ಶಂಗನ್ ವೀಸಾ ಪ್ರಯಾಸ! ( ಭಾಗ ಎರಡು)ಡಾ. ಅರಕಲಗೂಡು ನೀಲಕಂಠ ಮೂರ್ತಿ.

ವಿಶೇಷ ಬರಹ

ಶಂಗನ್ ವೀಸಾ ಪ್ರಯಾಸ! ( ಭಾಗ ಎರಡು)

ಡಾ. ಅರಕಲಗೂಡು ನೀಲಕಂಠ ಮೂರ್ತಿ.

ಶಂಗನ್ ವೀಸಾ ಪ್ರಯಾಸ!

ಭಾಗ  —  ೦೨  –ನಿನ್ನೆಯ ಮುಂದುವರೆದ ಭಾಗ

ಬರಿಕೈಲಿ ಪುಣೆಯಿಂದ ಹಿಂತಿರುಗಿದ ಮೇಲೆ, ಕನಿಷ್ಠ ನಮ್ಮ ಸೋಲಿನ ವೆಚ್ಛ ಎಷ್ಟಾಗಿರಬಹುದು ಎಂಬ ಲೆಕ್ಕಾಚಾರದಿಂದ ದಂಗುಬಡಿದಿತ್ತು! ನಾಲ್ವರಿಗೆ ಹೋಗಿಬರಲು ವೀಮಾನದ ಟಿಕೆಟ್ಟುಗಳಿಗೆ; ಎರಡು ದಿನಗಳ ತ್ರಿತಾರ ಹೋಟೆಲ್ ಕೊಠಡಿಗಳ ಬಾಡಿಗೆ ಮತ್ತು ಊಟ ಮುಂತಾದ ಖರ್ಚು; ಅಲ್ಲಿಯ ಓಡಾಟಕ್ಕೆ ಟ್ಯಾಕ್ಸಿ ಮತ್ತಿತರ ವೆಚ್ಛ ; ಮತ್ತು ಹೊರಡುವ ಮುನ್ನ ನಮ್ಮ ‘ಗರ್ಭಿಣಿ ಹೊಟ್ಟೆ’ಯಂತಹ ಫೈಲುಗಳನ್ನು ತಯಾರುಮಾಡಿಕೊಳ್ಳಲು ಮತ್ತು ಮೈಸೂರಿಂದ ಬೆಂಗಳೂರಿಗೆ ನಮ್ಮದೆ ಕಾರಿನಲ್ಲಿ ಹೋಗಿ, ಅದನ್ನು ಅಲ್ಲಿಯೆ ಪಾರ್ಕ್ ಮಾಡಿ (ಮೈಸೂರಗೆ ನಾವು ಹಿಂತಿರುಗಲು ಬೇಕಲ್ಲ), ಏರ್ಪೋರ್ಟಿಗೆ ಮತ್ತೊಂದು ಟ್ಯಾಕ್ಸಿಯಲ್ಲಿ ಹೋಗಿ ವಾಪಸ್ಸಾಗುವ ಖರ್ಚು; ಇಷ್ಟಲ್ಲದೆ ಮಗಳು ಅಮೆರಿಕದಿಂದಲೆ ವೀಸಾ ಫೀಸ್ ಎಂದು ತೆತ್ತಿದ್ದ ಹದಿನೈದು ಸಾವಿರ. ಎಲ್ಲ ಸೇರಿ ಸಾಕಷ್ಟೆ ಕೈಬಿಟ್ಟಿತ್ತು! ಇಷ್ಟು ಒಂದೇ ಒಂದು ಸೋಲಿನ ವೆಚ್ಚ! ಇನ್ನು ಅಕಸ್ಮಾತ್ ಗೆದ್ದೇಬಿಟ್ಟರೆ – ಅದರ ವೆಚ್ಚ ಎಷ್ಟಾಗಬಹುದಿತ್ತು? ಪ್ರಪ್ರಥಮ ಬಾರಿಗೆ, ‘ಇದು ಬೇಕಿತ್ತ? ಅಳಿಯ ಕೇಳಿದಾಗ ನಾನೆ ಬಿಲ್ಕುಲ್ ಬರುವುದೇ ಇಲ್ಲ  ಅಂದಿದ್ದರೆ’ – ಅನ್ನಿಸತೊಡಗಿತ್ತು. ‘ಹೌದು, ಅಂದಿದ್ದರೆ? ಖಂಡಿತ ಈ ಅಪವ್ಯಯ ಮತ್ತು ಸೋಲು ಆಗುತ್ತಿರಲಿಲ್ಲ’ ನಿಜ. ಆದರೆ ಮನಸ್ಸಿನ ತಿರುವುಗಳ ಕೊರಕಲುಗಳಲ್ಲೆಲ್ಲೊ ಅವಿತು ಕೂತ ಆ ‘ಆಸೆ?’ ಮನುಷ್ಯ ಅಂಥ ಆಸೆಗಳ ಉರುಳಿಗೆ ಸಿಲುಕಿಯೇ ಅಲ್ಲವೆ ಯಜ್ಞಪಶು ಆಗುವುದು! ಬಹುಶಃ.

ಅಷ್ಟಕ್ಕೆ ಪ್ರಯತ್ನ ನಿಲ್ಲಿಸಿಬಿಡಲು, ಅಷ್ಟೊಂದು ಹಣ ಖರ್ಚುಮಾಡಿ ಕ್ರೂಸ್ ಹಾಗು ವಿಮಾನದ ಟಿಕೆಟ್ಟುಗಳನ್ನು ಖರೀದಿಸಿ ಮತ್ತು ಹೋಟೆಲ್ ಕೊಠಡಿಗಳಿಗೂ ಹಣ ಮುಂಗಡ ಪಾವತಿಸಿ ಕಾಯ್ದಿರಿಸಿದ್ದ ಅಳಿಯ ಹಾಗು ಮಗಳು ಸುಮ್ಮನಿರಬೇಕಲ್ಲ! ಕಡೆಗೆ ನಮ್ಮ ಮಗ ಸೊಸೆ ಸಹ ಇಂಥ ಸದವಕಾಶ ಮತ್ತೊಮ್ಮೆ ಬರುವ ಗ್ಯಾರಂಟಿಯಾದರು ಏನು; ಅಲ್ಲದೆ ನಿಮ್ಮ ವಯಸ್ಸೇನು ನಿಂತಲ್ಲೆ ನಿಲ್ಲುತ್ತ? ಹಾಗಾಗಿ ಶತಪ್ರಯತ್ನ ಮಾಡಿಯಾದರೂ ನೋಡೋಣ ಅಂತ ಇಲ್ಲಿಂದ ಇವರು ಮತ್ತು ಆಮೆರಿಕದಿಂದ ಅವರು, ಹೀಗೆ ಮತ್ತೆ ಎಲ್ಲರ ಕಣ್ಣುಗಳು ಸದಾ ಲ್ಯಾಪ್‌ಟಾಪುಗಳ ಮೇಲೆ ಕೇಂದ್ರೀಕೃತ. ಊಹುಂ; ಎಷ್ಟೇ ತಿಣುಕಿದರು ಪೋರ್ಚುಗಲ್, ಸ್ಪೇನ್, ಫ್ರಾನ್ಸ್‌ ಮತ್ತು ಇಟಲಿ, ನಾವು ಹೋಗಬೇಕಾಗಿದ್ದ ಈ ನಾಲ್ಕರ ಯಾವ ದೇಶದ ವೆಬ್ಸೈಟಿನಲ್ಲೂ ಯಾವುದೆ ಮಾಹಿತಿ ಇರುತ್ತಿರಲಿಲ್ಲ; ಅಥವ ಒಂದು ದಿನಾಂಕ ಅಕಸ್ಮಾತ್ ಸಿಕ್ಕಿದರೂ ಅದು ನಮ್ಮ ಪ್ರಯಾಣಕ್ಕೆ ಹೊಂದುವ ದಿನಾಂಕ ಆಗಿರುತ್ತಿರಲಿಲ್ಲ – ಅವು ನಮ್ಮ ಪ್ರಯಾಣ ಮುಗಿದ ಎಷ್ಟೋ ಸಮಯದ ನಂತರದ ದಿನಾಂಕಗಳು! ಹತಾಶನಾದ ಮಗ ‘ಹೇಗಾದರಿರಲಿ, ಸ್ವಲ್ಪ ಹಣ ಖರ್ಚಾದರು ಪರವಾಗಿಲ್ಲ ಟ್ರ್ಯಾವೆಲ್ ಏಜಂಟ್ ಮೂಲಕ ಪ್ರಯತ್ನ ಮಾಡೋಣ’ ಎಂದು ಹೊರಟ. ಇದಕ್ಕೆ ಕಾರಣ ಇಲ್ಲದಿರಲಿಲ್ಲ. ‘ಸ್ಟಾರ್ ಆಫ್ ಮೈಸೂರ್’ ಪತ್ರಿಕೆಯಲ್ಲಿ ‘ಶೆಂಗನ್ ವೀಸಾ ಇಲ್ಲೆ, ಮೈಸೂರಲ್ಲೆ ನಮ್ಮ ಕಛೇರಿಯಲ್ಲೆ ದೊರಕುತ್ತದೆ’ ಎಂಬ ಜಾಹಿರಾತಿನಿಂದ ಪುಲಕಿತನಾಗಿ. ಸೀದ ಅಲ್ಲಿಗೆ ಹೋಗಿ ವಿಚಾರಿಸಿದಾಗ, ಅವರ ವರ್ತನೆ ಮಂಜುಗೆಡ್ಡೆಯಷ್ಟು ಥಣ್ಣಗಿದ್ದು, ಅದು ನಕಾರಾತ್ಮಕ ಉತ್ತರ ಎಂದು ಅವನೆ ಅರ್ಥೈಸಿಕೊಂಡು ಹೊರಬಂದಿದ್ದ. ಆ ರೀತಿಯ ಜಾಹಿರಾತು ನೀಡುವ ಟ್ರ್ಯಾವಲ್ ಏಜೆಂಟುಗಳು, ತಮ್ಮ ಕಂಪೆನಿಯ ಮೂಲಕ ಮಾತ್ರ ಪ್ರವಾಸ ಹೋಗುವ ಪ್ರಯಾಣಿಕರಿಗೆ ವೀಸಾ ಕೊಡಿಸುತ್ತಿದ್ದುದು. ಆದರೆ ನಮ್ಮ ಬುಕಿಂಗ್ ಎಲ್ಲ ನಮ್ಮನಮ್ಮದೆ ತಾನೆ. ಕೊನೆಯ ಪ್ರಯತ್ನವಾಗಿ ತನ್ನ ಗೆಳೆಯನಿಗೆ ಪರಿಚಯ ಇದ್ದ ಇನ್ನೊಬ್ಬ ಏಜೆಂಟ್ ಕಛೇರಿಗೆ, ಈಗ ಕಳೆದುಹೋದ ಹುಮ್ಮಸ್ಸಿನಲ್ಲಿ ಹೋಗಿ, ವಿಚಾರಿಸಲಾಗಿ “ಅತ್ಯಂತ ಸುಲಭವಾಗಿ ವೀಸಾ ಸಿಗುವುದು ಸ್ವಿಟ್ಜರ್ಲೆಂಡಿಗೆ, ನೀವು ಎಸ್ ಅಂದರೆ ಟ್ರೈ ಮಾಡ್ತೀನಿ” ಅಂದಾಗ, “ಹಾಗಾದರೆ ಸದ್ಯ ಆಗಿರುವ ಬುಕಿಂಗ್ ಗತಿ ಏನು?” ಅದಕ್ಕೆ ಅವರ ಉತ್ತರ, “ಅದೆಲ್ಲ ಹಾಗೆ ಇರಲಿ, ಇದಕ್ಕಾಗಿ ನಾವು ನಕಲಿ ಟಿಕೆಟ್ ಮಾಡ್ತೇವೆ. ಹೋಟೆಲ್ ಬುಕಿಂಗ್ ಕೂಡ ನಕಲಿ; ಆದರೆ ಒರೆಜಿನಲ್ ತಲೆಮೇಲೆ ಕುಕ್ಕಿದ ಹಾಗೆ ಮಾಡ್ತೀವಿ” ಎಂದಾಗ, “ಕೆಲವೊಮ್ಮೆ ಆಯಾ ದೇಶದ ಎಂಬೆಸಿಗಳಿಂದ ಏರ್ಲೈನ್ಸ್ ಮತ್ತು ಹೋಟೆಲುಗಳಿಗೆ ಫೋನ್ ಮಾಡಿ ವಿಚಾರಿಸಬಹುದು” ಅಂತ ಕೇಳಿದೀನಿ, ನಮ್ಮ ಮಗ ಎಂದಾಗ,”ಹಾಗೆ ವಿಚಾರಣೆ ಮಾಡಿ ಕೇಳಿದರೂ ಅವರಿಗೆ ಪಾಸಿಟಿವ್ ಉತ್ತರವೆ ಸಿಗುವ ಹಾಗಿರುತ್ತೆ ನಮ್ಮಬುಕಿಂಗ್, ಯೋಚಿಸಬೇಡಿ; ಹಾಗಾಗಿ ಇಲ್ಲಿ ಯಾವ ಸಮಸ್ಯೆ ಸಹ ಬರೋದಿಲ್ಲ”

ಹಾಗೆ ಅಷ್ಟು ಭರವಸೆಯಿಂದ ಅವರು ಹೇಳಿದಮೇಲೆ ನಂಬಲೇಬೇಕಲ್ಲವೆ?ಅಂತು ಧೈರ್ಯದಿಂದ ಸ್ವಲ್ಪ ಅಡ್ವಾನ್ಸ್ ಹಣ ಕೊಟ್ಟು ಬಂದಿದ್ದ; ಯಾವ ಕೆಲಸ ಆದರೂ ಸಹ ಈ ದಿನಮಾನದಲ್ಲಿ ಹಣ ಇಲ್ಲದೆ ಜರುಗುವುದೆ ಇಲ್ಲ ಎಂಬ ಕಠಿಣ ಸತ್ಯ ನಮ್ಮಮಗನಿಗೆ ಖಂಡಿತ ಮನದಟ್ಟಾಗಿದೆ. ಅಂತು ಮತ್ತೊಂದು ದಿನ ಟ್ರ್ಯಾವಲ್ ಏಜಂಟಿಂದ ಕರೆ ಬಂದಾಗ, ನಮ್ಮ ಅದೃಷ್ಟ ಚನ್ನಾಗಿತ್ತು; ಮೇ ತಿಂಗಳ ಒಂಭತ್ತನೆಯ ದಿನಾಂಕದಂದು ಸ್ವಿಸ್ ವೀಸಾ ಸಂದರ್ಶನ ವ್ಯವಸ್ಥೆಯಾಗಿತ್ತು – ಬೆಂಗಳೂರಿನ ಬನ್ನೇರುಘಟ್ಟದಲ್ಲಿನ ಗೋಪಾಲನ್ ಮಾಲ್ನಲ್ಲಿರುವ ವಿ.ಎಫ್.ಎಸ್.ಗ್ಲೋಬಲ್ (ವೀಸಾ ಫೆಸಿಲಿಟೇಶನ್ ಸರ್ವಿಸಸ್ ಗ್ಲೋಬಲ್) ಕಛೇರಿಯಲ್ಲಿ. ಅದೇ ತಿಂಗಳಿನ ಹತ್ತನೆ ದಿನಾಂಕ, ಅಂದರೆ ಅದರ ಮಾರನೆ ದಿನ, ರಾಜ್ಯದ ಚುನಾವಣೆ ಇದ್ದುದರಿಂದ ಸಂದರ್ಶನ ಮುಗಿಸಿ ಮೈಸೂರಿಗೆ ಹಿಂತಿರುಗಿ ಬರಲೇಬೇಕಾಗಿತ್ತು. ಏನೆ ಆಗಲಿ ನಮ್ಮ ಮಗನ ಭಗೀರಥ ಪ್ರಯತ್ನ ನಮ್ಮ ಯೂರೋಪ್ ನೋಡುವ ಮತ್ತು ಕ್ರೂಸ್ ಪ್ರಯಾಣದ ಕನಸನ್ನು ಇನ್ನೂ ಜೀವಂತ ಉಳಿಸಿತ್ತು! ಮುಂದೆ ಸಂದರ್ಶನದ ದಿನಕ್ಕಾಗಿ ಕಾತರದಿಂದ ಕಾಯುವಿಕೆಯ ಕಾಲ. ಹಾಗೆ ಕಾಯುವ ಕಾಲ ಸುಮ್ಮನೆ ಕಳೆಯುವ ಹಾಗೂ ಇರಲಿಲ್ಲ; ಏಕೆಂದರೆ ಸ್ವಿಸ್ ಎಂಬೆಸಿ ವೀಸಾ ಕೃಪೆಗಾಗಿ ಈಗ ಫೈಲುಗಳ ಪುನರ್ನಿರ್ಮಾಣ ಮಾಡಬೇಕಾದ ಕಾರ್ಯ. ಹಳೆಯ ಕೆಲವು ಕಾಗದಗಳನ್ನು ತೆಗೆದುಹಾಕಿ, ಟ್ರ್ಯಾವಲ್ ಏಜಂಟ್ ಕೊಟ್ಟ ಕಾಗದಗಳೆ ಅಲ್ಲದೆ, ಎಂಬೆಸಿಗೆ ಬೇಕಾದ ಕ್ರಮದಲ್ಲೆ ಅರ್ಜಿ ಫಾರಂನಲ್ಲಿ ನಮೂದಿಸಿದ ಪ್ರಕಾರದಲ್ಲೆ ಒಂದರ ನಂತರ ಇನ್ನೊಂದು ಅನ್ನುವಂತೆ ಬ್ಯಾಂಕ್ ವಿವರ, ಟಿಕೆಟ್ ವಿವರ, ಹೋಟೆಲ್ ಮತ್ತು ಪ್ರಯಾಣದ ಹಂತ ಹಂತ ವಿವರ, ಫೋಟೋ ಸಹ ಮಿಲಿಮೀಟರ್ ವ್ಯತ್ಯಾಸ ಆಗದಂತೆ ಅಧಿಕೃತ ಅಳತೆಯ ಮಾದರಿಯಲ್ಲಿ ಮುಂತಾಗಿ ಫೈಲುಗಳ ಹೊಟ್ಟೆ ತುಂಬಿಸುವ ಕೆಲಸ ಆರಂಭ. ಬೆಂಗಳೂರಿಗೆ ಹೊರಡುವ ನಾಲ್ಕಾರು ದಿನ ಮುಂಚೆಯೆ ಎಲ್ಲ ಫೈಲು ಸಿದ್ಧವಾದವು. ಇಷ್ಟೆಲ್ಲ ಕಸರತ್ತಾಗಿ, ಸಂದರ್ಶನ ಕೂಡ ಆದಮೇಲೆ ಸಹ ವೀಸಾ ದೊರಕುವುದು ಗ್ಯಾರಂಟಿ ಇರಲಿಲ್ಲ, ಬದಲಿಗೆ ಅದು ಎಂಬೆಸಿ ಸಿಬ್ಬಂದಿಯ ‘ಮನಸ್ವೇಚ್ಛೆ’ಯನ್ನು ಅವಲಂಬಿಸಿರುವುದರಿಂದ, ಕೊನೆ ಘಳಿಗೆಯವರೆಗೂ ಖಂಡಿತ ಎಂಬುದು ಮಾತ್ರ ಇಲ್ಲ!

ಈ ಅನಿರ್ದಿಷ್ಟ ಪರಿಸ್ಥಿತಿಯಲ್ಲಿ ಹೊಯ್ದಾಡುತ್ತಿದ್ದಾಗ ಆಕಸ್ಮಿಕವಾಗಿ ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಇದೆ ವರ್ಷದ ಏಪ್ರಿಲ್ ಮುವತ್ತನೆ ದಿನಾಂಕದ ಆವೃತ್ತಿಯಲ್ಲಿ, ಭಾರತದ ಖ್ಯಾತ ಆಂಗ್ಲ ಸಾಹಿತಿ ಮತ್ತು ಅಂಕಣಕಾರರಾದ ಚೇತನ್ ಭಗತ್ ಅವರ ಲೇಖನವನ್ನು ಕುತೂಹಲದಿಂದ ಓದಿದೆ. ಶೀರ್ಷಿಕೆ, ‘ಹೇ ವೆಸ್ಟ್, ಕೆನ್ ವಿ ಗೆಟ್ ವೀಸಾಸ್ ಮೈನಸ್ ದಿ ಪೇನ್ ಅಂಡ್ ಹ್ಯೂಮಿಲಿಯೇಶನ್ ಪ್ಲೀಸ್?” ಎಂದು. ಆ ಲೇಖನ ಕೂಡ ಇಂಥ ಎಂಬೆಸಿಗಳ ಕಣ್ಣು ತೆರೆಸಲು ವಿಫಲವಾದರೆ, ಇನ್ನೆಂಥ ಚಾಟಿ ಬೇಕಾದೀತು ಇಂಥವರಿಗೆ ಎನಿಸಿತ್ತು. ಅದರಲ್ಲವರು ಬದಲಾದ ಕಾಲಮಾನ ಮತ್ತು ಇಂದಿನ ಆವಿಷ್ಕಾರಗಳ ಬಗ್ಗೆ ತಿಳಿಸುತ್ತಾ, ಹೇಗೆ ಮನೆಯ ಒಳಗೇ ಕುಳಿತು ಒಂದು ಶರ್ಟಿಂದ ಹಿಡಿದು ಕಾರ್ ಕೂಡ ಆರ್ಡರ್ ಮಾಡಿ, ನಾವಿರುವ ಸ್ಥಳವಿವರ ಸಹ ಅಂತರ್ಜಾಲದ ಮೂಲಕ ತಿಳಿಸುವ ಈ ಕಾಲದಲ್ಲಿ, ಈ ಪಾಶ್ಚಿಮಾತ್ಯ ಮಂದಿ ಇನ್ನೂ ಕಳೆದ ಶತಮಾನದ ಎಂಭತ್ತರಲ್ಲೆ ಇದ್ದ ಹಾಗೆ ಉಳಿದಿದ್ದಾರೆ? ಅದೂ ಅಲ್ಲದೆ ಈಗ ಪಶ್ಚಿಮದಲ್ಲಿ ಪರಿಸರವಾದಿಗಳು ಕಾಗದದ ಹೊರೆ ಕಡಿಮೆಯತ್ತ ಮುಖ ಮಾಡಿರುವಾಗ, ಇಲ್ಲಿ ಅದೆ ಪಶ್ಚಿಮದ ಮಂದಿ ನಮ್ಮಿಂದ ಪಿ.ಡಿ.ಎಫ್ ಬದಲು, ಟನ್ನುಗಟ್ಟಲೆ ಪೇಪರ್ ಕೆಲಸ ಮಾಡಿಸುವುದನ್ನು ಖಂಡಿಸಿದ್ದಾರೆ. ಅಷ್ಟಲ್ಲದೆ, ಹೌದು ಎಂಭತ್ತರ ದಶಕದಲ್ಲಿ ಭಾರತಕ್ಕಿಂತ ಯೂರೋಪಿಯನ್ ಜಗತ್ತು ಬಹಳಷ್ಟು ಸಂಪತ್ಭರಿತ ಮತ್ತು ಐಶ್ವರ್ಯದಿಂದ ಕೂಡಿತ್ತು. ಈಗ ಪರಿಸ್ಥಿತಿ ತಿರುಗುಮುರುಗಾಗಿ ಭಾರತ ಬಡ ಮೂರನೆ ಜಗತ್ತಿನ ರಾಷ್ಟ್ರ ಆಗಿ ಉಳಿದಿಲ್ಲ! ಯೂರೋಪಿಯನ್ನರಿಗಿಂತ ಈಗ ಭಾರತ ಐಶ್ವರ್ಯವಂತ ರಾಷ್ಟ್ರ. ‘ನಾವು ನಿಮ್ಮ ಸುಂದರ ದೇಶಗಳನ್ನು ನೋಡಲು ಪ್ರವಾಸಕ್ಕೆ ಬಂದು ನಮ್ಮ ಹಣವನ್ನು ಖರ್ಚುಮಾಡಿ ಸ್ವದೇಶಕ್ಕೆ ಖಂಡಿತ ಮರಳುತ್ತೇವೆ. ನಿಮ್ಮ ಇಂದಿನ ಸ್ಥಿತಿಯಲ್ಲಿ ಅಲ್ಲಿ ಕದ್ದು ಉಳಿಯುವ ಇರಾದೆ ಇಲ್ಲ’. ಹೀಗೆ ಖಂಡಿಸಿ ಬರೆಯುತ್ತ, ನಾವು ಭಾರತೀಯರು ನಮ್ಮ ಅತಿಥಿಗಳನ್ನು ದೇವರು ಎಂದು ಭಾವಿಸುವಾಗ, ನೀವು ನಮ್ಮನ್ನು ನಂಬಬಹುದಾದ ಮಾನವರಂತಾದರೂ ನೋಡಿ, ಎಂದು ಸ್ಪಷ್ಟ ಹಾಗೂ ವ್ಯಂಗ್ಯ ಮಾತಿನಿಂದ ಪಶ್ಚಿಮದ ಅಹಂಕಾರವನ್ನು ತಿವಿದಿದ್ದಾರೆ! ವೀಸಾಗಳ ಬಗೆಗೆ ಪ್ರಯತ್ನ ಮಾಡುವ, ಅದರಲ್ಲೂ ಪಾಶ್ಚಿಮಾತ್ಯ ದೇಶಗಳ ವೀಸಾ ಪ್ರಯತ್ನ ಮಾಡುವ ಜನರು ಖಂಡಿತ ಓದಲೇಬೇಕಾದ ಅತ್ಯುತ್ತಮ ಬರಹ.

ಇನ್ನು ಈ ಶಂಗನ್ ವೀಸಾದಲ್ಲಿ ‘ಶಂಗನ್’ ಪದ ನುಸುಳಲು ಕಾರಣ? ಶಂಗನ್ ವ್ಯಾಪ್ತಿ ಎಂಬ ಯೋಜನೆ ಯೂರೋಪಿನ ಪ್ರಮುಖ ಸಾಧನೆ. ಅದು 1985 ರಲ್ಲಿ ಅಂತರಸರಕಾರಗಳ ಯೋಜನೆಯಾಗಿ ಐದು ಯೂರೋಪ್ ರಾಷ್ಟ್ರಗಳ ನಡುವೆ – ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಲಕ್ಸಂಬರ್ಗ್ ಮತ್ತು ನೆದರ್ಲ್ಯಾಂಡ್ – ತಮ್ಮ ರಾಷ್ಟ್ರಗಳ ನಡುವೆ ತಮ್ಮ ತಮ್ಮ ಪ್ರಜೆಗಳು ಗಡಿಗಳ ತಂಟೆ ತಕರಾರಗಳು ಇಲ್ಲದೆ ವ್ಯಾಪಾರ ವಹಿವಾಟಿಗೆ,  ಕೆಲಸಕ್ಕೆ, ಪ್ರವಾಸಕ್ಕೆ ಮುಂತಾಗಿ ಸುಲಭವಾಗಿ ಓಡಾಡಲು ಮಾಡಿಕೊಂಡ ಒಪ್ಪಂದ. ಕ್ರಮೇಣ ಆ ಐದು ದೇಶಗಳ ಸಂಗಡ ಇತರ ಕೆಲವು ಯೂರೋಪ್ ದೇಶಗಳು (ಇತ್ತೀಚೆಗೆ ಸೇರಿದ್ದು ಕ್ರೊಯೇಷಿಯ) ಸೇರಿಕೊಂಡು ಈಗ ಒಟ್ಟು ಇಪ್ಪತ್ತೇಳು ಸದ್ಯದ ಶಂಗನ್ ದೇಶಗಳು. ಈ ದೇಶಗಳೊಳಗೆ, ಮತ್ತು ನಡುವೆ ಆಯಾ ದೇಶಗಳ ಪ್ರಜೆಗಳು ಅಡೆತಡೆ ಇಲ್ಲದೆ ಓಡಾಡುವುದು ಮಾತ್ರ ಅಲ್ಲದೆ, ಈ ಇಪ್ಪತ್ತೇಳರಲ್ಲಿ ಯಾವುದೆ ಒಂದು ದೇಶ ಶಂಗನ್ ವೀಸಾ ಎಂದು ವಿದೇಶಿಗರಿಗೆ ‘ದಯಪಾಲಿಸಿದರೆ’ ಆ ಎಲ್ಲಾ ದೇಶಗಳಲ್ಲೂ ಆ ವೀಸಾ ಅವಧಿ ಮುಗಿವವರೆಗೆ ಆ ವಿದೇಶಿಯರು ಸಹ  ಧಾರಾಳವಾಗಿ ಪ್ರಯಾಣಿಸಲು ಯಾವ ತಕರಾರೂ ಇರುವುದಿಲ್ಲ! ಆದರೆ ಈ ವೀಸಾದಲ್ಲಿ ಒಂದು ಷರತ್ತು: ಅಷ್ಟೂ ದೇಶಗಳಲ್ಲಿ ಎಷ್ಟು ದೇಶಗಳಿಗೆ ಹೋಗಬಹುದಾದರು, ಯಾವ ರಾಷ್ಟ್ರ ನಮಗೆ ವೀಸಾ ನೀಡಿರುವುದೋ ಆ ದೇಶದಲ್ಲಿ ಬೇರೆ ಎಲ್ಲ ದೇಶಗಳಿಗಿಂತ ಹೆಚ್ಚು ದಿನ ಉಳಿಯಬೇಕು ಅಥವ ಯಾವೊಂದು ದೇಶದಲ್ಲಿ ಅಧಿಕ ದಿನ ವಾಸ್ತವ ಇರುತ್ತೇವೆಯೋ ಕನಿಷ್ಠ ಅಷ್ಟಾದರು ದಿನ ವೀಸಾ ಇತ್ತ ದೇಶದಲ್ಲಿ ಸಹ ಖಂಡಿತ ಇರಲೇಬೇಕು! ಮತ್ತು ಸಾಧ್ಯ ಆದರೆ, ವೀಸಾ ಕೊಟ್ಟ ದೇಶಕ್ಕೆ ಮೊದಲು ಭೇಟಿ ಕೊಟ್ಟರೆ ಒಳ್ಳೆಯದು ಎಂಬುದು ಈ ಎಲ್ಲ ದೇಶಗಳ ಇರಾದೆ.

ಮೇ ಒಂಭತ್ತನೆಯ ದಿನಾಂಕ ಬೆಳಿಗ್ಗೆ ಒಂಭತ್ತು ಘಂಟೆಗೆ ಸರಿಯಾಗಿ ನಮ್ಮ ಸಂದರ್ಶನ ನಿಗದಿಯಾಗಿದ್ದರಿಂದ, ಅಂದು ಸ್ವಲ್ಪ ಮುಂಚೆಯೆ ವಿ.ಎಫ್.ಎಸ್.ಗ್ಲೋಬಲ್ ಕಛೇರಿ ತಲುಪಬೇಕಾದ ಅನಿವಾರ್ಯತೆ ಇದ್ದು,  ನಾವು ಅದರ ಹಿಂದಿನ ದಿನವೆ ಬೆಂಗಳೂರು ಸೇರಬೇಕಾಯಿತು. ಒಂಭತ್ತರಂದು ಬೆಳಿಗ್ಗೆ ಏಳೂವರೆ ಘಂಟೆಗೆ ಬೀಗರ ಸಂಗಡ ಮನೆ ಬಿಟ್ಟೆವು.  ತಿಂಡಿ ಮುಗಿಸಿ ಕಛೇರಿ ತಲಪಿದಾಗ ಎಂಟೂವರೆ ಘಂಟೆ. ಸರಿಯಾದ ಸಮಯ ಅಂತ ನಮಗೆ ಅನ್ನಿಸಿದರು ಅಲ್ಲಿ ಆಗಲೆ ವಾರದ ಸಂತೆಯೋಪಾದಿ ಜನ! ಮಗ ವಿಚಾರಿಸಿ ಬಂದು ನಮ್ಮನ್ನು ಕ್ಯೂ ನಿಲ್ಲಿಸಿದ. ನಮ್ಮ ಸರದಿ ಬಂದಾಗ ಆ ಸಿಬ್ಬಂದಿಗೆ ನಾವು ಮೂವರು ಒಟ್ಟಿಗೆ ಒಳ ಹೋಗಲು ಅವಕಾಶ ಕೊಡಿ ಎಂದು ವಿನಂತಿ ಮಾಡಿದೆ. ಆತ ಮೂರೂ ಫೈಲುಗಳ ತಪಾಸಣೆಯ ನಂತರ ಅಷ್ಟನ್ನು ಒಂದೆ ಪಟ್ಟಿಯಲ್ಲಿ ಕಟ್ಟಿ ನನ್ನ ಕೈಲಿತ್ತು, ಒಳಗಿರುವ ಬೂತ್ ನಂಬರ್ ತಿಳಿಸಿ ಅಲ್ಲಿಗೆ ಹೋಗಿ ಎಂದ. ಒಳಗೆ ಸಹ ಒಂದೊಂದು ಬೂತ್ ಮುಂದೆ ಸಾಕಷ್ಟು ಜನರಿದ್ದರು; ಮತ್ತೆ ಕಾಯುವ ಅವಸ್ಥೆ! ಭಾರತದಲ್ಲಿ ಕಾಯುವಿಕೆಯಲ್ಲೆ ಸೃಜನಶೀಲತೆ ಕಳೆದುಹೋಗುತ್ತದೆ ಅನ್ನಿಸಿತು! ನಮ್ಮ ಸರದಿ ಬಂದಾಗ ನನ್ನ ಮಡದಿ ಮತ್ತು ಬೀಗರನ್ನು ಕೂತಿದ್ದಲ್ಲೆ ಬಿಟ್ಟು ನಾನೊಬ್ಬ ಹೋಗಿ ಫೈಲುಗಳನ್ನು ಕಟ್ಟಿಕೊಟ್ಟಿದ್ದ ಹಾಗೆಯೆ ಸಣ್ಣ ಕಿಟಕಿಯ ಮೂಲಕ ಒಳಗೆ ಕೂತ ಮಹಿಳೆಗೆ ಕೊಟ್ಟು ಮತ್ತೆ ಆಕೆಯ ಮುಂದಿನ ಅಪ್ಪಣೆಗಾಗಿ ಕಾಯತೊಡಗಿದೆ. ನನಗಿಂತ ಮುಂಚೆ ಹೋಗಿದ್ದವನ ಫೈಲನ್ನು ಸುಮಾರು ಹೊತ್ತು ಜಾಲಾಡುತ್ತ ಆತನನ್ನು ಪ್ರಶ್ನೆಗಳ ಸರಪಳಿಯಲ್ಲಿ ಆಕೆ ಸುತ್ತಿದ್ದನ್ನು ಕಂಡಿದ್ದ ನನಗೆ ಈಗ ಏನೊ ಎಂತೊ ಮತ್ತು ಎಷ್ಟು ಹೊತ್ತೋ ಎನ್ನಿಸಿತು. ನನ್ನ ಫೈಲನ್ನು ಸವಿವರವಾಗಿ ಪುಟದ ನಂತರ ಪುಟ ತೆಗೆದು ಸಾವಕಾಶ  ತಪಾಸಣೆ ಮಾಡಿ, ಇನ್ನುಳಿದ ಎರಡನ್ನು ಮೇಲೆಮೇಲೆ ನೋಡಿದಂತೆ ಮಾಡಿ, ಒಂದು ಪ್ರಶ್ನೆಯನ್ನೂ ಕೇಳದೆ, ಮೊದಲ ಮಹಡಿಯಲ್ಲಿ ಮತ್ತೊಂದು ಬೂತ್ ನಂಬರ್ ತಿಳಿಸಿ ಸಾಗಿಸಿದಳು. ಸದ್ಯ ಅಲ್ಲಿ ನಾವು ಹೋದ ಬೂತಿನಲ್ಲಿ ನನಗಿಂತ ಮುಂಚೆ ಇಬ್ಬರಿದ್ದರು. ಅಂತಹ ಅನೇಕ ಬೂತಗಳು ಆಯಾ ದೇಶಗಳ ಹೆಸರಿನ ಫಲಕಗಳಿಂದ ಎದ್ದು ಕಾಣುತ್ತಿದ್ದವು. ಪ್ರತಿ ಬೂತ್ ಮುಂದೆ ಒಂದರ್ಧ ಡಜನ್ ಜನ. ಅಷ್ಟು ವಿಶಾಲವಾದ ಹಾಲ್ನಲ್ಲಿ ಜಗತ್ತಿನ ಎಲ್ಲ ದೇಶಗಳ ಸಂದರ್ಶನಕ್ಕೆ ಕೊಠಡಿಗಳು ಇರಬಹುದೇನೋ ಅನಿಸುವಂತಹ  ಜಂಗುಳಿ ಮತ್ತು ಆಯಾ ದೇಶಗಳ ಹೆಸರಿನ ಬೂತುಗಳು. ಅಂತು ನಮ್ಮ ಸರದಿ ಕರೆದಾಗ  ನಾನೊಬ್ಬನೆ ನಿಂತು ಅಲ್ಲಿ ಕುಳಿತಿದ್ದ ಮಹಿಳೆಯತ್ತ ಫೈಲ್ ಕಂತೆ ನೂಕಿದೆ. ಮತ್ತೆ ಅಲ್ಲೊಂದು ವಿಶದವಾದ ತಪಾಸಣೆಯ ನಂತರ, ಇನ್ನೊಂದು ಕೌಂಟರ್ ತೋರಿಸಿ ಹಣ ಸಂದಾಯಮಾಡಿ ಬನ್ನಿ ಎಂದಳು. ಮೂವರಿಂದ ಒಟ್ಟು ಇಪ್ಪತ್ತಮೂರು ಸಾವಿರ ಮತ್ತು ಸ್ವಲ್ಪ ಚಿಲ್ಲರೆ ಹಣ ಕಟ್ಟಿ ರಸೀತಿ ತಂದು ಆಕೆಗೆ ಕೊಟ್ಟಾಗ, ಅಷ್ಟೂ ಫೈಲುಗಳಲ್ಲಿ ಕೆಲವು ಕಾಗದ ತೆಗೆದು ಉಳಿದವುಗಳನ್ನು ಫೈಲಿನಲ್ಲಿ ಇದ್ದಹಾಗೆ ನನಗಿತ್ತು ಬೈಯೋಮೆಟ್ರಿಕ್ ಕೂಠಡಿಗೆ ಕಳಿಸಿದಳು. ಅಲ್ಲಿಗೆ ಅರ್ಧ ತೇರ್ಗಡೆ ಆಗಿರಬಹುದು ಅಂದುಕೊಂಡು, ಅಲ್ಲಿಯ ಒಂದು ಕೊಠಡಿ ಸಂಖ್ಯೆ ನೋಡಿ ಅದರ ಹತ್ತಿರ ಜಾಗ ಸಿಕ್ಕಿದ ಕಡೆ ಕಾಯುತ್ತ ಕೂತೆವು. ಅನತಿ ಕಾಲದಲ್ಲೆ ನನ್ನ ಹೆಸರು ಕೂಗಲಾಗಿ ಒಳನಡೆದೆ. ಅಲ್ಲಿ ನನ್ನ ಎಲ್ಲ  ಬೆರಳುಗಳ, ಕಣ್ಣುಗಳ ಬೈಯೋಮೆಟ್ರಿಕ್ ಆದ ನಂತರ, ಪಾಸ್ಪೋರ್ಟ್ ತೆಗೆದುಕೊಂಡು, ಇದನ್ನು ದೆಹಲಿಯ ಎಂಬೆಸಿಗೆ ಕಳಿಸುತ್ತೇವೆ; ಇನ್ನು ಎರಡು ವಾರದಲ್ಲಿ ನಿಮಗೆ ವಾಪಸ್ಸು ಬರುತ್ತದೆ ಎಂದು ತಿಳಿಸಿದ ಆ ವ್ಯಕ್ತಿ. ನಾನು ಆತನನ್ನು ಬೇಕಂತಲೆ, ಹಾಗಾದರೆ ವೀಸಾ ಖಂಡಿತ ಸಿಗಬಹುದೆ ಎಂದೆ. ಅದಕ್ಕೆ “ನಾವು ಹೇಗೆ ಹೇಳಲಾಗುತ್ತೆ, ಸರ್, ಎಂಬೆಸಿ ಜನರ ಇಷ್ಟ” ಅಂದ ಆತ. ನನ್ನ ನಂತರ, ನನ್ನ ಮಡದಿ ಮತ್ತು ಬೀಗರು. ಎಲ್ಲ ಮುಗಿದ ನಂತರ, ನಾಳೆಯ ಚುನಾವಣೆಯಲ್ಲಿ ವೋಟ್ ಮಾಡುವ ಸಲುವಾಗಿ, ಬೀಗರನ್ನು ಅವರ ಮನೆಗೆ ತಲಪಿಸಿ ನಾವು ಮೈಸೂರು ಕಡೆ ಹೊರಟೆವು.

ಈಗ ಮತ್ತೊಮ್ಮೆ ಕಾಯುವಿಕೆ. ಆದರೆ ಈ ಬಾರಿ ಅದರಲ್ಲಿ ಕೊಂಚ ಖಚಿತತೆ ಇದ್ದಿರಬಹುದಾದ್ದರಿಂದ ಸ್ವಲ್ಪ ಖುಷಿ ಹಾಗು ದುಗುಡ ಮತ್ತು ಕಾತರ ತುಂಬಿತ್ತು. ಸಂದರ್ಶನದ ಸಮಯದಲ್ಲಿ ಪಾಸ್ಪೋರ್ಟ್ ದೆಹಲಿಯಿಂದ ಬರಲು ಇನ್ನು ಎರಡು ವಾರ ಬೇಕು ಎಂದಿದ್ದರೂ ಸಹ, ಅಕಸ್ಮಾತ್ ಬೇಗ ಬಂದರೆ ಎಂಬ ಸಣ್ಣ ದುರಾಸೆ. ಹಾಗಾಗಿ ಪ್ರತಿ ದಿನ ಪೋಸ್ಟ್ ಮ್ಯಾನ್ ನಮ್ಮ ಕಡೆಯಿಂದ ಹೋಗುವಾಗಲು, ಆಸೆ ಹೊತ್ತು ನೋಡುವಂತಾಗಿತ್ತು. ಎಷ್ಟೇ ಕಾಯ್ದರೂ, ಊಹುಂ; ಮುಂಚೆ ಬರಲೇ ಇಲ್ಲ. ಹದಿನಾರನೆಯ ದಿನ ಮಗ ಪಾಸ್ಪೋರ್ಟುಗಳನ್ನು ಕೈಲಿ ಹಿಡಿದು ಒಳಗೆ ಬಂದು, ಅಪ್ಪಾಜಿ ಕಂಗ್ರ್ಯಾಟ್ಸ್ ಅಂದಾಗ, ಒಂದು ನೀಳ ಉಸಿರು ಶ್ವಾಸ ಬಿಟ್ಟು ನೆಮ್ಮದಿ ಕೊಟ್ಟಿತ್ತು – ಇಷ್ಟೊಂದು ಹರಸಾಹಸ ಕೈಗೊಂಡಿದ್ದು ಕೊನೆಗೂ ಸಾರ್ಥಕ ಎನ್ನಿಸಿತ್ತು!  ಮೂವರ ಪಾಸ್ಪೋರ್ಟುಗಳಲ್ಲೂ ಶೆಂಗೆನ್ ವೀಸಾ ಸ್ಟ್ಯಾಂಪ್ ಬಿದ್ದಿತ್ತು! ಅಂದು ಮೇ ತಿಂಗಳ ಇಪ್ಪತ್ತಾರು; ಅಂದರೆ, ಅಂದಿನಿಂದ ಇನ್ನು ಹದಿನೆಂಟು ದೀನಗಳಲ್ಲಿ, ಜೂನ್ ಹದಿಮೂರರಂದು ಬೆಂಗಳೂರು ಬಿಟ್ಟು, ಜರ್ಮನಿಯ ಫ್ರ್ಯಾಂಕ್ಫರ್ಟ್ ಮೂಲಕ ಪೋರ್ಚುಗಲ್ ದೇಶದ (ನಮ್ಮ ಗೋವ, ಡಯು, ಡಾಮನ್, ನಗರ್ ಹವೇಲಿ ಮುಂತಾದೆಡೆ ವಸಾಹತುಶಾಹಿ ಆಳ್ವಿಕೆ ನಡೆಸಿದವರು) ರಾಜಧಾನಿ ಲಿಸ್ಬನ್ ನಗರದಲ್ಲಿ ಒಂದೂವರೆ ದಿನ ಕಳೆದ ನಂತರ, ದಿನಾಂಕ ಹದಿನೈದರಂದು ರಾತ್ರಿ ಎಂಟು ಘಂಟೆಗೆ “ನಾರ್ವೇಜಿಯನ್ ಕ್ರೂಸ್ ಲೈನರ್” ಹಡಗು ಹತ್ತುವುದು. (ಓದುಗರ ಮಾಹಿತಿಗೋಸ್ಕರ, ಆ ಎನ್.ಸಿ.ಎಲ್.ಕ್ರೂಸ್ ಲೈನರ್ ಹಡಗು ಒಟ್ಟು ಹದಿನೈದು ಅಂತಸ್ತುಗಳನ್ನು (Decks)ಹೊಂದಿದ್ದು , ಹದಿನೈದರ ಮೇಲ್ಛಾವಣಿ ಮೇಲೆ ವಿವಿಧ ಆಟಗಳಿಗಾಗಿ ಮೀಸಲಿಡಲಾಗಿದೆ. ಇಡೀ ಕ್ರೂಸ್ ಹಡಗಿನಲ್ಲಿ ಒಟ್ಟು 4228 ಪ್ರಯಾಣಿಕರಿಗಾಗಿ ವೈವಿಧ್ಯಮಯ ಕೊಠಡಿಗಳಿವೆ. ಅಲ್ಲದೆ 1730 ಮಂದಿ ಸಿಬ್ಬಂದಿಯ – ಎಲ್ಲ ರೀತಿಯ ಕೆಲಸಗಾರರೂ ಸೇರಿ – ಸಾಮರ್ಥ್ಯ ಉಳ್ಳದ್ದು. ಎಲ್ಲ ಮಾದರಿಯ ರುಚಿ ಶುಚಿಯಾದ ಊಟ ತಿಂಡಿಗಳಿಗೆ ಮಿತಿಯಿಲ್ಲ. ಹಾಗೆಯೆ ಎಲ್ಲ ಮಾದರಿಯ ಮದ್ಯ ಮತ್ತು ಇತರೆ ಪಾನೀಯಗಳೂ ಸಹ ಇರುತ್ತವೆ. ಆದರೆ ಕ್ರೂಸ್ ಸೀಟುಗಳನ್ನು ಕಾಯ್ದಿರಿಸುವ ಸಮಯದಲ್ಲಿ ಎಷ್ಟು ಜನಕ್ಕೆ ಮದ್ಯ ಅವಶ್ಯ ಇದೆಯೋ ಅಂತಹ ಕೊಠಡಿಗೆ ಹೆಚ್ಚಿನ ಹಣ ಕೊಡಬೇಕು; ಅಥವ ಹಡಗು ಏರಿದ ನಂತರ, ಬೇಕಾದಾಗ ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು. ಹಡಗಿನ ಒಟ್ಟು ತೂಕ ಒಂದು ಲಕ್ಷ ಐವತ್ತಮೂರು ಸಾವಿರ ಟನ್ನುಗಳು! ಅದನ್ನು 2010ನೆ ಇಸವಿಯಲ್ಲಿ  ನಿರ್ಮಿಸಲಾಯಿತಂತೆ). ಒಟ್ಟು ಒಂಭತ್ತು ದಿನ ನೌಕಾಯಾನದಲ್ಲಿ ಪ್ರತಿ ದಿನ ಒಂದೊಂದು ನಗರದಲ್ಲಿ ಬೆಳಿಗ್ಗೆ ಇಳಿದು, ಆ ನಗರದ ಪ್ರಮುಖ ಆಕರ್ಷಣೆಗಳಲ್ಲಿ ನಮಗೆ ಎಷ್ಟು ಸಾಧ್ಯವೋ ಅಷ್ಟು ನೋಡಿಕೊಂಡು ಸಂಜೆ ಹೊತ್ತಿಗೆ ಕ್ರೂಸ್ ಹತ್ತಿದರೆ ಮತ್ತೆ ರಾತ್ರಿ ಪ್ರಯಾಣ. ಹೀಗೆ, ಲಿಸ್ಬನ್ ನಗರ ಬಿಟ್ಟ ಕ್ರೂಸ್ ಹದಿನಾರರಂದು ಇಡೀ ದಿನ ಮತ್ತು ಆ ರಾತ್ರಿ ಪ್ರಯಾಣ ಮಾಡಿದ ನಂತರ ಹದಿನೇಳರಂದು ಮೊದಲ ದಿನ ಸ್ಪೇನ್ ದೇಶದ ‘ಮಲಾಗ’, ಅದರ ಮಾರನೆ ದಿನ ಅದೇ ಸ್ಪೇನ್ ದೇಶದ ‘ಐಬೀಸಾ’, ನಂತರ ‘ಪಾಲ್ಮ’ ಅಥವ ‘ಮಯೋರ್ಕ’ ಮತ್ತು ‘ಬಾರ್ಸಿಲೋನ’ ಒಟ್ಟು ನಾಲ್ಕು ಸ್ಪೇನ್ ನಗರಗಳು, ಆಮೇಲೆ ಫ್ರಾನ್ಸ್‌ನ ‘ಮಾರ್ಸೆ’ ಮತ್ತು ‘ನೈಸ್ (ಮೊನ್ಯಾಕೊ)’ ನಗರಗಳಲ್ಲಿ ಒಂದೊಂದು ಹಗಲು ಕಳೆದು, ಕೊನೆಯದಾಗಿ ಇಟಲಿಯ ‘ಪೀಸಾ’ದಲ್ಲಿ  ಒಂದು ಹಗಲು ಸುತ್ತಿದ ನಂತರ, ನಮ್ಮ ಅಂತಿಮ ಗಮ್ಯವಾದ ರೋಂ ನಗರದಲ್ಲಿ ಇಳಿದು ಕ್ರೂಸ್ ಹಡಗಿಗೆ ವಿದಾಯ ಹೇಳಿ, ಎರಡು ದಿನಗಳ ರೋಂ ನಗರ ಪ್ರದಕ್ಷಿಣೆ ಆದಮೇಲೆ ಇಪ್ಪತ್ತಾರರ ಬೆಳಗಿನ ಎಂಟು ಘಂಟೆ ಫ್ಲೈಟಿನಲ್ಲಿ ರೋಂನಿಂದ ಜರ್ಮನಿಯ ಮ್ಯೂನಿಕ್ ತಲಪಿ ಅಲ್ಲಿಯ ಏರ್ಪೋರ್ಟಿನಲ್ಲಿ ಎರಡು ಘಂಟೆ ಕಳೆದ ನಂತರ ನಮ್ಮ ಪಯಣ ಭಾರತದತ್ತ. ಮತ್ತು ಮಗಳ ಕುಟುಂಬ ಅಮೆರಿಕದತ್ತ. ಇದು ನಮ್ಮ ಮುಂದಿನ ಯೂರೋಪ್ ಪ್ರಯಾಣದ ಸವಿವರ.

ಸದ್ಯ ಜೂನ್ ಹದಿಮೂರರ ಹೊತ್ತಿಗೆ ನಮಗೆ ಅಷ್ಟು ದಿನಕ್ಕೆ ಬೇಕಾದ ಉಡುಪುಗಳಲ್ಲದೆ ಇನ್ನಿತರೆ ವ್ಯವಸ್ಥೆಗಳತ್ತ ಗಮನ ಹರಿಸುವುದಿತ್ತು. ಅಲ್ಲದೆ ಹಡಗಿನಲ್ಲಿ ಬಟ್ಟೆಗಳ ಒಗೆತ ಅಸಾಧ್ಯವಾದರೆ ಅಥವ ಅದಕ್ಕೆ ವೇಳೆ ಆಗದಿದ್ದರೆ? ಹಾಗಾಗಿ ಅಷ್ಟೂ ದಿನಗಳ ಬಟ್ಟೆಯ ಅವಶ್ಯ ಇದ್ದುದರಿಂದ ಹೊಸದಾಗಿ ಕೊಳ್ಳುವುದೂ ಇತ್ತು.  ಅಂತೂ ಸಮರ ಗೆದ್ದ ಹುರುಪಿನಲ್ಲಿ ತಯಾರಿ ಆರಂಭಿಸಿ ಮತ್ತೊಮ್ಮೆ ಕಾಯುವ ಕಾಯಕದಲ್ಲಿದ್ದೆವು – ಈ ಬಾರಿ  ಮೊಮ್ಮಕ್ಕಳು, ಮಗಳು ಮತ್ತು ಅಳಿಯ ಎಲ್ಲರನ್ನು ನೋಡುವ ಕಾತರದಲ್ಲಿ ಖುಷಿ ತುಂಬಿದ ಕಾಯುವಿಕೆ!


ಡಾ. ಅರಕಲಗೂಡು ನೀಲಕಂಠ ಮೂರ್ತಿ.

2 thoughts on “ಶಂಗನ್ ವೀಸಾ ಪ್ರಯಾಸ! ( ಭಾಗ ಎರಡು)ಡಾ. ಅರಕಲಗೂಡು ನೀಲಕಂಠ ಮೂರ್ತಿ.

  1. ಮೂರ್ತಿ ನಿಮ್ಮ ಶಂಗನ್ ವೀಸಾ ನೀಡುವ/ಪಡೆಯುವ ಕಥನ ಚೆನ್ನಾಗಿದೆ!
    ನಿಮ್ಮ cruise ಹೇಗೆ ,ಆ ದೇಶಗಳ ಅನುಭವ ಹೇಳುತ್ತೀರಿ ಅಲ್ಲವಾ!
    Congrats Murthy

  2. ಪ್ರಪ್ರಥಮವಾಗಿ, ಪ್ರಿಯ ವೆಂಕಟೇಶ್ ನಿಮಗೆ ಧನ್ಯವಾದ. ನೀವು ಹೇಳಿರುವ ಹಾಗೆ ಆ ದೇಶಗಳ ಪ್ರವಾಸದ ಅನುಭವ ಕೂಡ ಬರೆಯಬೇಕೆಂಬ ಹಂಬಲ ಇದೆ. ಅದಕ್ಕಾಗಿಯೇ ಆ ದೇಶಗಳಲ್ಲಿ ತೆಗೆದ ಫೋಟೋಗಳೂ ಸಹ ಕಾಯ್ದಿವೆ. ಆದರೆ ಅದಕ್ಕೆ ಸಾಕಷ್ಟು ತಯಾರಿ ಬೇಕು. ವೇಳೆ ಒಪ್ಪಿದರೆ ನೋಡೋಣ…..

Leave a Reply

Back To Top