ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಮೀಸಲು
ನನ್ನೆದೆಯ ನೋವು
ನಿನಗೆ ನಲಿವು
ಕೊಡುವುದಾದರೆ
ಇರಲಿ ಬಿಡು
ಈ ನೋವು ನನಗೇ ಮೀಸಲು…..
ನನ್ನ ಕಣ್ಣ ಕಂಬನಿ
ನಿನ್ನ ಮೊಗದ ನಗೆಗೆ
ಕಾರಣವಾದರೆ
ಇರಲಿ ಬಿಡು
ಈ ಕಂಬನಿ ನನಗೇ ಮೀಸಲು…..
ನನ್ನ ಮನದ ಅಳಲು
ನಿನ್ನ ನೆಮ್ಮದಿ ನುಡಿಪ
ಕೊಳಲ ಗಾನವಾದರೆ
ಇರಲಿ ಬಿಡು
ಈ ಅಳಲು ನನಗೇ ಮೀಸಲು..
ನನ್ನ ಹೃದಯ ಸುಡುವ
ಬೆಂಕಿ ನಿನಗೆ ಶಾಂತಿ
ತರುವದಾದರೆ….
ಇರಲಿ ಬಿಡು
ಈ ಬೆಂಕಿ ಬೇಗೆ ನನಗೇ ಮೀಸಲು..
ಗೋಡೆ ಮುಳ್ಳ ಬೇಲಿ ಕಟ್ಟಿ
ದೂರ ತಳ್ಳಿದ ಕಲ್ಲು ಹೃದಯ
ಈ ದೂರ ನಿನಗೊಪ್ಪಿಗೆಯಾದರೆ
ಇರಲಿ ಬಿಡು
ಈ ದೂರ ನನಗೇ ಮೀಸಲು..
ಹೃದಯ ಒಡೆದು ಚೂರಾಗಿ
ಚೀರಿದ ಆಕ್ರಂದನ
ನಿನ್ನ ಬಾಳ ನಂದನವಾದರೆ
ಇರಲಿ ಬಿಡು
ಆ ಆಕ್ರಂದನ ನನಗೇ ಮೀಸಲು…
ಧಮನಿ ಧಮನಿ ರುಧಿರ ಗಾನ…
ಪದ ಪಲುಕ ಮೌನ ಕವನ..
ನಿನಗೆ ನೆಮ್ಮದಿ ನೀಡುವುದಾದರೆ….
ಇರಲಿ ಬಿಡು
ಈ ಮೌನ ನನಗೇ ಮೀಸಲು….
ನಾ ನಡೆವ ದಾರಿಯ ತುಂಬ
ನೀ ನೀಡಿದ ಮುಳ್ಳುಗಳು
ನಿನ್ನ ದಾರಿಗೆ ಹೂವಾಗುವುದಾದರೆ
ಇರಲಿ ಬಿಡು
ಈ ಮುಳ್ಳುಗಳು ನನಗೇ ಮೀಸಲು..
—————————————————-
ಇಂದಿರಾ ಮೋಟೆಬೆನ್ನೂರ