ವರಕವಿ ಡಾ, ದ.ರಾ. ಬೇಂದ್ರೆಯವರ ಪತ್ನಿ ಶ್ರೀಮತಿ ಲಕ್ಶ್ಮೀಬಾಯಿ ಬೇಂದ್ರೆ ಕುರಿತು ಪುಟ್ಟ ಲೇಖನ…ರಾಜೇಶ್ವರಿ ಎಸ್. ಹೆಗಡೆ

ಸಂಗಾತಿ ವಾರ್ಷಿಕ ವಿಶೇಷಾಂಕ

ವರಕವಿ ಡಾ, ದ.ರಾ. ಬೇಂದ್ರೆಯವರ ಪತ್ನಿ

ಶ್ರೀಮತಿ ಲಕ್ಶ್ಮೀಬಾಯಿ ಬೇಂದ್ರೆ ಕುರಿತು ಪುಟ್ಟ ಲೇಖನ…

ರಾಜೇಶ್ವರಿ ಎಸ್. ಹೆಗಡೆ

:   ಪ್ರತಿಯೊಬ್ಬ ಪುರುಷನ ಏಳ್ಗೆಯ ಹಿಂದೆ ಒಬ್ಬ ಮಹಿಳೆಯ ಶಕ್ತಿ ಇರುವುದು ಎಂಬ ಹೇಳಿಕೆಯು ಸತ್ಯಕ್ಕೆ ಕನ್ನಡಿಯನ್ನು ಹಿಡಿದಂತೆ ಇರುತ್ತದೆ.ಇದಕ್ಕೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ವರಕವಿ ದ.ರಾ. ಬೇಂದ್ರೆಯವರ ಹಿಂದಿರುವ ಶಕ್ತಿ ಹೊರತಾಗಿಲ್ಲ.

     ವರಕವಿ ಡಾ. ದ.ರಾ. ಬೇಂದ್ರೆಯವರು ಕನ್ನಡದ ಕಂಪನ್ನು ದೇಶ ವಿದೇಶಗಳವರೆಗೂ ಘಮ ಘಮಿಸುವಂತೆ ಸೂಸಿದ ಮಹಾ ಕವಿಗಳು,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಎಂಬುದು ಎಷ್ಟು ಸತ್ಯವೋ,ಅವರ ಈ ಬೆಳವಣಿಗೆಗಳ ಹಿಂದಿನ ಶಕ್ತಿಯೂ ಧರ್ಮಪತ್ನಿ ಲಕ್ಷ್ಮೀಬಾಯಿ ಬೇಂದ್ರೆ ಎಂಬುದು ಅಷ್ಟೇ ಸತ್ಯವಾದುದು.

    ನಾನೊಬ್ಬ ಪುಟ್ಟ ಹವ್ಯಾಸಿ ಬರಹಗಾರ್ತಿ ಇಷ್ಟೊಂದು ದೊಡ್ಡ ಮೇರು ಪರ್ವತ ಕವಿಗಳ ಬಗ್ಗೆ ಬರೆಯುವ ಅರ್ಹತೆ ನನಗೆ ಇದೆಯೋ ಇಲ್ಲವೋ ಎಂಬುದು ತಿಳಿಯದು. ಆದಾಗ್ಯೂ ದೂರದ ಊರಿನ ನನ್ನ ಸ್ನೇಹಿತೆಯೊಬ್ಬರು ಬರೆಯಲು ಅವಕಾಶ ಕೊಟ್ಟಿರುವುದು ನನ್ನ ಸುದೈವ ಎಂದು ಭಾವಿಸಿ ನನ್ನ ಅನಿಸಿಕೆಯನ್ನು,ಕುಟುಂಬ ಸದಸ್ಯರಿಂದ ಪಡೆದ ಮಾಹಿತಿಗಳ ಸಂಗ್ರಹದಿಂದ ವರಕವಿ ಡಾ. ದ.ರಾ.ಬೇಂದ್ರೆಯವರ ಹಿಂದಿರುವ ಶಕ್ತಿ ಅವರ ಧರ್ಮಪತ್ನಿ .ಅಂದರೆ ಅವರ ಮುದ್ದಿನ ಸಖಿಯ ಕುರಿತು ಅವರ ಸುಂದರ ಸಂಸಾರದ ನೋವಲ್ಲಿ ನೊಂದು ಬೆಂದ ಕುಟುಂಬದ ಕಷ್ಟ, ನಷ್ಟ, ಸುಖಗಳ ಸರಮಾಲೆಯ ಕುರಿತು ಬರೆಯುವ ಒಂದು ಚಿಕ್ಕ ಪ್ರಯತ್ನವನ್ನು ಮಾಡಿರುವೆನು.ಬರೆಯುವಿಕೆಯಲ್ಲಿ ನನ್ನಿಂದ ಏನೇ ಲೋಪವಾದರೂ ಅದನ್ನು ಮನ್ನಿಸುವಿರಾಗಿ ನಂಬಲೇ,

    ವರಕವಿ ಡಾ, ದ.ರಾ. ಬೇಂದ್ರೆಯವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀಬಾಯಿ ಬೇಂದ್ರೆಯವರು ದಿ.12.04.1906.ರಂದು
ರೋಣ ತಾಲೂಕಿನಲ್ಲಿ ಜನಿಸಿದವರಾಗಿರುತ್ತಾರೆ.ಅವರ ತಂದೆ ಜೋಗಳೇಕರ ವಾಸುದೇವ ರಾಯರು
ಪಿ.ಡ.ಬ್ಲ್ಯಡಿ.ಇಲಾಖೆಯಲ್ಲಿ ನರಗುಂದ ತಾಲೂಕಿನಲ್ಲಿ ಕೆಲಸವನ್ನು ಮಾಡುತ್ತಿದ್ದರು. ಲಕ್ಷ್ಮೀಬಾಯಿ ಬೇಂದ್ರೆಯವರು ನಾಲ್ಕು ವರ್ಷದ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದರು.
ಲಕ್ಷ್ಮೀಬಾಯಿಯವರು ತುಂಬು ಮನೆತನದಲ್ಲಿ ಹುಟ್ಟಿ ಬೆಳೆದವರು ಆಗಿದ್ದರು.

   1919 ರಲ್ಲಿ ಅವರ 13 ನೇ ವಯಸ್ಸಿನಲ್ಲಿ ವಿವಾಹ ನಿಶ್ಚಯವಾಯಿತು.ಆ ಅವಧಿಯಲ್ಲಿ ವರಕವಿ ಡಾ, ದ.ರಾ.ಬೇಂದ್ರೆಯವರು ಪದವೀಧರರಾಗಿದ್ದರು.ಅವರಿಗೆ 23 ವರ್ಷ ವಯಸ್ಸು ತುಂಬಿತ್ತು.1919 ರಲ್ಲಿ ಅವರ ವಿವಾಹವು ನಡೆಯಿತು.

   ವಿವಾಹ ನಂತರದಲ್ಲಿ ಶ್ರೀಮತಿ
ಲಕ್ಷ್ಮೀಬಾಯಿಯವರಿಗೆ ವಾತಾವರಣ ಬೇರೆಯೇ ಆಯಿತು. ವರಕವಿ ಡಾ. ಬೇಂದ್ರೆಯವರ ಮನೆಯಲ್ಲಿ ಅವರ ತಾಯಿ ಮತ್ತು ಒಬ್ಬ ತಮ್ಮನು ಮಾತ್ರವೇ ಇದ್ದರು.ವಿವಾಹದ ದಿನಕ್ಕಾಗಿಯೂ ಬೇಂದ್ರೆಯವರಿಂದ ಕವನಗಳು ಸಾಲು ಸಾಲಾಗಿ ಹುಟ್ಟಿದವು.

,, ಮಾoದಳಿರ ತೋರಣ ಹೂ ಮಿಡಿ ಗುಡಿಗಟ್ಟಿ
ಮಧುಮಾಸ ಹೊರಟಿತ್ತು ನಿಬ್ಬಣಕೆ,,

 ಎಂದು ಕವಿತೆಯನ್ನು ಬರೆದರು. ಮುಂದೆ ಪ್ರತಿ ಹಂತದಲ್ಲೂ ಖುಷಿಯಲ್ಲಿ,ದುಃಖದಲ್ಲಿ, ಮಕ್ಕಳು ಹುಟ್ಟಿದಾಗ,ಮಕ್ಕಳು ಅಗಲಿದಾಗ, ವರಕವಿ ಡಾ, ದ.ರಾ. ಬೇಂದ್ರೆಯವರಿಂದ ಒಂದೊಂದು ಕಾವ್ಯಧಾರೆ ಹುಟ್ಟುತ್ತಿತ್ತು.ಸಂಸಾರದ ನೌಕೆ ತೂಗುವಾಗ ಹಲವಾರು ನೋವುಗಳ ಮರೆಯಲು ಒಂದೊಂದೇ  ಕವಿತೆಗಳು ಹುಟ್ಟಿ ಸಾಯುತ್ತಿತ್ತು.

   ಹೆಸರಿಗೆ ಹೆಬ್ಬಾರ ಮೊಸರಿಗೆ ತತ್ವಾರ, ಎಂದು ನಮ್ಮ ಹಳೆಯವರು ಗಾದೆಯ ಮಾತನ್ನು ಸುಮ್ಮನೆ ಮಾಡಿರಲಿಲ್ಲ. ಈ ಹೆಸರಾoತ ಡಾಕ್ಟರೇಟ ಬಿರುದಾoಕಿತ ಕವಿಯವರ ಸಂಸಾರದ ಕುಟುಂಬವು ಅನುಭವಿಸಿದ ಕಷ್ಟಗಳು ಎಂಥವರಿಗೂ ಕಣ್ಣೀರ ಕೋಡಿಯನ್ನು ಹರಿಸುವಂತಿದೆ.

    ಶ್ರೀಮತಿ ಲಕ್ಷ್ಮೀಬಾಯಿ ಬೇಂದ್ರೆಯವರು 1922 ರಿಂದ 1944 ರ ವರೆಗಿನ ಅವಧಿಯಲ್ಲಿ ಒಟ್ಟೂ ಒಂಬತ್ತು ಮಕ್ಕಳಿಗೆ ಜನ್ಮ ಕೊಟ್ಟಿರುವ ಮಹಾತಾಯಿಯವರಾಗಿದ್ದಾರೆ.1944 ರಲ್ಲಿ ಹಿರಿಯ ಪುತ್ರರಾದ ರಾಮಚಂದ್ರ ಬೇಂದ್ರೆಯವರನ್ನು ಹಾಗೂ ಕಿರಿಯ ಪುತ್ರರಾದ ಆನಂದ ಬೇಂದ್ರೆಯವರನ್ನು ಕಳೆದುಕೊಂಡ ಈ ಕುಟುಂಬವು ನೋವಲ್ಲಿ ಮಡುಗಟ್ಟಿತು. ಮುಂದೆ ಬದುಕಿ ಉಳಿದವರು ಪಾಂಡುರಂಗ, ವಾಮನ, ಮಂಗಲಾ, ಮಾತ್ರ ಬದುಕಿದ್ದರು. ಅವರಲ್ಲಿ ಪಾಂಡುರಂಗ ಸಂಗೀತ ಪ್ರಿಯನಾದರೆ ವಾಮನ ಸಾಹಿತ್ಯ ಪ್ರಿಯರು, ಮಂಗಲ ಮಮತೆಯ ಸರ್ವಮಂಗಲೆ ಆಗಿದ್ದರು.ಈ ಮೂವರು ಮಕ್ಕಳು ಕುಟುಂಬಕ್ಕೆ ಒಂದು ಆಸ್ತಿಯಾದರು.

    ಆ ಮಹಾತಾಯಿಗೆ ಕೆಲವು ಮಕ್ಕಳು ಕೈಗೆ ಬರುವಾಗ ತೀರಿಕೊಂಡರೆ ಇನ್ನು ಕೆಲವು ಮಕ್ಕಳು  ಭೂಮಿಗೆ ಬರುವಷ್ಟರಲ್ಲಿ ಹೋಗಿದ್ದರು.ಈ ನೋವುಗಳು ಪತಿ.ಪತ್ನಿ ಇಬ್ಬರ ಮೇಲೂ ಪರಿಣಾಮವನ್ನು ಉಂಟು ಮಾಡಿದವು ಆ ನೋವಿನ ಅಘಾತವನ್ನು ಸಹಿಸುತ್ತ ವರಕವಿ ಡಾ, ಬೇಂದ್ರೆಯವರು ಕಾವ್ಯಧಾರೆಯನ್ನು ಹರಿಸಿ ನೋವನ್ನು ಶಮನ ಮಾಡಿ ಕೊಳ್ಳುತ್ತಿದ್ದರು.

   ಧರ್ಮಪತ್ನಿ ಲಕ್ಷ್ಮೀಬಾಯಿಯವರು ತುಂಬಾ ಮೌನದಿ ಅಂತರ್ಮುಖಿಯಾಗಿ ಎಲ್ಲ ನೋವುಗಳನ್ನು ಮನದಲ್ಲಿ ನುಂಗಿ ನಾಳೆಯ ಬರವಸೆಗಳಿಗೆ ಎದುರು ನೋಡುವವರು ಆಗಿದ್ದರು. ಬದುಕುಳಿದ ಮೂವರು ಮಕ್ಕಳ ಕುರಿತು ಆ ಮಹಾ ತಾಯಿಯು ಆಹಾರ,ಆರೋಗ್ಯ ವಿಚಾರದಲ್ಲಿ ತುಂಬಾ ಕಾಳಜಿಯನ್ನು ವಹಿಸುತ್ತಿದ್ದರು. ಆರೋಗ್ಯವಂತರಾಗಿ ಬೆಳೆದು ಮಕ್ಕಳು ಸುಖವಾಗಿ ಬೆಳೆದರೆ ಸಾಕು ಎಂದು ಅಪೇಕ್ಷಿಸುತ್ತಿದ್ದರು.

     1919 ರಿಂದ 1944 ರ ವರೆಗಿನ ಅವರ ದಾಂಪತ್ಯ ಜೀವನದಲ್ಲಿ ಸಾಕಷ್ಟು ಅಸ್ಥಿರತೆಗಳು ಎದುರಾದವು. ಅವರ ಬದುಕಲ್ಲಿ ಭಗವಂತನು ಸಾಕಷ್ಟು ಸತ್ವಪರೀಕ್ಷೆಗಳನ್ನು ಒಡ್ಡಿ ಪರೀಕ್ಷಿಸಿದನು. ಆದರೂ ಎದೆಗುಂದದೇ  ತಾಯಿಯ ಹೆಸರನ್ನೇ ಕಾವ್ಯನಾಮವನ್ನಾಗಿಸಿಕೊಂಡ  ಅಂಬಿಕೆಯ ಮಗನಾದ  ಅಂಬಿಕಾತನಯ ದತ್ತರಲ್ಲಿ ಅದಕ್ಕೂ ಒಂದು ಕಾವ್ಯವು  ಹುಟ್ಟಿತು.

,,ಬಿದ್ದ ಕಾಲಕ್ಕೆ ಹಾದಿ ಹಿಡಿದಿದ್ದೇ ನಡುಬೀದಿ,,ಎಂದು ಹೇಳುತ್ತ ದೇವನ ಕೃಪೆಗೆ ಶರಣಾದರು.

    ಅಂಬಿಕಾತನಯದತ್ತರು  ಭಾಷಾಭಿಮಾನ, ಶಿಕ್ಷಣ, ದೇಶಾಭಿಮಾನ, ಸಂಸ್ಕ್ರತಿ,ಹೀಗೆ ಹತ್ತಾರು ಸಾಧನೆಯ ಹಾದಿಯಲ್ಲಿ ನಡೆಯುತ್ತಿದ್ದರು. ಲೌಕಿಕ ಜೀವನಕ್ಕಿಂತ ಕಾವ್ಯಧರ್ಮದ ಜೀವನಕ್ಕೆ ಅವರ ಒಲವು ಒತ್ತಾಸೆಯು ತುಂಬಾ ಇತ್ತು.ಕುಟುಂಬದ ನಿರ್ವಹಣೆ ವ್ಯವಹಾರವನ್ನು ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಬಾಯಿ ಬೇಂದ್ರೆಯವರು ನೋಡಿ ಕೊಳ್ಳುತ್ತಿದ್ದರು.ಅವರಿಗೆ ಬೇಂದ್ರೆಯವರ ವಿಧ್ಯಾರ್ಥಿಗಳು  ಅಥವಾ ಗೆಳೆಯರು ಸಹಾಯಕ್ಕೆ ಧಾವಿಸುತ್ತಿದ್ದರು.

    ಬೇಂದ್ರೆಯವರು ವಿವಾಹ ಅವಧಿಯಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದರು.ಮುಂದೆ ಅದೇ ಸಂಸ್ಥೆಯ ಅಜೀವ ಸದಸ್ಯರೂ ಆಗಿದ್ದರು. ಹಲವಾರು ತೊಂದರೆಗಳಿಂದ ಸದಸ್ಯತ್ವಕ್ಕೆ ವಿರಾಮ ನೀಡಿದರು. ಅವರೊಂದು ಗೆಳೆಯರ ಬಳಗದ ಗುಂಪನ್ನು ಕಟ್ಟಿ ಬೆಳೆಸಿದ್ದರು ಅದು ಕೂಡಾ ಒಡೆದು ಹೋಯಿತು. ಆಗ ಬೇಂದ್ರೆಯವರು ನಿರುದ್ಯೋಗಿ ಇರಬೇಕಾಯಿತು.ಆ ಒಂದು ಕಷ್ಟದ ಸಮಯಕ್ಕೆ ಅವರಿಗೆ ಹೆಗಲಾಗಿ ನಿಂತವರು ಹಿರಿಯರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು . ಜೀವನದಲ್ಲಿ ಯಾವುದೇ ರೀತಿ ತೊಂದರೆಗಳು ಎದುರಾದರೂ ಇವರ ಕಾವ್ಯ ಸಾಧನೆ ಅವ್ಯಾಹತವಾಗಿ ನಡೆದೆ ಇತ್ತು.  

   ಕವಿಯ ಮನೆಗೆ ಬಂದವರಿಗೆ ಅಡಿಗೆ ,ಊಟ ,ಚಹ, ತಿನಿಸುಗಳನ್ನು ಒದಗಿಸುವ ಕಾಯಕವು ಕವಿಯ ಪತ್ನಿಯ ಪಾಲಿಗೆ ಇತ್ತು. ತಿಂಗಳಿಗೊಮ್ಮೆ ಬಂದ ಹಣವನ್ನು ವರಕವಿ ಡಾ. ದ.ರಾ.ಬೇಂದ್ರೆಯವರು ಧರ್ಮಪತ್ನಿ  ಲಕ್ಷ್ಮೀಬಾಯಿಯವರಿಗೆ ನೀಡುತ್ತಿದ್ದರು.ಬಂದಷ್ಟೇ ಹಣದಲ್ಲಿ ಅವರು ಸಂಸಾರವನ್ನು ನಡೆಸಬೇಕಿತ್ತು. ಸಾಮಾನಿನ ಬೆಲೆಗಳು ಗಗನದಲ್ಲಿತ್ತು ದುಡಿಯುವ ಕೈಯು ಒಂದೇ ಇತ್ತು. ಹೆಚ್ಚಿಗೆ ಬೇಡಿದರೂ ಹಣವು ಯಾವುದೇ ಮೂಲದಿಂದ ಇರಲಿಲ್ಲ. ಬಂದ ಹಣವು ಜೀವನಕ್ಕೆ ಸಾಲುತ್ತಿರಲಿಲ್ಲ. ಹೆಚ್ಚಿನ ಖರ್ಚು ತಿಂಗಳಲ್ಲಿ ಬಂದಾಗ ಲಕ್ಷ್ಮೀಬಾಯಿಯವರು ಮೌನ ಮುರಿದು ಚಿಕ್ಕದಾಗಿ ಗೊಣಗುತ್ತಿದ್ದರು.

    ಒಂದು ದಿವಸ ವರಕವಿ ಡಾ, ದ.ರಾ. ಬೇಂದ್ರೆಯವರು ನೂರು ರೂಪಾಯಿ ಕೊಟ್ಟು ನಿಂಗೆ ಸಾಕಾಗತ್ತವ, ಎಂದು ಕೇಳಿದರು ಆಗ ಧರ್ಮ ಪತ್ನಿ ಮತ್ತೊಮ್ಮೆ ಮೌನ ಮುರಿದು ಉಳಿದ ಮಾಸ್ತರರು ಹೇಳು ಹಾಂಗೆ ನೀವು ಶಿಕೋಣಿ ಯಾಕೆ ಮಾಡಬಾರದು?ಎಂದು ಕೇಳಿದರು. ಪತ್ನಿಯ ಸಲಹೆಗೆ ಹುಂ, ಎಂದ ವರಕವಿ ಡಾ,ದ.ರಾ. ಬೇಂದ್ರೆಯವರು ಖಾಸಗಿ ಪಾಠವನ್ನು ಶುರು ಮಾಡಿದರು. ನೂರು ರೂಪಾಯಿ ಆದ ಕೂಡಲೇ ಪತ್ನಿಯ ಕೈಲಿ ಕೊಟ್ಟು ಇನ್ನು ಮುಂದೆ ರೊಕ್ಕ ರೊಕ್ಕ ಎಂದು ನನ್ನ ಕಾಡಿಸಬ್ಯಾಡ, ಎಂದು ಹೇಳುತ್ತಿದ್ದರು. ಮುಂದೆ ವರಕವಿ ಡಾ, ದ.ರಾ.ಬೇಂದ್ರೆಯವರು ಪಾಠಕ್ಕೂ ವಿಧಾಯ ಹೇಳಿ ಸಾಹಿತ್ಯ ಸೇವೆಯ  ಪುಸ್ತಕ ಪ್ರಪಂಚದ ಕಡೆಗೆ ಒತ್ತು ಕೊಟ್ಟರು.

    1944 ರಲ್ಲಿ ಪಾಂಡುರಂಗ ಬೇಂದ್ರೆಯವರು ನೌಕರಿ ನಿಮಿತ್ತ ಊರನ್ನು ಬಿಡಬೇಕಾಯಿತು ತಾಯಿಯ ಹೆಗಲಿಗೆ ಇದ್ದ ಸಂಸಾರದ ಭಾರವನ್ನು ಇವರು ತಕ್ಕ ಮಟ್ಟಿಗೆ ನೋಡಿಕೊಳ್ಳುತ್ತಿದ್ದವರು ಆಗಿದ್ದರು. ಅವರು ಸೇವೆಗೆ  ಹೋದ ಮೇಲೆ ಮನೆಯಲ್ಲಿ ಇರುತ್ತಿದ್ದ  ರಾಮಣ್ಣ ಗುಮಾಸ್ತರವರು ಧರ್ಮಪತ್ನಿ ಲಕ್ಷ್ಮೀಬಾಯಿಯವರಿಗೆ ಸಹಾಯವನ್ನು ಮಾಡುತ್ತಿದ್ದರು.  ಧರ್ಮಪತ್ನಿ ಲಕ್ಷ್ಮೀಬಾಯಿಯವರ ಆಪ್ತರ ಬಳಗ ಅಪಾರ ಪ್ರಮಾಣದಲ್ಲಿ ಇದ್ದು, ವರಕವಿ ಡಾ,ಬೇಂದ್ರೆಯವರಿಗೆ ಬಳಗವು ಕಡಿಮೆ ಇದ್ದರೂ, ಅವರ ಸಾಹಿತ್ಯ ಬಳಗ ತುಂಬಾ ಇತ್ತು. ದಿನಂಪ್ರತಿ  ಆಮಂತ್ರಣ ಪತ್ರಿಕೆಗಳು ಬರುತ್ತಿದ್ದು ಬೇರೆ ಬೇರೆ ಊರುಗಳಿಗೆ ಭಾಷಣವನ್ನು ಮಾಡಲು ಅವರು ಹೋಗುವಾಗ ಎಲ್ಲ ರೀತಿಯ ಸಿದ್ದತೆಗಳನ್ನು ಶ್ರೀಮತಿ ಲಕ್ಷ್ಮೀಬಾಯಿಯವರು ಮಾಡಿ ಕಳುಹಿಸಬೇಕಿತ್ತು. ವರಕವಿ ಡಾ, ದ.ರಾ.ಬೇಂದ್ರೆಯವರು ಊರುಗಳಿಗೆ ಹೋಗುವಾಗ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಪುಸ್ತಕಗಳನ್ನು ಹಚ್ಚುವುದು ಕಾಗದ ಪತ್ರಗಳನ್ನು ಬೇರ್ಪಡಿಸುವುದು ಇವನ್ನು ಪತ್ನಿ ಲಕ್ಷ್ಮೀಬಾಯಿಯೂ ಮಾಡುತ್ತಿದ್ದರು.

   ವರಕವಿ ಡಾ,ಬೇಂದ್ರೆಯವರು ತಮ್ಮ ಧರ್ಮಪತ್ನಿ ಕುರಿತು ಹಲವಾರು ಕವನಗಳನ್ನು ಬರೆದು ಅರ್ಪಿಸಿದ್ದಾರೆ. ಅದರ ಚಿಕ್ಕ ತುಣುಕು.

,, ಹಳ್ಳದ ದಂಡ್ಯಾಗ,, ನನ್ನ ಕೈ ಹಿಡಿದಾಕೆ
ಹುದುಗಲಾರದ ದುಃಖ ,
,

,,ನೀ ಹಿಂಗ ನೋಡಬ್ಯಾಡ ನನ್ನ,,

,, ನಾನು ಬಡವ ನೀನು ಬಡವಿ ,,

     ಎಂಬೆಲ್ಲಾ ಕವನವನ್ನು ತಮ್ಮ ಭಾಗ್ಯದ ಸೌಭಾಗ್ಯದ ಧರ್ಮಪತ್ನಿ ಲಕ್ಷ್ಮೀಬಾಯಿಯ ಕುರಿತು ಕಲಾತ್ಮಕವಾಗಿ ಕುಂಚದಿಂದ ಅರಳಿಸಿ ಹಾಡಿದ್ದಾರೆ.

     ವರಕವಿ ಡಾ, ದ.ರಾ. ಬೇಂದ್ರೆಯವರು ಮದುವೆ ಮಾಡಿಕೊಂಡ ಹೊಸದರಲ್ಲಿ ಕೆಲವೇ ದಿವಸದಲ್ಲಿ ಪತ್ನಿ ಲಕ್ಷ್ಮೀ ಬಾಯಿಯವರಿಗೆ ನಿನಗೆ ಏನಾದರೂ ವಸ್ತ್ರ ಒಡವೆ ಬೇಕೆ ? ಎಂದು ಕೇಳಿದರು. ಅದಕ್ಕೆ ಲಕ್ಷ್ಮೀಬಾಯಿಯವರು ನಿಮಗೆ ಸಾಧ್ಯವಾದಾಗ ಅನುಕೂಲವಿದ್ದಾಗ ಒಂದು ಮುತ್ತಿನ ಮಾಲೆ ಮಾಡಿಸಿದರೆ ಸಾಕು. ಎಂದು ಹೇಳಿದರು. ಮುಂದೆ ವರಕವಿ ಡಾ, ದ.ರಾ. ಬೇಂದ್ರೆಯವರು ಮುತ್ತಿನ ಮಾಲೆ ಕುರಿತಾಗಿ ಕಾಲಿದಾಸನ ಮೇಘದೂತವನ್ನು ಕನ್ನಡಕ್ಕೆ ಅನುವಾದಿಸಿ,

,,ಕಾಲಿದಾಸನ ಕಡಲ
  ಮುತ್ತು ಮಾಲೆಯನಿತ್ತೆ
ಮುಡುಪ ನೊಪ್ಪಿದೆಯೆಂದು ಮುಕ್ತಳಾಗು
,,

   ಎಂದು ಕವನ ಅನುವಾದಿತವನ್ನು  ಅರ್ಪಿಸಿದರು.ಮುಂದೆ ಅದೇ ಪುಸ್ತಕದಿಂದ ಹಣವು ಬಂದಾಗ ಮುತ್ತಿನ ಮಾಲೆಯನ್ನು ಮಾಡಿಸಿಕೋ ಎಂದು ಧರ್ಮಪತ್ನಿ ಲಕ್ಷ್ಮೀಬಾಯಿಯವರಿಗೆ ಹೇಳಿದರು. ಅದಕ್ಕೆ ಅವರು ಒಪ್ಪಿ ಹುಂ,ಎಂದರು. ಕವಿ.ಪತ್ನಿ ನಡುವಿನ ಸರಸ.ಸಲ್ಲಾಪವು ಸಂಸಾರವನ್ನು ಕವನದಂತೆ ತೂಗಿಸುತ್ತಿತ್ತು.

    ಮುಂದೆ ಒಂದು ದಿವಸ ಮುತ್ತಿನ ಮಾಲೆಯನ್ನು ವರಕವಿ ಬೇಂದ್ರೆಯವರು ಮಾಡಿಸಿದರು ಏನೋ ಒಂದು ವಿಚಾರದಿಂದ ಆ ಮಾಲೆಯನ್ನು ಧಾರವಾಡದ ತಾಯಿ ದುರ್ಗಾದೇವಿಗೆ ಒಪ್ಪಿಸಲು ವರಕವಿ ಡಾ,ದ.ರಾ.ಬೇಂದ್ರೆಯವರು ಧರ್ಮಪತ್ನಿ ಲಕ್ಷ್ಮೀಬಾಯಿ ಬೇಂದ್ರೆಯವರಿಗೆ ಹೇಳಿದರು. ಆಗ ಧರ್ಮಪತ್ನಿಯವರು ಒಪ್ಪಲಿಲ್ಲ.ಮುಂದೆ 1944 ರಲ್ಲಿ ಎರಡೂ ಮಕ್ಕಳನ್ನು ಕಳೆದುಕೊಂಡಾಗ ಆ ಮುತ್ತಿನ ಮಾಲೆಯನ್ನು ಪಾoಡಿಚೇರಿಯ ಶ್ರೀ ಮಾತೆಯವರಿಗೆ ಅರ್ಪಿಸಿದರು. ಆ ಮುತ್ತಿನ ಮಾಲೆಯ ಸರಸ.ವಿರಸಗಳು ಕೇಳಲು ಎಂತಹ ಚೆಂದವಿತ್ತು.

    ತದನಂತರದಲ್ಲೂ ವರಕವಿ ಡಾ. ದ.ರಾ.ಬೇಂದ್ರೆಯವರು ಇನ್ನೊಂದು ಮುತ್ತಿನ ಹಾರವನ್ನು  ಮಾಡಿಸಿದರು. ಅದಕ್ಕೂ ಒಂದು ಕವಿಯವಾಣಿ ಮುತ್ತಿನಂತೆ ಉದಯಿಸಿತು.

,, ವಾಗಿoದ್ರ ಜಾಲದ ಮಾಲೆ ಮಾಲೆಯ ಬೀಸಿ
ಸಪ್ತ ಸ್ವರ್ಗದ ಶಿಖರವನು ಮುಟ್ಟಿದೆ,,

,,ನನ್ನ ಪಾಲಿಗೆ ಮಾತ್ರ ಹೇ ಪ್ರೇಮ ದೇವತೆ ಮೌನ ಮುದ್ರೆಯನಲ್ಲು ನೀ ತೊಟ್ಟಿಹೆ ,

ಎಂಬ ಸೊಗಸಾದ ಪದಪುಂಜದ ಸಾಲು ಸಾಲಿನ ಕವನವನ್ನು ಬಿತ್ತರಿಸಿದರು.

    ಲಕ್ಷ್ಮೀ ಬಾಯಿಯವರ ಅಭಿಪ್ರಾಯವನ್ನು ವರಕವಿ  ಅಂಬಿಕಾತನಯರವರು ಎಂದಿಗೂ ತಿರಸ್ಕರಿಸದೆ

ಸಖೀಗೀತದಲ್ಲಿ ಏಕಾಂತದ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.

   ಡಾ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಸಖೀಗೀತ ರಚನೆ ಸೊಗಸಾಗಿ ಬಂದಿದೆ. ಇದು ಯಾವುದೇ ಅನ್ಯಾಯವಿಲ್ಲದ ನ್ಯಾಯಯುತ ಗೀತರಚನೆ ಎಂದಿದ್ದಾರೆ.

    ವರಕವಿ ಡಾ, ದ.ರಾ. ಬೇಂದ್ರೆಯವರು ಮತ್ತು ಲಕ್ಷ್ಮೀಬಾಯಿ ಬೇಂದ್ರೆಯವರ ದಾಂಪತ್ಯ ಜೀವನವೆಂದರೆ ಮಾತು. ಮೌನಗಳ ನಡುವಿನ ಸರಮಾಲೆ ಹೊತ್ತ ಬಾಳ ನೌಕೆಯಾಗಿತ್ತು. ಇವು ವಿರುದ್ದ ಪದಗಳು ಆದರೂ ಪರಸ್ಪರ ಪೋಷಿಸುವ ಪದಪುಂಜಗಳಿಂದ ಹೆಣೆದ ಸುಂದರ ಸಂಸಾರವಿತ್ತು.

    ಕೆಲವೊಮ್ಮೆ ವರಕವಿ ಡಾ, ದ.ರಾ. ಬೇಂದ್ರೆಯವರಿಗೆ ರೌದ್ರಾವತಾರವು ಬರುತಿತ್ತು. ಆಗ ಅವರು ಆ ನೋವನ್ನು ಸುಟ್ಟು ಶಮನ ಮಾಡಲು ಕವಿಧಾರೆಯ ಹಾಡನ್ನು ರಸದಂತೆ ಹರಿಸಿ ಬಿಡುತ್ತಿದ್ದರು.

,, ನಾ ಕಂಡ ಬೆಳಕಿನ ಹಣ್ಣ ನೀನು
ನೀ ನನ್ನ ಚಿತ್ರದ ಹೆಣ್ಣ
ನನಗ್ಯಾಕ ಹುಬ್ಬಿನ ಡೊಂಕ,,

   ಇಂತಹ ಹಾಡಿನಲ್ಲಿ ಧರ್ಮಪತ್ನಿ ಲಕ್ಷ್ಮೀಬಾಯಿಯವರ ಜೀವನದ ಸಾಫಲ್ಯ ಅಡಗಿರುವುದು ಬೇಂದ್ರೆಯವರು ಹಾಕಿದ ಲಕ್ಷ್ಮಣ ರೇಖೆಯನ್ನು ಪತ್ನಿ ಲಕ್ಷ್ಮೀಬಾಯಿಯವರು ಎಂದೂ ದಾಟಿರುವುದಿಲ್ಲ.ವರಕವಿ ದ.ರಾ. ಬೇಂದ್ರೆಯವರ ಅಪೇಕ್ಷೆಗಳಿಗೆ ಧರ್ಮಪತ್ನಿ   ಲಕ್ಷ್ಮೀಬಾಯಿಯವರು ಆದರ್ಶಣೀಯ ಧರ್ಮಪತ್ನಿ ಆಗಿದ್ದರು. ವರಕವಿ ಡಾ, ದ.ರಾ. ಬೇಂದ್ರೆಯವರು ಕೂಡಾ ಪತ್ನಿ ವಿರುದ್ದವಾಗಿ ಎಂದಿಗೂ ನಡೆದುಕೊಂಡಿರುವುದಿಲ್ಲ. ಅವರನ್ನು ಕೇಳದೇ ಯಾವ ರೀತಿಯ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕೂ ಅವರಿಂದ ಒಂದು ಕವನ ಮೂಲಕವೇ ಉತ್ತರ ಇರುವುದು.

,,ನಿನ್ನ ಕಣ್ಣೀರ್ಮುತ್ತು
ನನ್ನ ಕೊರಳಿನ ಸುತ್ತು
ಆಭರಣವೆಂದು ಮರೆದಾಡುತ್ತಿವೆ.
ಸ್ವರ್ಗ ನರಕಕ್ಕೆ ಕರೆದಲ್ಲಿ ಬರುವೆ.

    ಎಂಬ ಹಾಡಿನಿಂದ ಈ ಸಖ.ಸಖಿಯವರ ಸಮಸುಖ ಅಡಗಿತ್ತಂತೆ ಅವರ ಸಾಧನೆಯು ಶ್ರೀಮತಿ   ಲಕ್ಷ್ಮೀಬಾಯಿಯವರೊಂದಿಗೆ ಅಡಗಿತ್ತು. ಅವರು ಅದನ್ನು ಕವನದಲ್ಲಿ ಉಲ್ಲೇಖಿಸಿದ್ದಾರೆ.

,,ಇದಿರಾಡದಿರು ಮತ್ತೆ
ಎದಿರಾಡದಿರು ಇತ್ತ
ಮಾಡದಿರು ಬಾಳನ್ನು
ಬೆಳೆಯಂತೆ ಕೂಡಿರಲಿ
ಬಾಳು ಇಡಿಗಾಳಿನಂತೆ,,

  ಎಂತಹ ಸುಂದರ ಸಾಲುಗಳು ಅರ್ಥ ಪೂರ್ಣವಾಗಿದ್ದು ಧರ್ಮಪತ್ನಿ ಲಕ್ಷ್ಮೀಬಾಯಿಯವರು  ಸಂಸಾರದ ಜವಾಬ್ಧಾರಿಯನ್ನು ಹೊತ್ತವರು ಎಂಬುದಕ್ಕೆ ಬೇರೆ ಉದಾರಣೆಗಳು ಬೇಕೆ? ವರಕವಿ ಬೇಂದ್ರೆಯವರು ಹೇಳಿದರು. ಅವರ ಸಾಧನೆ ಹಿಂದಿನ ಶಕ್ತಿಯು ವರಕವಿ ದ.ರಾ. ಬೇಂದ್ರೆಯವರ ಧರ್ಮಪತ್ನಿ ಎಂಬುದಕ್ಕೆ ಬೇರೆ ಏನು ಬೇಕು?
ನಾಲ್ಕನೇ ತರಗತಿವರೆಗೆ ಓದಿಕೊಂಡು ಒಂಬತ್ತು ಮಕ್ಕಳ ತಾಯಿಯಾಗಿ ಅಂದರೆ ಭೂಮಿಗೆ ಬಂದ ಮೇಲೆ ದೂರ ಹೋದ ಜೀವ,ಇನ್ನು ಭೂಮಿಯನ್ನು ಕಣ್ಣುಬಿಟ್ಟು ನೋಡುವ ಮೊದಲೇ ಹೋದ ಜೀವಗಳು ಈ ಎಲ್ಲ ನೋವುಗಳನ್ನು ಅನುಭವಿಸಿದ ಆ ಮಹಾತಾಯಿ ಇಷ್ಟು ದೊಡ್ಡ ಸಂಸಾರದ ನೌಕೆ ಎಳೆದಿದ್ದಾರೆ. ಎಂದರೆ ಅವರ ಜಾಣ್ಮೆಯು ಹೇಗಿದೆ? ಸ್ನೇಹಿತರೇ., ವ್ಯವಹಾರಿಕವಾಗಿ ಅವರು ಎಷ್ಟು ಚೆಂದವಾಗಿ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದರು.

    ವರಕವಿ ಡಾ, ದ.ರಾ. ಬೇಂದ್ರೆಯವರ ತಂದೆ ಮಹಾನ್ ವಿದ್ವಾoಸರು ಆಗಿದ್ದರು. ಅದರಿಂದ ವರಕವಿ ದ.ರಾ. ಬೇಂದ್ರೆಯವರು ಶಬ್ದಬ್ರಹ್ಮ ಆಗಿದ್ದರು. ಒಂದೊಂದು ಶಬ್ದದಲ್ಲೂ ಅದರ ಒಳಅರ್ಥ ತುಂಬಿ ಇರುತ್ತಿತ್ತು.

    ವರಕವಿ ಡಾ.ಬೇಂದ್ರೆಯವರ ದರ್ಮಪತ್ನಿ ತುಂಬು ಕುಟುಂಬದ ವತ್ಸಲೆ ಇದ್ದರು. ವರಕವಿ ದ.ರಾ. ಬೇಂದ್ರೆಯವರು ನಿರೀಕ್ಷಿಸದಿರುವ ಒಂದೊಂದು ಮಾತುಗಳನ್ನು ಧರ್ಮ ಪತ್ನಿ ಲಕ್ಷ್ಮೀಬಾಯಿ ಬೇಂದ್ರೆಯವರು ಆಡುತ್ತಿದ್ದರಿಂದ ಅವರ ಮಾತಿನಿಂದ ಬಂದ ಶಬ್ದಕ್ಕೆ ಎಷ್ಟೋ ಅರ್ಥಗಳು ಇರುತ್ತಿತ್ತು. ಅದಕ್ಕೆ ಹೇಳುವುದು  ಕಲಿಕೆಗೂ, ವ್ಯವಹಾರಕ್ಕೂ ಮಾತಿಗೂ, ಯಾವುದೇ ತಾಳೆ ಇರುವುದಿಲ್ಲ. ಎನ್ನ ಬಹುದಾಗಿದೆ ಜೀವನ ನಡೆಸಲು ಶಿಕ್ಷಣವೇ ಅಗತ್ಯ ಎಂಬುದು ಅರ್ಥವಿಲ್ಲದ ಮಾತು, ವ್ಯವಹಾರಕ್ಕೆ ಎಷ್ಟು ಬೇಕೋ ಅಷ್ಟು ಓದಲು ಬರೆಯಲು ಬಂದರೂ ಸಂಸಾರವನ್ನು ಸುಂದರವಾಗಿ ತೂಗಿಸಿ ಕೊಂಡು ಹೋಗಬಹುದು ಎಂಬುದಕ್ಕೆ ಈ ತುಂಬು ಕುಟುಂಬದ ವತ್ಸಲೆಗಿoತ ಬೇರೆ ಬೇಕೆ?ಸ್ನೇಹಿತರೇ.

   ಎಂದಾದರೂ ಲಕ್ಷ್ಮೀಬಾಯಿಯವರು ಮೌನ ಮುರಿದು ಹೊರಕ್ಕೆ ಬಂದರೆ ವರಕವಿ ಅಂಬಿಕಾತನಯದತ್ತರ ಮನವು ಜಾಗ್ರತಗೊಂಡು ಕಾವ್ಯ ರೂಪದಿ ಅವರ ಕಾವಿನ ಮನಕ್ಕೆ  ಶಮನ ನೀಡುತ್ತಿದ್ದರು. ಆದರೆ ಲಕ್ಷ್ಮೀಬಾಯಿಯವರು ಕ್ಷಣಾರ್ಧದಲ್ಲಿ ಜಪತಪಗಳಿಂದ ಶಾಂತಿ ಕಂಡುಕೊಳ್ಳಲು ಎಚ್ಚರಿಕೆ ವಹಿಸುತ್ತಿದ್ದರು.
ಜಪತಪಗಳನ್ನು ಕೂಡಾ ಪತಿ.ಪತ್ನಿ ಒಟ್ಟಿಗೆ ವಿನಿಮಯ ಮಾಡಿಕೊಂಡು ನಡೆಸುತ್ತಿದ್ದರು.

    ವರಕವಿಯವರ ಧರ್ಮಪತ್ನಿ ತಮ್ಮ ಮಕ್ಕಳಲ್ಲಿ ನಿಮ್ಮ ತಂದೆಯವರ ಮಾತು ನಾನು ಇದುವರೆಗೂ ಅರ್ಥಮಾಡಿಕೊಂಡಿಲ್ಲ.
ನೀವುಗಳು ಯಾವುದೇ ದೊಡ್ಡ ಡಾಕ್ಟರ್ ಇಂಜನೀಯರ್ ಆಗುವುದು ಬೇಡ. ನಿಮ್ಮ ತಂದೆಯವರ ಮಾತನ್ನು ಅರ್ಥ ಮಾಡಿಕೊಳ್ಳುವ ಯೋಗ್ಯತೆ ನಿಮ್ಮಲ್ಲಿ ಇದ್ದರೆ ಸಾಕು ಎಂದು ಹೇಳುತ್ತಿದ್ದರು.

    ಕೆಲ ಸಮಯ ವರಕವಿ ಡಾ, ಬೇಂದ್ರೆಯವರ ಪತ್ನಿಯವರು ಸಖನ ಕಾವ್ಯದಾರೆಗಳು ಸಖಿಯ ಮೇಲೆ ಬಿತ್ತಿದಾಗ ರಸಿಕತೆಯನ್ನು ಹೊಂದಿದ್ದರು. ವರಕವಿ ಡಾ,ಬೇಂದ್ರೆಯವರು ಕಥೆ,ಕವನ, ಲೇಖನ,ಬರೆದರೆ ಅವುಗಳ ಮೊದಲ ಕೇಳುಗರೇ ಲಕ್ಷ್ಮೀಬಾಯಿ ಆಗಿದ್ಡರು.
ಮೇಘದೂತನ ಅನುವಾದಿಸಿದಾಗ ಪಧ್ಯವನ್ನೆಲ್ಲ ಪತ್ನಿ ಲಕ್ಷ್ಮೀಬಾಯಿಯವರಿಗೆ ಓದಿ ತಿಳಿಸಿ ಅವರ ಒಪ್ಪಿಗೆ ದೊರೆತ ನಂತರ ಮುಂದಿನ ಪಧ್ಯದ ಅನುವಾದ ಮಾಡುತ್ತಿದ್ದರು.

   ಲಕ್ಷ್ಮೀಬಾಯಿಯವರು ಕಸೂತಿ ಹೆಣೆಯುವುದು, ಜೈಮಿನಿ ಭಾರತ ಓದುವುದು, ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಕಡೆಗೆ  ಒಲವು ಹೆಚ್ಚು ಕೊಡುತ್ತಿದ್ದರು. ಲಕ್ಷ್ಮೀಬಾಯಿಯವರು ನೆರೆಯವರ ಜೊತೆ ಮೈತ್ರಿ ಬಿಟ್ಟರೆ, ವರಕವಿ ಡಾ, ದ.ರಾ. ಬೇಂದ್ರೆಯವರೊಂದಿಗೆ ಸಮಾರಂಭಗಳಿಗೆ ಹೋಗುವ ರೂಡಿ ಇರುವುದು.

   ಪಾoಡಿಚೇರಿಯ ಅರವಿಂದ ,ಶ್ರೀ ಮಾತೆ ಸೊಲ್ಲಾಪುರ,ಪ್ರಭಾಕರ ಮಹಾರಾಜ,ವಜ್ರೇಶ್ವರಿಯ ನಿತ್ಯಾನಂದ,ಇವರುಗಳ ಮೇಲೆ ಲಕ್ಷ್ಮೀಬಾಯಿಯವರಿಗೆ ವಿಶ್ವಾಸ ತುಂಬಾ ಇರುವುದು. ತನ್ನ ಪತಿ,ಮತ್ತು ಮಕ್ಕಳಿಗೆ ಆರೋಗ್ಯ ಮತ್ತು ಆಯಸ್ಸು ನೀಡು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. ಲಕ್ಷ್ಮೀಬಾಯಿಯವರು ಮಗನನ್ನು ಮೊಮ್ಮಕ್ಕಳಾದ ಪ್ರತಿಮಾ,ಪ್ರಭಾಕರ,ಪುನರ್ವಸು ಇವರ ಲಾಲನೆ ಪಾಲನೆಯಲ್ಲಿ ದಿನವನ್ನು ಕಳೆಯುತ್ತಿದ್ದರು.

    ಒಮ್ಮೆ ಸೊಲ್ಲಾಪುರದ ಮನೆಯನ್ನು ಬಿಟ್ಟು ಧಾರವಾಡಕ್ಕೆ ಬಂದಾಗ ದರ್ಮಪತ್ನಿ  ಲಕ್ಷ್ಮೀಬಾಯಿಯವರಿಗೆ ಧಾರವಾಡದ ಹುಚ್ಚರ ಆಸ್ಪತ್ರೆಯನ್ನು ನೋಡುವ ಮನಸ್ಸು ಆಗಿತ್ತು. ಕೆಲಸದಾಕೆ ಮತ್ತು ಎರಡು ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರು .ಅಲ್ಲಿ ಒಂದು ನೈಜ ಘಟನೆಯು ನಡೆಯಿತು.
ಯಾರೋ ಒಬ್ಬಳು ಹುಚ್ಚಿಯು  ಲಕ್ಷ್ಮೀಬಾಯಿ ಬೇಂದ್ರೆಯವರನ್ನು ಕಂಡು ಓಡಿ ಬಂದು ಅಪ್ಪಿಕೊಂಡಳು, ಆಸ್ಪತ್ರೆಯ ಸಮವಸ್ತ್ರ,ಅಂಗಿ ಪಾಯಜಾಮ,ಧರಿಸಿದ್ದಳು. ಆಗ ಲಕ್ಷ್ಮೀಬಾಯಿಯವರ ಮೈಗಳಲ್ಲಿ ಬೆವರು ಇಳಿಯಿತು. ಅವಳು ಬಾಲ್ಯದ ಗೆಳತಿ ಆಗಿದ್ದಳು. ಮೊದಲು ಅವಳು ವರಕವಿ ಡಾ,ಬೇಂದ್ರೆಯವರ ಎಲ್ಲ ಪುಸ್ತಕಗಳನ್ನು ಓದುತ್ತಿದ್ದಳು .ಬೇಂದ್ರೆ ಮಾಸ್ತರರು ಹೇಗಿದ್ದಾರೆ ಎಂದು ಕೇಳಿದಳು,

   ಕವಿ ದಂಪತಿಗಳಿಗೆ ಮೂಖ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಮಮತೆಯು ಇರುವುದು. ಆ ಮನೆಯಲ್ಲಿ ಮಂಗ,ಕುದುರೆ, ನಾಯಿ,ಬೆಕ್ಕುಗಳು,ಚಿಗರೆ,ಗಿಳಿ,ಈ ಎಲ್ಲ ಪ್ರಾಣಿಗಳನ್ನು ಸಾಕಿದ್ದರು. ಏಳು ಬೆಕ್ಕುಗಳು ಆ ಮನೆಯಲ್ಲಿ ಇದ್ದವು.ಕೊನೆಯ ನಾಯಿ ಕಾಳು ಎಂಬ ಒಂದು ನಾಯಿಯು ಲಕ್ಷ್ಮೀಬಾಯಿಯವರು ನಿಧನ ಹೊಂದಿದಾಗ ಮನೆಯನ್ನು ಬಿಟ್ಟು ಹೋಗಿದ್ದು ಹಿಂತಿರುಗಿ ಬರಲಿಲ್ಲ. ಎಂಟು ದಿವಸದಲ್ಲಿ ಆ ಕಾಳು ಎಂಬ ನಾಯಿ ಸತ್ತ ಸುದ್ದಿಯು  ಮನೆಗೆ ಬಂದಿತು.

    ನಾಯಿಯ ವಿಷಯ ಹೇಳ ಬೇಕೆಂದರೆ ವರಕವಿ ಡಾ, ದ.ರಾ. ಬೇಂದ್ರೆಯವರ ಮನೆಗೆ ಬಹಳ ಜನರು ಅತಿಥಿಗಳು ಬಂದಿದ್ದರು ನಡುಮನೆಯಲ್ಲಿ ಗುಡಾರ ಹಾಸಲಾಗಿತ್ತು. ಒಂದು ಕಡೆಗೆ ಕೋಚು. ನಾಯಿಯೊಂದು ಹಿತ್ತಲ ಬಾಗಿಲಿನಿಂದ ಮನೆಯೊಳಕ್ಕೆ ಬಂದಿತು. ಆಗ ಯಾರೋ ಅದನ್ನು ಬೆದರಿಸಬೇಡಿರಿ. ಅದು ಬೇಂದ್ರೆಯವರ ನಾಯಿ. ಅದಕ್ಕೆ ಯಾವ ಸಂಸ್ಕಾರ ಇದೆಯೆಂದು ನೋಡೋಣ  ಎಂದರು. ಆ ನಾಯಿಗೆ ಎನು ತಿಳಿಯಿತೋ ಏನೋ ಎಂಬಂತೆ ಅದು ನಡುಮನೆಯಲ್ಲಿ ಬಂದು ಗುಡಾರವನ್ನು ಸ್ವಲ್ಪವೂ ತುಳಿಯದೆಯೆ ಕೋಚಿನ ಸಮೀಪದಿಂದ ಹೊಟ್ಟೆ ಹೊಸೆಯುತ್ತ  ಹೊರಕ್ಕೆ ಹೋಯಿತು. ನೋಡುಗರೆಲ್ಲರಿಗೂ ಆಶ್ಚರ್ಯ ವಾಯಿತು.  

   ಬೆಕ್ಕಿಗೆ ಒಮ್ಮೆ ಅಸ್ವಸ್ಥವಾದಾಗ ಪಶು ವೈದ್ಯರು ಬಂದು ಚಿಕಿತ್ಸೆ
 ನಡೆಸಿದರು. ಓಣಿಯವರೆಲ್ಲ ಮಾತಾಡಿ ಕೊಳ್ಳುವ ಸುಂದರ ವಿಷಯವಾಗಿ ಪರಿಣಮಿಸಿತು. ಮೂಕ ಪ್ರಾಣಿಗಳ ಮೇಲೆ ಇರುವ ಸಂಬಂಧ ಹೀಗೆ ಇರುವುದು.

   1966 ರ ಆಗಸ್ಟ ತಿಂಗಳಲ್ಲಿ ಲಕ್ಷ್ಮೀಬಾಯಿಯವರ ಆರೋಗ್ಯವು ತುಂಬಾ ಹದಗೆಟ್ಟಿತು.ಅವರು ಆಗಸ್ಟ 13,14, ರಂದು  ಮೂರ್ಚೆಯಿಂದ ಎಚ್ಚರ ಬರುವ ಹೊತ್ತಿಗೆ ಮೈಸೂರು ಸರಕಾರದವರು 250 ರೂ.ಗಳ ಮಾಸಿಕ ಗೌರವಧನವನ್ನು ವರಕವಿ ಡಾ, ದ.ರಾ .ಬೇಂದ್ರೆಯವರಿಗೆ ನೀಡುವ ಕುರಿತು ನಿರ್ಣಯಿಸಿದ ಸುದ್ದಿ ಪ್ರಕಟಗೊoಡಿತು. ವರಕವಿ ಡಾ,ಬೇಂದ್ರೆಯವರು ಹೆಂಡತಿಗೆ ಓದಿ ಹೇಳಿದಾಗ ಧರ್ಮಪತ್ನಿ ಲಕ್ಷ್ಮೀಬಾಯಿ ಬೇಂದ್ರೆಯವರು ಇನ್ನು ನನ್ನ ಕೆಲಸ ಮುಗಿಯಿತು.ನಾನು ಇನ್ನು ಹೋದರೂ ನಡೆದಿತು. ನಿಮ್ಮ ವ್ಯವಸ್ಥೆ ಆಯಿತು ಎಂದು ಅಭಿಪ್ರಾಯದ ಮಾತುಗಳನ್ನು ಹೇಳಿದರು. ಅಂದು ಹೆಚ್ಚಿನ ಮಾತುಗಳನ್ನು ಆಡಿ ದಣಿದ ಶ್ರೀಮತಿ ಲಕ್ಷ್ಮೀಬಾಯಿಯವರು  ಆಗಸ್ಟ ತಿಂಗಳ 15 ರಂದು ಪಾoಡಿಚೇರಿಯಲ್ಲಿ ದರ್ಶನ ದಿವಸ ನಾನು ಹೋಗುತ್ತೇನೆ ಎಂದು ಹೇಳಿ ಪ್ರಜ್ಞೆ ತಪ್ಪಿದರು.ಅದೇ ಸ್ಥಿತಿಯಲ್ಲಿ 15,16 ರಂದು ಎರಡು ದಿವಸಗಳನ್ನು ದಾಟಿತು. ಅಗಸ್ಟ ತಿಂಗಳ  17 ರ ಮುಂಜಾನೆ ಪ್ರಾತಃಕಾಲ ತರುವಾಗ ಆ ಮಹಾನ್ ದೇವತೆಯು ಬದುಕಿಗೆ ವಿಧಾಯವನ್ನು ಹೇಳಿದರು.ತರುವಾಯ ಹುಬ್ಬಳ್ಳಿ ಆಸ್ಫತ್ರೆಯಿಂದ ಧಾರವಾಡಕ್ಕೆ 17 ಆಗಸ್ಟ್ ರಂದು ಕರೆ ತರುವಾಗ ಆಕಾಶದಲ್ಲಿ ಪಂಚಗ್ರಹಗಳು ಕ್ಷಿತಿಜದ ಮೇಲೆ ಇದ್ದವು. ಒಳ್ಳೆಯ ಮೂಹೂರ್ತದಲ್ಲಿ ನಿಮ್ಮ ತಾಯಿ ಪ್ರಯಾಣ ಮಾಡಿದ್ದಾಳೆ ಎಂದು ಡಾ, ವರಕವಿ ಬೇಂದ್ರೆಯವರು ಮಕ್ಕಳಿಗೆ ಸಾಂತ್ವನ ಹೇಳುತ್ತಿದ್ದರು.

  ಯಾವಾಗಲೂ ಭಾಷಣ, ವಾಚನ, ಎನ್ನುವ ವರಕವಿ ಡಾ, ದ.ರಾ. ಬೇಂದ್ರೆಯವರ ಮನೆಯೇ ಆಸ್ಪತ್ರೆಯು, ಮಕ್ಕಳಿಗೆ ಸಾಂತ್ವನ ಹೇಳುತ್ತ 1966 ರ ಆಗಸ್ಟ ತಿಂಗಳ ಮೊದಲ ಹಾಗೂ ಎರಡನೇ ವಾರಗಳು ಮನೆಯಲ್ಲಿಯೇ ಕುಳಿತು ಧರ್ಮಪತ್ನಿ ಲಕ್ಷ್ಮೀಬಾಯಿಯವರ ಆರೈಕೆ ಮಾಡಿದರು. ಪ್ರಜ್ಞೆ ತಪ್ಪಿದ ಅವಸ್ಥೆಯಲ್ಲಿ ಆಸ್ಪತ್ರೆಯಲ್ಲಿದ್ದ ಶ್ರೀಮತಿ ಲಕ್ಷ್ಮೀಬಾಯಿಯವರ  ನೋಡಿ ಸಂಕಟ ಪಟ್ಟರು. ಪತ್ನಿಯ ಮರಣದ ಹತ್ತು ದಿವಸದಲ್ಲಿ ಮರಾಠಿ ಪ್ರೇಮ ಗೀತೆಯನ್ನು ಬರೆದರು ಪುತ್ರರಾದ ಪಾಂಡುರಂಗ ಅವರು ಎಲ್ಲ ಗೀತೆಗಳನ್ನು ಹಾಡಿದರು.

   ಲಕ್ಷ್ಮೀಬಾಯಿ ಮತ್ತು ಅಂಬಿಕಾತನಯದತ್ತರು ವೀಣೆಯ ಪ್ರಿಯರು ಆಗಿದ್ದರು ಈಗ ಆ ಮನೆಯ ವೀಣೆ ನುಡಿಸದೇ ಬರಿದೇ ಕುಳಿತಿರುವುದು.ಆ ವೀಣೆಯ ಕುರಿತಾಗಿ ಈ ಮಹಾನ್ ಕವಿಗಳು ಒಂದು ಮರಾಠಿ ಹಾಡನ್ನು ರಚನೆ ಮಾಡಿದರು.

,, ಮಾತಾಡು ಮಾತಾಡು ವೀಣೆ ನೀ
ಮಾತಾಡಲೋಲ್ಲೇಕೆ ವೀಣೆ ನೀ.

,,ಬಿಚ್ಚು ಮೌನದ ಗಂಟು ಚಿಗುರಲಿ ಆ ನಂಟು,,

,,ಹೇಳು ಕಾರಣವನ್ನು ನುಡಿಯದಿರ ಲೇಕೆ,,

,,ತಪ್ಪಿದೆನೆ ತೊದಲಿದೆನೆ ನಾ ತಂತಿ ನುಡಿಸುವಲ್ಲಿ,,

,,ತೂಗಾಡುತಿರುವೆ ನೀ
ಮೌನದ ತೊಟ್ಟಿಲಲ್ಲಿ,,

  ಹೀಗೆ ಪ್ರತಿ ಹಂತದ ಪ್ರತಿ ವಿಚಾರ ಕುರಿತು ಅರ್ಥವತ್ತಾದ ಹಾಡು ಇದು ಪತ್ನಿಯ ಪ್ರಾಣ ಪಕ್ಷಿ ಹಾರಿದರೂ ಎರಡು ತಾಸುಗಳ ಕಾಲ ಮಕ್ಕಳನ್ನು ಜೊತೆಗೆ ಕೂಡ್ರಿಸಿಕೊಂಡು ದೇವ ನಾಮಾವಳಿಯಾದ ಸಾವಿತ್ರಿ ಮತ್ತು ಸೌಂಧರ್ಯ ಲಹರಿ ಪಠಣವನ್ನು ಮಾಡಿದರು. ಇದು ರೌದ್ರ ಶಾಂತ ದ್ರಶ್ಯವಾಗಿತ್ತು. ಅಲ್ಲಿಗೆ ಆ ಸಖ.ಸಖಿಯ ಯೋಗ ಸಾಧನೆಯು ಅವರ ಹೃದಯದಲ್ಲಿ ಅದುಮಿಟ್ಟು ಅವಳು ದೃಷ್ಟಿಯಿಂದ ದೂರವಷ್ಟೇ,ನನ್ನ ಪ್ರತಿ ಹೆಜ್ಜೆಗೆ ಸಹಾಯಕ್ಕೆ ಧಾವಿಸುತ್ತಾಳೆ ಎನ್ನುತ್ತಿದ್ದರು.

   ವರಕವಿ ಡಾ, ದ.ರಾ. ಬೇಂದ್ರೆ ಇವರ ಕುಟುಂಬದಲ್ಲಿ ಈಗ ಬದುಕಿ ಇರುವಂತಹ ವಂಶಸ್ಥರೆಂದರೆ….
        ಮಗಳು ಮಂಗಲಾ…ಮಕ್ಕಳಲ್ಲಿ ಬದುಕಿದ್ದಾರೆ.

ಇನ್ನು ವರಕವಿ ಡಾ. ದ.ರಾ. ಬೇಂದ್ರೆಯವರ ಮೊಮ್ಮಕ್ಕಳಾಗಿ

1.ವಾಮನ ಬೇಂದ್ರೆ ಅವರ              
     ಒಬ್ಬರು ಮಗಳು…ವೈಖರಿ ವಾಮನ ಬೇಂದ್ರೆ.

2.ಪಾಂಡುರಂಗ ಬೇಂದ್ರೆಯವರ
     ಮೂವರು ಮಕ್ಕಳು…
1,ಪ್ರತಿಮಾ ಪಾಂಡುರಂಗ ಬೇಂದ್ರೆ.
2, ಪ್ರಭಾಕರ ಪಾಂಡುರಂಗ ಬೇಂದ್ರೆ.
3,ಪುನರ್ವಸು ಪಾಂಡುರಂಗ ಬೇಂದ್ರೆ.

3. ಮಂಗಲಾರವರ..
     ಮೂವರು ಮಕ್ಕಳು..
1, ಸ್ಮಿತಾ ಪ್ರಭಾಕರ ಕುಲಕರ್ಣಿ
2,ಮಿಲಿಂದ ಪ್ರಭಾಕರ ಕುಲಕರ್ಣಿ
3,ಮಹಾoದ ಪ್ರಭಾಕರ ಕುಲಕರ್ಣಿ.

   ಒಟ್ಟು ಒಬ್ಬಳು ಮಗಳು ಮತ್ತು 7 ಜನರು ಮೊಮ್ಮಕ್ಕಳು ಈ ಮಹಾ ಚೇತನ ಇವರ ವಂಶಸ್ಥರಾಗಿ ಇದ್ದಾರೆ ಎಂಬುದು ತುಂಬಾ ಸಂತೋಷಕರ.

   ಇನ್ನು ವರಕವಿ ಡಾ. ದ.ರಾ. ಬೇಂದ್ರೆಯವರು  ದೇಶದ ಅತ್ಯುನ್ನತವಾದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು,ಇದಲ್ಲದೇ ಸಾವಿರಾರು ಪ್ರಶಸ್ತಿಗಳನ್ನು ಪಡೆದ ಮಹಾನ್ ಹಿರಿಯ ಚೇತರು ಇವರ ಗಳಿಕೆ ಇಲ್ಲ ಪ್ರಶಸ್ತಿಗಳು, ಫೋಟೋಗಳನ್ನು  ಬೇಂದ್ರೆ ಭವನಕ್ಕೆ ನೀಡಿರುತ್ತಾರೆ. ಬೇಂದ್ರೆ ಭವನವನ್ನು ಸರಕಾರವು ನೋಡಿಕೊಳ್ಳುತ್ತಿದೆ. ಈ ಎಲ್ಲ ವಿಷಯಾoಶಗಳು ವಾಮನ ಬೇಂದ್ರೆಯವರ ಲೇಖನಿಯಿಂದ ದೊರೆತರೆ ಇನ್ನುಳಿದ ಹಲವಾರು ಅಂಶಗಳು ಪಾಂಡುರಂಗ ಬೇಂದ್ರೆಯವರ ಸುಪುತ್ರಿಯಾದ ಪುನರ್ವಸು ರವರಿಂದ  ಪಡೆಯಲಾಯಿತು.
ಅದ್ಬುತವಾದ ಎಲ್ಲ ರೀತಿಯ ಮಾಹಿತಿಗಳನ್ನು ನೀಡಿ ನನ್ನ ಬರೆಯುವ ಕೈಗೆ ಅತ್ಯoತ ಸಹಕಾರ ನೀಡಿರುವ ಸಹೋದರಿ ಪುನರ್ವಸು ಪಾಂಡುರಂಗ ಬೇಂದ್ರೆಯವರಿಗೆ ಈ ಸಂದರ್ಭದಲ್ಲಿ  ನನ್ನ ಮನ ತುಂಬಿದ ಧನ್ಯವಾದವನ್ನು ಹೃದಯ ಪೂರ್ವಕ ಸಲ್ಲಿಸುತ್ತಿದ್ದೇನೆ.

      ಈ ವರಕವಿ ಕುಟುಂಬದ ಮೇರುಪರ್ವತವಾದ ವರಕವಿ ಡಾ, ದ.ರಾ.ಬೇಂದ್ರೆ ಇವರ ಏಳು ಬೀಳುಗಳಲ್ಲಿ ಧರ್ಮ ಪತ್ನಿಯಾದ ಶ್ರೀಮತಿ ಲಕ್ಷ್ಮೀ ಬಾಯಿಯವರ ಪಾತ್ರವು ಎಷ್ಟೊಂದು ಮುಖ್ಯವಿತ್ತು. ಎಷ್ಟೊಂದು ಕಷ್ಟ,ನಷ್ಟ,
ಸುಖಗಳನ್ನು ಬೇವು ಬೆಲ್ಲದ ಹಾಗೆ ಸವಿದಿದ್ದಾರೆ. ಎಂಬುದನ್ನು ಮೇಲಿನ ಎಲ್ಲ ಅಂಶಗಳಿಂದ ಊಹಿಸ ಬಹುದಲ್ಲವೇ. ಇದರಿಂದ ಕಂಡು
ಬರುವುದೇನೆಂದರೆ ಈ ಮಹಾನ್ ಚೇತನರು ದೇಶದ ಉದ್ದಗಲಕ್ಕೂ ಆಲದ ಮರದಂತೆ ವ್ಯಾಪಿಸಿ ತಮ್ಮ ಹಿರಿಮೆಯನ್ನು ಮೆರೆಸಿ ಕೊಳ್ಳುವಾಗ ಅವರ ಹಿಂದಿನ ಶಕ್ತಿ ಧರ್ಮಪತ್ನಿ ಶ್ರೀಮತಿ
ಲಕ್ಷ್ಮೀಬಾಯಿ ಬೇಂದ್ರೆ ಎಂಬುದು ಕನ್ನಡಿ ಹಿಡಿದಂತೆ ಕಾಣುವದು.ಅಲ್ಲದೆ ನನಗೆ ಈ ಕವಿ ಕುಟುಂಬದ ಕುರಿತು ಬರೆಯಲು ಸಹಕಾರ ನೀಡಿದ ಮೊಮ್ಮಗಳಾದ ಪುನರ್ವಸುರವರಿಗೆ ಇನ್ನೊಮ್ಮೆ ನನ್ನ ಆತ್ಮೀಯ ಪ್ರಣಾಮಗಳನ್ನು ಹೇಳುತ್ತಾ ನನ್ನ ಅನಿಸಿಕೆಯ ಈ ಲೇಖನಕ್ಕೆ ಅಂತ್ಯವಿರಾಮ ನೀಡುವೆನು.


ಶ್ರೀಮತಿ ರಾಜೇಶ್ವರಿ ಎಸ್. ಹೆಗಡೆ

2 thoughts on “ವರಕವಿ ಡಾ, ದ.ರಾ. ಬೇಂದ್ರೆಯವರ ಪತ್ನಿ ಶ್ರೀಮತಿ ಲಕ್ಶ್ಮೀಬಾಯಿ ಬೇಂದ್ರೆ ಕುರಿತು ಪುಟ್ಟ ಲೇಖನ…ರಾಜೇಶ್ವರಿ ಎಸ್. ಹೆಗಡೆ

  1. ನಾನು ವಿದ್ಯಾರ್ಥಿಯಾಗಿದ್ದಾಗ, ಬೆಳಗಾವಿಯ ಜವಾಹರಲಾಲ್ ನೆಹರು ಮೆಡಿಕಲ್ಲ ಕಾಲೇಜಿನ ಕನ್ನಡ ಬಳಗದವರು ಒಂದು ಸಮಾರಂಭಕ್ಕೆ ಪೂಜ್ಯ ದ.ರಾ.ಬೇಂದ್ರೆಯವರನ್ನುಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಧೀಮಂತ ಮಹಾಕವಿಯನ್ನು ನೋಡುವ ಸದವಕಾಶ ನನಗೆ ದೊರೆತಿತ್ತು.ಬಿಳಿಯ ಶರ್ಟು,ಧೋತರ,ಟೊಪ್ಪಿಗೆ ಹಾಗೂ ಕೋಟನ್ನು ಧರಿಸಿದ್ದ ಅವರನ್ನು ನೋಡಿ ನನಗೆ ಧನ್ಯತಾ ಭಾವ ಮೂಡಿತು. ಮೃತ ಮಗುವನ್ನು ಮುಂದಿಟ್ಟುಕೊಂಡು ಚಿಂತಾಕ್ರಾಂತಳಾಗಿ ತಮ್ಮತ್ತ ನೋಡುತ್ತಿದ್ದ ಪತ್ನಿಯನ್ನು ನೋಡಿದಾಗ ಬೇಂದ್ರೆಯವರ ಕವಿ ಮನಸ್ಸು ಜಾಗೃತವಾಗಿ ಮೂಡಿದ ಹಾಡೇ ” ನೀ ಹಿಂಗ ನೋಡಬ್ಯಾಡ ನನ್ನ…………..”. ಮಗುವನ್ನು ಕಳೆದುಕೊಂಡು ಅಸಹಾಯರಾದ ದಂಪತಿಗಳ ನೋವು ಈ ಹಾಡಿನಲ್ಲಿ ಬಿಂಬಿತವಾಗಿದೆ. “ಮುಗಿಲ ಮಾರಿಗಿ ರಾಗ ರತಿಯ ನಂಜ ಏರಿತ್ತ, ಆಗ ಸಂಜೆ ಆಗಿತ್ತ…….” ಹಾಡು ಕೂಡ ಜನಪ್ರಿಯ.ಸಂಗೀತಾ ಕಟ್ಟಿ ಮೆಡಮ್ಮರವರು ಈ ಹಾಡನ್ನು ಸುಂದರವಾಗಿ ಹಾಡಿ ಆ ಹಾಡಿಗೆ ಹೆಚ್ಚಿನ ಮೆರುಗನ್ನು ನೀಡಿದ್ದಾರೆ.ಬೇಂದ್ರೆಯವರ ಮಾತೃಭಾಷೆ ಮರಾಠಿ ಆದರೂ ಕೂಡಾ ಕನ್ನಡದಲ್ಲಿ ಜನಪದ ಶೈಲಿಯಲ್ಲಿ ಇಂತಹ ಅಮೋಘ ಹಾಡುಗಳನ್ನು ರಚಿಸಿದ ಆ ಮಹಾಕವಿಗೆ ಹಾಗೂ ಅವರ ಬಾಳಸಂಗಾತಿ ಲಕ್ಷ್ಮೀಬಾಯಿಯವರಿಗೆ ನನ್ನ ನಮನಗಳು.

Leave a Reply

Back To Top