ಕಾವ್ಯ ಸಂಗಾತಿ
ಅಭಿಷೇಕ ಬಳೆ ಮಸರಕಲ್
ಸಂಜೆಗಳು ಮಾತನಾಡುತ್ತಿವೆ….
ಈಗೀಗ
ಸಂಜೆಗಳು ಮೆಲ್ಲಗೆ
ಮಾತನಾಡಲು ಶುರು ಮಾಡಿವೆ
ನೀನು ಹೊರಟು ನಿಂತಾಗಿನಿಂದ
ಕಾಯ್ದಿರಿಸಿದ ಜೋಡು ಬೆಂಚಿನ
ಮೇಲಿನ ನೆನಪುಗಳು
ವಿರಹದ
ಸಾಲುಗಳ ಬರೆಯುತ್ತಿವೆ
ಸೋತ ಪ್ರೇಮ ಕಥೆಗೆ
ಒಮ್ಮೊಮ್ಮೆ
ಏಕಾಏಕಿ
ಏಕಾಂತವೂ ಎದೆಗಿರಿಯುತ್ತಿದೆ
ಬಾರಿ ಬಾರಿ
ಕೂಡಿ ಕಳೆದ
ದಿನಗಳು ನೆನಪಾಗಿ
ಪದೇ ಪದೇ
ಉಂಟಾಗುವ ನೋವು
ನಿಶ್ಚಯವಾಗಿ ಒಲವನ್ನೇನು
ಕಡಿಮೆ ಮಾಡುವುದಿಲ್ಲ
ಪದೇ ಪದೇ ನಿನ್ನ ನಂಬರಿಗೆ
ರಿಂಗಣಿಸುವ ನಾನು
ಆ ಕಡೆಯಿಂದ ಉಲಿಯುತ್ತಾಳಾಕೆ
ನೀವು ಕರೆ ಮಾಡಿದ
ಚಂದಾದಾರರು ಮನದ ವ್ಯಾಪ್ತಿ
ಪ್ರದೇಶದಿಂದ ಹೊರಗಿದ್ದಾರೆ
ಅಭಿಷೇಕ ಬಳೆ ಮಸರಕಲ್