ಶಿವಕುಮಾರ ಕರನಂದಿಯವರ “ನೆರಳಿಗಂಟಿದ ನೆನಪು” ಒಂದು ಅವಲೋಕನ-ಕವಿತಾ ಹಿರೇಮಠ ಕವಿತಾಳರವರಿಂದ

ಸಂಗಾತಿ ವಾರ್ಷಿಕ ವಿಶೇಷಾಂಕ

ಶಿವಕುಮಾರ ಕರನಂದಿ

“ನೆರಳಿಗಂಟಿದ ನೆನಪು”

ಒಂದು ಅವಲೋಕನ-

ಕವಿತಾ ಹಿರೇಮಠ ಕವಿತಾಳ

ಯಾವುದೇ ಕಾವ್ಯ, ಸಾಹಿತ್ಯ ನಮಗಿಷ್ಟವಿರಲಿ, ಬಿಡಲಿ ಅದು ಪ್ರಪಂಚ ಬದಲಾದಂತೆ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಭಾವಗಳ ಭಾವನೆಗಳಲ್ಲಿ ಬಾಂಧವ್ಯಗಳು ಬದಲಾಗುತ್ತಲೇ ಇರುತ್ತವೆ. ಈ ಕಾವ್ಯದ ಲೋಕದಲ್ಲಿ ಕವಿ ಸಂತುಷ್ಟನಾಗಬೇಕೆಂದರೆ ಮಾನವತ್ವ, ಹದವುಳ್ಳ ಆರೋಗ್ಯ, ಬದುಕಲಿಕ್ಕಾಗಿ ಒಂದಿಷ್ಟು ಪ್ರೀತಿ ಇವೆಲ್ಲಕ್ಕಿಂತ ಮಿಗಿಲಾಗಿ ಒಬ್ಬ ಲೋಕಾತ್ಮದ ಆತ್ಮಸಂತೃಪ್ತಿ ಉಳ್ಳವನಾಗಿರಬೇಕು. ತಾನು ಬರೆದ ಬರಹ ಓದುಗರು ಓದಿ ಮೆಚ್ಚಿಕೊಂಡಾಗ ಮಾತ್ರ, ಯಾವ ಕೋಟಿ ಕೋಟಿ ಹಣದಿಂದ ಸಿಗದ ಆನಂದ, ಸಂತಸ, ಸಾರ್ಥಕತೆಯ ಭಾವ ಮೂಡುತ್ತದೆ. ಅದನ್ನು ನಿರೂಪಿಸುವಾಗ ಸುಖ, ವಿಷಾದಗಳೆರಡೂ ಒಡನೊಡನೆಯೆ ಉದ್ಭವಿಸುತ್ತವೆ.

ಒಂದು ಪುಸ್ತಕ ಮಾಡಬೇಕು ಎಂದರೆ , ಒಂದು ಮಗುವಿಗೆ ಜನ್ಮ ನೀಡಿದಷ್ಟು ಕಷ್ಟದಾಯಕ. ಆ ಮಗು ಅಂದರೆ ಪುಸ್ತಕ ಸಮಾಜದಲ್ಲಿ, ಸಾಹಿತ್ಯ ಲೋಕದಲ್ಲಿ ಉಳಿಯಿತು ಎಂದಾಗ ಕೃತಿಯ ಕರ್ತೃವಿಗೆ ಹಡೆದ ತಾಯಿಯಷ್ಟೇ ನೆಮ್ಮದಿ ಮತ್ತು ಆನಂದದ ಆಗರ. ಸಮಾಜಕ್ಕೆ ತನ್ನಿಂದ ಆದಷ್ಟು ಕೊಡುಗೆ ಕೊಡುವುದು ಪ್ರತಿಯೊಬ್ಬ ಉತ್ತಮ ವ್ಯಕ್ತಿಯ ಕರ್ತವ್ಯ ಅದು ಕವಿಯ ಜವಾಬ್ದಾರಿಯೂ ಕೂಡ.

ಶಿವಕುಮಾರ ಕರನಂದಿಯವರು ಕಾಗದದ ಮೇಲೆ ಅಕ್ಷರದ ಕಸೂತಿ ಮಾಡುತ್ತಲೇ ನಡೆನುಡಿಯಲ್ಲಿ ಸೌಮ್ಯ ಸ್ವಭಾವದ ಉತ್ತಮ ಗಜಲ್ ಕವಿ ಎಂಬುವುದು ಈ ಯುವ ಪೀಳಿಗೆಗೆ ಬಹಳಷ್ಟು ಪರಿಚಯ. ಇವರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದವರು ಒಂದು ಗಜಲ್ ಬಳಗದಿಂದ ಈ ಸಹೋದರನ ಪರಿಚಯ ನನಗೆ ಆಯಿತು.
ಇವರು “ಮೌನ ಮಾತಾದಾಗ” ಎಂಬ ಕವನ ಸಂಕಲನ, ಹಾಗೂ “ಗಾಲಿಬ್ ನಿನಗೊಂದು ಸಲಾಂ” ಎಂಬ ಸಂಪಾದಿತ ಗಜಲ್ ಕೃತಿಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ನೆನಪಿಗೆ ಮುಂಚೂಣಿಯ ಹೆಸರು. ಈಗ ಇವರ “ನೆರಳಿಗಂಟಿದ ನೆನಪು” ಎಂಬ ಗಜಲ್ ಸಂಕಲನವನ್ನು ಓದುಗ ದೊರೆಗಳ ಕೈಗೆ ನೀಡುವ ಮೂಲಕ ಯಶಸ್ವಿಯಾಗಿದ್ದಾರೆ.

“ನೆರಳಿಗಂಟಿದ ನೆನೆಪು”, ಈ ಪುಸ್ತಕದಲ್ಲಿ ಒಟ್ಟು 51 ಗಜಲ್‍ಗಳಿದ್ದು ಪ್ರತಿಯೊಂದು ಗಜಲ್ ಕೂಡ ಸಾಮಾಜಿಕ, ಆರ್ಥಿಕ, ಸಾವು, ನೋವು, ಬಡತನ, ದೇಶಪ್ರೇಮ, ಅಮ್ಮನ ಮಹತ್ವ, ಪ್ರೀತಿ-ಪ್ರೇಮ, ವಿರಹ ಹೀಗೆ ಹಲವಾರು ವಿಷಯಗಳ ಕುರಿತ ಈ ಪುಸ್ತಕ ಓದುಗರನ್ನು ಚಿಂತನೆಗೆ ಮತ್ತು ವಿವೇಚನೆಯ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ.

ವಾಸ್ತವ, ಪ್ರಣಯ ,ಆದರ್ಶವಾದ, ಭಾವನೆಗಳ ನೇಯ್ಗೆ, ಪದಗಳ ತೇಲುತನ,  ಹಳಸುತನವಿಲ್ಲದ ಭಾಷೆ, ಎಲ್ಲ ಗಜಲ್ ಗಳಲ್ಲಿ ಗಮನ ಸೆಳೆಯುತ್ತದೆ ಹೀಗೊಂದು ಗಜಲ್ ಓದುಗರನ್ನು ಹೇಗೆ ಹಿಡಿದಿಡಬಲ್ಲದು

“ವಿಷವಿಕ್ಕುವರು ಇಕ್ಕಲಿಬಿಡು ವಿಷಕಂಠನಾಗಿ ಸುಮ್ಮನಿದ್ದು ಬಿಡುವೆ
ವಿಷಾನಿಲವೇ ಬೀಸಲಿಬಿಡು ನೀಲಕಂಠನಾಗಿ ಸುಮ್ಮನಿದ್ದು ಬಿಡುವೆ”

ಈ ಗಜಲ್ ನ ಪ್ರತಿಯೊಂದು ಶೇರ್ ನಾವು ಏನು ಮಾಡಿದರೂ ಹೀಯಾಳಿಸುವ ಜನರು ಇದ್ದೇ ಇರುತ್ತಾರೆ,  ನಮ್ಮ ಏಳಿಗೆ ಸಹಿಸದವರ ಮಾತಿಗೆ ಕಿವಿಗೊಡದೆ ಅವರ ಮಾತುಗಳನ್ನೇ ಮೆಟ್ಟಿಲು ಮಾಡಿಕೊಂಡು ಸಾಧನೆಯ ಶಿಖರ ತಲುಪಿಬಿಡುವೆ ಎಂದು ಹೇಳುತ್ತಾ ನಮಗೂ ಯಾರ ಮಾತಿಗೂ ಕಿವಿಗೊಡದೇ ಸಾಗು ಎಂಬ ಕಿವಿಮಾತನ್ನು ಹೇಳುವಲ್ಲಿ ಓದುಗನ ಮನ ಗಟ್ಟಿಗೊಳಿಸಿದ್ದಾರೆ.

ಕಂಡದೆಲ್ಲ ಕಾವ್ಯದ ಕಸಿ ಮಾಡುವ ಹಸಿ ಹಸಿ ಗರಿಯ ಲೇಖನಿ ಇವರದ್ದು. ವ್ಯಂಗ್ಯದ ಹೆಸರಿನಲ್ಲಿ ರಾಡಿ ಎಬ್ಬಿಸದೆ, ಮನೋವಿಶ್ಲೇಷಣೆಯ ಹೆಸರಿನಲ್ಲಿ ರೋಗಿಯ ನಡವಳಿಕೆ ಅರಿವ ವೈದ್ಯನ ದಿನಚರಿ ಚಿರನೂತನ ಇವರು

“ಕೊರಗುವುದನ್ನು ಬಿಟ್ಟುಬಿಡಿ ಬದುಕು ದೊಡ್ಡದಿದೆ
ಕೀಳರಿಮೆಯನ್ನು ಬಿಟ್ಟುಬಿಡಿ ಬದುಕು ದೊಡ್ಡದಿದೆ”

ಈ ಗಜಲ್ ನಲ್ಲಿ ಪ್ರತಿ ಶೇರ್ ಕೂಡ ಮನುಷ್ಯನ ಕೀಳರಿಮೆ, ಕ್ರೂರತನ ಚಿಂತೆ, ಹಣದ ಮೋಹ ಹೀಗೆ ಹೇಳುತ್ತಾ ಸಾಗುತ್ತದೆ.
ಏನಿದ್ದರೇನು ಬದುಕಲ್ಲಿ ನೆಮ್ಮದಿ ಇಲ್ಲ ಎಂದಾಗ ಎಲ್ಲವೂ ವ್ಯರ್ಥ, ಒಳ್ಳೆಯತನ, ಸರಳತೆ ಮೈಗೂಡಿಸಿಕೊಂಡು ಬದುಕಿಬಿಡು ಸಾಗುವ ದಾರಿ ದೊಡ್ಡದಿದೆ ಎಂದು ಹೇಳುವ ಕವಿ , ಮನಸ್ಸಿಗೆ ಒಂದು ಪಾಠ ಹೇಳಿದ್ದಾರೆ. ಹೀಗೆ ಹೇಳುತ್ತಾ ಮತ್ತೊಂದು ಗಜಲ್ ನಲ್ಲಿ

” ಬೆಂಕಿ ಕುಲುಮೆಯಲ್ಲಿ ಅರಳಿದ ಹೂವಂತೆ ನೀನು
ಬೆಂದಿರುವ ಬೆಟ್ಟಗಳ ಸಹಿಸಿ ನಗುನಗುತ್ತಲೆ ನಿಂತೆ ನೀನು”

ಈ ಗಜಲ್ ನಲ್ಲಿ ಕವಿ ಹೆತ್ತ ತಾಯಿಯ ನೆನೆದಿದ್ದಾರೆ ನಿನ್ನ ಓದು ಬರಹಕ್ಕೆ ತಿಲಾಂಜಲಿ ಇಟ್ಟರೆ ಏನಂತೆ, ಜೀವನ ಎಂಬ ವಿಶ್ವವಿದ್ಯಾಲಯಕ್ಕೆ ಕುಲಪತಿ ನೀನು ನೀಲಿ ಗಗನಕ್ಕಿಂತ ಹೆಚ್ಚು ನೀನು ಎಂದು ಹೇಳುತ್ತಾ ಅಮ್ಮನ ಮಹತ್ವ, ತ್ಯಾಗ, ನೋವು ಮರೆಮಾಚಿ ನಗುವ ಆಕೆಯ ಕಲೆಗೆ ಜಗತ್ತಿನಲ್ಲಿ ಸಾಟಿ ಇದೆಯೇ.

“ಕಿತ್ತುಹೋದ ಚಪ್ಪಲಿಯ ಉಂಗುಟಗಳೇ ಹೇಳುತ್ತವೆ ನನ್ನ ಕಥೆಯಾ
ಕೆಂಡ ಸುಡುವ ಬಿಸಿಲಿನ ಪಾದಗಳೇ ಹೇಳುತ್ತವೆ ನನ್ನ ಕಥೆಯಾ”

ಈ ಗಜಲ್‌ನ ಮತ್ಲಾ ನನ್ನ ಅಪ್ಪನ ನೆನಪು ಮಾಡಿಕೊಟ್ಟು ಕಣ್ಣಂಚಲ್ಲಿ ಹನಿಯೊಂದು ಹಾದುಹೋಯಿತು. ‘ಕಿತ್ತುಹೋದ ಚಪ್ಪಲಿಯ ಉಂಗುಟುಗಳೇ ಹೇಳುತ್ತವೆ ನನ್ನ ಕಥೆಯಾ’ ಎಂಬ ಮಾತು ಎಂತಹವರಿಗಾದರೂ ಕನಿಕರಿಸದೆ ಇರಲಾರದು. ಬಡತನ ಎನ್ನುವುದು ಈ ಸಮಾಜಕ್ಕೆ ಅಂಟಿದ ಪಿಡುಗು, ಅದು ಎಂತಹವರನ್ನು ಕಾಡದೇ ಇರದು, ಅದರಲ್ಲಿ ನಿಯತ್ತಾಗಿ ಇರುವವರನ್ನೇ ಮೊದಲು ಕಾಡುವುದು.
ಅನ್ಯಾಯ, ಅಕ್ರಮದಿಂದ ಸಂಪಾದಿಸಿದವರ ಕಾಲ ಇದು, ನೀತಿ ನಿಯತ್ತಿಗೆ ಒಳ್ಳೆತನಕ್ಕೆ ಕಾಲ ಇಲ್ಲ ಎಂದು ಹೇಳುವ ಮೂಲಕ ಕವಿ ತಮ್ಮ ನೋವನ್ನು ಸೂಕ್ಷ್ಮ ಭಾವದಲ್ಲಿ ವ್ಯಕ್ತಪಡಿಸಿದ್ದಾರೆ.

“ಆಧುನಿಕತೆಯ ಧಾವಂತದಲ್ಲಿ ಓಡುತಿವೆ ಮನಗಳು
ಅವಸರದ ಜೀವನದಲ್ಲಿ ಹೊರಡುತಿವೆ ಮನಗಳು”

ಈ ಗಜಲ್ ನಲ್ಲಿ ಪ್ರತಿ ಮಿಸ್ರಾ ಕೂಡ ಮನಮುಟ್ಟುವಂತೆ ಇವೆ. ಈ ಸಮಾಜದಲ್ಲಿ ಎರಡು ಮೂರು ಬಗೆಯ ಜನರನ್ನು ಕಾಣುತ್ತೇವೆ. ಅದರಲ್ಲಿ ಒಂದು ಹೊತ್ತಿನ ಊಟಕ್ಕೆ ಭಿಕ್ಷೆ ಬೇಡುತ್ತಾ ಹೊಟ್ಟೆ ಪಾಡಿಗಾಗಿ ನಾನಾ ವೇಷ ಧರಿಸಿ ಪರದಾಡುವವರು. ಮತ್ತೆ ಒಂದು ಹೊತ್ತಿನ ಊಟ ಕೊಟ್ಟಿದ್ದಾನೆ ದೇವರು ಎಂದು ಬೆವರು ಸುರಿಸಿ ದುಡಿದು ತಿನ್ನುವವರು, ಒಂದು ಕಡೆ ಆದರೆ, ತಿಂದ ತುತ್ತನ್ನು ಅರಗಿಸಿಕೊಳ್ಳಲು ಹರಸಾಹಸ ಮಾಡುವ ಶ್ರೀಮಂತಿಕೆಯ ಜನರು ಇನ್ನೊಂದು ಕಡೆ. ಹಂಚಿಕೊಂಡು ತಿನ್ನದವರಿಗೆ ಸುಖಭೋಗ, ತಿನ್ನುವ ಮನಸ್ಸು ಇರುವ ಜನರಿಗೆ ಬಡತನ ಎಂಬ ರೋಗ.

“ಭೂಪಟದಲ್ಲಿ ಸುವರ್ಣಾಕ್ಷರ ಬರೆಯುತ ಬೆಳಗಲಿ ಭಾರತ
ನಡೆಯಲಿ ತಾಯಿ ಬೇರಾಗಿ ಬೆರೆಯುತ ಬೆಳಗಲಿ ಭಾರತ”

ಕವಿ ಈ ಗಜಲ್ ನಲ್ಲಿ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಈ ಭಾರತ ಪುಣ್ಯ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ತಾಯಿ ಭಾರತಾಂಬೆ ಸಂಸ್ಕಾರ ನೀಡಿದ್ದಾಳೆ, ಈ ಮಣ್ಣಿನಲ್ಲಿ ಹುಟ್ಟಿದ ನಾವುಗಳೇ ಧನ್ಯರು,  ಕವಿ ಕೂಡ ಶಾಂತಿಯಿಂದ ನೆರೆಹೊರೆ ದೇಶಗಳ ಜೊತೆ ಸಮನ್ವಯದಿಂದ ಬದುಕುತ್ತಾ ಬೆಳಗಲಿ ಭಾರತ ಎಂದು ಆಶಿಸಿದ್ದಾರೆ.

“ಮೊದಲ ನೋಟದಲ್ಲಿ ಮನಸೆಳೆದವಳು ನೀನಲ್ಲವೇ
ಮನದ ಚಡಪಡಿಕೆಗೆ ಕಾರಣವಾದವಳು ನೀನಲ್ಲವೇ”

ಈ ಗಜಲ್ ನಲ್ಲಿ ಪ್ರೇಯಸಿಯ ಪ್ರೇಮ ನೆನೆದು ಬರೆದಿದ್ದಾರೆ ಕವಿಗಳು.
ಒಬ್ಬ ಕವಿ ತನ್ನ ಹೃದಯದಲ್ಲಿ ಪ್ರೀತಿ, ಪ್ರೇಮ ಇಲ್ಲದಿದ್ದರೆ ಉತ್ತಮ ಕವಿಯಾಗಲಾರ. ಶಿವಕುಮಾರ ಕರನಂದಿಯವರು ಕೂಡ ಪ್ರೀತಿ ಪ್ರೇಮ, ವಿರಹದ ಕುರಿತು ಹೃದಯ ಮುಟ್ಟುವಂತೆ ಗಜಲ್ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಜಲ್ ನಲ್ಲಿ ಮೃದುತ್ವ, ಕೋಮಲತೆ, ಲಯ ಇದ್ದಾಗ ಮಾತ್ರ ಓದುಗರನ್ನು ಚಿಂತನೆಗೆ ಹಚ್ಚುತ್ತದೆ, ಮತ್ತು ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ.

ಸಹೋದರ ಶಿವಕುಮಾರ ಕರನಂದಿಯವರು ಸೌಮ್ಯ ಸ್ವಭಾವದ ಉತ್ತಮ ಗಜಲ್‍ಕಾರರೆಂದು ಈಗಾಗಲೇ ಗುರುತಿಸಿಕೊಂಡಿರುವ ಕವಿ. ಕರನಂದಿಯವರ ಲೇಖನಿ ಕೂಡ ಅವರಂತೆ ಮೃದು ಎನ್ನಿಸುತ್ತದೆ. ಸೂಕ್ಷ್ಮವಾಗಿ ಸಮಾಜದ  ನೋವು ಗೊತ್ತಾಗದಂತೆ  ತಿವಿದಿದ್ದಾರೆ. ಇನ್ನಷ್ಟು ಮತ್ತಷ್ಟು ಅವರು ಜೋರಾಗಿ ತಿವಿಯುವ ಕೆಲಸ ಅವರ ಲೇಖನಿ ಮಾಡಲಿ. ಇನ್ನಷ್ಟು ಗಟ್ಟಿತನ ಅವರ ಬರಹದಲ್ಲಿ ನಾನು ನಿರೀಕ್ಷೆ ಮಾಡುವೆ, ಈ ನಿರೀಕ್ಷೆ ಹುಸಿಯಾಗುವುದಿಲ್ಲ ಎಂದು ನಂಬಿರುವೆ. ಅಷ್ಟೇ ಸತ್ಯವಾದ ಸ್ಮರಣೀಯ ಅಭಿಮಾನದ ವಿಚಾರ ವೈಶಿಷ್ಟ್ಯವುಳ್ಳ ಕವಿ ಇವರಾಗಲಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವಿಶಿಷ್ಟ ರೀತಿಯ ಕೊಡುಗೆ ಸಲ್ಲಿಸಲಿ ಮತ್ತಷ್ಟು ಕೃತಿಗಳು ಅವರಿಂದ ಹೊರಬರಲಿ ಎಂದು ಹಾರೈಸುತ್ತೇನೆ. 


ಕವಿತಾ ಹಿರೇಮಠ ಕವಿತಾಳ

One thought on “ಶಿವಕುಮಾರ ಕರನಂದಿಯವರ “ನೆರಳಿಗಂಟಿದ ನೆನಪು” ಒಂದು ಅವಲೋಕನ-ಕವಿತಾ ಹಿರೇಮಠ ಕವಿತಾಳರವರಿಂದ

  1. ಶಿವುಕುಮಾರ ಅವರ ನನ್ನ ಆತ್ಮೀಯ.ಗೆಳೆಯ ಇನ್ನು ಹೆಚ್ಚು ಗಜಲ್ ನಲ್ಲಿ ಹೆಚ್ಚು ಹೆಚ್ಚು ಪ್ರಶಸ್ತಿ ವಿಜೇತ ಆಗಬೇಕು ಎಂದು ನನ್ನ ಆಶಯ. ಮತ್ತು ಕವಿತಾ ಹಿರೇಮಠ ಅಕ್ಕನವರು ಕೂಡಾ ಇನ್ನು ಹೆಚ್ಚು. ಗಜಲ್ ನಲ್ಲಿ ಹೆಚ್ಚು ಹೆಚ್ಚು ಪ್ರಶಸ್ತಿಗೆ ಭಾಜನರಾಗಬೇಕು ಎಂಬ ಆಶಯ ನನಗೆ.

Leave a Reply

Back To Top