ಅರುಷಿ ರಾಘವೇಂದ್ರ-ನನ್ನ ಮುದ್ದಿನ ತಾತ

ವಿದ್ಯಾರ್ಥಿ ವಿಭಾಗ

ಅರುಷಿ ರಾಘವೇಂದ್ರ

ನನ್ನ ಮುದ್ದಿನ ತಾತ

ಅಗಲಿದ ಅಜ್ಜನಿಗೊಂದುಅರ್ಥಪೂರ್ಣ ನುಡಿನಮನ

ಬೆಚ್ಚನೆಯ ಗುಬ್ಬಚ್ಚಿಗೂಡು ನಮ್ಮಯ ತಾತನಿರುವಮನೆ
ಅಪ್ಪುಗೆಯಲಿ ಕಣ್ಮುಚ್ಚಿದರಲ್ಲಿ ಸವಿನಿದ್ದೆಗಿಲ್ಲ ಕೊನೆ!
ತೊಡೆಯೇರಿದರೆ ಪುಟ್ಟ ಬಾಯಳೊಂದು ಅಮೃತದ ಕೈತುತ್ತು
ಅಳುವಾಗ ಕಣ್ಣೊರಸಿ ಕೆನ್ನೆಗೊಂದಕ್ಕರೆಯ ಸಿಹಿಮುತ್ತು
ನಗುನಗುತ ನಮ್ಮನಾಡಿಸಿದಾತ ನನ್ನ ಮುದ್ದಿನ ತಾತ | 1 ||

ಶಿಕಾರಿಪುರದ ದೊಡ್ಡಪೇಟೆಯಲಿ ನಮ್ಮದೇ ರಾಜ್ಯಭಾರ
ಅಲ್ಲಿಲ್ಲ ಸದ್ಯ ನಮ್ಮಪ್ಪ ಅಮ್ಮ ಶಾಲೆಯ ತಲೆಭಾರ!
ದಿನವೂ ಗೆಳೆಯರ ದರಬಾರಿನಲಿ ನಾನೇ ರಾಜಕುಮಾರಿ
ತಾತನ ಜೊತೆಗೆ ಗುಡುಗುಡು ಬುಲೆಟ್ಟಿನಲ್ಲೇ ಜಂಬುಸವಾರಿ
ಮಕ್ಕಳನು ರಂಜಿಸಿದ ದೊರೆಯಾತ ನನ್ನ ಮುದ್ದಿನ ತಾತ | 2 |

ತೋಟದ ಹೊಸಮನೆಯೇ ರಜಾದಿನಗಳ ನಮ್ಮಯ ಬಿಡಾರ
ಅಂಗಳದ ಕೋಳಿಮರಿ ಹಟ್ಟಿಯ ದನಕರುಗಳೆ ಪರಿವಾರ
ರಸಬಾಳೆ ಸಾಲು ಮಾವಿನ ತೋಪು ತೆಂಗು ಅಡಕೆಗಳ ಕೃಷಿ
ಜೊತೆಗೂಡಿ ನೆಟ್ಟ್ಟೇವು ನನ್ನಯ ಹೆಸರಲೊಂದು ಪುಟ್ಟಸಸಿ
ಮಣ್ಣನೇ ಸದಾ ನಂಬಿದ ರೈತ ನನ್ನ ಮುದ್ದಿನ ತಾತ! | 3|

ಸಗ್ಗದ ಸವಿಯುಣಿಸಿದ ಬಿಸಿರೊಟ್ಟಿಗುಂಡೆ ಬೆಣ್ಣೆಯ ಮೆತ್ತಿ
ಎಣ್ಣೆಗಾಯಿ ಶೇಂಗಾಚಟ್ನಿಯ ಜೊತೆಗೆ ಕೆನೆಮೊಸರ ಬುತ್ತಿ
ಹೊಯ್ಯಪ್ಪಳದ ಅಜ್ಜಿಯ ಸಡಗರ ನಮಗೆಲ್ಲರಿಗೂ ಮಜೆ
ಒಬ್ಬಟ್ಟಿಗೆ ಮಾವಿನ ಸೀಕರಣೆ ಕಳೆಯಿತು ವರುಷದ ರಜೆ
ರಸಗಳ ಸವಿಯುವುದ ಕಲಿಸಿದಾತ ನನ್ನ ಮುದ್ದಿನ ತಾತ | 4|

ಗೆಳೆಯರ ಜೊತೆಗೆ ಚಹಾ ಮಂಡಕ್ಕಿ ಪಕೋಡ ಮಿರ್ಚಿ ಬಜ್ಜಿ
ಸಿಹಿತಿನಿಸಿಗೆ ಬೇಸನ್ ಉಂಡಿ ಮಾಸ್ಟರ್ ಶೆಪ್ಪು ನಮ್ಮಜ್ಜಿ
ಬಾಯಾಡಿಸಲು ಸ್ವಲ್ಪ ಗೋಡಂಬಿ ಬಾದಾಮಿ ಒಣದ್ರಾಕ್ಷಿ
ಪಾನಿಪುರಿ ಕೇಕು ಐಸ್-ಕ್ರೀಮ್ ಗಳಿಗೆ ನಾನೇ ಕಳ್ಳಸಾಕ್ಷಿ
ತಿಂಡಿಯಲಿ ನನ್ನ ಮೀರಿಸಿದಾತ ನನ್ನ ಮುದ್ದಿನ ತಾತ | 5|

ಮಾರ್ಕೆಟ್ಟಿನ ಹೊಸ ಡ್ರೆಸ್ಸು ಚೆಂದದ ಕೂಲಿಂಗ್ ಗ್ಲಾಸು
ಫಾರಿನು ವಾಚು ಹೊಳೆಯುವ ಬೂಟು ಎಲ್ಲವು ಮ್ಯಾಚು
ಬಾಂಡ್ ಚಿತ್ರದ ಶೋಕು ಅವನಂತೆ ತಾತ ಟಾಕುಟೀಕು
ಮುಗಿಯದ ಗಿಫ್ಟಗಳ ಸ್ಟಾಕು ಅವನಂತ ಗೆಳೆಯ ಬೇಕು!
ಮಕ್ಕಳ ಕನಸಿನ ಹೀರೋ ಆತ ನನ್ನ ಮುದ್ದಿನ ತಾತ | 6|

ನಡುರಾತ್ರಿಯೆ ಕದ ತಟ್ಟಲಿ ದೂರದ ಹಳ್ಳಿಯ ಕರೆಬರಲಿ
ಬಡವ ಬಲ್ಲಿದರಿರಲಿ ಬದುಕುವ ಕನಸನೆ ತೊರೆದವರಿರಲಿ
ತಾತನ ಮಹಾತಪಸ್ಸಿನ ಮಂತ್ರದಂಡ ಕೊರಳಲಿ ಸದಾಸಿದ್ದ
ಹೊಸಬಾಳು ಹೊಸನಾಳೆಯ ಕರುಣಿಸಲು ಸಂಜೀವನಿ ಬದ್ಧ
ನೊಂದ ಜನದ ಪಾಲಿಗೆ ಭಗವಂತ ನನ್ನ ಮುದ್ದಿನ ತಾತ | 7 |

ತನ್ನೂರು ತನ್ನಜನ ಪಂಡಿತರ ದಾರಿಯಲ್ಲೆ ಜೀವನ
ಬನಸಿರಿಯ ಕಟ್ಟಿ ಜ್ಞಾನರಶ್ಮಿಯ ಬೆಳಗಿದ ದಿವ್ಯಚೇತನ
ದೊರೆತನದ ಯೋಗ ತೊರೆದರೂ ದಯೆ ಆನಂದಕೆ ಮಿತಿಯಿಲ್ಲ
ಮಮತೆಯಲಿ ಪ್ರೀತಿ ಸ್ನೇಹಗಳ ಪಾಠ ಕಲಿಸಿದ ನಮಗೆಲ್ಲ
ಸುಂದರ ಮೂರುತಿ ಸುವರ್ಣಕಾಂತ ನನ್ನ ಮುದ್ದಿನ ತಾತ l 8 |

ಪಂಡರಾಪುರ ವಿಠಲನ ನಾಮಕೆ ನನ್ನನು ಕುಣಿಸಿದಾತ
ವೈದ್ಯಲೋಕದ ವಿಸ್ಮಯಕೆ ಅಣ್ಣನ ಕಣ್ಣ ತೆರೆಸಿದಾತ
ಹೆಜ್ಜೆಹೆಜ್ಜೆಗೂ ಹಿರಿಹಿರಿ ಹಿಗ್ಗಿ ಮೆಚ್ಚುಗೆಯನು ಸೂಸುತ
ಮರೆತೆಲ್ಲ ನಮ್ಮ ತಪ್ಪುಗಳ ಹರಸಿ ಕೈಹಿಡದು ನಡೆಸುತ
ಭ್ರಾಂತೇಶನ ಪಾದ ಸೇರಿದಾತ ನನ್ನ ಮುದ್ದಿನ ತಾತ | 9|


ಅರುಷಿ ರಾಘವೇಂದ್ರ.

ಹನ್ನೆರಡನೆ ತರಗತಿ

ಯ.ಎಸ್.ಎ.

Leave a Reply

Back To Top