
ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ ಬೊಮ್ಮಾ
ಸ್ತ್ರೀ ಎಂಬ
ಅಸ್ಮೀತೆಯ
ಹುಡುಕಾಟದಲ್ಲಿ.

ಮಾರ್ಚ್ ತಿಂಗಳು ಬಂತಂದ್ರ ಸಾಕು ಆ ತಿಂಗಳು ಮುಗಿಯೋ ತನ ಬರಿ ಸ್ತ್ರೀ , ಸ್ತ್ರೀ ಅಂಬೋ ರಾಗ . ಯಾಕಂದ್ರ ಈ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಇರೋದು ಮಾರ್ಚ್ ತಿಂಗಳದಾಗ , ಅದೊಂದ ತಿಂಗಳ ಎಲ್ಲಾ ಕಡಿ ಮಹಿಳಾ ದಿನಾಚರಣೆ ಆಚರಿಸೋದು , ಸ್ತ್ರೀ ಅಂದ್ರ ತಾಯಿ , ತಂಗಿ ,ಅವ್ವ ,ಹೆಣ್ತಿ , ಮಗಳು , ದೇವಿ , ಶಕ್ತಿ ಇನ್ನೂ ಎನೇನೋ ಅಂತ ಬಣ್ಣಿಸಿ ಮಹಿಳಾ ದಿನಾಚರಣೆ ಮುಗಿಸೋದು . ಇದು ಪ್ರತಿ ವರ್ಷ ನಡಕೊಂತ ಬರತದ.ಈಗ ಈ ಮಹಿಳಾ ದಿನಾಚರಣೆ ಮಾಡೋದು ತುಸು ಹೆಚ್ಚೆ ಆಗ್ಯಾದ ಬಿಡ್ರಿ. ಮೊದಲ ಶಾಲೆ , ಕಾಲೇಜದಾಗ ಅಷ್ಟೆ ಈ ದಿನಾಚರಣೆ ಮಾಡತಿದ್ರೂ , ಈಗ ಆಫಿಸ್ ಗಳದಾಗ , ಮಹಿಳಾ ಕಿಟಿ ಪಾರ್ಟಿಯೊಳಗ , ಗಲ್ಲಿಯೊಳಗೆಲ್ಲ ಮಹಿಳಾ ದಿನಾಚರಣೆ ಮಾಡಲತಿವಿ. ಬಣ್ಣ ಬಣ್ಣದ ಬಟ್ಟಿ ಹಾಕ್ಕೊಂಡು ಹಾಡಕ್ಕೊಂಡು ಕುಣಕ್ಕೊಂಡು ಒಂದಿಷ್ಟು ಖುಷಿಯಾಗಿ ಸಮಯ ಕಳಿಲಕ್ಕ ಒಂದು ಕಾರಣ ಅಂದಕ್ಕೊಳ್ಳಣ ಬಿಡ್ರಿ.
ಆದ್ರ ಎಷ್ಟು ಜನ ಈ ಮಹಿಳಾ ದಿನಾಚರಣೆ ಯಾಕ ಮಾ , ಡ್ತಾರ ಅಂತ ತಿಳಕ್ಕೊಂಡಿವಿ..! ಎಲ್ಲರಿಗೂ ತಿಳಿದಂಗ ಕ್ಲಾರಾ ಜೆಟ್ ಕಿನ್ ಎಂಬ ವಿದೇಶಿ ಹೊರಾಟಗಾರ್ತಿ ಗಂಡು ಮತ್ತ ಹೆಣ್ಣಮಕ್ಕಳ ನಡುವೆ ಇರೋ ವೇತನ ತಾರತಮ್ಯ ನಿವಾರಣೆ ಮಾಡ್ಲಕ್ಕ ನಡೆಸಿರೋ ಹೋರಾಟ ಅಂತ ಎಲ್ಲರಿಗೂ ಗೊತ್ತು. ಇಷ್ಟು ದಿನದ ಈ ಹೋರಾಟದ ಮತ್ತು ಮಹಿಳಾ ದಿನಾಚರಣೆ ಆಚರಣೆ ಮಾಡಿದ್ದರ ಪರಿಣಾಮ ಎನಾದ್ರೂ ಬದಲಾವಣೆ ಆಗ್ಯಾದೇನು ಅಂತ ಯಾರಿಗಾದ್ರೂ ಕೆಳಿದ್ರ ಮತ್ತ ಚರ್ಚೆ ಶುರು ಆಗತದ. ನಮ್ಮ ನಾವೇ ಆತ್ಮಾವಲೋಕನ ಮಾಡ್ಕೋಬೇಕು ಅಷ್ಟ.

ವೇತನ ತಾರತಮ್ಯ ಅಂತೂ ನಿಂತಿಲ್ಲ.ನಮ್ಮ ದೇಶದಾಗ ದಿನಗೂಲಿ (ಕೂಲಿ) ನೌಕರಿ ಮಾಡೋ ಹೆಣ್ಣಮಕ್ಕಳಿಗಿ ಒಂದು ಪಗಾರ ಆದ್ರ ಗಂಡ ಮಕ್ಕಳಿಗಿ ಅವರಿಗಿಂತ ಹೆಚ್ಚ ಪಗಾರ ಇರತದ. ಕ್ಲಾರಾ ಜೆಟ್ ಕಿನ್ ಅವರ ಅಭಿಯಾನ ಯಾವಾಗ ಪೂರ್ಣ ಪ್ರಮಾಣದಲ್ಲಿ ಸಫಲ ಆಗತದ..! ಯಾರಿಗೂ ಗೊತ್ತಿಲ್ಲ.
ಇನ್ನೂ ಸಮಾನತೆಗಾಗಿ ನಾವು ಹೋರಾಡಿ ಈ ಮಹಿಳಾ ದಿನಾಚರಣೆ ಮಾಡ್ತವಿ ಅಂತ ಹೇಳತೀವಿ. ಸಮಾನತೆ ಅಂದ್ರ ಏನು.. ಯಾವ ಸಮಾನತೆಗಾಗಿ ನಾವು ಹೋರಾಡತಿದ್ದಿವಿ.ಈ ಪ್ರಶ್ನೆಗೆ ನಿಖರವಾದ ಉತ್ತರ ನಮಗೆ ಗೊತ್ತಿಲ್ಲ. ಇಲ್ರೀ ನಮಗ ಎಲ್ಲ ಕ್ಷೇತ್ರದಾಗ ಸಮಾನತೆ ಸಿಕ್ಜದ. ರಾಜಕೀಯ ಕ್ಷೇತ್ರದಾಗ ಮಾತ್ರ ನಮಗ ಸಿಗಬೇಕಾದ ಮಿಸಲಾತಿ ಇನ್ನೂ ಸಿಕ್ಕಿಲ್ಲ.ಅದಿಷ್ಟು ಸಿಕ್ಕಬಿಟ್ರ ನಾವೂ ಪುರುಷರಿಗಿಂತ ಯಾವದ್ರಾಗೂ ಹಿಂದಿಲ್ಲ ಅಂದಂಗಾಯ್ತ ನೊಇಡ್ರೀ , ಅಂತ ನಮ್ಮ ಬೆನ್ನ ನಾವೇ ತಟ್ಕೋಬಹುದು. ಆದ್ರ ಸ್ವಲ್ಪ ವಿವೇಚನೆಯಿಂದ ವಿಚಾರ ಮಾಡಿದ್ರ ನಮಗ ರಾಜಕೀಯದಾಗೂ ಅವಕಾಶ ಸಿಕ್ತು ಅಂತನೇ ಇಟ್ಕೋರಿ , ಆಗ ನಾವು ಎಷ್ಷರ ಮಟ್ಟಿಗಿ ಅದಕ್ಕ ನ್ಯಾಯ ಒದಗಿಸ್ತಿವಿ.ಮತ್ತ ನಮಗ ನಮ್ಮ ಗಂಡನೋ ಮಗನೋ ತಮ್ಮನೋ ಅಣ್ಣನೋ ಬೆಂಬಲಕ ಬೇಕು.ಅವ್ರು ಹೇಳಿದಂಗೆ ರಾಜಕೀಯ ಮಾಡ್ಭೆಕು. ನಾವೊಬ್ಬ ಡಮ್ಮಿ ಕ್ಯಾಂಡಿಡೆಟ್ ಆಗಿ ರಾಜಕೀಯದ ಸೀಟ್ ಮ್ಯಾಗ ಕೂಡಬೇಕು ಅಷ್ಟ .ಈಗ ಇರೋ ತಾಲೂಕು ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ಮಹಿಳಾ ಮೆಂಬರ್ ಗಳು ಮತ್ತು ಮಹಿಳಾ ಅದ್ಯಕ್ಷರುಗಳು ಎಷ್ಟರ ಮಟ್ಟಿಗಿ ಸ್ವನಿರ್ಧಾರದಿಂದ ಕೆಲಸ ಕಾರ್ಯ ಮಾಡ್ತರಾ.. ! ರಾಜಕೀಯ ಕ್ಷೇತ್ರದಲ್ಲಿ ಇರೋ ಹೆಣ್ಣಮಕ್ಕಳೆಲ್ಲ ಪುರುಷರ ಅಧೀನದಲ್ಲಿ ಇರೋರೆ ಆಗಿದ್ದಾರ.

ಒಂದು ವೇಳೆ ನಾವೇ ನಿರ್ಣಯ ತಗೊಂಡು ಆಡಳಿತ ನಡಸಲಕ್ಕ ಮುಂದಾದ್ರ ಈ ಹೆಣ್ಣಮಗಳೇನ ಮಾಡ್ತಾಳ , ಅವಳಿಗೇನ್ ತಿಳಿತದ ಅಂಬೋ ಮಾತು ಕೇಳಕ್ಕ ತಯ್ಯಾರ ಇರಬೇಕು.ಗಂಡಮಕ್ಕಳ ಎನಾರ ತಪ್ಪ ಮಾಡಿದ್ರ ಸಮಾಜ ಮುಚ್ಚ ಬಿಡತದ.ಹೆಣ್ಣ ಮಾಡಿದ್ದ ತಪ್ಪ ಸಮಾಜ ಎತ್ತಿ ತೊರಸ್ತದ.ನಮಗರ ಎಲ್ಲ ಜವಾಬ್ದಾರಿ ಮೈಮ್ಯಾಲ ಎಳಕ್ಕೋಳ್ಳೊ ದೈರ್ಯ ಎಲ್ಲದ..! ಮತ್ತ ಗಂಡ ಮಕ್ಕಳ ಅಧಿನದಾಗೆ ಇರಬಯಸೋರು ನಾವು.
ಸಮಾನತೆ ಪ್ರಶ್ನೆ ಬಂದಾಗ ಪುರುಷರು ನಮಗ ಕೇಳತಾರ , ಅಲ್ರೀ ಸಮಾನತೆ ಸಮಾನತೆ ಅಂತ್ರಿ . ನಿಮ್ಮ ಹೆಣ್ಣಮಕ್ಕಳ ಹತ್ರನೆ ಸಮಾನತೆ ಇಲ್ಲ. ಒಗ್ಗಟ್ಟ ಇಲ್ಲ , ಇನ್ನ ಹೊರಗೆಲ್ಲಿ ಸಮಾನತೆ ಹುಡುಕತ್ರಿ .. ಅಂತ ಕುಹಕ ಆಡ್ತಾರ.
ಇದು ಒಪ್ಕೋಬೇಕಾ..ಅಥವಾ ನಮ್ಮನಮ್ಮಲ್ಲೆ ಜಗಳ ತಂದಿಡಲಕ್ಕ ಅವರ ಕುಹಕ ಅಂತ ವಿರೋಧಿಸಬೇಕಾ ತಿಳಿವಲ್ದು. ಒಂದು ನಿಜ ನಾವು ಹೆಣ್ಣಮಕ್ಕಳು ಕಳಕ್ಕೋಳ್ಳೋ ಭಯಕ್ಕ ಹೆಚ್ಚು ಒಳಪಡತಿವಿ. ಗಂಡ ,ಮಕ್ಕಳು ,ಅಧಿಕಾರ ,ಪಟ್ಟ ಯಾವದೇ ಇರಲಿ ಅದು ಕಳೆದು ಹೋಗೋ ಭಯ ಸದಾ ಇರತದ.ಹೌದು ನಾವು ಅತ್ತಿ ಸೋಸಿ ಜಗಳ ಆಡತೀವಿ.ಯಾಕಂದ್ರ ಇಬ್ಬರಿಗೂ ಪುರುಷನೆ ಕೇಂದ್ರ ಬಿಂದು . ಅವನನ್ನು ಒಲಿಸಿಕೊಂಡ್ರ ಸೌಲಭ್ಯಗಳು ಸಿಗಬಹದು. ಜೀವನ ಆರಾಮವಾಗಿ ಸಾಗಬಹುದು ಎಂಬ ಆಸೆ.ಹಿಂದೆ ಪರಾವಲಂಬಿ ಆದ ಹೆಣ್ಣು ದುಡಿಯುವ ಗಂಡಿನ ಮ್ಯಾಲ ಅವಲಂಬಿತಳಾಗಿದ್ಳು.ಮನ್ಯಾಗ ಎಷ್ಟೇ ದುಡೀಲಿ , ಹೊರಗ ದುಡಿದು ಬಂದ ಗಂಡಿನ ಮುಂದ ಅದು ತೃಣ ಸಮ.ಅವನ ಪ್ರೀತಿಯ , ಒಲುಮೆಯ ಕೃಪೆಗೆ ಒಳಪಟ್ರ ಒಂದಿಷ್ಟು ಸೌಲಭ್ಯಗಳ ನೆಮ್ಮದಿ ಸಿಗಬಹುದು ಎಂಬ ಕಾರಣಕ್ಕ ಹೆಣ್ಣು ಸದಾ ಗಂಡಸನ್ನು ಒಲಿಸಿಕೊಳ್ಳಕ್ಕ ಪ್ರಯತ್ನಿಸುತ್ತಲೆ ಇದ್ದಳು. ತಾನಲ್ಲದೆ ಮತ್ತೊಬ್ಬ ಹೆಣ್ಣು ಅವನ ಕೃಪೆಗೆ ಪಾತ್ರ ಆದ್ರ ತನ್ನ ಸೌಲಭ್ಯಗಳಿಗಿ ಕೊರತೆ ಆಗಬಹುದು ಅಂತ ಭಾವಿಸಿ ಇನ್ನೊಬ್ಬ ಹೆಣ್ಣನ್ನ ಅವನಿಂದ ದೂರ ಮಾಡೋ ಪ್ರಯತ್ನ ಮಾಡ್ತಾನೆ ಬಂದ್ಳು.
ಹೆಣ್ಣು ಹೆಣ್ಣಿಗೆ ವೈರಿ ಎಂಬ ಹೇಳಿಕೆಗಳು ಹುಟ್ಟಿದ್ದು ಈ ಕಾರಣಗಳಿಂದ.ಈಗ ಹೆಣ್ಣುಮಕ್ಕಳು ಸ್ವಾವಲಂಬಿ ಗಳು ಆಗ್ಯಾರ. ಎಷ್ಟೆ ಸ್ವಾವಲಂಬಿ ಆದ್ರೂ ಮದುವೆ ಎಂಬ ಬಂಧನದ ಒಂದು ಚೌಕಟ್ಟಿನಲ್ಲಿ ಇರಬೇಕಾದದ್ದು ಅವಳ ಅನಿವಾರ್ಯತೆ. ಹೆಣ್ಣಿನ ಬಗ್ಗೆ ಇರೋ ಅಭಿಪ್ರಾಯ ಹೋಗಲಾಡಿಸಬೇಕಾದ್ರ ನಾವು ಮೊದಲು ಒಂದಿಷ್ಟು ನಮ್ಮ ಮನಸ್ಸನ್ನ ವಿಶಾಲ ಮಾಡ್ಕೋಬೇಕು. ಅಂದ್ರ ಸಹೊದರಿಯತ್ವದ ಭಾವನೆ ಬೆಳಸಕ್ಕೋಬೇಕು. ಮತ್ತೊಂದು ಹೆಣ್ಣನ್ನು ಒಂದು ಸಂಭಂಧದ ನೆಲೆಗಟ್ಟಿನಲ್ಲಿ ನೋಡಲಾರದೆ ಅವ್ಳು ನನ್ನಂತೆ ಒಂದು ಹೆಣ್ಣು ಎಂದು ಭಾವನೆಯಿಂದ ನೊಡ್ಬೇಕು. ಅತ್ತಿ , ನಾದನಿ , ನೆಗೆಣ್ಣಿ , ಅಕ್ಕ , ತಂಗಿ ಇವೆಲ್ಲವೂ ಸಂಭಂಧಕ್ಜ ಇರೋ ಹೆಸರುಗಳು.ಅದರಾಚೆ ಇವ್ರೆಲ್ಕ ಹೆಣ್ಣುಮಕಳು . ಎಲ್ಲರಿಗೂ ಒಂದೇ ಅಸ್ಮೀತೆ.ಒಂದೇ ಭಾವ.ಇಷ್ಟು ನಾವು ಅರ್ಥ ಮಾಡ್ಕೊಂಡ್ರ ನಮ್ಮ ನಮ್ಮ ನಡುವಿನ ಗುದ್ದಾಟಕ್ಕ ತೆರೆ ಎಳಿಬಹುದು. ಮಹಿಳಾ ದಿನಾಚರಣೆ ದಾಗ ಭಾಷಣ ಮಾಡೋವಾಗ , ಹೆಣ್ಣು ತಾಯಾಗಿ , ಮಗಳಾಗಿ , ಹೆಂಡತಿಯಾಗಿ ಮತ್ತ ಎನೇನೋ ಆಗಿ ಅಂತ ಹೇಳತಿವಲ್ಲ..ಅವೆಲ್ಲವೂಗಳಿಗಿ ನಾವು ಎಷ್ಟು ನ್ಯಾಯ ಒದಗಿಸ್ತಿವಿ ಅಂತ ತಿಳಕ್ಕೋಬೇಕು.ಅವೆಲ್ಲವೂಗಳಿಗಿಂತ ಮಿಗಿಲಾಗಿ ನಾವು ಒಬ್ಬ ಮನಿಷ್ರು. ನಮ್ಮನ್ನ ದೇವಿಯಾಗಿ ನೋಡದೆ ಒಬ್ಬ ಮನುಷ್ಯರಾಗಿ ನೋಡಿ ಅಂತ ಸಮಾಜಕ್ಕ ನಾವು ತಿಳಿಸಬೇಕು.ದೇವಿ ಅಂತ ಅವಳಿಗಿ ಕಾಲಿಗಿ ಬೇಡಿ ಹಾಕಿ ಕೂಡಿ ಹಾಕಬ್ಯಾಡ್ರಿ. ಅವಳಿಗಿ ಮತ್ತ ಅವಳ ಕೆಲಸಕ್ಕ ಒಂದಿಷ್ಟ ಪ್ರೊತ್ಸಾಹ ಕೊಡ್ರಿಅಂತನು ಹೇಳಬೆಕಗ್ಯಾದ.
ನಮಗ ಸಣ್ಣವರಿದ್ದಾಗಿಂದ ಹೇಳಿ ಕೊಡಲಾಗತದ. ನೀನು ಹೆಣ್ಣು , ಗಂಡಸಿನಂಗ ನಡಿಬ್ಯಾಡ , ಕೆಳಗ ಮುಖ ಹಾಕಿ ನಡಿ. ಗಂಡಬೀರಿ ಹಂಗ ತಿರಗಾಡಬ್ಯಾಡ. ಗಂಡಸರಂಗ ದನಿ ಎತ್ತಿ ಮಾತಾಡಬ್ಯಾಡ. ಒಟ್ಟು ಗಂಡಸು ಎಂಬ ವಿಷಯ ನಮ್ಮ ಮನಸ್ಸಿನಾಗ ಒಂಥರಾ ಭಯ ಮೂಡಿಸೋ ಪದ ಆಗಿರತದ. ಆಗ ಹೆಣ್ಣು ದನಿ ಎತ್ತಿ ಮಾತಾಡ್ಲಕ್ಕ ಆಗದೆ , ಯಾವದೇ ತಪ್ಪು ವಿರೊಧಿಸ್ಲಕ್ಕ ಆಗ್ದೆ . ಒಂಟಿಯಾಗಿ ಓಡಾಡ್ಲಿಕ್ಕ ಆಗ್ದೆ ,,ಗಂಡು ಎಂಬ ಪಿತೃಪ್ರಧಾನ ದ ಆಡಳಿತದಲ್ಲಿ ಅಧಿನಳಾಗಿ ಬಿಡತಾಳ. ತನ್ನ ಬಂಧನ ಅವಳಿಗಿ ಬಂಧನ ಅನಿಸಲಾರ್ದೆ ಗಂಡಿನ ಆಶ್ರಯದಲ್ಲಿ ಇರೋದೆ ತನಗೆ ಕ್ಷೇಮ ಅಂದ್ಕೊಂಡು ತನ್ನ ಮುಂದಿನ ತಲೆಮಾರಿಗೂ ಅದನ್ನೆ ವರ್ಗಾಯಿಸ್ತ ಬರತಾಳ.
ಮತ್ತೊಂದು ಕಡೆ ಗಂಡು ಮಕ್ಕಳಿಗಿ ನಾವು ಕಲಿಸ್ತಿವಿ. ನೀನು ಹೆಂಗಸರ ಹಂಗ ಅಳಬಾರದು. ಹೆಂಗಸರ ಹಂಗ ಮನ್ಯಾಗೆ ಇರಬಾರದು.ಕೈಗೇನು ಬಳಿ ತೊಟ್ಕೊಂಡಿ ಏನು.. ಹಿಂಗ ಹೆಣ್ಣು ಎಂಬ ಪದ ಅತಿ ಕನಿಷ್ಟ ಎಂದು ಅವನ ಮನದಲ್ಲಿ ಮೂಡಿಸಲಾಗತದ. ಅವನಿಗೆ ಎಷ್ಟೇ ದುಃಖ ಆದ್ರೂ ಅವನು ಅಳು ಹೊರಹಾಕ್ದೆ ಒಳಗೆ ಅದುಮುತಾನ. ಹೆಂಗಸರಂಗ ಮನ್ಯಾಗ ಇರಬಾರದು ಅಂದ್ರ ಹಗಲು ರಾತ್ರಿ ಮನಿ ಹೊರಗೆ ಇದ್ದು ಕೆಟ್ಟ ಚಟಕ್ಕ ಬಿಳತಾನ. ಕೈಗೆ ಬಳೆ ತೊಟ್ಕೊಂಡಿ ಎನು ಎಂಬ ಕುಹಕಕ್ಕೆ ಹೆಂಡತಿಗಿ ಹೋಡೆಯೋದು ಅಥವಾ ಇನ್ನಿತರ ಸಮಾಜ ಘಾತುಕ ಕೆಲಸದಾಗ ಭಾಗಿಯಾಗಿ ಪುರುಷ ಎಂಬ ಅಹಂಕಾರ ದಲ್ಲಿ ಬಂಧಿಯಾಗತಾನ.

ಹೀಗೆ ನಮ್ಮ ಸಮಾಜ ಯಾರನ್ನೂ ಸುಮ್ನ ಇರಕ್ಕ ಬಿಡಲ್ಲ.ಹಿಂಗಿರು ಹಾಂಗ ಆಗಬ್ಯಾಡ. ಹಾಂಗ ಇರು ಹಿಂಗ ಆಗಬ್ಯಾಡ ಅಂತ ಸದಾ ಚುಚ್ಚತ ಇರತದ.ನಾವೆಲ್ಲ ನಮ್ಮತನ ಮರೆತು ಅವರಿವರು ಹೇಳಿದಂಗ ಇರಲಿಕ್ಕ ಪ್ರಯತ್ನಿಸತೀವಿ.
ಹೆಣ್ಣು ಎಂಬ ವ್ಯಕ್ತಿಯನ್ನು ಸಮಾಜ ನೋಡೋ ದೃಷ್ಟಿಕೋನ ಈಗ ಅಧುನಿಕ ಯುಗದಲ್ಲೂ ಬ್ಯಾರೆ ಆಗಿಲ್ಲ ಬಿಡ್ರಿ. ಹೆಣ್ಣು ಅಂದ್ರ ಗೃಹಿಣಿ , ಪೂಜೆ ,ವೃತ , ಮಕ್ಕಳಿಗಿ ನೋಡೊಕೊಂಡು ಮನಿ ಗಂಡ ಅಂತ ಸದಾ ಅವರ ಬಗ್ಗೆ ಕಾಳಜಿ ಮಾಡೋಳು ಅಂಬ ಭಾವನೆ ಅದ.ಅದನ್ನು ಅವಳಿಂದ ಎಲ್ಕರೂ ನೀರಿಕ್ಷಿಸತಾರ.ಅವರ ನೀರಿಕ್ಷೆಗೆ ತಕ್ಕಂಗ ಅವಳು ಇರದಿದ್ರ ಅವಳು ಒಳ್ಳೆ ಗುಣದ ಹೆಣ್ಣ ಮಗಳು ಆಗಲ್ಲ.ಅವಳು ಕುಡಿದರೆ , ದೂಮಪಾನ ಮಾಡಿದ್ರೆ ಕ್ಯಾರೆಕ್ಟರ್ ಕೆಸ್ ಅನ್ನಕೊಳ್ಳತಿವಿ. ಗಂಡಸು ಕುಡಿದ್ರೂ ಧೂಮಪಾನ ಮಾಡಿದ್ರೂ ಹಾಳಾಗೋದು ಆರೋಗ್ಯನೆ. ಇವಳು ಕುಡಿದ್ರೂ ಹಾಳಾಗೋದು ಆರೋಗ್ಯ.ಕೆಟ್ಟದ್ದು ಇಬ್ಬರಿಗೂ ಅನ್ವಯಿಸಬೇಕು.ಆದ್ರ ನಮ್ಮ ಸಮಾಜ ಕುಡಿತ ದೂಮಪಾನ ಮತ್ತೊಂದು ಮತ್ತೊಂದು ಎಲ್ಲ ಕೇವಲ ಹೆಣ್ಣು ಮಾಡಿದ್ರ ಮಾತ್ರ ತಪ್ಪು ಅಂತ ನೋಡೊದ್ಯಾಕೆ.ದೃಷ್ಟುಕೋನ ಬದಲಾಗದೆ ನಾವು ಎಷ್ಟು ಸ್ತ್ರೀ ವಾದ ಅಂತ ಹೋರಾಡಿದರೂ ಎನು ಪ್ರಯೋಜನ ಅದ.
ಮೊದಲು ನಮ್ಮ ನಮ್ಮ ದೃಷ್ಟಿ ಕೋನ ಬದಲಾಯಿಸಿಕೊಳ್ಳಬೇಕು.ಮಹಿಳೆ ಅಂತ ಒಂದು ಸೀಮೀತ ದೃಷ್ಟಿಯಿಂದ ನೋಡದೆ ಅವಳನ್ನು ಕೂಡ ಪುರುಷರಂತೆ ಒಬ್ಬ ಮನುಷ್ಯಳು ಅಂತ ಮಾತ್ರ ಭಾವಿಸಬೇಕು. ಎಷ್ಟೋ ಸಮಾರಂಭಗಳಲ್ಲಿ ನೋಡತೀವಿ , ಮಹೀಳಾ ಅತಿಥಿ ಗಳಿಗೆ ಸನ್ಮಾನಿಸಲು ಮಹಿಳೆಯರೆ ಬರಬೇಕು.ಪುರುಷರಿಗೆ ಸನ್ಮಾನಿಸಲು ಪುರುಷರೆ ಬರಬೇಕು.ಈ ತಾರತಮ್ಯದ ಉದ್ದೇಶ ಏನು..!ಒಬ್ಬ ಪುರುಷ ಮಹಿಳೆಯನ್ನು ಶಾಲು ಹಚ್ಚಿ ಹಾರ ಹಾಕಿದರೆ ಏನಾಗತದ. ಏನು ಆಗಲ್ಲ ಆದ್ರ ಯಾರ ಏನ ಅಂದ್ಕೋತಾರೋ ಅಂತ ಮಾತ್ರ ವಿಚಾರ ಬರತದ.
ನಾವು ಮಹಿಳೆಯರು , ನಾವು ಹಾಗೆ ಹೀಗೆ ಅಂತ ನಮ್ಮ ನಾವೇ ವೈಭವಿಕರಿಕೊಳ್ಳದು ಬಿಟ್ಟು ನಾವು ದುಡುಬೇಕು. ಗಂಡ ಮಾತ್ರ ದುಡದು ನನಗ ಮಕ್ಕಳಿಗಿ ಸಾಕ್ಲಿ ಅನ್ನೋದು ಈಗೀನ ದಿನಮಾನದಾಗ ತಪ್ಪ ಆಗತದ.ಅವನೊಬ್ನೆ ಎಷ್ಟು ದುಡಿತಾನ..! ಹೆಣ್ಣು ಅವನಿಗೆ ಕೈಜೋಡಿಸಬೇಕು. ಹಂಗೆ ಪುರುಷನೂ ಕೂಡ ಮನಿಕೆಲಸ ಮಕ್ಕಳನ್ನ ನೋಡಕೊಳ್ಳದ್ರಾಗ ಹಿಂದೆ ಬಿಳಬಾರದು.ಈಗಿನ ಬಾಳಷ್ಟು ಹೆಣ್ಣಮಕ್ಕಳು ಉದ್ಯೋಗಸ್ಥ ರಿದ್ದಾರ. ಸಂಸಾರ ಎಂಬ ಬಂಡಿ ಗಂಡು ಹೆಣ್ಣು ಇಬ್ಬರೂ ಕೂಡಿ ಎಳೆದ್ರ ಜೀವನ ಹಗುರ.
ಗಂಡು ,ಹೆಣ್ಣು ಸೃಷ್ಟಿ ಯ ಎರಡು ಕಣ್ಣು ಅಂತ ಎಲ್ಲರಿಗೂ ಗೊತ್ತದ.ಬದುಕಿನ ಬಂಡಿ ಸಾಗಿಸಲಕ್ಕ ಎರಡು ಎತ್ತುಗಳೆಂಬ ಜೋಡಿ ಬೇಕು.ಒಂದು ಮುಗ್ಗರಿಸಿದ್ರೂ ಇನ್ನೊಂದು ನಿಂತು ಬಿಡತದ. ಇಷ್ಟು ಅರ್ಥ ಮಾಡಕ್ಕೊಂಡ್ರ ಹೆಣ್ಣು ಗಂಡು ಎಂಬ ಭೇದಭಾವ ಬರಲೇ ಬಾರದು. ಇನ್ನೂ ಮಹಿಳಾ ದಿನಾಚರಣೆ ವಿಷಯ. ಅದು ಹಂಗೆ ನಡಿಲಿ.
ನಮ್ಮ ಹೆಸರಿನ ಮ್ಯಾಲ ವರ್ಷದ ಒಂದು ದಿನ ಎಲ್ಲರೂ ಹೊಗಳಿ ಹೊಗಳಿ ನಮಗ ಖುಷಿಪಡಿಸ್ತಾರ. ಒಟ್ಟನಾಗ ನಾವೂ ನೀವು ಖುಷಿಯಿಂದ ಇರೋಣು.
ಜ್ಯೋತಿ , ಡಿ .ಬೊಮ್ಮಾ.

ನೈಜ ಚಿತ್ರಣ…
ಈ ಲೇಖನದಲ್ಲಿ