ಪುಸ್ತಕ ಸಂಗಾತಿ

ಹಿಂದಿನ ಬೆಂಚಿನ ಹುಡುಗಿಯರು

ಕೃತಿ: ಹಿಂದಿನ ಬೆಂಚಿನ ಹುಡುಗಿಯರು

ಲೇಖಕಿ :- ಶೈಲಜಾ ಹಾಸನ 

# ಸಾಬು :-

            ತನಗೆಷ್ಟೇ ಕಷ್ಟಗಳಿದ್ದರೂ ಮಗ  ತನ್ನಂತೆ ಆಗಬಾರದೆಂದು ಹೊಟ್ಟೆ ಬಟ್ಟೆ ಕಟ್ಟಿ, ಬೀದಿ ಬೀದಿ ಅಲೆದು ಕಷ್ಟಪಟ್ಟು ಮಗನನ್ನು ದೊಡ್ಡ ವ್ಯಕ್ತಿ ಯಾಗಿಸುವ ತಂದೆ. ಇಳಿ ವಯಸ್ಸಿನಲ್ಲಿ ತನ್ನ ತಂದೆ ತಾಯಿಗೆ  ಮತ್ತೊಂದು ಮಗುವಾಗುವುದನ್ನು ಅರಿತು ಅವರನ್ನು ದೂರ ಮಾಡುವ ಮಗ. ಹುಟ್ಟಲಿರುವ ಮಗುವಿನ ಬದುಕನ್ನು ಕಟ್ಟಲು ಮತ್ತೆ ತನ್ನ ವೃದ್ಧಾಪ್ಯದಲ್ಲಿ ಪಾತ್ರೆ ಪಗಡೆ ಮಾರಾಟಕ್ಕೆ ಹೊರಡುವ ಅಪ್ಪ.

         ಇಲ್ಲಿ ಯಾರದ್ದು  ಸರಿ ಯಾರದ್ದು  ತಪ್ಪು ಎಂದು ಏಳುವ ಪ್ರಶ್ನೆಗಳು. ಸುಂದರವಾಗಿ ಹೆಣೆಯಲ್ಪಟ್ಟ ಕಥೆ ಬಂದು ನಿಲ್ಲುವುದು ನೂರಾರು ಪ್ರಶ್ನೆಗಳನ್ನು ಓದುಗನ ಮನದಲ್ಲಿ ಹುಟ್ಟು ಹಾಕುತ್ತಾ.

         ಸಾಬುವಿಗೆ ತನ್ನ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಇರುವವಳು ಗೌರಕ್ಕ. ಇಲ್ಲಿ ಜಾತಿ ಭೇದಗಳಿಂದ ಹೊರತಾಗಿ ಅರಳುವ ಮನಸ್ಸುಗಳು, ಸುಂದರ ಸ್ನೇಹ ಸಂಬಂಧಗಳನ್ನು ನಾವು ಕಾಣಬಹುದು.

          ಹೌದು, ಮಾನವೀಯ ದೃಷ್ಟಿಯಿಂದ ಮಗನೇಕೆ ಅಪ್ಪನನ್ನು ತನ್ನೊಡನೆ ಇರಿಸಿಕೊಳ್ಳಬಾರದು?, ಅರಿವಿಲ್ಲದೆ ವೃದ್ಧಾಪ್ಯದಲ್ಲಿ ಕಾಲಿರಿಸುತ್ತಿರುವಾಗ ಮತ್ತೊಂದು ಮಗು ಹುಟ್ಟುವುದು ಅಕ್ಷಮ್ಯ ಅಪರಾಧವೇ?, ಸರಿ ಸಾಬುವಿನದು ಅವಿವೇಕವೇ ಅಂದುಕೊಳ್ಳೋಣ ,ಆಗಿ ಹೋದ ಕಾರ್ಯಕ್ಕೆ ಏನು ಮಾಡಲು ಸಾಧ್ಯ?, ಇವೆಲ್ಲದರ ನಡುವೆ ಜಗತ್ತಿಗೆ ಕಾಲಿರಿಸಿ ಹೊರಟ ಮುಗ್ಧ ಜೀವದ ತಪ್ಪೇನು? ಹೀಗೆ ಕತೆಯನ್ನು ಓದಿದ ನಂತರ ಹುಟ್ಟಿಕೊಳ್ಳುವ ಹತ್ತು ಹಲವಾರು ಪ್ರಶ್ನೆಗಳು.

# .ಮೌನ ಮನದ ವೀಣೆ :-

               ಪ್ರೀತಿಯಂತಹ ವಿಚಾರ ಬಂದಾಗ ಮನಸ್ಸುಗಳು ಒಡೆದು, ಹೆತ್ತವರು ಹಾಗೂ ಮಕ್ಕಳ ನಡುವೆ ಕಿತ್ತಾಟ ನಡೆದು, ಮಕ್ಕಳು ಹೆತ್ತವರನ್ನು ತೊರೆದು ಸಾಗುವ ದೃಶ್ಯವೇ ಎಲ್ಲೆಡೆ ಕಾಣ ಸಿಗುವುದು. ಆದರೆ ಇಲ್ಲಿ ಕಥೆಯಲ್ಲಿ ಮಗನೆನಿಸಿಕೊಂಡವ ಪ್ರೀತಿಸಿ ಮದುವೆಯಾದರೂ, ತಾಯಿ ಅವನ ಬಳಿ ಮಾತೇ ಆಡದೆ ಇದ್ದರೂ, ಅವನು ಮಾತ್ರ ತನ್ನೆಲ್ಲ ದಿನಚರಿ, ಹೆಂಡತಿ ಮಗುವಿನ ಜತೆಗಿನ ಒಡನಾಟ ಎಲ್ಲವನ್ನೂ ವರದಿ ಒಪ್ಪಿಸುತ್ತಿರುತ್ತಾನೆ. ಆದರೆ ಆ ಅಮ್ಮನೆಂಬ ದೇವತೆ ಮಾತ್ರ ಕಲ್ಲು ಆಗಿರುತ್ತಾಳೆ. ಇಲ್ಲಿ ಅವಳೇಕೆ ಅವಳ ಮನಸ್ಸಿನಲ್ಲಿರುವ ಬಿಗುಮಾನವನ್ನು  ಮರೆತು ಮಗನನ್ನು ಸ್ವೀಕರಿಸಬಾರದು ಅನ್ನುವ ಪ್ರಶ್ನೆ ಏಳುತ್ತದೆ. ಮಗನಾದರೂ ಅಷ್ಟೇ ತನ್ನ ಹೆಂಡತಿ ಮಗುವನ್ನು ಜೊತೆಗೆ ಕರೆದುಕೊಂಡು ಹೋಗಿ ಅಮ್ಮನನ್ನು ಓಲೈಸಿ ಸಂತೈಸ ಬಾರದೆ?. ಹಠವೆಂಬುದು ಹಾಗೇನೇ ಮನಗಳನ್ನು ಸೇರಿಕೊಂಡ ಬಳಿಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗುತ್ತದೆ. ಒಮ್ಮೆ ಆವರಿಸಿ ದಲ್ಲಿ ಅದರ ಹಿಡಿತದಿಂದ ಹೊರಬರುವುದು ಕಷ್ಟ.

          ಬಾಲ್ಯದಲ್ಲಿ ತಾನು ಇಷ್ಟಪಡದ ವಿಚಾರವನ್ನೇ ಅವನ ಮಗಳು ಬಹಳ ಇಷ್ಟಪಟ್ಟಾಗ ಕಥಾನಾಯಕನಿಗೆ ಅದು ಅಪ್ಯಾಯಮಾನವಾಗುತ್ತದೆ. ಆದರೆ ಚಿಕ್ಕವನಿರುವಾಗ ಆ ವಿಚಾರ ಅವನಮ್ಮ ಇಷ್ಟಪಟ್ಟಾಗ ಅವಳು ಅದರಿಂದ ವಿಮುಖಳಾಗುವಷ್ಟು ಹಠ ಹಿಡಿದು ಅವಳು ಅದರ ಪ್ರತಿ ಆಕರ್ಷಿತಳಾಗದಂತೆ  ಹಠ ಹೂಡಿರುತ್ತಾನೆ. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿರುವುದು ಪ್ರತಿಯೊಬ್ಬನ ಸ್ವಾರ್ಥ.

” ಮೌನ ಮನದ ವೀಣೆಯ ಝೇಂಕಾರ,

ಕೇಳದಷ್ಟು ಹೃನ್ಮನಗಳಿಲ್ಲಿ ದೂರ,

ಬದುಕೋ…  ಸ್ವಾರ್ಥ,  ಹಠ,  ಛಲಗಳೇ ತುಂಬಿ ಭೋರ್ಗರೆಯೋ ಸಾಗರ,

ಆಗಿರಲು ಹೇಗಾದೀತು ಪ್ರೀತಿ, ಪ್ರೇಮ,  ಮಮತೆಯ ತಂಗಾಳಿಯ ಸಂಚಾರ??? “.

#. ಹಿಂದಿನ ಬೆಂಚಿನ ಹುಡುಗಿಯರು :-

          ಹದಿ ಹರೆಯ ಕಾಲಿಡುವ ಹೊತ್ತಿನ ಬದುಕಿನ ಅನಾವರಣ. ಹೆಣ್ಣು ಹೂವಂತೆ, ಅರಳುವ ಪ್ರಾಯದ ತವಕ, ತಲ್ಲಣ, ಅರೆ ಬಲಿತ ಮನಸ್ಸುಗಳು ಹೇಗಿರುತ್ತವೆ ಅನ್ನುವುದರ ಕುರಿತಾದ ವಿವರ. ಮುಗ್ಧತೆಯ ಪರಮಾವಧಿಯ ವಯಸ್ಸು .ಒಳಿತು ಕೆಡುಕಿನ ನಡುವಿನ ವ್ಯತ್ಯಾಸ ಅರಿಯದ ಪ್ರಾಯ. ಶಾಲೆಯಂತಹ ದೇಗುಲದಲ್ಲಿ ಎಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇರುತ್ತಾರೆ ಹಾಗೂ ಗೋಮುಖ ವ್ಯಾಘ್ರ ದಂತಹ ಮುಖವಾಡಧಾರಿ ಅಧ್ಯಾಪಕರುಗಳು ಇರುತ್ತಾರೆ ಅನ್ನುವುದನ್ನು ಬಯಲಾಗಿಸುವ ಕಥೆ. ಗುರುವೆಂದರೆ ದೇವರ ಸಮಾನ. ಆದರೆ ಈ ಗೌರವವನ್ನು ಉಳಿಸಿಕೊಳ್ಳುವಂತಹ ಯೋಗ್ಯತೆ ಹಲವರಲ್ಲಿ ಇರುವುದಿಲ್ಲ. ಏನೂ ಅರಿಯದ ಮುಗ್ಧ ಹೂವುಗಳು ಅರಳುವ ಮುನ್ನವೇ ಕಮರುವಂತೆ ಮಾಡುವ ರಾಕ್ಷಸರು ಬಹಳ ಮಂದಿ ಇರುತ್ತಾರೆ ಗುರುವಿನ ರೂಪದಲ್ಲಿ. ಇವತ್ತಿನ ದಿನಗಳಲ್ಲಿ ಇಂತಹ ಸಮಸ್ಯೆ ಬಹಳ ಹೆಚ್ಚಾಗಿದೆ. “ಹಿಂದಿನ ಬೆಂಚಿನ ಹುಡುಗಿಯರು” ಕಥೆಯ ಮೂಲಕ ಇಲ್ಲಿ ಲೇಖಕಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಊರುಗಳ ಶಾಲೆಗಳಲ್ಲಿ ಕಾಣ ಸಿಗುವಂತಹ ಒಂದು ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ವಿದ್ಯೆ ಹೇಳಿಕೊಡುವ ಗುರುವೇ ಕಾಮ ಪಿಪಾಸುವಾದರೆ ಏನು ಮಾಡಬಹುದು….?

        ಹದಿಹರೆಯದ ವಯಸ್ಸೇ ಹಾಗೆ ಎಲ್ಲದರಲ್ಲೂ ಕುತೂಹಲ, ಏನೂ ಅರಿಯದ ಪ್ರಾಯ ಈ ವಯಸ್ಸಲ್ಲಿ ಬದುಕು ಹಳಿ ತಪ್ಪಿದರೆ ಮುಂದೆ ಬಾಳು ನರಕ ದೃಶ್ಯವೇ ಸರಿ.

#. ಎಲ್ಡು ಕೊಡ ನೀರು :-

            ಕೆಲವು ಬಡವರ ಬೀದಿಗಳಲ್ಲಿ ಕುಡಿಯುವ ನೀರಿನ ಬವಣೆ ಎಷ್ಟಿದೆ ಎನ್ನುವ ಚಿತ್ರಣವನ್ನು ಓದುಗರ ಕಣ್ಣ ಮುಂದೆ ಬಿಚ್ಚಿಡುವ ಕಥೆ. ಎರಡು ಕೊಡ ನೀರು ಒಂದು ಜೀವವನ್ನು ಬಲಿ ಪಡೆದ ಘಟನೆ ಹೃದಯವಿದ್ರಾವಕ . ಇಲ್ಲಿ ಜನರ ಅನಾಗರಿಕ ವರ್ತನೆ ಅಷ್ಟೇ ಅಲ್ಲ, ಕೆಳವರ್ಗದವರ ಮೇಲೆ ಮೇಲ್ವರ್ಗದ ಜನ ನಡೆಸುವ ದೌರ್ಜನ್ಯ, ಶೋಷಣೆ, ದರ್ಪ ಎಷ್ಟೆಂಬುದು ಅನಾವರಣಗೊಳ್ಳುತ್ತ ಸಾಗುತ್ತದೆ. ಉಳ್ಳವರು ಇಲ್ಲದವರನ್ನು ಕಾಡುವ ಪರಿ ಕಣ್ಣಿಗೆ ಕಟ್ಟುತ್ತದೆ. ಎರಡು ಕೊಡ ನೀರು ಪಡೆದಿದ್ದನ್ನು ಮಹಾಪರಾಧ ಆಗಿಸಿ ಇಡೀ ಊರನ್ನು ಸ್ಮಶಾನ ವಾಗಿಸಿದ ಜನರ ಅವಿವೇಕ ಕಥೆಯಲ್ಲಿ ತೆರೆದುಕೊಳ್ಳುತ್ತ ಸಾಗುತ್ತದೆ.

        ಒಂದು ಸಣ್ಣ ವಿಷಯ ಹೇಗೆ ಇಡೀ ಊರಿಗೆ  ಊರನ್ನೇ ಭಸ್ಮವಾಗಿಸಬಲ್ಲದು ಅನ್ನುವ ವಾಸ್ತವವನ್ನು ಶೈಲಜಾ ಅವರು ತಮ್ಮ ಕಥೆಯ ಮೂಲಕ ಓದುಗರಿಗೆ ಮನದಟ್ಟಾಗುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಈ ಜಗತ್ತಿನ ಇವತ್ತಿನ ಸತ್ಯ ಕೂಡ.

#. ತುಮುಲ :-

            “ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ”- ಅನ್ನುವ ದಾಸರ ಪದವನ್ನು ಜ್ಞಾಪಿಸುವ ಕಥೆ. ಈ ಜಗದಲ್ಲಿ ಪ್ರತಿಯೊಬ್ಬನೂ ಸ್ವಾರ್ಥಿಯೆ. ಎಲ್ಲರೂ ಅವರವರದೇ ಆದ ಮನೆ ಸಂಸಾರವನ್ನು ಕಟ್ಟಿಕೊಂಡಿರುತ್ತಾರೆ. ಇಲ್ಲಿ ಯಾರೂ ಯಾರ ಜವಾಬ್ದಾರಿಯನ್ನು ಹೊರಲು ತಯಾರಿರುವುದಿಲ್ಲ. ತನ್ನ ಕೆಲಸವಾಗ ಬೇಕಾದಲ್ಲಿ ಮಾತ್ರ ಇನ್ನೊಬ್ಬರ ನೆನಪಾಗುವುದು ಇಲ್ಲಿ. ಅದಾದ ಮೇಲೆ ನೀನ್ಯಾರೋ ನಾನ್ಯಾರೋ. ಬದುಕೆಂಬ ಸಂತೆಯಲ್ಲಿ ಪ್ರೀತಿ, ವಿಶ್ವಾಸ, ಅಂತಃ ಕರಣಗಳೆಲ್ಲ ಸೀಮಿತ ಪರಿಧಿಯೊಳಗಷ್ಟೇ ಇದೆ. ಆ ರೇಖೆಯನ್ನು ದಾಟಿ ಇವೆಲ್ಲೂ ಕಾಣಸಿಗವು. ಅತಿಯಾದ ನಿರೀಕ್ಷೆಯನ್ನು ಇಲ್ಲಿ ಯಾರ ಮೇಲೂ ಇಡುವಂತಿಲ್ಲ. ಈ ಎಲ್ಲಾ ಸಂದೇಶಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಕಥೆ “ತುಮುಲ “.

#. ಅಮ್ಮ :-

         ಅತ್ತೆಯೂ ಅಮ್ಮನಾಗಿ ಸೊಸೆಯನ್ನು ಮಗಳಂತೆ ಕಾಣಬಲ್ಲಳು ಅನ್ನುವುದನ್ನು ಪರಿಚಯಿಸುವ ಮನ ಮಿಡಿಯುವಂತೆ ಕಥೆ. ಅತ್ತೆ ಸೊಸೆಯ ಸಂಬಂಧವೆಂದರೆ ಎಣ್ಣೆ ಸಿಗೇಕಾಯಿ ಅನ್ನುವ ಭಾವ ಎಲ್ಲರಲ್ಲೂ. ಹೊಂದಿಕೊಂಡು ಹೋಗುವುದಿಲ್ಲ ಇಬ್ಬರು ಅನ್ನುವ ಅಭಿಪ್ರಾಯ. ಆದರೆ ಇದು ಸುಳ್ಳು. ಹೊಂದಾಣಿಕೆಯ ಸೂತ್ರ ಯಾವ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರುತ್ತದೊ ಅಂತಹವರು ಎಲ್ಲ ಕಡೆ ಅನುಸರಿಸಿಕೊಂಡು ಸಂಬಂಧಗಳನ್ನು ಬೆಸೆಯುತ್ತಾ ಸಾಗುತ್ತಾರೆ. ಅತ್ತೆಯಾಗುವ ಮೊದಲು ಅವಳು ಒಬ್ಬ ಸೊಸೆಯಾಗಿರುತ್ತಾಳೆ. ಸಾಕಷ್ಟು ಆಗು ಹೋಗುಗಳನ್ನು ಕಂಡಿರುತ್ತಾಳೆ. ಹಾಗಾಗಿ ತನಗೆ ಸೊಸೆಯಾಗಿ ಬಂದವಳನ್ನು ಅವಳು ಹೇಗೆ ಮಗಳಂತೆ ಕಾಣದೇ ಇರಲು ಸಾಧ್ಯ ?. ಎಲ್ಲ ಘಟನೆಗಳಿಗೂ ಆಯಾಯ ಸಂದರ್ಭವೇ ಕಾರಣ ಹೊರತು ಮನುಷ್ಯರಲ್ಲ. ಸೊಸೆಯಾದವಳು ಅತ್ತೆಯನ್ನು ಅಮ್ಮನಂತೆ ಪ್ರೀತಿಸಿದಾಗ ಅತ್ತೆ ಅವಳನ್ನು ಮಗಳಂತೆ ಕಾಣುತ್ತಾಳೆ. ಭಿನ್ನಾಭಿಪ್ರಾಯಗಳು ಮೂಡದ ಮನಗಳಿಲ್ಲ, ಮನೆಗಳಿಲ್ಲ. ಆದರೆ ಈ ಭಿನ್ನಾಭಿಪ್ರಾಯವನ್ನು ಪರಿಹರಿಸುವಲ್ಲಿ ಹೊಂದಾಣಿಕೆಯೇ ಮೂಲ ಸೂತ್ರ. ಪ್ರೀತಿ ವಾತ್ಸಲ್ಯ ಎಂತಹ ಮನಸ್ಸುಗಳನ್ನು ಬದಲಾಯಿಸಬಲ್ಲುದು ಅನ್ನುವುದೇ ಸತ್ಯ.

#. ವಿಪರ್ಯಾಸ :-

          ಸ್ವಾರ್ಥ ಮನುಷ್ಯನನ್ನು ಅವನ ಮನುಷ್ಯತ್ವವನ್ನು ಯಾವ ಮಟ್ಟಿಗೆ ಬದಲಾಯಿಸುತ್ತದೆ ಅನ್ನುವ ಪ್ರಶ್ನೆಯನ್ನು ಮನಸ್ಸಲ್ಲಿ ಎಬ್ಬಿಸಿದ ಒಂದು ಕಥೆ ಇದು. ತನ್ನ  ಬಳಿ ಇಲ್ಲದೇ ಇದ್ದಾಗ ಯಾವ ವಿಚಾರವೇ ಇರಲಿ ಅದು ಬೇರೆಡೆಯಿಂದ ದೊರೆತಾಗ ದೊಡ್ಡ ನಿಧಿ ದೊರೆತ ಅನುಭವ. ಆದರೆ ಅದುವೇ ವಸ್ತು, ವ್ಯಕ್ತಿ ಅಥವಾ ಯಾವುದೇ ವಿಚಾರ ಇರಬಹುದು ತನ್ನ ಸ್ವಂತದ್ದು ದೊರೆತಾಗ ಈ ಸಿಕ್ಕಿದ್ದಕ್ಕೆ ಯಾವ ಬೆಲೆಯೂ ಇಲ್ಲ. ಮಾನವ ಯಾಕೆ ಹೀಗೆ ಸಂಕುಚಿತ ಗುಣ ಸ್ವಾರ್ಥಪರ ನಾಗುತ್ತಾನೆ ಎಂದು ಕಾಡುವ ಪ್ರಶ್ನೆ ….

#. ದಾರಿ ಯಾವುದಯ್ಯ :-

           ಕಣ್ಣಿಗಂಟಿದ ಭ್ರಮೆಯ ಪರದೆ ಸರಿದಾಗ ವಾಸ್ತವದ ದರ್ಶನ. ಈ ವಿಶಾಲ ಜಗತ್ತಲ್ಲಿ ಯಾರೂ ಒಬ್ಬಂಟಿಯಲ್ಲ. ಎಲ್ಲರಿಗೂ ಒಂದಲ್ಲ ಒಂದು ಆಸರೆ ದೊರೆತೇ ದೊರೆಯುತ್ತದೆ. ಎಲ್ಲವೂ ಕಾಲದ ಮೇಲೆ ಅವಲಂಬಿತ. ಇಲ್ಲಿ ಎಲ್ಲವೂ ನಾನೇ ಎಲ್ಲವೂ ನನ್ನಿಂದಲೇ ಅನ್ನುವುದು ಸುಳ್ಳು.

#. ಚಂದೂ ಮಾಮ:-

           ಎಲ್ಲರನ್ನು ಅತಿಯಾಗಿ ಪ್ರೀತಿಸಿ ನಂಬುವ ವ್ಯಕ್ತಿ. ಅಷ್ಟೇ ಪ್ರೀತಿ ಮರಳಿ ಸಿಗಬೇಕೆಂಬ ನಿರೀಕ್ಷೆ. ಈ ನಿರೀಕ್ಷೆಯೇ ಅವನನ್ನು ಸಾವಿನ ಮನೆಯ ಬಾಗಿಲನ್ನು ತಟ್ಟುವಂತೆ ಮಾಡಿದ್ದು ದುರಂತ. ಇವತ್ತಿದ್ದ ವ್ಯಕ್ತಿ ನಾಳೆಯೂ ಇರುತ್ತಾನೆ ಎಂಬ ನಂಬಿಕೆ ಇಲ್ಲ, ನಾಳೆ ಅಲ್ಲ ಮತ್ತೊಂದು ಕ್ಷಣವೇ ಏನು ಬೇಕಾದರೂ ಆಗಬಹುದು. ಹಾಗಾಗಿ ಮಾಡಬೇಕು ಮಾತಾಡಬೇಕು ಅನ್ನಿಸಿದ್ದನ್ನು ಕೂಡಲೇ ನಮ್ಮ ಹಮ್ಮನ್ನು ತೊರೆದು ತಮ್ಮ ಆಪ್ತರೊಡನೆ ಆಡಿ ಮುಗಿಸಬೇಕು. ಇನ್ನೊಂದು ಕ್ಷಣ ಇಲ್ಲಿ ಏನಾಗುವುದೆಂದು ಯಾರಿಗೂ ಗೊತ್ತಿಲ್ಲ. ಕೊನೆಯಲ್ಲಿ ಉಳಿಯುವುದು ಪಶ್ಚಾತ್ತಾಪ ಮಾತ್ರ.

#. ಆಳ :-

           ಕಥಾ ಸಂಕಲನದ ಕೊನೆಯ ಕಥೆ. ಬಹಳ ಹಿಂದಿನಿಂದಲೂ ತನ್ನನ್ನು ತಾನು ಕಾಪಾಡಿಕೊಳ್ಳುವಲ್ಲಿ ಹೆಣ್ಣಾದವಳ ಹೋರಾಟ ಬಹಳ ದೊಡ್ಡದು. ಅವಳು ಈ ನಿಟ್ಟಿನಲ್ಲಿ ಅನುಭವಿಸುವ ಯಾತನೆ, ನೋವು, ಕಷ್ಟ, ಅವಮಾನಗಳು, ಹಿಂಸೆ ಲೆಕ್ಕವಿಲ್ಲದಷ್ಟು. ಹಿಂದಿನಿಂದಲೂ ಹೆಣ್ಣು ಒಂದಲ್ಲ ಒಂದು ವಿಧದಲ್ಲಿ ಶೋಷಣೆಗೆ ಒಳಗಾಗುತ್ತಾ ಬಂದಿದ್ದಾಳೆ. ಗಂಡಿನ ದೃಷ್ಟಿಯಲ್ಲಿ ಹೆಣ್ಣೆಂದರೆ ಭೋಗದ ವಸ್ತು. ಹೂವಿನಂತಹ ಅವಳನ್ನು ಹೆಜ್ಜೆ ಹೆಜ್ಜೆಗೂ ಕ್ರೂರಿಯಾಗಿ ಹೊಸಕಿ ಹಾಕುವ ಪ್ರಯತ್ನಗಳೇ ಹಲವು ಕಡೆ. ಇದರಿಂದ ತಪ್ಪಿಸಿಕೊಳ್ಳಲು ಅವಳು ನಡೆಸುವ ಹೋರಾಟ ಹೆಣಗಾಟಗಳು ಅವೆಷ್ಟೋ . ಅಪ್ಪ, ಅಣ್ಣ ತಮ್ಮ ಅನ್ನಿಸಿಕೊಂಡವರು ಕೂಡ ತಮ್ಮ ಮಗಳು, ತಂಗಿ, ಅಕ್ಕನನ್ನು ಕಾಮದ  ತೃಷೆಗೆ ಬಲಿ ಕೊಡುವಂತಹ  ಅವೆಷ್ಟೋ ಜೀವಂತ ಉದಾಹರಣೆಗಳು ಕಣ್ಣ ಮುಂದೆ ಬರುತ್ತವೆ. ಇಂತಹುದೇ ಕ್ರೂರ ಮೃಗಗಳ ಕೈಯಿಂದ ತಪ್ಪಿಸಿಕೊಂಡು ಬದುಕಲು ಹಾತೊರೆಯುವ ಒಂದು ಹೆಣ್ಣಿನ ಕಥೆ “ಆಳ “.

                ಶೈಲಜಾ ಅವರು ಎಲ್ಲಿಯೂ ತಮ್ಮ ಕಥೆಗಳಲ್ಲಿ ಆ ಘಟನೆಗಳಿಗೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ, ತೀರ್ಪನ್ನು ನೀಡಿಲ್ಲ. ಎಲ್ಲವನ್ನೂ ಓದುಗರ ಅರಿವಿಗೆ ಬಿಟ್ಟಿದ್ದಾರೆ. ಆದರೆ ವಾಸ್ತವಗಳನ್ನು ಬಹಳ ಚೆನ್ನಾಗಿ ತೆರೆದಿಟ್ಟಿದ್ದಾರೆ. ನಮ್ಮ ಸುತ್ತಮುತ್ತಲಿನ ಆಗು ಹೋಗುಗಳನ್ನು ಒಳಗೊಂಡಿರುವಂತಹ ಸುಂದರ ಕಥಾಸಂಕಲನ- “ಹಿಂದಿನ ಬೆಂಚಿನ ಹುಡುಗಿಯರು”.  ಇಲ್ಲಿನ ಪ್ರತಿಯೊಂದು ಬರಹವೂ, ಕಥೆಯೂ ಬಹಳ ಸರಳವಾಗಿದೆ ಹಾಗೂ ಓದುಗರ ಮನಸ್ಸನ್ನು ತಟ್ಟುವಂತಿದೆ.

**********

ನಯನ ಬಜಕೂಡ್ಲು

       

One thought on “ಪುಸ್ತಕ ಸಂಗಾತಿ

  1. ತುಂಬಾ ಸೊಗಸಾಗಿದೆ ವಿಮರ್ಶೆ ಮೂಡಿಬಂದಿದೆ
    ಅಭಿನಂದನೆಗಳು

Leave a Reply

Back To Top