ಶಿವಲೀಲಾ ಹುಣಸಗಿ-ಎಲ್ಲ ಕಾಲಕ್ಕೂ ಕಾಡುವ ಜಿ.ಎಸ್ ಶಿವರುದ್ರಪ್ಪ ಅವರ ಕವಿತೆಗಳು.

ಸಂಗಾತಿ ವಾರ್ಷಿಕ ವಿಶೇಷಾಂಕ

ಶಿವಲೀಲಾ ಹುಣಸಗಿ-

ಎಲ್ಲ ಕಾಲಕ್ಕೂ ಕಾಡುವ

ಜಿ.ಎಸ್ ಶಿವರುದ್ರಪ್ಪ ಅವರ ಕವಿತೆಗಳು.

ಜೀವ ಜಗತ್ತಿನ ಪ್ರತಿಯೊಂದು ಜೀವಿಗೂ ಪರಿಸರದ ಸಾಮ್ಯತೆಯನ್ನು ಹಾಗೂ ಕಠೋರತೆಯನ್ನು  ಪ್ರಸ್ತುತ ಪಡಿಸುವ ಮೃದು ಹೃದಯದೊಳಗಿನ ಸಂವೇದನೆಯ ಪ್ರೀತಿಗೆ ನಮ್ಮೆಲ್ಲರ ನೆಚ್ಚಿನ ಜಿ.ಎಸ್.ಎಸ್ ಎಂದೇ ಪ್ರಖ್ಯಾತರಾದ ಭಾವಕವಿಯ ಕವಿತೆಗಳ ‌ಸಾರ ಮನಸ್ಸಲ್ಲಿ ಇಂಗಿಸಿದಷ್ಟು ಒಳಧ್ವನಿ ಪ್ರತಿಧ್ವನಿಯಾಗಿ ಪ್ರತಿನಿಧಿಸುತ್ತದೆ. ಎಷ್ಟು ಬಾರಿ ಗೀತೆಗಳನ್ನು ಮೆಲುಕು ಹಾಕಿದಷ್ಟು ಆದ್ರಗೊಳ್ಳುವ ಕಂಗಳಿಗೆ ಅದೇನೊ ಸೆಳೆತ. ಕರುನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಜಿ.ಎಸ್.ಶಿವರುದ್ರಪ್ಪನವರು ಒಬ್ಬರು. ಅದರಲ್ಲಿ ನಾವೆಲ್ಲ ಕನ್ನಡಿಗರು ಹೆಮ್ಮೆಪಡುವಂತ ಸಂಗತಿಯೆಂದರೆ ಕೇವಲ ಕವಿಯಾಗದೆ, ವಿಮರ್ಶಕ,ಸಂಶೋಧಕ,ನಾಟಕಕಾರ ವೃತ್ತಿಯಲ್ಲಿ ಡಾ.ಶಿವರುದ್ರಪ್ಪ ಅವರು ೧೯೪೯ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆಯ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಪ್ರಾಧ್ಯಾಪಕರಾಗಿ ನೆಲೆನಿಂತ ವ್ಯಕ್ತಿ. ಗೋವಿಂದ ಪೈ,ರಾಷ್ಟಕವಿ ಕುವೆಂಪು ರವರ ನಂತರ” ರಾಷ್ಟ್ರಕವಿ” ಎಂಬ ಗೌರವದಿಂದ ಪುರಸ್ಕೃತರಾದವರು.ಇಂತಹ ಮಹಾನ್ ಪ್ರತಿಭೆ ಜನಿಸಿದ್ದು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೭-೨-೧೯೨೬ರಲ್ಲಿ ಜನಿಸಿದರು.ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ.ನವೆಂಬರ್ ೧,೨೦೦೬ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು  “ರಾಷ್ಟ್ರಕವಿ” ಎಂದು ಘೋಷಿಸಲಾಯಿತು ಮತ್ತು ಸಮನ್ವಯ ಕವಿಯೆಂಬ ಬಿರುದು ಕೂಡ ಇದೆ.

ಎಲ್ಲ ಕಾಲಕ್ಕೂ ಕಾಡುವ ಜಿ.ಎಸ್ ಶಿವರುದ್ರಪ್ಪ ಅವರ ಕವಿತೆಗಳು ಮನೋಜ್ಞವಾಗಿ ಮನದಾಳದಲ್ಲಿ ನೆಲೆ ನಿಲ್ಲುವಂತೆ ಆಗಾಗ ಕಣ್ಣಂಚಿನ ಪರದೆಯಂತೆ ಹಾದು ಹೋಗುತ್ತವೆ…ಅಂತಹ ಕೆಲವು ಕವಿತೆಗಳು ನನ್ನ ಸದಾ ಕಾಡಿದ್ದಿದೆ.ಅವುಗಳ ಒಳಚಿಂತನೆಗಳು ನನ್ನ ಸದಾ ಲವಲವಿಕೆಯಿಂದ ಇಡಲು ಸಾಧ್ಯವಾಗಿವೆ.ಅಂತಹ ಅನುಭವ ತಮಗೂ ಆಗಿರಬಹುದು..ಮೇಧಾವಿಯ ಕವಿತೆಗಳನ್ನು ವಿಶ್ಲೇಷಣೆಯ ಮಾಡುವ ಅರ್ಹತೆ ನನಗಿಲ್ಲ.ನಾನು ತಿಳಿದಷ್ಟು ನನ್ನಂತರಂಗ ಅನುಭವಿಸಿದಷ್ಟು ಮಾತ್ರ ಪ್ರಸ್ತುತ ಮಾಡುವ ಪುಟ್ಟ ಪ್ರಯತ್ನ… ಜ್ಞಾನ ಸಾಗರದ ಒಂದು ಹನಿಯ ಮೇಲೆ…..ನನ್ನಾನುಭವ.

# “ಮಬ್ಬು ಕವಿದರೇನು” ಎಂಬ ಕವಿತೆಯ ಸಾಲು ಮಬ್ಬಾದ ಮನಕೆ ಚಿತೆಯ ಜ್ವಾಲೆಯಂತೆ ಜ್ವಲಿಸುವುದಂತು ದಿಟ.ಕತ್ತಲೆ ದಾಟಿ ಬೆಳಕು ಬರುವುದು ಎಷ್ಟು ಸತ್ಯವೋ ಅಷ್ಟೇ ಶಶಿರದಿಂದ ಚೈತ್ರಕೆ  ಚೈತನ್ಯ ತುಂಬಿಕೊಳ್ಳುತ ಹಳೆಯದನ್ನು ಕಳಚುತ್ತ ಹೊಸದನ್ನು ಚಿಂತಿಸುವುದನ್ನು ಪ್ರಕೃತಿ ನೋಡಿ ಕಲಿಯುವುದು ಸೂಕ್ತ ಎನಿಸಿತು.

ಮಬ್ಬು ಕವಿದರೇನು
ನಿನ್ನ ಹಬ್ಬಿದಿರುಳ ದಾರಿಗೆ
ನಡೆ ಮುಂದಕೆ ಧೈರ್ಯದಿಂದ
ಅರುಣೋದಯ ತೀರಕೆ

ಹಳೆ ನೆನಪುಗಳುದುರಲಿ ಬಿಡು
ಬೀಸುವ ಚಳಿ ಗಾಳಿಗೆ
ತರಗೆಲೆಗಳ ಚಿತೆಯುರಿಯಲಿ
ಚೈತ್ರೋದಯ ಜ್ವಾಲೆಗೆ

ಹಗಲಿರುಳಿನ ಕುದುರೆಗಳನು
ಹೂಡಿದ ರಥ ಸಾಗಿದೆ
ಯುಗ ಯುಗಗಳ ಹಾದಿಯಲ್ಲಿ
ಋತು ಚಕ್ರಗಳುರುಳಿವೆ

ಅಬ್ಬಾ! ಎಂತಹ ಧೈರ್ಯದ ಸಾಲುಗಳು,ಅಸಮತೋಲನ ಸ್ಥಿತಿ ಎದುರಾದರೂ, ಹತಾಶೆಯಿಂದ ಬಳಲಿದ ಹೃದಯ ಈ ಕವನದ ಸಾರಾಂಶವನ್ನು ಸಮನ್ವಯಗೊಳಿಸಿದಷ್ಟು…ಓಗೊಟ್ಟು ಹೇಳುವ ಮಾತೆ
“ಧೈರ್ಯಂ ಸರ್ವತ್ರ ಸಾಧನಂ” ಎಂಬಂತೆ ಗುರಿ ತಲುಪುವ ವೇಳೆಗೆ ಏನೆಲ್ಲ ಘಟನೆಗಳು ಘಟಿಸಿದರೂ ಅವು ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ ಎಂಬ ಕಟು ವಾಸ್ತವ ಅರ್ಥೈಸಿಕೊಳ್ಳಲು ಇದಕ್ಕಿಂತ ಬೇರೆನೂ ಬೇಡ‌…ಪ್ರಕೃತಿಯಲ್ಲಿ ಎಲ್ಲವೂ ಋತುಮಾನಗಳಿಗೆ ಅನುಗುಣವಾಗಿ ಬದಲಾಗುವ ಚಿತ್ರಣದಂತೆ ನಮ್ಮ ಬದುಕು ನಿಂತಿದೆ.

#  ಕವಿ ಜಿ.ಎಸ್.ಎಸ್ ರವರ ಕವಿತೆಗಳಲ್ಲಿ ಮನತಟ್ಟಿದ ಕವಿತೆ

 “ಸ್ತ್ರೀ ಎಂದರೆ ಅಷ್ಟೇ ಸಾಕೆ?”

ಆಕಾಶaದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ 
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ 
ಸ್ತ್ರೀ ಎಂದರೆ ಅಷ್ಟೇ ಸಾಕೆ || ಪ ||

ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ 
ಬಯಲ ಹಸಿರ ನಗಿಸಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ || ೧ ||

ಮನುಷ್ಯ ಹುಟ್ಟಿನಿಂದ ಸಾಯುವ ತನಕ ತನ್ನೆಲ್ಲ ಬಿಗುಮಾನಗಳ,ಅಹಂ‌ನ ತಲೆದಂಡವಾಗಿ ಹೆಣ್ಣನ್ನು ಬಳಸಿಕೊಂಡು, ಅವಳಿಗೊಂದು ಸ್ಥಾನಮಾನ ನೀಡಬೇಕೆಂದಾಗ ನೀ ಬರಿ ಹೆಣ್ಣು,
ನಿನಗ್ಯಾವ ಅಧಿಕಾರವು ಇಲ್ಲವೆಂದು ಸಾರುವ ಅನೇಕ ಮನಸ್ಥಿತಿಗಳಿಗೆ ಈ ಕವಿತತೊಟ್ಟಿಲಲ್ಲಿ ಎಚ್ಚರಿಕೆಯ ಘಂಟೆಯಾಗಿ ಪ್ರತಿಧ್ವನಿಸುತ್ತವೆ.
ಸ್ತ್ರೀ  ಎಂದರೆ ಆಕಾಶದ ಸೂರ್ಯ,ಚಂದ್ರ,ತಾರೆಗಳನ್ನು  ತನ್ನ ಎದೆಯೆಂಬ ತೊಟ್ಟಿಲಲ್ಲಿ ಮಲಗಿರುವ ಕಂದನಿಗೆ ಎದೆಹಾಲು ನೀಡಿ ಜ್ವಾಕ್ಯಾಗಿ ಕಾಪಿಡುತ, ತೂಗುವ ಕೈ ತಾಯಿಯದು.ಸಂಬಂಧಗಳನ್ನು ಬೆಸೆಯುವಲ್ಲಿ,ಹೊಸೆಯುವಲ್ಲಿ ಕರುಳ ಬಂಧನದ ಕೊಂಡಿ ಹೆಣ್ಣು ಎಂಬ ಸತ್ಯ ಮರೆಯುವಂತಿಲ್ಲ.

# ಕವಿ ಜಿ.ಎಸ್.ಎಸ್ ರವರ ಇನ್ನೊಂದು ಕವಿತೆ ನವನವೀನ ಉತ್ಸುಕಕ್ಕೆ ಈ ಕವಿತೆ ಬೆಳಕ ಚೆಲ್ಲಿದೆ.”ನವೋದಯದ ಕಿರಣಲೀಲೆ “

ನವೋದಯದ ಕಿರಣಲ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.
ಹಿರಿಯರಲ್ಲಿ ಕಿರಿಯರಲ್ಲಿ
ಹಳಬರಲ್ಲಿ ಹೊಸಬರಲ್ಲಿ
ನವಚೇತನದುತ್ಸಾಹ
ಚಿಲುಮೆಚಿಮ್ಮುವೆದೆಗಳಲ್ಲಿ
ಶುಭೋದಯವ ತೆರೆದಿದೆ

ಮನುಷ್ಯನಾದವನು ಕೇವಲ ಬಾವಿ ಕಪ್ಪೆಯಂತೆ ತನ್ನ ವಿಚಾರಗಳನ್ನು ಹರಿಬಿಟ್ಟು,ಬಾಹ್ಯ ಜಗತ್ತಿನಲ್ಲಿ ಏನೆಲ್ಲ ಘಟಿಸುತ್ತಿದೆ ಎಂಬ ಅಂಶವನ್ನು ಗಮನಿಸದೇ ಬದುಕುವ ಕಲೆ ಇದ್ದು ಸತ್ತಂತೆ.ನವಜಾತ ಶಿಶುವಿನಂತೆ ಅರಿಯದ ಅನೇಕ ವಿಸ್ಮಯಗಳನ್ನು ಕೌತುಕದಿಂದ ನೋಡುವ ಕಂಗಳಿಗೆ ವಿಶಾಲವಾದ ಸಾಗರ,ಆಕಾಶ,ಭೂಮಿ ಎಲ್ಲವೂ ಹೊಸ ಸೃಷ್ಟಿಯನ್ನು ತೃಪ್ತಿಕರವಾಗಿ ಗಮನಿಸುತ್ತ ನವೋದಯದ ಕಿರಣ ಲೀಲೆ ಅನುಭವಿಸಿದ್ದರೆ ಎಷ್ಟು ಚೆನ್ನ? ಹಿರಿಯರಾದವರು ಕಿರಿಯರಾಗಿಯೇ ಜೀವನ ಕಂಡಿದ್ದು,ಹಳಬ,ಹೊಸಬ ಎಂಬ ಬೇಧ ಭಾವ ತೋರದೆ ಎಲ್ಲರಲ್ಲಿ  ಜೀವನೋತ್ಸಾಹದ ಸೆಲೆ ಪ್ರತಿ ಕನ್ನಡ ನೆಲದ ಕನ್ನಡಿಗನಲ್ಲಿ ಜಾಗೃತವಾದಷ್ಟು ಹೊಸ ಲೋಕ ಸೃಷ್ಟಿಯಾದಂತೆ ಎಂಬ ಅಂಶ ನನಗೆ ಹೆಚ್ಚು ಅಪ್ಯಾಯಮಾನವಾಗಿದೆ.

# ಸಮನ್ವಯ ಕವಿಯೆಂದೆ ಗೌರವ ಪಡೆದ ಡಾ.ಜಿ.ಎಸ್.ಎಸ್.ಎಸ್.ರವರು ಮನತುಂಬಿ ಹಾಡುವ ಕೋಗಿಲೆಯಂತೆ ಕಾರಣ ಅವರ ಅಂತರಾತ್ಮ ಸ್ವಚ್ಚಂದತೆಯ ಸಾಗರ.ಹಾಡುವ ಹಕ್ಕಿಗೆ ಬಂಧನದ ಹಂಗಿಲ್ಲ ಎಂಬುದನು ಪ್ರಕೃತಿ ನಮಗೆ ನೀಡಿದ ವರದಾನ.ಈ ಕವಿತೆಯು ಮನದ ವಿಷಾದಗಳನ್ನು ನಿರ್ಭಿಡೆಯಿಂದ ಹೊರಗೆಡುವ ಅಂಶ ಇಷ್ಟವಾದುದು.

ಎದೆತುಂಬಿ ಹಾಡಿದೆನು ಅಂದು ನಾನು,
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು 
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ,
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.

ಇದೊಂದು ಕವಿತೆ ಯಾವಾಗಲೂ ನನ್ನ ಮನವನ್ನು ತಟ್ಟಿದೆ ಕಾರಣ ನಾವು ಹಾಡುವುದು ಅದು ನಮ್ಮ ಸಂತೋಷಕ್ಕೆ,ಅತಿಯಾದ ನೋವು ಕಾಡಿದಾಗ ಮನತಣಿಸಲು ಸಹಕಾರಿಯೆಂದರೆ ಹಾಡು.ಅದು ಕರ್ಕಶವೋ
ಮಧುರವೋ,ಕೋಗಿಲೆಯ ಕಂಠವೋ ಒಟ್ನಲ್ಲಿ ಹಾಡು ನನ್ನ ಸಮಾಧಾನ ಪಡಿಸಿದರೆ ಸಾಕೆಂಬ ತುಡಿತ.ನಮ್ಮ ಹಾಡು ನಮ್ಮದೆಂಬ ದಿಟ್ಟನಿಲುವಿನ ಬಿಂಬವಾಗಿದೆ.ಎಷ್ಟೋ ಸಲ ಹಾಡು ಕೇಳುವವರಿಲ್ಲದೆ ಸೊರಗಬಹುದು,ಆದರೂ ಹಾಡುವುದನು ನಿಲ್ಲಿಸದೆ ಪೂರ್ಣಗೊಳಿಸುವ   ತಾಕತ್ತು ಹಾಡುಗಾರನಿಗಿರಬೇಕು.ಒಬ್ಬರಾದರೂ ಮೆಚ್ಚಿದರೆ ಅದುವೇ ಬಹುಮಾನ.ತಿರಸ್ಕರಿಸಿದರು ಭಯವಿಲ್ಲವೆಂಬ ಸ್ಪಷ್ಟ ನಿಲುವು.

# ಮಲ್ಲಿಗೆ ಕವಿ….ಡಾ.ಜಿ.ಎಸ್.ಎಸ್ ರವರ ಕವನದಲ್ಲಿ ಕವಿಯ ಭಾವ ಇಕ್ಕೆಲಗಳಲ್ಲಿ ಭ್ರಮಣ ರೂಪ ತಾಳಿದ್ದು ಮಲ್ಲಿಗೆಯ ಕಂಪ ಪಸರಿಸಿದಂತೆ.

ನೋಡು ಇದೋ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಇಷ್ಟು ಹಚ್ಚನೆ ಹಸುರ ಗಿಡದಿಂ-
ದೆಂತು ಮೂಡಿತೋ ಬೆಳ್ಳಗೆ !

ಕವಿಯ ಮನದಿಂದುಸಿ ಮೆಲ್ಲನೆ
ಅರಳಿ ಬರುವೊಲು ಕಲ್ಪನೆ,
ಎಂಥ ನವುರಿನ ಕುಶಲ ಕಲೆಯಿದು
ತನಗೆ ತಾನೇ ಮೂಡಿದೆ.

ಹರಿವ ಮನವನು ಹಿಡಿದು ಒಂದೆಡೆ
ನಿಲಿಸಿ ತೊಳೆದಿದೆ ಹೂವಿದು
ಚೆಲುವು ಬಾಳನು ಹಸುನುಗೊಳಿಸುವ
ಅಚ್ಚರಿಯ ಪರಿ ಎಂಥದು!

ಚಂಚಲವಾದ ಮನಸ್ಸು ಹತೋಟಿಗೆ ಬರುವುದು ಅಷಸುಲಭವಾದುದಲ್ಲ ಕಾರಣ ಹರಿವ ನೀರಿಗೆ ತಡಗೋಡೆ ಕಟ್ಡಬಹುದು.ಆದರೆ ಮನಸ್ಸಿಗೆ ತಡೆಗೋಡೆಯನ್ನು ಇದುವರೆಗೂ ನಿರ್ಮಿಸದೆ ಇದ್ದರೂ,ಮಲ್ಲಿಗೆಯ ಸುವಾಸನೆಯನ್ನು ಧಿಕ್ಕರಿಸಿ ಹೊರಹೋದವರು ಇದುವರೆಗೂ ಯಾರು ಇಲ್ಲ.ಮನಮೋಹಕ ಪುಷ್ಪ ಹೆಂಗಳೆಯರಷ್ಟೇ ಅಲ್ಲ ಹಸುಗೂಸು ಕೂಡ ಖುಷಿ ಪಡುವ ಹೂವಾಗಿದೆ.ಕವಿಯ ಮನ ಮಲ್ಲಿಗೆಯಂತೆ ಅರಳಿದ್ದೆ ಇದಕ್ಕೊಂದು ಅಂತರಭಾವ ಲೇಪಿಸಿದಂತೆ.

# ಈ ಕವಿತೆಯಂತೂ ಇಹಪರ ಲೋಕದ ಹಾಗೂ ಪ್ರಕೃತಿಯ ನಿಗೂಢತೆಯನ್ನು ಮಾರ್ಮಿವಾಗಿ ಬಿಂಬಿಸಿದೆ.

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ ಕಡಲೊಳು
ಕೂಡಬಲ್ಲೆನೆ ಒಂದು ದಿನ || 

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಛಿದ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ || 

ಕವಿತೆಯ ಸಾಲುಗಳು ನಮ್ಮೆಲ್ಲರ ಬದುಕಿನಲ್ಲಿ ಏರುಬೀಳುಗಳ ನಡುವೆ, ಧಿಕ್ಕರಿಸಿದವರ ಎದೆಗುಂಟ ಸೆಣಸದೆ,ಕಡಲಿನಂತೆ ಆಳ ಹಾಗೂ ವಿಸ್ತಾರವಾಗಿ ಹರಡಿರುವ ನದಿಯ ಒಳಹರಿವುಗಳಂತೆ ನಮ್ಮ ಬದುಕು.
ಏಕತಾನತೆಯ ಪರಿಕಲ್ಪನೆಯನ್ನು ಜಗತ್ತು ಶೂನ್ಯ. ನಾನಿದ್ದರೆ ಮಾತ್ರ ಎಲ್ಲ,ನಾನಿಲ್ಲದಿರೆ ಎಲ್ಲವೂ ನಿರಾಕಾರ.ಕಡಲಿನ ಅಲೆಗಳಂತೆ ಬಂದು ಹೋಗು ಕಷ್ಟಕಾರ್ಪಣ್ಯಗಳು ಮುಕ್ಕಿಯತ್ತ ಕೊಂಡೊಯ್ಯಬಹುದೆಂಬ ನಿರೀಕ್ಷೆ….. ಎಂತಹ ಪರಿಕಲ್ಪನೆ ಕನ್ನಡ ಸಾರಸ್ವತ ಪ್ರಪಂಚಕ್ಕೆ ಅಧ್ಬುತ ಕೊಡುಗೆ ನೀಡಿದ ಕವಿ ಡಾ.ಜಿ.ಎಸ್.ಎಸ್ ನ್ನು ನೆನೆದಷ್ಟು ಚೈತನ್ಯ.

# ಕವಿ ಡಾ.ಜಿ.ಎಸ್.ಎಸ್.ರವರ ಚಿಂತನೆ ಆಧ್ಯಾತ್ಮಿಕ,ಪ್ರೀತಿ ಅಷ್ಟೇ ಅಲ್ಲ,ಲೌಕಿಕ ಜಗತ್ತಿನಲ್ಲಿ ನಡೆಯುತ್ತಿರುವ ಅನಾಹುತಳ ಬಗ್ಗೆ ಬೆಳಕಚೆಲ್ಲುವ ಈ ಕವಿತೆ ಮಾರ್ಮಿಕವಾದುದು.

ಯಾವುದೀ ಪ್ರವಾಹವು?
ಮನೆಮನೆಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ
ಯಾವುದೀ ಪ್ರವಾಹವು?

ಗುಡಿ ಗೋಪುರ ಉರುಳುತಿವೆ,
ಹಳೆಯ ಪ್ರತಿಮೆಗಳು ತೇಲುತಿವೆ.
ದೀಪವಾರಿ, ತಂತಿ ಹರಿದು
ವಾದ್ಯವೃಂದ ನರಳುತಿದೆ.

ಇಂದು ಎಲ್ಲರೂ ಮುಖವಾಡ ತೊಟ್ಟು ಬದುಕುತ್ತಿದ್ದಾರೆ‌.ಕಾರಣ ಅವರಿಗೊಂದು ಅವಕಾಶ ಜೊತೆಗೆ ತಾನೊಬ್ಬನೇ ಎಲ್ಲ ಎಂಬ ಅಹಂ ಮನೆಮಾಡಿದ್ದರ ಪರಿಣಾಮ,ಸಶಕ್ತ ಮನೋಭಾವದ ಮನಸ್ಸುಗಳು ಬದುಕುವ ಕ್ರಮ ಮರೆತು ಸುಲಿಗೆ,ಅತ್ಯಾಚಾರ,ಕೋಮುಗಲಭೆಗಳಿಗೆ ತಮ್ಮನ್ನು ತಾವು ಪಳಗಿಸಿಕೊಂಡು ಬಿಟ್ಡಿರುವುದು ಕವಿಯ ಮನಸ್ಸಿಗೆ ಘಾಸಿ ಮಾಡಿದೆ.ಇಂತಹ ಸುನಾಮಿ,ಪ್ರವಾಹ ಎಲ್ಲಿಂದ ಬಂತು? ಮನುಷ್ಯ ಮನುಷ್ಯನನ್ನು ಕೀಳಾಗಿ ಕಾಣುವ ನಾನೇ ಸರ್ವಶ್ರೇಷ್ಠ ಎಂಬ ಅಮಲಿನಲಿ ಮರಣ ಹೋಮ ನಡೆಯುತ್ತಿರುವುದು ವಿಷಾದನಿಯ ಸಂಗತಿಯಾಗಿದೆ.ವಾಸ್ತವ ಚಿತ್ರಣ ಕಣ್ಣೇದುರು ಚಿತ್ರಿಸಲಾಗಿದೆ.

# ಮಂತ್ರ ಮುಗ್ಧಗೊಳಿಸುವ ಈ ಕವಿತೆಯ ಸಾಲುಗಳು ನಾವು ಜಗತ್ತಿನಲ್ಲಿ ಹೇಗಿರಬೇಕು ಮತ್ತು ಹೇಗಿದ್ದರೆ ಚೆನ್ನ ಎಂದು ಸಾರುವ ಸಾಲುಗಳನ್ನು ಕಟ್ಟಿಕೊಟ್ಟ ಡಾ.ಜಿ.ಎಸ್.ಎಸ್.ನಮ್ಮೊಳಗಿನ ವಿಷಬೀಜವ ಕಿತ್ತೊಗೆಯಲು ಕಟ್ಟಿದಂತಹ ಪದಗಳಾಗಿವೆ.

ಎಲ್ಲೋ ಹುಡುಕಿದೆ ಇಲ್ಲದ ದೇವರ
 ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ ||

ಎಲ್ಲಿದೆ ನಂದನ, ಎಲ್ಲಿದೆ ಬಂಧನ
ಎಲ್ಲಾ ಇದೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಿಗೆಗೆ ||

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕುದಿನದ ಈ ಬದುಕಿನಲಿ |

ನಾನು ಬದಲಾಗಬೇಕು,ನನ್ನೊಳಗಿನ ಅಸಹನೀಯ ಗುಣ ಬದಲಾಗಬೇಕು.ಮನುಷ್ಯತ್ವ ಮಾರಿಕೊಂಡು ಬದುಕಲು ಸಾಧ್ಯವಿಲ್ಲ.ಎಲ್ಲ ಸಂಬಂಧಗಳು ನಿಂತಿರುವುದು ಪ್ರಕೃತಿಯ ಮಡಿಲಲ್ಲಿ.
ನಮ್ಮನಮ್ಮಲ್ಲೇ ಬುಗಿಲೆದ್ದ ಅನುಮಾನಗಳನ್ನು ಕಿತ್ತೊಗೆದು ದೇವರು ನಮ್ಮೊಳಗಿನ ಮೌಡ್ಯತೆಗಳನ್ನು ಸಮಾಜದ ಮೇಲೆ ಬಿತ್ತದಿರಲಿ ಎಂಬ ಆಶಯ.ಇದ್ದಷ್ಟು ದಿನ ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬಂತೆ ಬದುಕಿದರೆ ಸಾಕು.

# ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?
ಇದನೊಂದನ್ನು ಅರ್ಥೈಸಿದರೆ ಸಾಕು ಜನ್ಮ ಸಾರ್ಥಕವಾಗುವುದು.

ಕೊನೆಯದಾಗಿ…ಡಾ.ಜಿ.ಎಸ್ ಶಿವರುದ್ರಪ್ಪನವರು ಹೆಸರಿಗೆ ತಕ್ಕಂತೆ ಒಬ್ಬ ಸಂವೇದನಾ ಶೀಲ ಮನೋಭಾವದ ಸೃಜನಶೀಲ ಕವಿ.ನಮ್ಮೆಲ್ಲರ
ಜೀವನದ ಮಜಲುಗಳನ್ನು ಯಥಾವತ್ತಾಗಿ ಕಟ್ಟಿಕೊಡುವಲ್ಲಿ ಸರ್ವಶ್ರೇಷ್ಠ ಕವಿಯೆಂದರೆ ತಪ್ಪಾಗಲಾರದು.ಒಬ್ಬ ಕವಿ ತಾನು ಅನುಭವಿಸಿದ್ದನ್ನು ವರ್ಣಿಸುವ ಕವಿತೆಗಳು ವ್ಯಕ್ತಿನಿಷ್ಠವಾಗಿ,ವಸ್ತು ಗಮನದಲ್ಲಿಟ್ಟುಕೊಂಡು ಬರೆದ ಕವಿತೆ ವಸ್ತು ನಿಷ್ಠವಾಗಿಯು ಹೊರಹೊಮ್ಮುವಲ್ಲಿ ಕವಿಯ ಸ್ವ ಅನುಭವ ಮತ್ತು ಇನ್ನೊಬ್ಬರ ನೋವು ನಲಿವು ನನ್ನದೆಂದು ಅನುಭವಿಸುವ ಮಾತೃ ಹೃದಯ ಹೊಂದಿದ ಕವಿ ಸರ್ವ ಕಾಲಕ್ಕೂ ಪೂಜ್ಯನೀಯ.


ಶಿವಲೀಲಾ ಹುಣಸಗಿ

9 thoughts on “ಶಿವಲೀಲಾ ಹುಣಸಗಿ-ಎಲ್ಲ ಕಾಲಕ್ಕೂ ಕಾಡುವ ಜಿ.ಎಸ್ ಶಿವರುದ್ರಪ್ಪ ಅವರ ಕವಿತೆಗಳು.

  1. ಎಲ್ಲ ಕಾಲಕ್ಕೂ ಕಾಡುವ ಜಿ.ಎಸ್.ಶಿವರುದ್ರಪ್ಪರವರ ಕವಿತೆಗಳು ಈ ಲೇಖನ ಓದಿದಾಗ ಅವರ ಕವಿತೆಗಳು ಮತ್ತೊಮ್ಮೆ ‌ಮೆಲುಕು ಹಾಕುವ ಅವಕಾಶ ಸಿಕ್ಕಿದ್ದು,ಹಾಗೆಯೇ ಒಬ್ಬ ವ್ಯಕ್ತಿ ತಾ ಬರೆದ ಬರಹಕ್ಕೆ ಅಂದರೆ ಕವಿತೆ,ಕಥೆ,ಚುಟುಕು ಹೀಗೆ ಯಾವುದೇ ಪ್ರಕಾರ ಗಳಿರಲಿ ಅದರಲ್ಲಿ ಗಟ್ಟಿತನವಿದ್ದರೆ ಅದು ಯಾವತ್ತೂ ಶಾಶ್ವತವಾಗಿ ಓದಗನಲ್ಲಿ ಮರೆಯಾಗದೆ ಹಾಗೆ ಉಳಿದುಬಿಡುತ್ತದೆ ಎಂಬುವುದಕ್ಕೆ ಈ ಲೇಖನವೇ ಸಾಕ್ಷಿ. ಉತ್ತಮವಾದ ಶೈಲಿಯಲ್ಲಿ ಲೇಖನ ಬರೆದು ಓದುಗರ ಮುಂದಿಟ್ಟ ತಮಗೆ ಅಭಿನಂದನೆಗಳು.ರಾಷ್ಟ್ರಕವಿಗಳಾದ ಜಿ.ಎಸ್.ಶಿವರುದ್ರಪ್ಪ ಅವರಿಗೂ ನನ್ನ ನಮನಗಳು.

    1. ಜಿ.ಎಸ್.ಎಸ್.ರವರ ಅನೇಕ ಮೆಚ್ಚಿನ ಸಾಲುಗಳನ್ನು ಇನ್ನೊಮ್ಮೆ ಮೆಲಕು ಹಾಕಿದಂತಾಯಿತು…ನಿಮ್ಮ ಸ್ಪಂದನೆಯೂ ಕೂಡ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ ಮೇಡಮ್….

    2. ಜಿ.ಎಸ್.ಎಸ್.ರವರ ಅನೇಕ ನೆಚ್ಚಿನ ಸಾಲುಗಳನ್ನು ಇನ್ನೊಮ್ಮೆ ಮೆಲುಕು ಹಾಕಿದಂತಾಯಿತು….ನಿಮ್ಮ ಸ್ಪಂದನೆಯೂ ಕೂಡ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ ….

  2. ಜಿ ಎಸ್ ಶಿವರುದ್ರಪ್ಪ ನವರ ಮನ ಮುಟ್ಟುವ, ಮಲಗಿದ ಭಾವನೆಗಳಿಗೆ ಸ್ಫೂರ್ತಿ ನೀಡುವ ಮತ್ತು ಸಾಹಿತ್ಯ ಲೋಕದ ಸುವರ್ಣ ಕಾಲದ ಅತ್ಯುತ್ತಮ ಸಂಗ್ರಹವಾನ್ನೊಳಗೊಂಡ ಲೇಖನ superb ಗೆಳತಿ

  3. ಶಿವರುದ್ರಪ್ಪನವರ ಬಹು ಮುಖ್ಯ ಕವಿತೆಗಳತ್ತ ಪಕ್ಷಿನೋಟ ಬೀರಿದ್ದಿರಿ. ಒಳ್ಳೆಯ ಲೇಖನ. ವಂದನೆಗಳು ಮೇಡಂ

    ತಮ್ಮಣ್ಣ ಬೀಗಾರ…ಸಾಹಿತಿಗಳು

  4. ಅತೀ ಸುಂದರ ಲೇಖನ ರೀ…. ಅದ್ಭುತ….ಎಂತಾ ಚಂದದಾ ಸಾಲುಗಳು ಮೆತ್ತೆ ಓದಬೇಕು ಎಂಬ ಆಸೆರೀ …ಇಂತ ಸಾಹಿತ್ಯ ಸಾಲುಗಳನ್ನ ಓದಿದ ನಾವು ಧನ್ಯರು.ತಮ್ಮ ಅದ್ಭುತ ಪ್ರತಿಭೆ ಗೆ ಅನಂತ ಶರಣು ಶರಣು ರೀ ಮೇಡಂ ರಿ.

  5. ಎಲ್ಲೋ ಹುಡುಕಿದೆ ಇಲ್ಲದ ದೇವರ ಹಾಡು ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.ಇಂತಹ ಅದ್ಭುತ ಕವಿತೆಗಳನ್ನು ಕೊಟ್ಟ ಜಿ.ಎಸ್ ಶಿವರುದ್ರಪ್ಪ ನವರ ಬಗ್ಗೆ ಬರೆದ ಲೇಖನ ಅಧ್ಬುತ… ಓದಿ ಖುಷಿಯಾಯಿತು.

  6. ಶಿವಲೀಲಾ ಹುಣಸಗಿಯವರ ನಿರಂತರ ಬರಹವು ,
    ಓದುಗರ ಆಶಯಗಳನ್ನು ರೂಪಿಸಿಕೊಟ್ಟಿವೆ.ವಾಸ್ತವ ಸಂಗತಿಗಳನ್ನು ಮನ ಮುಟ್ಟುವಂತೆ ಸಹಜವಾಗಿ ಲೇಖಿಸಿ,ವಿದ್ಯಮಾನಗಳ ಅರಿವನ್ನು ನೀಡಿದ್ದಾರೆ.ತಮ್ಮ ಅನುಭವವನ್ನು ಇನ್ನಷ್ಟು ವಿಸ್ತರಿಸಿ,ನಮಗೆ ಮುಂಗಾಣ್ಕೆಯನ್ನು ನೀಡಲಿ. ಸಂಗಾತಿಯ ಅಂಕಣಕಾರರಾಗಿ ಹಮೇಶಾ ವೈಚಾರಿಕ ಲೇಖನವನ್ನು ಓದಲು ನೀಡಲಿ ಎಂದು ಆಶಿಸುವೆನು.
    ಅಭಿನಂದನೆಗಳು ಅಅವರಿಗೆ

    ಶರಶ್ಚಂದ್ರ ಕುಪ್ಪಿಗುಡ್ಡ ಗಂಗಾವತಿ

Leave a Reply

Back To Top