ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ವೃದ್ಧಾಶ್ರಮಗಳ ಬೇರುಗಳು ಸಡಿಲವಾಗಲಿ….
ಅವರು ನಿವೃತ್ತಿಯಾಗಿ 20 ವರ್ಷ ವರ್ಷಗಳು ಕಳೆದವು. ಈಗ 80 ವರ್ಷವಯಸ್ಸು. ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದಾರೆ. ಮಕ್ಕಳನ್ನು ಚೆನ್ನಾಗಿ ಓದಿಸಿ, ವಿದೇಶದಲ್ಲಿ ನೌಕರಿ ಮಾಡಲು ಕಳುಹಿಸಿದ್ದಾರೆ. ಈಗ ಅವರನ್ನು ಆರೈಕೆ ಮಾಡಲು ಯಾರು ಇಲ್ಲ. ಅವರಿಗ ಒಬ್ಬಂಟಿ…!!
90ರ ವಯಸ್ಸಿನ ಮಹಿಳೆ ಬಾಲ್ಯದಿಂದಲೂ ಕಷ್ಟದಲ್ಲಿಯೇ ಬೆಳೆದು, ತಂದೆ, ತಾಯಿ, ಗಂಡ ಮಕ್ಕಳು, ಕುಟುಂಬದ ಸದಸ್ಯರ…ಸುಖ ಸಂತೋಷಕ್ಕಾಗಿ ಇಡೀ ಬದುಕನ್ನೇ ತ್ಯಾಗ ಮಾಡಿದ್ದಾರೆ. ಈ ವೃದ್ಧ ಮಹಿಳೆ ಇಳಿವಯಸ್ಸಿನಲ್ಲಿ ಕಾಯಿಲೆಯಿಂದ ನರಳುತ್ತಾ, ಹಾಸಿಗೆ ಹಿಡಿದಿದ್ದಾಳೆ. ಇದ್ದ ಒಬ್ಬ ಹೆಣ್ಣುಮಗಳು ಗಂಡನ ಮನೆಯಲ್ಲಿ, ಇನ್ನೊಬ್ಬ ಮಗ ಉದ್ಯೋಗಕ್ಕಾಗಿ ಬೇರೆ ರಾಜ್ಯದಲ್ಲಿ ನೆಲೆಸಿದ್ದಾನೆ. ಈಗ ಆಕೆಯ ಪರಿಸ್ಥಿತಿ ವೃದ್ಧಾಶ್ರಮವೇ ಗತಿ..!!
ಮೇಲಿನ ಎರಡು ಸನ್ನಿವೇಶಗಳು ಮನಕಲಕುತ್ತವೆ.
ಯಾವುದೋ ಒಂದು ಸಿನಿಮಾದ ಕಥೆಯಲ್ಲ ಇದು. “ರಾಜಕುಮಾರ” ಎನ್ನುವ ಸಿನಿಮಾ ಬಂದ ನಂತರ ಕೇವಲ ಇಂತಹ ಕಥೆಗಳು ಸಿನಿಮಾದಲ್ಲಿ ಮಾತ್ರ ಎಂದು ತಿಳಿದುಕೊಂಡಿದ್ದೆವು.
ಆದರೆ…
ಇತ್ತೀಚಿಗೆ ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ನಿವೃತ್ತಿ ಹೊಂದಿದ ಮುಖ್ಯ ಇಂಜಿನಿಯರ್ ರ ಇರುಳ ಕರಾಳ ಬದುಕಿನ ದುರಂತ ಅಂತ್ಯದ ಕಥೆಯನ್ನು ನೋಡಿದಾಗ ಕಣ್ಣುಗಳು ಕಂಬನಿ ಮಿಡಿದು, ಕರುಳು ಹಿಂಡಿ ಬಂದಿವು.
ಎಲ್ಲಿಯೋ ದೂರದ ವಿದೇಶದಲ್ಲಿದ್ದ ಮಕ್ಕಳು ತಂದೆಯ ಅಂತಿಮ ಸಂಸ್ಕಾರ ಮಾಡದೇ, ಅಲ್ಲಿಂದಲೇ ವಿದಾಯ ಹೇಳಿ, ಯಾರಿಗೋ ಅಂತಿಮ ಸಂಸ್ಕಾರ ಮಾಡಲು ತಿಳಿಸಿದ ನಿರ್ದಯಿ ಮಕ್ಕಳು…!!
ಅಂತಹ ಮಕ್ಕಳಿಗೆ ಧಿಕ್ಕಾರವಿರಲಿ..!!
ಈ ಸನ್ನಿವೇಶವನ್ನು ಕೇಳಿದಾಗ, ನೋಡಿದಾಗ ಮತ್ತೆ ಮತ್ತೆ ನಮ್ಮೊಳಗೆ ಪ್ರಶ್ನೆ ಮೂಡುತ್ತದೆ…!
ಬದುಕಿನುದ್ದಕ್ಕೂ ನಾವು ದುಡಿದು ಗಳಿಸುವ ಒಂದೊಂದು ಬೆವರಿನ ಹನಿಯ ಮೌಲ್ಯ ಮಕ್ಕಳಿಗೆ ತಿಳಿಸುವುದಾದರೂ ಹೇಗೆ…??
ಬದುಕಿನಲ್ಲಿ ಅನೇಕ ನೋವುಗಳನ್ನು ಸಹಿಸಿಕೊಂಡು, ಒಂದೊಂದು ಪೈಸೆಯನ್ನು ಖರ್ಚು ಮಾಡಲು ಅಲೋಚಿಸುತ್ತಲೇ, ದುಡಿದ ಹಣವನ್ನು ಕೂಡಿಡುತ್ತೇವೆ.
ಮಕ್ಕಳ ಭವಿಷ್ಯದ ಬಗ್ಗೆ ಕನಸನ್ನು ಕಾಣುವ ಪಾಲಕರು, “ತಾವು ಬದುಕಿನಲ್ಲಿ ಸಾಧಿಸಲಾರದನ್ನು ಮಕ್ಕಳ ಸಾಧಿಸಿಯಾರು” ಎಂಬ ಆಸೆಯನ್ನು ಮನದೊಳಗೆ ತುಂಬಿಕೊಂಡಿರುತ್ತಾರೆ. ಮಕ್ಕಳ ಏಳ್ಗೆಯನ್ನು ಸದಾ ಬಯಸುತ್ತಾರೆ. ಮಕ್ಕಳ ಏಳ್ಗೆಯನ್ನು ಬಯಸಿದ ಪಾಲಕರ ನೋವುಗಳು, ಸಂಕಟಗಳು ಮಕ್ಕಳಿಗೆ ಅರ್ಥವಾಗದೇ ಹೋದರೆ ಹೇಗೆ…??
ಮಗುವಿನ ಓದಿನ ಸಲುವಾಗಿ ಎಲ್ಲೆಲ್ಲಿಯೋ ದುಡ್ಡನ್ನು ಕೂಡಿಸಿಟ್ಟು ಅಥವಾ ಸಾಲ ಮಾಡಿ ಆತ ಅಥವಾ ಅವಳು ಮಾಡುವ ಕೋರ್ಸಿಗೆ ಸೇರಿಸಿ, ಕೋರ್ಸ್ ಮುಗಿದ ತಕ್ಷಣವೇ ಯಾವುದಾದರೂ ಉದ್ಯೋಗ ಹುಡುಕುವ ಪಾಲಕರ ಗೋಳು ಹೇಳತೀರದು. ಮಕ್ಕಳೆಲ್ಲಾ ಅವರೊಂದು ನೆಲೆಗೆ ನಿಲ್ಲಿಸಲು ಹರಸಾಹಸ ಪಡುವ ತಂದೆಯ ಬೆವರಿನ ಹನಿಯಾಗಲಿ, ತಾಯಿಯ ತ್ಯಾಗದ ಔದಾರ್ಯವಾಗಲಿ, ಮಕ್ಕಳಿಗೆ ತಿಳಿಯದೆ ಹೋದರೆ ಹೇಗೆ…??
ಮಕ್ಕಳಿಗೆ ನೌಕರಿ ಸಿಕ್ಕಿದ್ದಾಯಿತು. ಒಂದು ದಡಕ್ಕೆ ಸೇರಿದ್ದಾಯ್ತು. ದಿನ ಕಳೆದಂತೆ.. ಅವನಿಗೋ..ಅವಳಿಗೋ ಮದುವೆ ಮಾಡಿ ಅವರ ಬದುಕಿಗೆ ಒಂದು ನೆಲೆಯನ್ನು ಕಾಣಿಸಿದ ತಂದೆ ತಾಯಿಗಳು ಕ್ರಮೇಣ ಅವರಿಂದ ಬರು ಬರುತ್ತಾ ದೂರವಾಗುತ್ತಲೇ ಹೋಗುತ್ತಾರೆ..!! “ತಾನಾಯಿತು ತನ್ನ ಸಂಸಾರವಾಯಿತು” ಎನ್ನುವ ಜಂಜಾಟದಲ್ಲಿ ಬೀಳುವ ಇಂದಿನ ಮಕ್ಕಳು…!!
ತನಗಾಗಿ ದುಡಿದು ತ್ಯಾಗ ಮಾಡಿದ ತಂದೆ ತಾಯಿಗಳ ನೆನಪು ಮಾಡಿಕೊಳ್ಳುವುದು ಕಷ್ಟವಾಗುವ ಸಂದರ್ಭದಲ್ಲಿ ಇಂದು ನಾವು ಇದ್ದೇವೆ ಎಂದು ಹೇಳಬಹುದು.
ವಯಸ್ಸು ಕಳೆದಂತೆ ವಯೋಸಹಜ ಕಾಯಿಲೆಗಳು ತಂದೆ ತಾಯಿಗಳಿಗೆ ಬರುತ್ತವೆ. ಆ ಕಾಯಿಲೆಗಳಿಗೆ ಮೂಲ ಕಾರಣ ಹುಡುಕತ್ತಾ ಹೋದರೆ… ಯಾವ ವಯಸ್ಸಿನಲ್ಲಿ ಆರೋಗ್ಯಕ್ಕಾಗಿ ಒತ್ತುಕೊಡಬೇಕಾಗಿತ್ತೋ…ಒತ್ತು ನೀಡಲಿಲ್ಲ. ಆಗ ಕೇವಲ ದುಡಿಯಬೇಕು, ಗಳಿಸಬೇಕು, ಮಕ್ಕಳ ಭವಿಷ್ಯ ರೂಪಿಸಬೇಕು. ಅಷ್ಟೇ… “ಉಣ್ಣಬೇಕು ಅಥವಾ ಆರೋಗ್ಯದ ಬದುಕನ್ನ ಕಟ್ಟಿಕೊಳ್ಳಬೇಕು” ಎನ್ನುವ ಪ್ರಜ್ಞೆ ಇಲ್ಲದೆ ಹೋಗುತ್ತದೆ. ನಿರಂತರವಾಗಿ ಉದ್ಯೋಗವನ್ನು ಮಾಡಿದರ ಪ್ರತಿಫಲ ವಯಸ್ಸಾದ ಮೇಲೆ ಇಂತಹ ಕಾಯಿಲೆಗಳು ಬರುತ್ತವೆ. ಬಿಪಿ, ಶುಗರ್, ಕಾಲು ನೋವು, ಎದೆ ನೋವು, ಅರೆ ಮರೆವು, ಕಿವಿ ಕೇಳದಿರುವುದು… ಅವು ಆಯಾ ವೃತ್ತಿಯ ವಾತಾವರಣದ ಮೇಲೆ ಆಯಾ ಕಾಯಿಲೆಗಳು ಬರುತ್ತವೆ.
ಮುಪ್ಪಿನಲ್ಲಿ ಬರುವ ಕಾಯಿಲೆಯ ಉಪಚಾರಕ್ಕಾಗಿ ಒಂದು ಪೈಸೆಯೂ ಕೂಡಿಡದ ತಂದೆ ತಾಯಿಗಳ ಸಂಕಟ ಹೇಳುತೀರದು. ನೌಕರಿ ಪಡೆದ ಮಗ ಅಥವಾ ಮಗಳು ದೂರದ ಊರಿನಲ್ಲಿ ಸುಖವಾಗಿ ಸಂಸಾರ ಮಾಡುವುದು ಕಂಡು ಹಿರಿಹಿರಿ ಹಿಗ್ಗುತ್ತಾರೆ..!!
ಆದರೆ…
“ತಮಗೆ ಕಾಯಿಲೆ ಬಿದ್ದರೆ ತಕ್ಷಣ ಮಕ್ಕಳು ಸ್ಪಂದಿಸಿಯಾರು, ನಮ್ಮನ್ನು ಕರೆದುಕೊಂಡು ಆಸ್ಪತ್ರೆಗೆ ಸೇರಿಸಿಯಾರು, ಇಲ್ಲವೇ ಆರೈಕೆ ಮಾಡಿಯಾರು” ಎನ್ನುವ ಆಶಾದಾಯಕ ಕಂಗಳಿಂದ ನಿರೀಕ್ಷೆ ಮಾಡುತ್ತಾರೆ. ಈ ವೃದ್ಧ ಪಾಲಕರ ನಿರೀಕ್ಷೆಗಳು ಹುಸಿಯಾಗುತ್ತಲೇ ನಿಜವಾದ ವಾಸ್ತವ ಪರಿಚಯವಾಗುತ್ತದೆ..!
ಆಗ ವೃದ್ಧ ತಂದೆ ತಾಯಿಗಳಿಗೆ ತಮ್ಮ ಬದುಕಿನ ಅಂತಿಮ ಕಾಲದ ಸಂಕಟಗಳ ಒಂಟಿತನ ಕಾಡುತ್ತದೆ. ಹೌದಲ್ಲ “ಇಳಿವಯಸ್ಸಿನಲ್ಲಿ ಸಹಾಯ ಮಾಡಬೇಕಾದ ಮಕ್ಕಳು ಹೀಗೆ ನಡು ನೀರಿನಲ್ಲಿ ಕೈ ಬಿಟ್ಟು ಹೋದರೆ…?? ಎಲ್ಲಿಯೋ ದೂರದಲ್ಲಿದ್ದು ಯಾರಿಗೋ ಪೋಷಿಸಲು ಹೇಳಿ ದೂರ ಹೋಗುವ ಸಂಬಂಧಗಳಿಗೆ ನಾವು ಹೇಳುವುದಾದರೂ ಏನು…?? ನಿಜವಾದ ನಮ್ಮ ಮಕ್ಕಳ ಪ್ರೀತಿ ಸಿಗುವುದಾದರೂ ಯಾವಾಗ..?? ಕಷ್ಟಕ್ಕಾಗದ ಎಂತಹದೇ ಸಂಬಂಧವಿದ್ದರೇನು ಬಂತು..??”
ಎಂದು ತಮ್ಮೊಳಗೆ ಕಣ್ಣೀರಿಡುತ್ತಾರೆ ಆ ವೃದ್ಧರು…!!
ಈ ಆಧುನಿಕ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗಿ, ವಿಭಕ್ತ ಕುಟುಂಬಗಳು ರೂಪಗೊಂಡಿವೆ. ಉದ್ಯೋಗವನ್ನು ಅರಸಿಕೊಂಡು ದೂರ ದೂರದ ನಗರ ಪ್ರದೇಶಗಳಿಗೆ ಹೋದ ಮಕ್ಕಳು ತಂದೆ ತಾಯಿಗಳ ಕೈಗೆ ಸಿಗದೇ ಕೇವಲ ಹಣದ ಹಿಂದೆ ಬಿದ್ದು, ನಿಜವಾದ ಬಾಂಧವ್ಯವನ್ನು ಕಳೆದುಕೊಂಡು ಬಿಡುತ್ತಾರೆ. “ತಿಂಗಳಿಗೆ ಇಂತಿಷ್ಟು ವೃದ್ಧಾಶ್ರಮಕ್ಕೆ ಕಟ್ಟಿದರೆ ಸಾಕು” ಎಂದು ವಯಸ್ಸಾದ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ವೃದ್ದಾಶ್ರಮದವರು ಅವರನ್ನು ಮಕ್ಕಳಂತೆ ಸಾಕಲು ಪ್ರಯತ್ನ ಪಡುತ್ತಾರೆ.
ಆದರೆ…
“ಮಕ್ಕಳ ಪ್ರೀತಿ ಮಕ್ಕಳೇ ಕೊಡಬಲ್ಲರು ಬೇರೆಯವರಿಂದ ಸಾಧ್ಯವಿಲ್ಲ..” ಎನ್ನುವ ಹೃದಯದೊಡಲಿನ ಆಕ್ರಂದನದ ನೋವು ವೃದ್ಧ ಜೀವಗಳಿಗೆ ಮಾತ್ರ ಗೊತ್ತು..!!
ತೆವಳುತ್ತ ನಡೆಯುವಾಗ ಕೈಹಿಡಿಯದ ಮಕ್ಕಳು, ಮುಪ್ಪಿನಲ್ಲಿ ಕಾಯಿಲೆಗೆ ಔಷಧವಾಗದ ಮಕ್ಕಳು, “ನಿಮ್ಮೊಂದಿಗೆ ನಾನಿರುವೆ ಚಿಂತೆಬೇಡ. ಮೊಮ್ಮಕ್ಕಳೊಂದಿಗೆ ಸದಾ ನಗು ನಗುತ್ತಾ ಪ್ರೀತಿಯಿಂದ ಮಾತನಾಡಿಸುತ್ತಾ ನಿವಿರಿ..” ಎಂದು ಅವರ ಆರೈಕೆಯನ್ನು ಮಾಡುವ ಮಕ್ಕಳು ಇಲ್ಲದೆ ಹೋದರೆ ಇಂತಹ ವೃದ್ಧಾಶ್ರಮಗಳು ಆಧಾರವಾಗುತ್ತವೆ.
ಅಂತಹ ವೃದ್ಧಾಶ್ರಮಗಳು ಬೇರುಗಳು ಸಡಿಲವಾಗಬೇಕು..!!
ಹೌದು..!!
ಸಾಧ್ಯವಾದರೆ ವೃದ್ಧಾಶ್ರಮಗಳು ಇಲ್ಲವಾಗಬೇಕು. ವೃದ್ದಾಶ್ರಮಗಳು ಇಲ್ಲವಾಗಬೇಕೆಂದರೆ ಮಕ್ಕಳು ತಮ್ಮ ಪಾಲಿನ ಕರ್ತವ್ಯವನ್ನು ಮರೆಯದೆ ತಾವೇ ಮಾಡಬೇಕು. ಮರ ಹಚ್ಚಹಸಿರಾಗಿರಲು ಬೇರುಗಳು ಅಷ್ಟೇ ಗಟ್ಟಿಯಾಗಿರಬೇಕು. ಬೇರುಗಳು ಗಟ್ಟಿಯಾಗದೇ ಹೋದರೆ ಮರ ಒಣಗಿ ಬೋಳಾದಿತು ಎಂಬ ಎಚ್ಚರ ನಮ್ಮೊಳಗಿರಬೇಕು.
ಬಾಳೆಂಬ ಪಯಣದಲಿ ನಮ್ಮನ್ನು ಒಂದು ದಡಕ್ಕೆ ಮುಟ್ಟಿಸಿದವರನ್ನು ಪ್ರೀತಿಯಿಂದ ಸಂರಕ್ಷಿಸುವುದು ಮಕ್ಕಳಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಅಂತಹ ವೃದ್ಧ ಜೀವಗಳ ಮಮತೆಯ ಮಡಿಲಿಗೆ ಒಲವನ್ನು ಧಾರೆಯಾಗಿ ಸುರಿಯಬೇಕು. ಆಗ ಅವರೊಳಗಿನ ‘ಅನಾಥಭಾವ’ ಇಲ್ಲವಾಗುತ್ತದೆ. ನಮಗೂ ಮುಂದೊಂದು ದಿನ ಮುಪ್ಪು ತಪ್ಪಿದ್ದಲ್ಲ. ಆ ಮುಪ್ಪಿನಲ್ಲಿ ಆಸರಾಗುವದನ್ನು ನಾವು ಪಾಲಿಸೋಣವೆಂದು ಪ್ರೀತಿಯಿಂದ ಆಶಿಸುವೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.
ಕರುಳ ಬಳ್ಳಿಗಳ ಅವಿನಾಭಾವ ಸಂಬಂಧಗಳು ಹಳಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಯ ಮಾನಸಿಕ ಸ್ಥಿತಿ ವಿಚಿತ್ರವಾಗತೊಡಗಿದೆ. ಭಾವನಾತ್ಮಕ ಸಂಬಂಧಗಳು ಅಳಿಸಿ ಹೋಗತೊಡಗಿವೆ. ಹೆತ್ತವರ ಕುತ್ತಿಗೆಗಳಿಗೇ ಚೂರಿ ಹಾಕುವ ಸಂತತಿ ಹೆಚ್ಚಾಗತೊಡಗಿದೆ. ಇಲ್ಲಿ ಹಿರಿಯರು ಎಡವುತ್ತಿರುವರೋ, ಯುವ ಜನತೆ ಎಡವುತ್ತಿರುವರೋ ಅರ್ಥವಾಗುತ್ತಿಲ್ಲ.
ವಾಸ್ತವದ ಚಿತ್ರಣ ಯಥಾವತ್ತಾಗಿ ಮೂಡಿಬಂದಿದೆ ಲೇಖನದಲ್ಲಿ.
ಅಭಿನಂದನೆಗಳು.