ವಚನ ಸಂಗಾತಿ
ಪ್ರೊ.ಜಿ. ಎ. ತಿಗಡಿ.
ಶಿವಲೆಂಕ ಮಂಚಣ್ಣನ ವಚನ ವಿಶ್ಲೇಷಣೆ
ಅರ್ತಿಯಿಂದ ಮಾಡುವ ಭಕ್ತಿ,
ಕರ್ತಾರನ ಕಮ್ಮಟಕ್ಕೊಳಗಾಯಿತ್ತು.
ಸತ್ಯದಿಂದ ಮಾಡುವ ಭಕ್ತಿ,
ಕರ್ತಾರನ ಕಮ್ಮಟಕ್ಕೆ ಹೊರಗಾಯಿತ್ತು.
ಅರ್ತಿ ಲೌಕಿಕಕ್ಕೆ, ಸತ್ಯ ಪರಮಾರ್ಥಕ್ಕೆ.
ಉಭಯದ ಗೊತ್ತನರಿದು ಮಾಡುವನ ಭಕ್ತಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕರ್ಪಿತವಾಯಿತ್ತು.
ಪ್ರೀತಿಯಿಂದ ಮಾಡುವ ಭಕ್ತಿ ಭಗವಂತನ ಲೌಕಿಕ ಸಾಂಸಾರಿಕ ಜೀವನದಲ್ಲಿ ಮುಳುಗಿತ್ತು. ಸತ್ಯದಿಂದ ಮಾಡುವ ಭಕ್ತಿ ಅದೇ ಭಗವಂತನ ಲೌಕಿಕ ಸಾಂಸಾರಿಕ ಜಂಜಡಗಳಿಂದ ದೂರವಾಗಿತ್ತು. ಪ್ರೀತಿಯ ಭಕ್ತಿ ಲೌಕಿಕಕ್ಕಾದರೆ, ಸತ್ಯದ ಭಕ್ತಿ ಪರಮಾರ್ಥಕ್ಕೆ. ಈ ಎರಡರ ನಿಜ ಸ್ವರೂಪವನ್ನು ಅರಿತು ಮಾಡುವವನ ಭಕ್ತಿ ಮಾತ್ರ ಭಗವಂತನಿಗೆ ಅರ್ಪಿತವಾಗುತ್ತದೆ. ಎಂದು ಶಿವಲೆಂಕ ಮಂಚಣ್ಣ ಅಭಿಪ್ರಾಯಪಡುತ್ತಾನೆ.
ಭಕ್ತಿಯ ಸ್ವರೂಪ ಮತ್ತು ಅದನ್ನು ಮಾಡುವ ಬಗೆಯನ್ನು ಪ್ರಸ್ತುತ ವಚನದಲ್ಲಿ ವಿವರಿಸಲಾಗಿದೆ. ಪ್ರೀತಿಯ ಭಕ್ತಿ ಮತ್ತು ಸತ್ಯದ ಭಕ್ತಿಯೆಂದು ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಇದನ್ನೇ ಲೌಕಿಕ ಭಕ್ತಿ ಮತ್ತು ಪಾರಮಾರ್ಥಿಕ ಭಕ್ತಿ ಎನ್ನಬಹುದಾಗಿದೆ. ಪ್ರೀತಿಯು ಭಕ್ತಿಯ ಮೂಲಸ್ತರವಾಗಿದ್ದರೆ ಅದು ಲೌಕಿಕದ ಸಾಂಸಾರಿಕ ಬೇಕು – ಬೇಡಗಳ ಬೇಡಿಕೆಗಳ ಜಂಜಾಟದಲ್ಲಿ ಸಿಕ್ಕಿಕೊಂಡು ಅದರಲ್ಲಿಯೇ ಸುತ್ತ ತೊಡಗುತ್ತದೆ. ಇದು ಸಕಾಮಭಕ್ತಿ. ತಮ್ಮ ಉದ್ದೇಶ ಸಾಧನೆಗಾಗಿ ಇಂತಹ ಭಕ್ತಿಯನ್ನು ಮಾಡುತ್ತಿರುತ್ತಾರೆ. ಹೀಗಾಗಿಯೇ ಮಂಚಣ್ಣ ಇದನ್ನು ಲೌಕಿಕ ಭಕ್ತಿ ಎಂದು ಕರೆದಿದ್ದಾನೆ.
ಸತ್ಯ ಶುದ್ಧ ಮನದಿಂದ ಮಾಡುವ ಭಕ್ತಿ ಲೌಕಿಕದ ಸಾಂಸಾರಿಕ ಜಂಜಡಗಳಿಂದ ದೂರವಾಗಿರುತ್ತದೆ. ಈ ಭಕ್ತಿಗೆ ಯಾವುದೇ ಆಸೆ ಆಕಾಂಕ್ಷೆಗಳಿರುವುದಿಲ್ಲ. ಸಚ್ಚಿದಾನಂದ ಸ್ವರೂಪಿ ಭಗವಂತನಲ್ಲಿ ಒಂದಾಗುವುದೇ ಇದರ ಪರಮ ಗುರಿ. ಇದನ್ನೇ ಮಂಚಣ್ಣ ಪಾರಮಾರ್ಥಿಕ ಭಕ್ತಿ ಎಂದು ಕರೆದಿದ್ದಾನೆ.
ಪ್ರೀತಿ ಮೂಲದ ಭಕ್ತಿ ಹಾಗೂ ಸತ್ಯಮೂಲದ ಭಕ್ತಿಗಳ ಎರಡರ ನಿಜ ಸ್ವರೂಪ ರೀತಿ ನೀತಿಯನ್ನು ಚೆನ್ನಾಗಿ ಅರಿತುಕೊಂಡು ಭಕ್ತಿ ಮಾರ್ಗದಲ್ಲಿ ನಡೆದರೆ ಮಾತ್ರ ಅದು ಭಗವಂತನಿಗೆ ಅರ್ಪಿತವಾಗುತ್ತದೆ. ಇಲ್ಲದಿದ್ದರೆ ನಿಷ್ಪಲವೆನಿಸುತ್ತದೆ. ಇದನ್ನೇ ಬಸವಣ್ಣನವರು ಹೀಗೆ ಹೇಳುತ್ತಾರೆ.
ಎನಿಸು ಕಾಲ ಕಲ್ಲು ನೀರೊಳಗಿರ್ದರೇನು,
ನೆನೆದು ಮೃದುವಾಗಬಲ್ಲುದೆ?
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ,
ಮನದಲ್ಲಿ ದೃಢವಿಲ್ಲದನ್ನಕ್ಕ?
ನಿಧಾನವ ಕಾಯ್ದಿರ್ದ ಬೆಂತರನಂತೆ!
ಅದರ ವಿಧಿಯೆನಗಾಯಿತ್ತು, ಕೂಡಲಸಂಗಮದೇವಾ.
ಹೀಗಾಗಿ ಸತ್ಯ- ಧೃಡತೆಯಿಂದೊಡಗೂಡಿದ ಭಕ್ತಿ ಮುಕ್ತಿಯ ಮಾರ್ಗವನ್ನು ತೋರುತ್ತದೆ. ದೃಢವಿಲ್ಲದವನ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ” ಎಂಬ ಶರಣ ವಾಣಿ ಕೂಡ ಇದನ್ನೇ ದೃಢಪಡಿಸುತ್ತದೆ. ಹೀಗೆ ಭಕ್ತಿಯ ಮೂಲ ನೆಲೆಗಟ್ಟು ಪ್ರೀತಿಯೋ, ಸತ್ಯಶುದ್ಧಮನವೋ, ಎಂಬುದನ್ನು ಸ್ವತ: ನಿರ್ಧರಿಸಿಕೊಂಡು ಭಕ್ತಿ ಮಾರ್ಗದಲ್ಲಿ ನಡೆದರೆ ಆ ಭಕ್ತಿ ಪರಮಾತ್ಮನಿಗೆ ಅರ್ಪಿತವಾಗುತ್ತದೆ, ಎಂಬುದು ಶಿವಲೆಂಕ ಮಂಚಣ್ಣನ ಅಭಿಮತವಾಗಿದೆ.
ಪ್ರೊ.ಜಿ. ಎ. ತಿಗಡಿ.
ಸತ್ಯ ತತ್ವಜ್ಞಾನ ಇದು ಗುರುಗಳೇ
ತಮಗೆ ಅನಂತ ವಂದನೆಗಳು
ವಚನವನ್ನು ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸರ್
Great sir Thank you.