“ಮಣ್ಣು ಅನ್ನೋ ಹೊನ್ನು ಅತ್ಯಮೂಲ್ಯ”ಕೆ. ಎನ್.ಚಿದಾನಂದ

ಈ ಭೂಮಿಯ ಮೇಲೆ ಮಣ್ಣು ಎಂಬ ಸ್ವಾಭಾವಿಕ ವಸ್ತುವೊಂದು ಇಲ್ಲದಿರದಿದ್ದರೆ ಏನಾಗುತಿತ್ತು ಎಂಬ ಆಲೋಚನೆಯೊಂದು ಮಿಂಚಿನಂತೆ ಹೊಳೆದು ಮಾಯವಾಯಿತು. ತಕ್ಷಣ ಮೈ ಜುಮ್ಮೆನಿತು. ಯಾರಿಗೂ ತಿನ್ನಲು ಅನ್ನವೇ ಇರುತ್ತಿರಲ್ಲಿ. ಬೆಳೆಗಳನ್ನು ಯಾರೂ ಬೆಳೆಯುತ್ತಿರಲಿಲ್ಲ. ಒಟ್ಟಾರೆ ಮಾನವನ ಅಸ್ತಿತ್ವವೇ ಉಳಿಯತ್ತಿರಲಿಲ್ಲ.

ಮಣ್ಣು- ಒಂದು ನೈಸರ್ಗಿಕ ಸಂಪನ್ಮೂಲ. ವಿವಿಧ ರೀತಿಯ ನೈಸರ್ಗಿಕ ಸಂಪನ್ಮೂಲಗಲ್ಲಿ ಮಣ್ಣು ಬಹು ಪ್ರಧಾ ನವಾದ ಮತ್ತು ಪ್ರಮುಖವಾದ ಸಂಪನ್ಮೂಲ. ಶೇ 95ರಷ್ಟು ಆಹಾರ ಪದಾರ್ಥಗಳ ಮಣ್ಣಿನಿಂದಲೇ ಸಿಗುತ್ತವೆ. ಮಣ್ಣು ಪೋಷಕಾಂಶ ಭರಿತವಾಗಿರಬೇಕು. ಮಣ್ಣು ಮಲಿನಗೊಳ್ಳಬಾರದು. ಮಣ್ಣಿನ ಸುಸ್ಥಿರ ನಿರ್ವಹಣೆ ಸರಿಯಾಗಿ ಆಗಬೇಕು ಎಂಬೆಲ್ಲಾ ಉದ್ದೇಶಗಳಿಂದ ವಿಶ್ವಸಂಸ್ಥೆಯು ಪ್ರತೀ ವರ್ಷ ಡಿಸೆಂಬರ್ 5ನ್ನು ವಿಶ್ವ ಮಣ್ಣಿನ ದಿನ ವೆಂದು ಆಚರಿಸಲು ಕರೆ ನೀಡಿದೆ. ಮಣ್ಣು ಜಗತ್ತಿನ ಅತ್ಯಮೂಲ್ಯ ಹೊನ್ನು . ವಿಶ್ವ ಮಣ್ಣಿನ ದಿನದ ಆಚರಣೆಯ ಸಂದರ್ಭದಲ್ಲಿ ನಮಗೆ ಅನೇಕ ಪ್ರಶ್ನೆಗಳು ಮುಂದೆ ಬಂದು ನಿಲ್ಲುತ್ತವೆ. ಮಣ್ಣು ಎಂದರೇನು ? ಮಣ್ಣಿನ ಮಹತ್ವವೆನು ? ಮಣ್ಣಿನಲ್ಲಿ ಯಾವೆಲ್ಲಾ ಅಂಶಗಳಿವೆ ? ಮಣ್ಣಿನ ವಿಧಗಳು ಯಾವುವು? ಮಣ್ಣಿನ ಫಲವತ್ತತೆ ಎಂದರೆ ಏನು? ಮಣ್ಣಿನ ಬಗ್ಗೆ ಅಧ್ಯಯನ ಶಾಸ್ತ್ರವೇನಾದರೂ ಇದೆಯಾ? ಮಣ್ಣಿನ ಸವಕಳಿ ಎಂದರೇನು ? ಮಣ್ಣಿನ ನಿರ್ವಹಣೆಯನ್ನು ಹೇಗೆ ಮಾಡಲಾಗುತ್ತದೆ ? ಮಣ್ಣನ್ನು ನಾವೇಕೆ ಸುರಕ್ಷಿಸಬೇಕು? ಮಣ್ಣು ಮಾಲಿನ್ಯಗೊಂಡರೆ ಅದರ ಮುಂದಿನ ಪರಿಣಾಮಗಳೇನು? ಎಂಬಿತ್ಯಾದಿ ಪ್ರಶ್ನೆಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ.

ಭೂಮಿಯ ಮೇಲೆ ಶಿಲೆಗಳು ಶಿಥಿಲಗೊಂಡು ಒಡೆದು ಅತಿ ಸಣ್ಣ ಕಣಗಳಾಗಿ ಅಥವಾ ಅವುಗಳು ಸವೆದು ಉಂಟಾಗಿರುವ ಸೂಕ್ಷ್ಮ ಶಿಲಾವಸ್ತುವನ್ನು ಮಣ್ಣು ಎಂದು ಕರೆಯಲಾಗುತ್ತದೆ. ಮಣ್ಣು ಭೂಮಿಯ ಮೇಲೆ ತೆಳುವಾಗಿ ಹರಡಿಕೊಂಡಿರುವ ಒಂದು ಪದರಿನಂತೆ ಕಂಡುಬರುತ್ತದೆ. ಸಾವಯವ ಮತ್ತು ನಿರವಯವ ವಸ್ತುಗಳಿಂದ ಕೂಡಿದ ಭೂಮಿಯ ಮೇಲ್ಪದರವೇ ಮಣ್ಣು ಎಂದೂ ಹೇಳಬಹುದು. ಇದು ಸಾಮಾನ್ಯವಾಗಿ ಫಲವತ್ತಾಗಿದ್ದು ವಿವಿಧ ಬಗೆಯ ಜೀವಿಗಳನ್ನು ಸಂರಕ್ಷಿಸುತ್ತದೆ ಮತ್ತು ಪೋಷಿಸುತ್ತದೆ. ಮಣ್ಣು ಮನುಷ್ಯನ ಎಲ್ಲಾ ಚಟುವಟಿಕೆಗಳಲ್ಲೂ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ನೈಜ ಸಂಗತಿ ಏನೆಂದರೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮ್ಮ ಬದುಕಿನಲ್ಲಿ ಸರ್ವವನ್ನು ಮಣ್ಣಿನಿಂದಲೇ ಪಡೆಯುತ್ತಿದ್ದೇವೆ. ಇಂಥಹ ಮಣ್ಣಿನ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರವೇ ಪೆಡಾಲಜಿ (PEDOLOGY) ಅಂದರೆ ಮಣ್ಣಿನ ಶಾಸ್ತ್ರ ಎಂದು ಕರೆಯಲಾಗುತ್ತದೆ. ಇದು ಮಣ್ಣಿನ ನಿರ್ಮಾಣ, ರಚನೆ, ರಾಸಾಯನಿಕ ಸಂಯೋಜನೆ, ಮಾರ್ಪಾಡು, ಹಂಚಿಕೆ ಮುಂತಾದವುಗಳನ್ನು ಕುರಿತಂತೆ ಅಧ್ಯಯನ ಮಾಡುತ್ತದೆ.

ಮಣ್ಣು ಎಲ್ಲಾ ನೆಲ ಸಸ್ಯಗಳಿಗೆ ನೀರು ಮತ್ತು ಖನಿಜಾಂಶಗಳನ್ನು ಒದಗಿಸುವ ನೈಸರ್ಗಿಕ ಸಂಪನ್ಮೂಲ. ಅದು ಯಾವ ರೀತಿ ಇದೆಯೋ ಅದೇ ರೀತಿಯಲ್ಲಿ ಮುಂದಿನ ತಲೆಮಾರುಗಳಿಗೆ ಬಳುವಳಿಯಾಗಿ ನೀಡಬಹುದಾದ ಆಸ್ತಿ ಯಾಗಿದೆ. ಎಲ್ಲಾ ರೀತಿಯ ಬೆಳೆಗಳು ತಮಗೆ ಬೇಕಾದ ನೀರು ಮತ್ತು ಖನಿಜಾಂಶಗಳನ್ನು ಮಣ್ಣಿನ ಮೂಲಕವೇ ಪಡೆದುಕೊಳ್ಳುತ್ತವೆ. ಆದ್ದರಿಂದಲೇ ಮಣ್ಣು ಗಿಡಮರಗಳ ಪಾಲಿಗೆ ಪೋಷಕ ದ್ರವ್ಯಗಳನ್ನು ಒದಗಿಸುವ ಪ್ರಧಾನ ಭಂಡಾರವಾಗಿದೆ. ಮಣ್ಣಿನಲ್ಲಿ ಹ್ಯೂಮಸ್ ಇರುತ್ತದೆ. ಸಸ್ಯ ಮತ್ತು ಪ್ರಾಣಿಗಳ ಕೊಳೆತ ಜೈವಿಕಾಂಶಗಳು ಮಣ್ಣಿನಲ್ಲಿ ಬೆರೆತು ಹೋಗಿರುತ್ತವೆ. ಈ ರೀತಿಯ ಕೊಳೆತ ಜೈವಿಕಾಂಶಗಳೇ ಹ್ಯೂಮಸ್ . ಇದು ಮಣ್ಣಿನ ಬಣ್ಣ ಮತ್ತು ಫಲವತ್ತತೆಯನ್ನು ನಿರ್ಧರಿಸುತ್ತದೆ.
ಮಣ್ಣಿನಲ್ಲಿ ಸಿಲಿಕೇಟ್ ಹಾಗೂ ಸಿಲಿಕೇಟ್ ಆಕ್ಸೈಡ್ ಗಳು , ಕಬ್ಬಿಣ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಸೋಡಿಯಂ ಹಾಗೂ ಅಲ್ಯುಮಿನಿಯಂ ಮುಂತಾದ ಖನಿಜಾಂಶಗಳು ಇರುತ್ತವೆ. ಮೆಕ್ಕಲು ಮಣ್ಣು, ಕೆಂಪು ಮಣ್ಣು, ಕಂದು ಮಣ್ಣು, ಕಪ್ಪು ಮಣ್ಣು, ಲ್ಯಾಟರೈಟ್ ಮಣ್ಣು (ಜಂಬಿಟ್ಟಿಗೆ), ಮರಳು ಮಣ್ಣು, ಜೇಡಿ ಮಣ್ಣು , ಜೌಗು ಮಣ್ಣು ಅಥವಾ ಲವಣಯುಕ್ತ ಮಣ್ಣು, ತೆರಾಯಿ ಮಣ್ಣು, ಪರ್ವತ ಮಣ್ಣು ಹೀಗೆ ವಿವಿಧ ರೀತಿಯ ಮಣ್ಣುಗಳಿವೆ.

ಭೂಮಿಯ ಮೇಲೆ ಕಂಡು ಬರುವ ಮಣ್ಣಿನ ಪದರವು ಇಂದು ನೆನ್ನೆ ರೂಪಗೊಂಡದ್ದಲ್ಲ. ಕೋಟ್ಯಂತರ ವರ್ಷಗಳ ಅವಧಿಯಲ್ಲಿ ನೈಸರ್ಗಿಕ ಕ್ರಿಯೆಗಳಿಂದಾಗಿ ಮಣ್ಣು ನಿರ್ಮಿತವಾಗಿದೆ. ಇಂತಹ ಮಣ್ಣು ಇಂದು ಮಾಲಿನ್ಯವಾಗುತ್ತಿದೆ. ಮನುಷ್ಯನ ಮಿತಿಮೀರಿದ ಕಾರ್ಯ ಚಟುವಟಿಕೆಗಳಿಂದಾಗಿ ಮಣ್ಣಿನಲ್ಲಿ ಉಂಟಾಗಿರುವ ಅಹಿತಕರ ಬದಲಾವಣೆ ಹಾಗೂ ಗುಣಮಟ್ಟದಲ್ಲಿ ಹಾಳಾಗಿರುವಿಕೆಯನ್ನು ಮಣ್ಣಿನ ಮಾಲಿನ್ಯ ಎಂದು ಕರೆಯಲಾಗುತ್ತದೆ. ಮಣ್ಣಿನ ಮಾಲಿನ್ಯ ದಿಂದಾಗಿ ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗಿ ಉತ್ಪಾದನಾ ಸಾಮರ್ಥ್ಯ ಕ್ಷೀಣಿಸುತ್ತದೆ. ಮಣ್ಣಿನಲ್ಲಿರುವ ಜೀವಿಗಳು ನಾಶಗೊಂಡು ಅದರ ಪುನರ್ ನಿರ್ಮಾಣ ಕ್ರಿಯೆಯು ಹಾಳಾಗುತ್ತದೆ. ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳು: 1. ಹರಿಯುವ ನೀರು, ಬೀಸುವ ಗಾಳಿ, ಕರಗುವ ಹಿಮ, ಸಮುದ್ರದ ಅಲೆಗಳ ಹೊಡೆತ ಮುಂತಾದ ಕಾರಣಗಳಿಂದಾಗಿ ಭೂಮಿಯ ಮೇಲ್ಪದರದ ಮಣ್ಣು ಕೊಚ್ಚಿಹೋಗಿ ಮಣ್ಣಿನ ಸವಕಳಿ ಉಂಟಾಗುತ್ತದೆ. ಅರಣ್ಯಗಳ ನಾಶ, ಸಾಕುಪ್ರಾಣಿಗಳನ್ನು ಅತಿಯಾಗಿ ಮೇಯಿಸುವುದರಿಂದ, ಅವೈಜ್ಞಾನಿಕ ಬೇಸಾಯ ವಿಧಾನದಿಂದ, ಇಟ್ಟಿಗೆ , ಹೆಂಚು, ಮಡಕೆ ಮಾಡಲು ಮೇಲ್ಪದರದ ಮಣ್ಣನ್ನು ಅತಿಯಾಗಿ ಬಳಸುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ. ಇದು ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತದೆ. 2. ಸಮರ್ಪಕವಾಗಿಲ್ಲದ ಮತ್ತು ಯೋಜಿತವಾಗಿಲ್ಲದ ಹೆಚ್ಚುವರಿ ನೀರಿನ ಬಳಕೆಯ ಕಾರಣದಿಂದಲೂ ಮಣ್ಣಿನ ಮಾಲಿನ್ಯ ಉಂಟಾಗುತ್ತದೆ. 3. ಜೀವಿ – ಪರಿಸರ ವ್ಯವಸ್ಥೆಯ ನಾಶದಿಂದಾಗಿ ಮಣ್ಣಿನ ಮಾಲಿನ್ಯ ಉಂಟಾಗುತ್ತದೆ. ಭೂಮಿಯ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ಮಾನವನ ಅನಿಯಂತ್ರಿತ ಚಟುವಟಿಕೆಗಳಿಂದಾಗಿ ಸಾಯುವುದರಿಂದಲೂ ಮಣ್ಣಿನಲ್ಲಿ ಫಲವತ್ತತೆ ಕಡಿಮೆಯಾಗಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. 4. ವಾಯು ಮಾಲಿನ್ಯದಿಂದಾಗಿ ಮಣ್ಣಿನ ರಾಸಾಯನಿಕ ಸಂಯೋಜನೆಯು ಏರುಪೇರಾಗುವುದರಿಂದ ಮಣ್ಣಿನ ಮಾಲಿನ್ಯ ಉಂಟಾಗುತ್ತದೆ. 5, ಅಧಿಕವಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಮಣ್ಣು ಅನುಪಯುಕ್ತವಾಗುತ್ತದೆ. 6. ಮಿತಿಮೀರಿದ ಔಷಧ ಮತ್ತು ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಮಣ್ಣು ಮಾಲಿನ್ಯವಾಗುತ್ತದೆ.

ಮಣ್ಣಿನ ಮಾಲಿನ್ಯದಿಂದಾಗಿ ಉಂಟಾಗುವ ಹಲವು ದುಷ್ಪರಿಣಾಮಗಳು : 1. ಬೆಳೆಗಳ ಉತ್ಪಾದನೆ ಕಡಿಮೆಯಾಗುತ್ತದೆ. 2. ವಿಶಾಲವಾದ ಕೃಷಿ ಭೂಮಿಗಳು ಅನುಪಯುಕ್ತವಾಗುತ್ತವೆ. 3. ಮಾಲಿನ್ಯದಿಂದ ಕಲುಷಿತಗೊಂಡ ಮಣ್ಣಿನಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಅವು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. 4. ಮಣ್ಣಿನ ಮಾಲಿನ್ಯದಿಂದಾಗಿ ನೀರಿನ ಕೊರತೆ ಉಂಟಾಗಿ, ಜೀವಸಂಕುಲ ಗಳು ಕೊನೆಯಾಗುತ್ತವೆ. 5. ಮಣ್ಣಿನ ಮಾಲಿನ್ಯ ವು ಜಲಮಾಲಿನ್ಯಕ್ಕೆ ಕಾರಣವಾಗುತ್ತದೆ. 6. ಮಣ್ಣಿನ ಸವಕಳಿಯಿಂದಾಗಿ ಜಲಾಶಯ ಮತ್ತು ಕೆರೆಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ.

ಮಣ್ಣಿನ ಮಾಲಿನ್ಯವನ್ನು ನಿಯಂತ್ರಿಸುವ, ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವ ಕ್ರಮಗಳನ್ನು ತಿಳಿಯೋಣ. ಮಣ್ಣಿನ ಸವಕಳಿಯನ್ನು ತಡೆಗಟ್ಟಿ ಅದರಲ್ಲಿರುವ ಫಲವತ್ತತೆಯನ್ನು ಕಾಪಾಡುವುದೇ ಮಣ್ಣಿನ ಸಂರಕ್ಷಣೆಯಾಗಿದೆ. ಇದರೊಂದಿಗೆ ಮಣ್ಣಿನಲ್ಲಿ ಫಲವತ್ತತೆ ಕಡಿಮೆಯಾಗದಂತೆ ಸುಸ್ಥಿರ ರೀತಿಯಲ್ಲಿ ಮಣ್ಣನ್ನು ಬಳಕೆ ಮಾಡಿಕೊಂಡು ನಿರಂತರವಾಗಿ ಬೆಳೆಗಳ ಉತ್ಪಾದನೆಯನ್ನು ಪಡೆಯುವುದೇ ಮಣ್ಣಿನ ನಿರ್ವಹಣೆಯಾಗಿದೆ.

1. ಅರಣ್ಯನಾಶವನ್ನು ತಡೆಗಟ್ಟುವುದು ಮತ್ತು ಅರಣ್ಯಗಳನ್ನು ಸಂರಕ್ಷಿಸುವುದು.
2. ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಜೈವಿಕ ಗೊಬ್ಬರಗಳನ್ನು ಬಳಸುವುದು.
3. ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
4. ಅಡ್ಡಬದುಗಳ ನಿರ್ಮಾಣ ಮಾಡುವುದು.
5. ಮಣ್ಣಿನ ಫಲವತ್ತತೆಯ ಮೇಲೆ ದುಷ್ಪರಿಣಾಮವನ್ನು ಬೀರುವ ಔಷಧ ಮತ್ತು ಕೀಟನಾಶಕಗಳನ್ನು ನಿಷೇಧಿಸುವುದು.
6. ಹಂತಹಂತವಾಗಿ ಕೃಷಿ ಕ್ಷೇತ್ರಗಳ ನಿರ್ಮಾಣ ಹೆಚ್ಚಿಸುವುದು.
7. ಅಗತ್ಯವಿರುವಷ್ಟು ನೀರನ್ನು ಯೋಜಿತವಾಗಿ ಮತ್ತು ಸಮರ್ಪಕವಾಗಿ ಬಳಸುವುದು.
8. ಚೆಕ್‌ಡ್ಯಾಂ ಗಳನ್ನು ನಿರ್ಮಾಣ ಮಾಡುವುದು.
9 ಆವರ್ತ ಬೆಳೆ ಮತ್ತು ಮಿಶ್ರ ಬೆಳೆಗಳನ್ನು ಬೆಳೆಯುವ ವಿಧಾನಗಳನ್ನು ಅನುಸರಿಸುವುದು.
10. ಮಣ್ಣಿನ ಫಲವತ್ತತೆ ಕಾಪಾಡಲು ರೈತರಿಗೆ ಆಗಿಂದಾಗ್ಯೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
11. ಶಾಲಾ, ಕಾಲೇಜು , ವಿಶ್ವವಿದ್ಯಾನಿಲಯಗ ಳಲ್ಲಿ ವಿದ್ಯಾರ್ಥಿಗಳಿಗೆ ಮಣ್ಣಿನ ಪ್ರಾಮುಖ್ಯತೆಯ ಕುರಿತು ಸಾಂದರ್ಭಿಕವಾಗಿ ತಿಳಿ ಹೇಳುವುದು. ಭಾಷಣ , ಚರ್ಚೆ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸುವುದು.

ನಾವು ಭಾರತೀಯರು. ನಮ್ಮಲ್ಲಿ ಮಣ್ಣಿಗೆ ಪೂಜನೀಯ ಸ್ಥಾನವಿದೆ. ಭೂಮಿ ಪೂಜೆಯ ಮೂಲಕ ಮಣ್ಣನ್ನು ಪೂಜಿಸಲಾಗುತ್ತದೆ. ನಮ್ಮಲ್ಲಿರುವ ನಂಬಿಕೆ ಎಂದರೆ “ಮಣ್ಣಿನಿಂದಲೇ ಆರಂಭ ಮತ್ತು ಮಣ್ಣಿನಿಂದಲೇ ಅಂತ್ಯ ” ಮಣ್ಣು ಮನುಕುಲದ ಆಸ್ತಿ. ಭಾರತದಲ್ಲಿ ಮಣ್ಣಿನ ಸವಕಳಿ ತಪ್ಪಿಸಲು ಮತ್ತು ಫಲವತ್ತತೆಯನ್ನು ಕಾಪಾಡಲು ಮಣ್ಣು ಸಂರಕ್ಷಣಾ ಮಂಡಳಿಯನ್ನು ಸ್ಥಾಪಿಸಲಾಗಿದೆ. ಮಣ್ಣಿನ ಸವಕಳಿ ತಡೆಯಲು ಮತ್ತು ಫಲವತ್ತತೆಯನ್ನು ಕಾಯ್ದುಕೊಂಡು ಆರೋಗ್ಯಕರ ಸುಸ್ಥಿರ ಮಣ್ಣನ್ನು ಸಂರಕ್ಷಿಸಲು ವಿಶ್ವಸಂಸ್ಥೆಯ 68ನೇ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಿತು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆಯು ಡಿಸೆಂಬರ್ 5 , 2014ರಲ್ಲಿ ಮೊದಲ ಬಾರಿಗೆ ಅಧಿಕೃತ ವಿಶ್ವ ಮಣ್ಣಿನ ದಿನದ ಆಚರಣೆಗೆ ಕರೆ ನೀಡಿತು. ಈ ಹಿನ್ನಲೆಯಲ್ಲಿ ಇಂದು ವಿಶ್ವದ ಎಲ್ಲಾ ರಾಷ್ಟ್ರಗಳು ಮಣ್ಣಿನ ಸಂರಕ್ಷಣೆಯ ಮಹತ್ವವನ್ನು ಅರಿತು ವಿಶ್ವ ಮಣ್ಣಿನ ದಿನಾಚರಣೆಯನ್ನು ಆಚರಿಸುತ್ತಿವೆ.
ವಿಶ್ವ ಮಣ್ಣಿನ ದಿನ 2023 ರ ಥೀಮ್ ಈ ರೀತಿ ಇದೆ. ” ಮಣ್ಣು ಮತ್ತು ನೀರು, ಜೀವನದ ಮೂಲ ” ಈ ಥೀಮ್ ನ ಮೂಲಕ ವಿಶ್ವದ ರಾಷ್ಟ್ರಗಳ ಸುಸ್ಥಿರ ಅಭಿವೃದ್ಧಿಯನ್ನು ಕಾಯ್ದುಕೊಳ್ಳಲು ವಿಶ್ವ ನಾಗರೀಕರಾದ ನಾವೆಲ್ಲರೂ ಮಣ್ಣಿನ ಸಂರಕ್ಷಣೆ ಮಾಡುತ್ತೇವೆಂದು ಸಂಕಲ್ಪ ಮಾಡೋಣ.


Leave a Reply

Back To Top