ಕನ್ನಡ ಹಾಡುಗಳನ್ನು ಮನೆಮನೆಗೆ ತಲುಪಿಸಿದ ಗಾಯಕ ಹುಕ್ಕೇರಿ ಬಾಳಪ್ಪನವರುಎಲ್. ಎಸ್. ಶಾಸ್ತ್ರಿ

ಲೇಖನ ಸಂಗಾತಿ

ಕನ್ನಡ ಹಾಡುಗಳನ್ನು ಮನೆಮನೆಗೆ ತಲುಪಿಸಿದ ಗಾಯಕ

ಹುಕ್ಕೇರಿ ಬಾಳಪ್ಪನವರು

ಎಲ್. ಎಸ್. ಶಾಸ್ತ್ರಿ

ಕವಿಗಳು ಹಾಡು ಬರೆಯಬಹುದು. ಆದರೆ ಅವು ಜನರ ಮನದಲ್ಲಿ, ಕಂಠದಲ್ಲಿ ಉಳಿದುಕೊಳ್ಳುವದು ಸುಗಮ ಸಂಗೀತ ಗಾಯಕರಿಂದ. ಕರ್ನಾಟಕದಲ್ಲಿ ಕನ್ನಡ ಹಾಡುಗಳನ್ನು ಹಾಡುತ್ತ ಇಂದಿಗೂ ಅವು ನಮ್ಮ ನಡುವೆ ಉಳಿಯುವಂತೆ ಮಾಡಿದವರು ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಹುಕ್ಕೇರಿ ಬಾಳಪ್ಪ, ಅನುರಾಧಾ ಧಾರೇಶ್ವರ, ಅಶ್ವಥ್  ಮತ್ತಿತರ ಹಲವು ಹಾಡುಗಾರರು. ಅವರನ್ನು ಅನುಸರಿಸಿ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಹಲವು ಯುವ ಹಾಡುಗಾರರೂ ಇಂದು ನಮ್ಮ ನಡುವೆ ಇದ್ದಾರೆ. ಬೇಂದ್ರೆ, ಕುವೆಂಪು, ನರಸಿಂಹಸ್ವಾಮಿ, ಆನಂದಕಂದ ಪುತಿನ, ಕಣವಿ, ಶಿವರುದ್ರಪ್ಪ, ಶಿಶುನಾಳ ಶರೀಫ   ಮೊದಲಾದವರ ಹಾಡುಗಳನ್ನು ಇವರೆಲ್ಲ ಹಾಡುತ್ತ ಅವು ಶಾಶ್ವತವಾಗಿ ಜನಮನದಲ್ಲಿ ಉಳಿಯುವಂತೆ ಮಾಡಿದ್ದರಿಂದ ಅವರಿಗೆ ನಾವು ಕೃತಜ್ಞರಾಗಿರಲೇಬೇಕಾಗಿದೆ.
               ಸಭಾಭೂಷಣ ಹುಕ್ಕೇರಿ ಬಾಳಪ್ಪನವರು ಬೆಳಗಾವಿ ಜಿಲ್ಲೆಯ ಮುರಗೋಡ ಎಂಬಲ್ಲಿ ಬಡ ಕೃಷಿಕುಟುಂಬದಲ್ಲಿ ಜನಿಸಿ ಹೆಚ್ಚು ಶಿಕ್ಷಣವನ್ನು ಪಡೆಯಲಿಕ್ಕಾಗದಿದ್ದರೂ ಸಂಗೀತದ ಹುಚ್ಚು ಹಿಡಿಸಿಕೊಂಡು, ಕೊನೆಗೆ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಚಾರಕನ ನೌಕರಿ ಪಡೆದು ಹಾಡುಗಳ ಮೂಲಕ ಸರಕಾರಿ ಕಾರ್ಯಕ್ರಮಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡುವದರೊಂದಿಗೆ ನಾಡಿನ ಪ್ರಸಿದ್ಧ ಹಾಡುಗಾರರೆನಿಸಿದರಲ್ಲದೆ ಮಧ್ಯ ಪ್ರದೇಶದ ತುಲಸೀ ಸಮ್ಮಾನ ಗೌರವವನ್ನೂ ಪಡೆದರು. ಅವರ ಬದುಕೇ ಮಾದರಿಯದಾಗಿದೆ.
           ನಾನು ಬೆಳಗಾವಿಗೆ ೪೦ ವರ್ಷಗಳ ಹಿಂದೆ ಬಂದನಂತರ ಬಾಳಪ್ಪನವರ ಪರಿಚಯವೂ ಆಯಿತು. ಅವರ ಒಂದೆರಡು ಕಾರ್ಯಕ್ರಮದಲ್ಲಿ ಅವರು ನನ್ನಿಂದಲೂ ಹಾಡು ಹೇಳಿಸಿ ಪ್ರೋತ್ಸಾಹಿಸಿದ್ದನ್ನು ಮರೆಯಲಾಗದು. ಬಸವನ ಬಾಗೇವಾಡಿ ಯಲ್ಲಿ ಬಸವಣ್ಣನವರ ೮೦೦ ನೇ ವರ್ಷದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಅವರೊಡನೆ ಕಾಲ ಕಳೆಯುವ ಸುಸಂದರ್ಭ ಬಂದಿತ್ತು.
          ಅವರು ನಿಧನರಾದ ಹತ್ತು ವರ್ಷಗಳಾದ ಸಂದರ್ಭದಲ್ಲಿ ನಾನು ನಮ್ಮ ಇಂಪು ಸುಗಮ ಸಂಗೀತ ವೇದಿಕೆಯ ಮೂಲಕ ಅವರ ನೆನಪಿನಲ್ಲಿ ವರ್ಷಕ್ಕೆ ಒಬ್ಬ ಕಲಾವಿದರಿಗೆ ಪ್ರಶಸ್ತಿ ನೀಡುವ ಪದ್ಧತಿ ಆರಂಭಿಸಿದೆ. ವಿವಿಧ ಕಲಾಕ್ಷೇತ್ರಗಳ ಹತ್ತಕ್ಕೂ ಹೆಚ್ಚು ಕಲಾವಿದರು ಆ ಪ್ರಶಸ್ತಿ ಪಡೆದಿದ್ದಾರೆ.
   ‌       ಹುಕ್ಕೇರಿ ಬಾಳಪ್ಪನವರದು ಒಂದು ರೀತಿ ಅವರದೇ ಜಾನಪದ ಶೈಲಿಯ ಸಭೆಗೆ  ರಂಗೇರಿಸುವ ಹಾಡುಗಾರಿಕೆ. ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಮತ್ತಿತರರ ಭಾವಗೀತೆಗಳನ್ನು, ಸಂಗಡ ಜಾನಪದ, ತತ್ವಪದ, ಭಕ್ತಿಗೀತೆ, ವಚನಗಳನ್ನೆಲ್ಲ ಹಾಡುತ್ತ, ಹಾಸ್ಯಚಟಾಕಿಗಳನ್ನು ಹಾರಿಸುತ್ತ ಶ್ರೋತೃಗಳನ್ನು ರಂಜಿಸುತ್ತಿದ್ದರು. ಅದು ಅವರದೇ ವಿಶಿಷ್ಟ ಶೈಲಿ. ಅವರಂತಹ ಹಾಡುಗಾರರು ಅವರೇ. ಹೋಲಿಕೆಯಿಲ್ಲ. ಭರ್ಜರಿ ಆಳ್ತನ. ಆದರೆ ಮಗುವಿನಂತಹ ಮನಸ್ಸು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವ ಸರಳ ವ್ಯಕ್ತಿ. ಅವರಂಥವರಿಂದಲೇ ನಮ್ಮ ಕನ್ನಡ ಸಾಹಿತ್ಯ ಕಲೆ ಉಳಿದು ಬೆಳೆದಿದೆ. ಅವರಿಗೆ ನನ್ನ ಗೌರವಪೂರ್ವಕ ನಮನಗಳು.


ಎಲ್. ಎಸ್. ಶಾಸ್ತ್ರಿ

Leave a Reply

Back To Top