ಹನ್ನೆರಡನೆಯ ಶತಮಾನದ ಬಸವಣ್ಣನವರ ನೇತೃತ್ವದದಲ್ಲಿ ನಡೆದ ವರ್ಗ ವರ್ಣ ರಹಿತವಾದ ಸಾಮಾಜಿಕ ಆಂದೋಲನವು ಜಗವು ಕಂಡ ಶ್ರೇಷ್ಠ ಕ್ರಾಂತಿಯ ಮುನ್ನುಡಿ. ದೇಶದ ಬೇರೆ ಬೇರೆ ಕಡೆಗಳಿಂದ ಆಗಮಿಸಿದ ಸಾಧಕರು ಶರಣರು ಸಂಪೂರ್ಣ ಬದಲಾವಣೆಯ ಕನಸು ಕಂಡವರು. ಕಲ್ಯಾಣ ಕ್ರಾಂತಿಯಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿ ವಚನ ಸಾಹಿತ್ಯ ಉಳಿಸಿಕೊಡುವಲ್ಲಿ ಮಡಿವಾಳ ಮಾಚಿದೇವರ ಹೋರಾಟ ಕೆಚ್ಚು ಅನುಪಮವಾಗಿದೆ.
ಮಡಿವಾಳ ಮಾಚಿದೇವರ ಆಪ್ತ ನಿಕಟವರ್ತಿಯಾದ ಸಮಯಾಚಾರದ ಮಲ್ಲಿಕಾರ್ಜುನ ಒಬ್ಬ ದಿಟ್ಟ ಗಣಾಚಾರಿಯಾಗಿದ್ದಾನೆ . ಅಂದಿನ ಕಾಲದ ಸ್ಥಾವರ ವ್ಯವಸ್ಥೆ ಮೂರ್ತಿ ಪೂಜೆಯನ್ನು ಕಟುವಾಗಿ ವಿರೋಧಿಸಿ ಟೀಕಿಸಿ ವಚನ ಬರೆದ ಅನುಭಾವಿಯು.
ಈತನ ಜೀವನ ವೃತ್ತಾಂತ ಚರಿತ್ರೆಯ ಬಗ್ಗೆ ಹೆಚ್ಚಿಗೆ ತಿಳಿದು ಬರದಿದ್ದರೂ ಸಹಿತ ಈತನು ಮಡಿವಾಳ   ಮಾಚಿದೇವನ ಹುಟ್ಟು ಊರಾದ ದೇವರ ಹಿಪ್ಪರಗಿ  ಅಥವಾ
ಈಗಿನ ಬಾಗಲಕೋಟೆ ಜಿಲ್ಲೆಯ ಪ್ರದೇಶದವನಾಗಿರಬಹುದೆಂದು ತಿಳಿಯ ಬಹುದು .
ಸಮಯಾಚಾರದ ಮಲ್ಲಿಕಾರ್ಜುನ ಇವನೊಬ್ಬ ಮಡಿವಾಳ ಮಾಚಿದೇವ ಅಂಗ ರಕ್ಷಕ ಆಪ್ತ ಸಹಾಯಕ ಮತ್ತು ಸಂದರ್ಭಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವ ನಿಷ್ಠಾವಂತ  ದಲಿತ ವರ್ಗದಿಂದ ಬಂದ ಶರಣನು. ಸಮಯಾಚಾರವೆಂದರೆ ಶರಣರ ಕಾಯಕದಲ್ಲಿ ಅಗತ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸುವ ಕಾರ್ಯ  .ಮಡಿವಾಳ ಮಾಚಿದೇವರ ಬಟ್ಟೆ ಮಾಡಿ ಮಾಡುವಲ್ಲಿ ಸಹಾಯಕನಾಗಿ ಪರಿಚಾರಕನಾಗಿ ಸೇವಕನಾಗಿ ನಿಲ್ಲುವ ವಿನಮ್ರ ಭಾವದ ಸಮಯಾಚಾರದ ಮಲ್ಲಿಕಾರ್ಜುನ ಶರಣನು.

     ಸಮಯಾಚಾರದ ಮಲ್ಲಿಕಾರ್ಜುನನು ಪರಮ ಪಂಚಾಕ್ಷರಮೂರ್ತಿ ಶಾಂತ ಮಲ್ಲಿಕಾರ್ಜುನ ಅಂಕಿತದಲ್ಲಿ ವಚನ ಬರೆದಿದ್ದಾನೆ
ಕೇವಲ ಐದು ವಚನಗಳು ಮಾತ್ರ ದೊರೆತಿವೆ. ಕಲ್ಯಾಣ ಕ್ರಾಂತಿಯ ನಂತರ  ಬಹುತೇಕ ದಲಿತ ಮೂಲದ ಶರಣರ ವಚನಗಳನ್ನು ಅಂದಿನ ಪುರೋಹಿತ ಶಾಹಿಗಳು
ವೈದಿಕರು ಸುಟ್ಟು  ಹಾಕಿದ್ದು ಕಂಡು ಬರುತ್ತದೆ. ಇದಕ್ಕೆ ಸಾಕ್ಷಿಯೆಂದರೆ ಹರಳಯ್ಯ ಮತ್ತು ಕಲ್ಯಾಣಮ್ಮನವರ ವಚನಗಳು ಶೀಲವಂತನ ವಚನಗಳು
ಇನ್ನು ಅನೇಕ ಅಸ್ಪ್ರಶ್ಯರೆನಿಸ್ಕೊಂಡ ಸಾಧಕರು ಶರಣರಾದಾಗ ಅವರ ಮೇಲಿನ ಕೋಪವನ್ನು ಅಂತಹ ವಚನಕಾರರ ವಚನಗಳನ್ನು ಸುಡುವ ಮೂಲಕ ಸಂಭ್ರಮಿಸುವ ಕ್ಷುದ್ರ ಮನಸು ಅಂದಿನ ಕಾಲದ ಕೋಮುವಾದಿಗಳಾಗಿತ್ತು.
ಸಮಯಾಚಾರದ ಮಲ್ಲಿಕಾರ್ಜುನ ಅವರ  ಅನುಭವದ ವಚನಗಳಲ್ಲಿ ಸಹಜ ಬದುಕಿನ ವ್ಯವಹಾರಗಳ ಕಾಯಕದ ಹಲವು ಸನ್ನಿವೇಶಗಳನ್ನು ಬಳಸಿದ್ದಾರೆ.

ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು
ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ
ಅರಿವೆಂಬುದಿಲ್ಲ, ಮರವೆಂಬುದಿಲ್ಲ,
ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ,
ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ,
ಸಂಗ ನಿಸ್ಸಂಗವೆಂಬುದಿಲ್ಲ,
ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ.
ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ,
ಭ್ರಮರದೊಳಡಗಿದ ಕೀಟದಂತೆ
ಉರಿಯೊಳಡಗಿದ ಕರ್ಪುರದಂತೆ
ಕ್ಷೀರದೊಳು ಬೆರೆದ ಪಯದಂತೆ
ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ
ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ
ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ,
ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ

ಅಖಂಡ ಪರಿಪೂರ್ಣತೆಯಲ್ಲಿ ಸಮರಸವನ್ನು ಕಾಣುವಲ್ಲಿ ಘನಕ್ಕೆ ಘನವೇ ಸಾಟಿ  ಭಕ್ತನಿಗೆ ಭಕ್ತ ನೇ ಸಾಟಿ. ಇಂತಹ ಅವ್ಯಕ್ತವಾದ ಅನುಭವವು ಬಾಹ್ಯ ಜಗತ್ತಿಗೆ ತಿಳಿಸುವುದು ಕರಕಷ್ಟವಾಗಿದೆ. ಉರಿಯೊಳಗೆ ಕರ್ಪೂರ ಕರಗುವಂತೆ ಸಮುದ್ರದೊಳಡಗಿದ ವಾರಿಕಲ್ಲಿನಂತೆ ಹಾಲಿನಲ್ಲಿ ಅಡಗಿದ ಪಯದ ಹಾಗೆ ದುಂಬಿ ಪರಿಮಳ ಹೀರುತ್ತದೆ ಆದರೆ ಕೀಟವು ಆಹಾರವನ್ನು ಆರಿಸುತ್ತದೆ .  ತಾನು ದೈವತ್ವವು ಬೇರೆ ಬೇರೆ ಎಂಬ ಪರಿಕಲ್ಪನೆಯನ್ನು ಹೊರೆತು ಪಡಿಸಿ ಪರಮ ಸುಖವನ್ನು ಜ್ಞಾನಿಗಳು ಮಾತ್ರ ಬಲ್ಲರು ಎಂದೆನ್ನುತ್ತಾರೆ.

ಕರಸ್ಥಲದ ಲಿಂಗವ ಬಿಟ್ಟು,
ಧರೆಯ ಮೇಲಣ ಪ್ರತುಮೆಗೆರಗುವ
ನರಕಿ ನಾಯಿಗಳನೇನೆಂಬೆನಯ್ಯಾ,
ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಾ.
ಈ ವಚನದಲ್ಲಿ ಸ್ಥಾವರ ವಿರೋಧಿ ನೀತಿಯು ಎದ್ದು ಕಾಣುತ್ತದೆ .ಕರಸ್ಥಲವ ಬಿಟ್ಟು ಭೂಮಿಯ ಮೇಲಣ ಪ್ರತಿಮೆಗಳಿಗೆರಗುವ ನರಕಿಗಳು ನಾಯಿಗಳು ಎಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾರೆ.

ಅರಿವನಲ್ಲ ಮರವನಲ್ಲ ಕುರುಹಿಟ್ಟರಸುವನಲ್ಲ.
ತಾನೆ ಪರಿಪೂರ್ಣನಾಗಿ ತಾನೆಂಬ ಭಾವವಳಿದು,
ಇದಿರೆಂಬ ಶಂಕೆಯನರಿಯ.
ಭಾವಿಸಿ ಬಳಲುವ ಭಾವದ ಭ್ರಮೆಯಳಿದು,
ಭಾವವೆ ಬ್ರಹ್ಮವಾಗಿ, ಭಾವಿಸುವ ಭಾವಕನಲ್ಲ.
ಆಗುಹೋಗು ಭೋಗಭೂಷಣಂಗಳ ಅನುರಾಗಮಂ ತ್ಯಜಿಸಿ,
ಬಂಧ ಮೋಕ್ಷ ಸಂದುಸಂಶಯವೆಂಬ ಜಡತ್ವಮಂ ಕಳೆದು,
ನಿಂದ ನಿಲವಿನ ವಶಕ್ಕೆ ವಶವಾಗದೆ,
ಸಹಜ ಶಾಂತಿಸಮತೆ ನೆಲೆಗೊಂಡು ನಿಂದಾತನೆ ಶರಣ.
ಇಂತಪ್ಪ ಶರಣ ನುಡಿದುದೆ ಸಿದ್ಧಾಂತ, ನೋಡಿದುದೆ ಅರ್ಪಿತ,
ಮುಟ್ಟಿದುದೆ ಪ್ರಸಾದ, ಪರಿಣಾಮಿಸಿದುದೆ ತೃಪ್ತಿಯಾದ ಮಹಾಶರಣಂಗೆ
ಶರಣೆಂದು ಬದುಕಿದೆನು ಕಾಣಾ,
ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ.


ಸಾಧಕನು ಮನಸ್ಥಿತಿಯನ್ನು ವಿವರಿಸುವ ವಚನದಲ್ಲಿ ವ್ಯಕ್ತಿ ತಾನು ಪರಿಪೂರ್ಣ ಎಂದು ಭಾವಿಸಿ ಬಳಲುವ ಭಾವುಕತನವನ್ನು ಕಾಣ ಬಹುದು. ಜಡತ್ವವನ್ನು ಕಳೆದು ಅರಿವಿನ ನಿಲುವಿಗೆ ವಶವಾಗುವವನು ಸಾಧಕ ಭಕ್ತನಾಗುತ್ತಾನೆ ಅರ್ಪಿತಾ ಭಾವವೇ ಪ್ರಸಾದವಾದ ಕಾರಣ ಶರಣನು ತೃಪ್ತಿ ಭಾವವನ್ನು ಸದಾಕಾಲ ಹೊಂದಿರುತ್ತಾನೆ.
ಎಂದೆನ್ನುತ್ತಾರೆ ಸಮಯಾಚಾರದ ಮಲ್ಲಿಕಾರ್ಜುನ .

ಅಲ್ಲೆನ್ನ ಅಹುದೆನ್ನ, ಎಲ್ಲವು ತನ್ನಿಂದಾಯಿತ್ತಾಗಿ.
ಬೇಕೆನ್ನ ಬೇಡೆನ್ನ, ನಿತ್ಯತೃಪ್ತ ತಾನೆಯಾಗಿ.
ಆಕಾರ ನಿರಾಕಾರವೆನ್ನ, ಉಭಯವನೊಳಕೊಂಡ ಗಂಭೀರ ತಾನೆಯಾಗಿ.
‘ನಿಶ್ಯಬ್ದಂ ಬ್ರಹ್ಮ ಉಚ್ಯತೇ ‘ ಎಂಬ ಶ್ರುತಿಯ ಮತದಿಂದ ನುಡಿಗೆಟ್ಟವನಲ್ಲ.
ಬೆಳಗು ಬೆಳಗನೆಯ್ದಿ ಮಹಾಬೆಳಗಾದ ಬಳಿಕ,
ಹೇಳಲಿಲ್ಲದ ಶಬ್ದ ಕೇಳಲಿಲ್ಲದ ಕೇಳುವೆ.
ರೂಹಿಲ್ಲದ ಕೂಟ, ಕೂಟವಿಲ್ಲದ ಸುಖ.
ಸುಖವಿಲ್ಲದ ಪರಿಣಾಮ, ಪರಿಣಾಮವಿಲ್ಲದ ಪರವಶ.
ಪರವಶ ಪರಮಾನಂದವೆಂಬುದಕ್ಕೆ ಎರವಿಲ್ಲವಾಗಿ ಆತ ಲಿಂಗೈಕ್ಯನು.
ಇಂತಪ್ಪ ಲಿಂಗೈಕ್ಯನೊಳಗೆ ಏಕವಾಗಿ ಬದುಕಿದೆನು ಕಾಣಾ,
ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ.


ಒಬ್ಬ ವ್ಯಕ್ತಿಯು ಎಲ್ಲವೂ ತನ್ನಿಂದ ಆಗುತ್ತದೆ .  ಬೇಕು ಬೇಡದ ನಿರ್ಧಾರಕ್ಕೆ ತಾನೇ ಹೊಣೆ ಎಂದೆನ್ನುವ ಗರ್ವತನವು ವ್ಯಕ್ತ ಪಡಿಸುತ್ತಾನೆ ಬೆಳಗು ಬೆಳಗಾನೆಯ್ದಿ
ಮಹಾಬೆಳಗಾದ ಕಾರಣ ಹೇಳಗಾದ ಶಬ್ದಗಳನ್ನು ಕೇಳಲಾಗದೆ ಕೇಳುವೆ ಎಂದು ಹೇಳಿ ರೂಪವಿಲ್ಲದ ಕೂಟವಿಲ್ಲದ ಪರಮ ಸುಖವನು ಪಡೆಯುವವನು ನಿಜ ಜ್ಞಾನಿಯಾಗುತ್ತಾನೆ ಎಂದೆನ್ನುತ್ತಾನೆ ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನರು.

.

2 thoughts on “

  1. ಸರಳ ಸ್ವಭಾವದ… ಸಮಯಾಚಾರದ
    ಶರಣ ಮಲ್ಲಿಕಾರ್ಜುನರ ಹೆಸರು ನಾವೆಲ್ಲರೂ
    ಕೇಳಿರಲಿಲ್ಲ… ಮತ್ತು ನಿಮ್ಮ ಸಂಶೋಧನೆಯ
    ಆಳದ ಅರಿವು ಸಹ ಇರಲಿಲ್ಲ
    ಇದೆಲ್ಲ ನಿಮ್ಮ ಲೇಖನಗಳ ಮೂಲಕ ನಮಗೆ ತಿಳಿಸಿಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್

    ಸುಶಿ

Leave a Reply

Back To Top