೆಯಲ್ಲಿಯೇ ಕರಗಿ ಹೊಮ್ಮಿದ ಆ..ಘಮ
ಅವ್ವನ ದೇವರಮನೆಯ ಧೂಪಕ್ಕೂ ಮಿಗಿಲೆಂದು ಅವ್ವ ಬಲ್ಲಳು,
ನೈವೇದ್ಯ ಚಪ್ಪರಿಸೋ ಮಕ್ಕಳೆತ್ತ ಕಾಂಬರು!

ದಿನದಿನವೂ ಮಣ್ಣು ನೀರಿನ ಜೊತೆ ಬಂಧ,
ನೆಲದಾಳದತ್ತ ಕಾಲ್ಚಾಚಿ ಸಾಗೋ ಬೇರುಗಳ ಓಟ
ಆಕಾಶದತ್ತ ಮುಖ ಮಾಡಿ ನಗುವ ಹೂವ
ಕಾಣದ ಬೇರಿಗೆ ಮರ ನಿಂತ ಸಂತಸ ಸಾಕು ; ಇಂದಲ್ಲ ನಾಳೆ ಹಣ್ಣಾದ ಎಲೆ ಮತ್ತೆ
ಬುಡದ ಬಾಗಿಲಿಗೇ ಉರುಳಿ
ಶರಣಾಗುವ ನೂರಾರು ಎಲೆಗಳ ಪಾದಸೇವೆ ನಾಳಿನ ಬೇರುಗಳಿಗೆ ಶಕ್ತಿ ;
ಅನವರತ ದುಡಿದಣಿದು ನೆಲೆ ನಿಲ್ಲಿಸಿದ ಮಕ್ಕಳ ಮನೆಗಳು
ಅವ್ವ ಅಪ್ಪನಿಗೀಗೀಗ ದೂರ ಮನೆಗಳಷ್ಟೇನಾ ?

ಮರದ ಬೇರಿಗೆ ಸಿಕ್ಕ ಎಲೆಗಳ ಪುಣ್ಯ
ಅವ್ವನ ಕಣ್ಣೀರಿಗೂ ಇಲ್ಲ ಅಪ್ಪನ ಬೆವರಿಗೂ ಇಲ್ಲ
ನಾಳೆಗಳ ಕೊಂಬೆ ರೆಂಬೆಗಳಿಗೆ ಬೇರುಗಳು ದುಡಿಯುತಿವೆ
ಅರಳರಳಿ ಬಾಡುವ ಸಂತಾನ ಸುಮಗಳಿಗೆ ಲೆಕ್ಕ ಇಟ್ಟವರಿಲ್ಲ
ಅವ್ವ ಅಪ್ಪ ಮಣ್ಣಾಗಿ ಬಹುಕಾಲ
ನಾವಿನ್ನೂ ಬೇರಾಗದಿರುವುದು ದುರಂತ ; ಕತ್ತಲಲ್ಲಿ ಬೇರು ಅದೋ ಸುಮ್ಮನೆ ದುಡಿಯುತಿದೆ!


3 thoughts on “ಸಂತೆಬೆನ್ನೂರು ಫೈಜ್ನಟ್ರಾಜ್-ನೂರಾರು ಎಲೆಗಳು

  1. ಒಂದೇ ಗಿಡದಲ್ಲಿ
    ಆಯೆಲ್ಲ ಕುಸುಮಗಳು ಅರಳಿದ್ದು
    ಅದೇ ಬೇರುಗಳಿಂದ
    ಅದೇ ನೆಲದ ಸಾರ ಹೀರಿದ್ದು
    ಹಸಿರೆಲೆಯ ಉಡುಗೆಯಲಿ
    ಬಾಗಿ ಬೆಳಕಿನ ಕಡೆಗೆ
    ಶಕ್ತಿಯುಸಿರಿನ ಎಡೆಗೆ ಜೀವನೋಟ
    ಬೇರು ಇಳಿದಂತೆಲ್ಲ ನೆಟ್ಟಗಾಗುವ ಚಿಲುಮೆ-
    ಯ ಚಿಗುರ ಮೇಲೆತ್ತಿ ನಿಂತ
    ಅಪ್ಪ ಅವ್ವ
    ಬದುಕಿನ ಮೂಲ ಬೇರು

  2. ಬದುಕಿನ ಬೇರು…ಆಳ ಆಳಕ್ಕಿಳಿದುಚಿಗುರು ಎಲೆಗಳ ಆಕಾಶಕ್ಕೆ ಎತ್ತಿ ಹಿಡಿಯುತ್ತದೆ ..ಚೆನ್ನಾಗಿದೆ ಕವಿತೆ

Leave a Reply

Back To Top