ವಿಮಲಾರುಣ ಪಡ್ಡoಬೈಲ್ ಅಹಂ ಬಾಯಿ ತೆರೆದಾಗ

ಸಂಗಾತಿ ವಾರ್ಷಿಕ ವಿಶೇಷಾಂಕ

ವಿಮಲಾರುಣ ಪಡ್ಡoಬೈಲ್

ಅಹಂ ಬಾಯಿ ತೆರೆದಾಗ

ಮನುಜನ ಮನ ನಿಷ್ಕಲ್ಮಶ ಪ್ರೀತಿಯಿಂದ ಸದಾ ಒಳಿತನ್ನೇ ಹಪಹಪಿಸುವ ಇತರರನ್ನು ಗೌರವಿಸುವ ಗೂಡಾದರೆ ಆ ಗೂಡಲ್ಲಿ ಬೆಳಕೆಂದು ನಂದುವುದಿಲ್ಲ. ಸಾವಿನಲ್ಲು ಅವರಿಟ್ಟ ಪ್ರೀತಿ ಉತ್ತಮ ನಡೆ ಪ್ರಜ್ವಲಿಸುತ್ತದೆ. ಸಾವಿನಲ್ಲೂ ಅಮರತ್ವ ಕಾಣುವ ಮಹನೀಯರು ನಮ್ಮ ಮುಂದಿದ್ದಾರೆ ಅವರ ನಿದರ್ಶನಗಳನ್ನು ಆಚಾರ ವಿಚಾರಗಳನ್ನು ಕೊಂಡಾಡುತ್ತೇವೆ  ಹೊರತು  ಅಳವಡಿಸಿಕೊಳ್ಳುವ ಇರಾದೆ ನಮ್ಮಲ್ಲಿ ಬಹಳ ಕ್ಷೀಣವಾಗುತ್ತಿದೆ. ಯಾಕೆ ಹೀಗೆ..? ಎಂಬ ಪ್ರಶ್ನೆ ಹಲವು ನಿಷ್ಠಾವಂತ ಮನಸುಗಳನ್ನು ತಲ್ಲಣಗೊಳಿಸುತ್ತಿದೆ. ನಮ್ಮ ಸಾಮಾಜಿಕ, ರಾಜಕೀಯ, ಆರ್ಥಿಕ ಸುಧಾರಣೆಯ ಕ್ರಮಗಳೆಲ್ಲ ಹೊಟ್ಟೆ, ಬಟ್ಟೆ, ವಸತಿಯೇ ಮೊದಲಾದ ದೈಹಿಕ ಜೈವಿಕ ಅಸ್ತಿತ್ವಕ್ಕಿರುವ ತಡೆ ತೊಂದರೆಗಳನ್ನು ದೂರ ಮಾಡುವುದಕ್ಕಾಗಿ ನಡೆದಿವೆ. ಆದರೆ ಮನುಷ್ಯರು ‘ಅಹಂ’ ನ  ಅಸ್ತಿತ್ವಕ್ಕಾಗಿ  ನಡೆಸುವ ಹೋರಾಟದ ಭಾರವನ್ನು ಕಡಿಮೆ ಮಾಡುವ ಕಲೆಯನ್ನು ಇನ್ನೂ ಕಲಿತಿಲ್ಲ.
             ‘ಅಹಂ’ ಬಾಯಿ ತೆರೆದಾಗ ಇದರ ದುಷ್ಪರಿಣಾಮದ ಅರಿವು ನಮಗಿದೆ ಆದರೂ ‘ನಾನು’  ‘ನನ್ನದೆ ‘ ನನ್ನ ನಿರ್ಧಾರವೇ ಮೇಲುಗೈ ಆಗಬೇಕೆಂಬ ಹಂಬಲದಿಂದ ಇನ್ನೊಂದು ಜೀವಕ್ಕೆ ಆಗುವ ನೋವನ್ನು ಮರೆಯುತ್ತಿದ್ದೇವೆ, ಅದರೊಂದಿಗೆ ಮಾನವೀಯತೆಯು ದೂರವಾಗುತ್ತಿದೆ. ಸರಿ-ತಪ್ಪು ಇದರ ನಡುವಿನ ವ್ಯತ್ಯಾಸದ ಅರಿವಿಲ್ಲದಂತಾಗಿದೆ. ಯಾಕೆ ಹೀಗೆ..? ಈ ಪ್ರಶ್ನೆ ಗೆ ಹಲವು ಉತ್ತರಗಳು ಸಾಲು ಸಾಲಾಗಿ ಸಿಗುತ್ತವೆ. ಅವರವರ ಭಾವಕ್ಕೆ ತಕ್ಕಂತೆ ಉತ್ತರಗಳು ನಿಲುಕುತ್ತವೆ. ಹಣ, ಅಧಿಕಾರ, ರಾಜಕೀಯ ಇಷ್ಟೇ ಅಲ್ಲ ಮಧ್ಯವರ್ತಿಗಳ ಪ್ರಭಾವದಿಂದ ಮನುಜನ ಮನದಲ್ಲಿ ‘ಅಹಂ’ನ ಕರಿನೆರಳು ಆವರಿಸುತ್ತದೆ. ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವ  ‘ ಅಹಂ’, ವೈಯಕ್ತಿಕ ಆಶೋತ್ತರಗಳ ನೆರವೇರಿಕೆಗೆ ತಪ್ಪನ್ನು ಸರಿಯೆಂದು ಪ್ರತಿಭಟಿಸಿ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುತ್ತಾರೆ. ಸುಜನರ ಮೇಲೆ ‘ಅಹಂ’ ರೋಷದ ಹೆಡೆಎತ್ತಿ ದುಷ್ಟ ಮಾತಿನ ಪುತ್ಕಾರಗೈಯುತ್ತದೆ. ಇದು ನಿಜಕ್ಕೂ ಖೇದಕರ. ಯಾವುದೇ ವ್ಯಕ್ತಿಯು ‘ಅಹಂ’ ನ ಪ್ರವಾಹದಲ್ಲಿ ತೇಲುತ್ತಾ ತತ್ಸಂಬಂಧವಾದ ಸಮಸ್ಯೆಗಳನ್ನು ಬಿಡಿಸಲು ಸಾಧ್ಯವಿಲ್ಲ. ಇದರ ಆದಿ-ಅಂತ್ಯಗಳನ್ನು ಪರಿಶೀಲಿಸಲು ಪ್ರಜ್ಞೆಯ ಏಣಿ  ಮೆಟ್ಟಿಲಿನ ತುದಿಯನ್ನು ಏರಬೇಕು. ಸಮಸ್ಯೆಯು ಪೂರ್ಣವಾಗಿ ಪರಿಹಾರವಾಗದಿದ್ದರೂ ಅದರ ತೀರ್ವತೆ, ವಿಷಮತೆ ಹಾನಿಕಾರಕ ಪ್ರಭಾವ ಬಹುಮಟ್ಟಿಗೆ ಕಡಿಮೆಯಾಗಬಹುದು.
      ‘ಅಹಂ’ ಪ್ರತಿಯೊಬ್ಬ ವ್ಯಕ್ತಿಗೂ ಮೀಸಲಾಗಿರುತ್ತದೆ. ಆದರೆ ಇದರಿಂದ ಮುಕ್ತರಾಗದ ಹೊರತು ನೆಮ್ಮದಿಯ ಕೊರತೆಯ ಹೊರೆ ಕಡಿಮೆಯಾಗುವುದಿಲ್ಲ. ಸಿರಿವಂತನೆಂದು ಮೆರೆಯುವವನ ಎದುರು ಇನ್ನೂ ಮಿಗಿಲಾದ ಸಿರಿವಂತರಿರುತ್ತಾರೆ. ಹಾಗೆಯೇ ತತ್ವಜ್ಞಾನಿ ಎಂದು ಜಂಭಪಡುವವನೆದರು ವಾದದ ರಣ ರಚಿಸಿ, ರಂಗಕ್ಕಿಳಿಯಲು ಸ್ಪರ್ಧೆಗಾರನು ಸಜ್ಜಾಗಿಯೇ ಇರುತ್ತಾನೆ. ಆದ್ದರಿಂದ ನಾನೇ ಪಂಡಿತ, ಸಿರಿವಂತ, ಬುದ್ಧಿವಂತ,  ಜ್ಞಾನಿ ಎಂಬ ಅಹಂ ಯಾರಿಗೂ ಬೇಡ.        

       ನಮ್ಮ ಮನಕ್ಕೆ ನಾಟುವಂತೆ ಪ್ರೀತಿಯತ್ತ ಹೊರಳುವ “ತಾಯಿ ತಾನು ಹೆತ್ತ ಮಗುವಿಗೆ ಸೌಮ್ಯ ತನದಿಂದ ಹಾಲುಣ್ಣಿಸುವ ಪರಿ, ಮಗು ಒದ್ದರೂ ಕಚ್ಚಿದರು ಅವಳಲ್ಲಿ ಆ ಪ್ರೀತಿ ನಂದುವುದಿಲ್ಲ”. ಅವಳಲೇನಾದರು ‘ಅಹಂ ‘ ಎದುರಾದರೆ ಮಗುವಿನ ಪರಿಸ್ಥಿತಿ ಏನಾಗಬಹುದು ಊಹಿಸಿ! ಅಂತಹ ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸುವವರಿದ್ದಾರೆ. ತಾಯಿ ಮಗುವಿನ ಸಂಬಂಧ ಹೇಗೆಂದು ಎಲ್ಲಾ ತಾಯಂದಿರಿಗೂ ಅರಿವಿದೆ.  ಈ ಮಧುರವಾದ ಸಂಬಂಧಕ್ಕೆ ಮಕ್ಕಳು ಮುಂದೆ ತಂದೆ ತಾಯಿಯವರನ್ನು ಸಲಹುವಾಗ  ‘ಅಹಂ’ ಅದಕ್ಕೆ ಕಡಿವಾಣ ಹಾಕಿ ಪ್ರೀತಿಯಿಂದ ಬಾಳ್ವೆ ನಡೆಸಿದರೆ  ಅವರು ನೆಮ್ಮದಿಯಿಂದ ಬದುಕುತ್ತಾರೆ. ಹೊರತಾಗಿ ‘ಅಹಂ’ ನ ಕರಿಛಾಯೆ ಅವರಲ್ಲಿ ಚೆಲ್ಲಿದರೆ ತಮ್ಮ ನತದೃಷ್ಟಕೆ ಮರಗುತ್ತಾರೆ. ‘ಅಹಂ’ನ್ನು ಅಳಿಸಿ ಪ್ರೀತಿ ಆದರ್ಶಗಳನ್ನು ಅರಳಿಸುವ ಪ್ರಕ್ರಿಯೆ ನಮ್ಮದಾಗಿರಬೇಕು. ಸಂಘರ್ಷಕೆ ಎಡೆಮಾಡಿ ಕೊಡದೆ ಸಮಾಧಾನ ಚಿತ್ತದಿಂದ ಸಮಸ್ಯೆ ಪರಿಹರಿಸುವ  ಚಾಣಕ್ಷತನ ಇದ್ದರೆ ಯಾವ ಕಾರ್ಯಸಾಧನೆಗೂ ‘ಅಹಂ ‘ ಅಡ್ಡಿ ಬರುವುದಿಲ್ಲ ನೋವು ಹತಾಶೆಯಿಂದಲೂ ಪಾರಾಗಬಹುದು.
‘ ಅಹಂ ‘ ಸಾಂಸಾರಿಕವಾಗಿ ಸೀಮಿತವಾಗಿರದೆ ಬಡವ ಬಲ್ಲಿದ ಸಹೋದ್ಯೋಗಿಗಳ ನಡುವೆಯೂ ತನ್ನ ಗರಿ ಬಿಚ್ಚುವ ಪ್ರಯತ್ನ ಮಾಡುತ್ತದೆ. ಆದರೆ ಮನುಜ ಮನುಜರ ನಡುವೆ ಉತ್ತಮ ಬಾಂಧವ್ಯ ಇದ್ದರೆ ಅಹಂ ಪ್ರಭುತ್ವವನ್ನು ಸಾಧಿಸುವುದಿಲ್ಲ. ಒಂದು ಕ್ಷಣ ಚಿಂತಿಸಿ ನಮ್ಮ ಅವಶ್ಯಕತೆಗಳನ್ನು ಪೂರೈಸುವ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ನೋಡಿದರೆ ನಾವೇನು ಅಲ್ಲ ತೃಣ ಮಾತ್ರಕ್ಕೆ ಸಮಾನ. ಸುತ್ತಲಿನ ಸೊಬಗಿಗೆ ಚ್ಯುತಿ ಬಾರದಂತೆ ಕೌಟುಂಬಿಕ ಜೀವನದಲ್ಲಿ ಮತ್ತು ವ್ಯಕ್ತಿ ವ್ಯಕ್ತಿಗಳೊಳಗಿನ ಮಧುರ ಬಾಂಧವ್ಯ ಗಟ್ಟಿಯಾಗುವುದಕ್ಕಾಗಿ ಸಾತ್ವಿಕ ಚಿಂತನೆಗಳನ್ನು ಮನದಲ್ಲಿ ಪೋಷಿಸುತ್ತಾ ದ್ವೇಷ ಅಸೂಯೆಗಳನ್ನು ಯಾರಲ್ಲೂ ಹೇರದೆ ಉತ್ತಮ ನಿರ್ಧಾರಗಳಿಗೆ ಭುಜ ಕೊಟ್ಟರೆ  ‘ಅಹಂ ‘  ಕಳಚಿ ಉರುಳುವುದರಲ್ಲಿ ಸಂದೇಹವಿಲ್ಲ..


  ವಿಮಲಾರುಣ ಪಡ್ಡoಬೈಲ್

Leave a Reply

Back To Top